ADVERTISEMENT

ಮನುಷ್ಯತ್ವ ಅಂದ್ರೆ ಅದು ಡ್ಯೂಟೀನೇ ಅಲ್ವೇನು?

ಪ್ರೀತಿ ನಾಗರಾಜ
Published 6 ಜುಲೈ 2016, 19:30 IST
Last Updated 6 ಜುಲೈ 2016, 19:30 IST

ಆಸ್ಪತ್ರೆ ಸೇರಿಸಿದ ಮೇಲೆ ಒಂದು ವಾರದಲ್ಲೇ ಶಹೀನಳ ಆರೋಗ್ಯ ಸುಧಾರಿಸಿತು. ವಯಸ್ಸಿನ ಹುಡುಗಿಯಲ್ಲವೇ? ಚಿಕಿತ್ಸೆಗೆ ಮನಸ್ಸಲ್ಲದಿದ್ದರೂ ದೇಹ ಚೆನ್ನಾಗಿ ಸ್ಪಂದಿಸಿತು. ಅವಳಿಗೆ ಯಾವ ಕಾಂಪ್ಲಿಕೇಶನ್ನೂ ಆಗದಂತೆ ವೈದ್ಯರು ಹರಸಾಹಸ ಮಾಡಿ ಅವಳು ಚೆನ್ನಾಗಿ ಆಗುವಂತೆ ನೋಡಿಕೊಂಡರು. ದೈಹಿಕ ಲಕ್ಷಣಗಳು ತಹಬಂದಿಗೆ ಬಂದವು.

ಸೈಕಿಯಾಟ್ರಿಸ್ಟ್ ಮಾತ್ರ ಅವಳಿಗೆ ಮಾನಸಿಕವಾಗಿ ಆರಾಮಾಗಲಿಕ್ಕೆ ಬಹಳ ಕಾಲ ಬೇಕು ಮತ್ತು ಮನೆಯವರ ಬೆಂಬಲದ ಅವಶ್ಯಕತೆ ಬಹಳ ಇದೆ ಎಂದರು. ಅವಳಿಗೆ ಸ್ಕಿಝೋಫ್ರೇನಿಯಾ ಎನ್ನುವ ಮಾನಸಿಕ ರೋಗ ಇದ್ದು, ಚಿಕಿತ್ಸೆ ಇಲ್ಲದೆ ಅದು ವಾಸಿಯಾಗುವುದು ಕಷ್ಟವೆಂದೂ, ಗುಳಿಗೆ ತೆಗೆದುಕೊಳ್ಳುವುದು, ಆಗಾಗ್ಗೆ ಚೆಕಪ್ ಮಾಡಿಸುವುದು ನಿಲ್ಲಿಸಬಾರದೆಂದು ಹೇಳಿದರು. ಅವಳನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಹೋಗಲು ಸೂಸನ್, ವಿಜಿ ಬಂದಿದ್ದರು.

‘ನಿಮ್ ಹತ್ರಾ ಆಗಾಗ ಕರ್ಕೊಂಡು ಬರಬೇಕಾ?’ ಸೂಸನ್ ಕೇಳಿದಳು. ‘ಹೌದು. ಆಗಾಗ ಸೈಕಿಯಾಟ್ರಿಸ್ಟ್ ನೋಡಬೇಕು’  ಎಂದರು ಲೇಡಿ ಡಾಕ್ಟರು. ‘ಯಾವ ಊರಲ್ಲಿ ಬೇಕಾದ್ರೂ ನೋಡಬೋದಾ?’ ‘ಯಾಕೆ? ಇವ್ರು ಇದೇ ಊರಿನವರಲ್ವಾ?’‘ಇಲ್ಲಾ ಡಾಕ್ಟ್ರೇ. ಕೋಲಾರದವರು. ಅಲ್ಲಿಗೆ ಹೋದ್ರೆ ಇವಳನ್ನ ಫಾಲೋ ಅಪ್ ಮಾಡಿಸೋದು  ಹೇಗೆ...’ ‘ನೀವು ಆಗಾಗ ಕರ್ಕೊಂಬನ್ನಿ?’

ADVERTISEMENT

‘ಮೇಡಂ, ನಾವು ಫ್ರೆಂಡ್ಸ್ ಅಷ್ಟೇ. ಅವಳ ಫ್ಯಾಮಿಲಿ ಊರಲ್ಲಿ ಇದೆ. ಇಲ್ಲಿ ಎಮರ್ಜೆನ್ಸಿ ಆಯಿತಲ್ಲ ಅಂತ ನಾವೇ ನಿಭಾಯಿಸಿದ್ವಿ. ಈಗ ಅವಳ ಊರಿಗೇ ಹೋಗಿ ಬಿಡಬೇಕು ಅಂತಿದ್ದೀವಿ. ನಾವು ಇರೋದು ಪೀಜಿಯಲ್ಲಿ. ಅಲ್ಲಿ ಎಲ್ಲಾ ಹೊತ್ತೂ ಯಾರಾದ್ರೂ ಇರಲೇಬೇಕು. ಹಂಗೆ ಯಾರು ಇರ್ತಾರೆ ಹೇಳಿ? ಕೆಲಸಕ್ಕೆ ಅಂತ ಯಾವುದೋ ಊರಿಂದ ಬಂದೋರು ನಾವು, ಸುಮ್ಮನೆ ಕಾಂಪ್ಲಿಕೇಷನ್ಸು...’

‘ನೀವೆಲ್ಲ ಇಷ್ಟು ಆಸ್ಥೆಯಿಂದ ನೋಡಿಕೊಂಡಿದ್ದು ನೋಡಿದರೆ ನೀವೇ ಅವರ ಫ್ಯಾಮಿಲಿ ಅಂದುಕೊಂಡೆ. ನೀವು ಹೇಳಿದ ಹಾಗೆ ಅವರ ಮನೇಲೇ ಬಿಡೋದು ವಾಸಿ. ಕೋಲಾರಕ್ಕೆ ಹೋದ ಮೇಲೆ ಹಾಸ್ಪಿಟಲ್ಲಿಗೆ ಫೋನ್ ಮಾಡಿಸಿ. ಬೆಳಿಗ್ಗೆ ಹೊತ್ತಲ್ಲಿ ಕರ್ಕೊಂಡು ಹೋಗಿ, ಅಲ್ಲಿ ತಲುಪಿದ ಮೇಲೆ ಫೋನ್ ಮಾಡಿದರೆ ನಾನು ಅವರ ಮನೆಯವರ ಬಳಿ ಮಾತಾಡಿ ಏನು ಮಾಡಬೇಕು ಅಂತ ಹೇಳ್ತೀನಿ’ ‘ತುಂಬಾ ಥ್ಯಾಂಕ್ಸ್‌ ಮೇಡಂ...’

ಓನರಮ್ಮನ ಪರಿಚಯದ ಒಂದು ಟ್ಯಾಕ್ಸಿ ಗೊತ್ತು ಮಾಡಿಕೊಂಡು ಮಾರನೇ ದಿನ ಬೆಳಿಗ್ಗೆಯೇ ಕೋಲಾರದ ಕಡೆ ಶಹೀನಳನ್ನು ಕರೆದುಕೊಂಡು ಹೊರಟರು. ಶಹೀನಳನ್ನು ಬಿಡಕ್ಕೆ ಬರ್ತೀವಿ ಅಂತ ತಂದೆ ಸುಲೇಮಾನ್‌ಗೆ ಫೋನ್ ಮಾಡಿದರೆ ಯಾಕೋ ಅನುಮಾನದಿಂದಲೇ ಒಪ್ಪಿಕೊಂಡರು.

‘ಇಷ್ಟಾನೋ ಕಷ್ಟಾನೋ ಮಗಳು ಹಿಂಗಿದಾಳೆ ಅಂದ್ಮೇಲೆ ನೋಡ್ಕೋಬೇಕು. ನಾವು ಮಾಡೋ ಅಷ್ಟು ಮಾಡಿ ಆಯಿತಲ್ಲ?’ ಸರಳಾ ಸುಲೇಮಾನ್‌ಗೆ ಹೇಳಿದರು. ಕೋಲಾರಕ್ಕೆ ಹೊರಟ ಟ್ಯಾಕ್ಸಿಯ ಡ್ರೈವರು ಮುರುಗ. ಸ್ವಲ್ಪ ಚಿನಕುರುಳಿ ಸ್ವಭಾವದ ಹುಡುಗ. ವಯಸ್ಸು ಹದಿನೆಂಟೂ ದಾಟಿರಲಿಲ್ಲ ಅನ್ಸುತ್ತೆ. ಲೈಸನ್ಸು ಇದ್ದದ್ದೂ ಅನುಮಾನ. ಬಹಳ ಚೆನ್ನಾಗಿ ಗಾಡಿ ಓಡಿಸುತ್ತಿದ್ದ. ಮಧ್ಯೆ ಸ್ವಲ್ಪ ತಲೆಹರಟೆ ಪ್ರಶ್ನೆಗಳನ್ನೂ ಕೇಳಿ ಸರಳಾ ಕೈಲಿ ಬೈಸಿಕೊಂಡ.

‘ಇವ್ರೇನ್ ಮೇಡಂ? ಮಲ್ಕೊಂಡೇ ಇರ್ತಾರೆ? ಏಳೋದೇ ಇಲ್ವಾ?’– ಗುಳಿಗೆ ತಗೊಂಡು ನಿದ್ದೆ ಮಾಡ್ತಿದ್ದ ಶಹೀನ ಬಗ್ಗೆ ಕೇಳಿದ. ‘ಅವೆಲ್ಲ ನಿಮಗ್ಯಾಕೆ? ಸುಮ್ನೆ ಗಾಡಿ ಓಡ್ಸಿ’ ಸರಳಾ ಕಡ್ಡಿ ತುಂಡು ಮಾಡುವ ಹಾಗೆ ಹೇಳಿದ್ದರು. ಅಲ್ಲಿಗೆ ಸುಮ್ಮನಾಗಿಬಿಟ್ಟ ಹುಡುಗ. ಮಧ್ಯೆ ಒಂದು ಸಾರಿ ಟೀ ಕುಡಿಯಲಿಕ್ಕೆ ಅಂತ ನಿಲ್ಲಿಸಿದಾಗ ಸರಳಾನೇ ಡ್ರೈವರ್ ಮುರುಗನ ಹತ್ತಿರ ಹೋಗಿ ಮಾತನಾಡಿ ಅವನ ಮನಸ್ಸು ತಿಳಿಯಾಗುವಂತೆ ಮಾಡಿದರು. ಮತ್ತೆ ತಲೆಹರಟೆ ಮೋಡ್‌ಗೆ ಬಂದ.

ಒಂದೂವರೆ ಗಂಟೆಯ ಪ್ರಯಾಣ. ಕೋಲಾರದ ಹತ್ತಿರದ ಒಂದು ಹಳ್ಳಿಯಲ್ಲಿ ಶಹೀನ ಮನೆ. ಅಲ್ಲಿ ಹೋಗಿ ಗಾಡಿ ನಿಲ್ಲಿಸಿದರೆ ಯಾಕೋ ಪರಿಸ್ಥಿತಿ ಕಲಸುಮೇಲೋಗರ ಅನ್ನಿಸಿತು. ಮನೆಗೆ ಬೀಗ ಹಾಕಿತ್ತು.

ವಿಜಿ, ಚಿತ್ರಾ, ಸರಳಾ ಅತ್ತಿತ್ತ ಓಡಾಡಿದರೂ ಯಾರ ಸುಳಿವೂ ಸಿಗಲಿಲ್ಲ. ಚಿತ್ರಾಳನ್ನು ಶಹೀನಳ ಸಲುವಾಗಿ ಕಾರಿನಲ್ಲೇ ಕೂರಲು ಹೇಳಿ, ಸರಳಾ ಮತ್ತು ವಿಜಿ ಪಕ್ಕದ ಮನೆಯಲ್ಲಿ ವಿಚಾರಿಸಲು ಹೋದರು.

‘ನಿನ್ನೆ ರಾತ್ರಿನೇ ಎಲ್ಲೋ ಹೋದ್ರು. ಅವರ ಅಮ್ಮನಿಗೆ ಉಸಾರಿರಲಿಲ್ಲ ಅಂತ’ ಇದೊಂದೇ ಸ್ಟಾಂಡರ್ಡ್ ಉತ್ತರ. ಒಂದು ಗಂಟೆ ಕಳೆದರೂ ಬರೀ ಅಲ್ಲಿನ ಮನೆಗಳಿಂದ ಜನ ಹೊರಗೆ ಬಂದು ಇಣುಕಿ ನೋಡುವವರೇ ಹೊರತೂ ಒಬ್ಬರೂ ಹೆಚ್ಚಿನ ಮಾಹಿತಿ ಕೊಡಲು ತಯಾರಿರಲಿಲ್ಲ. ‘ಇಲ್ಲಿ ಬೇರೆ ಏನೋ ನಡೀತಾ ಇದೆ ಕಣ್ರೀ. ಏನು ಅಂತ ಗೊತ್ತಾಗ್ತಿಲ್ಲ’ ವಿಜಿ ಹೇಳಿದಳು.

‘ಹೌದು. ಏನು ಕೇಳಿದರೂ ಒಂದೇ ಉತ್ತರ. ಯಾರನ್ನ ಕೇಳಿದರೂ ಅದೇ ಹೇಳ್ತಾರೆ?’ ಚಿತ್ರಾ ಸೋಜಿಗಪಟ್ಟಳು. ವಾಪಸು ಹೋಗೋಣವಾ ಅಂತ ಕೂಡ ಡಿಸ್ಕಷನ್ ಅಯಿತು.

ಸರಳಾ ಮುರುಗನನ್ನು ಹುಡುಕಿದರೆ ಅವ ನಾಪತ್ತೆ! 10 ನಿಮಿಷದ ನಂತರ ಅಲ್ಲೆಲ್ಲೋ ಅಂಗಡಿ ಹತ್ತಿರ ಮುರುಗ ಆರಾಮಾಗಿ ಟೀ ಕುಡೀತಾ ನಿಂತಿದ್ದು ಕಂಡಿತು. ಸರಳಾಗೆ ಸಿಟ್ಟೇರಿತು. ಕೈ ಸನ್ನೆ ಮಾಡಿ ಕರೆದರು. ಓಡೋಡುತ್ತಾ ಬಂದ.

‘ಏನೋ ಇಷ್ಟು ಹೊತ್ತು? ನಿನಗೆ ತಿಳಿದ ಕಡೆ ಹೋಗ್ತೀಯಾ?’ ‘ಇಲ್ಲ ಅಕ್ಕಾ...ಈ ಮನೆಯೋರು ಬರಲಿಲ್ವಲ್ಲಾ ಅಂತ ಸುಮ್ನೆ ಟೈಮ್ ಪಾಸ್ ಮಾಡ್ತಾ ಇದ್ದೆ’ ‘ಅದೆಲ್ಲಾ ನಿಂಗ್ಯಾಕೆ.

ಗಾಡಿ ಹತ್ರ ನೀನಿರ್ಬೇಕು ತಾನೆ? ಆ ಅಂಗಡಿಯೋನ ಹತ್ತಿರ ಏನು ಮಾತು? ಅವನೇನು ನಿಂಗೆ ಪರಿಚಯಾನಾ?’ ಸರಳಾಗೆ ಎಲ್ಲಿ ಶಹೀನಳ ಸ್ಥಿತಿ ಬಗ್ಗೆ ಈ ಹುಡುಗ ಏನಾದರೂ ಅರೆಬೆಂದ ಮಾಹಿತಿ ಕೊಟ್ಟುಬಿಟ್ಟಾನೋ ಅಂತ ಆತಂಕ. ಆಮೇಲೆ ಸುಮ್ಮನೆ ಊರಲ್ಲಿ ಗುಲ್ಲಾದರೆ? ‘ಇಲ್ಲಕ್ಕ. ಟೀ ಕುಡೀತಾ ಇದ್ನಲ್ಲಾ? ಯಾವೂರ್ ಪಾರ್ಟಿ ಅಂತ ಅಂಗಡಿಯೋನು ಕೇಳ್ತಿದ್ದ; ನಾನು ಹೇಳ್ತಿದ್ದೆ...’

ಸರಳಾ ಹೌಹಾರಿದರು. ‘ಏನ್ ಹೇಳಿದೆ?’ ‘ಬೆಂಗಳೂರ್ ಪಾರ್ಟಿ. ವಾಪಸ್ ಹೋಗ್ತೀವಿ’ ಅಂದೆ. ‘ಯಾರ್ ಮನೆಗೆ ಬಂದಿದೀರ ಅಂತ ಕೇಳಿಲ್ಲ ತಾನೆ?’ ‘ಅವ್ರು ಕೇಳಿದ್ರಕ್ಕ. ನನಗೆ ಗೊತ್ತಿಲ್ಲ ಅಂದೆ. ಆದರೆ ಅವ್ರು ಕಾರ್ ಒಳ್ಗೆ ಹುಡುಗಿ ಐತಲ್ಲ? ಅವರನ್ನ ನೋಡಿದಾರೆ. ಆ ಹುಡ್ಗಿ ಮನೆ ಇಲ್ಲೇ ಅಂದ್ರು’. ‘ಯಾವ್ ಮನೆ ಅಂತೆ?’ ‘ಅದೇ ಬೀಗ ಹಾಕಿದಾರಲ್ಲ ಅದೇ ಮನೆ ಅಂತೆ...’ ‘ಮುರುಗಾ, ಯಾವಾಗ ಬರ್ತಾರೆ ಅಂತ ಕೇಳ್ಕೊಂಬಾರೋ...’

ಹಲ್ಲು ಕಿಸೀತಾ ನಿಂತ ಮುರುಗ. ಸರಳಾಗೆ ಆ ನಗುಮುಖದಲ್ಲಿ ಏನು ಭಾವ ಹೊಮ್ಮಿಸಲು ಪ್ರಯತ್ನ ಪಡ್ತಿದಾನೆ ಎನ್ನುವುದು ಅರ್ಥ ಆಗಲಿಲ್ಲ. ರೇಗಿ ಹೋಯಿತು. ‘ಯಾಕೋ ಗಮಾರನ ಥರ ನಿಂತಿದೀಯ? ಏನ್ ವಿಷಯ?’ ‘ಅದನ್ನೆಲ್ಲಾ ನಾನಾಗ್ಲೇ ಕೇಳ್ದೆ...’ ‘ಮತ್ತೇ ಬಾಯ್ಬಿಡಕ್ಕೇನು ಕಷ್ಟ ನಿಂಗೆ? ‘ಹಿಹಿಹಿ...ನೀವು ಬೈತೀರಾ ಅಂತ ಸುಮ್ನೆ ಇದ್ದೆ...’
‘ಅಪ್ಪಾ ತಂದೇ! ಇದು ನಮ್ಮಪ್ಪನ್ ಮನೆ ಅಲ್ಲ ಟೈಂ ಪಾಸ್ ಮಾಡಕ್ಕೆ! ಬಂದ ಕೆಲಸ ಮುಗಿಸಿ ಬೇಗ ಹೋಗನ. ಅಂಗಡಿಯೋನು ಅದೇನು ಹೇಳಿದ ಅನ್ನೋದನ್ನ ಜಾಸ್ತಿ ಡ್ರಾಮ ಮಾಡದೆ ಹೇಳು’.

‘ಮೇಡಂ, ಆ ಮನೆಯೋರು ಎಲ್ಲಿಗೂ ಹೋಗಿಲ್ಲವಂತೆ. ಇಲ್ಲೇ ಯಾರದೋ ಮನೇಲಿದ್ದಾರಂತೆ. ನಾವು ವಾಪಸು ಹೋಗ್ಲಿ ಅಂತ ಮನೆ ಬೀಗ ಹಾಕಿದಾರೆ’ ಮುರುಗ ಈ ಮಾತುಗಳನ್ನು ವೇಗವಾಗಿ ಹೇಳುತ್ತಿದ್ದರೆ ಸರಳಾಗೆ ಯಾರೋ ಹಿಂದಿನಿಂದ ಪ್ರಪಾತಕ್ಕೆ ನೂಕಿದಂತೆ ಭಾಸವಾಯ್ತು.

‘ಏ! ಅವನೇನು ಹೇಳಿದ್ನೋ, ನೀನೇನು ಕೇಳಿಸಿಕೊಂಡ್ಯೋ...ಇನ್ನೊಂದು ಸಾರಿ ಕೇಳ್ಕೊಂಡು ಬಾ’ ಎನ್ನುತ್ತಿದ್ದಂತೆಯೇ ಮುರುಗ ಮತ್ತೆ ಅವೇ ಮಾತುಗಳನ್ನು ಹೇಳಿದ. ‘ಮೇಡಂ ನಾನು ಸರಿಯಾಗೇ ಕೇಳಿಸಿಕೊಂಡಿದೀನಿ. ಬೇಕಾದ್ರೆ ಒಂದು ಕೆಲಸ ಮಾಡಣ. ನಾವು ಇಲ್ಲಿಂದ ಹೊರಟು ಹೋಗೋಣ. ಅವ್ರು ಮನೆಗೆ ವಾಪಸ್ ಬರ್ತಾರೆ’

‘ನಾವು ವಾಪಸ್ ಹೋದ್ರೆ ಈ ಹುಡುಗಿ ಗತಿ?’ ‘ಮೇಡಂ ಆ ಹುಡುಗಿ ಆ ತರ ಆಗಿರಕ್ಕೆ ಅವಳಪ್ಪನೇ ಕಾರಣ ಅಂತೆ. ಪಾಪ ಅವಳಮ್ಮನ ಮೊದಲ್ನೆ ಮದುವೆ ಇಂದ ಹುಟ್ಟಿದ್ ಹುಡುಗಿ ಅಂತೆ ಇದು. ಇನ್ನೊಬ್ಳೂ ಇದಾಳಂತೆ. ಈ ಯಪ್ಪನಿಗೆ ಹುಟ್ಟಿದ್ದು ಒಂದು ಗಂಡು ಒಂದು ಹೆಣ್ಣಂತೆ. ಮಗನೇ ಕೊನೇವ್ನು... ಈ ಹುಡುಗೀನೂ ಅವಳ ತಂಗೀನೂ ಬಲೇ ಗೋಳು ಹೊಯ್ಕೊಂಡನಂತೆ ಆಯಪ್ಪ.

ಹೊಡಿಯೋದು, ಬಡಿಯೋದು ಕೆಟ್ಟದಾಗಿ ನಡ್ಕೊಳೋದು  ಬಹಳ ಇತ್ತಂತೆ. ಆ ಹುಡುಗಿ ಅದರಲ್ಲೇ ಹೆಂಗೋ ಓದ್ಕೊಂಡು ಬೆಂಗಳೂರು ಸೇರ್ಕೋಬೇಕು ಅಂತ ನೋಡ್ತಾ ಇದ್ರೆ ವಿನಾ ಕಾರಣ ಅವಳಿಗೆ ಹಿಂಸೆ ಕೊಡ್ತಿದ್ನಂತೆ. ಅವ್ಳು ಚಿಕ್ ಹುಡಿಗೀ ಇದ್ದಾಗ ಬಟ್ಟೆ ಬಿಚ್ಚಿಸಿ ಹೊರಗೆ ನಿಲ್ಲಿಸ್ತಿದ್ದನಂತೆ...’ ‘ಅಯ್ಯೋ! ಅವರಮ್ಮ ಇದನ್ನೆಲ್ಲಾ ನೋಡಿ ಸುಮ್ಮನೆ ಇದ್ದಾಳಂತಾ?’

‘ಅವಳಿಗೆ ಹೆದರಿಸಿ ಇಟ್ಟಿದಾನಂತೆ. ಯಾರಾರೂ ಕೇಳಿದ್ರೆ ಅವಳಿಗೆ ಹುಷಾರಿಲ್ಲ ಅಂತಾನಂತೆ... ಅವಳು ಯಾರ್ ಹತ್ರನೂ ಮಾತೇ ಆಡೋ ಹಂಗಿಲ್ವಂತೆ’ ‘ಅಯ್ಯೋ! ನಂ ಹತ್ರ ಎಲ್ಲಾ ಸುಳ್ಳೇ ಹೇಳಿದಾನೆ ಹಂಗಂದ್ರೆ... ಮನೆಲಿ ಅವಳನ್ನ ನೋಡಿಕೊಳ್ಳಕ್ಕೆ ಯಾರೂ ಇಲ್ಲ ಅಂದ...’ ‘ದುಡ್ಡು ಚೆನ್ನಾಗಿ ಮಡಗವ್ನಂತೆ ಮೇಡಂ.

ಆ ಹುಡುಗಿ ಟ್ರೀಟ್ ಮೆಂಟ್ ಮಾಡಿಸಿದ್ರೆ ಖರ್ಚಾಗ್ತದಲ್ಲ ಅಂತ ಡಾಕ್ಟ್ರ ಹತ್ರ ಹೋಗಲೇ ಇಲ್ವಂತೆ. ಬರೀ ಮಸೀದಿ, ಅಲ್ಲಿ ಇಲ್ಲಿ ಕರ್ಕೊಂಡು ಹೋಗಿ ಧೂಪ ಹಾಕ್ಸದು ಇಂಥದೇ ಮಾಡಿದಾನಂತೆ. ಯಾವಾಗ್ಲೂ ಬೆಂಗಳೂರಲ್ಲೇ ಇರ್ತಾನಂತೆ. ಅಲ್ಲಿ ನಿಮ್ಹಾನ್ಸ್ ಆಸ್ಪತ್ರೆ ಹತ್ರ ಅವನ ತಂಗಿ ಮನೆ ಐತಂತೆ. ಅಲ್ಲಿಗೆ ಕರ್ಕೊಂಡು ಹೋಗು ಅಂತ ಡಾಕ್ಟರು ಹೇಳಿದ್ರೂ ಕೇಳಿಲ್ಲವಂತೆ..’

ಸರಳಾಗೆ ಆ ಕ್ಷಣದಲ್ಲಿ ಸುಲೇಮಾನ್ ಬಗ್ಗೆ ಆದ ಜ್ಞಾನೋದಯ ಅರಿಷಡ್ವರ್ಗಗಳ ಒಳಗೇ ಗಿರಕಿ ಹೊಡೆಯುತ್ತಾ ಅಲ್ಲಲ್ಲೇ ಜ್ವಾಲಾಮುಖಿಗಳ ಎಬ್ಬಿಸುತ್ತಾ, ಬೆಂಕಿ ಉಗುಳುತ್ತಾ ಭಗ್ ಭಗ್ಗನೆ ಸುಡುತ್ತಾ ಸಾಗಿದ ಭಾವನೆಗಳ ಮಹಾಪೂರ.

‘ನಡಿ ಹೋಗಣ. ಈ ನನ್ ಮಕ್ಕಳಿಗೆ ಹೆಂಗೆ ಪಾಠ ಕಲಿಸಬೇಕು ನನಗೆ ಗೊತ್ತು...’ ಕಾರು ಹೊರಟಿತು. ಗಲ್ಲಿಯಿಂದ ಮರೆಯಾಯಿತು. ಏರಿಯಾದಿಂದಲೂ ಹೋಯಿತು. ಊರ ಹೊರಗಿನ ಹೋಟೆಲಿನಲ್ಲಿ ಸದಸ್ಯರಿಗೆ ತಿಂಡಿ ಸಮಾರಾಧನೆಯಾಗಿ, ವಾಪಸು ಬರುವಾಗ ಪೊಲೀಸ್ ಸ್ಟೇಷನ್ನಿನ ಹತ್ತಿರ ಬಂದು ಅರ್ಧ ತಾಸು ನಿಂತಿತು. ಅಲ್ಲಿಂದ ಮತ್ತೆ ಏರಿಯಾಕ್ಕೆ, ಗಲ್ಲಿಯೊಳಕ್ಕೆ, ಸುಲೇಮಾನ್ ಮನೆ ಮುಂದೆ ನಿಂತಿತು.

ಮನೆ ಬಾಗಿಲು ತೆರೆದಿತ್ತು. ಸುಲೇಮಾನ್ ಒಳಗೆ ಬಾಗಿಲ ಕಡೆ ಕಾಲು ಹಾಕಿ ಎಡಗೈಯಲ್ಲಿ ಹೊಟ್ಟೆ ಕೆರೆದುಕೊಳ್ಳುತ್ತಾ ಬಲಗೈಯನ್ನು ತಲೆದಿಂಬು ಮಾಡಿಕೊಂಡು ಮಲಗಿದ್ದ.

ಸರಳಾ, ಚಿತ್ರಾ ಮತ್ತು ವಿಜಿ, ಶಹೀನಳ ಜೊತೆ ಒಳಗೆ ಬಂದಾಗ ಸುಲೇಮಾನ್‌ಗೆ ತನ್ನ ಎಲ್ಲೋ ತಾನು ಕನಸು ಕಾಣುತ್ತಾ ಇವರನ್ನೆಲ್ಲಾ ನೋಡ್ತಿದೀನಿ ಅಂದುಕೊಂಡ ಅಂತ ಕಾಣ್ಸುತ್ತೆ.

ಆದರೆ ಸರಳಾ ಸುಲೇಮಾನ್‌ನನ್ನು ನೋಡಿಯೂ ನೋಡದಂತೆ ಶಹೀನಳ ತಾಯಿ ಖದೀಜಳನ್ನು ಹೊರಕ್ಕೆ ಕರೆದಳು. ಸುಲೇಮಾನ್‌ಗೆ ರುಮ್ಮನೆ ಕೋಪ ಬಂತು. ಆದರೆ ತಾನು ಮಾತನಾಡಿದರೆ ಈಗ ಕೆಲಸ ಕೆಟ್ಟುಹೋಗುತ್ತದೆ ಎಂದುಕೊಂಡು ಕಷ್ಟಪಟ್ಟು ಸುಮ್ಮನಿದ್ದ. ಖದೀಜ ದುಪಟ್ಟಾ ಹೊದ್ದುಕೊಳ್ಳುತ್ತಾ ಹೊರಗೆ ಬಂದವಳು ಇಬ್ಬರು ಹುಡುಗಿಯರ ಭುಜದ ಆಸರೆಯಲ್ಲಿ ಬರುತ್ತಿದ್ದ ಮಗಳನ್ನು ನೋಡಿ ಕುಸಿದುಹೋದಳು.

ಓಡಿ ಬಂದು ಮಗಳನ್ನು ಎದೆಗೆ ಅವಚಿಕೊಂಡು ಸಂತೈಸಿ ಮುತ್ತು ಕೊಟ್ಟಳು. ಮಾತಿನಲ್ಲಿ ಹೇಳಲಾಗದಿದ್ದರೂ, ಶಹೀನ ಅವಳ ಅಮ್ಮನಿಗೆ ಪ್ರತಿಕ್ರಿಯಿಸಿದ ರೀತಿ ನೋಡಿದರೆ ಅವಳಿಗೆ ತನ್ನ ತಾಯಿ ಬಗ್ಗೆ ವಿಶ್ವಾಸ ಇದೆ ಎನ್ನುವುದು ಮಾತ್ರ ಅರ್ಥವಾಯಿತು.

‘ನಿಮ್ಮ ಮಕ್ಕಳನ್ನ ಕರೀರಿ’ ಎಂದು ಸರಳಾ ಖದೀಜಾಗೆ ತಾಕೀತು ಮಾಡಿದಳು. ಸ್ಕೂಲಿಗೆ ಹೋಗಿದ್ದ ಹುಡುಗನೊಬ್ಬನನ್ನು ಬಿಟ್ಟು ಉಳಿದ ಹೆಣ್ಣುಮಕ್ಕಳು ಹೊರಗೆ ಬಂದರು.

ಎಲ್ಲರೂ ಸುಲೇಮಾನನ ಕಡೆಗೆ ನೋಡುತ್ತಲೇ ಭೀತರಾಗಿ ನಿಂತಿದ್ದರು. ಸರಳಾ ಈಗ ಮಾತ್ರ ಸುಲೇಮಾನನ ಕಡೆಗೆ ನೋಡಿ ಮಾತಾಡಿದರು. ‘ಶಹೀನ ಇಲ್ಲೇ ಇರ್ತಾಳೆ.

ಹುಷಾರಾಗೋವರೆಗೂ ಅವಳು ಇಲ್ಲಿ ಇರ್ಬೇಕು. ಅವಳಿಗೆ ಏನಾದ್ರೂ ತೊಂದರೆ ಆದರೆ ಪೊಲೀಸ್ ಕೈಗೆ ಸಿಕ್ಕಾಕ್ಕೋತೀರಾ ಹುಷಾರು. ಇಡೀ ಫ್ಯಾಮಿಲಿ ಕಂಬಿ ಎಣಿಸಬೇಕಾಗುತ್ತೆ ಆಮೇಲೆ...’

ಸುಲೇಮಾನ್‌ಗೆ ಮೈಯೆಲ್ಲಾ ಉರಿದುಹೋಯಿತು. ‘ನನ್ ಮನೆ ಒಳ್ಗೇ ಬಂದಿ ನನ್ ಜನಾಗೇ ರೋಫ್ ಹಾಕ್ತೀರಾ? ಏನ್ ಪೊಲೀಸ್ರ ಹೆದರಿಕೆ ಹೇಳೋದು ನನಗೆ ನೀನು?’ ಎನ್ನುತ್ತಾ ಹಾರಿ ನಿಂತ.

‘ಸುಮ್ನೆ ನಿಂತ್ಕೊಳ್ಳಯ್ಯ ಕಂಡಿದೀನಿ. ಅವಳನ್ನ ಫಾಲೋ ಅಪ್ ಮಾಡಿಸಕ್ಕೆ ನಿಮ್ಹಾನ್ಸ್ ಆಸ್ಪತ್ರೆಗೆ ಕರ್ಕೊಂಡು ಹೋಗಬೇಕು. ಮುಂದಿನ ವಾರ ಅವಳು ಅಲ್ಲಿಗೆ ಬರಲಿಲ್ಲಾಂದ್ರೆ ನಾವು ಇಲ್ಲಿಗೆ ಬಂದು ನಿನ್ ಮೇಲೆ ಪೊಲೀಸ್ ಕಂಪ್ಲೇಂಟ್ ಕೊಡ್ತೀವಿ’

‘ಏನಂತ ಕೊಡ್ತೀಯಾ? ಚಿನಾಲ್ಕೆ!’ ‘ಲೈ... ಹಲ್ಲು ಬಿಗಿ ಹಿಡಿದು ಮಾತಾಡು. ನಡಿ ನಿನ್ ಹತ್ರ ಕೆಲ್ಸ ಐತೆ. ಅಲ್ಲಿ ತೋರಿಸುವಂತೆ ನಿನ್ ಗಂಡಸ್ತನಾನಾ. ಕರ್ಕೊಳೋ ಮುರುಗಾ, ನೋಡ್ರೀ ಸುಲೇಮಾನ್, ಈಗ ಗಲಾಟೆ ಮಾಡಿದ್ರೆ ನಿಮಗೇ ಅಪಾಯ. ನಾವ್ಯಾರೂಂತ ನಿಮಗೆ ಗೊತ್ತಿಲ್ಲ’ ಎಂದು ಸರಳಾ ಹೇಳಿದ ಮಾತ್ರಕ್ಕೆ ಸುಲೇಮಾನ್ ಗಾಬರಿ ಬಿದ್ದು ಹೋಗಿದ್ದ.

ಸುತ್ತಲಿನ ಜನ ಗುಜುಗುಜು ಅಂತ ಜಮಾಯಿಸಕ್ಕೆ ಶುರು ಮಾಡಿದ್ದರು. ಸುಲೇಮಾನ್ ಮರುಮಾತಾಡದೆ ಕಾರಿನಲ್ಲಿ ಕೂತ. ಅವನನ್ನು ಪೊಲೀಸ್‌ ಸ್ಟೇಷನ್ನಿಗೆ ಕರೆದುಕೊಂಡು ಹೋಗಿ ಕೂರಿಸಿದರು. ‘ಏನಯ್ಯಾ ಈ ಹೆಣ್ಣ್ ಮಕ್ಕಳು ಹೇಳ್ತಿದಾರೆ ನಿನ್ ಮಗಳನ್ನ ಫಿನಿಷ್ ಮಾಡಕ್ಕೆ ನೋಡಿದೆಯಂತೆ ನೀನು?’ ಅಂತ ಇನ್‌ಸ್ಪೆಕ್ಟರ್ ಗುಡುಗಿದರು. ಅಷ್ಟಕ್ಕೇ ಸುಲೇಮಾನ್ ಧರೆಗಿಳಿದು ಹೋಗಿಬಿಟ್ಟ.

‘ಹಂಗೆಲ್ಲಾ ಏನಿಲ್ಲ ಸಾರ್. ಅವಳಿಗೆ ಹುಷಾರಿಲ್ಲ ಅಷ್ಟೇ. ಇವ್ರೇ ಆಸ್ಪತ್ರೇಲಿ ತೋರಿಸಿ ಕರ್ಕೊಂಡು ಬಂದಾರೆ. ನೋಡ್ಕೊಂತೀನಿ ಅವಳನ್ನ’ ಅಂತ ಬ್ಬೆಬ್ಬೆಬ್ಬೆಬ್ಬೆ ಅನ್ನತೊಡಗಿದ.

ಅಲ್ಲಿಂದಲೇ ಡಾಕ್ಟರಿಗೆ ಫೋನ್ ಮಾಡಿಸಿ ಶಹೀನಳ ಸಮಸ್ಯೆ ಏನು, ಅವಳನ್ನ ಹೇಗೆ ನೋಡಿಕೋಬೇಕು, ಫಾಲೋ ಅಪ್ ಯಾವ ರೀತಿ ಅಂತೆಲ್ಲಾ ಹೇಳಿಸಿದರು. ನಂತರ ಮತ್ತೆ ಇನ್‌ಸ್ಪೆಕ್ಟರ್ ಮಾತಾಡಿದರು.

‘ವಾರಕ್ಕೊಮ್ಮೆ ಬಂದುಹೋಗು...’ ಅಂತ ಸುಲೇಮಾನನಿಗೆ ಜಬರ್ದಸ್ತಿಯಿಂದಲೇ ಹೇಳಿ ಕಳಿಸಿದರು ಇನ್‌ಸ್ಪೆಕ್ಟರ್. ಆಮೇಲೆ ಸರಳಾ ಅಂಡ್ ಪಾರ್ಟಿ ಕಡೆ ತಿರುಗಿ ‘ನೀವ್ ಹೊರಡೀಮಾ ನಾವ್ ನೋಡ್ಕೋತೀವಿ’ ಅಂತ ಭರವಸೆ ಕೊಟ್ಟರು. ಸರಳಾ ಸುಖಾಸುಮ್ಮನೆ ಎಮೋಷನಲ್ ಆಗಿ ‘ಥ್ಯಾಂಕ್ಸ್ ಸರ್ ನಿಮ್ಮಿಂದ ತುಂಬಾ...’ ಅಂತೇನೋ ಹೇಳೋಕೆ ಹೋದರೆ ಇನ್‌ಸ್ಪೆಕ್ಟರ್ ಅವರನ್ನು ತಡೆದು ಹೇಳಿದರು.

‘ನಮ್ ಡ್ಯೂಟಿನೇ ಮನುಷ್ಯತ್ವದ ಮೇಲೆ ನಿಂತಿದೆ ಮೇಡಂ. ಅವನ ಮನೆ ಹತ್ರ ನಮ್ಮ ಇನ್‍ಫಾರ್ಮರ್ ಇದಾನೆ. ಒಂದು ಕಣ್ಣು ಇಟ್ಟಿರ್ತೀವಿ... ಚಿಂತೆಯಿಲ್ಲದೆ ಹೊರಡಿ...’
ಸುಲೇಮಾನ್ ಎನ್ನುವ ಅಪ್ಪನ ರೂಪದ ರಾಕ್ಷಸ, ಇನ್‌ಸ್ಪೆಕ್ಟರ್ ಎನ್ನುವ ‘ಮನುಷ್ಯ’ ಇಬ್ಬರನ್ನೂ ಒಂದೇ ದಿನದಲ್ಲಿ ನೋಡಿದ ಸರಳಾ, ಚಿತ್ರಾ, ವಿಜಿ ವಾಪಸು ಬೆಂಗಳೂರಿಗೆ ಬಂದು ಸೇರಿದರು.

ಕಥೆ ನಡೆದದ್ದನ್ನ ಕೇಳಿ ಸೂಸನ್ ಅಂದಳು...‘ಅಯ್ಯೋ ಇಲ್ಲೇ ಇಟ್ಕೋಬೋದಿತ್ತಲ್ಲಾ? ಇಲ್ಲಿ ನಾವಿರೋ ತನಕ ನೋಡಬಹುದಿತ್ತು...’ ಚಿತ್ರಾ ಮೆಲ್ಲಗೆ ಗೊಣಗಿದಳು. ‘ಶಹೀನಗೆ ಟ್ರೀಟ್‌ಮೆಂಟು ಇದೆ. ಇವಳ ರೋಗ ಯಾವುದು ಅಂತ್ಲೇ ಗೊತ್ತಾಗ್ತಾ ಇಲ್ಲ. ಅಷ್ಟು ಕಾಂಪ್ಲಿಕೇಟೆಡ್ ಕೇಸು..’ ‘ಮಾತಾಡು! ದೇವ್ರು ನಿನಗೆ ಶಿಕ್ಷೆ ಕೊಡ್ತಾನೆ’‘ದೇವ್ರು ನನ್ಗೆ ನಿನ್ನಂಥಾ ಸ್ನೇಹಿತೆಯನ್ನು ಕೊಟ್ಟಾಗಲೇ ಅದು ಶಿಕ್ಷೆ ಅಂತ ನನಗೆ ಗೊತ್ತಾಯಿತು. ಇನ್ನು ಹೊಸದಾಗಿ ಏನು ಕೊಡ್ತಾನೆ?’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.