ADVERTISEMENT

ಗಮ್ಯದಿಂದ ಗಮ್ಯಕ್ಕೆ ನಡೆದರೆ ಪಯಣ ಬದಲಾಗುತ್ತಾ?

ಪ್ರೀತಿ ನಾಗರಾಜ
Published 9 ನವೆಂಬರ್ 2016, 19:30 IST
Last Updated 9 ನವೆಂಬರ್ 2016, 19:30 IST

ಗಾಂಜಾ... ಆ ಮಾಯಾಲೋಕ... ಅದರ ತಾಕತ್ತೇ ಬೇರೆ. ಒಮ್ಮೆ ಅದನ್ನು ಸವಿದುಬಿಟ್ಟರೆ ಅದನ್ನು ಮೀರಿಸಿದ ಅನುಭವ ಇನ್ನೊಂದಿಲ್ಲ... ಹೀಗೆಲ್ಲ ವರ್ಣನಾತೀತವಾದ ಮಾತುಗಳನ್ನು ಕೇಳಿದ್ದ ವಿಜಿ, ಒಮ್ಮೆ ತನ್ನ ಅನುಭವವನ್ನು ಮೆಲುಕು ಹಾಕಿದಳು. ನಿನ್ನೆ ರಾತ್ರಿ ತಾನು ಗಾಂಜಾ ಎಳೆದುಕೊಂಡ ಮೇಲೆ ತನ್ನ ಕಲ್ಪನಾ ಶಕ್ತಿ ಹುಚ್ಚಾಪಟ್ಟೆ ಓಡಿದ್ದು ಸ್ವಲ್ಪ ಸ್ವಲ್ಪ ನೆನಪಾಯಿತು. ತನಗೆ ಸಕ್ಕರೆ ಅಥವಾ ಸಿಹಿ ತಿನ್ನಬೇಕು, ನೀರು ಕುಡಿಯಬೇಕು ಎನ್ನುವ ಅದಮ್ಯ ಬಯಕೆ ಹುಟ್ಟಿದ್ದು ಗಟ್ಟಿಯಾಗಿ ನೆನಪಿತ್ತು.

ಹಂಪಿ ಯಾಕೋ ಮರೆಯಲಾಗದ ಕ್ಷಣಗಳನ್ನು, ನೆನಪುಗಳನ್ನು ನೀಡುತ್ತೆ ಎನ್ನಿಸಿ ಖುಷಿಯಾಯಿತು. ಇಲ್ಲಿನ ಜನ ಮುಗ್ಧರು. ಇಲ್ಲಿಗೆ ಬಂದವರೂ ತಮ್ಮ ಮುಖವಾಡ ಕಳಚಿ ಮನುಷ್ಯರಾಗಿ ವ್ಯವಹರಿಸಲು ಶುರು ಮಾಡುತ್ತಾರೆ. ಅಂಥ ಗುಣ ಈ ಮಣ್ಣಿಗೆ ಇದೆ.

ಸಮಯವನ್ನೇ ಜಯಿಸಿ ನಿಂತಿರುವ ಕಲ್ಲುಗಳಿಂದ ಉಂಟಾದ ಈ ಸಾಮ್ರಾಜ್ಯದಲ್ಲಿ ಮನುಷ್ಯನಾದರೂ ಎಷ್ಟರಮಟ್ಟಿಗೆ ತನ್ನ ಅಸ್ತಿತ್ವವನ್ನು ಪ್ರತಿಪಾದಿಸಬಲ್ಲ? ನಿಸರ್ಗದ ಮುಂದೆ ಈ ಮನುಷ್ಯನೆಂಬ ಪ್ರಾಣಿ ಬರೀ ತಮಾಷೆಯ ವಸ್ತುವಲ್ಲವೇನು? ಇದೇಕೆ ಹಂಪಿ ತನ್ನೊಳಗೆ ಇಲ್ಲದ ಭಾವನೆಗಳನ್ನು ಹುಟ್ಟುಹಾಕುತ್ತಿದೆ? ತಾನೇಕೆ ಆ ಗಾಂಜಾದ ಸಹವಾಸಕ್ಕೆ ಹೋದೆ? ತನಗೆ ಮೊದಲೇ ಇದೆಲ್ಲಾ ಬೇಡ ಅನಿಸಿತ್ತಲ್ಲವೇನು?

ಹೀಗೇ ಏನೇನೋ ಯೋಚಿಸುತ್ತಾ ಕುಳಿತವಳಿಗೆ ತನ್ನ ಮುಂದೆಯೇ ಕವಿತಾ ಸ್ನಾನಕ್ಕೆ ಹೋದದ್ದೂ, ಮತ್ತೆ ವಾಪಸು ರೂಮಿನೊಳಕ್ಕೆ ಬಂದದ್ದೂ ಗಮನಕ್ಕೆ ಬರಲೇ ಇಲ್ಲ. ವಿಜಿ ಹೀಗೆ ಕಳೆದು ಹೋಗಿರುವುದನ್ನು ಕಂಡು ಕವಿತಾಗೆ ಇವಳೆಲ್ಲಾದರೂ ಮತ್ತೆ ಅಳಿದುಳಿದ ಗಾಂಜಾವನ್ನೂ ಸೇದಿಬಿಟ್ಟಳೇನೋ ಎನ್ನಿಸಿ ಧಾವಂತದಿಂದ ಬ್ಯಾಗು ತೆರೆದು ನೋಡಲಾಗಿ ಇಟ್ಟಿದ್ದ ಸಾಮಾನುಗಳೆಲ್ಲಾ ಸ್ವಸ್ಥಾನದಲ್ಲಿ ಇದ್ದು, ಗಾಂಜಾ ಕೂಡ ಭದ್ರವಾಗಿ ಡಬ್ಬಿಯಲ್ಲೇ ಕುಳಿತಿದ್ದು ಕಂಡು ಸಮಾಧಾನವಾಯಿತು.

‘ನಾನೇನು ಮಾತಾಡ್ತಾ ಇದ್ದೆ ನಿನ್ನೆ ರಾತ್ರಿ?’ ವಿಜಿ ಬಹಳ ಮುಗ್ಧವಾಗಿ ಕೇಳಿದಳು. ಈ ಮಾತಿಗೆ ಕವಿತಾ ವ್ಯಂಗ್ಯದಲ್ಲಿ ಉತ್ತರಿಸಬೇಕೋ ವಾಸ್ತವದಲ್ಲಿ ಉತ್ತರಿಸಬೇಕೋ ಅಂತ ಗೊಂದಲದಲ್ಲಿ ಬಿದ್ದು ಸುಮ್ಮನೆ ನಿಂತಳು. ‘ಕವಾ ನಿನ್ನೆ ನಿನ್ನ ಪ್ಲಾನ್ ಎಲ್ಲಾ ಹಾಳು ಮಾಡಿದೆನಾ?’ ಅಂತ ಸ್ವಲ್ಪ ಕಾಳಜಿಯಿಂದಲೇ ಕೇಳಿದಳು.

ಯಾಕೋ ಕವಿತಾಗೆ ಇದ್ದಕ್ಕಿದ್ದ ಹಾಗೆ ಈ ಮುಗ್ಧ ಹುಡುಗಿ ಬಗ್ಗೆ ಕರುಣೆ ಹುಟ್ಟಿಬಿಟ್ಟಿತು. ಗೊತ್ತುಗುರಿಯಿಲ್ಲದ ತನ್ನ ಜೊತೆ ಬಂದಿದ್ದೇ ಅಲ್ಲದೆ ತನ್ನನ್ನು ಸಂಪೂರ್ಣವಾಗಿ ನಂಬಿ ಕೂತಿದ್ದಾಳೆ. ಸ್ನೇಹ ಅಂದರೆ ಇದೇ ಇರಬೇಕು. ‘ಇಲ್ಲ ಬಿಡೇ... ಪರವಾಗಿಲ್ಲ... ನನಗೂ ಏನು ಅಂಥ ಖಯಾಲಿ ಇರಲಿಲ್ಲ. ಸುಮ್ಮನೆ ಹುಸೇನ ಆಫರ್ ಮಾಡಿದನಲ್ಲಾ, ಸುಲಭವಾಗಿ ಸಿಗುತ್ತಲ್ಲಾ ಅಂತ ಟ್ರೈ ಮಾಡೋಣ ಅಂದುಕೊಂಡೆ. ಆದರೆ ನಿನಗೆ ಅದರ ಋಣ ಇತ್ತು ಅಂತ ಕಾಣ್ಸುತ್ತೆ. ಕೊಂಡ್ಕೊಂಡಿದ್ದು ನಾನು, ಅನುಭವಿಸಿದ್ದು ನೀನು ಅನ್ನೋ ಹಾಗೆ ಆಯಿತು!’

‘ಇದೊಂಥರಾ ಹೆಸರು ಯಾರದೋ ಬಸುರು ಯಾರದೋ ಅಂತ ಗಾದೆ ಮಾತಿನ ಥರಾ  ಆಯಿತು’ ಅಂತ ವಿಜಿ ಒಂಥರಾ ವಿಷಾದ ಮಿಶ್ರಿತ ನಗೆ ನಕ್ಕಳು. ‘ಹಂಗಲ್ಲ. ದಾನೇ ದಾನೇ ಪೆ ಲಿಖಾ ಹೈ ಖಾನೆ ವಾಲೇ ಕಾ ನಾಮ್ ಅನ್ನೋ ಥರ ಗಾಂಜಾ ಗಾಂಜಾ ಪೆ ಲಿಖಾ ಹೈ ಪೀನೆ ವಾಲೇ ಕಾ ನಾಂ ಅನ್ನೋ ಥರ ಆಯಿತು...’ ಅಂತ ಕವಿತಾ ನಕ್ಕಳು.

ವಿಜಿ ನಗಲಿಲ್ಲ. ಕುತೂಹಲದಿಂದ ‘ಯಾಕೇ? ಎಕ್ಸ್‌ಪೀರಿಯನ್ಸು ಇಷ್ಟ ಆಗಲಿಲ್ವಾ?’ ಕವಿತಾ ಕೇಳಿದಳು ‘ಊಹೂಂ...ಇಷ್ಟ ಆಗಲಿಲ್ಲ...’ ‘ನೀನು ಹಾಟ್ ಡ್ರಿಂಕ್ಸು ಮಾಡ್ತೀಯ ಅಲ್ವಾ?’ ‘ಹೌದು. ಆದರೆ ಸುಮ್ಮನೆ ಮಜಾಕ್ಕೆ ಕುಡಿಯೋದು. ಕುಡಿದು ಗಟಾರಕ್ಕೆ ಬೀಳೋ ಥರ ಕುಡಿಯೋಲ್ಲವಲ್ಲ?’ ‘ಅದು ಸರಿನೇ. ಆದರೆ ಗಾಂಜಾ ಅದಕ್ಕಿಂದ ಮೇಲ್ಮಟ್ಟದ ಅನುಭವ ಅಂತಾರಪ್ಪ... ನಾನೂ ಹಾಗೇ ಅಂದುಕೊಂಡಿದ್ದೀನಿ...’

‘ಇಲ್ಲ. ನನಗೆ ಗಾಂಜಾ ಸೇರಲಿಲ್ಲ. ಬಹಳ ಕ್ರಿಯೇಟಿವ್ ಆಗಿರೋರಿಗೆ ಏನನ್ನಿಸುತ್ತೋ ಗೊತ್ತಿಲ್ಲ. ಆದರೆ ನನಗಂತೂ ಗಾಂಜಾ ಒಂಥರಾ ನನ್ನನ್ನ ನಾನೇ ಬಂಧಿಸಿಕೊಂಡು ಬಿಟ್ಟಿದೀನಿ ಅನ್ನುವ ಫೀಲಿಂಗ್ ಕೊಡ್ತಾ ಇತ್ತು...’ ‘ನಿಜವಾಗ್ಲೂ?’ ‘ದೇವರಾಣೆಗೂ ಇಷ್ಟ ಆಗಲಿಲ್ಲ..’ ‘ಹೋಗಲಿ ಬಿಡು. ಉಳಿದದ್ದು ಬಿಸಾಕುವ’‘ದುಡ್ಡು ಕೊಟ್ಟು ಕೊಂಡ್ಕೊಂಡಿದ್ದೆ ಅಲ್ವಾ? ವೇಸ್ಟ್ ಆಗುತ್ತೆ ಕಣೇ...’

‘ಅಯ್ಯೋ ಪೆದ್ದೀ. ಜನ ದುಡ್ಡು ಕೊಟ್ಟು ಕೊಂಡ್ಕೊಂಡಿರೋ ಅನ್ನವನ್ನೇ ಯಾವ ಹಿಂಜರಿಕೆಯೂ ಇಲ್ಲದೆ ಚೆಲ್ತಾರಂತೆ. ಹಾಗೆ ನೋಡಿದರೆ ಇದನ್ನ ಚೆಲ್ಲಕ್ಕೆ ಯಾವ ಚಿಂತೆಯೂ ಇರಬೇಕಿಲ್ಲ...’ ‘ನೀನು ಟ್ರೈ ಮಾಡಲ್ವಾ?’ ‘ಇಲ್ಲ. ಬೇಡ ಅನ್ನಿಸ್ತು. ಗೆಳೆಯನೊಬ್ಬ ಇದರ ಅಭ್ಯಾಸ ಮಾಡಿಸಿದ್ದ ಅಂತ ಸೇದ್ತಾ ಇದ್ದೆ. ಇದಿಲ್ಲದೆ ತಿಂಗಳಾನುಗಟ್ಟಲೆ ಇರ್ತೀನಿ. ಹಾಗಿದ್ದ ಮೇಲೆ ಇದು ನನ್ನ ಅಡಿಕ್ಷನ್ ಅಲ್ಲವೇ ಅಲ್ಲ. ಸುಮ್ಮನೆ ಸ್ವಂತಕ್ಕೆ ಹುಟ್ಟಿಸಿಕೊಂಡಿರೋ ಯಾವುದೋ ಭ್ರಮೆ ಅಷ್ಟೆ...’ ‘ಹಾಗಂತೀಯಾ?’

‘ಇರಬಹುದು. ಇಲ್ಲಿಗೆ ಬಂದವರಲ್ಲಿ ಬಹುಪಾಲು ಜನ ಇದನ್ನ ಸೇದೋದು ನೋಡಿದ್ದೆ. ಇದ್ಯಾಕೆ ಹೀಗೆ ಅಂತ ನನ್ನ ಫ್ರೆಂಡನ್ನ ಕೇಳಿದ್ದಕ್ಕೆ ಅವನೇನು ಹೇಳಿದ್ದ ಗೊತ್ತಾ?’
‘ಏನಂದಿದ್ದ?’ ‘ಇಲ್ಲಿ ಸುತ್ತಲೂ ನೋಡು. ಎಂಥಾ ವಿಧ್ವಂಸಕ್ಕೆ ಒಳಗಾದ ಜಾಗ ಇದು? ಇದನ್ನು ನೋಡಿದರೆ ಹುಚ್ಚೇ ಹಿಡಿಯುತ್ತೆ.

ಈ ಕಲ್ಲುಗಳ ರಾಶಿ ಮುಖ ಮುಚ್ಚಿಕೊಂಡು ಅಳ್ತಾ ಬಿದ್ದಿರೋ ಭಗ್ನ ಪ್ರೇಮಿಯ ಥರ ಕಾಣಿಸುತ್ತೆ. ಅಲ್ಲಲ್ಲಿ ಸುಪುಷ್ಟವಾಗಿ ಸುಂದರವಾಗಿ ಕಟೆಸಿಕೊಂಡು ನಿಂತಿರೋ ಈ ಸುಂದರಿ ಕಲ್ಲುಗಳು... ಅವುಗಳ ಮಾಟ... ಈ ನೋಟ ಎಲ್ಲವೂ ಎಂಥ ವೈರುಧ್ಯ ಗೊತ್ತೇನು? ಅದಕ್ಕೆ ಈ ಜಾಗವನ್ನು ಆರ್ಟಿಸ್ಟಿಕ್ ಆಗಿ ಗ್ರಹಿಸಲು ಸಾಧ್ಯವಾಗಲಿಕ್ಕೆ ಗಾಂಜಾ ಹೊಡೀತಾರೆ ಅಂದಿದ್ದ. ನಾನೂ ಇರಬಹುದೇನೋ ಅಂದುಕೊಂಡಿದ್ದೆ. ಆದರೆ ಅದು ಅವನ ವ್ಯಸನ. ನನ್ನದಲ್ಲ ಅಂತ ಈಗ ಅನ್ನಿಸ್ತಾ ಇದೆ’ ‘ಅದು ಬಿಡು ಮತ್ತೆ. ಈ ವಿಷಯ ಹೇಳು. ನಿನ್ನೆ ಗಾಂಜಾ ನನ್ನ ತಲೆಗೆ ಏರಿದ ಮೇಲೆ ನಾನೇನು ಮಾಡ್ತಾ ಇದ್ದೆ?’

‘ಜಿಲೇಬಿ ಬೇಕು ಅಂದೆ... ಕಪ್ಪೆ ನೋಡಿ ಹೆದರಿಕೊಂಡೆ... ಸೋಫಾ ಬೇಕು ಅಂತ ಹಟ ಮಾಡಿದೆ...ಆಮೇಲೆ ನೀರು ಅಂದೆ, ಹಡಗು ಅಂದೆ... ಆದರೆ ಅದೆಲ್ಲಾ ಸ್ವಲ್ಪ ಹೊತ್ತು ಮಾತ್ರ ಕಣೆ... ಆಮೇಲೆ ಮಲಗಿಕೊಂಡೆ ನೀನು...’ ‘ನಿನಗೆ ತುಂಬಾ ತೊಂದರೆ ಕೊಟ್ಟೆನಾ? ನಿನ್ನ ಕೈಲಿದ್ದದ್ದನ್ನ ನಾನ್ಯಾಕೆ ಸೇದಿದೆ ಅಂತ ಈಗಲೂ ಅರ್ಥವಾಗ್ತಾ ಇಲ್ಲ ನನಗೆ...’ ಎನ್ನುತ್ತಾ ವಿಜಿ ತಲೆಕೆಡಿಸಿಕೊಳ್ಳಲಾಗಿ ಕವಿತಾ ಅವಳ ಭುಜದ ಮೇಲೆ ಕೈ ಇಟ್ಟು ಹೇಳಿದಳು.

‘ಹೋಗಲಿ ಬಿಡು. ತುಂಬಾ ಗಾಬರಿಯಾಗಿದ್ದೆ. ನಿನಗೆ ಆ ಸೇತುವೆಯ ಮೇಲಿಂದ ಬಿದ್ದು ಹೋಗಿ ಬಿಡ್ತೀನೇನೋ ಎನ್ನುವ ಭಯವಿತ್ತು ಅಂತ ಕಾಣಿಸುತ್ತೆ... ಆ ಭಯದಿಂದ ನಿನ್ನ ಮನಸ್ಸನ್ನ ಡೈವರ್ಟ್ ಮಾಡಲು ತೋರಿದ ಪ್ರತಿಕ್ರಿಯೆ ಅದು... ಈಗ ಯೋಚಿಸಿ ಉಪಯೋಗ ಇಲ್ಲ...’

ಇಬ್ಬರು ಹುಡುಗಿಯರು. ಇಬ್ಬರ ಜೀವನವೂ ಭಿನ್ನ. ಇಬ್ಬರ ಹಿನ್ನೆಲೆಯೂ ಒಂದಕ್ಕೊಂದು ಸಂಬಂಧವಿಲ್ಲದ್ದು. ಹಾಗಿರುವಾಗ ಈ ಒಂದು ‘ಅರ್ಥ ಮಾಡಿಕೊಳ್ಳುವಿಕೆಯ’ ಸಂಸರ್ಗ ಹೇಗೆ ಸೃಷ್ಟಿಯಾಯಿತೋ ತಿಳಿಯದಾಯಿತು. ಎಲ್ಲ ಎಲ್ಲವನರಿದು ಫಲವೇನಯ್ಯ? ತನ್ನ ತಾನರಿಯಬೇಕಲ್ಲದೆ? ತನ್ನಲ್ಲಿ ಅರಿವು ಸ್ವಯವಾಗಿರಲು ಅನ್ಯರ ಕೇಳಲುಂಟೆ?
ಚೆನ್ನಮಲ್ಲಿಕಾರ್ಜುನ, ನೀ ಅರಿವಾಗಿ ಮುಂದೋರಿದ ಕಾರಣ ನಿಮ್ಮಿಂದ ನಿಮ್ಮನರಿದೆನಯ್ಯ ಪ್ರಭುವೆ...

ಅಂತ ಅರಿವಿಗೆ ಗುರು ಸಮ, ಭಕ್ತಿಯಲ್ಲಿ ತನ್ನ ದೈವಕ್ಕೆ ತಾನೇ ಸಮ ಅಂತ ಹನ್ನೆರಡನೇ ಶತಮಾನದಲ್ಲೇ ಅಕ್ಕಮಹಾದೇವಿ ಬಹಳ ಸರಳವಾಗಿ ಹೇಳಿಬಿಟ್ಟಳಾದರೂ ಮನುಷ್ಯ ಸಂಕುಲಕ್ಕೆ ತನ್ನ ದಾರಿ, ಗುರಿ ಎಲ್ಲದರ ಬಗ್ಗೆಯೂ ಪ್ರಶ್ನೆಗಳು ಹೊಸಹೊಸದಾಗಿ ಏಳುತ್ತಲೇ ಇರುತ್ತವಲ್ಲ!

ಉಳಿದ ಸಮಯವನ್ನು ಹಂಪಿಯಲ್ಲಿ ಬಹಳ ಸಮಾಧಾನವಾಗಿ ಯಾವ ಅಡ್ವೆಂಚರನ್ನೂ ಬಯಸದೆ ಕಳೆದರು. ಹಾಗೆ ಕಳೆಯುವುದೇ ಒಂದು ರೋಮಾಂಚಕಾರಿ ಅನುಭವ ಎನ್ನುವುದು ಆಮೇಲೆ ಅರಿವಿಗೆ ಬಂತು. ಗ್ರಹಿಕೆಯಲ್ಲಿ ಯಾವ ಬಣ್ಣವನ್ನೂ ಬೆರೆಸದೆ ಸಂಗತಿಗಳು ಇದ್ದದ್ದು ಇದ್ದ ಹಾಗೇ ಮನಸ್ಸನ್ನು ಪ್ರವೇಶಿಸುವುದು ಒಂದು ವಿಸ್ಮಯ.

‘ನಾವು ಹಂಪಿ ನೋಡಕ್ಕೆ ಅಂತ ಬಂದ್ವಿ. ಆದರೆ ಹಂಪಿ ನಮ್ಮನ್ನ ನಮಗೇ ತೋರಿಸಿತಲ್ಲ?’ ಅಂತ ವಿಜಿ ವಿಸ್ಮಯಗೊಂಡಳು. ಈ ಆಲೋಚನೆಯೇ ಆಹ್ಲಾದಕರ ಎನ್ನುವಂತೆ ಕವಿತಾ ನಕ್ಕಳು. ಅವಳ ಕ್ಯಾಮೆರಾಕ್ಕೆ ಬಿಡುವಿಲ್ಲದ ಕೆಲಸ ನಡೆದಿತ್ತು. ಸೂರ್ಯ ಹುಟ್ಟಿದರೆ ಹತ್ತು ಫ್ರೇಮು... ಮುಳುಗಿದರೆ ಇಪ್ಪತ್ತು... ಹೀಗೆ ಕಾಲಿಗೆ ಬಿಡುವಿಲ್ಲದೆ ನೋಡುವ ನೋಟಕ್ಕೆ ಕೊನೆಯೇ ಇಲ್ಲದ ಹಾಗೆ ಹಂಪಿಯ ಪರ್ಯಟನೆ ನಡೆದಿತ್ತು. ಊರು ಈ ಕ್ಷುಲ್ಲಕ ಮನುಷ್ಯರನ್ನು ನೋಡಿ ನಸುನಕ್ಕಿರಬೇಕು.

ಹೊರಡುವ ದಿನ ಮತ್ತೆ ಹುಸೇನನ ಭೆಟ್ಟಿ ಆಯಿತು. ಅವನು ಸುಮ್ಮನೆ ನಿಂತು ಹೋಗಿ ಬನ್ನಿ... ಇನ್ನೊಮ್ಮೆ ಬನ್ನಿ ಇನ್ನೂ ‘ಖರಾ ಮಾಲ್’ (ನೈಜ ವಸ್ತು... ಇನ್ನೂ ಒಳ್ಳೆಯ ವಸ್ತು) ಕೊಡ್ತೀನಿ ಅಂತ ಹಳೇ ಸ್ನೇಹಿತನ ಥರ ಹಲ್ಕಿರಿದು ಹೇಳಿದ.

ಫೋನ್ ನಂಬರು ವಿನಿಮಯವಾದವು. ಮುಂದಿನ ಸಾರಿ ಯಾವಾಗ ಬರೋದು... ಹುಸೇನ ಬೆಂಗಳೂರಿಗೆ ಬಂದರೆ ಇವರನ್ನ ಭೇಟಿಯಾಗೋದು ಅಂತೆಲ್ಲ ಸಂಕಲ್ಪಗಳಾದುವು. ಮತ್ತೆ ಭೇಟಿಯಾಗುವ ಸಾಧ್ಯತೆ ಇಲ್ಲ ಅಂತ ಗೊತ್ತಿದ್ದರೂ ಭಾಷೆ ರೂಢಿಸಿಕೊಂಡಿರುವ ನಾಗರಿಕ ಮನುಷ್ಯರ ಸಂಕಟಗಳು ಹೇಳತೀರದಂಥವು.ಯಾಕೆಂದರೆ ಮುಂದಿನ ದಿನಗಳಿಗೆ ಅವಕಾಶಗಳನ್ನು ಜೋಡಿಸಿದರೇ ನಮ್ಮ ಜೀವನ ಸಾರ್ಥಕವಾಗೋದು!

ತೀವ್ರವಾದ ಸಂಬಂಧಗಳು, ಭೇಟಿಗಳು ಹೀಗೆ ಕೊನೆಗೊಂಡಾಗ ಮುಂದಿನ ಸಾರಿಯ ಭೇಟಿಯ ಪ್ಲಾನ್ ವಾಡಿಕೆಯ ಪ್ರಕಾರ ನಡೆದೇ ನಡೆಯುತ್ತೆ. ಆದರೆ ಆ ಪ್ಲಾನುಗಳು ಯಾವೂ ಕಾರ್ಯಗತ ಆಗೋದಿಲ್ಲ ಅನ್ನುವ ಸತ್ಯವೂ ಅದರ ಪಕ್ಕದಲೇ ಇರುತ್ತೆ. ಅದಕ್ಕೆ ಅಲ್ಲವೇ ಮನುಷ್ಯನ ಆಸೆ ಭವಿಷ್ಯದಲ್ಲಿ, ಅಂತಃಕರಣ ಎಂದಿದ್ದರೂ ಭೂತದಲ್ಲಿ ಇರೋದು!

ಬೆಂಗಳೂರಿಗೆ ವಾಪಸಾದ ಮೇಲೆ ಕವಿತಾ ಮತ್ತು ವಿಜಿಯ ಜೀವನ ಕವಲಾದವು. ಹಾಗೆ ಆಗಲೇಬೇಕಿತ್ತು ಎನ್ನುವುದು ಸರ್ವೇ ಸಾಮಾನ್ಯ ಸಂಗತಿ. ಅಲ್ಲಿಂದ ಮುಂದಕ್ಕೆ ಏನೇನು ನಡೆಯಿತು ಎನ್ನುವುದು ಅಪ್ರಸ್ತುತ. ಯಾಕೆಂದರೆ ಒಬ್ಬರೇ ಬದುಕುವ ಧೈರ್ಯವನ್ನು ರೂಢಿಸಿಕೊಂಡ ಹೆಣ್ಣುಗಳ ಜೀವನ ಬಹಳ ವಿಭಿನ್ನ ಅನುಭವಗಳಿಂದ ಪಾಠಗಳಿಂದ ಕೂಡಿರುತ್ತೆ.

ಆದರೆ ಇನ್ನು ತಮ್ಮ ದಾರಿ ಕವಲೊಡೆಯುತ್ತದೆ ಅಂತ ಗೊತ್ತಾದಾಗ ಇಬ್ಬರೂ ಯಾವ ಆಣೆ ಪ್ರಮಾಣಗಳನ್ನೂ, ಹುಚ್ಚು ಪ್ರಾಮಿಸ್ಸುಗಳನ್ನೂ ಮಾಡಲು ಹೋಗಲಿಲ್ಲ.‘ಸಾಕು ಇಬ್ಬರೂ ಒಟ್ಟಿಗೆ ಕಾಲ ಕಳೆದದ್ದು... ಇನ್ನು ನನ್ನ ಜೀವನ ನನಗೆ... ನಿನ್ನದು ನಿನಗೆ’ ಎಂಬಂತೆ, ಬಹಳ ಸಹಜವಾಗಿ ಬೇರೆ ಬೇರೆ ದಿಕ್ಕಿನಲ್ಲಿ ನಡೆದರು.

ಏಕಸೂತ್ರವಾಗಿ ವಿಜಿ ತನ್ನ ಜೀವನದ ದಾರಿ ಹುಡುಕಿಕೊಂಡು ಕೆಲಸವನ್ನೋ ಜೀವನವನ್ನೋ ಹುಡುಕಿಕೊಂಡು ಮುಂದಕ್ಕೆ ಹೊರಟಳು. ಪೀಜಿ ಹಾಸ್ಟೆಲ್ಲು ಹಿಂದಕ್ಕೆ ಹೋದವು. ಸರಳಾ, ಮುನಿರಾಜು, ಜಯಾ, ಸೂಸನ್ ಎಲ್ಲರೂ ಸ್ಮೃತಿಪಟಲದ ಬೊಂಬೆಗಳಾದರು. ಹೊಸ ನೆನಪುಗಳು ಸೃಷ್ಟಿಯಾದವು. ಕವಿತಾ ಜೀವನದಲ್ಲೂ ಬಹುತೇಕ ಅದೇ ಆಯಿತು. ಇದೆಲ್ಲವೂ ಕಥೆ ಎನ್ನುವ ಚೌಕಟ್ಟನ್ನು ಮೀರಿದ ಸಂಗತಿಗಳು, ಅಲ್ಲವೇ? 

ಕಥಿ ಕಥಿ ಕಾರಣ...
ದೆಸೆಯಿಲ್ಲದ ಹೆಸರಿಲ್ಲದ ಹುಡುಗಿಯರ ಜೀವನದ ಭಾಗಗಳನ್ನು ಓದಿದ ನಿಮಗೆಲ್ಲರಿಗೂ ಅನಂತ ನಮನಗಳು. ಇಲ್ಲಿಗೆ ಕಥೆ ಮುಗಿಯಿತಾ ಅಂತ ನಿಮ್ಮ ಪ್ರಶ್ನೆ ಇರಬಹುದು.ಇಲ್ಲಿಗೆ ಕಥೆ ಮುಗಿಯಲಿಲ್ಲ. ಅದು ಕೂಡ ಜೀವನದಂತೆ, ಸೃಷ್ಟಿಯಂತೆ ಅನವರತ ನಡೆಯುವ ವಾಸ್ತವ. ಕಥೆ ಎನ್ನುವುದು ಮಾಂಸ ಮಜ್ಜೆಗಳಿಂದ ತುಂಬಿಕೊಂಡು ನಡೆಯಲು ಹಾತೊರೆಯುವ ಕಂದನಂತೆ.

ಒಂದೊಂದೇ ಹೆಜ್ಜೆ ಮುಂದಕ್ಕೆ ಹಾಕಿದಾಗಲೂ ರೋಮಾಂಚನವನ್ನೇ ಕೊಡುತ್ತದೆ. ಹಾಗಾದರೆ ಮುಗಿದದ್ದು ಏನು ಅಂತ ಕೇಳಿದರೆ, ಇಲ್ಲಿಗೆ ಅಂತ್ಯಗೊಂಡಿದ್ದು ಆ ಹುಡುಗಿಯರ, ಅವರ ಜೀವನದಲ್ಲಿ ಬಂದ ನೂರಾರು ಜನಗಳ, ಅವರಿಂದ ದೊರೆತ ಅನುಭವಗಳ ಸರಕು. ಈಗ ಬುತ್ತಿಯನ್ನು ಕಟ್ಟಿ ಹಿಂದಕ್ಕೆ ಇಡುವ ಕಾಲ. ಇನ್ನೂ ವಿಷದವಾಗಿ ಹೇಳಬೇಕೆಂದರೆ ಎಪ್ಪತ್ತೊಂದು ವಾರಗಳ ಕಾಲ ಈ ಬುತ್ತಿಯನ್ನು ಬಹಳ ಪ್ರೀತಿಯಿಂದ ಸವಿದ, ಅವರೊಂದಿಗೆ ನಿಮ್ಮ ಗುರುತನ್ನೂ ಆಗಾಗ ಗಟ್ಟಿ ಮಾಡಿಕೊಂಡ ನಿಮಗೆ ಅನಂತ ಧನ್ಯವಾದಗಳು.

ಈ ವಾರದೊಂದಿಗೆ ಮಿರ್ಚಿ ಮಂಡಕ್ಕಿ ಖಾಲಿಯಾಯಿತು. ಇನ್ನೂ ರುಚಿ ಕಟ್ಟಬೇಕಿತ್ತು ಇನ್ನಷ್ಟು ಹದ ಮಾಡಬೇಕಿತ್ತು ಅಂತ ತೀವ್ರವಾಗಿ ಅನ್ನಿಸುವ ನನ್ನೊಳಗಿನ ಬರಹಗಾರ್ತಿಗೆ ನಾನು ಹೇಳಿಕೊಳ್ಳುವುದು ಇಷ್ಟೇ: ಕಲೀಂ ಉಲ್ಲಾರವರು ತಮ್ಮ ಅನುಭವದ ಮೂಸೆಯಿಂದ ಅದ್ಭುತವಾಗಿ ಸೃಷ್ಟಿಮಾಡಿದ ‘ಕ್ಲಾಸ್ ಟೀಚರ್’ ಅಂಕಣ ಕೊನೆಗೊಂಡ ಕಾಲಕ್ಕೆ ನಾನು ಬರೆಯಲು ಶುರು ಮಾಡಿದಾಗ ಎಪ್ಪತ್ತು ಗುರುವಾರಗಳ ಗುರಿ ಖಂಡಿತ ಇರಲಿಲ್ಲ.

ನೀರು ಹರಿದ ಹಾಗೆ ದೋಣಿ ನಡೆಸಿದ್ದೇನೆ. ಕಂಡ, ಕೇಳಿದ, ಆದ ಅನುಭವಗಳು ಎಲ್ಲವೂ ಮತ್ತೆ ಮತ್ತೆ ಎದ್ದು ಬಂದು ಕಣ್ಣ ಮುಂದೆ ನಿಂತು ಜಬರ್ದಸ್ತಿಯಾಗಿ ಬರೆಸಿಕೊಂಡಿವೆ. ಬರಹಗಾರ್ತಿಯಾಗಿ ಈ ಅಕ್ಷರಗಳಿಗೆ ನಾನೊಂದು ಮಾಧ್ಯಮ ಮಾತ್ರ.

ಓದಿ ಮುನ್ನಡೆಸಿದ ನಿಮ್ಮ ಪ್ರೀತಿಗೆ, ವಿಶ್ವಾಸಕ್ಕೆ, ನಾನು ಎಂದೆಂದಿಗೂ ಚಿರಋಣಿ. ಎಲ್ಲಕ್ಕಿಂತ ಮುಖ್ಯವಾಗಿ, ಓದುಗರನ್ನು ಮುಟ್ಟುವ ಅವಕಾಶ ಕೊಡಮಾಡಿದ್ದಕ್ಕೆ ಪ್ರಜಾವಾಣಿಯ ಬಳಗದ ಹಿರಿಯರಿಗೆ-ಕಿರಿಯರೆಲ್ಲರಿಗೂ ನನ್ನ ಋಣಪೂರ್ವಕ ನಮಸ್ಕಾರಗಳು! ಸಾಧ್ಯವಾದರೆ, ಹೊಸ ಅನುಭವದೊಂದಿಗೆ ಮತ್ತೆ ಭೇಟಿಯಾಗೋಣ! ಶರಣು ಶರಣಾರ್ಥಿಗಳು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.