ADVERTISEMENT

ಸುಮೇರಿಯ ಗಂಡು ಭಾಷೆ ಮತ್ತು ಹೆಣ್ಣು ಭಾಷೆ

ಓ.ಎಲ್.ನಾಗಭೂಷಣ ಸ್ವಾಮಿ
Published 4 ಆಗಸ್ಟ್ 2012, 19:30 IST
Last Updated 4 ಆಗಸ್ಟ್ 2012, 19:30 IST
ಸುಮೇರಿಯ ಗಂಡು ಭಾಷೆ ಮತ್ತು ಹೆಣ್ಣು ಭಾಷೆ
ಸುಮೇರಿಯ ಗಂಡು ಭಾಷೆ ಮತ್ತು ಹೆಣ್ಣು ಭಾಷೆ   

ಈಲೋಕದ ಪ್ರಾಚೀನ ಭಾಷೆಗಳನ್ನು ಕುರಿತು ಪುಸ್ತಕವನ್ನೇ ಬರೆಯಬಹುದಾದಷ್ಟು ಮಾಹಿತಿ ದೊರೆಯುತ್ತದೆ. ವಿಜ್ಞಾನದ ನೆರವಿನೊಂದಿಗೆ ಆರ್ಕಿಯಾಲಜಿ, ಚರಿತ್ರೆ, ಭಾಷಾಶಾಸ್ತ್ರಗಳ ತಿಳಿವಳಿಕೆಯನ್ನು ಬಳಸಿಕೊಂಡು ಮನುಷ್ಯ ಮನಸ್ಸು ಅಷ್ಟೊಂದು ತಿಳಿವಳಿಕೆ ಪಡೆದಿದೆ.

ಜಗತ್ತಿನ ಅತಿ ಪ್ರಾಚೀನ ಭಾಷೆ ಎಂದು ತಿಳಿದಿರುವ ಸುಮರ್ ಭಾಷೆಯ ಬಗ್ಗೆ ಓದುತಿದ್ದೆ. ನನ್ನ ಮನಸ್ಸಿನಲ್ಲಿ ಉಳಿದ ಸಂಗತಿಗಳನ್ನಷ್ಟೆ ಈ ವಾರ ನಿಮ್ಮಂದಿಗೆ ಹಂಚಿಕೊಂಡಿದ್ದೇನೆ.

ಸುಮರ್ ಅನ್ನುವುದೊಂದು ಊರು (ಅದನ್ನು ಶುಮರ್ ಅನ್ನಬೇಕಂತೆ), ಅಲ್ಲಿನ ಭಾಷೆಯನ್ನು ಸುಮೇರಿಯನ್ ಅಂತ ಗುರುತಿಸಿ ಅಭ್ಯಾಸವಾಗಿಬಿಟ್ಟಿದೆ. ಅಂಥದೊಂದು ಭಾಷೆ ಇತ್ತು ಅನ್ನುವುದು ಗೊತ್ತಾಗಿದ್ದೇ 1845ರಲ್ಲಿ. ಪ್ರಾಚೀನ ಅಸ್ಸೀರಿಯಾದ ರಾಜಧಾನಿ ನಿನೆವೆಹ್ ಎಂಬ ಊರು ಇದ್ದಲ್ಲಿ ನಡೆಸುತ್ತಿದ್ದ ಉತ್ಖನನದಲ್ಲಿ ಅರಸನ ಗ್ರಂಥಾಲಯವೊಂದು ಪತ್ತೆಯಾಯಿತು.
 
ಅಲ್ಲಿದ್ದ ದಾಖಲೆಗಳ ಭಾಷೆ ಅಕ್ಕಾಡಿಯನ್‌ಗಿಂತ ಹಳೆಯದು, ಅಷ್ಟೇ ಅಲ್ಲ, ಅದುವರೆಗೆ ಪತ್ತೆಯಾಗಿದ್ದ ಯಾವ ಭಾಷಾ ಕುಟುಂಬದ ಯಾವ ಭಾಷೆಗೂ ಸಂಬಂಧ ಇಲ್ಲದ ಒಂಟಿ ಬಡಕ ಭಾಷೆಯದು ಅನ್ನುವುದು ತಿಳಿಯಿತು (ಇದುವರೆಗೆ ಅಂಥ ಹದಿನೆಂಟು ಒಂಟಿ ಬಡಕ ಭಾಷೆಗಳು ಪತ್ತೆಯಾಗಿವೆ).

ಮನುಷ್ಯನಿಗೆ ಗೊತ್ತಿರುವ ಭಾಷೆಗಳಲ್ಲೆಲ್ಲ ಅತಿ ಹಳೆಯದು ಸುಮೇರಿಯದ ಭಾಷೆ. ಅಂದರೆ ಕ್ರಿಪೂ 3100ರಷ್ಟು ಹಳೆಯ ಬರವಣಿಗೆ ಪತ್ತೆಯಾಗಿರುವ ಭಾಷೆ. ಎಂದರೆ ಜಗತ್ತಿನ ಇತಿಹಾಸದಲ್ಲಿ ಮೂವತ್ತೊಂಬತ್ತು `ಪ್ರಥಮ~ಗಳು ಅಲ್ಲಿನ ನಾಗರಿಕತೆಗೆ ಸೇರಿದ್ದು.

ಸುಮರ್‌ನ ಭಾಷೆಯ ದಾಖಲೆಗಳು ಸಿಗುವುದಕ್ಕೂ ಎರಡು ಸಾವಿರ ವರ್ಷದಷ್ಟು ಮೊದಲೇ ಆಫ್ರಿಕಾ ಖಂಡದ ಉತ್ತರ ಭಾಗದಿಂದ ಮನುಷ್ಯರ ವಲಸೆ ಪ್ರಾರಂಭವಾಗಿ ಅವರಲ್ಲೊಂದು ಗುಂಪು ಮೆಸೊಪಟಾಮಿಯದ ದಕ್ಷಿಣ ಭಾಗದಲ್ಲಿ ನೆಲೆಸಿ ಸುಮಾರು ಒಂಬತ್ತು ಪಟ್ಟಣಗಳಷ್ಟು ವ್ಯಾಪ್ತಿಯ ರಾಜ್ಯವಾಯಿತು.
 
ಇವರ ನಾಗರಿಕತೆಯ ಬಹಳ ಮುಖ್ಯವಾದ ಕೊಡುಗೆಗಳೆಂದರೆ ಗಣಿತ ಮತ್ತು ಲಿಪಿ. ಕ್ರಿಪೂ 2800ರ ಹೊತ್ತಿಗಾಗಲೇ ಗಂಟೆಯನ್ನು 60 ನಿಮಿಷ, ನಿಮಿಷಕ್ಕೆ 60 ಕ್ಷಣ, ವಾರಕ್ಕೆ 7 ದಿನ, ದಿನಕ್ಕೆ 24 ಗಂಟೆ; ವೃತ್ತವನ್ನು 360 ಡಿಗ್ರಿಗಳ ಕೋನದಲ್ಲಿ ವಿಭಾಗಿಸುವುದು ಇಂಥ ಲೆಕ್ಕಾಚಾರಗಳನ್ನೆಲ್ಲ ಸುಮರ್ ಜನ ಮಾಡಿಕೊಂಡಿದ್ದರು.
 
ಅವರ ವಿಜ್ಞಾನದ ತಿಳಿವಳಿಕೆ ಅರಬ್ ಜನರ ಮೂಲಕ ಗ್ರೀಕರಿಗೆ, ಅಲ್ಲಿಂದ ಪಶ್ಚಿಮದ ದೇಶಗಳಿಗೆ ಹರಡಿದವು. ಸುಮರ್ ಲಿಪಿಯನ್ನು `ಬೆಣೆ ಲಿಪಿ~ (ಕ್ಯೂನಿಫಾರಂ) ಅನ್ನುತ್ತಾರೆ. ಸರಳರೇಖೆಗಳ ತುದಿಯಲ್ಲಿ ತ್ರಿಕೋನದ ಪುಟ್ಟ ಬಾವುಟ ಸಿಕ್ಕಿಸಿದ ಹಾಗೆ ಕಾಣುವ ಗುರುತುಗಳು ಅವು. ತ್ರಿಕೋನದ ತುದಿಯಿರುವ ಸ್ಟೈಲಸ್ ಕಡ್ಡಿಗಳನ್ನು ಹಸಿ ಮಣ್ಣಿನ ಮೇಲೆ ಹಲಗೆಯ ಮೇಲೆ ಒತ್ತಿ, ಛಾಪು ಮೂಡಿಸಿ, ಬೇಯಿಸಿ ಗಟ್ಟಿಗೊಳಿಸುತಿದ್ದರು.

ಕಡ್ಡಿ ನೇರವಾಗಿ ತುದಿ ಮೂರು ಮೂಲೆಯದಾಗಿರುತ್ತಿದ್ದರಿಂದ ಅವರ ಲಿಪಿಯಲ್ಲಿ ವಕ್ರ ರೇಖೆಗಳು ಇರಲು ಸಾಧ್ಯವೇ ಇರಲಿಲ್ಲ. ಇಂಥ ಅಕ್ಷರಗಳಿರುವ ಸಾವಿರಾರು ಫಲಕಗಳಲ್ಲಿ ಕೆಲವು ಕ್ರಿಪೂ 30ನೆಯ ಶತಮಾನಕ್ಕಿಂತ ಹಳೆಯದು ಅನ್ನುತ್ತಾರೆ. ಸುಮಾರಾಗಿ ಅದೇ ಹೊತ್ತಿಗೆ ಈಜಿಪ್ಟ್‌ನಲ್ಲಿ ಹಿರೋಗ್ಲಿಫಿಕ್ಸ್ ಅನ್ನುವ ಬರವಣಿಗೆಯ ಶೈಲಿ ಬಳಕೆಯಲ್ಲಿತ್ತು.

ಒಂದು ವ್ಯತ್ಯಾಸವೆಂದರೆ ಹಿರೋಗ್ಲಿಫಿಕ್ಸ್ (`ಕೆತ್ತಿದ ಪವಿತ್ರಾಕ್ಷರ~)ನ ಒಂದೊಂದು ಸಂಕೇತವೂ ಇಡೀ ಒಂದು ಐಡಿಯಾವನ್ನು ಸೂಚಿಸುವ ಚಿತ್ರಲಿಪಿ. ಉದಾಹರಣೆಗೆ, ಎರಡು ಪಾದಗಳ ಸಂಕೇತ `ಹೋಗುತ್ತಾನೆ/ಳೆ~ ಅನ್ನುವುದನ್ನು ಸೂಚಿಸುವ ಹಾಗೆ. ಸುಮರ್‌ಗಳು ರೂಪಿಸಿಕೊಂಡ ಲಿಪಿಯಲ್ಲಿ ಒಂದೊಂದು ಸಂಕೇತವೂ ಒಂದೊಂದು ಪದದ ಉಚ್ಚಾರಣೆಯನ್ನು ಸೂಚಿಸುವ ಹಾಗೆ ಇರುತ್ತಿತ್ತು.
 
ಕ್ರಮೇಣ, ಇದೇ ನದಿಗಳ ನಡುವಿನ ನಾಡಿನ ಜನರಾದ ಫೊನೀಶಿಯನ್ನರು ಸುಮರ್ ಲಿಪಿಯನ್ನು ಮತ್ತಷ್ಟು ಪರಿಷ್ಕರಿಸಿ ಒಂದೊಂದು ಸಂಕೇತವೂ ಒಂದೊಂದು ಧ್ವನಿಯನ್ನು ಸೂಚಿಸುವಂತೆ ಲಿಪಿಯನ್ನು ಬಳಸಿದರು. ಅವರ ಈ ಬರವಣಿಗೆಯ ಕ್ರಮ ಗ್ರೀಕರಿಗೆ ಮತ್ತೆ ಅಲ್ಲಿಂದ ಬೇರೆ ಬೇರೆ ಪ್ರದೇಶಗಳಿಗೆ, ಬೇರೆ ಬೇರೆ ರೂಪ ತಾಳುತ್ತ ಹರಡಿಕೊಂಡಿತು.

ಈಜಿಪ್ಟಿನ ಚಿತ್ರಲಿಪಿ, ಸುಮರ್‌ನ ಪದಲಿಪಿ ಇವು ತೀರ ಕಣ್ಮರೆಯಾಗಿರುವ ಸಂಗತಿಗಳು ಎಂದೇನೂ ತಿಳಿಯಬೇಕಾಗಿಲ್ಲ. ನಾವು ಈ ಹೊತ್ತೂ ಆ ಎರಡೂ ಲಿಪಿವಿಧಾನಗಳನ್ನು ಬಳಸುತ್ತಲೇ ಇದ್ದೇವೆ. + - ಹಿ ಮೊದಲಾದ ಗಣಿತದ ಸಂಕೇತಗಳು, ಅಥವ ವಿದ್ಯುತ್ ಟ್ರಾನ್ಸ್‌ಫಾರ‌್ಮರ್‌ಗಳ ಮೇಲೆ ಎಲುಬು, ತಲೆಬುರುಡೆಗಳ ಚಿತ್ರ, ದಾರಿಯುದ್ದಕ್ಕೂ ಕಾಣುವ ರಸ್ತೆ ಸಂಕೇತಗಳು ಇಂಥ ಬರವಣಿಗೆಗಳು ಪ್ರಾಚೀನವೆಂದು ನಾವು ಭಾವಿಸಿರುವ ಲಿಪಿ ಶೈಲಿಗಳೇ ಅಲ್ಲವೇ?

ಇನ್ನೊಂದು ಸ್ವಾರಸ್ಯದ ಸಂಗತಿ ಇದೆ. ಹೆಣ್ಣು ದೇವತೆಗಳು, ಹೆಣ್ಣು ಪಾತ್ರಗಳು ಆಡುವ ಸುಮರ್ ಭಾಷೆಯನ್ನು ಬೇರೆ ಥರ, ಗಂಡು ದೇವತೆಗಳು, ಗಂಡು ಪಾತ್ರಗಳು ಆಡುವ ಭಾಷೆಯನ್ನು ಇನ್ನೊಂದು ಥರ ಬರೆದಿದ್ದಾರೆ. ನಯ ನಾಜೂಕಿನ ಹೆಣ್ಣು ಸುಮರ್ ಭಾಷೆಯನ್ನು ಎಮೆಸಲ್ ಎಂದೂ ಗಂಡು ಸುಮರ್ ಭಾಷೆಯನ್ನು ಎಮಿಗಿರ್ ಎಂದೂ ಗುರುತಿಸುತ್ತಾರೆ.
 
ಈ ಎರಡು ಪ್ರಭೇದಗಳಲ್ಲಿ ಪದಗಳ ರೂಪ ಮತ್ತು ಉಚ್ಚಾರಣೆ ಬೇರೆ ಥರ ಇರುತಿತ್ತಂತೆ. ಹೆಣ್ಣು ಭಾಷೆಯಲ್ಲಿ ವ್ಯಂಜನಗಳನ್ನು ನಾಲಗೆಯ ಮುಂಭಾಗಕ್ಕೆ ಹೆಚ್ಚು ಕೆಲಸ ಕೊಟ್ಟು ಉಚ್ಚರಿಸಿದ ಹಾಗೆ ಇರುತಿತ್ತಂತೆ. ಎನ್‌ಎಡುಅನ್ನ ಎಂಬ ಹೆಣ್ಣು ಮಗಳು ಸುಮರ್‌ಗಳ ಪ್ರೀತಿ ಮತ್ತು ಯುದ್ಧದ ದೇವತೆ ಇನನ್ನಾ ಬಗ್ಗೆ ಬರೆದಿರುವ ಮೂರು ಸ್ತ್ರೋತ್ರಗಳು ಸಿಕ್ಕಿವೆ.
 
ಅದನ್ನು ಬರೆದವಳೇ ಜಗತ್ತಿನ ಮೊಟ್ಟಮೊದಲ ಹೆಣ್ಣು ಕವಿ, ನಾಲ್ಕು ಸಾವಿರದ ಮುನ್ನೂರು ವರ್ಷ ಹಳಬಳು; ಆಕೆ ಅರಸ ಶಾರ‌್ರೂಕಿನೂ ಎಂಬಾತನ ಮಗಳು, ದೇಗುಲದ ಹಿರಿಯ ಪೂಜಾರಿಣಿಯಾಗಿದ್ದಳು.

`ಮುಗಿಲೆತ್ತರ, ನೆಲದಗಲ ನೀನು
ಒಲ್ಲದವರ ನಾಡುಗಳ ಮುರಿದಿಕ್ಕುವವಳು
ಮುನಿದ ಮುಖದವಳು
ಹೊಳೆವ ಕಣ್ಣವಳು~

`ಮನೆಯ ನಿಲಿಸುವುದು
ಹೆಣ್ಣಿನ ಕೋಣೆಯ ಸಜ್ಜು
ಮಗುವಿಗಿಡುವ ಮುತ್ತು
ಬೇಸಾಯದ ನೇಗಿಲು, ಕುಳ
ಅರಸನ ತಲೆಯ ಮುಕುಟ
ಎಲ್ಲಾ ನಿನ್ನ ಕರುಣೆ~

ADVERTISEMENT

`ಬೆಳಕು ಸವಿಯಾಗಿತ್ತು
ಆನಂದ ಆವರಿಸಿತು ಅವಳನ್ನು
ಹುಣ್ಣಿಮೆ ಬೆಳಕಿನಂತೆ ಸಮೃದ್ಧ ಚೆಲುವೆ
ಬೆಳಕನ್ನೆ ಉಟ್ಟಳು, ತೊಟ್ಟಳು~

`ದಂಗೆಯೆದ್ದ ನಾಡು ಪೂರಾ ನಾಶಮಾಡಿದೆ ನನ್ನ
ಕಿಟಕಿಯಿಂದಾಚೆಗೆ ಓಡಿಸಿದ ಗುಬ್ಬಚ್ಚಿಯ ಹಾಗೆ ನಾನು
ದೇಗುಲದಿಂದ ಹೊರದಬ್ಬಿಸಿಕೊಂಡವಳು~

ಇವು ಅವಳು ರಚಿಸಿರುವ ಸ್ತ್ರೋತ್ರದ ಕೆಲವು ಸಾಲುಗಳು. ತಾನು ಬೇರೆಯಲ್ಲ ಇನನ್ನಾ ಬೇರೆಯಲ್ಲ ಅನ್ನುವ ಹಾಗೆ ಮಾತನಾಡುವ, ತನ್ನ ತಂದೆಯ ಕಾಲದ ರಾಜಕೀಯ ಸುಳಿವುಗಳನ್ನು ಹುದುಗಿಸಿಟ್ಟುಕೊಂಡಿರುವ, ಪ್ರೇಮದ ದೇವಿಯ ಭೀಕರ-ಸೌಮ್ಯ ರೂಪವನ್ನೂ ಆಕೆಯೇ ಮನೆಯ, ಹೆಣ್ಣಿನ, ರಾಜ್ಯದ, ನಾಗರಿಕತೆಯ ಶಕ್ತಿ ಅನ್ನುವುದನ್ನು ಹೇಳುವ ಸ್ತ್ರೋತ್ರಗಳನ್ನು ರಚಿಸಿರುವ ಈಕೆಗೆ ಜಾಗತಿಕ ಮಹಿಳಾ ಸಾಹಿತ್ಯದಲ್ಲಿ ಇರುವ ಮನ್ನಣೆ ಕನ್ನಡದಲ್ಲಿ ಮಹದೇವಿಯಕ್ಕನಿಗೆ ಇರುವಷ್ಟೇ ಮುಖ್ಯವಾದದ್ದು.
ಇತರ ಹೆಣ್ಣು ಕವಿತೆಗಳಲ್ಲಿ ಒಂದು ಮಾದರಿ ಇಲ್ಲಿದೆ ನೋಡಿ:

`ಪುರುಷ ಸಿಂಹವೆ ಬಾ
ಹೆಳವನಂತೆ ಕೈ ಎತ್ತಿ ಕರೆದಿದೆ ನಗರ
ಸಿಂಹದ ಮರಿಯಂತೆ ನಿನ್ನ ಕಾಲಡಿ ಮುದುರಿ ಮಲಗಿದೆ
ಖರ್ಜೂರ ಮದ್ಯದಷ್ಟೆ ಮಧುರ ಮಧುವನ್ನು ನೀಡುವಳು ಈ ಸೇವಕಿ
ಮದ್ಯದಷ್ಟೆ ಮತ್ತೇರಿಸುವ ಅಂಗನೆ~

ಸ್ತ್ರೀಪುರುಷ ಮಿಲನವನ್ನು ಕುರಿತು ಮಹದೇವಿಯಕ್ಕನಂತೆಯೇ, ಅಲ್ಲ, ಅವಳಿಗಿಂತ ಹೆಚ್ಚು ನಿರ್ಭಿಡೆಯಿಂದ ನುಡಿಯುವ ಸುಮಾರು ಇಪ್ಪತ್ತು ಹೆಣ್ಣು ರಚನೆಗಳು ದೊರೆತಿವೆ, ಅವುಗಳಿಗೆ ಸಂಬಂಧಿಸಿದ ಧಾರ್ಮಿಕ ಆಚರಣೆಗಳ ವಿಶ್ಲೇಷಣೆ ನಡೆದಿದೆ.

ಕ್ರಿಪೂ 22ರ ಸುಮಾರಿಗೆ ಸುಮರ್ ಸಾಮ್ರಾಜ್ಯ ಅಕ್ಕಾಡಿಯನ್, ಅರೊಮೈಟ್ ಮತ್ತು ಅಸ್ಸಿರಿಯದ ದಾಳಿಗಳಿಗೆ ಒಳಗಾಯಿತು. ಇವರಲ್ಲಿ ಅನೇಕರು ಆಡುತಿದ್ದದ್ದು ಸೆಮಿಟಿಕ್ ಅನ್ನುವ ವರ್ಗಕ್ಕೆ ಸೇರಿದ ಭಾಷೆಗಳನ್ನು (ಸೆಮಿಟಿಕ್ ಅಂದರೆ ಬೈಬಲ್‌ನಲ್ಲಿ ಬರುವ ನೋಹಾ ಎಂಬಾತನ ಎರಡನೆಯ ಮಗ ಶೆಮ್ ಅನ್ನುವವನ ವಂಶಜರೆಂದು ತಿಳಿಯಲಾದ ಜನ ಆಡುತಿದ್ದ ಭಾಷೆಗಳು.

ಅರಾಬಿಕ್ ಮತ್ತು ಹೀಬ್ರೂ ಇವು ಇಂದೂ ಚಾಲ್ತಿಯಲ್ಲಿರುವ ಪ್ರಾಚೀನ ಸೆಮಿಟಿಕ್ ಭಾಷೆಗಳು). ಗ್ರೀಕ್ ನಾಗರಿಕತೆ ಇಲ್ಲವಾದ ಮೇಲೂ ಎಷ್ಟೋ ಶತಮಾನ ಗ್ರೀಕ್ ಭಾಷೆ ಉಳಿದಂತೆಯೇ ಸುಮರ್ ರಾಜ್ಯ ಅನ್ಯರ ಪಾಲಾದ ಮೇಲೂ ಅವರ ಭಾಷೆ ಉಳಿದಿತ್ತು. ಅಕ್ಕಾಡಿಯನ್, ಹಿಟೈಟ್, ಫೊನೀಶಿಯನ್ ಮೊದಲಾದ ಭಾಷೆಗಳು ಸುಮರ್ ಭಾಷೆಯ ಲಿಪಿಯನ್ನೇ ತಮ್ಮ ಭಾಷೆಗಳಿಗೂ ಅಳವಡಿಸಿಕೊಂಡವು- ಇವತ್ತು ನಾವು ಕನ್ನಡ ಎಸ್‌ಎಂಎಸ್‌ಗೆ ಇಂಗ್ಲಿಷ್ ಅಕ್ಷರಗಳನ್ನು (ನಿಜವಾಗಿ ಅವು ರೋಮನ್ ಅಕ್ಷರಗಳು!) ಬಳಸುವಂತೆ.
 
ಇದರಿಂದ ಮೆಸೊಪಟಾಮಿಯದ ಹಲವು ಭಾಷೆಗಳು ಏಕರೂಪದ ಲಿಪಿಯಲ್ಲಿ ದೊರೆಯುವಂತೆ ಆಯಿತು. ನಂತರ ಅಕ್ಕಾಡಿಯದ ಭಾಷೆ ಆ ಕಾಲದ ಅಂತಾರಾಷ್ಟ್ರೀಯ ಭಾಷೆಯಾಯಿತು. ಆದರೆ ಸುಮರ್‌ನ ಲಿಪಿ ಎಷ್ಟು ಕ್ರಮಬದ್ಧವಾಗಿತ್ತೆಂದರೆ ಆ ಭಾಷೆಯ ಮರ್ಮ ಅರಿಯದೆ ಲಿಪಿಯನ್ನು ಬಳಸಲು ಆಗುತ್ತಲೇ ಇರಲಿಲ್ಲ.
 
ಕ್ರಿಸ್ತಪೂರ್ವ ಹದಿನೈದರ ಹೊತ್ತಿಗೆ ಆಗಲೇ ಮರೆಯಾಗುತಿದ್ದ ಸುಮರ್ ಭಾಷೆ, ಸಾಹಿತ್ಯಗಳ ಅಭ್ಯಾಸ ಮಕ್ಕಳಿಗೆ ಕಡ್ಡಾಯವಾಗಿತ್ತು. ಹಾಗೆ ಮಕ್ಕಳು ಬರೆದುಕೊಂಡ ಅಭ್ಯಾಸ ಲೇಖನದ ನೂರಾರು ಪ್ರತಿಗಳು ಸಿಕ್ಕಿವೆ.

ಆದ್ದರಿಂದಲೇ ಮೊಟ್ಟಮೊದಲ ಪ್ರೇಮಕವಿತೆ, ಜೋಗುಳ, ಗಾದೆಗಳಿಂದ ಹಿಡಿದು ಪ್ರಪಂಚ ಸೃಷ್ಟಿಯನ್ನು ಕುರಿತ ಎನುಮ ಎಲಿಶ್ (`ಅಲ್ಲಿ-ಆ-ಮೇಲೆ~) ಕಥೆ, ಪ್ರಳಯವನ್ನು ಕುರಿತ ಕಥೆ ಸಿಕ್ಕಿವೆ. ಇವು ಬೈಬಲ್‌ನ ನೋಹನ ನೌಕೆಯ ಕಥೆಗೆ ಪ್ರೇರಣೆ ಒದಗಿಸಿರಬಹುದು; ಅಕ್ಕಾಡಿಯನ್ ಮತ್ತು ಹೀಬ್ರೂ ಎರಡೂ ಸೆಮಿಟಿಕ್ ಭಾಷೆಗಳೇ ಆದ್ದರಿಂದ ಇಂಥ ವಿನಿಮಯ ನಡೆದಿರಬಹುದು ಎಂಬ ಊಹೆ ಇದೆ.
 
ಆ ಕಾಲದ ಇತರ ಭಾಷೆಗಳ ಆವೃತ್ತಿಗಳಲ್ಲಿ ಬೆಳೆದು ವಿಕಾಸ ಹೊಂದಿದ ಗಿಲ್ಗಮಿಶ್‌ನ ಕಥೆ ಕೂಡ ಸುಮರ್ ಭಾಷೆಯದು. ಗಿಲ್ಗಮಿಶ್ ಜಗತ್ತಿನ ಮೊಟ್ಟ ಮೊದಲ ಮಹಾಕಾವ್ಯ. ಮುಕ್ಕಾಲು ಭಾಗ ದೇವರು ಕಾಲು ಭಾಗ ಮನುಷ್ಯನಾಗಿದ್ದ ನಾಯಕನ ಸಾಹಸಗಳನ್ನು, ಮುಖ್ಯವಾಗಿ ಅಮರತ್ವವನ್ನು ಪಡೆಯಲು ಅವನು ನಡೆಸುವ ಹೋರಾಟವನ್ನು ಈ ಕಾವ್ಯ ಹೇಳುತ್ತದೆ.
 
ಆ ಕಾಲದ ಅಲೆಮಾರಿ ವ್ಯಾಪಾರಿಗಳಾಗಿದ್ದ ಫೊನೀಶಿಯನ್ನರು ಮೆಸೊಪಟಾಮಿಯದ ನಾಗರಿಕತೆಯ ಹೂವು ಹಣ್ಣುಗಳನ್ನು ಆಗಿನ ಜಗತ್ತಿಗೆಲ್ಲ ಹರಡುವ ಹಾಗೆ ಜಾಗತೀಕರಣಗೊಳಿಸಿದರು. ಭಾಷೆಗಳ ಬೆರಕೆ, ಕಥೆಗಳ ಬೆರಕೆ, ಜನಗಳ ಬೆರಕೆಯ ಮೂಲಕ ವಿಸ್ತಾರ ಎಷ್ಟರಮಟ್ಟಿಗೆಂದರೆ ಮೊಸೊಪಟಾಮಿಯದ ಒಂದು ಭಾಷೆ ಪಾಕಿಸ್ತಾನದ ಮತ್ತು ದಕ್ಷಿಣ ಭಾರತದ ದ್ರಾವಿಡ ಭಾಷೆಗಳಿಗೆ ಸಂಬಂಧಿಯಂತೆ.

ಪ್ರೀತಿ ಸಂಕರ, ವ್ಯಾಪಾರ ಸಂಕರ, ಯುದ್ಧ ಸಂಕರ, ಭಾಷಾ ಸಂಕರ-ಸಂಕರವಿಲ್ಲದೆ ಮನುಷ್ಯ ವಿಕಾಸ, ಜೀವ ವಿಕಾಸ ಸಾಧ್ಯವೇ ಇಲ್ಲವೇನೋ.ಗಿಲ್ಗಮಿಶ್ ಮತ್ತು ಎನುಮಾ ಎಲಿಶ್ ಮೂಲ ಭಾಷೆಯಲ್ಲೇ ಕೇಳಲು http://www.soas.ac.uk/baplar/recordings/;  ಆಚರಣೆಗಳೊಡನೆ ಹೇಳಲಾಗುತಿದ್ದ ಪ್ರೇಮಕವಿತೆಗಳಿಗೆ http://www.gatewaystobabylon.com/ ಇನನ್ನಾ ಸ್ತ್ರೋತ್ರದ ಸ್ತ್ರೀವಾದಿ ವಿಶ್ಲೇಷಣೆಗೆ 

http://www.angelfire.com/mi/enheduanna/Enhedwriting.html ಜಾಲತಾಣಗಳನ್ನು ನೋಡಿ. ಗಿಲ್ಗಮಿಶ್ ಕಥೆ ನವಕರ್ನಾಟಕ ಸಂಸ್ಥೆಯವರು ಪ್ರಕಟಿಸಿರುವ `ವಿಶ್ವಕಥಾಮಾಲೆ~ಯ ಸಂಪುಟಗಳಲ್ಲಿದೆ; ಸಾಶಿ ಮರುಳಯ್ಯನವರು ಗಿಲ್ಗಮಿಶ್ ಬಗ್ಗೆ ವಿಸ್ತಾರವಾದ ಪುಸ್ತಕವನ್ನೇ ಬರೆದಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.