ADVERTISEMENT

ಎರಡು ಜಡೆ ಸೇರಲ್ಲ ಅಂತ ಯಾವನ್ ಹೇಳ್ದೋನು?

ಪ್ರೀತಿ ನಾಗರಾಜ
Published 10 ಫೆಬ್ರುವರಿ 2016, 19:48 IST
Last Updated 10 ಫೆಬ್ರುವರಿ 2016, 19:48 IST

ಹುಡುಗಿಯರ ಹಾಸ್ಟೆಲಿನಲ್ಲಿ ಸಾಮಾನ್ಯವಾಗಿ ಆಗುವ ಜಗಳಗಳಿಗೆ ಒಂದು ತಥಾಕಥಿತ ವಿನ್ಯಾಸ ಇರುತ್ತದೆ. ಬರೀ ಹುಡುಗಿಯರ ನಡುವೆ ಜಗಳವಾದರೆ ಅದಕ್ಕೆ ಕಾರಣಗಳು ಹಲವಿದ್ದರೂ, ನೋಡಿದವರು ಸುಲಭವಾಗಿ ಇದೇ ಕಾರಣಕ್ಕೇ ಜಗಳ ಆಗುತ್ತಿದೆ ಎಂದು ಊಹಿಸುವುದಷ್ಟೇ ಅಲ್ಲದೆ, ಅಕಸ್ಮಾತ್ ಈ ಜಗಳಕ್ಕೆ ತಾವು ಪಂಚಾಯಿತಿ ಮಾಡಬೇಕಾಗಿ ಬಂದರೆ ತಾವು ಯಾರ ಕಡೆ ಎಂಬುದನ್ನೂ ಅನವಶ್ಯಕವಾಗಿಯಾದರೂ ನಿರ್ಧರಿಸುವಷ್ಟು ಸರಳವಾದ  ಸಂದರ್ಭವಾಗಿರುತ್ತದೆ.

ಜಗಳಗಳಿಗೆ ಬಹಳ ಗಾಢವಾದ ಕಾರಣಗಳೇನೂ ಇರುವುದಿಲ್ಲವೆನ್ನಿ. ಯಾವಳೋ ಬಂದು ಇನ್ನೊಬ್ಬಳ ಸ್ನಾನದ ಕ್ಯೂ ಬ್ರೇಕ್ ಮಾಡಿದ್ದು, ಸ್ನಾನದ ಮನೆ ಬುಕ್ ಮಾಡಲು ಹಾಕಿದ್ದ ಟವೆಲ್ ಅನ್ನು ಬೇಕಂತಲೇ ನೆಲಕ್ಕೆ ಬೀಳಿಸಿ ಅಪ್ರಾಮಾಣಿಕವಾಗಿ ತಾನು ಮೊದಲು ಸ್ನಾನಕ್ಕೆ ಹೋದದ್ದೇ ಅಲ್ಲದೆ ಇನ್ನೊಬ್ಬಳ ಟವೆಲ್ ಮೊದಲೇ ಬಿದ್ದಿತ್ತು ಎಂದು ವಾದಿಸುವುದು, ಒಬ್ಬಳು ಬಟ್ಟೆ ಒಣಗಿಸುವ ಜಾಗದಲ್ಲಿ ಇನ್ನೊಬ್ಬಳು ಹೋಗಿ ಊರಗಲದ ನೈಟಿ ಒಣ ಹಾಕಿದ್ದು ಅಥವಾ ಇನ್ನೊಬ್ಬಳ ಹೊಸ ಒಳ ಅಂಗಿಗಳನ್ನು ಕದ್ದದ್ದು,  ಟೀವಿ ನೋಡಲು ಬುಕ್ ಮಾಡಿದ್ದ ಜಾಗವನ್ನು ಆಕ್ರಮಿಸಿಕೊಂಡು ಇರುವ ಏಕೈಕ ಮನರಂಜನಾ ಮಾರ್ಗವನ್ನು ಮುಚ್ಚಿ ಹಾಕುವುದು ಇತ್ಯಾದಿ.

ಆದರೆ, ಇಬ್ಬರು ಹೆಂಗಳೆಯರನ್ನು ಮೀರಿ ಆಗುವ ಜಗಳಕ್ಕೆ ಬಾಯ್ ಫ್ರೆಂಡ್‌ ಎಂಬ ವ್ಯಕ್ತಿ ಏಕ ಮಾತ್ರ ಕಾರಣನಾಗಿರಲು ಸಾಧ್ಯ. ಇಬ್ಬರು ಮೂವರ ಹತ್ತಿರ ವ್ಯವಹಾರ ಕುದುರಿಸಲು ನೋಡುವ ಹುಡುಗರೂ, ಹುಡುಗಿಯರೂ ತಂತಮ್ಮ ಸ್ನೇಹಿತರುಗಳ ನಡುವೆ ಬೆಂಕಿ ಹೊತ್ತಲು ಕಾರಣರಾಗಿರುತ್ತಿದ್ದರು. ಕ್ಲಾಸಿನ ವಿಷಯಕ್ಕಾಗಲೀ, ಲೈಬ್ರರಿಯ ಪುಸ್ತಕಕ್ಕಾಗಲೀ ಜಗಳಗಳು ನಡೆದೇ ಇಲ್ಲವೆನ್ನುವಷ್ಟು ವಿರಳವಾಗಿರುತ್ತಿದ್ದವು. ಹಾಗೆ ಒಂದು ಪಕ್ಷ ಪುಸ್ತಕದ ವಿಷಯಕ್ಕೆ ಜಗಳ ನಡೆದರೂ ‘ಇಂಥಾ ವಿಷಯಕ್ಕೂ ಜಗಳ ಆಡ್ತಾರಾ?’ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವ ಪದ್ಧತಿಯೇ ರೂಢಿಯಲ್ಲಿತ್ತು.

ಇಂಥ ಸಾಧಾರಣ ವಾತಾವರಣದಲ್ಲಿ ರಿಂಕಿಯ ತಮ್ಮ ರಾಜೀವ ಅಲಿಯಾಸ್ ಟೆಡ್ಡಿ ಸಲಿಂಗಿ ಅಂತ ನಮ್ಮ ನಾಯಕಿಯರಿಗೆ ತಿಳಿದಿದ್ದಷ್ಟೇ ಅಲ್ಲದೆ ಈ ವಿಷಯಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆನ್ನುವ ಅರಿವೂ ಇಲ್ಲದೆ ಹೋಯಿತು. ಏಕೆಂದರೆ ಇಲ್ಲಿ ಕ್ರೈಸಿಸ್ ಮ್ಯಾನೇಜ್ಮೆಂಟ್ ಮಾಡೋಣವೆಂದರೆ ರಿಂಕಿ ತನ್ನ ತಮ್ಮನ ವಿಷಯಕ್ಕೆ ಪ್ರತಿರೋಧವನ್ನೇ ತೋರಿಸಲಿಲ್ಲ. ‘ಅವನ ಯುದ್ಧ, ಅವನ ಗೆಲುವು. ನನ್ನದು ಬೆಂಬಲ ಮಾತ್ರ’ ಅಂತ ಬಹಳ ಕೂಲಾಗಿ ಇದ್ದುಬಿಟ್ಟಿದ್ದಳು.

ಅತ್ತ ಟೆಡ್ಡಿ ಒಂದೇ ಬಾರಿಗೆ ತನ್ನ ಸತ್ಯವನ್ನು ಹೇಳಿ ಮನಸ್ಸು ಹಗುರ ಮಾಡಿಕೊಂಡು ಇನ್ನೂ ಉನ್ನತ ಮಟ್ಟದ ಯುದ್ಧಕ್ಕೆ ಮಾನಸಿಕವಾಗಿ ತಯಾರಾಗುತ್ತಿದ್ದ. ವಿಷಯ ಗಹನವಾದದ್ದೇ. ಆದರೆ, ಗಮ್ಯವನ್ನು ತಲುಪುವವರೆಗೂ ವಿಷಯಕ್ಕೆ ನೂರಾರು ಆಯಾಮಗಳು, ರೆಕ್ಕೆ ಪುಕ್ಕಗಳು. ಅವನ್ನೆಲ್ಲ ಕಾಲವೇ ಕತ್ತರಿಸಬೇಕು. ಇಲ್ಲದಿದ್ದರೆ ವಿಷಯ ಸಂಪೂರ್ಣ ಹರಣವಾದಂತೆಯೇ ಸರಿ.

ಹದಿ ವಯಸ್ಸಿನ ಅತಿ ಸಾಮಾನ್ಯರು ಅಪ್ಲಿಕೇಷನ್ ಫಾರ್ಮಿನಲ್ಲಿ ‘ಸೆಕ್ಸ್’ ಎಂಬ ಪದ ಕಂಡರೇನೇ ಮುಜುಗರದಿಂದ ಬೆವೆತು ಯಾರದರೂ ನೋಡುವ ಮುನ್ನ ಮೇಲ್/ಫೀಮೇಲ್ ಅಂತ ರಪ್ಪಂತ ತುಂಬಿಸಿ ಉಸಿರು ಬಿಡುತ್ತಿದ್ದ ಕಾಲದಲ್ಲಿ ಸಲಿಂಗತ್ವದ ಬಗ್ಗೆ ಸಂಪೂರ್ಣ ಅರಿವಿದ್ದ ರಿಂಕಿ ಒಂಥರಾ ದಿವ್ಯ ದರ್ಶನ ಪಡೆದ ಜ್ಞಾನಿಯಂತೆ ಕಂಗೊಳಿಸುತ್ತಿದ್ದಳು. ಇಂದುಮತಿಗೆ ಸಲಿಂಗಿ ಎಂದರೆ ಏನು ಎನ್ನುವ ಬಗ್ಗೆ ಸ್ಥೂಲವಾದ ಕಲ್ಪನೆಗಳಿದ್ದರೂ ಅನುಮಾನಗಳೇನೂ ಕಡಿಮೆ ಇರಲಿಲ್ಲ. ಆದರೆ, ತನಗೆ ಈ ವಿಷಯ ಗೊತ್ತಿಲ್ಲ ಎಂದು ತೋರಿಸಿಕೊಂಡರೆ ರಿಂಕಿ ಮುಂದೆ ಅವಮಾನವಾದಂತಾಗುತ್ತದೆ. ಅಲ್ಲದೆ, ತಾನು ಇಂಟರ್‌ ನ್ಯಾಷನಲ್ ಸ್ಥಾನಮಾನವುಳ್ಳ ಬೆಂಗಳೂರಿನ ಹುಡುಗಿ. ರಿಂಕಿ ಅಂಥಾ ಯಾವ ಘನತೆಯನ್ನೂ ಹೊಂದಿಲ್ಲದ ಒಡಿಶಾ ರಾಜ್ಯದ ಕಟಕ್ ಎನ್ನುವ ಊರಿನವಳು.

ಅವಳಿಗೇ ಸಲಿಂಗದ ಬಗ್ಗೆ ಗೊತ್ತಿರುವಾಗ ತನಗೆ ಗೊತ್ತಿಲ್ಲ ಅಂತ ತೋರಿಸಿಕೊಂಡರೆ ಸರೀಕರ ಮದುವೆಗೆ ತುಳಸೀಮಾಲೆ ಹಾಕಿಕೊಂಡು ಹೋಗಿ ತಾವು ದಿವಾಳಿಯಾಗಿದ್ದೇವೆ ಅಂತ ಜಗಜ್ಜಾಹೀರು ಮಾಡಿದ ಹಾಗಲ್ಲವೇ? ಏನೇ ಇರಲಿ. ಗಿಲೀಟಿನದ್ದೇ ಆದರೂ ಬಂಗಾರ ಬಣ್ಣದ ಒಡವೆಯೇ ಸರಿ. ಸೆರಗು ಮುಚ್ಚಿಕೊಂಡಿದ್ದರೆ ಯಾರು ತಾನೇ ನೋಡುತ್ತಾರೆ ಎನ್ನುವ ಭಂಡ ಧೈರ್ಯ ಇಂದುಮತಿಯದ್ದು. ಹಾಗಾಗಿ ಸಲಿಂಗತ್ವದ ಬಗ್ಗೆ ತನಗೆ ಸಂಪೂರ್ಣ ಮಾಹಿತಿ ಇಲ್ಲದಿದ್ದರೂ ರಿಂಕಿಯನ್ನು ಕೇಳಿ ತಿಳಿದುಕೊಳ್ಳುವ ಮನಸ್ಸಂತೂ ಇರಲಿಲ್ಲ.

ಇತ್ತ ಸಲಿಂಗತ್ವದ ಬಗ್ಗೆ ಇಂದುಮತಿಯೇ ತಬ್ಬಿಬ್ಬಾಗಿದ್ದಾಗ ಉಳಿದವರ ಪಾಡಂತೂ ಬೇಡವೇ ಬೇಡ. ರಶ್ಮಿಗೆ ಅಷ್ಟಿಷ್ಟು ಅರ್ಥವಾಗುತ್ತಿತ್ತೇನೋ, ವಿಜಿಗೆ ಅದಕ್ಕೂ ಕಡಿಮೆ ಜ್ಞಾನವಿತ್ತು. ಈಶ್ವರಿಯಂತೂ ಕೇಳುವುದೇ ಬೇಡ. ವಿಷಯದ ಅರಿವು ಎಷ್ಟೆಷ್ಟೂ ಇಲ್ಲದ ಕಾರಣಕ್ಕೆ ಬಹಳ ಸುಖವಾಗಿದ್ದಳು.

ಆದರೆ, ತನ್ನ ಅರಿವಿನ ವಿಸ್ತಾರವನ್ನು ಹೆಚ್ಚು ಮಾಡಿಕೊಳ್ಳಲು ಏನೇನೋ ಪ್ರಶ್ನೆ ಕೇಳಿ ಉಳಿದವರನ್ನು ನರಕಕ್ಕೆ ತಳ್ಳುತ್ತಿದ್ದಳು. ಕ್ಲಾಸಿನ ಬಗ್ಗೆ ಅಥವಾ ಪಾಠಕ್ಕೆ ಸಂಬಂಧಪಟ್ಟ ಹಾಗೆ ವಿಷಯ ಗೊತ್ತಿಲ್ಲವೆಂದರೆ ಅವಮಾನವೇ ಅಲ್ಲ. ದೇಶದ ರಾಷ್ಟ್ರಪತಿ ಯಾರೆಂದು ಗೊತ್ತಿಲ್ಲದಿದ್ದರೂ ನಡೆದೀತು. ಆದರೆ, ತನ್ನ ಓರಗೆಯವರಿಗೆ ಗೊತ್ತಿರುವ ವಿಷಯ ತನಗೆ ಗೊತ್ತಿಲ್ಲವೆಂದರೆ ಅದಕ್ಕಿಂತ ದೊಡ್ಡ ಅವಮಾನ ಕಾಲೇಜಿಗೆ ಹೋಗುವ ಯುವಕ ಯುವತಿಯರಿಗೆ ಇರಲು ಸಾಧ್ಯವೇ ಇಲ್ಲ.   

‘ಸಲಿಂಗಿ ಅಂದ್ರೆ ಏನು?’ ‘ಅಂದ್ರೆ ಗಂಡಸರಿಗೆ ಗಂಡಸರೇ ಹಿಡಿಸ್ತಾರೆ. ಹೆಂಗಸರಿಗೆ ಹೆಂಗಸರ ಬಗ್ಗೆ ಪ್ರೀತಿ ಇರುತ್ತೆ’ ‘ನನ್ ಬಗ್ಗೆ ನಿನಗೆ, ನಿನ್ ಬಗ್ಗೆ ನನಗೆ ಪ್ರೀತಿ ಇರೋ ಥರಾನಾ?’  ‘ಅಯ್ಯೋ ಲೌಡಿ. ಹಂಗಲ್ಲ. ಇದು ಬೇರೆ ಥರ’ ‘ನನಗೆ ಸರಿಯಾಗಿ ವಿವರಿಸು. ಟೆಡ್ಡಿ ಯಾಕಷ್ಟು ಟೆನ್ಷನ್ ಮಾಡ್ಕೊಂಡಿದಾನೆ? ಅವನಿಗೆ ಬಾಯ್ಸ್ ಬಗ್ಗೆ ಪ್ರೀತಿ ಇದೆ ಅಂತ ತಾನೇ?’ ‘ಹೌದು’

‘ನನಗೆ ನಿನ್ ಬಗ್ಗೆ ಪ್ರೀತಿ ಇದೆ. ಅಂದ್ರೆ ನಾನೂ ಸಲಿಂಗಿಯಾ?’ ಇಂದುಮತಿ ಒಬ್ಬಳೇ ರೂಮಿನಲ್ಲಿದ್ದ ಸಮಯ ನೋಡಿ ಈಶ್ವರಿ ಅಲ್ಲಿಗೆ ಹೋಗಿ ತನ್ನ ಅನುಮಾನಗಳನ್ನೆಲ್ಲ ಪರಿಹರಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದಳು. ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ. ಇಂದುಮತಿ ಇತ್ತ ಪೂರ್ತಿ ಮಾಹಿತಿ ಕೊಡುವಂತಿಲ್ಲ, ಹಾಗೇ ಬಿಡುವಂತೆಯೂ ಇಲ್ಲ. ಯಾಕೆಂದರೆ ವಿಷಯದ ಆಳ ಅರಿವು ಈಕೆಗಿಲ್ಲ ಎನ್ನುವುದು ಜಗಜ್ಜಾಹೀರಾದರೆ ಮುಖ ಎತ್ತಿ ತಿರುಗುವುದಾದರೂ ಹೇಗೆ?  ‘ಅದು ಹಂಗಲ್ಲ ಕಣೇ’ ‘ಹಂಗಲ್ಲ ಅಂದ್ರೆ ಮತ್ತಿನ್ಹೆಂಗೆ?’ ‘ಅಯ್ಯೋ, ನಿಂಗೆ ಹೆಂಗ್ ಹೇಳದು ಗೊತ್ತಿಲ್ಲ ನಂಗೆ...’ ‘ಬಾಯಿಂದಲೇ ಹೇಳು ಪರ್ವಾಗಿಲ್ಲ’ ಈಶ್ವರಿ ಹಲ್ಲು ಕಿರಿಯುತ್ತಾ ಇಂದುಮತಿಯನ್ನು ರೇಗಿಸಿದಳು.

ಇಂದುವಿಗೋ ಮಾಹಿತಿ ಕೊರತೆ  ಮತ್ತು ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡಿದ್ದರಿಂದಲೂ ಪಿತ್ಥ ನೆತ್ತಿಗೇರುತ್ತಿತ್ತು. ‘ನೀನಾದ್ರೂ ಇನ್ನೆಲ್ಲಿಂದ ಮಾತಾಡ್ತೀಯ ಬೋಸುಡಿ. ಬೆಳ್ ಬೆಳಿಗ್ಗೆ ಬೇರೆ ಕೆಲ್ಸ ಇಲ್ವಾ ನಿಂಗೆ? ಯಾವನೋ ಯಾರನ್ನೋ ಲವ್ ಮಾಡ್ತಾನೆ ಅಂದ್ರೆ ನನ್ ಪ್ರಾಣ ಯಾಕ್ ತೆಗೀತೀಯಾ? ಹೋಗ್ ಇಲ್ಲಿಂದ!’ ಎಂದು ರೇಗಿ ತನ್ನ ಅಳಿದುಳಿದ ಮಾನಬಚಾವ್ ಮಾಡಿಕೊಳ್ಳುವ ಕೊನೇ ಹಂತದ ಪ್ರಯತ್ನದಲ್ಲಿದ್ದಳು. ಈಶ್ವರಿ ಬಡಪೆಟ್ಟಿಗೆ ಜಗ್ಗುವ ಆಸಾಮಿಯೇ ಅಲ್ಲ. ಒಂದೊಮ್ಮೆ ಯಾರದ್ದಾದರೂ ಪ್ರಾಣ/ಮಾನ ತೆಗೆಯಬೇಕೆಂದುಕೊಂಡರೆ ಅವಳಿಗೆ ಹೆಚ್ಚು ಪ್ಲಾನಿಂಗಿನ ಅವಶ್ಯಕತೆಯೇ ಬೀಳುತ್ತಿರಲಿಲ್ಲ. ಬರೀ ತನ್ನ ಮೂರ್ಖ ಪ್ರಶ್ನೆಗಳಿಂದಲೇ ಚೂರಿ ಧಾರೆಯ ಅನುಭವ ಕೊಡಬಲ್ಲ ಕಲೆ ಅವಳಿಗೆ ಸಿದ್ಧಿಸಿತ್ತು.

‘ಅದೆಲ್ಲ ಆಗಲ್ಲ. ಗೇ ಅಂದ್ರೆ ಯಾರು? ಸಲಿಂಗ ಅಂದ್ರೆ ಏನು? ಅವ್ರು ಹೆಂಗಿರ್ತಾರೆ? ಇದು ಬರೀ ಗಂಡಸರು ಗಂಡಸರಿಗೆ ಮಾತ್ರ ಆಗುವ
ಅನುಭವಾನಾ? ಇದೆಲ್ಲಾ ಹೇಳೋವರ್ಗೂ ನಾನು ಇಲ್ಲಿಂದ ಹೋಗಲ್ಲ’ ಎಂದು ಇಂದುಮತಿಯ ರೂಮಿನಲ್ಲಿ ಝಾಂಡಾ ಊರಿಬಿಟ್ಟಳು ತೆಲುಗು ಹೆಣ್ಣು. ಇಂದುಮತಿಗೆ ದಿಕ್ಕು ತೋಚದಂತಾಯಿತು. ಬೆಳಕೇ ಕಾಣದ ಗುಹೆಯಲ್ಲಿ ಬೆತ್ತಲೆ ನಿಂತ ಆದಿಮಾನವನ ಸ್ಥಿತಿಯಾಯಿತು ಅವಳದ್ದು.

‘ಸರಿ ನೀನ್ ಇಲ್ಲೇ ಕುಂತ್ಕಾ. ನಾನೇ ಹೋಗ್ತೀನಿ’ ಎಂದು ಧಡಭಡ ರೂಮಿನಿಂದ ಹೊರಗೆ ನಡೆಯುವಾಗ ರಿಂಕಿ, ರಶ್ಮಿ ಮತ್ತು ವಿಜಿ ಕ್ಲಾಸ್ ಮುಗಿಸಿ ವಾಪಸ್ಸು ಬರುತ್ತಿದ್ದರು. ಮೂವರೂ ಮಾತನಾಡುತ್ತಾ ಇಂದುಮತಿಯ ರೂಮಿನ ಹತ್ತಿರ ಎತ್ತಲೋ ನೋಡಿಕೊಂಡು ಬರುವುದಕ್ಕೂ, ಇಂದುಮತಿ ಧಸಬಸ ಎಂದು ರೂಮಿನಿಂದ ಹೊರಕ್ಕೆ ಬರುವುದಕ್ಕೂ ಸರಿ ಹೋಯಿತು. ಧಬಾರ್ ಎಂದು ರಿಂಕಿಗೆ ಢಿಕ್ಕಿ ಹೊಡೆದಳು ಇಂದುಮತಿ. ರಿಂಕಿ ತಲೆ ತಿರುಗಿ ಧೊಪ್ಪನೆ ನೆಲಕ್ಕೆ ಬಿದ್ದಳು. ಆದ ಶಬ್ದಕ್ಕೆ ಈಶ್ವರಿ ರೂಮಿನಿಂದ ಹೊರಗೆ ಓಡಿ ಬಂದಳು. ಬಿದ್ದವಳನ್ನು ನೋಡಿ ರಶ್ಮಿ, ವಿಜಿ ಗಾಬರಿಯಾದರು. ಇಂದುಮತಿ ಮಾತ್ರ ತಾನು ಸಿಟ್ಟಿನಲ್ಲಿ ಇರಬೇಕಾ ಅಥವಾ ಗಾಬರಿಯಾಗಬೇಕಾ ಎನ್ನುವ ಗೊಂದಲದಲ್ಲಿ ಸಿಲುಕಿ ಒದ್ದಾಡತೊಡಗಿದಳು. ಇಂದು ದಢೂತಿ ಆಸಾಮಿಯಾದ್ದರಿಂದ ತೆಳ್ಳಗಿದ್ದ ರಿಂಕಿಗೆ ಡಿಕ್ಕಿ ಹೊಡೆದದ್ದಕ್ಕೆ ಇಂದುಮತಿಯ ಒಂದು ಕೂದಲೂ ಕೊಂಕಿರಲಿಲ್ಲ.

ಪುಣ್ಯಕ್ಕೆ ರಿಂಕಿಗೆ ಹೆಚ್ಚು ನೋವೇನೂ ಆಗಲಿಲ್ಲ. ಸ್ವಲ್ಪ ಹೊತ್ತಿನಲ್ಲೇ ಸುಧಾರಿಸಿಕೊಂಡಳು. ಎಲ್ಲರೂ ರಿಂಕಿಯ ರೂಮಿನಲ್ಲೇ ಸೇರಿಕೊಂಡು ಘಟನೆಗಳನ್ನು ಮೆಲುಕು ಹಾಕತೊಡಗಿದಾಗ ಎಲ್ಲರಿಗೂ ಸಲಿಂಗತ್ವದ ಬಗ್ಗೆ ಪ್ರಶ್ನೆಗಳಿರುವುದು ಸರ್ವವಿಧಿತವಾಯ್ತು. ವಿಷಯ ಗಂಭೀರವಾಗಿದೆಯೆಂದೂ, ಇದ್ದುದರಲ್ಲಿ ತನಗೊಬ್ಬಳಿಗೆ ಸಲಿಂಗತ್ವದ ಬಗ್ಗೆ ಹೆಚ್ಚು ಗೊತ್ತಿರುವುದು ಎಂದೆನ್ನಿಸಿ ಅವರ ಪ್ರಶ್ನೆಗಳಿಗೆ ಉತ್ತರ ಹೇಳಬೇಕೆಂದುಕೊಂಡಳು ರಿಂಕಿ. 

ಏಕೆಂದರೆ ಸಲಿಂಗತ್ವದ ಬಗ್ಗೆ ಇರುವ ತಪ್ಪು ಕಲ್ಪನೆಗಳಿಂದ ಹಲವು ಜೀವಗಳೇ ಬಲಿಯಾಗಿವೆ. ಅಲ್ಲದೆ ಪ್ರಗತಿಯ ಬಗ್ಗೆ ಲಕ್ಷ್ಯವುಳ್ಳ ಯಾವ ಸಮಾಜಕ್ಕೇ ಆಗಲೀ, ಮನುಷ್ಯರಲ್ಲಿ ಸಹಜವಾಗಿರುವ ಗುಣಗಳ ದೆಸೆಯಿಂದ ಅವರನ್ನು ದ್ವೇಷಿಸುವುದು, ಕೊಲ್ಲುವುದು ಅಥವಾ ತಾರತಮ್ಯ ಮಾಡುವುದು —ಎಲ್ಲವೂ ಪ್ರಕೃತಿದ್ವೇಷವಾಗುತ್ತದೆ.  ಹೀಗಂತ ಹೇಳುತ್ತಾ ರಿಂಕಿ ಸಲಿಂಗತ್ವದ ಬಗ್ಗೆ ಜ್ಞಾನಧಾರೆ ಎರೆಯಲು ಮುಂದಾದಳು. ಉಳಿದವರು ವಿಧೇಯ ವಿದ್ಯಾರ್ಥಿಗಳಂತೆ ಅವಳ ಪ್ರತೀ ಪದವನ್ನೂ ಮನಸ್ಸಿನಲ್ಲಿ ಅಚ್ಚು ಹಾಕಿಕೊಂಡರು.

‘ಅದು ರೋಗವಲ್ಲ. ಮಾನಸಿಕ ಅಸ್ವಸ್ಥತೆಯಲ್ಲ. ನಮ್ಮಲ್ಲಿ ಕೆಲವರು ಹೇಗೆ ಸಹಜವಾಗಿ ವಿರುದ್ಧ ಲಿಂಗಿಯನ್ನು ಪ್ರೀತಿಸಿ, ಕೂಡಲು ಬಯಸುತ್ತೇವೋ ಅಷ್ಟೇ ಸಹಜವಾಗಿ ಸಲಿಂಗಿಗಳು ತಮ್ಮದೇ ಲಿಂಗಕ್ಕೆ ಸೇರಿದ ವ್ಯಕ್ತಿಗಳ ಬಗ್ಗೆ ಉತ್ಕಟ ಭಾವನೆಗಳನ್ನು ಹೊಂದಿರುತ್ತಾರೆ’ ಎಂದಳು.

‘ಮತ್ತೆ ಯಾಕೆ ಸಮಾಜ ಇದನ್ನ ಒಪ್ಪಲ್ಲ?’  ‘ಅದಕ್ಕೆ ಕಾರಣ ಹಲವಾರು. ಸಾಮಾನ್ಯವಾಗಿ ಧಾರ್ಮಿಕ ಕಾರಣಗಳೇ ಹೆಚ್ಚು. ಸಲಿಂಗ ಅಪರಾಧ ಎನ್ನುವುದು ಕಾನೂನಿನಲ್ಲಿದೆ. ಹಾಗಂದ ಮಾತ್ರಕ್ಕೆ ಇದು ಅಪರಾಧವೇನಲ್ಲ. ಅದನ್ನು ಸಮಾಜ ಅಪರಾಧ ಅಂತ ಪರಿಗಣಿಸುತ್ತೆ ಅಷ್ಟೇ. ಕೊಲೆಗೆ, ಅತ್ಯಾಚಾರಕ್ಕೆ ಇರುವ ಕ್ಷಮೆ ಸಲಿಂಗ ಕಾಮಕ್ಕೆ ಇಲ್ಲ. ನಮ್ಮ ಸಮಾಜ ಇದನ್ನು ನೋಡುವ ದೃಷ್ಟಿಯಲ್ಲಿ ಇಷ್ಟು ದ್ವೇಷ ತುಂಬಿದೆ. ಇದು ಕಡಿಮೆಯಾಗುವ ಕಾಲವೂ ಬರಬಹುದು. ಅಲ್ಲಿಯ ತನಕ ನನ್ನಂತಹ ಅಕ್ಕಂದಿರು, ನಿಮ್ಮಂತಹ ಸ್ನೇಹಿತರು ಟೆಡ್ಡಿಗೆ, ಟೆಡ್ಡಿಯಂತಹ ಹುಡುಗರಿಗೆ ಬೇಕು’

‘ಅಯ್ಯೋ ಅದಕ್ಕೇನ್ ಬಿಡೇ. ಏನೇ ಆದ್ರೂ ಟೆಡ್ಡೀಗೆ ನಂ ಸಪೋರ್ಟ್ ಇದ್ದೇ ಇದೆ. ಅಂದ ಹಾಗೆ ನನಗೆ ಒಂದು ಡೌಟು’ ಇಂದುಮತಿ ಪೀಠಿಕೆ ಹಾಕಿದಳು. ‘ಏನದು?’  ‘ಅಲ್ಲಾ, ಸಲಿಂಗ ಎಲ್ಲಾ ಸರಿ. ಹಂಗ್ ಹೆಂಗೆ ಫೀಲಿಂಗ್ಸ್ ಬರುತ್ತೆ? ಅಂದ್ರೆ...’ ತಬ್ಬಿಕೊಳ್ಳುವ ಸಂಜ್ಞೆ ಮಾಡಿ ತೋರಿಸಿದಳು ಇಂದು. ತಕ್ಷಣ ಈಶ್ವರಿಗೆ ಇಂದುಮತಿ ಬರೀ ಖಾಲಿ ಬೊಗಳೆ ಎನ್ನುವುದು ಗೊತ್ತಾಗಿಬಿಟ್ಟಿತು.

‘ಅಹಹಹ! ಅದೆಲ್ಲ ನನಗೆ ಗೊತ್ತು ಬಾ ತೋರುಸ್ತೀನಿ’ ಎಂದಳು. ಇಂದುಮತಿಯ ತಲೆ ಒಂದು ನಿಮಿಷ ಗರ್ರೆಂದಿತು. ‘ನಿಂಗೆ ಗೊತ್ತಾ?’ ‘ನಿಂಗೊತ್ತಿಲ್ಲ ಅಂದ್ ಮೇಲೆ ನಾನ್ ಹೇಳಿದ್ದು ಕೇಳು’ ಎಂದು ಈಶ್ವರಿ ಹೇಳಿದಳು.  ‘ಲೈ ಮುಚ್ಚೇ ಕಂಡಿದೀನಿ. ಏನೋ ಹೇಳ್ತಿದಾಳೆ ಸುಮ್ನೆ ಕೇಳು. ವಿಷಯ ಅರ್ಥ ಆಗುತ್ತೆ’ ರಿಂಕಿಗೆ ಇಬ್ಬರ ಜಗಳ ನೋಡಿ ನಗು ಬಂತು. ರಶ್ಮಿ, ವಿಜಿ ಇಬ್ಬರಿಗೂ ತಾಳ್ಮೆ ಹಾರಿ ಹೋಯಿತು. ‘ಇಂದೂ, ಪ್ಲೀಸ್ ಬಾಯ್ ಮುಚ್ಚೇ. ಬಿ ಸೀರಿಯಸ್!’ ‘ಎಲ್ಲವೂ ಸಹಜವಾಗೇ ನಡೆಯುತ್ತೆ. ಪ್ರಾಣಿಗಳು, ಪಕ್ಷಿಗಳು, ಮೀನುಗಳು ಕೂಡ್ತಾವಲ್ಲ, ಅವೆಲ್ಲ ಸುಮ್ಮನೆ ಮರಿ ಹಾಕಿ ತಮ್ಮ ತಳಿ ಮುಂದುವರೆಸೋಕೆ ಮಾತ್ರ ಕೂಡುತ್ತವೆ. ಆದರೆ, ಮನುಷ್ಯನಲ್ಲಿ ಮಾತ್ರ ಹೀಗೆ ಸಂತಾನೋತ್ಪತ್ತಿಯನ್ನೂ ಮೀರಿ ಕೂಡುವ ಸಾಮರ್ಥ್ಯ, ಅವಶ್ಯಕತೆ ಇದೆ’ ರಿಂಕಿ ವಿವರಿಸಿದಳು.

‘ಆದರೆ ಹಿಂಗೆ? ಮೇಲ್ ಮೇಲ್, ಫೀಮೇಲ್-ಫೀಮೇಲ್? ಫಾರಿನ್‌ನಲ್ಲಿ ಮಾತ್ರ ಅಂದುಕೊಂಡಿದ್ದೆ ನಾನು’ ವಿಜಿ ಕೇಳಿದಳು. ‘ಪ್ರಕೃತಿಯ ವೈಚಿತ್ರ್ಯ ಎಲ್ಲರಿಗೂ ಅರ್ಥವಾಗಲ್ಲ. ಸೌಂದರ್ಯ ಸಾಮಾನ್ಯವಾಗಿ ಹೆಣ್ಣಲ್ಲಿ ಇರುತ್ತೆ ಯಾಕಂದ್ರೆ ಸಂತಾನವನ್ನು ಹೊತ್ತು, ಜೋಪಾನ ಮಾಡಿ ಬೆಳೆಸುವ ಕೆಪಾಸಿಟಿಯನ್ನು ನಿಸರ್ಗ ಹೆಣ್ಣಿಗೆ ಕೊಟ್ಟಿದೆ. ಆದರೆ, ಅದೇ ನಿಸರ್ಗವೇ ಒಮ್ಮೊಮ್ಮೆ ನಿಯಮಗಳನ್ನು ಬದಲಾಯಿಸಿದ್ದೂ ಇದೆ. ನವಿಲು ನೋಡಿದ್ದೀಯಾ? ಹೆಣ್ ನವಿಲು ಬೋಳ್ ಬೋಳಾಗಿ ಇರುತ್ತೆ. ಗಂಡು ನವಿಲಿಗೆ ಸೌಂದರ್ಯ ಧಾರೆ ಎರೆದುಕೊಟ್ಟಿದಾನೆ ದೇವ್ರು’ ರಿಂಕಿ ಉದಾಹರಣೆ ಸಮೇತ ವ್ಯಾಖ್ಯಾನಿಸಿದಳು.

‘ಹೌದಲ್ವಾ? ನಂಗೊತ್ತೇ ಇರಲಿಲ್ಲ’ ಅಚ್ಚರಿ ಪಟ್ಟಳು ವಿಜಿ. ‘ಅಲ್ಲದೆ ಇದು ಫಾರಿನ್‌ನಲ್ಲಿ ಮಾತ್ರ ನಡೆಯುತ್ತೆ ಅಂದ್ಕೋಬೇಡ. ಇಲ್ಲೇ ನಮ್ಮ ಸುತ್ತಲೇ ಬೇಕಾದಷ್ಟು ಉದಾಹರಣೆಗಳಿವೆ’ ಎಂದು ರಿಂಕಿ ಹೇಳಿದಾಕ್ಷಣ ಅಲ್ಲೇ ಕೂತಿದ್ದ ಇಂದುಮತಿ ‘ಅಯ್ಯಯ್ಯೋ! ನನ್ ಕಡೆ ತೋರಿಸ್ತಾ ಇದೀಯಾ? ಬಾಯ್ ಫ್ರೆಂಡ್ ಹುಡುಕ್ಕೊಂಡು ತಿರುಗ್ತಿದೀನಿ ಇನ್ನೂ. ಅದನ್ನೂ ಹಾಳ್ಮಾಡ್ಬೇಡ. ಈಗ ಟೆಡ್ಡಿನೂ ಹುಡುಗರ ವಿಷಯದಲ್ಲಿ ನನಗೆ ಕಾಂಪಿಟಿಟರ್ ಆಗಿಬಿಟ್ಟನಲ್ಲಪ್ಪಾ!’ ಎಂದಳು ಇಂದುಮತಿ.

‘ನೀನ್ ಹೇಳ್ತಾ ಇರೋದು ನಂ ಹಾಸ್ಟೆಲಲ್ಲೂ ‘ಗೇ’ ಇದಾರಾ?’ ವಿಜಿ ಸೋಜಿಗ ಪಟ್ಟು ರಿಂಕಿಯನ್ನು ಕೇಳಿದಳು. ‘ಹುಡುಗಿಯರಿಗೆ ಲೆಸ್ಬಿಯನ್ಸ್ ಅಂತಾರೆ. ಆವತ್ತು ನಿನ್ನ ರೂಮಿಗೆ ಬಾ ಅಂತ ಆ ಹುಡುಗಿಯೊಬ್ಳು ಗಂಟು ಬಿದ್ದಿದ್ಲು ಅಂದ್ಯಲ್ಲ? ಅವ್ಳಿಗೆ ನಿನ್ನ ಕಂಡ್ರೆ ಬಹಳ ಇಷ್ಟ ಅಂತೆ. ನನ್ನ ಹತ್ತಿರ ಹೇಳಿದ್ಲು. ನಾನೇ ಅವಳಿಗೆ ನೀನು ಲೆಸ್ಬಿಯನ್ ಅಲ್ಲ ಅಂತ ಹೇಳಿದೆ’. ‘ಅದಕ್ಕೇನ ಅವಳು ನನ್ನ ಮತ್ತೆ ಮಾತಾಡಿಸದೇ ಹೋದದ್ದು?’ ವಿಜಿಗೆ ಹೊಸ ಪ್ರಪಂಚವೊಂದು ಅನಾವರಣಗೊಂಡಂತಾಯಿತು.

ಇಂದುಮತಿಗೆ ಕುತೂಹಲ ಇನ್ನೂ ಜಾಸ್ತಿಯಾಯಿತು. ‘ನಂ ಹಾಸ್ಟೆಲಲ್ಲಿ ಯಾರ್‍್ಯಾರಿದಾರೆ ಮತ್ತೆ? ಲೆಸ್ಬಿಯನ್ಸು?’ ರಿಂಕಿ ತನಗೆ ಗೊತ್ತಿದ್ದವರ ಹೆಸರು ಹೇಳಲು ತೊಡಗಿದಂತೆ ಯಾವುದೋ ಅನೂಹ್ಯ ಜಗತ್ತಿನ ಬಾಗಿಲುಗಳು ತೆರೆದವು. ಹೊಚ್ಚ ಹೊಸ ಬೆಳಕೊಂದು ಹೊಮ್ಮಿ ಎಲ್ಲವನ್ನೂ ತೋಯಿಸಿತು. ಆ ಬಣ್ಣದಲ್ಲಿ ಅದ್ದಿದ ಕುಂಚದಿಂದ ಎಲ್ಲರ ಮನಸ್ಸುಗಳೂ ಬೇರೊಂದು ಆಯಾಮ ನೋಡಲು ತಯಾರಾದವು. ಬಹಳ ರಹಸ್ಯತಮ ವಿಷಯವೊಂದು ಗಾಂಭೀರ್ಯ ಕಳೆದುಕೊಳ್ಳದೆ ಎಲ್ಲರೆದುರು ತನ್ನ ಸ್ವರೂಪ ತೋರಿತ್ತು.

‘ಅದ್ಯಾವ್ ನನ್ ಮಗ ಗಾದೆ ಮಾಡಿದ್ದು ಎರಡು ಜುಟ್ಟು ಸೇರಬಹುದು ಎರಡು ಜಡೆ ಸೇರಕ್ಕಾಗಲ್ಲ ಅಂತ, ಅವ್ನ್ ಕಣ್ಣ್ ಸೇದೋಗ’ ಇಂದುಮತಿ ಪಕ್ಕಾ ದೇಸೀ ಭಾಷಿಕಳಾಗಿದ್ದಳು. ‘ಯಾರ್ ಯಾರನ್ನ ಲವ್ ಮಾಡಿದ್ರೇನೇ. ಅದರಿಂದ ಜಗತ್ತಲ್ಲಿ ಪ್ರೀತಿ ಹೆಚ್ಚಾಗುತ್ತಪ್ಪ. ಇಷ್ಟೂ ಅರ್ಥವಾಗಲ್ವಾ ಜನಕ್ಕೆ? ಅಪರಾಧ ಹೆಂಗಾಗುತ್ತೆ?’ ಎಂದು ಈಶ್ವರಿ ಇಂದುಮತಿಯನ್ನು ಕೇಳಿದಳು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.