ADVERTISEMENT

ಸಂಪತ್ತಿನ ಅಹಂ ತುಂಬಿಕೊಂಡ ಮಹಿಳೆ

ಶಿವರಾಮ್
Published 24 ಮಾರ್ಚ್ 2012, 19:30 IST
Last Updated 24 ಮಾರ್ಚ್ 2012, 19:30 IST

ಕಾನೂನು ಪರಿಪಾಲನೆ ಮಾಡುವ ಡಿಜಿಯೊಬ್ಬರ ಪತ್ನಿಯಾಗಿದ್ದೂ ತಮಿಳುನಾಡಿನ ಮಹಿಳೆ ಅದರ ಅರಿವಿಲ್ಲದವರಂತೆ ಅಹಂನಿಂದ ವರ್ತಿಸಿದ್ದನ್ನು ಕಳೆದ ವಾರ ಬರೆದಿದ್ದೆ. ಒನ್ ವೇ, ಹಾರ್ನ್ ಮಾಡಬೇಡಿ, ಓವರ್‌ಟೇಕ್ ಮಾಡಬೇಡಿ, ಎಡ ತಿರುವು ಮುಕ್ತವಲ್ಲ, ಯು-ಟರ್ನ್ ತೆಗೆದುಕೊಳ್ಳುವಂತಿಲ್ಲ ಎಂಬಂಥ ಸೂಚನೆಗಳನ್ನು ಫಲಕಗಳಲ್ಲಿ ಹಾಕಿರುತ್ತಾರಲ್ಲ; ಅವೆಲ್ಲವೂ ಗೆಜೆಟ್ ನೋಟಿಫಿಕೇಷನ್ ಆಗಿರುತ್ತವೆ.

ಅದನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಲೇಬೇಕು. ನಿಯಮ ಮುರಿಯುವವರಿಗೆ ದಂಡ ವಿಧಿಸುವ ಕೆಲಸ ಪೊಲೀಸರದ್ದು. ಅಂಥಾದ್ದರಲ್ಲಿ ಅವರ ಮನೆಯವರೇ ಕಾನೂನು ಮುರಿಯುವುದು ನಾಗರಿಕರಿಗೆ ಕೂಡ ವ್ಯಂಗ್ಯದಂತೆ ಕಾಣುತ್ತದೆ. ಎಸಿಪಿ ಶೌಕತ್ ಅಲಿ ಆಗ ನಮ್ಮ ನೆರವಿಗೆ ಬರದಿದ್ದರೆ ಉನ್ನತ ಅಧಿಕಾರಿಗಳಿಂದ ನಮಗೆ ಇನ್ನೇನು ಶಾಸ್ತಿಯಾಗುತ್ತಿತ್ತೋ ಗೊತ್ತಿಲ್ಲ. ಅಂತೂ ಅಲ್ಲಿಗೆ ಆ ಪ್ರಕರಣ ಬಗೆಹರಿಯಿತು.

ಒಬ್ಬ ಮಹಿಳಾ ಇನ್ಸ್‌ಪೆಕ್ಟರ್‌ಗೆ ಹಿರಿಯ ಐಎಎಸ್ ಅಧಿಕಾರಿಯ ಪತ್ನಿ ಕಪಾಳಮೋಕ್ಷ ಮಾಡಿದ್ದು, ಪ್ರಾಮಾಣಿಕ ಅಧಿಕಾರಿಯೊಬ್ಬರು ಕಲ್ಲು ಗಣಿಗಾರಿಕೆ ತಡೆಯಲೆತ್ನಿಸಿದಾಗ ಟ್ರಾಕ್ಟರ್ ಹರಿಸಿ ಅವರನ್ನು ಕೊಲೆ ಮಾಡಿಸಿದ್ದು, ಇತ್ತೀಚೆಗೆ ಪತ್ರಕರ್ತರ ಮೇಲೆ ನಡೆದ ದಾಳಿ ಇವೆಲ್ಲವೂ ಅಧಿಕಾರದ ಅಮಲಿನಲ್ಲಿರುವವರ ಅಹಂನ ನಮೂನೆಗಳು. ಈ ಪ್ರಕರಣಗಳನ್ನು ಪ್ರಸ್ತಾಪಿಸಿದ ನಂತರ ನನಗೆ ಇನ್ನೊಬ್ಬ ಮಹಿಳೆಯ ವಿಚಿತ್ರ ವರ್ತನೆಯ ಘಟನೆ ನೆನಪಾಗುತ್ತಿದೆ. 

1980ರಿಂದ 82ರವರೆಗೆ ನಾನು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿದ್ದೆ. ಎಂ.ಕೆ.ಗಣಪತಿ ಎಂಬ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಫ್ರೇಜರ್ ಟೌನ್‌ನಲ್ಲಿ ಕೆಲಸ ಮಾಡುತ್ತಿದ್ದರು.

ಅದೇ ಠಾಣೆಯಲ್ಲಿ ಹಾಲ್ತೊರೆ ರಂಗರಾಜನ್ ಪ್ರಕಾಶ್ ಹಾಗೂ ಶಿವಾರೆಡ್ಡಿ ಎಂಬುವರು ಸಬ್ ಇನ್ಸ್‌ಪೆಕ್ಟರ್‌ಗಳಾಗಿದ್ದರು. ಗಣಪತಿಯವರಿಂದ ಏನಾದರೂ ಸಲಹೆ ಪಡೆಯಬೇಕೆನಿಸಿದಾಗ ನಾನು ಆ ಠಾಣೆಗೆ ಹೋಗಿ ಬರುತ್ತಿದ್ದೆ.

ಬ್ರಿಟಿಷರ ಕಾಲದಲ್ಲಿ ನಿರ್ಮಿತವಾದ ಠಾಣೆ ಅದು. ಅಲ್ಲಿನ ವಾತಾವರಣವೂ ತಂಪಾಗಿತ್ತು. ಗಿಡಮರಗಳು ಸಮೃದ್ಧಿಯಾಗಿದ್ದವು. ಆರೋಗ್ಯಕರ ಚರ್ಚೆಗೆ ತಕ್ಕ ಸ್ಥಳ. ಅಲ್ಲಿ ಒಮ್ಮೆ ನಾವೆಲ್ಲಾ ಕುಳಿತುಕೊಂಡು ಯಾವುದೋ ವಿಷಯವನ್ನು ಚರ್ಚಿಸುತ್ತಿದ್ದೆವು.

ಫ್ಯಾಷನ್ ಜಗತ್ತಿನ ಪ್ರತಿನಿಧಿ ಎಂಬಂತೆ ಅಲಂಕಾರ ಮಾಡಿಕೊಂಡಿದ್ದ ಮಹಿಳೆಯೊಬ್ಬರು ಜೋರಾಗಿ ನುಗ್ಗಿಬಂದರು. ಆವರಣಕ್ಕೆ ಕಾಲಿಟ್ಟ ಕ್ಷಣದಿಂದ ಹಾರಾಡುತ್ತಲೇ ಠಾಣೆಯತ್ತ ಹೆಜ್ಜೆಹಾಕಿದರು. ಏರುದನಿಯಲ್ಲಿ ಮಾತನಾಡುತ್ತಾ ಇದ್ದ ಆ ಮಹಿಳೆಯ ನಡಿಗೆಯ ಗತ್ತು `ರೇಡು~ ಮಾಡುವಂತಿತ್ತು.

ಅವರು ಕೂಗಾಡುತ್ತಿದ್ದುದು ಕ್ಷುಲ್ಲಕ ಕಾರಣಕ್ಕೆ ಎಂಬುದು ನಮಗೆ ಸ್ವಲ್ಪ ಹೊತ್ತಿನಲ್ಲೇ ಗೊತ್ತಾಯಿತು. ಮಹಿಳೆ ಹಾಗೂ ಇನ್ನೊಬ್ಬರ ಕಾರುಗಳ ನಡುವೆ ಸಣ್ಣ ಅಪಘಾತವಾಗಿತ್ತಷ್ಟೆ. ಆ ಮಹಿಳೆಯನ್ನು ವಿಚಾರಿಸಿದಾಗ ಈ ವಿಷಯ ಹೊರಬಿತ್ತು. ಆದರೆ, ಆಕಾಶವೇ ಕಳಚಿಬಿದ್ದಂಥ ಭಾವದಲ್ಲಿ ಅವರು ಅತಿರೇಕದಿಂದ ಕೂಗಾಡುತ್ತಲೇ ಇದ್ದರು.

ಠಾಣೆಯ ಸಮೀಪದಲ್ಲೇ ಅಪಘಾತ ಸಂಭವಿಸಿತ್ತು. ಆ ಮಹಿಳೆ ಇದ್ದ ಕಾರಿಗೆ ಇನ್ನೊಂದು ಅಂಬಾಸಿಡರ್ ಕಾರು ತಗುಲಿತ್ತಷ್ಟೆ. ಕಾರು ಜಖಂ ಆಗುವಷ್ಟು ತೀವ್ರವಾದ ಅಪಘಾತವೇನೂ ಅದಾಗಿರಲಿಲ್ಲ. ಅಕಸ್ಮಾತ್ತಾಗಿ ಇವರ ಕಾರಿಗೆ ತಗುಲಿಸಿದ್ದ ಆ ಇನ್ನೊಂದು ಕಾರೂ ಠಾಣೆಯ ಆವರಣಕ್ಕೆ ಬಂತು.
 
ಅದರಿಂದ ಇಳಿದ ವ್ಯಕ್ತಿಯದ್ದು ರಾಜಗಾಂಭೀರ್ಯ. ಶುಭ್ರವಾದ ಪಂಚೆ, ಕೋಟು, ತಲೆ ಮೇಲೊಂದು ಟೋಪಿ. ಮೆಲ್ಲಗೆ ನಡೆಯುತ್ತಾ ಬಂದ ಅವರು ಎದುರಲ್ಲಿ ಕಂಡ ಎಲ್ಲಾ ಪೊಲೀಸರಿಗೂ ನಮಸ್ಕರಿಸಿದರು. ಮುಖದಲ್ಲಿ ಮಂದಹಾಸ ಮಾಯವಾಗಿರಲಿಲ್ಲ. ಠಾಣೆಯೊಳಕ್ಕೆ ಅವರು ಬಂದಾಗ ಮಹಿಳೆಯ ದನಿ ಇನ್ನೂ ಜೋರಾಯಿತು.
 
ಇಂಗ್ಲಿಷ್ ಬೆರೆತ ಮಾತುಗಳಿಂದ ಅವರನ್ನು ಬಾಯಿಗೆಬಂದಂತೆ ಬೈಯುತ್ತಿದ್ದರು. ಬರಬರುತ್ತಾ ಮಾತು ಸಭ್ಯತೆಯ ಎಲ್ಲೆ ಮೀರಿ ಅವಾಚ್ಯವೆನ್ನಿಸತೊಡಗಿತು. ಆದರೂ, ಸೌಮ್ಯವಾಗಿಯೇ ನಿಂದನೆಗಳನ್ನು ಸಹಿಸಿಕೊಂಡಿದ್ದ ಆ ವ್ಯಕ್ತಿ, `ತಾಳ್ಮೆ ಇರಲಿ... ತಾಳ್ಮೆ ಇರಲಿ~ ಎಂದಷ್ಟೆ ಹೇಳುತ್ತಿದ್ದರು. ಅದಕ್ಕೂ ಮಹಿಳೆ ವಿಪರೀತವಾಗಿಯೇ ಪ್ರತಿಕ್ರಿಯಿಸಿದರು.
 
`ವಾಟ್ ತಾಳ್ಮೆ... ಐ ನೌ ಎಫ್.ಎಂ. ಖಾನ್. ಐ ವಿಲ್ ಕಾಲ್ ಹಿಮ್ ಅಂಡ್ ಟೀಚ್ ಯೂ ಎ ಲೆಸನ್~ (ಏನು ತಾಳ್ಮೆ, ನನಗೆ ಎಫ್.ಎಂ.ಖಾನ್ ಗೊತ್ತು. ಅವರಿಗೆ ಫೋನ್ ಮಾಡಿ ನಿಮಗೆ ಪಾಠ ಕಲಿಸುತ್ತೇನೆ) ಎಂದರು.

ತಮಗೆ ರಾಜಕಾರಣಿಗಳ ಸಂಪರ್ಕವಿದೆ ಎಂಬುದನ್ನು ಪ್ರಜ್ಞಾಪೂರ್ವಕವಾಗಿ ಆ ಮಹಿಳೆ ಹೇಳುತ್ತಿದ್ದರು. ಗುಂಡೂರಾವ್ ಆಗ ಮುಖ್ಯಮಂತ್ರಿಯಾಗಿದ್ದರು. ಅವರ ಆಪ್ತರಾಗಿದ್ದ ಎಫ್.ಎಂ.ಖಾನ್ ರಾಜ್ಯಸಭಾ ಸದಸ್ಯರಾಗಿದ್ದರು. ಆ ಮಹಿಳೆ ಪದೇಪದೇ ಎಫ್.ಎಂ.ಖಾನ್ ಹೆಸರನ್ನು ಪ್ರಸ್ತಾಪಿಸುತ್ತಾ ಹೋದರು.

`ನನ್ನ ಕಾರನ್ನು ಗುದ್ದಿದ್ದಾರೆ. ಅವರನ್ನು ಅರೆಸ್ಟ್ ಮಾಡಿ~ ಎಂದು ಮಹಿಳೆ ಪೊಲೀಸರಿಗೆ ತಾಕೀತು ಮಾಡುವ ದನಿಯಲ್ಲಿ ಹೇಳಿದರು. ತಮ್ಮ ಶ್ರೀಮಂತಿಕೆಯ ಹಿನ್ನೆಲೆಯನ್ನೂ ಹೇಳುತ್ತಾ, `ನಾನು ಅಂಥವಳು, ಇಂಥವಳು~ ಎಂದು ಹಮ್ಮಿನಿಂದ ತಮ್ಮ ಪ್ರಭಾವದ ಪರಿಯನ್ನು ಬಣ್ಣಿಸಲಾರಂಭಿಸಿದರು. ಎಲ್ಲವನ್ನೂ ಸುಮ್ಮನೆ ಕೇಳುತ್ತಿದ್ದ ಆ ಹಿರಿಯ ವ್ಯಕ್ತಿಯ ಪ್ರತಿಕ್ರಿಯೆ `ತಾಳ್ಮೆ ಇರಲಿ~ ಎಂಬುದಷ್ಟೇ ಆಗಿತ್ತು.

ಅದನ್ನು ಕೇಳಿ ಇನ್ನಷ್ಟು ಕ್ರುದ್ಧರಾದ ಮಹಿಳೆ ಏಕವಚನದಲ್ಲಿ ಜರೆಯತೊಡಗಿದರು. ಮಾತು ಸಭ್ಯತೆಯ ಎಲ್ಲೆ ಮೀರಿದ್ದೇ ಆ ಹಿರಿಯರೂ ಕೂಡ ಸಿಟ್ಟಾದರು. `ನಾನು ಕೊಲೆ ಮಾಡಿಲ್ಲ. ಕಾರಿಗೆ ತಗುಲಿಸಿದ್ದು ನಿಜ. ಕೂತು ಮಾತನಾಡೋಣ. ನಿಮಗಾಗಿರುವ ನಷ್ಟವನ್ನು ನಾನು ಕಟ್ಟಿಕೊಡುತ್ತೇನೆ. ಅದಕ್ಕೆ ಹೀಗೆಲ್ಲಾ ಮಾತನಾಡುವುದು ಸರಿಯಲ್ಲ~ ಎಂದರು.

ಪೊಲೀಸ್ ಠಾಣೆಯಿಂದಲೇ ಮಹಿಳೆ ಫೋನ್ ಮಾಡಿ ತಮ್ಮ ಮನೆವರನ್ನೆಲ್ಲಾ ಕರೆಸಿದರು. ಸ್ವಲ್ಪ ಹೊತ್ತಿನ ನಂತರ ಅವರ ಮನೆಯವರೆಲ್ಲಾ ಬಂದರು. ಅವರ ಪತಿ ಒಬ್ಬ ಉದ್ಯಮಿ. ಸಂಭಾವಿತ ವ್ಯಕ್ತಿ. ಒಬ್ಬ ಉದ್ಯಮಿಗೆ ಇರಬೇಕಾದ ಸಂಯಮ ಅವರಿಗಿತ್ತು. ಅವರು ಆಕ್ಸಿಡೆಂಟ್ ಮಾಡಿದ್ದು ಯಾರು ಎಂದು ಕೇಳಿದರು.

ಅಲ್ಲಿದ್ದ ಹಿರಿಯರು `ನನ್ನ ಕಾರೇ ಸ್ವಾಮಿ. ಅಕಸ್ಮಾತ್ತಾಗಿ ತಪ್ಪಾಯಿತು. ಬೇಕಾದರೆ ಕಂಪ್ಲೇಂಟ್ ಕೊಡಿ. ಇನ್ಶೂರೆನ್ಸ್ ಕ್ಲೇಮ್ ಮಾಡಿಕೊಳ್ಳಬೇಕೆಂದರೆ ಅದಕ್ಕೆ ಕಾನೂನಿನ ರೀತಿ ಯಾವ ಕ್ರಮ ತೆಗೆದುಕೊಳ್ಳಬೇಕೋ ತೆಗೆದುಕೊಳ್ಳಿ. ಬೇಕಾದರೆ ನಮ್ಮ ಡ್ರೈವರನ್ನು ಅರೆಸ್ಟ್ ಮಾಡಿಸಿ. ನಿಮ್ಮ ಕಾರನ್ನು ನಾನೇ ಸರಿಮಾಡಿಸಿ ಕೊಡುತ್ತೇನೆ.
 
ಆದರೆ, ಅಶ್ಲೀಲವಾದ ಬೈಗುಳಗಳನ್ನು ಮಾತ್ರ ಸಹಿಸಿಕೊಳ್ಳುವುದು ನನ್ನಿಂದ ಸಾಧ್ಯವಿಲ್ಲ~ ಎಂದರು. ಅವರ ಮಾತುಗಳನ್ನು ಕೇಳಿ ಆ ಉದ್ಯಮಿ ಬೇಸರಗೊಂಡರು. ಪತ್ನಿಯ ಹತ್ತಿರ ಹೋಗಿ ಸಮಸ್ಯೆಯನ್ನು ಇಷ್ಟು ದೊಡ್ಡದು ಮಾಡುವ ಅಗತ್ಯವಿಲ್ಲ ಎಂದು ಹೇಳಿದರು. ಆ ಮಹಿಳೆ ಮಾತ್ರ ಜಗ್ಗಲೇ ಇಲ್ಲ. `ನೀವು ಮನೆಯಲ್ಲಿ ನನ್ನ ಪತಿ. ಇಲ್ಲಿ ದರ್ಪ ತೋರಿಸಲು ಬರಬೇಡಿ~ ಎಂಬ ಧಾಟಿಯಲ್ಲಿ ಅವರ ಮೇಲೂ ಹಾರಾಡಿದರು. `ಐ ವಿಲ್ ಕಾಲ್ ಸಿ.ಎಂ... ಐ ವಿಲ್ ಕಾಲ್ ಎಂ.ಪಿ.~ ಎಂದು ರಂಪ ಮಾಡಿದರು.

`ಇವಳು ಯಾವಾಗಲೂ ಹೀಗೇ ವರ್ತಿಸುವುದು. ಬೇಜಾರಾಗಬೇಡಿ. ಸ್ವಲ್ಪ ಹೊತ್ತು ಎಲ್ಲರೂ ಸುಮ್ಮನಾಗಿ. ಸಣ್ಣಪುಟ್ಟ ಅಪಘಾತ ಆಗುವುದು ಸಹಜ. ಅದಕ್ಕೆ ಕಂಪ್ಲೇಂಟ್ ಏನೂ ಬೇಕಿಲ್ಲ~ ಎಂದು ಅವರ ಪತಿ ಸಂಭಾವಿತ ಮಾತುಗಳನ್ನಾಡಿದರು.

ಎಲ್ಲರೂ ಸ್ವಲ್ಪ ಹೊತ್ತು ಸುಮ್ಮನಾದರು. ಕ್ರಮೇಣ ಆ ಮಹಿಳೆಯ ಹಾರಾಟವೂ ನಿಂತಿತು. ಅವರ ಮನವೊಲಿಸಿ ಉದ್ಯಮಿ ಮನೆಗೆ ಕರೆದುಕೊಂಡು ಹೋದರು. ಅಷ್ಟೆಲ್ಲಾ ತಾಳ್ಮೆಯಿದ್ದ ಪತಿಗೂ ಗೌರವ ಕೊಡದ ಆ ಮಹಿಳೆಯ ವರ್ತನೆ ನಮಗೆಲ್ಲಾ ಅಚ್ಚರಿ ಮೂಡಿಸಿತು. 
ಕೆಲ ದಶಕಗಳು ಉರುಳಿದವು.

ಮುಂದೆ ಅದೇ ಮಹಿಳೆ ರಾಜ್ಯದ ಮಂತ್ರಿಯಾದರು. ಕನ್ನಡ ಬಾರದ, ಸಜ್ಜನರ ಬಗ್ಗೆ ತುಸುವೂ ಗೌರವ ಇಲ್ಲದ, ಮೈತುಂಬಾ ಸಂಪತ್ತಿನ ಅಹಂ ತುಂಬಿಕೊಂಡಿದ್ದ ಮಹಿಳೆ ರಾಜಕಾರಣ ಮಾಡಿದ್ದು ನೋಡಿ ಇದೆಂಥ ವಿಪರ್ಯಾಸ ಎನ್ನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.