ADVERTISEMENT

ನಮ್ಮ ಎಣ್ಣೆ ಮಜ್ಜನ್ಕಾಣಿಯಾಗೋ ಬನ್ನಿ ಅಕ್ಕಯ್ಯ!

ಪ್ರೀತಿ ನಾಗರಾಜ
Published 15 ಜೂನ್ 2016, 19:30 IST
Last Updated 15 ಜೂನ್ 2016, 19:30 IST

ಭಾನುವಾರದ ಬೆಳಿಗ್ಗೆ ಗಳಿಗೆ ಒಂದು ರೀತಿ ಸ್ಥಾಯೀ ಭಾವ ಇರುತ್ತದೆ. ಇಡೀ ವಾರದ ಸಂಚಾರೀ ಭಾವವನ್ನು, ಜಂಗಮತ್ವವನ್ನು ಈ ಸ್ಥಾಯೀ ಭಾವ ಮುಂಜಾವಿನ ಕೆಲವು ಗಂಟೆಗಳ ಒಂದು ಮುಷ್ಟಿಯಲ್ಲಿ ಹಿಡಿದಿಟ್ಟುಕೊಂಡಂತೆ ಇರುತ್ತದೆ. ನಿದ್ರಾಪ್ರಿಯರಿಗಂತೂ ಭಾನುವಾರದ ಮುಂಜಾವು ಸಕಲ ಸಮಸ್ಯೆಗಳಿಗೂ ಪರಿಹಾರ ಕೊಡಬಲ್ಲ ಅಧ್ಯಾತ್ಮದಂತೆ. ಆದರೆ ನಿದ್ರೆಗೇಡಿಗಳಿಗೆ ಆ ಮುಂಜಾವಿನ ಗಂಟೆಗಳು ಅಷ್ಟೇ ಅಸಹನೀಯ.

ಇಂದಿರಾನಗರದ ಕೊಡವರ ಹೆಣ್ಣು ನಡೆಸುತ್ತಿದ್ದ ಪೀಜಿಯಲ್ಲಿದ್ದ ವಿವಿಧ ವಯೋಮಿತಿಯ ಹೆಣ್ಣುಮಕ್ಕಳಲ್ಲಿ ಭಾನುವಾರ ಬೇರೆ ಬೇರೆ ರೀತಿಯ ಪಲ್ಲಟಗಳನ್ನು ಸೃಷ್ಟಿಸುತ್ತಿತ್ತು. ಚಿಕ್ಕ ವಯಸ್ಸಿನ ಹುಡುಗಿಯರಾದ ವಿಜಿ, ಚಿತ್ರಾ ಸಮಾಧಿಸ್ಥಿತಿಯಲ್ಲಿ (ಅಂದರೆ ಉಸಿರು ಕಳೆದುಕೊಂಡವರ ರೀತಿ) ಮಲಗಿದ್ದರೆ, ಸೂಸನ್ ಬೇಗ ಎದ್ದು ಚರ್ಚಿಗೆ ಪ್ರಾರ್ಥನೆಗೆಂದು ಹೋಗಿರುತ್ತಿದ್ದಳು.

ಪೀಜಿಯಲ್ಲಿ ಇನ್ನೆಲ್ಲರೂ ಸ್ವಪ್ನ ಸ್ಥಿತಿಯಲ್ಲಿ ಇರುವಾಗ ಸರಳಾ ಮಾತ್ರ ಜೀವನದ ಸತ್ಯವನ್ನು ಕಂಡುಕೊಂಡ ಬುದ್ಧನಂತೆ ಬೇಗ ಎದ್ದು ಓಡಾಡುತ್ತಿದ್ದರು. ಮಲಗಿದ್ದವರನ್ನ ಎಬ್ಬಿಸಿ ಸ್ನಾನಕ್ಕೆ ಹೋಗ್ತೀಯಾ ಅಂತ ಕೇಳೋ ಅತ್ಯಂತ ಕ್ರೂರ ವಿಧಾನವೊಂದು ಅವರಿಗೆ ಸಿದ್ಧಿಸಿತ್ತು. ಇಂಥ ಕ್ಷುಲ್ಲಕ ಪ್ರಶ್ನೆ ಕೇಳ್ತೀರಲ್ಲ ಅಂತ ಬಯ್ಯೋ ಹಂಗಿಲ್ಲ–ಯಾಕಂದ್ರೆ ಸರಳಾ ವಯಸ್ಸಲ್ಲಿ ದೊಡ್ಡೋರು! ಹಾಗಂತ ಸುಮ್ಮನೆ ಇದ್ದು ಭಾನುವಾರದ ನಿದ್ದೆಯ ಗಮ್ಮತ್ತನ್ನು ಕಳೆದುಕೊಳ್ಳುವಂತೆಯೂ ಇಲ್ಲ. ಆದರೆ ಇದೆಲ್ಲದರ ಮಧ್ಯದಲ್ಲಿ ಸರಳಾರನ್ನು ಬಯ್ಯೋದಾದ್ರೂ ಹೆಂಗೆ ಅಂತ ಚಿತ್ರಾ, ವಿಜಿ ತಲೆ ಕೆಡಿಸಿಕೊಳ್ಳುತ್ತಿದ್ದರು.

ಸರಳಾಗೆ ಈ ಸೂಕ್ಷ್ಮಗಳು ಅರ್ಥವಾಗುತ್ತಿರಲಿಲ್ಲ ಅಂತಲ್ಲ. ಇನ್ನೊಬ್ಬರನ್ನು ಎಬ್ಬಿಸಿ ಮಾತಾಡಿಸಲೇಬೇಕಾದ ವಿಷಯದಲ್ಲಿ ಅವರೂ ಅಸಹಾಯಕರಾಗಿದ್ದರು. ಸೊಂಟ ಮಟ್ಟ ಬೆಳೆದು ಬಳುಕುತ್ತಿದ್ದ ಎಳೆ ಬಳ್ಳಿಯಂಥ ಕೂದಲನ್ನು ಚೆನ್ನಾಗಿ ತೊಳೆದುಕೊಳ್ಳಲು ಅವರಿಗೆ ಸಿಗುತ್ತಿದ್ದುದೇ ಭಾನುವಾರದ ಮುಂಜಾನೆ. ಶನಿವಾರ ಸಂಜೆ ಹೊಟ್ಟೆಗೆ ರಮ್ಮಿನ ಎಣ್ಣೆ ಬಿಟ್ಟುಕೊಂಡು, ತಲೆಗೆ ಬ್ರಾಹ್ಮೀ ಎಣ್ಣೆಯನ್ನು ತಕ್ಕಮಟ್ಟಿಗೆ ಬಿಸಿ ಮಾಡಿ ಕೊಬ್ಬರಿ ಎಣ್ಣೆಯಲ್ಲಿ ಹದವಾಗಿ ಬೆರೆಸಿ ತಲೆಗೆ ಗಸಗಸ ತಿಕ್ಕಿಕೊಂಡು ಆ ನೀಳ ನಾಗರ ಜಡೆಯ ಕೂದಲುಗಳ ಬೇರುಗಳನ್ನು ಭದ್ರ ಮಾಡಿಕೊಳ್ಳುತ್ತಿದ್ದರು.

ಬೆಳ್‍ಬೆಳಿಗ್ಗೆ ಎಲ್ಲರಿಗಿಂತ ಮುಂಚೆ ಎದ್ದು ಸ್ನಾನ ಮುಗಿಸುತ್ತಿದ್ದರು. ಎಲ್ಲರೂ ಎದ್ದು ಬಚ್ಚಲು ಉಪಯೋಗಿಸುತ್ತಾ ಹೋದಂತೆ ಅವರಿಗೆ ಅದೇನೋ ಮುಜುಗರ ಶುರುವಾಗುತ್ತಿತ್ತು. ತಾವು ಏಳುವುದು ತಡ ಆಗದಂತೆ ಜತನದಿಂದ ಅಲಾರಂ ಇಟ್ಟುಕೊಂಡು ಕೆಲಸಗಳನ್ನು ಮುಗಿಸಿಕೊಳ್ಳುತ್ತಿದ್ದರು.

ಭಾನುವಾರದ ಅವರ ದಿನಚರಿ ಫ್ಯಾಕ್ಟರಿಯ ಅಸೆಂಬ್ಲಿ ಲೈನ್ ಕೆಲಸಗಾರರಿಗಿಂತ ನಿರ್ದಿಷ್ಟವಾಗಿ ನಡೆಯುವಂಥದ್ದು. ಸಣ್ಣ ಪಾತ್ರೆಯಲ್ಲಿ ಒಬ್ಬರಿಗೇ ಆಗುವಷ್ಟು ಚಹಾ ಮಾಡಿಕೊಂಡು... ಲೋಟಕ್ಕೆ ಅದನ್ನು ಬಗ್ಗಿಸಿ ಆ ಲೋಟವನ್ನು ಬೊಗಸೆಯಲ್ಲಿ ಬೆಚ್ಚಗೆ ಹಿಡಿದುಕೊಂಡು... ಸ್ವಲ್ಪ ಸ್ವಲ್ಪವೇ ಬಾಯಿಗೆ ತುಂಬಿಸಿಕೊಳ್ಳುತ್ತಾ, ಆ ಚಹಾ ಸೊಪ್ಪಿನ ಸುವಾಸನೆ, ತೆಳು ಒಗರು ರುಚಿ, ಸ್ವಲ್ಪವೇ ಇಣುಕುತ್ತಿದ್ದ ಸಿಹಿ, ಮೂಗಿಗೆ ಅಡರಿಕೊಳ್ಳುತ್ತಿದ್ದ ಹಬೆ...ಆಹಾ!

ಶಹೀನ ಬೇಗಮ್ ಎನ್ನುವ ಹುಡುಗಿ ಬಂದು ಪೀಜಿ ಸೇರುವ ತನಕವೂ ಸರಳಾಗೆ ಭಾನುವಾರ ಬೆಳಿಗ್ಗೆ ಸ್ನಾನದ ಟೈಮಿನ ಕಾಂಪಿಟೆಟರ್ಸ್ ಯಾರೂ ಇರಲಿಲ್ಲ. ಶಹೀನ ಯಾವುದೋ ಕಂಪೆನಿಯಲ್ಲಿ ಎಚ್ ಆರ್ (ಹ್ಯುಮನ್ ರಿಸೋರ್ಸಸ್) ಎಕ್ಸಿಕ್ಯುಟಿವ್ ಆಗಿದ್ದಳು. ಕೋಲಾರದ ಅವಳ ಮನೆಯಲ್ಲಿ ಬಹಳ ಬಡತನ. ಶಹೀನ ಎರಡನೇ ಸಂತಾನ.ಸಂಬಳ ಮನೆಗೆ ಕಳಿಸದಿದ್ದರೆ ಆಗುವುದೇ ಇಲ್ಲ ಎನ್ನುವ ವಾತಾವರಣ.

ಕೋಲಾರದಿಂದ ಬಂದು ಪೀಜಿಗೂ ಕೆಲಸಕ್ಕೂ ಸೇರಿ ಮೂರು ವಾರವಾಗಿತ್ತಷ್ಟೇ... ಅವಳು ಬಂದ ಸ್ವಲ್ಪ ದಿನದಲ್ಲೇ, ಸರಳಾಗೆ ಇವಳಿಂದ ತನಗೆ ಬಹಳ ತೊಂದರೆ ಇದೆ ಎನ್ನುವುದು ಗೊತ್ತಾಗಿ ಹೋಯಿತು. ಮೊದಮೊದಲಿಗೆ ಸಣ್ಣದಾಗಿ ಶುರುವಾದ ಈ ಅಸಹನೆಯ ಭಾವನೆ ಬೆಳೆಯುತ್ತಲೇ ಹೋಯಿತು.

ಅಡುಗೆ ಮನೆ ಬಳಸುವ ವಿಷಯಕ್ಕೆ, ಬಳಸಿದ ಪಾತ್ರೆಗಳನ್ನು ಸ್ವಚ್ಛ ಮಾಡದಿದ್ದಕ್ಕೆ, ಮೈಲಿಗೆ ಬಟ್ಟೆಗಳನ್ನು ಬಚ್ಚಲಲ್ಲಿ ಹಾಗೇ ಬಿಡ್ತಾಳೆ ಅಂತನ್ನೋ ಟಾಪಿಕ್ಕಿಗೆ; ಒಟ್ಟಿನಲ್ಲಿ ಒಂದೊಂದಾಗಿ ಎಲ್ಲದಕ್ಕೂ... ಒಂದು ಮಳೆಗಾಲದ ಭಾನುವಾರದ ಮುಂಜಾವು... ಎಲ್ಲರೂ ಮಲಗಿದ್ದರು. ಶಹೀನ ಮತ್ತು ಸರಳಾ ಮಾತ್ರ ಎದ್ದಿದ್ದರು. ಮೊದಲು ಸ್ನಾನಕ್ಕೆ ಹೋಗಬೇಕಾದ ಒಬ್ಬರ ಉದ್ದೇಶ ಇನ್ನೊಬ್ಬರಿಗೆ ಗೊತ್ತಾಗದಿರಲಿ ಅಂತ ಇಬ್ಬರೂ ಅಲ್ಲಲ್ಲೇ ಸುತ್ತಿಕೊಂಡು ಕೂತುಕೊಳ್ತಾ ಇದ್ದರು.

ಆದರೆ ಹಾಗೇ ಬಹಳ ಹೊತ್ತು ನಡೀಬೇಕಲ್ಲ? ಸರಳಾ ಕಾರ್ಡ್ಸ್ ಶೋ ಮಾಡುವ ಅನುಭವಿಯಂತೆ ಬಚ್ಚಲಿನ ಒಳಗೆ ಹೋಗಿ ಗೀಸರ್ ಸ್ವಿಚ್ ಆನ್ ಮಾಡಿ ಬಂದುಬಿಟ್ಟರು.ಅಲ್ಲಿಗೆ ಅಧಿಕೃತವಾಗಿ ಅವರು ಮೊದಲು ಸ್ನಾನಕ್ಕೆ ಹೋಗುತ್ತಾರಂತ ಡಿಕ್ಲೇರ್ ಆಯಿತು. ನೀರು ಕಾಯಲು ಇನ್ನೂ ಸ್ವಲ್ಪ ಹೊತ್ತು ಬಾಕಿ ಇತ್ತು. ಶಹೀನ ಕೂಡ ಎದ್ದು ಅಲ್ಲೇ ಖುರ್ಚಿ ಮೇಲೆ ಕುಳಿತುಕೊಂಡು ಹೇಗೆ ಸರಳಾರನ್ನು ತಪ್ಪಿಸಿ ತಾನು ಮೊದಲು ಸ್ನಾನಕ್ಕೆ ಹೋಗಬಹುದಿತ್ತು ಅಂತ ಲೆಕ್ಕ ಹಾಕುತ್ತಿದ್ದಳು.

ತಾವಾಗಲೇ ಮೊದಲ ಹೆಜ್ಜೆ ಇಟ್ಟಿದ್ದರಿಂದ ತಮ್ಮನ್ನು ಯಾರೂ ತಪ್ಪಿಸಲಾರರು ಎನ್ನುವ ನಂಬಿಕೆಯಿಂದ ಸರಳಾ ಅತ್ತಿತ್ತ ತಿರುಗಾಡುತ್ತಿದ್ದರು. ತಲೆ ಸ್ನಾನಕ್ಕೆ ನೀರು ಚೆನ್ನಾಗಿ ಕಾದಷ್ಟೂ ಉನ್ಮಾದ ಏರುತ್ತದಲ್ಲವೇನು? ಇನ್ನು ಹೊರಗೆ ಮಳೆ ಬರುತ್ತಿದರಂತೂ ಒಳಗೆ ಬಿಸಿಬಿಸಿ ನೀರನ್ನು ಮೈ ಮೇಲೆ ಹೊದ್ದುಕೊಳ್ಳುವಂತೆ ಸುರಿದುಕೊಳ್ಳುವುದೇ ಬೇರೆ ವೆರೈಟಿ ಸುಖ.

ನೀರು ಚೆನ್ನಾಗಿ ಕಾಯಲಿ ಅಂತ ಟೈಂ ಪಾಸ್ ಮಾಡಲು ಚಿತ್ರಾ ರೂಮಿಗೆ ಹೋದರು ಸರಳಾ. ಮಲಗಿದ್ದಳಿನ್ನೂ ತಮಿಳು ಚೆಲುವೆ, ಅವಳನ್ನು ಅಲ್ಲಾಡಿಸಿ ಎಬ್ಬಿಸಿದರು. ‘ಚಿತ್ರಾ…ಚಿತ್ರಾ...’ ‘ಆಂ...’ ‘ಸ್ನಾನಕ್ಕೆ ಹೋಗ್ತಿದೀಯಾ?’ ‘ಚೆ! ಯಾರಡಾ ಅದೆ? ಉನಕ್ಕ ಕಾಮನ್ ಸೆನ್ಸ್ ಇಲ್ಲೆಯಾ?’ ಅಂತ ಕಣ್ಣು ಬಿಡದೆ ಮಾತೃಭಾಷೆಯಲ್ಲಿ ಬೈದಳು ತರಳೆ. ಯಾರು ಎಬ್ಬಿಸುತ್ತಿದ್ದಾರೆ ಎನ್ನುವುದೇ ಅವಳ ಇಂದ್ರಿಯ ವ್ಯವಸ್ಥೆಗೆ ಹೊರತಾದ ಮಾಹಿತಿಯಾಗಿತ್ತು. ‘ಚಿತ್ರಾ...ನಾನು ಕಣೇ ಸರಳ...’ ‘ಆಂ? ನೀವಾ? ಏನ್ ಬೇಕಿತ್ತು?’ ಹೊದಿಕೆಯೊಳಗಿಂದಲೇ ಕೇಳಿದಳು... ‘ಸ್ನಾನಕ್ಕೆ ಹೋಗ್ತೀಯಾ?’ ಈ ಪ್ರಶ್ನೆಯನ್ನು ಕೇಳಿ ಚಿತ್ರಾಗೆ ಸರಳಾರನ್ನು ಕುತ್ತಿಗೆ ಹಿಸುಕಿ ಕೊಂದುಬಿಡಬೇಕು ಎನ್ನಿಸಿದರೂ ತಡೆದುಕೊಂಡು ಮಾತನಾಡಿದಳು...

‘ಇಲ್ಲ ಸರಳಾ ಆಂಟಿ…’ ‘ವಿಜಿ ಎಲ್ಲಿ? ಅವಳು ಸ್ನಾನಕ್ಕೆ ಹೋಗ್ತಾಳಂತಾ? ಸೂಸನ್‌ದು ಸ್ನಾನ ಆಯ್ತಾ?’ ‘ವಿಜಿ ಗೊತ್ತಿಲ್ಲ ಆಂಟಿ... ಮಲಗಿರಬೇಕು... ಸೂಸನ್ ಆಗ್ಲೇ ಚರ್ಚಿಗೆ ಹೋದಳು. ಅವಳದ್ದು ಸ್ನಾನ ಆಗಿದೆ ಆಗ್ಲೇ’ ‘ಸರಿ ಹಂಗಾದರೆ ನಾನು ಸ್ನಾನಕ್ಕೆ ಹೋಗ್ತೀನಿ’ ಅಷ್ಟು ಹೊತ್ತಿಗೆ ನಿದ್ದೆ ತಿಳಿಯಾಗಿತ್ತು. ಎದ್ದು ಕೂತು ಹೊದಿಕೆ ಹೊದ್ದುಕೊಳ್ಳುತ್ತಾ ಹಲ್ಲು ಕಿರಿಯುತ್ತಾ ಹೇಳಿದಳು...‘ಹೋಗಿ... ಅಂದಹಾಗೆ ಆ ಹೊಸ ಹುಡುಗಿ ಇದ್ದಾಳಲ್ಲಾ? ಏನವಳ ಹೆಸರು? ಬೇಗಮ್... ಅವಳು ಸ್ನಾನಕ್ಕೆ ಹೋಗೋಕೆ ಮುಂಚೆನೇ ಹೋಗಿ.

ಇಲ್ಲಾಂದ್ರೆ ನಿಮ್ ಸ್ನಾನ ಆದಂಗೇ ಲೆಕ್ಕ!’ ‘ಅಯ್ಯೋ ಕರ್ಮ ಕಣೇ! ನೀನ್ ಹೇಳೋದು ಕರೆಕ್ಟೇ... ಆ ಹುಡುಗಿ ಎದ್ದಂಗಿತ್ತು ಆಗ್ಲೇ... ಅವಳು ಟೀ ಮಾಡ್ಕೊಂಡು ಕುಡಿಯೋ ಹೊತ್ತಿಗೆ ನಾನು ಹೋಗಿ ಬಾತ್ರೂಮ್ ಬಾಗ್ಲು ಹಾಕ್ಕೊಂಬಿಡ್ತೀನಿ’ ಹೋಗಿ ನೋಡಿದ್ರೆ ಕಾದ ನೀರಿಗೆ ಪರಮ ಸುಂದರಿ ಶಹೀನ ಆಗಲೇ ಬಾತ್ರೂಮಿನಲ್ಲಿ ಪವಿತ್ರವಾದ ಸ್ನಾನವನ್ನು ನೆರವೇರಿಸುತ್ತಿದ್ದಳು. ಇದು ಗಮನಕ್ಕೆ ಬಂದ ಕೂಡಲೇ ಸರಳಾ ಭೂಮಿ ಆಕಾಶ ಒಂದು ಮಾಡಿಬಿಟ್ಟರು. ಪೀಜಿ ಓನರ್ರು ಬಂದಳು. ಸಮಜಾಯಿಷಿ ಕೊಡಲು ನೋಡಿದಳು. ಆದರೆ ಸರಳಾ ಕೇಳಬೇಕಲ್ಲ? ತಕಧಿಮಿತಾ ನಡೆದೇ ಇತ್ತು.

ಹೊರಗೆ ಮಾತಿಗೆ ಮಾತು ಹತ್ತಿ ಭೂಮಿ ಉರಿಯುತ್ತಿರುವಾಗ ಶಹೀನ ಬೇಗಮ್ಮಕ್ಕ ಆರಾಮಾಗಿ ಮಜ್ಜನಂಗೈಯುತ್ತಿದ್ದಳು. ಏನು ಮಾಡಿದರೂ ಬೇಗ ಸ್ನಾನ ಮುಗಿಸಿ ಹೊರಗೆ ಬರುವ ಪ್ರಶ್ನೆಯೇ ಇಲ್ಲ. ಇತ್ತ ಪೀಜಿ ಓನರ್ರಿಗೂ ಸರಳಾಗೂ ಮಾತಿಗೆ ಮಾತು ಬೃಹದಾಕಾರವಾಗಿ ಬೆಳೆದು ನಿಂತಿತ್ತು. ‘ಸ್ನಾನಕ್ಕೆ ಇಷ್ಟೆಲ್ಲಾ ಜಗಳ ಮಾಡ್ತೀರಲ್ಲಾ? ಸ್ವಲ್ಪ ಅಡ್ಜಸ್ಟ್ ಮಾಡ್ಕೊಳಕ್ಕೆ ಆಗಲ್ವಾ?’ ‘ಆಗಲ್ಲರೀ... ದುಡ್ಡು ಕೊಡ್ತಾ ಇಲ್ವಾ? ನಮಗೆ ಬೇಕಾದ ಹಾಗೆ ಸ್ನಾನ ಮಾಡಕ್ಕೂ ಕಷ್ಟ ಅಂದ್ರೆ ಇನ್ಯಾವ ಫೆಸಿಲಿಟಿ ಕೊಟ್ಟಿದೀರಿ ನಮಗೆ? ಊಟಕ್ಕಂತೂ ಗತಿಯಿಲ್ಲ. ಸ್ನಾನವೂ ಇಲ್ದೇ ಹೋದ್ರೆ?’ ದುಡ್ಡಿನ ವಿಚಾರ ಬಂದ ಕೂಡಲೆ ಪೀಜಿ ಓನರ್ರು ಹುಷಾರಾದಳು. ಇನ್ನು ಮಾತಾಡಲು ಬಿಟ್ರೆ ಬೇರೆ ಹುಡುಗಿಯರ ಮುಂದೆ ಮಾನ ಮರ್ಯಾದೆ ಹರಾಜು ಆಗುತ್ತೆ ಅಂತ ಲಗುಬಗೆಯಲ್ಲಿ ಸರಳಾರನ್ನು ಸಮಾಧಾನ ಮಾಡಿ ಕೆಳಗೆ ತಮ್ಮ ಮನೆಗೆ ಕರೆದುಕೊಂಡು ಹೋದಳು.

ಒಂದು ಗಂಟೆ ನಂತರ ಪೀಜಿಯ ಕೆಳಗೇ ಇದ್ದ ಓನರ್ ಮನೆಯಿಂದ ವಾಪಾಸು ಬಂದಾಗ ವಿಜಿ ಮತ್ತು ಚಿತ್ರಾ ಸರಳಾ ದಾರಿ ಕಾಯುತ್ತಾ ಕುಳಿತಿದ್ದರು. ಆದ ಯಾವ ಘಟನೆಯೂ ತನಗೆ ಸಂಬಂಧವೇ ಇಲ್ಲದಂತೆ ಶಹೀನ ಸ್ನಾನ ಮುಗಿಸಿಕೊಂಡು ತನ್ನ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಳು. ‘ಏನಾಯ್ತ್ರೀ ಸರಳಾ? ಇಷ್ಟು ಹೊತ್ತು ಓನರ್ ಮನೇಲಿ ಏನು ಮಾಡಿದ್ರಿ?’ ಸರಳಾ ವಿಜಯೋತ್ಸಾಹದ ನಗೆ ನಕ್ಕರು. ‘ಇನ್ನ್ ಮೇಲೆ ನಾನು ಪ್ರತೀ ಭಾನುವಾರ ಓನರ್ ಮನೇಲೆ ಸ್ನಾನ ಮಾಡದು. ಹಾಗಂತ ಓನರ್ರೇ ಹೇಳಿದ್ರು. ನಮ್ಮನೇಲಿ ಯಾರೂ ಎದ್ದಿರಲ್ಲ, ನೀವ್ ಬೇಕಾದ್ರೆ ಬಾಯ್ಲರ್ ಸ್ವಿಚ್ ಹಾಕ್ಕೊಂಡು ಎಷ್ಟು ಹೊತ್ತು ಬೇಕಾದ್ರೂ ಸ್ನಾನ ಮಾಡಿ ಅಂತ ಹೇಳಿದ್ರು. ಬೋನಸ್ ಏನು ಗೊತ್ತಾ? ಅವ್ರ್ ಮನೇಲಿ ನೀರೊಲೆ ಇದೆ. ಕಟ್ಟಿಗೇನೂ ಇದೆ... ನೀರು ಕಾಯಿಸ್ಕೊಂಡು ಹುಯ್ಕೋಬಹುದು!’

ವಿಜಿ ಮತ್ತು ಚಿತ್ರಾ ಆ ಗಳಿಗೆಯಲ್ಲಿ ಎಷ್ಟು ಹೊಟ್ಟೆ ಉರಿಸಿಕೊಂಡರೆಂದರೆ, ಸರಳಾ ಜಗಳ ಶುರು ಮಾಡಿದಾಗ ತಾವೂ ಒಂದು ಕೈ ಜೋಡಿಸಿದ್ದರೆ ತಮಗೂ ಈ ಲಾಭದಲ್ಲಿ ಪಾಲು ದೊರಕುತ್ತಿತ್ತೇನೋ ಎಂದು ಯೋಚಿಸಿದರು. ಆದರೆ, ಸರಳಾ ಮಾತಾಡುವಾಗ ಎಷ್ಟು ಕೊಳಕು ಪದಗಳನ್ನು ಉಪಯೋಗಿಸುತ್ತಿದ್ದರೆಂದರೆ, ಕೇಳಿದವರಿಗೆ ಇನ್ನೊಮ್ಮೆ ಸ್ನಾನ ಮಾಡಿ ಬರಬೇಕು ಎನ್ನಿಸುವಷ್ಟು ಗಲೀಜು ಮಾತುಗಳಿರುತ್ತಿದ್ದವು.

ಒಮ್ಮೆ ಶಹೀನ ಮತ್ತು ಸರಳಾ ನಡುವೆ ನಡೆದ ಜಗಳದ ವಿಷಯದಲ್ಲಿ ಈ ಪದಗಳನ್ನು ಕೇಳಲಾರದೆ ಬೇಸತ್ತು ಚಿತ್ರಾ ಸರಳಾರನ್ನು ಹೊರಗೆ ಎಳೆದುಕೊಂಡು ಬಂದುಬಿಟ್ಟಿದ್ದಳು.

ಕಾಫಿ ಕುಡಿಸಿ ಸಮಾಧಾನ ಮಾಡಿ ‘ಅಷ್ಟ್ಯಾಕೆ ಗಲೀಜಾಗಿ ಮಾತಾಡ್ತಿರಾ ಆಂಟಿ? ಸರಿಯಾಗಿ ಮಾತಾಡಿದ್ರೆ ಕೆಲಸ ಆಗೋಲ್ಲವಾ?’ ಅಂತ ಕೇಳಿದರೆ ‘ಅಯ್ಯೋ ಒಳ್ಳೇ ಮಾತಲ್ಲಿ ಹೇಳ್ತಾ ಇದ್ರೆ ಇಡೀ ದಿವ್ಸ ಅದನ್ನೇ ಹೇಳ್ತಾ ಕೂರ್ಬೇಕಾಗುತ್ತೆ. ಒಂದ್ ಕೆಟ್ ಮಾತ್ ಆಡಿ ನೋಡು. ಕೆಲಸ ಥಟ್ ಅಂತ ಆಗುತ್ತೆ. ಸಮಯ ಉಳಿತಾಯ ಆಗುತ್ತೆ. ಮುಲಾಜು ಇಟ್ಕೊಂಡ್ರೆ ಈ ನನ್ ಮಕ್ಕಳ ಕಿವಿಗೆ ಸಂಗೀತ ಕೇಳಿಸ್ತಾ ನಮ್ ಆಯುಷ್ಯ ಕಡಿಮೆ ಮಾಡ್ಕೊಂಡು ಬದುಕಬೇಕಾಗುತ್ತೆ. ಯಾವುದು ಒಳ್ಳೇದು ಹೇಳು?’ ಅಂತ ಸರಳಾ ಒಂದು ಅನುಪಮ ಸತ್ಯವನ್ನು ಚಿತ್ರಾ ಮುಂದೆ ಇಟ್ಟಿದ್ದರು.

ಈಗಲೂ ಅದೇ ಬೈಗುಳದ ಅಸ್ತ್ರವನ್ನು ಉಪಯೋಗಿಸಿ ಸ್ನಾನದ ವಿಷಯದಲ್ಲಿ ದೊಡ್ಡ ಲಾಭವನ್ನೇ ಮಾಡಿಕೊಂಡು ಬಂದಿದ್ದರು. ಸ್ನಾನದ ವಿಷಯಕ್ಕೆ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದನ್ನ ನೋಡಿ ವಿಜಿ ನಗಾಡಿದ್ದಳು. ‘ಸರಳಾ ಆಂಟಿ ಒಂದು ಜನಪದ ಹಾಡು ಇದೆ... ‘ಅಣ್ಣ ಮಾದಯ್ಯ, ಕಿಡುಗಣ್ಣ ಮಾದಯ್ಯಾ... ನಮ್ಮ ಎಣ್ಣೆ ಮಜ್ಜನಕಾಣಿಯಾಗೋ ಬನ್ನಿ ಮಾದಯ್ಯಾ... ಹಾಲು ಮಜ್ಜನ... ನಿಮ್ಗ ಜೇನು ಮಜ್ಜನ... ಎಣ್ಣೆ ಮಜ್ಜನ ನಿಮ್ಗ ಬೆಣ್ಣೆ ಮಜ್ಜನ...’ ಅಂತ ಶಿವನನ್ನು ಹಾಡಿ ಹೊಗಳುತ್ತಾ ಸ್ನಾನಕ್ಕೆ ರೆಡಿ ಮಾಡಿಸೋ ಹಾಡು... ಹಂಗಾಯ್ತು ನಿಮ್ ಸ್ನಾನದ ಕತೆ!’ ಅಂದಿದ್ದನ್ನು ಕೇಳಿಸಿಕೊಂಡು ಸರಳಾ ಕೂಡ ನಕ್ಕಿದ್ದರು.

ಇತ್ತ ಶಹೀನ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡವಳು ತೆರೆಯಲೇ ಇಲ್ಲ. ಮಧ್ಯಾಹ್ನ ಬಂದು ಹತ್ತು ನಿಮಿಷದ ಊಟ ಪೂರೈಸಿ ಮತ್ತೆ ರೂಮಿಗೆ ಹೋಗಿ ಮಲಗಿದ್ದಳು. ಮಲಗಿದ್ದಳೋ ಏನು ಮಾಡ್ತಿದ್ದಳೋ... ಒಟ್ಟಿನಲ್ಲಿ ರೂಮ್ ಬಾಗಿಲಂತೂ ಓಪನ್ ಆಗಲಿಲ್ಲ. ವಾರಗಳ ಮಟ್ಟಿಗೆ ಇದೇ ಪುನರಾವರ್ತನೆಯಾಯಿತು. ಬರ್ತಾ ಬರ್ತಾ ಶಹೀನ ರೂಮು ಬಿಟ್ಟು ಹೊರಗೆ ಬರುವುದೇ ಕಡಿಮೆಯಾಯಿತು. ಕೆಲವೊಂದು ದಿವಸ ಕೆಲಸಕ್ಕೂ ಹೋಗ್ತಿರಲಿಲ್ಲ. ಮನೇಲಿ ಸ್ನಾನ ಮಾಡ್ತಾ ಕೂತಿರುತ್ತಿದ್ದಳು.

ಚರ್ಮ ನೀರಿನಲ್ಲಿ ನೆನೆದೂ ನೆನೆದೂ ಸುಕ್ಕುಗಟ್ಟಿ ಪದರ ಪದರವಾಗಿ ಈರುಳ್ಳಿ ಸಿಪ್ಪೆಯ ಥರಾ ಆಗುತ್ತಿತ್ತು. ಕಣ್ಣಲ್ಲಿ ಇದ್ದ ಕಾಂತಿ ಕಡಿಮೆಯಾಗಿ ಅಲ್ಲೊಂಥರಾ ಹುಚ್ಚುಪ್ರಶ್ನೆಗಳು ಸುಳಿದಾಡುತ್ತಿದ್ದ ಹಾಗಿತ್ತು. ಶಹೀನ ಒಂದು ಗಂಟೆ ಸ್ನಾನವನ್ನು ಅರ್ಧ ದಿನಕ್ಕೆ ವಿಸ್ತರಿಸಿ, ಕೆಲವೊಮ್ಮೆ ಪೂರ್ತಿ ದಿನ ಸ್ನಾನ ಮಾಡುತ್ತಿದ್ದಳು. ಆಮೇಲೆ ಇನ್ನೊಂದು ಘಟ್ಟ ಬಂತು. ದಿನಗಟ್ಟಲೆ ಸ್ನಾನ ಮಾಡುತ್ತಿರಲಿಲ್ಲ. ಬಟ್ಟೆ ಬದಲಾಯಿಸುತ್ತಿರಲಿಲ್ಲ. ರೂಮಿನ ಬಾಗಿಲು ಹಾಕಿಕೊಂಡದ್ದು ಹಾಗೇ ಇರುತ್ತಿತ್ತು.

ಆದರೆ ಇದನ್ನೆಲ್ಲ ಗಮನಿಸುವ ಸಹನೆ ಯಾರಿಗೂ ಇರಲಿಲ್ಲ. ಸರಳಾ ಒಬ್ಬರೇ ಶಹೀನಳ ಚಲನವಲನಗಳನ್ನು ಗಮನಿಸಿ ಒಂಥರಾ ಆತಂಕಕ್ಕೆ ಒಳಗಾಗುತ್ತಿದ್ದರು. ಒಂದು ಭಾನುವಾರ ದಿನ ಕೆಲಸದವಳು ಶಹೀನ ರೂಮಿನ ಹತ್ತಿರ ನಿಂತು ಜೋರಾಗಿ ಬಯ್ಯುತ್ತಿದ್ದಳು. ‘ರೂಮ್ ಇಷ್ಟು ಗಲೀಜಾಗಿ ಇಟ್ಕೊಂಡಿರತೀರಾ... ಬಾಗಿಲೇ ತೆಗೆಯಲ್ಲ... ಗಬ್ಬು ವಾಸನೆ ಒಳಗೆ... ಯಾರ್ ಕ್ಲೀನ್ ಮಾಡೋರು... ತೆಗೀರೀ ಬಾಗ್ಲು...’ ಮೌನ. ಶಹೀನ ಮಾತೇ ಆಡಲಿಲ್ಲ.

ಇನ್ನೂ ನಾಲ್ಕು ಸಾರಿ ಹಾಗೆ ಹೀಗೆ ಕೂಗಿದ ಮೇಲೆ ಶಹೀನ ಬಾಗಿಲು ತೆರೆದಳು. ಒಳಗೆ ಹೋದ ಕೆಲಸದವಳು ಚಿಟ್ಟನೆ ಚೀರುತ್ತಾ ಹೊರಗೆ ಬಂದಳು. ಹಾಗೇ ಪೊರಕೆ ಬಿಸಾಕಿ ಕೆಳಕ್ಕೆ ಓಡಿ ಪೀಜಿ ಓನರ್ರಿಗೆ ತಾನಿನ್ನು ಕೆಲಸಕ್ಕೆ ಬರುವುದಿಲ್ಲ ಅಂತ ಹೇಳಿ ಹೋದಳಂತೆ. ಯಾರಿಗೂ ಯಾಕೆ ಹೀಗಾಯಿತು ಅಂತ ಅರ್ಥ ಆಗಲಿಲ್ಲ. ಪೀಜಿ ಓನರ್ರು ಮತ್ತೆ ಬಂದಾಗ ಶಹೀನ ಬಾಗಿಲು ಹಾಕಿಕೊಂಡಿದ್ದಳು. ಎಷ್ಟು ಬಡಿದರೂ ತೆಗೆಯಲಿಲ್ಲ. ಓನರ್ರು ಬೇರೆ ದಾರಿ ಕಾಣದೆ ಪೊಲೀಸರಿಗೆ ಫೋನ್ ಮಾಡಿದರು. ಅವರು ಒಂದು ಗಂಟೆಯಲ್ಲಿ ಬರ್ತೀವಿ ಅಂತ ಹೇಳಿದರಂತೆ.

ಇದನ್ನೆಲ್ಲಾ ಗಮನಿಸುತ್ತಿದ್ದ ಸರಳಾ ಓನರ್ ಅಕ್ಕನನ್ನು ಸೈಡಿಗೆ ಕರೆದುಕೊಂಡು ಹೋಗಿ ಏನು ವಿಷಯ ಅಂತ ಕೇಳಿದರು. ಅವರರಿಬ್ಬರೂ ಮಾತಾಡುತ್ತಿರುವುದನ್ನು ಗಮನಿಸಿದರೆ ಏನೋ ಆಗಬಾರದ್ದು ಆಗಿದೆ ಎನ್ನುವುದು ಸ್ಪಷ್ಟವಾಗಿತ್ತು. ತನ್ನ ಕಷ್ಟ ಹೇಳುತ್ತಾ ಹೇಳುತ್ತಾ ಪೀಜಿ ಓನರ್ರು ಅಳಲು ಶುರುಮಾಡಿದರು. ಸರಳಾ ಅವರನ್ನು ತಬ್ಬಿಕೊಂಡು ಸಂತೈಸಿದರು...

‘ಇನ್ನೇನು ಪೊಲೀಸ್‌ ಬರ್ತಾರೆ ಅಂದಿರಲ್ಲ, ಬಿಡಿ... ಯಾಕೆ ಚಿಂತೆ ಮಾಡ್ತೀರಿ. ನಾವೆಲ್ಲಾ ಇದೀವಲ್ಲ ನಿಮ್ಮ ಪರ’ ಅಂತ ಸರಳಾ ಜೋರಾಗಿ ಹೇಳುತ್ತಿದ್ದುದು ಕೇಳಿಸಿತು.  ಚಿತ್ರಾ ಮತ್ತು ವಿಜಿ ಸೇರಿ ಪೀಜಿಯಲ್ಲಿ ಆರು ಜನ ಹುಡುಗೀರಿದ್ದರು. ಎಲ್ಲರೂ ದಿಗ್ಮೂಢರಾಗಿ ಕುಳಿತರು... ಅಂಥಾದ್ದು ಏನಾಗಿದ್ದಿರಬಹುದು? ಬರೀ ಸ್ನಾನದ ಮನೆಗೆ ಶುರುವಾದ ಜಗಳಕ್ಕೆ ಯಾವ ಆಯಾಮ ಬಂತು? ಸರಳಾ ಏನಾದ್ರೂ ತೊಂದರೆ ಮಾಡಿ ನಾಟಕ ಕಟ್ತಿದಾರಾ? ಎಲ್ಲರ ಮನಸ್ಸಲ್ಲೂ ಕುಡುಗೋಲಿನಾಕಾರದ ಪ್ರಶ್ನಾರ್ಥಕ ಚಿನ್ಹೆಯೇ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.