ADVERTISEMENT

‘ಹೆಣ್ಣಿನ ದೇಹ ಹೇಗೆ ಸಮಾಜದ ಆಸ್ತಿಯಾಗುತ್ತೆ?’

ಪ್ರೀತಿ ನಾಗರಾಜ
Published 8 ಜೂನ್ 2016, 19:49 IST
Last Updated 8 ಜೂನ್ 2016, 19:49 IST

ಸೂಸನ್‌ಗೆ ಅತೀ ಪ್ರಶಸ್ತ ಸಮಯದಲ್ಲಿ ಅತ್ಯಂತ ಅಸಂಬದ್ಧ ಮಾತುಗಳನ್ನು ಆಡುವ ಕಲೆ ಸಿದ್ಧಿಸಿತ್ತು. ಅದು ದೇವರ ವರವೇ ಏನೋ ಎನ್ನುವಷ್ಟರ ಮಟ್ಟಿಗೆ ತನ್ನ ಸ್ವಭಾವದ ಈ ಅನವಶ್ಯಕ ಅಂಗವನ್ನು ಪೋಷಿಸಿಕೊಂಡು ಬಂದಿದ್ದಳು.

ತನ್ನ ಪ್ರಶ್ನೆಗಳಿಂದ ಯಾರಿಗಾದರೂ ನೋವಾಗುತ್ತಿದೆಯಾ ಇಲ್ಲವಾ ಎನ್ನುವುದು ಅವಳ ಗಮನಕ್ಕೆ ಬರುತ್ತಲೇ ಇರಲಿಲ್ಲ. ಪ್ರಶ್ನೆ ಕೇಳುವ ಬಾಯಿಚಟ ಒಂಥರಾ ಕೆಮ್ಮಿ ಕ್ಯಾಕರಿಸುವವರಷ್ಟೇ ಸಹಜವಾಗಿ ಇರುವಂಥ ಸೃಷ್ಟಿ ನಿಯಮ ಎಂಬಂತೆ ಹಿಂದೆ ಮುಂದೆ ಯೋಚಿಸದೆ ಮೂಲತಃ ಆದಿಮಾನವಳಾದ ತನ್ನ ಹೊಟ್ಟೆಯೊಳಗೆ ಹುಟ್ಟಿದ ಪ್ರಶ್ನೆಗೆ ಸಾವಿರಾರು ವರ್ಷಗಳ ನಾಗರೀಕತೆ ಕೊಟ್ಟ ಕೊಡುಗೆಯಾದ ಭಾಷೆಯನ್ನು ಉಪಯೋಗಿಸಿ ಪದಗಳ ವೇಷ ತೊಡಿಸಿ ಮನಸ್ಸಿನ ರಸ್ತೆಗಳಲ್ಲಿ ಹಳಸಿದ ಆಹಾರ ಹುಡುಕುವ ಬೀದಿ ಶ್ವಾನದ ರೀತಿ ತಿರುಗಲು ಬಿಡುತ್ತಿದ್ದಳು.

ಅವಳ ಪ್ರಶ್ನೆಗೂ ಅಲ್ಲಿ ನಡೆಯುತ್ತಿದ್ದ ಸಂವಾದಕ್ಕೂ ಏನಕೇನ ಸಂಬಂಧವಿಲ್ಲದಾಗ್ಯೂ ಪ್ರಶ್ನೆ ಕೇಳುವ ಪ್ರವೃತ್ತಿ ತನ್ನ ಜನ್ಮಸಿದ್ಧ ಹಕ್ಕೇನೋ ಎನ್ನುವಂತೆ ಪ್ರತಿಷ್ಠಾಪಿಸಿ ಮೆರೆಯುತ್ತಿದ್ದಳು. ‘ಏನ್ ಮಾತೂಂತ ಆಡ್ತಾಳೆ ಇವಳು.

ಒಂದೊಂದ್ಸಾರಿ ಬರೋ ಸಿಟ್ಟಿಗೆ ಸರ್‍್ಯಾಗಿ ಕುಟ್ಟಿ ಪುಡಿ ಮಾಡಿ ಬಿಡ್ಬೇಕು ಅನ್ಸುತ್ತೆ ಇವಳನ್ನ!’ ಅಂತ ಚಿತ್ರಾ ಹಲ್ಲು ಕಚ್ಚುತ್ತಿದ್ದರೂ, ಹೆಚ್ಚೇನೂ ಮಾಡಲು ಸಾಧ್ಯವಿರಲಿಲ್ಲ.

ಈವತ್ತಿನ ಪತ್ರಿಕೋದ್ಯಮದಲ್ಲಿ ಸೂಸನ್ ಇದ್ದಿದ್ದರೆ ಒಳ್ಳೇ ಆಂಕರ್ ಆಗುತ್ತಿದ್ದಳೇನೋ... ಪಾಪ ಹತ್ತು ಹದಿನೈದು ವರ್ಷ ಮುಂಚೆ ಹುಟ್ಟಿಬಿಟ್ಟು ಅವಳ ಪ್ರತಿಭೆ ಮಿನುಗುವುದಕ್ಕೆ ಮುನ್ನವೇ ಕೋಟಿ ಕೋಟಿ ಕನ್ನಡಿಗರ ಸುದೈವವೆಂಬಂತೆ ಎಲೆಕ್ಟ್ರಾನಿಕ್ ಪತ್ರಿಕೋದ್ಯಮಕ್ಕೆ ಬರುವ ಮುನ್ನ ಅವಳ ಏಜ್ ಬಾರ್ ಆಯಿತೂಂತ ನಂಬೋಣ. ಹಾಗೆ ನಂಬುವುದು ನಮಗೂ ಕ್ಷೇಮ, ಕನ್ನಡ ಪತ್ರಿಕೋದ್ಯಮಕ್ಕೂ ಕ್ಷೇಮ...

ಸರಳಾ ತನ್ನ ಅಮ್ಮನ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡುತ್ತಿದ್ದರಲ್ಲ, ಆ ಓಘ ಮತ್ತೆ ಸಿಗುವಂಥದ್ದಲ್ಲ. ಒಬ್ಬ ಮಹಿಳೆ, ತನ್ನ ತಾಯಿಯ ಬಗ್ಗೆ ಸಮಾಜಕ್ಕೆ ಇರಬಲ್ಲ ಪೂರ್ವಗ್ರಹಗಳೆಲ್ಲವನ್ನೂ ಮೀರಿ,

ಅವಳ ಬಗ್ಗೆ ತನ್ನ ಮನಸ್ಸಿನೊಳಗಿದ್ದ ಅಗಾಧ ಪ್ರೀತಿ-ಗೌರವವನ್ನು ಜಗತ್ತಿನ ನಿಯಮಗಳಿಗೆ ಹೊರತಾದ ಜೀವನ ಸಾಗಿಸಿದ ತನ್ನ ತಾಯಿಯ ಮುಗ್ಧತೆಯನ್ನು ಪದರ ಪದರವಾಗಿ ಬಿಡಿಸಿ ಮುಂದಿಡುತ್ತಿರುವಾಗ ಸೂಸಿ ನೈತಿಕ ಪ್ರಶ್ನೆಯೊಂದನ್ನು ಎತ್ತಿ ಮುಂದಿಟ್ಟು ಮಾತಿನ ದಿಕ್ಕನ್ನೇ ಬದಲಾಯಿಸಿಬಿಟ್ಟಿದ್ದಳು.

ಸೂಳೆಗಾರಿಕೆಯೊಂದೇ ತನ್ನ ಅಮ್ಮನಿಗೆ, ಅಂದರೆ ಮೂರು ಮಕ್ಕಳ ತಾಯಿಗೆ, ಗೊತ್ತಿದ್ದ ಕೆಲಸ ಎಂದು ಸರಳಾ ಯಾವ ಹಿಂಜರಿಕೆಯೂ ಇಲ್ಲದೆ ಹೇಳುತ್ತಿದ್ದರೆ; ಸೂಸನ್ ‘ನಿಮ್ಮಮ್ಮ ದುಡಿದದ್ದು ಪಾಪದ ದುಡ್ಡು ಅಲ್ವಾ’ ಅಂತ ಕೇಳಿದ್ದಳು.

ಅವಳು ಹಾಗೆ ಕೇಳಿದ ಮೊದಲ ಐದು ನಿಮಿಷಗಳು ಭೂಮಿ ತಿರುಗುವುದನ್ನು ನಿಲ್ಲಿಸಿತು. ಆಕಾಶಕಾಯಗಳು ಅಲ್ಲೇ ಸುಟ್ಟು ಬೂದಿಯಾದವು. ಜಲಚರಗಳು ನೀರಿನಲ್ಲಿ ಕರಗಿದವು. ಭೂಮಿ ಆಕಾಶ ಒಂದಾಯಿತು - ಅಂತೆಲ್ಲಾ ನೀವು ಅಂದುಕೊಂಡರೆ ಸಿಕ್ಕಾಪಟ್ಟೆ ಹಾಲಿವುಡ್ ಸಿನಿಮಾ ನೋಡ್ತೀರಿ ಅಂದ್ಕೋಬೇಕಾಗುತ್ತೆ. ಹಾಗೆಲ್ಲಾ ಏನೂ ಆಗಲಿಲ್ಲ.

ಸರಳಾ ಸ್ವಲ್ಪ ಹೊತ್ತು ಸೂಸನ್ ಮುಖ ನೋಡುತ್ತಲೇ ಕೂತು ಬಿಟ್ಟರು. ಇವಳನ್ನ ನೋಡಿದರೆ ಅವರಿಗೆ ಎಂಥಾ ಭಾವನೆ ಬರ್ತಿತ್ತು ಅಂತ ಹೇಳುವುದು ಕಷ್ಟ.

‘ಆ ಕ್ಷಣದಲ್ಲಿ ಅವಳ ಬಗ್ಗೆ ಅತೀವ ಮರುಕ ಹುಟ್ಟಿಬಿಟ್ಟು... ಈ ಹುಡುಗಿಗೆ ಬುದ್ಧಿ ಬರೋ ಹೊತ್ತಿಗೆ ಇವಳ ಜೀವನವೇ ಮುಗಿದು ಹೋಗಿರುತ್ತಾ ಅಂತ ಯೋಚಿಸ್ತಿದ್ದೆ’ ಅಂತ ಆಮೇಲೆ ಯಾವಾಗಲೋ ಆ ಕ್ಷಣದ ತಮ್ಮ ಮೌನವನ್ನು ನೆನೆಸಿಕೊಂಡು ಹೇಳಿದ್ದರು. ಆದರೆ, ಹಾಲಿ ಪರಿಸ್ಥಿತಿಗೆ ಬಂದರೆ ಸೂಸನ್ ಕೇಳಿದ ಆ ಪ್ರಶ್ನೆ ಒಂಥರಾ ಅಪ್ರಸ್ತುತ.

ಸರಳಾ ಒಮ್ಮೆ ಉಸಿರೆಳೆದುಕೊಂಡು ಮಗ್ಗಿನಲ್ಲಿದ್ದ ಚೂರು ಪಾರು ಬಿಯರನ್ನು ಒಮ್ಮೆಗೆ ಗೊಟ್ಟ ಎತ್ತಿದಂತೆ ಕುಡಿದರು. ಮುಖ ಕಿವುಚುತ್ತಾ ಆ ಹುಳಿ ಒಗರು ಪೇಯವನ್ನು ನುಂಗಿದರು. ಗಂಡಸರಂತೆ ಆಆಆಆಅಬ್ ಎಂದು ಜೋರಾಗಿ ತೇಗಿ ಸೂಸಿಯನ್ನು ನೋಡಿದರು. ಸೂಸಿ ಇನ್ನೇನು ಮ್ಯಾಚ್ ಗೆಲ್ಲಲು ನಾಲ್ಕು ರನ್ನು ಬೇಕಾದಾಗ ಸಿಕ್ಸರ್ ಹೊಡೆದು ಸಾಧನೆ ಮಾಡಿದ ಯುವರಾಜ್ ಸಿಂಗ್‌ನಂತೆ ಮುಖದಲ್ಲಿ ವಿನಾಕಾರಣ ಆಕ್ರೋಶ ತುಂಬಿಕೊಂಡು ಕುಳಿತಿದ್ದಳು.

ಪ್ರಶ್ನೆಗೆ ನೇರವಾಗಿ ಉತ್ತರ ಕೊಡದೆ ನೋ ಬಾಲ್ ಅನ್ನು ದೂರದಿಂದಲೇ ಗುರುತಿಸುವ ಚಾಕಚಕ್ಯತೆಯುಳ್ಳ ಬ್ಯಾಟ್ಸ್ ಮನ್ ಅಲ್ಲವೇ ಸರಳಾ? ಎಲ್ಲದರ ದಿಕ್ಕನ್ನು ಬದಲಾಯಿಸುವಂತೆ ‘ಏನ್ ಕಷ್ಟ ನಿಂದು?’ ಕೇಳಿದರು. ಈ ಪ್ರತಿಕ್ರಿಯೆಯನ್ನು ನಿರೀಕ್ಷಿಸಿರದಿದ್ದ ಸೂಸನ್ ಏನೆಂದು ಹೇಳಲಿಕ್ಕೆ ಆಗದೆ ಕಕ್ಕಾಬಿಕ್ಕಿಯಾದಳು.

ತಾನು ಪ್ರಶ್ನೆ ಕೇಳುವಾಗ ಅದೇನಂದುಕೊಂಡಿದ್ದಳೋ ದೇವರಿಗೇ ಗೊತ್ತು. ಆಗಾಗ ಎಲ್ಲಾ ಧರ್ಮಗುರುಗಳು ಆಚಾರ ಹೇಳುವಂತೆ ಅವಳ ಧರ್ಮಗುರುಗಳೂ ವ್ಯಭಿಚಾರ ಮಹಾಪಾಪ ಅಂತ ಬೋಧಿಸಿದ್ದರಂತೆ.

ಅದನ್ನೇ ಆಧಾರವಾಗಿಟ್ಟುಕೊಂಡು ತನ್ನ ಅಭಿಪ್ರಾಯವನ್ನು ರೂಪಿಸಿಕೊಂಡಿದ್ದಳು. ಹರೆಯದಲ್ಲಿ, ಶಕ್ತಿ ತುಂಬಿ ತುಳುಕುವಲ್ಲಿ ಜೀವನದ ಅನಿವಾರ್ಯತೆಗಳ ಪ್ರಶ್ನೆ ಉದ್ಭವಿಸುವುದೇ ಇಲ್ಲವಲ್ಲ?

ಆಗೆಲ್ಲ ಕಲ್ಲನ್ನೂ ಕೈಯಲ್ಲೇ ಪುಡಿ ಮಾಡುವ ಶಕ್ತಿ ಇರುತ್ತದೆ ತಾನೆ? ಆ ಶಕ್ತಿ ಪ್ರಸ್ತುತದ ಜೊತೆಗೆ, ವಿಧಿಯ ಎದುರಿಗೆ ಹಣಾಹಣಿಗೆ ಬಿದ್ದಾಗಲೇ ಅಲ್ಲವೇನು ಮಿತಿಗಳ ದರ್ಶನ ಆಗುವುದು?

‘ನಮ್ಮಮ್ಮ ಮಾಡಿದ್ದು ಹೊಟ್ಟೆ ಹೊರೆಯುವ ಕೆಲಸ. ಹಾದರ ಅಲ್ಲ,’ ಅಂತ ಸರಳಾ ಸೂಸಿಯನ್ನು ತಿದ್ದಿದರು. ಸೂಸಿ ತನ್ನ ಮೂರ್ಖತನದ ಅನಾವರಣವನ್ನು ಈವತ್ತು ಮಾಡಿಸಬೇಕಂತಲೇ ನಿರ್ಧಾರ ಮಾಡಿದ್ದಳೂಂತ ಕಾಣಿಸುತ್ತೆ.

‘ಅದ್ ಹೆಂಗ್ರೀ ಬೇರೆ ಆಗುತ್ತೆ? ನಿಮ್ಮಮ್ಮನ ಕೆಲಸಕ್ಕೂ ಹಾದರಕ್ಕೂ ಏನು ವ್ಯತ್ಯಾಸ?’
‘ಹಾದರ ಅಂದರೆ ಮುಂದೆ ನೋಡೋಕೆ ಸದ್ಗೃಹಿಣಿ ಅಥವಾ ಸದ್ಗೃಹಸ್ಥನ ಥರ ಇರೋದು ಕಣ್ಣು ತಪ್ಪಿಸಿ ಇನ್ನೊಬ್ಬರ ಜೊತೆ ಸಂಬಂಧ ಇಟ್ಟುಕೊಳ್ಳೋದು. ಹಾಗೆ ಮಾಡೋ ಗರತಿಯರು ಬಹಳ ಜನ ಇದ್ದಾರೆ. ನನ್ನಮ್ಮ ಆ ಥರದವಳಲ್ಲ’ ಅಂದರು ಸರಳಾ.

‘ಹಾಗಾದರೆ ಹಾದರ ಮತ್ತು ವ್ಯಭಿಚಾರ ಎರಡೂ ತಪ್ಪೇ ಅಲ್ಲವೇನು?’
‘ಮೂರು ಜನ ಮಕ್ಕಳಿರುವಾಗ ನೈತಿಕತೆ ಯಾರಿಗೆ ಕಲಿಸ್ತೀ ಮರೀ? ಯಾವುದು ಅನೈತಿಕ? ಸಂಬಂಧವಾ? ಉದ್ಯೋಗವಾ? ಕೆಲಸವಾ? ದೇಹವಾ? ಆತ್ಮವಾ? ಇಲ್ಲಾ ಹೊಟ್ಟೆಯೊಳಗೆ ಕುದೀತಾ ಇರೋ ಹಸಿವೆನಾ?’

‘ಬೇರೆ ಕೆಲಸ ಮಾಡ್ಬೋದಿತ್ತಲ್ಲ?’
‘ಅವಳು ಓದಿದ್ರೆ ಬೇರೆ ಕೆಲಸ ಮಾಡ್ತಿದ್ದಳೇನೋ... ಆದ್ರೆ ನಿನ್ ಥರಾ ಓದಿರಲಿಲ್ಲ ಅವಳು. ನೀನು, ನಾನು, ಈ ಚಿತ್ರಾ - ಎಲ್ಲರೂನೂ ತಲೆ ಮಾರಾಟಕ್ಕಿಟ್ಟು ಹಣ ಗಳಿಸ್ತೀವಿ. ಅವಳ ತಲೆಯ ಒಳ್ಗೆ ಇದ್ದ ಜ್ಞಾನಕ್ಕೆ ಮಾರ್ಕೆಟ್ ಇರಲಿಲ್ಲ ಕಂದಮ್ಮಾ... ಹಾಗಾಗಿ ಎಲ್ಲರೂ ಅವಳ ದೇಹವನ್ನೇ ಬಯಸಿದರು. ಅವಳಿಗೂ ಆ ದೇಹ ತನ್ನ ಮುಕ್ತಿ ಮಾರ್ಗ ಅನ್ನಿಸಿತ್ತು.

ತನ್ನ ಮಕ್ಕಳ ಹೊಟ್ಟೆ ತುಂಬಿಸಲಾರದ, ತನ್ನ ತಾಯ್ತನದ ಕರ್ತವ್ಯ ಪೂರೈಸಲಾರದ ಆ ಸುಂದರ ದೇಹದಿಂದ ಅವಳಿಗೆ ಹೆಚ್ಚೇನೂ ಪ್ರಯೋಜನ ಕಾಣಲಿಲ್ಲ. ಹಾಗಾಗಿ ತನ್ನ ಅವಶ್ಯಕತೆಗಳನ್ನು ಪೂರೈಸಲು, ಮನೆ ಬಾಡಿಗೆ ಕಟ್ಟಲು, ಮಕ್ಕಳಿಗೆ ಹಾಲು ಹಣ್ಣು ತರಲು, ಹುಷಾರಿಲ್ಲದಿದ್ದರೆ ಡಾಕ್ಟ್ರ ಹತ್ತಿರ ಕರಕೊಂಡು ಹೋಗುವಷ್ಟು,

ಅಲ್ಲಿ ಫೀಸು ಕೊಟ್ಟು ಔಷಧಿ ಕೊಳ್ಳುವಷ್ಟು ಪ್ರಾಮಾಣಿಕತೆ ಉಳಿಸಿಕೊಳ್ಳಲು ಅವಳು ದೇಹವನ್ನೇ ಮಾರಬೇಕಾಯ್ತು. ಅವಳ ಕೈಲಾಗುವಷ್ಟು ದಿನ... ಆ ದೇಹಕ್ಕೆ ಮಾರ್ಕೆಟ್ಟು ಇದ್ದಷ್ಟು ದಿನ ಮಾರಿದಳು.

ಡಿಮಾಂಡು ಮುಗಿಯುವ ಹೊತ್ತಿಗೆ ಮಕ್ಕಳಾದ ನಾವೆಲ್ಲ ಮರ್ಯಾದಸ್ತ ಮೋಸಗಾರರ ಜಗತ್ತಿನಲ್ಲಿ ದುಡಿಮೆಗೆ ನಿಂತಿದ್ದೀವಿ. ಹಾಗಾಗಿ ಅವಳು ಸುಮ್ಮನಾದಳು. ಪಾಪ... ಆದರೆ ನಮ್ಮ ಸಲುವಾಗಿ ಇಷ್ಟೆಲ್ಲಾ ಮಾಡಿದೆ ಅಂತ ಅವಳು ಎಂದೂ ಬೇರೆ ತಂದೆ ತಾಯಿಗಳ ಥರ ನಮ್ಮನ್ನು ಬ್ಲಾಕ್ ಮೇಲ್ ಮಾಡಲಿಲ್ಲ...’

ಅಂತ ಸರಳಾ ಒಂದೇ ಉಸಿರಿನಲ್ಲಿ ಮಾತಾಡಿ ಸುಮ್ಮನಾದರು. ಓವರ್ರು ಇನ್ನೂ ಮುಗಿದಿರಲಿಲ್ಲ. ಹುಮ್ಮಸ್ಸಿನ ಬೌಲಿಂಗು ಜಾರಿ ಇತ್ತು. ಬ್ಯಾಟ್ಸ್ ಮನ್ ಸ್ವಲ್ಪ ವಿಚಲಿತಗೊಂಡಂತೆ ಇತ್ತು.

‘ಅಲ್ಲಾ ಆಂಟೀ... ಅವ್ರು ಮನೆ ಕೆಲಸ ಇತ್ಯಾದಿ ನೋಡ್ಕೋಬೋದಿತ್ತಲ್ಲ?’
‘ನೋಡ್ಕೋಬೋದಿತ್ತು. ಒಮ್ಮೆ ಹಾಗೆ ಯಾವುದೋ ಶ್ರೀಮಂತರ ಮನೆ ಕೆಲಸಕ್ಕೆ ಅಂತ ನೋಡ್ಕೊಂಡಿದ್ದಳು. ಬೆನ್ನು ಮುರ್ಯೋ ಅಷ್ಟು ಕೆಲ್ಸ. ನಾಲ್ಕು ಜನ ತಿನ್ನುವಷ್ಟು ಸಂಬಳ ಇರಲೇ ಇಲ್ಲ. ಆ ಪರಿಸ್ಥಿತಿಯನ್ನು ಹೇಗೋ ಒಪ್ಪಿಕೊಂಡಿದ್ದಳು.

ಆದರೆ ಆ ಮನೆಯಲ್ಲಿ ಕಳ್ಳತನವಾಯಿತು ಅಂತ ಅಮ್ಮನನ್ನೂ ಸೇರಿ ನಾಲ್ಕು ಜನ ಕೆಲಸದೋರನ್ನ ವಿಚಾರಣೆ ಮಾಡಿದ ಪೊಲೀಸರು ಇವಳನ್ನು ಗುರುತು ಹಿಡಿದು ಚಿತ್ರಹಿಂಸೆ ಕೊಟ್ಟರು. ಕಡೆಗೆ ಅವರೆಲ್ಲರೂ ಇವಳನ್ನು ಅನುಭವಿಸುವ ತನಕ ಬಿಡಲಿಲ್ಲ. ಆಮೇಲೆ ಮನೆಗೆಲಸದ ಸಾವಾಸ ಬೇಡ ಅಂತ ಅವಳೇ ಬಿಟ್ಟಳು’

‘ಆದರೆ ನಿಮ್ಮಮ್ಮ ಮಾಡ್ತಿದ್ದ ಬೇರೆ ಕೆಲಸದಲ್ಲಿ ಹಿಂಸೆ ಇರಲಿಲ್ಲವಾ? ಅದನ್ನ ಸಹಿಸಿಕೊಳ್ಳೋಕೆ ಇರೋ ಶಕ್ತಿ ಮನೆ ಕೆಲಸ ಮಾಡೋದಕ್ಕೂ ಇರಬಹುದಿತ್ತಲ್ಲ?’

‘ನಾವು ಮೂರು ಜನ ಮಕ್ಕಳು ಕಣೇ ಹುಡುಗೀ... ಮನೆ ಕೆಲಸ ಇಡೀ ದಿನ ಮಾಡಿದರೂ ನಮ್ಮನ್ನು ಸಲಹುವಷ್ಟು ಸಂಬಳ ಸಿಗುತ್ತಿರಲಿಲ್ಲ. ಅಲ್ಲದೆ ಅವಳ ಹಳೇ ಜನ ಆಗಾಗ ಸಿಗುತ್ತಿದ್ದರು ಅವಳಿಗೆ... ಮನೆ ಕೆಲಸಕ್ಕೆ ಹೋಗುವಾಗ ಒಂಥರಾ ಆತಂಕದಲ್ಲಿ ಇರುತ್ತಿದ್ದಳು’
‘ಅದಕ್ಕೆ? ಆ ಕೆಲಸ ಬಿಟ್ಟು ಮತ್ತೆ ಅದೇ ಕೆಟ್ಟ ದಾರಿಗೆ ಬಂದ್ರಾ?’

‘ಕೆಟ್ಟ ದಾರಿ ಅಂತ ಯಾಕೆ ಹೇಳ್ತೀ? ಮೂರು ಜನ ಮಕ್ಕಳ ಹೊಟ್ಟೆಗೆ ಅನ್ನ ಕೊಡುವ ಯಾವ ದಾರಿಯೂ ಕೆಟ್ಟದಲ್ಲ.’
‘ವ್ಯಭಿಚಾರವೂ ಕೆಟ್ಟದಲ್ವಾ?’

‘ನನ್ನ ಅಮ್ಮನ ದಾರಿ ಲೋಭದ್ದಲ್ಲ. ಒಬ್ಬ ಶ್ರೀಮಂತನ ಉಪಪತ್ನಿಯಾಗಿ ಬದುಕುವ ಅವಕಾಶ ಒಮ್ಮೆ ಬಂದಿತ್ತು. ಆದರೆ ಅದು ತನ್ನ ಮಕ್ಕಳ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ ಅಂತ ಯೋಚಿಸಿ ಬಿಟ್ಟುಬಿಟ್ಟಳು.

ಆ ಶ್ರೀಮಂತನನ್ನು ಬುಟ್ಟಿಗೆ ಹಾಕ್ಕೊಂಡು ಅವನ ದುಡ್ಡನ್ನೇನೂ ಹೊಡೆದುಕೊಳ್ಳಲಿಲ್ಲ. ಪಕ್ಕಾ ವ್ಯಾಪಾರಸ್ಥರ ಥರ ಇದ್ದಳು. ವ್ಯಾಪಾರಕ್ಕೆ ಮಾತ್ರ ಬೆಲೆ. ತನ್ನ ಆತ್ಮಕ್ಕೆ ಅಲ್ಲ ಎನ್ನುವುದನ್ನು ಅರಿತಿದ್ದ ಅನುಭಾವಿ ನನ್ನ ಅಮ್ಮ. ಒಂದು ತಮಾಷೆ ಗೊತ್ತೇನು?’
‘ಏನು?’

‘ಕುಟುಂಬದಲ್ಲಿ ಸಂತೋಷ ಹೊಂದದ ಗಂಡಸರು ತನ್ನ ಹತ್ತಿರ ಬಂದಾಗ ಸಾಕಷ್ಟು ಬುದ್ಧಿ ಮಾತುಗಳನ್ನೂ ಹೇಳುತ್ತಿದ್ದಳು ಅಮ್ಮ. ಹೆಂಗಸಿನ ಒಳ ಜಗತ್ತು ಏನು, ಯಾವುದರಿಂದ ಅವಳಿಗೆ ಸಂತೋಷವಾಗುತ್ತೆ, ದುಃಖವಾಗುತ್ತೆ ಅಂತೆಲ್ಲ ಅಮ್ಮ ತನ್ನ ಕಸ್ಟಮರ್ಸ್ ಹತ್ತಿರ ಮಾತಾಡುತ್ತಿದ್ದಳಂತೆ.

ಅದರಿಂದ ಎಷ್ಟೋ ಸಂಸಾರಗಳು ಸರಿದಾರಿಗೆ ಬಂದವು. ಒಬ್ಬನಂತೂ ಇತ್ತ ಕಟ್ಟಿಕೊಂಡ ಹೆಂಡತಿ ಜೊತೆ ಇರಲಾರದೆ, ಅತ್ತ ಪ್ರೇಯಸಿಯನ್ನು ಮರೆಯಲಾರದೆ ಕುಡಿದು ಅಮ್ಮನ ಬಳಿ ಬಂದು ಅಳುತ್ತಿದ್ದ. ಅಮ್ಮ ಆಗೆಲ್ಲ ಅವನಿಗೆ ಸಂತೈಸಿ ಬುದ್ಧಿ ಹೇಳಿದ್ದನ್ನ ಮನೇಲೇ ನೋಡಿದ್ವಿ ನಾವು... ಹೀಗಿರುವ ಅಮ್ಮನ ಬಗ್ಗೆ ಅಗೌರವ ಉಂಟಾಗುವುದಾದರೂ ಹೇಗೆ?’

‘ಒಂದು ಮಾತು...ಅವರು ತಮ್ಮ ಪ್ರೊಫೆಷನ್ನಿನಲ್ಲಿ ಏನೆಲ್ಲಾ ಮಾಡ್ತಿದ್ರು ಅಂತ ನಿಮಗೆ ಹೇಗೆ ಗೊತ್ತಾಗ್ತಾ ಇತ್ತು?’
‘ನನ್ನ ಅಮ್ಮನ ಕೆಲಸದ ಬಗ್ಗೆ ನಮಗೆ ಯಾವ ಕೀಳರಿಮೆಯೂ ಇರಲಿಲ್ಲ. ಯಾಕಂದ್ರೆ ನಾವಿದ್ದ ಚಾಳ್ ತುಂಬಾ ಅಂಥವರೇ ಇರುತ್ತಿದ್ದರು. ಗೃಹಸ್ಥರ ಚಾಳಿನಲ್ಲಿ ಹೇಗೆ ದಿನದ ಅಡುಗೆ, ತಿಂಡಿ, ನೆಂಟರು-ಇಷ್ಟರು,

ಗಂಡನ ಬಗ್ಗೆ ಕಂಪ್ಲೇಂಟು ಇತ್ಯಾದಿಗಳನ್ನು ಹೆಂಗಸರು ಹಂಚಿಕೊಳ್ತಾರೋ ಹಾಗೇ ನನ್ನ ಅಮ್ಮನ ಗೆಳತಿಯರೂ ಹೀಗೇ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಯಾರಿಗಾದರೂ ಹುಷಾರಿಲ್ಲ ಅಂದರೆ ಇನ್ನೊಬ್ಬರು ಅಡುಗೆ-ತಿಂಡಿಯ ವ್ಯವಸ್ಥೆ,

ಮಕ್ಕಳನ್ನು ಸ್ಕೂಲಿಗೆ ಕಳಿಸುವ ಜವಾಬ್ದಾರಿ ಎಲ್ಲವನ್ನೂ ಹೊಂದಿಸಿಕೊಂಡುಬಿಡುತ್ತಿದ್ದರು. ಹಾಗಾಗಿ ಚಿಕ್ಕವರಾದ ನಮಗೆ ನಮಗೆ ಯಾವತ್ತೂ ಈ ಜೀವನದ ಬಗ್ಗೆ ತಿರಸ್ಕಾರ ಹುಟ್ಟಲಿಲ್ಲ.’
‘ಅರೆ! ಅಷ್ಟೆಲ್ಲಾ ಮಾಡ್ತಿದ್ರಾ?’

‘ಹೌದು. ಬಡವರು, ನೊಂದವರು ಒಬ್ಬರಿಗೊಬ್ಬರು ಕಷ್ಟದಲ್ಲಿ ನೆರವಾಗುವ ಪ್ರಕ್ರಿಯೆಯೇ ಬಹಳ ಸುಂದರ. ಅದರಲ್ಲಿ ಯಾವ ಪಾಪ-ಪುಣ್ಯಗಳ ಮಾತಿರಲ್ಲ, ಇನ್ನೊಬ್ಬರಿಗೆ ಉಪಕಾರ ಮಾಡ್ತಾ ಇದೀವಿ ಅನ್ನುವ ಅಹಂಕಾರ ಇರಲ್ಲ.

ಎಲ್ಲರೂ ಬಡವರು, ಎಲ್ಲರೂ ಅಸಹಾಯಕರು, ಎಲ್ಲರೂ ಸಮಾಜದಿಂದ ತಿರಸ್ಕರಿಸಲ್ಪಟ್ಟವರು ಹೀಗೆ ಎಲ್ಲದರಲ್ಲೂ ಸಮಾನತೆಯೇ ಇರುವಾಗ ಕೀಳರಿಮೆ ಹುಟ್ಟೋದಾದ್ರೂ ಹೇಗೆ?’
‘ನಿಮ್ಮ ಜಗತ್ತು ಬೇರೆ ಅಂತ ಅನ್ನಿಸೋಕೆ ಶುರುವಾದದ್ದು ಯಾವಾಗ?’

‘ನಾವು ಕೆಲಸಕ್ಕೆ ಹೋಗೋಕೆ ಶುರು ಮಾಡಿದ ಮೇಲೆ. ನಮಗೆ ಆ ಸಮಾಜಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು. ಆದರೆ ಎಲ್ಲರೂ ಆರಾಮಾಗೇ ಇದ್ವಿ. ಅಣ್ಣಂದಿರು ಮದುವೆಯಾದರು. ತಮ್ಮ ಪಾಡಿಗೆ ತಾವು ಹೊರಟರು.

ನಾನು ಅಮ್ಮ ಒಟ್ಟಿಗೆ ಬಹಳ ವರ್ಷ ಇದ್ವಿ. ನನ್ನನ್ನು ಮದುವೆಗೆ ಒಪ್ಪಿಸಲು ಅಮ್ಮ ಬಹಳ ಕಷ್ಟಪಟ್ಟಳು. ಕಡೆಗೂ ನನ್ನ ಮದುವೆಯೊಂದು ಕುಡುಕನೊಬ್ಬನ ಜೊತೆ ದುರ್ಘಟನೆಯಂತೆ ನಡೆದು, ಮುರಿದು ಹೋಗಿ ಮತ್ತೆ ಅಮ್ಮನ ಮನೆಗೆ ಬಂದೆ.

ಅಲ್ಲಿಗೆ ನನ್ನ ಜೀವನದ ಒಂದು ಹಂತ ಮುಗಿದಿತ್ತು. ನಾನು ಅಮ್ಮ ಒಬ್ಬರಿಗೆ ಒಬ್ಬರು ಆಧಾರವಾಗಿ ಬದುಕೋದು ಎನ್ನುವ ಥರ ಒಂದು ಸತ್ಯ ದರ್ಶನವಾಯ್ತು.’

‘ಆಂಟೀ...’ ಎನ್ನುತ್ತಾ ಸರಳಾ ಕೈ ಹಿಡಿದುಕೊಂಡಳು ಸೂಸಿ. ಕೈ ಬಿಡಿಸಿಕೊಳ್ಳುತ್ತಾ ಸರಳಾ ಹೇಳಿದರು. ‘ನನ್ನ ಅಮ್ಮ ಯಾರನ್ನೂ ತಪ್ಪು ದಾರಿಗೆ ಎಳೆಯಲಿಲ್ಲ. ಯಾವ ಗಂಡಸನ್ನೂ ದಿವಾಳಿ ಎಬ್ಬಿಸಲಿಲ್ಲ. ಯಾರಿಗೂ ಮೋಸ ಮಾಡಲಿಲ್ಲ.

ತನಗಾಗಿ ತನ್ನ ಮಕ್ಕಳಿಗಾಗಿ ಜೀವನ ಸಾಗಿಸಿದಳು ಅಂತ ಮಾತ್ರ ನೆನಪಿಟ್ಟುಕೊಂಡಿದ್ದೀನಿ. ನನ್ನ ಪ್ರಕಾರ ವ್ಯಭಿಚಾರ ಅಂದ್ರೆ ನಂಬಿದವರಿಗೆ ಮೋಸ ಮಾಡೋದು – ರಾಜಕಾರಣಿಗಳು ಮಾಡ್ತಾರಲ್ಲ? ಹಾಗೆ... ಕುತ್ತಿಗೆ ಮಟ್ಟ ಇದ್ದರೂ ಮತ್ತೆ ಲಂಚ ತಗೊಳೋದು – ಭ್ರಷ್ಟಾಚಾರ, ಕುತ್ತಿಗೆ ಕುಯ್ಯೋದು, ಹೆಂಡ್ತಿ ಒಡವೆ ತಂದು ಜೂಜು ಆಡೋದು, ರೇಸ್ ಆಡೋದು ಇನ್ನೂ ಏನೇನೋ...

ಅವೆಲ್ಲಾ ಅವಮಾನ ಆದರೂ ಅದನ್ನೆಲ್ಲ ಸಮಾಜ ಸಹಿಸಿಕೊಂಡು ನೋಡುತ್ತೆ. ಒಬ್ಬ ಅಸಹಾಯಕ ಹೆಣ್ಣು ಮಗಳ ಶೀಲ ಮಾತ್ರ ಸಾಮಾಜಿಕ ಆಸ್ತಿಯೇನು? ಅವಳ ಮಕ್ಕಳ ಹಸಿವೆ ಸಮಾಜದ ಜವಾಬ್ದಾರಿ ಅಲ್ಲವೇನು? ಅವಳ ಮಕ್ಕಳು ಕಳ್ಳರಾಗದಂತೆ ನೋಡಿಕೊಳ್ಳುವುದು ಸಮಾಜದ ಹೊಣೆಗಾರಿಕೆ ಅಲ್ಲವೇನು?’
‘ಸಾರಿ ಆಂಟೀ...’

‘ಇನ್ನೂಮ್ಮೆ ನಿನ್ನ ಧರ್ಮಗುರುಗಳು ಪ್ರಾಸ್ಟಿಟ್ಯೂಟ್ಸ್ ಬಗ್ಗೆ ಹಗುರವಾಗಿ ಮಾತಾಡಿದರೆ ಈ ಎಲ್ಲಾ ಪ್ರಶ್ನೆಗಳನ್ನೂ ಕೇಳು. ಜೀಸಸ್ಸು ಮೇರಿ ಮ್ಯಾಗ್ದಲೀನಳನ್ನು ಜನರಿಂದ ರಕ್ಷಿಸಿದಾಗ ಏನು ಹೇಳಿದ್ದರು, ಅದು ನಿಮಗೆ ಅರ್ಥ ಆಗಿದೆಯಾ ಅಂತ ಕೇಳು’

ಜೀಸಸ್ ಹೆಸರು ಕೇಳಿದ ತಕ್ಷಣ ಸೂಸನ್ ಮುಖದ ಬಣ್ಣ ಬದಲಾಯಿತು. ‘ಇದನ್ನೆಲ್ಲಾ ನೀವು ಎಲ್ಲಿ ಕೇಳಿದ್ರಿ ಆಂಟೀ?’

‘ಸ್ಕೂಲಲ್ಲಿ. ನನ್ನ ಅಮ್ಮ ತನ್ನ ದುಡಿಮೆಯ ದುಡ್ಡಲ್ಲಿ ನಮ್ಮ ಫೀಸು ಕಟ್ಟಿ ಕಾನ್ವೆಂಟಿಗೆ ಹಾಕಿದ್ದಳು. ಅವಳ ದುಡ್ಡು ದೊರಕಿಸಿಕೊಟ್ಟ ಜ್ಞಾನ ಇದು. ಈಗ ಹೇಳು, ಈ ಜ್ಞಾನ ಮೈಲಿಗೆನಾ? ವ್ಯಭಿಚಾರದ ಜೀವನ ಅಸಹ್ಯನಾ?

ಅಥವಾ ದೇವರ ಸ್ಥಾನದಲ್ಲಿ ನಿಂತು ಅರೆಬರೆ ಜ್ಞಾನ ಕೊಡೋದು ಕ್ರಿಮಿನಲ್ಲಾ?’ ಸೂಸನ್ ಸುಮ್ಮನೆ ದೂರ ನೋಡಿದಳು. ಚಿತ್ರಾ, ವಿಜಿ ರಮ್ ಬಾಟಲಿ ಹಿಡಿದು ಬರ್ತಾ ಇರೋದು ಕಾಣಿಸಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.