ADVERTISEMENT

ನಿಂದಿಸಿದ ಶಾಸಕರೇ ಕ್ಷಮೆ ಕೇಳಿದರು

ಶಿವರಾಮ್
Published 28 ಮೇ 2011, 19:30 IST
Last Updated 28 ಮೇ 2011, 19:30 IST

ಆ  ಶಾಸಕರನ್ನು ಅಲ್ಲಿಂದ ಹೊರದಬ್ಬಿದ ನಂತರ ಎಸಿಪಿ  ರಂಗೇಗೌಡ ಹಾಗೂ ಇನ್ಸ್‌ಪೆಕ್ಟರ್ ಸಿ.ಕೆ.ನಾಗರಾಜ್ ನಾವಿದ್ದ ಮತಗಟ್ಟೆಗೆ ಬಂದರು. ಸಾಮಾನ್ಯವಾಗಿ ಅಧಿಕಾರಿಗಳು ಶಾಸಕರಪರವಾಗಿಯೇ ಮಾತನಾಡುತ್ತಾರೆ. ಅವರೂ ಹಾಗೆಯೇ ಇರಬಹುದು ಎಂದು ನಾನು ತಪ್ಪು ಭಾವಿಸಿದ್ದೆ. ನನ್ನ ವಯಸ್ಸಿನ್ನೂ ಆಗ ಚಿಕ್ಕದು.

ಅವರ ಎದುರೂ ಸಾಕಷ್ಟು ಏರಿದ ದನಿಯಲ್ಲೇ ಮಾತಾಡಿದೆ. ಕರ್ತವ್ಯನಿರತ ಕಾನ್‌ಸ್ಟೇಬಲ್ ವಿರುದ್ಧವೇ ಅವರು ಕೆಟ್ಟ ಮಾತುಗಳನ್ನಾಡಿದ್ದನ್ನು ಬಿಡಿಸಿ ಹೇಳಿದೆ. ನಡೆದ ಘಟನೆಯನ್ನೆಲ್ಲಾ ಕೇಳಿದ ನಂತರ ಅವರು, ಪೋಲಿಂಗ್ ಆಫೀಸರ್ ಕೈಯಿಂದ ದೂರು ಪಡೆದು ಆ ಶಾಸಕರ ವಿರುದ್ಧ ಕೇಸು ದಾಖಲಿಸುವಂತೆ ಸೂಚಿಸಿದರು. ಆದರೆ, ಆ ಪೋಲಿಂಗ್ ಆಫೀಸರ್ ಉಸಾಬರಿ ಬೇಡ ಎಂಬ ಕಾರಣಕ್ಕೆ ದೂರು ಕೊಡಲು ಸುತರಾಂ ಒಪ್ಪಲಿಲ್ಲ.

ರಾಮಕೃಷ್ಣ ಹೆಗಡೆ ಆಗ ಮುಖ್ಯಮಂತ್ರಿ. ಪ್ರಮುಖ ಸಚಿವರಾಗಿದ್ದ ಜೀವರಾಜ್ ಆಳ್ವ ಅವರ ವರ್ಚಸ್ಸೂ ಆಗ ಜೋರಾಗಿತ್ತು. ನಾನು ಶಾಸಕರನ್ನು ಮತಗಟ್ಟೆಯಿಂದ ಆಚೆ ದಬ್ಬಿದ ಸಂಗತಿಯು ಅವರಿಗೂ ಮುಟ್ಟಿತು. ನನ್ನನ್ನು ಭೇಟಿಯಾಗಬೇಕೆಂದು ಅವರು ಹೇಳಿ ಕಳುಹಿಸಿದರು. `ನೀವು ಸರಿಯಾಗಿಯೇ ಮಾಡಿದ್ದೀರಿ. ಅವರು ತಪ್ಪು ಮಾಡಿದ್ದರೆಂಬುದು ಸತ್ಯ. ಹೀಗೆಯೇ ನೀವು ನಿಮ್ಮ ಕೆಲಸ ಮಾಡಿಕೊಂಡು ಹೋಗಿ. ನಿಮ್ಮ ಭದ್ರತೆಯ ಆತಂಕ ಬಿಟ್ಟುಬಿಡಿ~ ಎಂದು ಅವರು ಹೇಳಿದಾಗಲೂ ಅಚ್ಚರಿಯಾಯಿತು. ಇಪ್ಪತ್ತನಾಲ್ಕು ಗಂಟೆಗಳಲ್ಲಿ ನನ್ನನ್ನು ನೀರು ನೆರಳಿಲ್ಲದ ಜಾಗಕ್ಕೆ ಎತ್ತಂಗಡಿ ಮಾಡಿಸುವುದಾಗಿ ತೊಡೆ ತಟ್ಟಿದ ಶಾಸಕರ ಬಗ್ಗೆ ಅವರ ಪಕ್ಷದ ಮುಖಂಡರಿಗೆ ಅಸಮಾಧಾನವಿದ್ದದ್ದು ನನಗೆ ಅರಿವಾಯಿತು.

ಅದೇ ಶಾಸಕರು ಒಂದು ಕೋಮಿನ ವಿರುದ್ಧವಾಗಿ ಮಾತನಾಡಿದ್ದನ್ನು ಕೆಲವು ಪೀತಪತ್ರಿಕೆಗಳು ಬರೆದವು. ಅದು ದೊಡ್ಡ ಮಟ್ಟದ ಗಲಭೆಗೆ ಕಾರಣವಾಯಿತು. ಮಾರ್ಚ್ 12, 1984. ಆ ಶಾಸಕರ ಮನೆಗೆ ಕೆಲವು ಕಿಡಿಗೇಡಿಗಳು ನುಗ್ಗಿದರು. ಮಾಹಿತಿ ಬಂದ ತಕ್ಷಣ ನಾನೂ ಅಲ್ಲಿಗೆ ಹೋದೆ. ನನ್ನ ಜೊತೆ ಇದ್ದದ್ದು ಐವರು ಕಾನ್‌ಸ್ಟೇಬಲ್‌ಗಳು. ಮನೆಯಲ್ಲಿ ಒಬ್ಬೇ ಒಬ್ಬ ಗಂಡಸು ಇರಲಿಲ್ಲ. ಸಂಕಷ್ಟದ ಕಾಲವಾದ್ದರಿಂದ ಮನೆ ಕಾವಲಿಗೆ ಇದ್ದವರೆಲ್ಲಾ ಪ್ರಾಣಭಯದಿಂದ ಓಡಿದ್ದರು. ಒಳಗೆ ಹೆಣ್ಣುಮಕ್ಕಳ ಆಕ್ರಂದನ. ಮನೆಯೊಳಗಿದ್ದ ದುಷ್ಕರ್ಮಿಗಳು ಬೆಂಕಿ ಇಡಲು ಸಿದ್ಧರಾಗಿದ್ದರು. ಆ ಹೆಣ್ಣುಮಕ್ಕಳ ಎದುರಲ್ಲಿ ನಾನು ನಿಂತೆ. ನಮ್ಮ ಕಾನ್‌ಸ್ಟೇಬಲ್‌ಗಳೂ ಸಹಕರಿಸಿದರು. `ಬೆಂಕಿ ಹಚ್ಚಿದರೆ ಯಾರನ್ನೂ ಸುಮ್ಮನೆ ಬಿಡುವುದಿಲ್ಲ~ ಎಂದು ಅಲ್ಲಿದ್ದ ಪ್ರತಿಯೊಬ್ಬರ ಚಹರೆಯನ್ನೂ ಗಮನಿಸತೊಡಗಿದೆ. ಅದಾಗಲೇ ಪೊಲೀಸ್ ಕಡತದಲ್ಲಿದ್ದ ಒಬ್ಬನ ಗುರುತು ಸಿಕ್ಕಿತು. ನಾನು ಪತ್ತೆಹಚ್ಚಿದೆನೆಂಬುದು ಅವನಿಗೂ ಗೊತ್ತಾದದ್ದೇ ಅಲ್ಲಿಂದ ಪೇರಿ ಕಿತ್ತ. ನಮ್ಮ ಕಾನ್‌ಸ್ಟೇಬಲ್‌ಗಳೂ ಅನೇಕರನ್ನು ಗುರುತು ಹಿಡಿದರು. ಗಲಭೆ ನಡೆಯುವಾಗ ಪೊಲೀಸರ ಕಣ್ಣಿಗೆ ಬಿದ್ದರೆ ಮುಂದೆ ತಮ್ಮ ಕಥೆ ಮುಗಿದಂತೆಯೇ ಎಂದು ಭಾವಿಸಿರುವ ರೌಡಿಗಳೂ ಇದ್ದಾರೆ. ಅಲ್ಲಿದ್ದವರ ಮನಸ್ಥಿತಿ ಅದೇ ಆಗಿದ್ದರಿಂದ ಬೆಂಕಿ ಹಚ್ಚದೆ ಎಲ್ಲರೂ ಓಡಿದರು. ಈ ಸಿನಿಮೀಯ ಘಟನೆಗೆ ಸಾಕ್ಷಿಯಾಗಿದ್ದ ಆ ಮನೆಯ ಹೆಣ್ಣುಮಕ್ಕಳ ಜೀವ ಬಾಯಿಗೆ ಬಂದುಬಿಟ್ಟಿತ್ತು. ಆ ಶಾಸಕರು ಹಿಂದೆ ನನ್ನ ವಿಷಯದಲ್ಲಿ ನಡೆದುಕೊಂಡಿದ್ದ ರೀತಿ ಅವರೆಲ್ಲರಿಗೂ ಗೊತ್ತಿತ್ತು.
 
`ನಿಮ್ಮ ಜಾಗದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಮನೆಗೆ ಬೆಂಕಿ ಇಡುವುದನ್ನೇ ಕಾಯುತ್ತಿದ್ದರು. ಆಮೇಲೆ ನೆಪಮಾತ್ರಕ್ಕೆ ಒಂದು ಕೇಸು ದಾಖಲಿಸಿ ಕೈತೊಳೆದುಕೊಳ್ಳುತ್ತಿದ್ದರು. ನೀವು ಹಾಗೆ ಮಾಡಲಿಲ್ಲ. ನಮ್ಮ ಮನೆಯವರಿಂದ ತಪ್ಪಾಗಿದ್ದರೂ ಅದನ್ನು ಮನಸ್ಸಿಗೆ ಹಾಕಿಕೊಳ್ಳದೆ ಕಾಪಾಡಿದಿರಿ~ ಎಂದು ಅವರೆಲ್ಲ ಹೇಳಿದರು. ಅಂದು ಆ ಶಾಸಕ ಅಲ್ಲಿ ಇದ್ದಿದ್ದರೂ ನಾನು ಕಾಪಾಡದೇ ಇರುತ್ತಿರಲಿಲ್ಲ.

ಶಾಸಕರ ಒಡಕುಬಾಯಿಯ ಒಂದು ಮಾತಿನಿಂದ ಸತತವಾಗಿ ಒಂದು ವಾರ ಬೆಂಗಳೂರಿನ ವಿವಿಧೆಡೆ ಗಲಭೆ ನಡೆಯಿತು. ಒಟ್ಟು ಐದು ಮಂದಿ ಮೃತಪಟ್ಟರು. ಆ ಶಾಸಕ ಒಂದು ತಿಂಗಳು ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಪರಿಸ್ಥಿತಿ ತಣ್ಣಗಾದ ನಂತರ ಒಮ್ಮೆ ದಿಢೀರನೆ ನಾನಿದ್ದ ಠಾಣೆಯಲ್ಲಿ ಪ್ರತ್ಯಕ್ಷರಾಗಿ, ಕ್ಷಮೆ ಕೇಳಿದರು. ಇನ್ನು ಮುಂದೆ ಪೊಲೀಸರ ವಿರುದ್ಧ ಎಂದೂ  ಮಾತನಾಡುವುದಿಲ್ಲ ಎಂದು ಕಣ್ಣೀರು ಹಾಕಿಕೊಂಡು ಹೊರನಡೆದರು. ಪ್ರಾಣಿಗಳ ಚರ್ಮ ವ್ಯಾಪಾರದ ದಲ್ಲಾಳಿಯಾಗಿದ್ದ ಅವರಲ್ಲಿ ಶಾಸಕ ಸ್ಥಾನ ತುಂಬಿದ್ದ ದರ್ಪವೆಲ್ಲಾ ಒಮ್ಮೆಲೇ ಇಳಿದುಹೋಗಿತ್ತು. ನಮ್ಮ ರಾಜಕಾರಣಿಗಳಲ್ಲಿ ಎಂಥ ಹುಂಬರಿರುತ್ತಾರೆ ಎಂಬುದಕ್ಕೆ ನಾನು ಕಂಡ ಒಳ್ಳೆಯ ಉದಾಹರಣೆ ಇದು.
***
ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ನಾನು ಇನ್ಸ್‌ಪೆಕ್ಟರ್ ಆಗಿದ್ದೆ. ಆಗ ಜಿಲ್ಲಾ ಪಂಚಾಯಿತಿ ಚುನಾವಣೆಯ ಕಾವು. ಎಸ್.ಎಂ.ಕೃಷ್ಣ ಮುಖ್ಯ ಮಂತ್ರಿಯಾಗಿದ್ದ ಕಾಲ. ಅವರ ಸೋದರ ಎಸ್.ಎಂ.ಶಂಕರ್ ಚುನಾವಣೆಯ ಭರಾಟೆಯಲ್ಲಿ ತೊಡಗಿದ್ದರು.

ಮಂಡ್ಯದ ಕಾಂಗ್ರೆಸ್ ಸದಸ್ಯರನ್ನೆಲ್ಲಾ ಕರೆತಂದು, ಬೆಂಗಳೂರಿನ ಕಪಾಲಿ ಟಾಕೀಸಿನ ಬಳಿಯ ಲಾಡ್ಜ್‌ನಲ್ಲಿ ಇರಿಸಿದ್ದರು. ಮಂಡ್ಯದ ಹಿರಿಯ ರಾಜಕಾರಣಿಯೊಬ್ಬರು ಆಗ ಸಂಸದರಾಗಿದ್ದರು. ಅವರು ನಮ್ಮ ಠಾಣೆಯ ಸಬ್ ಇನ್ಸ್‌ಪೆಕ್ಟರ್‌ಗೆ ಫೋನ್ ಮಾಡಿ, ಆ ಲಾಡ್ಜ್‌ನಲ್ಲಿರುವ ಸದಸ್ಯರನ್ನೆಲ್ಲಾ ಬಂಧಿಸಿ ಎಂದು ತಾಕೀತು ಮಾಡಿದರು. ಸಬ್ ಇನ್ಸ್‌ಪೆಕ್ಟರ್ ಕಕ್ಕಾಬಿಕ್ಕಿಯಾಗಿ, ನನಗೆ ವಿಷಯ ತಿಳಿಸಿದರು. ಮಂಡ್ಯ ಠಾಣೆಗೆ ಫೋನ್ ಮಾಡಿ ವಿಚಾರಿಸಿ. ಅಲ್ಲಿ ಕೇಸು ದಾಖಲಾಗಿದ್ದರೆ ಮಾತ್ರ ಕ್ರಮ ತೆಗೆದುಕೊಳ್ಳಬಹುದು ಎಂದೆ. ಕೇಸು ದಾಖಲಾಗಿರಲಿಲ್ಲ. ಯಾವುದಕ್ಕೂ ಒಮ್ಮೆ ಆ ಲಾಡ್ಜ್‌ಗೆ ಹೋಗಿ ನೋಡುವಂತೆ ಸಬ್ ಇನ್ಸ್‌ಪೆಕ್ಟರ್‌ಗೆ ಹೇಳಿದೆ. ಆ ಲಾಡ್ಜ್‌ನಲ್ಲಿ ಒಂದಿಬ್ಬರು ಮಹಿಳೆಯರೂ ಇದ್ದರಂತೆ. ಅವರಲ್ಲಿ ಒಬ್ಬರ ಪತಿ ಆ ಸಂಸದರ ಕಡೆ ಇದ್ದರು. ಯಾವ ಕಾಂಗ್ರೆಸ್ ಸದಸ್ಯರನ್ನೂ ಬಲವಂತವಾಗಿ ಕರೆತಂದಿರಲಿಲ್ಲ. ಅವರೆಲ್ಲಾ ಸ್ವಇಚ್ಛೆಯಿಂದಲೇ ಅಲ್ಲಿ ಇದ್ದರೆಂಬುದನ್ನು ನಮ್ಮ ಸಬ್ ಇನ್ಸ್‌ಪೆಕ್ಟರ್ ಖಾತರಿ ಪಡಿಸಿದರು.

ಸ್ವಲ್ಪ ಹೊತ್ತಿನ ನಂತರ ಆ ಸಂಸದರಿಂದ ನನಗೆ ಫೋನ್ ಬಂತು. ಅವರು ಮಾತು ಪ್ರಾರಂಭಿಸಿದ್ದೇ ಏಕವಚನದಿಂದ. `ಆ ಲಾಡ್ಜ್‌ನಲ್ಲಿ ಇರೋರನ್ನ ಹೋಗಿ ಅರೆಸ್ಟ್ ಮಾಡಿಕೊಂಡು ಬಾ~ ಅಂದರು. ದೂರು ದಾಖಲಾಗಿಲ್ಲ ಎಂಬುದನ್ನು ತಿಳಿಸಿದೆ. `ನೀನೇ ಕಂಪ್ಲೇಂಟ್ ರಿಜಿಸ್ಟರ್ ಮಾಡ್ಕೋ. ಫೋನ್‌ನಲ್ಲೇ ಹೇಳ್ತಾ ಇದೀನಲ್ಲ~ ಎಂದು ಏನೇನೋ ಬಡಬಡಿಸತೊಡಗಿದರು. ಅದು ಸಾಧ್ಯವಿಲ್ಲ ಎಂದರೂ ಜಗ್ಗಲಿಲ್ಲ. `ನಾನು ಹೇಳಿದಂಗೆ ಕೇಳದೇ  ಇದ್ದರೆ ಪೊಲೀಸ್ ಸ್ಟೇಷನ್‌ಗೆ ಬೆಂಕಿ ಇಟ್ಟುಬಿಡ್ತೀನಿ~ ಎಂದು ಕೂಗಾಡಿದರು. ಅಶ್ಲೀಲ ಪದಗಳನ್ನು ಉಪಯೋಗಿಸಿ ಮಾತನಾಡಿದ್ದೇ, ನಾನೂ `ಇಡು ಫೋನು~ ಎಂದು ಸುಮ್ಮನಾದೆ. ಐದು ನಿಮಿಷದ ನಂತರ ಇನ್ನೊಂದು ಫೋನ್ ಬಂತು. ಆ ಸಂಸದರು ಒತ್ತಡದಲ್ಲಿ ಏನೇನೋ ಮಾತಾಡಿದ್ದಾರೆ. ಅದನ್ನು ಗಂಭೀರವಾಗಿ ಪರಿಗಣಿಸಬೇಡಿ ಎಂದು ಅವರ ಹತ್ತಿರದವರೇ ಒಬ್ಬರು ವಿನಂತಿಸಿಕೊಂಡರು.
***
ಯಾರೋ ದುಷ್ಕರ್ಮಿಗಳು ಶಿವಮೊಗ್ಗ ಮೂಲದ ಜಮೀನ್ದಾರಿ ಕುಟುಂಬದ ಇಬ್ಬರನ್ನು ಅಪಹರಿಸಿ, ಬೆಂಗಳೂರಿಗೆ ಕರೆತಂದು ಮಾರಣಾಂತಿಕವಾಗಿ ಹೊಡೆದಿದ್ದರು. ಶಿವಮೊಗ್ಗದಿಂದ ಅವರನ್ನು ಅಪಹರಿಸಲಾಗಿತ್ತು. ಅಡಿಕೆ ಮಾರಾಟಕ್ಕೆ ಸಂಬಂಧಪಟ್ಟ ಜಗಳ ತಂದಿದ್ದ ಸಮಸ್ಯೆ ಅದು. ಅಪಹರಣಕ್ಕೊಳಗಾದವರ ಪತ್ನಿಯರು ನಮ್ಮಲ್ಲಿಗೆ ಬಂದು ರಕ್ಷಣೆ ಕೋರಿದರು. ದೂರು ದಾಖಲಿಸಿಕೊಂಡೆವು. ದಾಳಿ ನಡೆಸಿದಾಗ ಒಂದು ತಂಡವೇ ಸಿಕ್ಕಿತು. ಶಿವಮೊಗ್ಗ ಜಿಲ್ಲೆಯಲ್ಲಿ ನ್ಯಾಯ ಸಿಗುವುದಿಲ್ಲ ಎಂದು ಆ ಮಹಿಳೆಯರು ನಾವಿದ್ದ ಸಿಟಿ ಕ್ರೈಮ್ ಬ್ರ್ಯಾಂಚ್‌ಗೆ ಎಡತಾಕಿದ್ದರು.

ನಾವು ದಸ್ತಗಿರಿ ಮಾಡಿದವರಲ್ಲಿ ವಕೀಲರ ಸಂಬಂಧಿಗಳು, ರಾಜಕಾರಣಿಗಳ ಚೇಲಾಗಳು ಇದ್ದರು. ಅವರು ಬೆಂಗಳೂರಿನ ಭೂಗತದೊರೆಯ ಹೆಸರು ಹೇಳಿ ಅಪಹೃತರನ್ನು ಹೆದರಿಸಿದ್ದರು. ತೀರ್ಥಹಳ್ಳಿಯ ರಾಜಕಾರಣಿಯೊಬ್ಬರು ಫೋನ್ ಮಾಡಿ, `ಯಾರ‌್ಯಾರನ್ನೋ ಹಿಡಿದುಕೊಂಡು ಬಂದಿದೀರಂತೆ. ಅವರಿಗೆ ಏನೂ ಮಾಡಬೇಡಿ, ಬಿಟ್ಟುಬಿಡಿ~ ಎಂದು ದಬಾಯಿಸಿದರು.  ಭೂಗತ ದೊರೆಯೊಬ್ಬನ ಕಡೆಯವರೆಂದು ಅವರು ಹೇಳಿಕೊಂಡಿದ್ದರಿಂದ ಬಿಡುವ ಪ್ರಶ್ನೆಯೇ ಇಲ್ಲವೆಂದೆ. `ಅರ್ಧ ಗಂಟೇಲಿ ಬಿಡಲಿಲ್ಲ ಅಂದರೆ ನಿಮಗೆ ಏನು ಮಾಡ್ತೀನಿ ನೋಡ್ತಾ ಇರಿ~ ಎಂದು ಹಾರಾಡಿದರು. `ನೀವು ಪೋಸ್ಟಿಂಗ್ ಮಾಡಿಸಿಕೊಂಡಿರುವ ಪೊಲೀಸರ ಮೇಲೆ ಬೇಕಾದರೆ ಈ ರೀತಿ ದರ್ಪ ಮಾಡಿಕೊಳ್ಳಿ~ ಎಂದು ಫೋನ್ ಇಟ್ಟೆ. ಅರ್ಧ ಗಂಟೆ ಆಗುವಷ್ಟರಲ್ಲಿ ಒಬ್ಬ ಮಂತ್ರಿ ಹಾಗೂ ಸ್ಥಳೀಯ ಶಾಸಕರು ಫೋನ್ ಮಾಡಿದರು. `ಅವರಿಗೆ ನಿಮ್ಮ ವಿಷಯ ಗೊತ್ತಿಲ್ಲ. ನೀವು ಅರೆಸ್ಟ್ ಮಾಡಿದವರು ತಪ್ಪು ಮಾಡಿದ್ದರೆ ಖಂಡಿತ ಬಿಡಬೇಡಿ. ಆದರೆ ಆ ರಾಜಕಾರಣಿಯನ್ನು ಮಾತ್ರ ಸಿಕ್ಕಿಸಬೇಡಿ~ ಎಂದು ಆ ಇಬ್ಬರೂ ವಿನಂತಿಸಿಕೊಂಡರು.

ಅದೇ ಗ್ಯಾಂಗ್‌ನ ಇನ್ನೊಬ್ಬ ಆರೋಪಿ ಸಿಕ್ಕಿರಲಿಲ್ಲ. ಅವನು ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದ.  ಅವನು ಎಲ್ಲಿಗೋ ಹೋಗುತ್ತಿದ್ದಾನೆಂಬ ಮಾಹಿತಿ ಬಂತು. ನಮ್ಮ ತಂಡ ಪೀಣ್ಯದಲ್ಲಿ ಅಡ್ಡಹಾಕಿತು. ಆ ಬಾರಿ ಚುನಾವಣೆಯಲ್ಲಿ ಸೋತ ಕಾಂಗ್ರೆಸ್‌ನ ರಾಜಕಾರಣಿ ಜೊತೆ ಅವನು ಕಾರಿನಲ್ಲಿದ್ದ. ನಮ್ಮ  ತಂಡ ಅವರನ್ನೂ ಹಿಡಿದುಕೊಂಡು ಬಂದಿತು. `ಜೀವನದಲ್ಲಿ ತುಂಬಾ ದೊಡ್ಡ ತಪ್ಪು ಮಾಡಿದ್ದು ಇದೇ ಮೊದಲು. ದಯವಿಟ್ಟು ನನ್ನನ್ನು ಬಿಟ್ಟುಬಿಡಿ~ ಎಂದು ಅವರು ಅಂಗಲಾಚಿಕೊಂಡರು.

ಚುನಾವಣೆಯಲ್ಲಿ ಅವರನ್ನು ಸೋಲಿಸಿ ಅದೇತಾನೆ ಶಾಸಕರಾಗಿದ್ದ ವ್ಯಕ್ತಿ ಫೋನ್ ಮಾಡಿ, `ನನ್ನಿಂದ ಸೋತವನನ್ನು ಹಿಡಿದುಕೊಂಡು ಬಂದಿದೀರಲ್ಲ. ಅವರನ್ನೂ ಅರೆಸ್ಟ್ ಮಾಡಿ~ ಎಂದರು. ಅದಕ್ಕೆ ಪ್ರಾವಿಷನ್ ಇಲ್ಲವೆಂದೆ. `ಪ್ರಾವಿಷನ್ ಮಾಡಿಕೊಂಡು, ಅರೆಸ್ಟ್ ಮಾಡಿ ನನಗೆ ಹೇಳಬೇಕು~ ಎಂದು ಆದೇಶಿಸುವ ಧಾಟಿಯಲ್ಲಿ ಮಾತಾಡಿದರು. `ನೀವು ಪೋಸ್ಟಿಂಗ್ ಮಾಡಿಸಿಕೊಂಡಿರುವ ಪೊಲೀಸರ ಹತ್ತಿರ ಮಾತಾಡುವಂತೆ ನನ್ನ ಹತ್ತಿರ ಮಾತಾಡಬೇಡಿ. ಅದು ಸಾಧ್ಯವೇ ಇಲ್ಲ~ ಎಂದು ಫೋನ್ ಇಟ್ಟೆ. ಮತ್ತೆ ಅವರು ಫೋನ್ ಮಾಡಲೇ ಇಲ್ಲ.
***
ರಾಜಕಾರಣಿಗಳ ಒತ್ತಡಕ್ಕೆ ಮಣಿಯದ ಅನೇಕ ಅಧಿಕಾರಿಗಳನ್ನು ನಾನು ಕಂಡಿದ್ದೇನೆ. ಎಚ್.ಟಿ.ರಮೇಶ್ ಎಂಬ ಅಧಿಕಾರಿಯೊಬ್ಬರು ಆರ್.ಟಿ.ನಗರದಲ್ಲಿ ಗುಂಡೂರಾವ್ ಬಲಗೈ ಬಂಟ ಹಾರಾಡಿದಾಗ ಅವನ ಕಾರಿನ ಟೈರಿಗೆ ಗುಂಡು ಹಾರಿಸಿದ್ದರು.

ಅಲಸೂರು ಗೇಟಿನಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ಲವಕುಮಾರ್ ಬೆದರಿಕೆಯೊಡ್ಡಿದ ಬೇತಮಂಗಲದ ಶಾಸಕರನ್ನು ಅಟ್ಟಿಸಿಕೊಂಡು ಹೋಗಿದ್ದರು. ಸಂಪಂಗಿರಾಮ ನಗರದಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಬೆಳ್ಳಿಯಪ್ಪ ಆ ಭಾಗದ ಶಾಸಕರು ದರ್ಪ ಮಾಡಲು ಹೋದಾಗ ಲಾಠಿ ಬೀಸುತ್ತಾ ಓಡಿಸಿದ್ದರು. ಹರ್ಲಂಕರ್, ಮರಿಸ್ವಾಮಿ, ಕಸ್ತೂರಿ ರಂಗನ್, ಟಿ.ಜಯಪ್ರಕಾಶ್ ಮೊದಲಾದವರು ರಾಜಕೀಯದ ಒತ್ತಡಗಳಿಗೆ ಮಣಿಯದೆ ನನ್ನಂಥವರ ಬೆನ್ನುತಟ್ಟಿದ ನೆನಪಿನ್ನೂ ಮಾಸಿಲ್ಲ. ಇಷ್ಟೆಲ್ಲ ಆದರೂ ರಾಜಕಾರಣಿಗಳು ಪೊಲೀಸರ ಕೆಲಸದಲ್ಲಿ ಮೂಗುತೂರಿಸುವುದು ಈಗಲೂ ಮುಂದುವರಿದೇ ಇದೆ.

ಮುಂದಿನ ವಾರ: ಪೊಲೀಸರೇಕೆ ಕಾಸಿಗೆ ಕೈಚಾಚುತ್ತಾರೆ? ಶಿವರಾಂ ಅವರ ಮೊಬೈಲ್ ನಂಬರ್ 94483 13066

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT