ADVERTISEMENT

ಹೆಗ್ಗೋಡಿನಲ್ಲಿ ನಾಲ್ಕು ದಿನ...

ಪದ್ಮರಾಜ ದಂಡಾವತಿ
Published 19 ಅಕ್ಟೋಬರ್ 2013, 19:30 IST
Last Updated 19 ಅಕ್ಟೋಬರ್ 2013, 19:30 IST
ಹೆಗ್ಗೋಡಿನಲ್ಲಿ ‘ಸಂಸ್ಕೃತಿ ಶಿಬಿರ’ದಲ್ಲಿ ನೀನಾಸಂ ಬಳಗದವರು ಪ್ರದರ್ಶಿಸಿದ ‘ಜುಗಾರಿ ಕ್ರಾಸ್‌’ (ಕಥೆ: ಕೆ.ಪಿ.ಪೂರ್ಣಚಂದ್ರ ತೇಜಸ್ವಿ. ರೂಪಾಂತರ, ನಿರ್ದೇಶನ: ನಟರಾಜ ಹೊನ್ನವಳ್ಳಿ) ನಾಟಕದ ದೃಶ್ಯ.
ಹೆಗ್ಗೋಡಿನಲ್ಲಿ ‘ಸಂಸ್ಕೃತಿ ಶಿಬಿರ’ದಲ್ಲಿ ನೀನಾಸಂ ಬಳಗದವರು ಪ್ರದರ್ಶಿಸಿದ ‘ಜುಗಾರಿ ಕ್ರಾಸ್‌’ (ಕಥೆ: ಕೆ.ಪಿ.ಪೂರ್ಣಚಂದ್ರ ತೇಜಸ್ವಿ. ರೂಪಾಂತರ, ನಿರ್ದೇಶನ: ನಟರಾಜ ಹೊನ್ನವಳ್ಳಿ) ನಾಟಕದ ದೃಶ್ಯ.   

ಹೆಗ್ಗೋಡಿನ ಶಿವರಾಮ ಕಾರಂತ ರಂಗ ಮಂದಿರದಲ್ಲಿ ಇನ್ನೇನು ಸಂಸ್ಕೃತಿ ಶಿಬಿರದ ಮೊದಲ ದಿನದ ನಾಟಕ ಆರಂಭವಾಗಬೇಕು. ರಂಗಮಂದಿರದಲ್ಲಿ ಆಸನಗಳೆಲ್ಲ ಭರ್ತಿಯಾಗಿದ್ದುವು. ಸಹಜವಾಗಿಯೇ ವಿಪರೀತ ಗೌಜು, ಗದ್ದಲ. ವೇದಿಕೆ ಮುಂಭಾಗದಲ್ಲಿ ಒಬ್ಬ ವ್ಯಕ್ತಿ ಬಂದು ನಿಂತರು. ಅವರ ಕೈಯಲ್ಲಿ ಮೈಕ್‌ ಇತ್ತು. ಅವರ ಮೇಲೆ ನಿಧಾನವಾಗಿ, ಅವರನ್ನು ಮಾತ್ರ ಆವರಿಸುವಂತೆ ಬೆಳಕು ಬಿತ್ತು. ಅವರು ಹಾಗೇ ಸುಮ್ಮನೆ ಕೆಲವು ಕ್ಷಣ ನಿಂತರು. ಏನನ್ನೂ ಮಾತನಾಡಲಿಲ್ಲ. ರಂಗಮಂದಿರ ಕಿತ್ತು ಹೋಗುವಂತೆ ಮಾತನಾಡುತ್ತಿದ್ದವರ ಧ್ವನಿ ನಿಧಾನವಾಗಿ ಕಡಿಮೆಯಾಗಿ ಸಂಪೂರ್ಣ ಮೌನ ನೆಲೆಸಿತು. ಮೈಕ್‌ ಹಿಡಿದ ವ್ಯಕ್ತಿ ಮಾತನಾಡಲು ಆರಂಭಿಸಿದರು. ನನ್ನ ಪಕ್ಕದಲ್ಲಿ ಕುಳಿತಿದ್ದ ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಗೋಪಾಲ ಗುರು, ‘ನೈತಿಕ ಶಕ್ತಿ ಎಂದರೆ ಇದು. ನಾನೂ ತರಗತಿಯಲ್ಲಿ ಇದನ್ನು ಆಗಾಗ ಬಳಸುತ್ತೇನೆ’ ಎಂದು ನನಗೆ ಹೇಳಿದರು. ನಮ್ಮ ಮುಂದೆ ಮೈಕ್‌ ಹಿಡಿದುಕೊಂಡು ನಿಂತಿದ್ದವರು ಕೆ.ವಿ.ಅಕ್ಷರ.

ಅಕ್ಷರ ಅವರಿಗೆ ಇಂಥ ಶಕ್ತಿ ಹಾಗೆಯೇ ಸುಮ್ಮನೆ ಬರಲು ಸಾಧ್ಯವಿಲ್ಲ. ಕಳೆದ ಭಾನುವಾರ ಆರಂಭವಾದ ಸಂಸ್ಕೃತಿ ಶಿಬಿರಕ್ಕೆ ನಾನೂ ಹೋಗಿದ್ದೆ. ಹೆಗ್ಗೋಡಿಗೆ ನಾನು ಹೋದುದು ಇದೇ ಮೊದಲು ಅಲ್ಲ. ಶಿಬಿರಕ್ಕೆ ಹೋದುದು ಇದೇ ಮೊದಲು. ಹಾಗೆ ಹೇಳಲು ಕೊಂಚ ಸಂಕೋಚ, ಕೊಂಚ ನಾಚಿಕೆ. ನಾಲ್ಕು ದಿನ ಅಲ್ಲಿ ಇದ್ದು ಬಂದ ಮೇಲೆ ಇದುವರೆಗೆ ಏಕೆ ಹೋಗಲಿಲ್ಲ ಎಂದು ನನ್ನನ್ನೇ ನಾನು ಶಪಿಸಿಕೊಂಡುದಕ್ಕೆ ಲೆಕ್ಕವಿಲ್ಲ.

ಅಕ್ಷರ ಅವರ ತಂದೆ ಕೆ.ವಿ.ಸುಬ್ಬಣ್ಣ ಅಂಥ ಅಪರೂಪದ ಒಂದು ಸಂಸ್ಥೆಯನ್ನು ಅಲ್ಲಿ ಕಟ್ಟಿದ್ದಾರೆ. ಅದನ್ನು ಅಕ್ಷರ ಅಷ್ಟೇ ಶ್ರದ್ಧೆಯಿಂದ ಮುಂದುವರಿಸಿಕೊಂಡು ಹೊರಟಿದ್ದಾರೆ. ಅಷ್ಟು ಪುಟ್ಟ ಊರಿನಲ್ಲಿ ಕಳೆದ ಮೂರು ದಶಕಗಳಿಗೂ ಹೆಚ್ಚು ಅವಧಿಯಿಂದ ಎಷ್ಟು ಉನ್ನತ ಮಟ್ಟದ ಚರ್ಚೆ, ಸಂವಾದ, ವಿಚಾರ ಮಂಥನ ನಡೆಯುತ್ತಿದೆ ಎಂದರೆ, ಆ ಊರು ಈಗ ಇಡೀ ಜಗತ್ತಿನ ಗಮನ ಸೆಳೆದಿದೆ. ಈ ಸಾರಿಯೂ ಅಲ್ಲಿ ಬರೀ ಕರ್ನಾಟಕ ಮಾತ್ರವಲ್ಲ, ದೂರದ ಪಶ್ಚಿಮ ಬಂಗಾಲ, ದೆಹಲಿ, ಅಷ್ಟೇ ಅಲ್ಲ ಅಮೆರಿಕೆಯ ಪ್ರತಿನಿಧಿಯೂ ಬಂದಿದ್ದರು.

ಮೈಸೂರು ವಿಶ್ವವಿದ್ಯಾಲಯದಿಂದ 50ರ ದಶಕದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದ ಕೆ.ವಿ.ಸುಬ್ಬಣ್ಣ ಅವರಿಗೆ ತಮ್ಮ ವಾರಿಗೆಯ ಯು.ಆರ್‌. ಅನಂತಮೂರ್ತಿ ಅವರ ಹಾಗೆ ಎಲ್ಲಿಯಾದರೂ ಕಾಲೇಜಿನಲ್ಲಿ ಅಧ್ಯಾಪಕ ನೌಕರಿ ಹಿಡಿಯುವುದು ಕಷ್ಟವಿರಲಿಲ್ಲ. ಅವರು ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯೇ ಆಗಿದ್ದರು.

ಆದರೆ ಅವರು ನೌಕರಿ ಮಾಡುತ್ತ ಊರೂರು ಅಲೆದಿದ್ದರೆ ಅವರಿಗೆ ಇದ್ದ ಅಡಿಕೆ ತೋಟ ಅನಾಥವಾಗುತ್ತಿತ್ತು. ಕುಟುಂಬಕ್ಕೆ ಒಬ್ಬನೇ ಮಗನಾಗಿದ್ದ ಅವರು ಅಡಿಕೆ ತೋಟವನ್ನೇ ಆಯ್ದುಕೊಳ್ಳಬೇಕಿತ್ತು. ಅದರ ಜತೆಗೆ ಅವರು ಹೊರಗಿನ ಜಗತ್ತನ್ನು ತಮ್ಮ ಊರಿಗೆ ತರಬೇಕಿತ್ತು. ಅದು ಅವರಿಗೆ ವೈಯಕ್ತಿಕ ಜರೂರು ಆಗಿದ್ದಂತೆಯೇ ಆ ಊರಿನ ಜರೂರು ಕೂಡ ಆಗಿತ್ತು. ಅವರಿಗೆ ಶಿವರಾಮ ಕಾರಂತರು ಪುತ್ತೂರಿನಲ್ಲಿ ಮಾಡಿದ ಬಾಲವನದ ಪ್ರಯೋಗ ಮಾದರಿಯಾಗಿತ್ತು. ಕನ್ನಡ ಸಾಹಿತ್ಯದಲ್ಲಿ ಹೀಗೆ ‘ಮರಳಿ ಮಣ್ಣಿಗೆ’ ಹೋಗುವ ಕಥಾನಕ ನಿದರ್ಶನಗಳೂ ಸುಬ್ಬಣ್ಣ ಅವರ ಬೆನ್ನ ಹಿಂದೆ  ಇದ್ದುವು. ಊರಿಗೆ ಮರಳಿ ಬಂದ ಕೆಲವೇ ವರ್ಷಗಳಲ್ಲಿ ಅಕ್ಷರ ಪ್ರಕಾಶನ  ಪ್ರಾರಂಭಿಸುವ ಮೂಲಕ ಸುಬ್ಬಣ್ಣ ಕನ್ನಡದ ಎಲ್ಲ ಮುಖ್ಯ ಲೇಖಕರ ಪುಸ್ತಕಗಳು ಹೆಗ್ಗೋಡಿನಿಂದ ಪ್ರಕಟವಾಗುವಂತೆ ಮಾಡಿದರು.

ಮೊದಲೇ ಅವರ ತಂದೆ ಕಾಲದಿಂದಲೂ ಊರಿನಲ್ಲಿ ಇದ್ದ ನೀನಾಸಂನ ಚಟುವಟಿಕೆಗಳಿಗೆ ಹೊಸ ಆಯಾಮ ಕೊಟ್ಟು ಅದರ ಆಶ್ರಯದಲ್ಲಿ ರಂಗ ಚಟುವಟಿಕೆ, ಸಿನಿಮಾಗಳ ಪ್ರದರ್ಶನ, ನಾಟಕ ಮತ್ತು ಸಿನಿಮಾಗಳ ರಸಗ್ರಹಣ ಶಿಬಿರಗಳನ್ನೂ ಏರ್ಪಾಡು ಮಾಡಿದರು. ಬಹುಶಃ ಸತ್ಯಜಿತ್‌ ರೇ, ಬರ್ಗಮನ್‌, ಅಕಿರಾ ಕುರಸೋವ ಅವರಂಥ  ಸಾರ್ವಕಾಲಿಕ ಶ್ರೇಷ್ಠರ ಸಿನಿಮಾಗಳನ್ನು ನೋಡಿದ ಮೊದಲ ಹಳ್ಳಿಗರು ಎಂದರೆ ಹೆಗ್ಗೋಡಿನ ಜನರೇ ಇರಬೇಕು.

ಅಲ್ಲಿನ ಜನರಿಗೆ ಸಿನಿಮಾ, ನಾಟಕ ಎಂದರೆ ಎಂಥ ಹುಚ್ಚು ಎಂದರೆ, ಹಳ್ಳಿಯ ಪ್ರತಿಯೊಬ್ಬನಲ್ಲಿಯೂ ಅಭಿನಯ ಎಂಬುದು ರಕ್ತಗತವಾಗಿ ಬಿಟ್ಟಿದೆ. ಅವರೇನು ವರ್ಷಗಟ್ಟಲೆ ತರಬೇತಿ ಪಡೆಯುವುದಿಲ್ಲ; ತಾಲೀಮು ಮಾಡುವುದಿಲ್ಲ. ಪ್ರತಿವರ್ಷ ಸಂಸ್ಕೃತಿ ಶಿಬಿರದಲ್ಲಿ ‘ತಿರುಗಾಟ’ದ ನಾಟಕಗಳ ಜತೆಗೆ ಊರಿನವರೇ ಆಡುವ ಒಂದು ನಾಟಕವೂ ಇರುತ್ತದೆ.

ಊರವರೆಲ್ಲ ಸೇರಿಕೊಂಡು ‘ತಿರುಗಾಟ’ಕ್ಕಾಗಿ ತಾಲೀಮು ಮಾಡಿದ ನಟ ನಟಿಯರ ಹಾಗೆಯೇ, ಅಷ್ಟೇ ಚೆನ್ನಾಗಿ ನಾಟಕ ಆಡುತ್ತಾರೆ. ಆ ನಾಟಕ ನೋಡಲು ಊರಿನ ಮಂದಿಯೆಲ್ಲ ಬರುತ್ತಾರೆ. ಎಲ್ಲರೂ ಹಣ ಕೊಟ್ಟು ಟಿಕೆಟ್‌ ಕೊಳ್ಳುತ್ತಾರೆ. ಕುರ್ಚಿಯೇ ಬೇಕು ಎಂದು ಹಟ ಹಿಡಿಯುವುದಿಲ್ಲ. ರಂಗ ಮಂದಿರದ ಮುಂಭಾಗದಲ್ಲಿ ನೆಲದ ಮೇಲೆ, ಕುರ್ಚಿಗಳ ನಡುವೆ, ಬಾಗಿಲ ಮೆಟ್ಟಿಲುಗಳ ಮೇಲೆ ಕುಳಿತುಕೊಂಡು ನಾಟಕ ನೋಡುತ್ತಾರೆ. ಅವರ ಜತೆಗೆ ಅಕ್ಷರ ಕೂಡ ಕುಳಿತುಕೊಂಡಿರುತ್ತಾರೆ. ಅವರ ಹೆಂಡತಿಯೂ ಅಷ್ಟೇ! ಬಹುಶಃ ಒಂದು ಸಂಸ್ಥೆಯ ನಿರ್ದೇಶಕ ಮತ್ತು ಅವರ ಹೆಂಡತಿ ಇಷ್ಟು ಸರಳವಾಗಿರುವುದು ಹೆಗ್ಗೋಡಿನಲ್ಲಿ ಮಾತ್ರ ಸಾಧ್ಯ ಅನಿಸುತ್ತದೆ. ಇಲ್ಲವಾದರೆ ಅಂಥವರಿಗಾಗಿ ಎಷ್ಟು ಕುರ್ಚಿಗಳನ್ನು ಕಾದಿರಿಸಿಕೊಂಡು ಎಷ್ಟು ಜನರು ಕಾಯುತ್ತ ಇರುತ್ತಾರೋ ಏನೋ?

ಸಂಸ್ಕೃತಿ ಶಿಬಿರದ ಗೋಷ್ಠಿಗಳಲ್ಲಿ ಕೂಡ ಅಷ್ಟೇ,  ಅಕ್ಷರ ಎಲ್ಲಿಯೋ ಕಂಬಕ್ಕೆ ಬೆನ್ನು ಆನಿಸಿಕೊಂಡು ಎಲೆ ಅಡಿಕೆಯ ಸಂಚಿಯಿಂದ ಅಡಿಕೆ ತೆಗೆದು ಅಡಕೊತ್ತಿನಿಂದ ಕತ್ತರಿಸುತ್ತ, ಪುಟ್ಟ ಪುಟ್ಟ ಎಲೆಗಳನ್ನು ಸವರುತ್ತ, ಅದಕ್ಕೆ ಸುಣ್ಣ ಹಚ್ಚುತ್ತ, ಒಂದಿಷ್ಟು ತಂಬಾಕು ಸೇರಿಸುತ್ತ ನಿರಂತರವಾಗಿ ಮೆಲ್ಲುತ್ತಾ ಇರುತ್ತಾರೆ. ಅವರು ಕುರ್ಚಿಗಾಗಿ ಒಂದು ದಿನವೂ ತಡಕಾಡಿದ್ದು ನನಗೆ ಕಾಣಲಿಲ್ಲ.

ಬಹುಶಃ ಅವರು ಇರುವುದೇ ಹಾಗೆ ಅನಿಸುತ್ತದೆ. ಒಂದು ಸಂಸ್ಥೆ ಮತ್ತು ಅದರ ಪದಾಧಿಕಾರಿಗಳು ನಾಡಿನ ತುಂಬ ಮತ್ತು ಅದರ ಹೊರಗಡೆ ಪ್ರಭಾವ ಬೀರುವುದು ಹೀಗೆ ಸರಳವಾಗಿರುವ ಮೂಲಕ,   ಕ್ರಿಯಾಶೀಲವಾಗಿರುವ ಮೂಲಕ ಮತ್ತು ಅದಕ್ಕಿಂತ ಹೆಚ್ಚಾಗಿ ಸದಾ ಚಿಂತನಶೀಲವಾಗಿರುವ ಮೂಲಕ. ಇಲ್ಲವಾದರೆ ಆ ಸಂಸ್ಥೆ ಇಷ್ಟು ಹೆಸರು ಮಾಡಲು ಸಾಧ್ಯವಿರಲಿಲ್ಲ. ನಿಜವಾದ ಅರ್ಥದಲ್ಲಿ ಸಂಸ್ಕೃತಿಯ ಹುಡುಕಾಟದ ಮತ್ತು ಅದರ ವಿಸ್ತರಣೆಯ ಕೇಂದ್ರವಾಗಲೂ ಸಾಧ್ಯವಿರಲಿಲ್ಲ.

ಇದೆಲ್ಲ ಅಲ್ಲಿ ಹೇಗೆ ಸಾಧ್ಯವಾಯಿತು ಎಂದರೆ ಅದೆಲ್ಲ ಒಂದು ದಿನದಲ್ಲಿ ಆದ ಮಾತಲ್ಲ. ಸುಬ್ಬಣ್ಣ 1957ರಲ್ಲಿಯೇ ಅಕ್ಷರ ಪ್ರಕಾಶನ ಪ್ರಾರಂಭ ಮಾಡಿದರು. ಆದರೆ, 1980ರವರೆಗೆ ತಾವು ಏನೂ ಬರೆಯಲಿಲ್ಲ. ಅವರು ಬೇರೆಯವರಿಂದ ಬರೆಸಿದರು. ಅವರ ಪ್ರಕಾಶನಕ್ಕೆ ಬರೆಯುವುದು ಒಂದು ಹೆಮ್ಮೆ ಎನ್ನುವಂಥ ವಾತಾವರಣ ನಿರ್ಮಿಸಿದರು.

ಅವರು ಹೀಗೆ ಹಿಂದೆ ನಿಂತು ಸಂಸ್ಥೆಯನ್ನು ಮುಂದೆ ನಡೆಸಿದರು ಎಂದೇ ಅವರ ಜತೆಗೆ ಹೆಗಲು ಕೊಡಲು ಹಲವರು ಮುಂದೆ ಬಂದರು. ಈಗಲೂ ಅಕ್ಷರ ಕರೆದರೆ ಸ್ವಂತ ಖರ್ಚು ಹಾಕಿಕೊಂಡು ಹಲವರು ವಿದ್ವಾಂಸರು, ಚಿಂತಕರು ಅಲ್ಲಿಗೆ ಬರುತ್ತಾರೆ. ಬಂದು ಉಪನ್ಯಾಸ ಕೊಡುತ್ತಾರೆ. ಒಂದು ವೇಳೆ ಸಂಭಾವನೆ ಕೊಟ್ಟರೆ ಅದನ್ನು ಸಂಸ್ಥೆಗೇ ವಾಪಸು ದೇಣಿಗೆ ಎಂದು ಬರೆಸಿ ಹೋಗುವವರೂ ಅಲ್ಲಿಗೆ ಬರುತ್ತಾರೆ. ಸಾಹಿತಿಗಳು, ಕಲಾವಿದರು ಬರೀ ಸಂಭಾವನೆಯ ಚೆಕ್ಕಿಗಾಗಿ ಕಾಯುತ್ತ ಇರುತ್ತಾರೆ ಎಂಬುದು ಹೆಗ್ಗೋಡಿನ ವಿಚಾರದಲ್ಲಿಯಂತೂ ನಿಜವಲ್ಲ!

ಬರೀ ಸಾಹಿತಿಗಳು ಮಾತ್ರವಲ್ಲ, ಸಂಸ್ಕೃತಿ ಶಿಬಿರದಲ್ಲಿ ಭಾಗವಹಿಸಲು ಆಸಕ್ತ ಹುಡುಗ, ಹುಡುಗಿಯರು, ಟೆಕ್ಕಿಗಳು ಸಾಲುಗಟ್ಟಿ ನಿಲ್ಲುವುದು, ರಜೆ ಹಾಕಿ ಬರುವುದು, ಚರ್ಚೆಗಳಲ್ಲಿ ಭಾಗವಹಿಸುವುದು, ಹಿರಿಯರ ಜತೆಗೆ ಒಡನಾಡಬೇಕು ಎನ್ನುವುದು,  ಅವರ ಮಾತು ಕೇಳಬೇಕು ಎನ್ನುವುದು ಇಲ್ಲಿ ಮಾತ್ರ ಕಾಣುವ ಒಂದು ಸೋಜಿಗದ ವಿದ್ಯಮಾನ.

ಮಾತು ಬೇಸರವಾಗುವುದೇ ಹೆಚ್ಚು. ಆದರೆ, ಒಂದು ಮಾತನ್ನು ಕಳೆದುಕೊಂಡರೂ ಏನೋ ಅಮೂಲ್ಯವಾದುದು ಕಳೆದು ಹೋಗುತ್ತದೆ. ಅದನ್ನು ಧ್ಯಾನವಿಟ್ಟು ಕೇಳಬೇಕು, ಮನಸ್ಸನ್ನು ತುಂಬಿಕೊಳ್ಳಬೇಕು ಎಂದು ಅನಿಸುವುದೂ ಹೆಗ್ಗೋಡಿನಲ್ಲಿಯೇ. ಇದೆಲ್ಲ ಹೇಗೆ ಸಾಧ್ಯ? ನಮ್ಮ ಉದ್ದೇಶಗಳಲ್ಲಿ ಪ್ರಾಮಾಣಿಕರಾಗಿದ್ದರೆ, ಖರ್ಚು ವೆಚ್ಚಗಳಲ್ಲಿ ಪಾರದರ್ಶಕವಾಗಿದ್ದರೆ, ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೇ ಇದ್ದರೆ, ನಿರಂತರವಾಗಿ ಸೃಜನಶೀಲವಾಗಿದ್ದರೆ, ವ್ಯಸನ ಎನ್ನುವಂಥ ಸಮಯ ನಿಷ್ಠೆ ಇದ್ದರೆ ಇದೆಲ್ಲ ಸಾಧ್ಯ ಎನಿಸುತ್ತದೆ.

ಆದರೆ, ಅದನ್ನು ಸಾಧಿಸಲು ವರ್ಷಗಳೇ ಬೇಕಾಗುತ್ತವೆ. ಸುಬ್ಬಣ್ಣ ಅವರಾಗಲೀ, ಅಕ್ಷರ ಅವರಾಗಲೀ ಸರ್ಕಾರದಿಂದ ಅನುದಾನ ತೆಗೆದುಕೊಂಡಿಲ್ಲ ಎಂದು ಅಲ್ಲ. ಅದಕ್ಕಾಗಿ ಅವರು ಯಾರಿಗೂ ಲಂಚ ಕೊಟ್ಟಿಲ್ಲ. ಸುಬ್ಬಣ್ಣ ಇನ್ನೂ ಬದುಕಿದ್ದಾಗ ಎರಡು ವರ್ಷ ಅನುದಾನ ಬರಲೇ ಇಲ್ಲ. ಹಣ ಅಲ್ಲಿಯೇ ಬಿದ್ದುದನ್ನು ನೋಡಿ ಒಬ್ಬ ಅಧಿಕಾರಿ ಎರಡು ಪರ್ಸೆಂಟ್‌ ಬಿಟ್ಟುಕೊಟ್ಟರೆ ಹಣ ಬಿಡುಗಡೆ ಮಾಡುತ್ತೇನೆ ಎಂದ. ಸುಬ್ಬಣ್ಣ ‘ಕೊಡುವುದಿಲ್ಲ’ ಎಂದರು. ಎರಡು ವರ್ಷ ಸಾಲ ಸೋಲ ಮಾಡಿ ಸಂಸ್ಥೆ ನಡೆಸಿದರು. ನಂತರ ಹಣ ಬಂತು.

ಈ ಸಾರಿಯ ಶಿಬಿರಕ್ಕೆ ಒಂದು ಮಧ್ಯಾಹ್ನ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಬಂದು ಹೋಗುತ್ತಾರೆ ಎಂದು ಸುದ್ದಿ ಬಂತು. ಅವರು ಅದೇ ಜಿಲ್ಲೆಯವರು. ಮಧ್ಯಾಹ್ನ ಊಟದ ಬಿಡುವಿನ ಸಮಯದಲ್ಲಿ ಅವರ ಕಾರು ಬಂತು. ಅವರಿಗೆ ಗೋಷ್ಠಿಯಲ್ಲಿ ಕುಳಿತುಕೊಳ್ಳಲು ವೇಳೆ ಇರಲಿಲ್ಲ. ಇರಬೇಕಿತ್ತು ಅಂದುಕೊಂಡೆ. ಅವರು ಹೊರಟು ನಿಂತಾಗ ‘ನಿಮ್ಮ ಜತೆಗೆ ಮಾತನಾಡಬೇಕು’ ಎಂದೆ. ಅವರೇ ನನ್ನ ಕೈ ಹಿಡಿದು ಆಚೆ ಕರೆದುಕೊಂಡು ಹೋಗಿ ‘ಏನು’ ಎಂದರು. ‘ನೀನಾಸಂ ನಿಮ್ಮ ಜಿಲ್ಲೆಗೆ ಮಾತ್ರವಲ್ಲ, ಇಡೀ ನಾಡಿಗೆ, ದೇಶಕ್ಕೆ ಹೆಮ್ಮೆ ಎನಿಸುವಂಥ ಸಂಸ್ಥೆ. ತುಂಬ ಕಟ್ಟು ನಿಟ್ಟಾಗಿ, ಪ್ರಾಮಾಣಿಕವಾಗಿ ಅವರು ಸಂಸ್ಥೆಯನ್ನು ನಡೆಸಿಕೊಂಡು ಹೊರಟಿದ್ದಾರೆ.  ಇಡೀ ಜಗತ್ತಿನ ಗಮನವನ್ನು ಸೆಳೆಯುವಂಥ ಕೆಲಸವನ್ನು ಅವರು ಇಲ್ಲಿ ಮಾಡಿದ್ದಾರೆ. ಇಲ್ಲಿಯವರೆಗೆ ಬಂದು ನೀವು ಅಕ್ಷರ ಅವರಿಗೆ ಏನಾದರೂ ಸಹಾಯ ಬೇಕೇ ಎಂದು ಕೇಳದೆ ಹೋದರೆ ಹೇಗೆ’ ಎಂದೆ. ‘ಅದನ್ನು ಅಕ್ಷರ ಒಪ್ಪಿಕೊಳ್ಳದೇ ಇರಬಹುದು. ಅವರನ್ನು ಕೇಳಿ ನೋಡಿ’ ಎಂದೂ ಸೇರಿಸಿದೆ.

ಯಾರಾದರೂ ಮಂತ್ರಿಗಳು ಬಂದರೆ ಅವರನ್ನು ಓಲೈಸಲು ಸಾವಿರ ಮಂದಿ ನಿಂತಿರುತ್ತಾರೆ. ನನ್ನ ಕಣ್ಣ ಮುಂದೆಯೇ ಗೋಷ್ಠಿಗಳ ಸಂಚಾಲಕ ಟಿ.ಪಿ.ಅಶೋಕ ಮತ್ತು ಅಕ್ಷರ ‘ಕಾರ್ಯಕ್ರಮಕ್ಕೆ ತಡವಾಗುತ್ತದೆ’ ಎಂದು ಮಂತ್ರಿಗೆ ವಿದಾಯ ಹೇಳಿ ಅದು ನಡೆಯುವ ಕಟ್ಟಡಕ್ಕೆ  ಹೊರಟೇ ಹೋಗಿದ್ದರು!

ಕಿಮ್ಮನೆ ನನ್ನ ಕೈ ಹಿಡಿದುಕೊಂಡು, ‘ಬನ್ನಿ ಅಕ್ಷರ ಅವರ ಜತೆಗೆ ಮಾತನಾಡೋಣ’ ಎಂದು ಗೋಷ್ಠಿಗಳು ನಡೆಯುತ್ತಿದ್ದ ಕಟ್ಟಡದವರೆಗೆ ನಡೆದು ಬಂದರು. ಅಕ್ಷರ ತಾವೇ ನಿರ್ದೇಶಿಸಿದ ಪುಟ್ಟ ನಾಟಕದ ಪ್ರದರ್ಶನಕ್ಕೆ ಸಿದ್ಧತೆ ಮಾಡುತ್ತಿದ್ದರು. ಅವರಿಬ್ಬರೂ ಮಾತನಾಡಿದರು. ಅವರಿಬ್ಬರೇ ಮಾತನಾಡಲಿ ಎಂದು ದೂರ ನಿಂತಿದ್ದ ನನ್ನನ್ನು ಸಚಿವರೇ ಹತ್ತಿರ ಕರೆದರು.

ಅಕ್ಷರ ಏನು ಕೇಳಿದರು, ಕಿಮ್ಮನೆ ಏನು ಹೇಳಿದರು ಎನ್ನುವುದು ಮುಖ್ಯವಲ್ಲ. ಅದು ಅವರಿಬ್ಬರ ನಡುವೆ ನಡೆದ ಮಾತು. ಆದರೆ, ಸರ್ಕಾರದ ಬಳಿ ಬರುವವರು, ಕೈ ಒಡ್ಡಿ ಕೇಳುವವರು  ಬಹಳ ಮಂದಿ ಇರುತ್ತಾರೆ. ಆದರೆ, ಸರ್ಕಾರವೇ ಕೆಲವರ ಹತ್ತಿರ ಹೋಗಬೇಕಾಗುತ್ತದೆ.  ನಿಮಗೆ ಏನು ಬೇಕು ಎಂದು ಕೇಳಬೇಕಾಗುತ್ತದೆ. ಅವರು ಕೇಳಿದ್ದನ್ನು ಮಾಡಿಕೊಡುವುದು  ತನ್ನ ಕರ್ತವ್ಯ ಎಂದು ಭಾವಿಸಬೇಕಾಗುತ್ತದೆ. ಹೆಗ್ಗೋಡಿನ ನೀನಾಸಂ ಅಂಥ ಒಂದು ಸಂಸ್ಥೆ. ಕಿಮ್ಮನೆ ಅವರಂಥ ಸರಳ ಸಚಿವರಿಗೆ ಇದು ಅರ್ಥವಾಗುತ್ತದೆ ಎಂದು ಅಂದುಕೊಳ್ಳುತ್ತೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.