ADVERTISEMENT

ಸಲುಗೆ ಬಿನ್ನಪ

ಓ.ಎಲ್.ನಾಗಭೂಷಣ ಸ್ವಾಮಿ
Published 31 ಡಿಸೆಂಬರ್ 2011, 19:30 IST
Last Updated 31 ಡಿಸೆಂಬರ್ 2011, 19:30 IST

ನಮಸ್ಕಾರ. ಬನ್ನಿ. ಇದು ನಾನು ಪ್ರತಿವಾರವೂ ಕಟ್ಟುವ ನುಡಿ ಗೂಡು. ಈ ಸಾಪ್ತಾಹಿಕ ಪುರವಣಿಯ ಅಕ್ಷರ ಕಾಳುಗಳಲ್ಲಿ ಇಷ್ಟವಾಗುವಂಥದನ್ನು ಹುಡುಕುತ್ತಾ ಹಾರುತ್ತಾ ಇರುವ ನಿಮ್ಮ ಕಣ್ಣ ಹಕ್ಕಿಗಳು ಇಲ್ಲಿ ತುಸು ತಂಗಲಿ. ಇಲ್ಲಿದೆ ವಿಚಾರಗಳ ಆಹಾರ. ವಿಚಾರವೂ ಭಾಷೆಯನ್ನು ಕುರಿತದ್ದು. ನಮ್ಮೆಲ್ಲರನ್ನೂ ನಮ್ಮ ಬದುಕಿನುದ್ದಕ್ಕೂ ಕಾಪಾಡುವ, ಕಾಡುವ, ಪೀಡಿಸುವ, ಕೆರಳಿಸುವ, ಬೆರಗುಗೊಳಿಸುವ, ಅಷ್ಟೇ ಯಾಕೆ ನಾವೆಲ್ಲರೂ `ನಾನು~ ಅಂದುಕೊಳ್ಳುವ ಆ `ನಾನು~ವನ್ನೂ ತಿದ್ದಿ ತೀಡಿ ರೂಪುಕೊಡುವ ಭಾಷೆಯನ್ನು ಕುರಿತದ್ದು. ಉಸಿರಾಡುತ್ತೇವೆ, ನಡೆಯುತ್ತೇವೆ, ಕೂರುತ್ತೇವೆ, ಆಕಳಿಸುತ್ತೇವೆ, ನಮ್ಮಳಗೆ ಅನುಕ್ಷಣವೂ ರಕ್ತಪರಿಚಲನೆ ಅನ್ನುತ್ತಾರಲ್ಲ ಅದು ನಡೆಯುತ್ತಿರುತ್ತದೆ, ತಿಂದದ್ದು ಅರಗುತ್ತಿರುತ್ತದೆ- ಇವು ಯಾವುದರ ಬಗ್ಗೆಯೂ ನಮ್ಮ ಚಿತ್ತ ಹರಿಯುವುದೇ ಇಲ್ಲ- ನಾವು ಆರೋಗ್ಯವಾಗಿರುವವರೆಗೆ. ಹಾಗೆಯೇ ನಾವಾಡುವ ಭಾಷೆಯ ಬಗ್ಗೆ ಕೂಡ- ಭಾಷೆಯ ಬಗ್ಗೆ ತಿಳಿಯುವ ಬಲವಾದ ಆಸೆ ಹುಟ್ಟುವವರೆಗೆ, ಅಥವ ಏನಾದರೂ ಆತಂಕ ಮೂಡುವವರೆಗೆ: ಅಪರೂಪಕ್ಕೆ ಹತ್ತು ಜನರೆದುರು ಮಾತಾಡಬೇಕಾದಾಗ, ಅಹಂಕಾರಕ್ಕೆ ಪೆಟ್ಟು ಬಿದ್ದಾಗ, ಕಾಯಿಲೆಯಾಗಿ ಮಾತು ಕಷ್ಟವಾದಾಗ, ಕವಿತೆ ಅರ್ಥವಾಗದಿದ್ದಾಗ ಹೀಗೆ.
ಪವಾಡಗಳನ್ನು ನಂಬುವವರಾದರೆ ಭಾಷೆಯೇ ದೊಡ್ಡದೊಂದು ಬೆಡಗಿನ ಪವಾಡವಾಗಿ ಕಂಡೀತು. ನಾವು ಮಾತಾಡುವುದಕ್ಕೆ ಬಳಸುವ ಯಾವೊಂದು ಅಂಗಕ್ಕೂ- ಶ್ವಾಸಕೋಶ, ತುಟಿ, ಹಲ್ಲು, ನಾಲಗೆ ಮೂಗು, ಇತ್ಯಾದಿ- ಮಾತು ಮೊದಲ ಕೆಲಸವಲ್ಲ. ಅವಕ್ಕೆ ನಿಗದಿಯಾಗಿರುವ ಕರ್ತವ್ಯಗಳೇ ಬೇರೆ. ಅಲ್ಲಿಂದ ಶುರುವಾಗಿ ಅರ್ಥ ಅಂದರೇನು, ಅರ್ಥ ಹೇಗಾಗುತ್ತದೆ, ಅರ್ಥ ಇದೆಯೇ, ತಪ್ಪಾಗಿ ತಿಳಿಯುವುದು, ಸರಿಯಾಗಿ ತಿಳಿಯುವುದು ಎಲ್ಲವೂ ಹೇಗೆ ಸಾಧ್ಯ ಅನ್ನುವ ಪ್ರಶ್ನೆ ವಿಶಾಲವಾದ ಹುಡುಕಾಟಕ್ಕೆ ನಮ್ಮನ್ನು ದೂಡುತ್ತದೆ. ಭಾಷೆ ಹುಟ್ಟಿಸುವ, ಭಾಷೆಯ ಬಗ್ಗೆ ಹುಟ್ಟುವ ಎಲ್ಲ ಪ್ರಶ್ನೆಗಳನ್ನೂ ಭಾಷೆಯ ಮೂಲಕವೇ ಪರಿಹರಿಸಿಕೊಳ್ಳಬೇಕು ಅನ್ನುವುದು ದೊಡ್ಡ ವ್ಯಂಗ್ಯ, ಅಲ್ಲವೇ. ಹೀಗೆ ಹುಡುಕಾಟದ ಗುರಿ, ಹುಡುಕಾಟದ ಸಾಧನ ಎರಡೂ ಭಾಷೆಯೇ!

ನಾನು ಸಣ್ಣವನಿದ್ದಾಗ `ಕಲ್ಲು~, `ಉಪ್ಪು~, `ಮನೆ~ ಇಂಥ ಪದಗಳು ಪ್ರಶ್ನೆ ಹುಟ್ಟಿಸುತಿದ್ದವು. ನಾವು ಕೆಲವರು ಹುಡುಗರು ಕಲ್ಲನ್ನು ಕಲ್ಲು ಎಂದು ಮೊದಲು ಕರೆದವರು ಯಾರು ಎಂದು ಕುತೂಹಲಕ್ಕೆ ಕೇಳಿಕೊಂಡು, ಉತ್ತರ ದೊರೆಯುವ ಮೊದಲೇ ಚಿಣ್ಣಿದಾಂಡು ಆಡುವುದಕ್ಕೋ ಲಗೋರಿಗೋ ತೊಡಗುತ್ತಿದ್ದೆವು. ಇಂಥ ಪ್ರಶ್ನೆಗಳನ್ನು ನಿಮ್ಮನ್ನೂ ಮನೆಯ ಮಗು ಯಾವತ್ತಾದರೂ ಕೇಳಿರಬಹುದು. ನನ್ನ ಸೋದರ ಮಾವನ ಮಗಳು, ಮೂವತ್ತು ವರ್ಷದ ಹಿಂದೆ, ಶಿಶುವಿಹಾರಕ್ಕೆ ಹೋಗಲು ತೊಡಗಿದಾಗ, ಕನ್ನಡ-ಇಂಗ್ಲಿಷು ಬೇರೆ ಬೇರೆ ಅನ್ನುವುದು ಗೊತ್ತಾದ ಮೇಲೆ `ಮಾಮಾ, ಇಂಗ್ಲಿಷಿನಲ್ಲಿ ರೋಹಿಣಿ ಅನ್ನುವುದಕ್ಕೆ ಏನನ್ನುತ್ತಾರೆ?~ ಅಂತ ಕೇಳಿದ್ದಳು. ಇಂಗ್ಲಿಷಿನಲ್ಲೂ ಅದೇ ಹೆಸರು ಅಂದರೆ ನಂಬಿರಲಿಲ್ಲ.

ಕನ್ನಡದ ಬೇರೆ ಪದಗಳಿಗೆಲ್ಲ ಇಂಗ್ಲಿಷಿನಲ್ಲಿ ಬೇರೆ ಪದ ಇರುವಾಗ ತನ್ನ ಹೆಸರಿಗೆ ಮಾತ್ರ ಬೇರೆ ಯಾಕಿಲ್ಲ ಅನ್ನುವುದು ಅವಳ ಪ್ರಶ್ನೆ. ಭಾಷೆಗೂ ಅರ್ಥಕ್ಕೂ ಇರುವ ಸಂಬಂಧ ಎಷ್ಟು ತೊಡಕಿನದು ಅನ್ನುವುದು ಮಕ್ಕಳಾಗಿದ್ದಾಗ ನನಗಾಗಲೀ, ಆ ಮಗುವಿಗಾಗಲೀ ಗೊತ್ತಿರಲಿಲ್ಲ. ಅರ್ಥದ ಪ್ರಶ್ನೆ, ಭಾಷೆಯ ತತ್ವ ಇವೂ ಈ ಅಂಕಣದಲ್ಲಿ ಚರ್ಚೆಯಾಗುವ ವಿಷಯಗಳೇ.

ಕಾಲೇಜಿಗೆ ಬಂದಾಗ ಕೂಡ ಇಂಗ್ಲಿಷು ನನಗೆ, ನನ್ನ ಓರಗೆಯವರಿಗೆ ಕಷ್ಟದ ವಿಷಯ, ಗಣಿತದ ಹಾಗೆಯೇ. ಇಂಗ್ಲಿಷಿನ ಚಪ್ಪಡಿಯನ್ನು ಕನ್ನಡದ ಕಂದಗಳ ಮೇಲೆ ಹೇರಬೇಡಿ ಅನ್ನುವ ಕರೆಯೂ ಕೇಳುತ್ತಿತ್ತು. ಇನ್ನು ಸಂಸ್ಕೃತ ಬಲ್ಲವರು ಜಗತ್ತಿನ ಎಲ್ಲ ಭಾಷೆಗಳಿಗೂ ಸಂಸ್ಕೃತವೇ ತಾಯಿ, ಅದರಿಂದಲೇ ಎಲ್ಲಾ ಅನ್ನುತಿದ್ದರು. ಹಿಂದಿಯನ್ನು ಬಲವಂತವಾಗಿ ಹೇರುವ ಬಗ್ಗೆ ಸ್ಟ್ರೈಕುಗಳು ಆಗುತ್ತಿದ್ದವು. ಹಾಗೆ ಮುಷ್ಕರ ನಡೆದು ಪ್ರಾಣ ಬಿಟ್ಟ ಒಬ್ಬ ವಿದ್ಯಾರ್ಥಿಯ ಹೆಸರಿನಲ್ಲಿ ಈಗಲೂ ಒಂದು ಸರ್ಕಲ್ಲು ನಮ್ಮೂರಿನಲ್ಲಿದೆ. ಭಾಷೆ ಇನ್ನೊಂದು ಭಾಷೆಯನ್ನು ಗುಲಾಮನನ್ನಾಗಿ ಮಾಡಿಕೊಳ್ಳುತ್ತದೆಯೇ, ಕೊಲ್ಲುತ್ತದೆಯೇ? ಭಾಷೆಗಳ ನಡುವಿನ ಸಂಬಂಧ ಹೇಗಿದೆ, ಹೇಗಿರಬೇಕು? ಶಾಲೆಯಲ್ಲಿ ಮಗುವಿಗೆ ಯಾವ ಭಾಷೆಯನ್ನು ಮತ್ತು ಯಾವ ಭಾಷೆಯ ಮೂಲಕ ಕಲಿಸಬೇಕು? ಇವೆಲ್ಲ ಪ್ರಶ್ನೆಗಳೂ ವಾಗ್ವಾದಗಳಾಗಿ ಬೆಳೆದು ನಿಂತಿವೆ. ಇಂಥ ವಾಗ್ವಾದಗಳನ್ನು ತಿಳಿಯುವುದೂ ಈ ಅಂಕಣದ ಉದ್ದೇಶ.

`ನನ್ನ ಭಾಷೆಯ ಮಿತಿಯೇ ನನ್ನ ಜ್ಞಾನದ ಮಿತಿ~ ಅನ್ನುವ ಹೇಳಿಕೆ ಬಹಳ ದಿನ ಮನಸ್ಸಿನಲ್ಲಿ ಗುಂಯ್‌ಗುಡುತ್ತಿತ್ತು. ಭಾಷೆಗೂ ಜ್ಞಾನಕ್ಕೂ ಎಂಥ ನಂಟು? ಪ್ರಜ್ಞೆ ಅನ್ನುತ್ತಾರಲ್ಲ ಅದು ಭಾಷೆಯನ್ನು ಬಿಟ್ಟು ಇರಬಲ್ಲುದೇ? ಭಾಷೆ ಇಲ್ಲದೆ ಯೋಚನೆ ಮಾಡಲು ಆಗುತ್ತದೆಯೇ? ಮಗು ಹೇಗೆ ಭಾಷೆ ಕಲಿಯುತ್ತದೆ? ಭಾಷೆಗೂ ಮನಸ್ಸಿಗೂ ಇರುವ ಸಂಬಂಧವೇನು? ನಿದ್ದೆ ಬರುವ ಮುನ್ನ ತಲೆಯಲ್ಲಿ ಓಡಾಡುವ ಯೋಚನೆಗಳ ಭಾಷೆ, ಕನಸಿನ ಭಾಷೆ, ಎಚ್ಚರದ ಭಾಷೆ, ಜಗಳದ ಭಾಷೆ, ಪ್ರೀತಿಯ ಭಾಷೆ ಒಂದು ಭಾಷೆಯೊಳಗೆ ಎಷ್ಟೆಲ್ಲ ನುಡಿಗಳನ್ನು ಎಷ್ಟು ಸಲೀಸಾಗಿ ಬಳಸುತ್ತೇವಲ್ಲ. ಹೇಗೆ? ಕವಿತೆಯ ಭಾಷೆ, ಪತ್ರಿಕೆಗಳ ಭಾಷೆ, ರಾಜಕೀಯದ ಭಾಷೆ, ಟೀವಿ, ಸಿನಿಮಾಗಳ ಭಾಷೆ, ಹಿಂಸೆಯ ಭಾಷೆ- ಭಾಷೆಗೆ ಎಷ್ಟೊಂದು ಪದರಗಳು. ಒಂದೊಂದಾಗಿ ಬಿಡಿಸುತ್ತಾ ಹೋದರೆ ಉಳಿಯುವುದೇನು? ನೋಡೋಣ.

ಭಾಷೆಯನ್ನು ಬೆಳೆಸುವುದೆಂದರೇನು? ಭಾಷೆ ಸಾಯುವುದೆಂದರೇನು? ಜಗತ್ತಿನಲ್ಲಿ ಎಷ್ಟು ಭಾಷೆಗಳು ಇವೆ? ಯಾವ ಭಾಷೆಗಳಿಗೆ ಅಪಾಯ ಒದಗಿದೆ? ಭಾಷೆಯ ವೈವಿಧ್ಯಕ್ಕೂ ನಿಸರ್ಗದ ಜೀವಿಗಳ ವೈವಿಧ್ಯಕ್ಕೂ ಇರುವ ಸಂಬಂಧವೇನು? ಭಾಷೆ, ಸಂಸ್ಕೃತಿ, ನಿಸರ್ಗ ಇವುಗಳ ಬೆಸುಗೆ ಮುರಿಯುತ್ತಿದ್ದೇವೆಯೇ ನಾವು? ಇಂಥ ಅಮೂರ್ತ ಪ್ರಶ್ನೆಗಳನ್ನೂ ಈ ಅಂಕಣ ಪರಿಶೀಲಿಸುತ್ತದೆ.

ನಾವು ಲೋಕದಲ್ಲಿ ಬದುಕುವ ಹಾಗೇ, ಅಥವ ಅದಕ್ಕಿಂತ ಹೆಚ್ಚಾಗಿ, ನಮ್ಮಳಗೇ ಒಂದು ನಾಡು ಕಟ್ಟಿಕೊಂಡು ಅಲ್ಲಿ ನಿವಾಸಿಗಳಾಗಿರುವುದೇ ಹೆಚ್ಚು. ನಮ್ಮಳಗಿನ ನಾಡು ಕ್ಷಣ ಕ್ಷಣವೂ ಕಲೆಸಿ ಹೋಗುವ ದರ್ಶನಗಳ ನಮಗೆ ಮಾತ್ರ ಕೇಳಿಸುವ ನಿಶ್ಶಬ್ದಗಳ ವಸ್ತುವಲ್ಲದ ಸಾಮಗ್ರಿಗಳಿಂದ ತುಂಬಿರುವ ಬೀಡು. ಮಾತಿಗೆ ಒಗ್ಗದ ನಮ್ಮ ಅಮೂಲ್ಯ ವಿಚಾರಗಳ, ನಾವು ಕೂಡ ಮುಟ್ಟಲಾಗದ ನೆನಪುಗಳ, ಬೇರೆ ಯಾರೂ ಇಣುಕಿಯೂ ನೋಡಲಾಗದ ಹಗಲುಗನಸುಗಳ ಉಗ್ರಾಣ. ಮಾತಿಲ್ಲದ ಏಕಾಂತ ಭಾಷಣಗಳ ಗುಪ್ತ ರಂಗಮಂದಿರ.

ಕೊನೆಯಿರದ ನಿರೀಕ್ಷೆಗಳೊಡನೆ ನಡೆಸುವ ನಿರಂತರ ಸಮಾಲೋಚನೆಯ ಸಭಾಪರ್ವ. ಎಲ್ಲ ಮೂಡುಗಳ, ಚಿಂತನೆಗಳ, ಗುಟ್ಟುಗಳ, ಅನಂತ ನಿರಾಶೆಯ, ಕೊನೆಯಿರದ ಅನ್ವೇಷಣೆಗಳು ಸಾಧ್ಯವಾಗುವ ಕಣ್ಣಿಗೆ ಕಾಣದ ಭವ್ಯ ಅರಮನೆ. ನಮ್ಮ ಒಳಲೋಕ ನಾವು ಏಕಾಂಗಿಯಾಗಿ ಆಳ್ವಿಕೆ ನಡೆಸುವ ಮಹಾ ಸಾಮ್ರಾಜ್ಯ. ಅಲ್ಲಿ ನಾವು ಏನನ್ನು ಬೇಕಾದರೂ ಯಾರನ್ನು ಬೇಕಾದರೂ ವಿಚಾರಣೆ ಮಾಡಬಹುದು, ಮನಸೋ ಇಚ್ಛೆ ಆಜ್ಞೆಗಳನ್ನು ಹೊರಡಿಸಬಹುದು. ಬದುಕಿನಲ್ಲಿ ನಾವು ಮಾಡಲಾಗದ್ದನ್ನೆಲ್ಲ ಇನ್ನೂ ಮಾಡಬಹುದಾದ್ದನ್ನೆಲ್ಲ ಪುಸ್ತಕದ ಹಾಗೆ ಓದಿ ಅರಿಯಬಹುದಾದ ಎಲ್ಲರ ಕಣ್ಣಿಗೂ ಮರೆಯಾಗಿರುವ ಪ್ರಶಾಂತ ಆಶ್ರಮ. ಕನ್ನಡಿಯಲ್ಲಿ ನಮ್ಮನ್ನು ನಾವು ಕಾಣುವುದಕ್ಕಿಂತ ಹೆಚ್ಚಾಗಿ, ಹೆಚ್ಚು ನಿಜವಾಗಿ ನಾವೇ ಆಗಿರುವ ತಾವು. ಹಲವು ನಾನುಗಳಾಗಿರುವ ನನ್ನ ಬಹುರೂಪಗಳ ದರ್ಶನ ಪಡೆಯಲು ಸಾಧ್ಯವಾಗುವ ದೇಶ ಅದು. ಜೂಲಿಯನ್ ಜೇಯೆನ್ಸ್ ಹೀಗೆ ವರ್ಣಿಸುವ ನಮ್ಮಳಗಿನ ನಾಡು ಕೂಡ ನಮ್ಮ ನುಡಿಯಿಂದಲೇ ಆಗುವ ನಿರ್ಮಾಣ. ನಮ್ಮ ಒಳನುಡಿಗೂ ಹೊರ ನುಡಿಗೂ ಇರುವ ಸಂಬಂಧ, ವ್ಯತ್ಯಾಸ, ಸಂಘರ್ಷ ಇವೂ ಈ ಅಂಕಣದ ವಸ್ತು.

ನುಡಿ ಮತ್ತು ನಮ್ಮ ಮನಸ್ಸು, ಮನೆ, ಶಾಲೆ, ಸಮಾಜ, ಊರು, ದೇಶ; ನುಡಿ ಮತ್ತು ಧರ್ಮ, ಪುರಾಣ, ತತ್ವ; ನುಡಿ ಮತ್ತು ರಾಜಕಾರಣ; ನುಡಿ ಮತ್ತು ಕಾವ್ಯ, ಸಾಹಿತ್ಯ, ಬಗೆಬಗೆಯ ಮಾತು; ನಮ್ಮ ನುಡಿಯ ಆತಂಕ ಹೀಗೆ ನುಡಿಯೊಳಗಾಗಿರುವ ಎಲ್ಲವೂ ನುಡಿಯ ದೃಷ್ಟಿಯಿಂದ ಈ ಅಂಕಣಕ್ಕೆ ಒದಗಿ ಬರುತ್ತವೆ.

ಹಾರುವ ಹಕ್ಕಿ ತನ್ನ ಗೂಡಿಗೆ ಬೇಕೆನಿಸುವ ಸಾಮಗ್ರಿಯನ್ನು ಎಲ್ಲೆಲ್ಲಿಂದಲೋ ಆಯ್ದು ತರುವಂತೆ ಈ ನುಡಿಗೂಡಿನ ಹಲವು ವಿಚಾರಗಳೂ ಮನಸಿನ ಹಕ್ಕಿ ಎಲ್ಲ್ಲ್ಲೆಲಿಂದಲೋ ಹೆಕ್ಕಿ ತಂದಿದೆ. ವಿಚಾರವನ್ನು ಹೇಳುವುದಕ್ಕೆ ಬಳಸಿರುವ ನುಡಿ ಜೋಡಣೆ ನನ್ನದು, ಓದಿದ ಮೇಲೆ ನಿಮ್ಮದು.

`ಹಗಲುಗತ್ತಲೆ, ಹಗಲುಗತ್ತಲೆ, ಹದಿರ ನುಡಿವ ಚದುರರಿಗೆಲ್ಲಾ ಹಗಲುಗತ್ತಲೆ~ ಅನ್ನುತ್ತಾನೆ ಚಂದಿಮರಸ ಅನ್ನುವ ವಚನಕಾರ. ಭಾಷೆಯನ್ನು ಭಾಷೆಯ ಮೂಲಕವೇ ಅರಿಯಲು ಹೊರಟರೆ ಬೆಳಕು ಸಿಗುವುದಕ್ಕಿಂತ ಹೆಚ್ಚಾಗಿ ಕತ್ತಲೆಯೇ ಕವಿಯಿತು ಅನ್ನಿಸಿದರೂ, `ಮಾತೆಂಬ ಜ್ಯೋತಿ~ ಕತ್ತಲೆಯ ಗಾಢತೆಯ ಬಗ್ಗೆಯೇ ಅರಿವು ಮೂಡಿಸಿದರೂ ನಮ್ಮಳಕ್ಕೆ ಇಳಿದು ನೋಡಿಕೊಳ್ಳುವುದಕ್ಕೆ, ಅಥವ ಹೊರ ಲೋಕಕ್ಕೆ ಏರಿ ಕಾಣುವುದಕ್ಕೆ `ಶಬ್ದ ಸೋಪಾನ~ಗಳೇ ಬೇಕಲ್ಲವೇ!
 
 (ಓಎಲ್‌ಎನ್ ಅವರ `ನುಡಿಯೊಳಗಾಗಿ~ ಅಂಕಣ ಪ್ರತಿವಾರವೂ ಪ್ರಕಟವಾಗಲಿದೆ. ಡಾ.ಆಶಾ ಬೆನಕಪ್ಪ ಅವರ `ಅಂತಃಕರಣ~ ಹದಿನೈದು ದಿನಗಳಿಗೊಮ್ಮೆ ಪ್ರಕಟವಾಗಲಿದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.