ADVERTISEMENT

ಬೀದಿಯ ಸೂಟ್‌ಕೇಸ್ ಮನೆಗೆ ತಂದಾಗ

ಶಿವರಾಮ್
Published 24 ಸೆಪ್ಟೆಂಬರ್ 2011, 19:30 IST
Last Updated 24 ಸೆಪ್ಟೆಂಬರ್ 2011, 19:30 IST

1990ರ ದಶಕದ ಕೊನೆಯ ಭಾಗ. ಬೆಂಗಳೂರಿನಲ್ಲಿ ಮಹಿಳೆಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ಆಟೊವೊಂದರಿಂದ ಇಳಿದು, ಅತ್ತಿತ್ತ ನೋಡಿ, ಯಾರೂ ಇಲ್ಲವೆಂಬುದನ್ನು ಖಾತರಿಪಡಿಸಿಕೊಂಡು ಪ್ಲಾಸ್ಟಿಕ್ ಕವರ್ ಬಿಸಾಡುತ್ತಿದ್ದಳು.

ಆ ಮಹಿಳೆ ಲಾಲ್‌ಬಾಗ್ ಸುತ್ತಮುತ್ತ ಹಾಗೂ ವಿಲ್ಸನ್‌ಗಾರ್ಡನ್‌ನ ಪ್ರದೇಶಗಳಲ್ಲಿ ಅಲ್ಲಲ್ಲಿ ಆಟೊದಿಂದ ಇಳಿದು, ಈ ರೀತಿ ಕವರ್ ಬಿಸಾಡುತ್ತಿದ್ದಳು. ಹಾಗೆ ಮಾಡುವಾಗ ಮುಖದಲ್ಲಿ ಆತಂಕ ಇರುತ್ತಿತ್ತು.

ಸದಾ ಧಾವಂತದಿಂದಲೇ ಇರುತ್ತಿದ್ದಳು. ಅವಳ ಬಗ್ಗೆ ಅನುಮಾನ ಬಂದ ಕಾರಣ ಪೊಲೀಸರು ಕಣ್ಣಿಟ್ಟರು. ಅದೇ ಸಂದರ್ಭದಲ್ಲಿ ಶವದ ಅಂಗಾಗಳ ತುಣುಕುಗಳು ಆ ಪ್ರದೇಶದ ಕೆಲವೆಡೆ ಸಿಕ್ಕಿ, ಅನುಮಾನಕ್ಕೆ ರೆಕ್ಕೆಪುಕ್ಕ ಮೂಡಿಸಿತ್ತು.

ವಿಲ್ಸನ್‌ಗಾರ್ಡನ್‌ನ ಸ್ಮಶಾನದ ಹತ್ತಿರ ಅವಳು ಇನ್ನೊಂದು ಕವರ್ ಬಿಸಾಡುವಾಗ ಪೊಲೀಸರು ಹಿಡಿದುನಿಲ್ಲಿಸಿದರು. ಆ ಕವರ್ ನೋಡಿದರೆ ಅದರಲ್ಲಿ ಶವದ ಅಂಗವೊಂದರ ಭಾಗವಿತ್ತು. ಶವದ ಅಂಗದ ಭಾಗಗಳನ್ನು ಬಿಡಿಬಿಡಿಯಾಗಿ ಆ ರೀತಿ ಎಸೆದ ಮಹಿಳೆಯ ಮೇಲೆ ಅನುಮಾನ ಬರುವುದು ಸಹಜ.

ಪೊಲೀಸರು ಅವಳನ್ನು ದಸ್ತಗಿರಿ ಮಾಡಿದರು. ಬರ್ಬರ ಹತ್ಯೆ ನಡೆದಿರುವುದು ಖಾತರಿಯಾಗಿದ್ದ ಕಾರಣ ದಿನಗಟ್ಟಲೆ ವಿಚಾರಣೆಗೆ ಒಳಪಡಿಸಿದರು. ಆಗ ಹೊರಬಿದ್ದ ಸತ್ಯ ಕೇಳಿ ಪೊಲೀಸರಿಗೆ ಅಚ್ಚರಿಯಾಗಿತ್ತು.

ಮಹಿಳೆ ಹೇಳಿದ ಪ್ರಕಾರ ನಡೆದದ್ದು ಇಷ್ಟು:
ಮಕ್ಕಳಕೂಟದ ಹತ್ತಿರದ ಬಸ್ ಶೆಲ್ಟರ್‌ನಲ್ಲಿ ಅವಳು ನಿಂತಿದ್ದಾಗ ವಾರಸುದಾರರಿಲ್ಲದ ಸೂಟ್‌ಕೇಸ್ ಕಣ್ಣಿಗೆ ಬಿತ್ತು. ಶೆಲ್ಟರ್‌ನಲ್ಲಿ ಯಾರೂ ಇರಲಿಲ್ಲವಾಗಿ ಮಹಿಳೆಗೆ ಅದರಲ್ಲಿ ಏನಿರಬಹುದು ಎಂಬ ಕುತೂಹಲ ಉಂಟಾಯಿತು.

ಅದರ ಬಳಿಗೆ ಹೋಗಿ ಅದು ತನ್ನದೇ ಎಂಬಂತೆ ಹಿಡಿಯನ್ನು ಹಿಡಿದುಕೊಂಡಳು. ಮೇಲೆತ್ತಲು ಯತ್ನಿಸಿದಳು. ಅದು ಬಹಳ ಭಾರವಾಗಿತ್ತು. ಅದರಲ್ಲೇನೋ ಬೆಲೆಬಾಳುವ ವಸ್ತುಗಳು  ಇರಬಹುದು ಎಂದುಕೊಂಡು ಆಟೋದಲ್ಲಿ ಹಾಕಿಕೊಂಡು ಮನೆಗೆ ತೆಗೆದುಕೊಂಡು ಹೋದಳು.

ಅದರಲ್ಲಿ ಯಾವ ದುಬಾರಿ ವಸ್ತು ಇದೆಯೋ ಎಂದುಕೊಂಡು ಬೀಗ ಒಡೆದಳು. ಸೂಟ್‌ಕೇಸ್ ತುಂಬಾ ಸಣ್ಣಸಣ್ಣ ಪ್ಲಾಸ್ಟಿಕ್ ಚೀಲಗಳು. ಒಂದು ಕವರ್ ಬಿಚ್ಚಿದ್ದೇ ಆಕಾಶವೇ ಕಳಚಿ ತಲೆಮೇಲೆ ಬಿದ್ದಂತಾಯಿತು.

ಯಾಕೆಂದರೆ, ಅದರಲ್ಲಿ ಯಾವುದೋ ಶವದ ಅಂಗದ ಭಾಗವಿತ್ತು. ಎಲ್ಲಾ ಕವರ್‌ಗಳ ಮೇಲೆ ಕಣ್ಣಾಡಿಸಿದಳು. ಎಲ್ಲವುಗಳಲ್ಲೂ ಮನುಷ್ಯಮಾಂಸದ ತುಣುಕುಗಳು.

ತಲೆಯನ್ನು ಹೊರತುಪಡಿಸಿ ಮಿಕ್ಕೆಲ್ಲಾ ಅಂಗಾಂಗಗಳ ಕತ್ತರಿಸಿದ ಭಾಗಗಳು ಸೂಟ್‌ಕೇಸ್‌ನಲ್ಲಿದ್ದವು. ಅವಳಿಗೆ ಜಂಘಾಬಲ ಉಡುಗಿಹೋಯಿತು. ಬೀದಿಯಲ್ಲಿ ಹೋಗುತ್ತಿದ್ದ ಮಾರಿಯನ್ನು ತಾನೇ ಕೈಬೀಸಿ ಕರೆದನೋ ಎಂಬಷ್ಟು ಆತಂಕ.

ಪೊಲೀಸರಿಗೆ ಹೇಳೋಣವೆಂದರೆ, ಆ ಸ್ಥಿತಿಯಲ್ಲಿ ತನ್ನ ಮೇಲೇ ಅನುಮಾನ ಬರುತ್ತದೆ ಎಂಬ ಸಾಮಾನ್ಯಜ್ಞಾನ ಅವಳಿಗಿತ್ತು. ಅದಕ್ಕೇ ಆ ಕವರ್‌ಗಳನ್ನು ಆಗೀಗ ಎತ್ತಿಕೊಂಡು ಹೋಗಿ, ಬೇರೆ ಬೇರೆ ಆಟೋಗಳಲ್ಲಿ ಸಂಚರಿಸಿ, ಜನ ಇಲ್ಲದ ಜಾಗಗಳಲ್ಲಿ ಬಿಸಾಡುತ್ತಿದ್ದಳು.

ಹಾದಿಯಲ್ಲಿದ್ದ ಸೂಟ್‌ಕೇಸ್ ಹೊತ್ತುತಂದು ಮಹಿಳೆ ಪೊಲೀಸರ ಅತಿಥಿಯಾಗಿದ್ದಳು. ಆ ಶವದ ರುಂಡ ಮಾತ್ರ ಸಿಗಲೇಇಲ್ಲ. ಹಾಗಾಗಿ ಕೊಲೆಯಾದ ವ್ಯಕ್ತಿ ಯಾರೆಂಬುದು ಗುರುತಾಗಲಿಲ್ಲ. ಆ ಕೇಸೂ ಪತ್ತೆಯಾಗಲಿಲ್ಲ.

ಪ್ರಕರಣ ಇಷ್ಟು ಗೋಜಲಾದಾಗ ಆ ಮಹಿಳೆ ನಿರಪರಾಧಿ ಎಂಬುದು ಅರಿವಾದರೂ ರಕ್ಷಿಸುವುದು ಪೊಲೀಸರಿಗೆ ಕಷ್ಟವಾಗುತ್ತದೆ. ಪೊಲೀಸರು ಆ ಪ್ರಕರಣದಲ್ಲಿ ಕೊನೆಗೂ ಆ ಮಹಿಳೆಯನ್ನು ಬಚಾವ್ ಮಾಡುವಲ್ಲಿ ಯಶಸ್ವಿಯಾದರು. ಆದರೆ, ಅಷ್ಟು ಹೊತ್ತಿಗೆ ಅವಳು ಅನುಭವಿಸಿದ ಮಾನಸಿಕ ಯಾತನೆ ಅಷ್ಟಿಷ್ಟಲ್ಲ.

ಸಾಮಾನ್ಯವಾಗಿ ದುಷ್ಕರ್ಮಿಗಳು ಸ್ಫೋಟಕ್ಕೆ ಬಳಸುವ ಕಾರು, ಮೋಟಾರ್ ಬೈಕು, ಸ್ಕೂಟರ್‌ಗಳು ಕದ್ದಂಥವೇ ಆಗಿರುತ್ತವೆ. ಹಾಗಾಗಿ ವಾಹನ ಕೊಳ್ಳುವವರು ತಕ್ಷಣ ಅದನ್ನು ತಮ್ಮ ಹೆಸರಿಗೆ ಮಾಡಿಸಿಕೊಳ್ಳಲೇಬೇಕು.

ಮಾರುವವರು, ಕೊಂಡವರು ಹೆಸರನ್ನು ಬದಲಿಸಿಕೊಂಡಿದ್ದನ್ನು ಖಾತರಿಪಡಿಸಿಕೊಳ್ಳಬೇಕು. ಅಕಸ್ಮಾತ್ತಾಗಿ ಮಾರಾಟದ ನಂತರ ಅದೇ ವಾಹನ ಸ್ಫೋಟಗೊಂಡಲ್ಲಿ, ನಿರಪರಾಧಿ ಪೊಲೀಸರ ಅತಿಥಿಯಾಗುವ ಸಂಭವ ಇರುತ್ತದೆ.
*
ರಾಜೀವ್‌ಗಾಂಧಿಯವರು ಒಮ್ಮೆ ಬೆಂಗಳೂರು ನಗರಕ್ಕೆ ಬಂದಿದ್ದರು. ಕಂಠೀರವ ಕ್ರೀಡಾಂಗಣದಲ್ಲಿ ಬಹಿರಂಗ ಸಭೆ ನಿಗದಿಯಾಗಿತ್ತು. ಭದ್ರತೆಯ ದೃಷ್ಟಿಯಲ್ಲಿ ರಾಜೀವ್‌ಗಾಂಧಿ `ಝಡ್ ಪ್ಲಸ್ ಕೆಟಗರಿ~ಗೆ ಸೇರಿದ್ದರು.

ಅಂಥವರು ಬಹಿರಂಗ ಸಭೆಯಲ್ಲಿ ಭಾಗವಹಿಸಲು ಬಂದಾಗ ಭದ್ರತೆ ಹೇಗಿರಬೇಕು ಎಂಬುದನ್ನು ವಿವರಿಸುವ `ಬ್ಲೂಬುಕ್~ ಇಲಾಖೆಯಲ್ಲಿ ಇರುತ್ತದೆ. ಅದರಲ್ಲಿ ಸೂಚಿಸುವ ರೀತಿಯಲ್ಲೇ ಸಭೆಗೆ ವ್ಯವಸ್ಥೆ ಮಾಡಬೇಕಾಗುತ್ತದೆ.

ವೇದಿಕೆ ಬಳಿ ಎಷ್ಟು ಜನರ `ವಿಶೇಷ ರಕ್ಷಣಾ ತಂಡ~ (ಎಸ್‌ಪಿಜಿ) ಇರಬೇಕು, ವೇದಿಕೆ ಹಿಂಭಾಗ ಹೇಗಿರಬೇಕು, ಜನರೇಟರನ್ನು ಎಲ್ಲಿಡಬೇಕು, ಜನ ಎಷ್ಟು ದೂರದಲ್ಲಿ ನಿಂತಿರಬೇಕು ಎಂಬುದನ್ನು ಆ `ಬ್ಲೂಬುಕ್~ನಲ್ಲಿ ನಮೂದಿಸಲಾಗಿರುತ್ತದೆ. ಜನರು ಸಭೆಗೆ ಬರಲು ಅಲ್ಲಲ್ಲಿ ಬೊಂಬು, ಬ್ಯಾರಿಕೇಡ್‌ಗಳನ್ನು ಕಟ್ಟಿ `ಗ್ಯಾಂಗ್‌ವೇ~ ಮಾಡಿರುತ್ತಾರೆ.

ಸಭಾಂಗಣಕ್ಕೆ ಅದರ ಮೂಲಕವೇ ಬರಬೇಕು. ಅಡೆಗಳನ್ನು ದಾಟುವಂತಿಲ್ಲ. ಸುಲಭವಾಗಿ ಹೊರಗೆ ಹೋಗುವ ವ್ಯವಸ್ಥೆಯೂ ಇರುತ್ತದೆ. ವೇದಿಕೆಯ ಮುಂಭಾಗದಲ್ಲಿ ಕಟಕಟೆಯನ್ನು ಕಟ್ಟಿರುತ್ತಾರೆ. ಆ ಪ್ರದೇಶವನ್ನು `ಡಿ ಝೋನ್~ ಅಥವಾ `ನೋ ಮ್ಯಾನ್ಸ್  ಲ್ಯಾಂಡ್~ ಎನ್ನುತ್ತಾರೆ.
 
ಅಲ್ಲಿ ಇಬ್ಬರು ಪೊಲೀಸರನ್ನು ಮಾತ್ರ ನಿಯೋಜಿಸಿರುತ್ತಾರೆ. ಯಾರಿಗೆ `ಝಡ್ ಕ್ಯಾಟಗರಿ~ ಭದ್ರತೆ ಇರುತ್ತದೋ ಅವರ ಹಿತದೃಷ್ಟಿಯಿಂದಾಗಿ ಅಲ್ಲಿ ನಿಯೋಜಿತರಾಗುವ ಪೊಲೀಸರು ಕೂಡ ಶಸ್ತ್ರಾಸ್ತ್ರ ಇಟ್ಟುಕೊಳ್ಳುವಂತಿಲ್ಲ. ಹಾಗಾಗಿ ಹೆಚ್ಚು ಧೈರ್ಯಸ್ಥರನ್ನು ಅಲ್ಲಿ ನಿಯೋಜಿಸುವುದು ರೂಢಿ.

ರಾಜೀವ್‌ಗಾಂಧಿ ಬಂದ ದಿನ ಕಾಂಗ್ರೆಸ್ ರಾಜಕಾರಣಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಭಾಗವಹಿಸಿದ್ದರು. `ಡಿ ಜೋನ್~ನಲ್ಲಿ ನನ್ನನ್ನು ನಿಯೋಜಿಸಿದ್ದರು. ಬೆಂಗಳೂರಿನ ಮಾಧ್ಯಮದವರಷ್ಟೇ ಅಲ್ಲದೆ ದೆಹಲಿಯಿಂದ ಕೂಡ ಕೆಲವು ಟೀವಿ ವಾಹಿನಿಗಳು, ಪತ್ರಿಕೆಗಳಿಂದ ಸುದ್ದಿಗಾರರು ಬಂದಿದ್ದರು.
 
ಒಬ್ಬ ಸುದ್ದಿಗಾರರು `ಗ್ಯಾಂವ್ ವೇ~ಯ ಬ್ಯಾರಿಕೇಡ್ ದಾಟಿ ಬಂದು, `ಡಿ ಜೋನ್~ನಲ್ಲಿ ತಮ್ಮ ಕ್ಯಾಮೆರಾದ ಟ್ರೈಪ್ಯಾಡ್ ಇಟ್ಟರು. `ಈ ಜಾಗಕ್ಕೆ ಯಾರೂ ಬರುವಂತಿಲ್ಲ. ನಿಯೋಜಿತರಾದವರನ್ನು ಹೊರತುಪಡಿಸಿ ಬೇರೆ ಪೊಲೀಸರೂ ಬರುವಂತಿಲ್ಲ.

ಅಷ್ಟೇ ಏಕೆ, ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಇಲ್ಲಿಗೆ ಬರುವಂತಿಲ್ಲ. ಹಾಗಿರುವಾಗ, ನೀವು ಇಲ್ಲಿ ಟ್ರೈಪ್ಯಾಡ್ ಇಟ್ಟಿದ್ದು ಸರಿಯಲ್ಲ. ದಯವಿಟ್ಟು ಅದನ್ನು ತೆಗೆದುಕೊಂಡು ಹೋಗಿ. ಫೋಟೋಗ್ರಾಫರ್ಸ್‌ಗೆ ಬೇರೆ ಜಾಗ ಇದೆ~ ಎಂದೆ.

ಕನ್ನಡ ಬಾರದ ಆ ಪತ್ರಕರ್ತ ಇಂಗ್ಲಿಷ್‌ನಲ್ಲೇ `ಅದನ್ನು ಕೇಳಲು ನೀನು ಯಾರು? ನನಗೆ ಈ ಆ್ಯಂಗಲ್‌ನಿಂದಲೇ ಒಳ್ಳೆ ದೃಶ್ಯ ಸಿಗುವುದು. ಅದನ್ನು ನೀನು ಕೇಳುವ ಹಾಗಿಲ್ಲ~ ಎಂಬ ಧಾಟಿಯಲ್ಲಿ ಮಾತನಾಡಲು ಪ್ರಾರಂಭಿಸಿದರು. ಅದು ಸಾಧ್ಯವೇ ಇಲ್ಲ ಎಂದು ಮತ್ತೊಮ್ಮೆ ಹೇಳಿ, ನಾನು ಆ ಟ್ರೈಪ್ಯಾಡ್ ಎತ್ತಿ `ಗ್ಯಾಂಗ್‌ವೇ~ನಲ್ಲೇ ಇಟ್ಟೆ. ಆ ಪತ್ರಕರ್ತ ಬಾಯಿಗೆಬಂದಂತೆ ಚೀರಾಡತೊಡಗಿದರು.

`ಇಲ್ಲೇ ನೀನು ನನ್ನ ಕ್ಷಮೆ ಕೇಳುವಂತೆ ಮಾಡಿ, ನಿನ್ನ ಕೈಯಿಂದಲೇ ಈ ಟ್ರೈಪ್ಯಾಡ್ ಒಳಗಿಡಿಸುತ್ತೇನೆ. ಇಲ್ಲದಿದ್ದರೆ ನನ್ನ ಹೆಸರು..... ಅಲ್ಲ~ ಎಂದು ಸವಾಲುಹಾಕಿದರು. ನನಗೂ ಕೋಪ ಬಂದಿತು. `ನನ್ನಿಂದ ಕ್ಷಮಾಪಣೆ ಕೇಳಿಸಿದರೆ, ಈ ಕೆಲಸ ಬಿಟ್ಟು ಹೋಗುತ್ತೇನೆ~ ಎಂದು ನಾನು ಪ್ರತಿಸವಾಲು ಹಾಕಿದೆ.

ಆ ಪತ್ರಕರ್ತರು `ವಿಶೇಷ ರಕ್ಷಣಾ ತಂಡ~ದ ಅಧಿಕಾರಿಯೊಬ್ಬರನ್ನು ಕರೆದುಕೊಂಡು ಬಂದರು. ನಾನು ಅವರಿಗೆ ನಿಯಮದ ಬಗ್ಗೆ ಸ್ಪಷ್ಟವಾಗಿ ಹೇಳಿದಾಗ, ಅವರು ಆ ಸುದ್ದಿಗಾರರಿಗೆ ಏನೂ ಹೇಳದೆ ನುಣುಚಿಕೊಳ್ಳುವಂತೆ ಹೊರಟುಹೋದರು.
 
ಸ್ವಲ್ಪ ಹೊತ್ತಿನ ನಂತರ ಬೇಹುಗಾರಿಕಾ ವಿಭಾಗದ ಅಧಿಕಾರಿಯಾಗಿದ್ದ ಕಸ್ತೂರಿರಂಗನ್ ಅವರನ್ನೇ ಸುದ್ದಿಗಾರ ಕರೆತಂದರು. ಅವರು ಕೂಡ ನಾನು ಹೇಳಿದ್ದೇ ಸರಿ ಎಂದು ಸಮರ್ಥಿಸಿ, ಟ್ರೈಪ್ಯಾಡನ್ನು ಅಲ್ಲಿಡಲು ಸಾಧ್ಯವೇ ಇಲ್ಲ ಎಂದರು. ಆ ಪತ್ರಕರ್ತ ಮುಖ ಇಷ್ಟು ಮಾಡಿಕೊಂಡು ಅಲ್ಲಿಂದ ಜಾಗ ಖಾಲಿ ಮಾಡಿದರು.

ಅದೇ ದಿನ ಹಾರ‌್ನಳ್ಳಿ ರಾಮಸ್ವಾಮಿ ಹಾಗೂ ಇನ್ನೊಬ್ಬ ಮಂತ್ರಿ ಬ್ಯಾರಿಕೇಡ್‌ನಲ್ಲಿ ನುಸುಳಿಕೊಂಡು ಹೋಗುತ್ತಿದ್ದರು. ಅದನ್ನೂ ನಾನು ಪ್ರಶ್ನಿಸಿದೆ. ಹಿರಿಯ ರಾಜಕಾರಣಿ ಹಾರ‌್ನಳ್ಳಿ ರಾಮಸ್ವಾಮಿಯವರಿಗೆ ನನ್ನ ಮಾತು ಬೇಗ ಅರ್ಥವಾಯಿತು.

ಆದರೆ, ಅವರ ಜೊತೆ ಇದ್ದ ಮಂತ್ರಿ ನನ್ನ ಮಾತಿಗೆ ಬೆಲೆ ಕೊಡಲಿಲ್ಲ. ವಿತಂಡ ವಾದ ಮಾಡಲಾರಂಭಿಸಿದರು. ಕೊನೆಗೆ ರಾಮಸ್ವಾಮಿಯವರೇ ಬಲವಂತ ಮಾಡಿ ಅವರನ್ನು ಅಲ್ಲಿಂದ ಕರೆದುಕೊಂಡುಹೋದರು.

ಬೆಂಗಳೂರಿನಲ್ಲಿ  ಬಹಿರಂಗ ಸಭೆ ನಡೆದ ಕೆಲವೇ ದಿನಗಳ ನಂತರ ತಮಿಳುನಾಡಲ್ಲಿ ರಾಜೀವ್‌ಗಾಂಧಿಯವರ ಹತ್ಯೆಯಾಯಿತು. ಭದ್ರತೆ ವಿಫಲವಾಗಲು ರಾಜಕಾರಣಿಗಳು, ಕೆಲವು ಪತ್ರಕರ್ತರು ಹಾಗೂ ಸಾಮಾನ್ಯ ಜನರೇ ಹೇಗೆಲ್ಲಾ ಕಾರಣರಾಗಬಲ್ಲರು ಎಂಬುದಕ್ಕೆ ನನ್ನ ಅನುಭವವೇ ಉದಾಹರಣೆ.

ADVERTISEMENT

ಮುಂದಿನ ವಾರ: ದಾಂಪತ್ಯದ ಬಿರುಕಿನ ಚೆಲ್ಲಾಪಿಲ್ಲಿ ಘಟನೆಗಳು

ಶಿವರಾಂ ಅವರ ಮೊಬೈಲ್ ಸಂಖ್ಯೆ -9448313066

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.