ADVERTISEMENT

ಲಲ್ಲೆಮಾತು

ಓ.ಎಲ್.ನಾಗಭೂಷಣ ಸ್ವಾಮಿ
Published 4 ಫೆಬ್ರುವರಿ 2012, 19:30 IST
Last Updated 4 ಫೆಬ್ರುವರಿ 2012, 19:30 IST

ಮಾತಿನ ತಾನೇ ಒಂದು ಖುಷಿಯಾಗಿರುವ ಬಗೆ; ಹೊಸ ಜೀವದೊಡನೆಯೂ, ಒಲಿದ ಜೀವದೊಡನೆ ಆಡುವ ಕೇಳಿಯಲ್ಲಿಯೂ ಅರಳುವ ಮಾತಿನ ರೀತಿ.

ಇದೊಂದು ಆಶ್ಚರ್ಯ. ಎದುರಿಗೊಂದು ಕೂಸು ಇರುವಾಗ ದೊಡ್ಡವರೆಲ್ಲ ಮಾತಾಡುವ ರೀತಿ ಆಶ್ಚರ್ಯ. ದೊಡ್ಡವರಾದ ಮೇಲೆ ಪರಸ್ಪರ ಮಾತಾಡಿಕೊಳ್ಳಲು ಮಾತಿಗೊಂದು ವಿಷಯ ಬೇಕು; ಕೂಸಿನೊಡನೆ ಮಾತಾಡಲು ಕೂಸು ಇದ್ದರೆ ಸಾಕು.

ಮನೆಯಲ್ಲೊಂದು ಮಗುವಿದ್ದರೆ ಮನೆಯವರೆಲ್ಲ ಮಕ್ಕಳೇ ಆಗುತ್ತಾರೆ ಅನ್ನುವಂಥ ಮಾತೊಂದು ಮಾಸ್ತಿಯವರ ಬರವಣಿಗೆಯಲ್ಲಿ ಎಲ್ಲೋ ಓದಿದ ನೆನಪು. ತೊಟ್ಟಿಲ ಕಂದನೊಡನೆ ನಾವೆಲ್ಲ ಆಡುವ ಮಾತಿನ ರೀತಿಯನ್ನು ಮನಸ್ಸಿಗೆ ತಂದುಕೊಳ್ಳಿ. ಅದನ್ನು ಹಾಗೇ ಯಾವ ಭಾಷೆಯಲ್ಲೂ `ಅರ್ಥಪೂರ್ಣ~(!)ವಾಗಿ ಬರೆದು ತೋರಿಸುವುದಕ್ಕೆ ಆಗುವುದೇ ಇಲ್ಲ.

ಚೀಚಿಚಿಚಿ, ಲಿಲಿಲಿ, ಅಲಲಲಲಲಾ ಓನಪ್ಪಾ, ನಗತಾಆಆಆಆ ಇದೀೀೀೀಯಾಆಆಆಆ ಇತ್ಯಾದಿ ಬರೆದರೆ ವಿಚಿತ್ರವಾಗಿ ಕಾಣಿಸುತ್ತದೆ. ನಮ್ಮ ಬುದ್ಧಿ ಎಚ್ಚರವಾಗಿದ್ದರೆ ಆಡುವುದು ಕೂಡ ವಿಚಿತ್ರವೇ ಅನ್ನಿಸಬಹುದು. ಕೂಸಿನೊಡನೆ ಆಡುವ ಮಾತಿನ ರೀತಿ ದೊಡ್ಡವರೊಡನೆ ಆಡುವ ಮಾತಿನ ರೀತಿಗಿಂತ ತೀರ ತೀರ ಬೇರೆ ಅನ್ನಿಸುವ ರೂಪ. ಸುಮಾರು ಎಪ್ಪತ್ತು ಎಂಬತ್ತು ವರ್ಷ ಸಂಶೋಧನೆ ನಡೆಸಿದ ವಿಜ್ಞಾನಿಗಳು ಮನುಷ್ಯರಾಡುವ ಎಲ್ಲ ಭಾಷೆಗಳಲ್ಲೂ ಲಲ್ಲೆಮಾತಿನ ರಚನೆ ಒಂದೇ ಥರ ಇರುತ್ತದೆ, ಈ ಥರದ ಮಾತಿನ ಉದ್ದೇಶಗಳೂ ಸಮಾನವಾಗಿರುತ್ತವೆ, ಬಳಸುವ ದನಿ, ಪದ, ವಾಕ್ಯರಚನೆಗಳು ಒಂದೇ ಥರ ಇರುತ್ತವೆ ಇತ್ಯಾದಿ ತೀರ್ಮಾನಗಳಿಗೆ ತಲುಪಿದ್ದಾರೆ.

ಮನುಷ್ಯರು ಮಾತ್ರವಲ್ಲ ಮರಿಗಳೊಡನೆ ವ್ಯವಹರಿಸುವಾಗ ಅಪ್ಪ ಕೋತಿ ಅಮ್ಮ ಕೋತಿಗಳೂ ಮಾಮೂಲಿಗಿಂತ ಬೇರೆ ಥರ ದನಿಮಾಡುತ್ತವೆ ಅನ್ನುತ್ತಾರೆ. ಮರಿ ಕೋತಿಯೊಡನೆ ಮೃದು ದನಿಯಲ್ಲಿ ಮೂಗಿನಿಂದ ಮಾತಾಡಿದ ಹಾಗಿದ್ದರೆ ದೊಡ್ಡ ಕೋತಿಯ ಜೊತೆಯಲ್ಲಿ ಗಂಟಲಿನಿಂದ ಸದ್ದು ಹೊರಡಿಸಿದ ಹಾಗೆ ಇರುತ್ತದಂತೆ. ನಮ್ಮ ನಿಮ್ಮ ಮಾಮೂಲು ಭಾಷೆ ಅಭ್ಯಾಸದ ಹಳಿಗಳ ಮೇಲೆ ಸಾಗುವ ಶಬ್ದ, ಪದ, ವಾಕ್ಯಗಳ ಬಂಡಿಗಳ ರೈಲು ಇದ್ದ ಹಾಗೆ. ಲಲ್ಲೆಮಾತು ಇದೆಯಲ್ಲ ಅದರ ಉಲಿ, ದನಿ, ಪದ, ಎಲ್ಲವೂ ಬಿಡಿಬಿಡಿಯಾಗಿ ಹಾರಾಡುವ ಹಕ್ಕಿಗಳ ಹಾಗೆ; ವಾಕ್ಯಗಳು ನೆಲದ ಮೇಲೆ ಕುಪ್ಪಳಿಸುವ ಗುಬ್ಬಚ್ಚಿಗಳ ಹಾಗೆ.

ನಿಮ್ಮ ಮಾತನ್ನು ಏರು ದನಿಯಲ್ಲಿ ಶುರುಮಾಡಿ. ಪ್ರತಿಯೊಂದು ಪದದ ಕೊನೆಯ ಸ್ವರವನ್ನು ಉದ್ದಕ್ಕೆ, ಊದ್ದಕ್ಕೆ ಎಳೆಯಿರಿ. ಒಂದೇ ಪದವನ್ನು ಮೂರು ಮೂರು ಸಾರಿ ಹೇಳಿ. ಮಗುವಿಗೆ ಮುತ್ತಿಡುವಾಗ ಮಾಡುತ್ತೀರಲ್ಲಾ ಹಾಗೆ ತುಟಿಗಳನ್ನು ಸಾಧ್ಯವಾದಷ್ಟೂ ಮುಂದೆ ಮಾಡಿ. ಚಿನ್ನಾ ಪುಟ್ಟೂ ಓನಮ್ಮಾ ಅನ್ನುವುದನ್ನು ಹೀಗೆ ಹೇಳಿ ನೋಡಿ. ಕೂಸಿನೊಡನೆ ಲಲ್ಲೆಮಾತು ಆಡುವಾಗ ಹೀಗೆ ಆಡುತ್ತೇವೆ.

ಇದೇ ಕ್ರಮದಲ್ಲಿ ಬೀದಿಯಲ್ಲಿ ಹೋಗುತ್ತಿರುವ ಗೆಳೆಯನನ್ನು ಮಾತಾಡಿಸುವುದನ್ನು ಕಲ್ಪಿಸಿಕೊಳ್ಳಿ. `ಕುಮಾರಾ, ಕುಮಾರಾ ಕುಮಾರಾ, ಮನೇಗೆ ಬರತೀಯಾ, ಮನೇಗೆ ಬರತೀಯಾ, ಮನೇಗೆ ಬರತೀಯಾ?~- ನಿಮಗೇನೋ ಆಗಿದೆ ಅಂದುಕೊಳ್ಳುತ್ತಾರೆ ಬೀದಿಯ ಜನ. ದೊಡ್ಡವರೊಡನೆ ಆಡುವ ಮಾತಿನ ಕ್ರಮ ಮಕ್ಕಳೊಡನೆ ಅಸಹಜ, ಮಕ್ಕಳೊಡನೆ ಆಡುವ ಲಲ್ಲೆಮಾತಿನ ಕ್ರಮ ದೊಡ್ಡವರೊಡನೆ ಅಸಹಜ.

ಲಲ್ಲೆಮಾತನ್ನು ಕುರಿತು ಸಂಶೋಧನೆ ದೊಡ್ಡದಾಗೇ ನಡೆದಿದೆ. ಮನಶ್ಶಾಸ್ತ್ರಜ್ಞರು, ಭಾಷಾಶಾಸ್ತ್ರಜ್ಞರು, ಶಿಶು ತಜ್ಞರು ಎಲ್ಲ ಇದರಲ್ಲಿ ತೊಡಗಿಕೊಂಡಿದ್ದಾರೆ. ಲಲ್ಲೆಮಾತು ಅನ್ನುವುದಕ್ಕೆ ಇನ್‌ಫ್ಯಾಂಟ್ ಡೈರೆಕ್ಟೆಡ್ ಸ್ಪೀಚ್ ಅನ್ನುವ ನಾಲಗೆ ಹೊರಳದ ಹೆಸರನ್ನೂ ಇಟ್ಟಿದ್ದಾರೆ. ವಿದ್ವತ್ ದೈತ್ಯರ ಎದುರಿಗೆ ಮಾಮೂಲಿ ಭಾಷೆಯಾಡುವ ನಾವು ನೀವು ಹಸುಕಂದಮ್ಮಗಳು. ಅವರೆಲ್ಲ ತಯಾರಿಸಿರುವ ಜ್ಞಾನಪಾಕವನ್ನು ಮಗುವಿಗೆ ಅರಗುವ `ಮಮ್ಮು~ ಮಾಡಲಾಗುತ್ತದೋ ನೋಡೋಣ.

ಕೂಸುಗಳು ಕಂಡಾಗ ಯಾಕೆ ಹೀಗೆ ಮಾತಾಡುತ್ತೇವೆ? ನಮಗೆ ಮಗುವಿನ ಬಗ್ಗೆ ಪ್ರೀತಿ ಇದೆ ಅನ್ನುವುದು ಸರಿ. ಅವಕ್ಕೆ ಭಾಷೆ ಬರುವುದಿಲ್ಲ ಅಷ್ಟೇ ಅಲ್ಲ ತಿಳಿಯುವುದೂ ಇಲ್ಲ. ಆದರೂ ಯಾಕೆ? ನನ್ನ ಮಗಳು ಪುಟ್ಟ ಸಮರ್ಥನನ್ನು ಪಕ್ಕದಲ್ಲಿ ಮಲಗಿಸಿಕೊಂಡು `ಚಿಂಗಲೀಬಿಂಗಲೀ, ಮುದ್ದೂ, ಇಲ್ಲಿ ನೋಡು~ ಅಂತ ಏನೇನೋ ಹೇಳುತಿದ್ದಳು.

ಆ ಕೂಸು ಕೈಕಾಲು ಆಡಿಸುತ್ತ, ಕಿಲ ಕಿಲ ನಗುತ್ತ, ಅದೆಲ್ಲಕ್ಕಿಂತ ಹೆಚ್ಚಾಗಿ ನಿದ್ದೆಮಾಡುತ್ತ ಇರುತ್ತಿತ್ತು. ಅಮ್ಮನ ಯಾವುದೋ ದನಿ ಅದಕ್ಕೆ ಇಷ್ಟವಾದರೆ ಅಮ್ಮನನ್ನು ನೋಡಿ ಮುಖ ಅರಳಿಸುತಿತ್ತು. ಮಗು ನಮ್ಮನ್ನು ಗಮನಿಸಲಿ ಅನ್ನುವ ಆಸೆ. ನಕ್ಕರೆ ನಮ್ಮ ಮಾತಿಗೇ ನಕ್ಕದ್ದು ಅನಿಸುತ್ತದೆ. ಮಗು ನಮ್ಮನ್ನು ಗಮನಿಸಿದರೆ ಎಂಥ ತೃಪ್ತಿ, ಯಾವ ಬಹುಗಣ್ಯನ ಮನ್ನಣೆಗಿಂತ ಹೆಚ್ಚಿನದು ಅದು.

ಕೂಸಿನ ಲೋಕ ಹೆಸರುಗಳಿಲ್ಲದ ವಸ್ತುಗಳ ಲೋಕ, ಸದಾ ಕಿವಿ ತುಂಬುತ್ತಿರುವ ನಾದಗಳ ಲೋಕ. ನಮ್ಮ ಮಾತು ಮಗುವಿನ ಗಮನ ಸೆಳೆಯಬೇಕಾದರೆ ಮಾತು ಬೇರೆ ಥರ ಇರಬೇಕು. ಗಮನಿಸಿ ನೋಡಿ, ಮಗುವಿನೊಡನೆ ಆಡುವಾಗ ನಮ್ಮ ದನಿಯ ಶ್ರುತಿ ಹೆಚ್ಚಿನ ಮಟ್ಟದಲ್ಲಿರುತ್ತದೆ. ಎತ್ತರದ ಶ್ರುತಿಯ ಮತ್ತು ಕೆಳಗಿನ ಶ್ರುತಿಯ ಸದ್ದುಗಳ ನಡುವೆ ನಮ್ಮ ಮಾತು ಉಯ್ಯಾಲೆಯಾಡುತ್ತದೆ. `ಛೀ ಕಳ್ಳಾ~ ಅನ್ನುವುದನ್ನು ಗಟ್ಟಿಯಾಗಿ, ಮೆಲ್ಲಗೆ, ಅತಿ ಮೆಲ್ಲಗೆ ಹೇಗೆ ಹೇಗೆಲ್ಲ ಅನ್ನುತ್ತಾ ತೋಳಿನಲ್ಲಿ ಮಗುವನ್ನು ತೂಗುತ್ತೇವಲ್ಲ! ಉಚ್ಚಾರಣೆಯಲ್ಲಿ ನಮ್ಮ ಭಾಷೆಯ ಲಯ ಸ್ಪಷ್ಟವಾಗುವ ಹಾಗೆ, ಪ್ರತಿಯೊಂದು ಪದದ ಪ್ರತಿಯೊಂದು ಸ್ವರವನ್ನೂ ಒತ್ತಿ ಎಳೆದು ಹೇಳುತ್ತೇವೆ. `ನೋಡು, ನೋಡು~ ಅನ್ನುವಾಗ ಓ ಕಾರಗಳು, ಉ ಕಾರಗಳು ತೀರ ಸ್ಪಷ್ಟವಾಗಿ ಗಮನಕ್ಕೆ ಬರುತ್ತವೆ. ಹಾಗೇ ಮಾತಿನ ಗತಿ ಕೂಡ ನಿಧಾನವಾಗುತ್ತದೆ.

ಹಾಗೇ ಗಮನಿಸಿ. ಲಲ್ಲೆಮಾತಿನಲ್ಲಿ ನಾವು ದನಿಯ ಮೂಲಕ ವ್ಯಕ್ತಪಡಿಸುವ ಭಾವ ಕೂಡ ತೀರ ಸ್ಪಷ್ಟವಾಗಿರುತ್ತದೆ. ದೊಡ್ಡವರ ಜೊತೆ ಮಾತಾಡುವಾಗ ಭಾವವನ್ನು ಅಡಗಿಸಿಡುವುದು ಎಲ್ಲರಿಗೂ ಕರಗತವಾಗಿರುತ್ತದೆ. ತೊಟ್ಟಿಲ ಕೂಸುಗಳ ಜೊತೆ ವರ್ತಿಸುವಾಗ ಮಾತ್ರ ನಮ್ಮ ಮನಸಿನ ಭಾವವನ್ನು ಅಡಗಿಸಿಡದೆ ತೀರ ಸ್ಪಷ್ಟವಾಗುವ ಹಾಗೆ ದನಿಯಲ್ಲೇ ತೋರುತ್ತೇವೆ. `ನೀನು ತಾಚಿ ಮಾಡಬೇಕಪ್ಪ, ಜಾಣ~ ಅನ್ನುವಾಗ ನನ್ನ ಮಗಳಿಗೆ ಆಗಿದ್ದ ದಣಿವೋ, ಮಗು ಇನ್ನೂ ಮಲಗಲಿಲ್ಲ, ತನ್ನ ನಿದ್ದೆ ಕೆಟ್ಟಿತು ಅನ್ನುವ ಕಸಿವಿಸಿಯೋ, ಇನ್ನೂ ಮಲಗಲಿಲ್ಲ ಅನ್ನುವ ಸಿಟ್ಟೋ, ಬೇರೆ ಬೇರೆ ಭಾವಗಳೆಲ್ಲ ಅವಳ ಮಾತಿನ ದನಿಯಲ್ಲೇ ಗೊತ್ತಾಗುತಿದ್ದವು.

ಅದು ದೊಡ್ಡವರಿಗೆ ಗೊತ್ತಾಗುತಿತ್ತು, ಪುಟ್ಟ ಸಮರ್ಥನಿಗೂ ತಿಳಿಯುತಿತ್ತೋ? ಗೊತ್ತಿಲ್ಲ. ಇಷ್ಟು ನಿಜ. ಮಾತು ಒಂದು ದನಿ, ದನಿಯ ಹಿಂದೆ ಒಂದು ಮನೋಭಾವ ಇರುತ್ತದೆ- ಕೂಸಿಗೆ ಕಲಿಯುವ ಶಕ್ತಿ ಬರುವ ಮೊದಲೇ ಈ ಕಲಿಕೆ ಶುರುವಾಗಿರುತ್ತದೆ. ಭಾವ, ಭಾಷೆ, ದನಿಗಳ ಪಾಠ ತೊಡಗುತ್ತದೆ.

ಮತ್ತೂ ನೋಡಿ. ಕೂಸಿನೊಡನೆ ನುಡಿಯುವಾಗ ನಮ್ಮ ಭಾಷೆಯ ಕೆಲವು ಶಕ್ತಿಗಳನ್ನು, ಕೆಲವು ಬಗೆಯ ಸ್ವರ-ವ್ಯಂಜನ-ಸ್ವರ ವಿನ್ಯಾಸವನ್ನು ಮಾತ್ರ ಆಯ್ದ ಕೆಲವೇ ಪದಗಳ ಮೂಲಕ ಬಳಸುತ್ತೇವೆ. ಸುಮಾರು 25ರಿಂದ 60 ಪದಗಳ ವಿಶೇಷ ಲಲ್ಲೆಮಾತಿನ ನಿಘಂಟು(!) ಒದಗಿಬರುತ್ತದೆ. ಅಪ್ಪ, ಅಮ್ಮ, ತಾತ, ಅಜ್ಜಿ, ಅಣ್ಣ, ಅಕ್ಕ ಇಂಥ ಸಂಬಂಧ ಸೂಚಿಸುವ ಪದಗಳು; ಏಳು, ಬಾ, ಮಲಗು, ನಿಂತುಕೋ, ಇತ್ಯಾದಿ ದೇಹದ ಕ್ರಿಯೆಗಳನ್ನು ಸೂಚಿಸುವ ಪದಗಳು, ಚಂದ, ಬಿಸಿ, ತಣ್ಣಗೆ, ಒಳ್ಳೆಯ ಇತ್ಯಾದಿ ಗುಣವಾಚಕಗಳು, ಪ್ರಾಣಿ ಪಕ್ಷಿಗಳ ಹೆಸರುಗಳು, ಆಟದ, ಶಿಶುಗೀತೆಯ ಪದಗಳು ಇಂಥ ವಿಶೇಷ ಶಬ್ದಕೋಶ ಲಲ್ಲೆಮಾತಿನಲ್ಲಿರುತ್ತದೆ.

ಈ ಶಬ್ದಕೋಶವೂ ಕೂಸು ಸ್ವತಃ ನುಡಿಯಲು ಸುಲಭವಾಗುವ ಹಾಗೆ ಭಾಷೆಯ ಮಾಮೂಲು ಪದಗಳ ಬದಲಾದ ರೂಪದ ಅಥವ ಮಾಮೂಲಿ ಭಾಷೆಗೆ ಸಂಬಂಧವೇ ಇಲ್ಲದ ವಿಶೇಷ ಪದಗಳ ಸಮೂಹವೂ ಆಗಿರುತ್ತದೆ. ಕೂಸು ಮಾಡುವುದು ನಿದ್ದೆಯಲ್ಲ, ಅದು ತಾಚಿ, ಜೋಜೋ, ಪಾಚಿ; ಈಗ ಆಗಬೇಕಾದದ್ದು ಸ್ನಾನವಲ್ಲ ಬುಶ್; ಅಲ್ಲಿರುವುದು ನಾಯಿ, ಬೆಕ್ಕು ಅಲ್ಲ ಬೌಬೌ, ಮಿಯಾವ್; ಆಗುವುದು ಗಾಯವಲ್ಲ ಅಬ್ಬು; ಹೊಡೆಯುವುದಿಲ್ಲ ಅತ್ತ ಮಾಡುವುದು ಇತ್ಯಾದಿ.

ಕೂಸು ದೊಡ್ಡದಾದಂತೆ ತಾನು ಗ್ರಹಿಸಿದ ಶಬ್ದವಿನ್ಯಾಸದಲ್ಲಿ ದೊಡ್ಡವರಾಡುವ ಪದಗಳನ್ನು ತನ್ನದೇ ರೀತಿಯಲ್ಲಿ ಹೇಳಿ ನಮಗೆ ತಮಾಷೆಯಾಗಿ ಕಂಡು ಮನೆಯವರೆಲ್ಲ ಅದನ್ನೇ ಬಳಸುವುದೂ ಇದೆ. ಮೊಮ್ಮಗ ಸಮರ್ಥ ಅಂಬೆಗಾಲಿಡುತ್ತ ಬಂದು ತಟ್ಟೆಯಲ್ಲಿದ್ದ ಉಪ್ಪಿನಕಾಯಿಯ ರುಚಿ ನೋಡಿ ಉಪ್ಪುಪ್ಪೆ ಅಂದಾಗ ಮನೆಯವರೆಲ್ಲ ಎಷ್ಟೋ ತಿಂಗಳು ಉಪ್ಪುಪ್ಪೆ ಅನ್ನುವ ಪದವನ್ನೇ ಒಪ್ಪಿಕೊಂಡಿದ್ದೆವು.

ಲಲ್ಲೆಮಾತಿನ ವಿಶೇಷ ಪದಗಳು ಗ್ರಹಿಕೆಯ ಚಿತ್ರಗಳಾಗಿ ಕೂಸಿನ ಮನಸ್ಸಿನಲ್ಲಿ ಊರಿಕೊಳ್ಳುತ್ತ, ದೊಡ್ಡವರ ಮಾತಿನ ರೀತಿಗೆ ಒಗ್ಗಿಕೊಳ್ಳುತ್ತ ಕ್ರಮೇಣ ಕೂಸಿನ ನಿಘಂಟಿನಿಂದ ಮಾಯವಾಗುತ್ತವೆ. ಆದರೂ ಬೆಳೆದ ಮಗು ಮುದ್ದುಮಾಡಿಸಿಕೊಳ್ಳಬೇಕೆಂದು ಬಯಸಿದ ಕ್ಷಣಗಳಲ್ಲಿ ಲಲ್ಲೆಮಾತಿನ ನಿಘಂಟಿಗೆ ವಾಪಸು ಹೋಗುವುದೂ ಇದೆ. ಆದರೆ ಆ ಹೊತ್ತಿಗೆ ಮಗು ಭಾಷಾ ಸಮುದ್ರದ ನಿಪುಣ ಈಜುಗಾರನಾಗಿರುತ್ತಾನೆ.

ಲಲ್ಲೆಮಾತಿನ ರೀತಿ ದೊಡ್ಡವರು ಮಕ್ಕಳಿಗಾಗಿ ರೂಪಿಸಿಕೊಂಡದ್ದೋ ಅಥವ ಮಕ್ಕಳಿಗೂ ಇಷ್ಟವಾಗುತ್ತದೋ? ಕೆಲವು ಮನೋವಿಜ್ಞಾನಿಗಳು ಬಗೆ ಬಗೆಯ ಮಾತಿನ ಧಾಟಿಯ ರಿಕಾರ್ಡಿಂಗ್‌ಗಳನ್ನು ಕೂಸುಗಳಿಗೆ ಕೇಳಿಸಿ ಕೂಸುಗಳ ಪ್ರತಿಕ್ರಿಯೆ ದಾಖಲು ಮಾಡಿಕೊಂಡು ವಿಶ್ಲೇಷಣೆ ಮಾಡಿ ನೋಡಿದ್ದಾರೆ. ಲಲ್ಲೆಮಾತಿನ ರೀತಿ ಕೂಸುಗಳಿಗೆ ಪ್ರಿಯವೆಂಬ ತೀರ್ಮಾನಕ್ಕೆ ಬಂದಿದ್ದಾರೆ.

ಇದೆಲ್ಲ ನಮ್ಮ ಬುದ್ಧಿಯ ಸಮಾಧಾನಕ್ಕೆ. ನಾವು ಹೇಗೆ ಯಾವ ಥರ ಮಾತಾಡಿದರೆ ಮಗುವಿಗೆ ಇಷ್ಟವಾಗುತ್ತದೆ, ನಮ್ಮ ಮಾತಿಗೆ ಮರುಮಾತು ಕೊಡಲು ತೊದಲು ನುಡಿಯುತ್ತದೆ ಅನ್ನುವುದು ಮಕ್ಕಳ ಒಡನಾಟ ಇರುವ ಎಲ್ಲರಿಗೂ ಗೊತ್ತಲ್ಲವೇ.
ಭಾಷೆಯನ್ನು ಕಡಲು ಅಂದುಕೊಂಡರೆ ಲಲ್ಲೆಮಾತು ಕಡಲ ತಡಿ, ಕ್ಷೇಮವಾಗಿ ಸಂತೋಷವಾಗಿ ಆಡುವ ವಿಹರಿಸುವ ತಾವು.

ಇಲ್ಲಿ ಭಾಷೆಯ ಅಲೆಗಳು ಪುಟ್ಟ ಪಾದಗಳಿಗೆ ಬಂದು ಮುತ್ತಿಕ್ಕುತ್ತವೆ. ಜಗತ್ತಿನ ಬೇರೆ ಬೇರೆ ಭಾಷೆಗಳ ಲಲ್ಲೆಮಾತನ್ನು ವಿವರವಾಗಿ ಪರಿಶೀಲಿಸಿದ ವಿಜ್ಞಾನಿಗಳು ಹೇಳುತ್ತಾರೆ- ಭಾಷೆ ಯಾವುದೇ ಇರಲಿ, ಲಲ್ಲೆಮಾತು ಕೂಡ ತಲೆಮಾರಿನಿಂದ ತಲೆಮಾರಿಗೆ ಆಯಾ ಭಾಷೆಯಲ್ಲಿ ಒಪ್ಪಿತವಾದ ಕ್ರಮದಲ್ಲೇ ದಾಟಿಕೊಂಡು ಬರುತ್ತದೆ.

ಪ್ರಾಯ ಬಂದಮೇಲೆ ಮುಗುಳುನಗೆಯ ಲಲ್ಲೆ, ಮೀಸೆಕುಡಿಯ ಲಲ್ಲೆ, ಕಣ್ಣಕಿರಣದ ಲಲ್ಲೆ, ಅಲ್ಲೇ ಅರಳುವ ಒಲವಿನ ಲಲ್ಲೆ, ಕಣ್ಣಕಿರಣದಲ್ಲಿ ನೇಯುವ ಲಲ್ಲೆಯೂ ಇದೆ. ಆ ಲಲ್ಲೆ ಮೇರೆ ಎಲ್ಲಿ ಎಂದು ಕೇಳುವ ಹಿಗ್ಗಿನ ಮುನ್ನುಡಿ. ಬೇಂದ್ರೆಯವರ `ನಲ್ಲ ನಲ್ಲೆಯರ ಲಲ್ಲೆ~ ಕವಿತೆಯನ್ನು ಹುಡುಕಿ ಓದಿ ಇಂಥ ಲಲ್ಲೆಯ ಅಚ್ಚರಿಯನ್ನು ಕಾಣಿರಿ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.