ADVERTISEMENT

ಸಲಾಂ ಕಸ್ತೂರಿ ರಂಗನ್!

ಶಿವರಾಮ್
Published 4 ಜೂನ್ 2011, 19:30 IST
Last Updated 4 ಜೂನ್ 2011, 19:30 IST

1986-90ರವರೆಗೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ನಾನು ಸಬ್ ಇನ್ಸ್‌ಪೆಕ್ಟರ್ ಆಗಿದ್ದೆ. ಮೇಡಿ ಮಲ್ಲಸಂದ್ರ, ಬಯಲು ನರಸಾಪುರ, ಕಟ್ಟಿಗೇನಹಳ್ಳಿ ಮೊದಲಾದ ಕಡೆ ಕಳ್ಳಭಟ್ಟಿ, ಗೋಮಾಂಸ, ಶ್ರೀಗಂಧದ ಕಳ್ಳ ಸಾಗಾಣಿಕೆಯ ವ್ಯವಸ್ಥಿತ ಜಾಲ ಹಬ್ಬಿತ್ತು.  ಕೋಲಾರ, ಮೈಸೂರು, ತುಮಕೂರಿಗೆ ಗೋಮಾಂಸ ಸರಬರಾಜಾಗುತ್ತಿದ್ದುದೇ ಈ ಸ್ಥಳಗಳಿಂದ.

ಒಮ್ಮೆ ಕಳ್ಳಮಾಲು ಸಾಗಾಟ ನಡೆಯುತ್ತಿದೆ ಎಂಬ ಮಾಹಿತಿ ಬಂತು. ತಕ್ಷಣ ನಾವು ಕಾರ್ಯಪ್ರವೃತ್ತರಾದೆವು. ಕಳ್ಳಮಾಲು ಇದೆ ಎನ್ನಲಾಗಿದ್ದ ಕಾರಿನ ಬೆನ್ನತ್ತಿದೆವು.
 
ನಮ್ಮಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕಾರಿನ ಚಾಲಕ ಅತಿ ವೇಗವಾಗಿ ಓಡಿಸತೊಡಗಿದ. ಕೆಲವು ನಿಮಿಷಗಳಲ್ಲೇ ಕಾರು ಪಲ್ಟಿ ಹೊಡೆಯಿತು. ಟ್ರ್ಯಾಕ್ಟರ್ ಟೈರ್‌ನ ಟ್ಯೂಬ್, ಲಾರಿ ಟ್ಯೂಬ್‌ಗಳಲ್ಲಿ ಕಳ್ಳಭಟ್ಟಿ ಸಾರಾಯಿಯನ್ನು ತುಂಬಿಸಿ ಆ ಕಾರಿನಲ್ಲಿ ಇಟ್ಟಿದ್ದರು. ಮಾಲನ್ನು ವಶಪಡಿಸಿಕೊಂಡ ನಂತರ ನ್ಯಾಯಾಲಯದ ಆದೇಶ ಪಡೆದು ನಾಶಪಡಿಸಿದೆವು ಅರ್ಥಾತ್ ಕಾರ್ಪೊರೇಷನ್‌ನ ಮೋರಿಗೆ ಸುರಿದೆವು. ಆ ಕಾರನ್ನೂ ವಶಕ್ಕೆ ತೆಗೆದುಕೊಂಡೆವು.

ಆಗ ರಾಮಕೃಷ್ಣ ಹೆಗಡೆಯವರ ಸರ್ಕಾರವಿತ್ತು. ಮಂತ್ರಿಯೊಬ್ಬರು ನನಗೆ ಮರುದಿನ ಬೆಳಿಗ್ಗೆ ಫೋನ್ ಮಾಡಿ, ಕಾರನ್ನು ಬಿಟ್ಟುಬಿಡಿ ಎಂದರು. ನೂರಾರು ಜನರ ಜೀವ ತೆಗೆದಿದ್ದ, ಅಸಂಖ್ಯ ಜನರ ಅಂಗವೈಕಲ್ಯಕ್ಕೆ ಕಾರಣವಾಗಿದ್ದ ಕಳ್ಳಭಟ್ಟಿ ಮಾರಾಟ ನಿಜಕ್ಕೂ ಸಮಾಜಕ್ಕೆ ಮಾರಕ.

ಆ ದಂಧೆಯಲ್ಲಿ ಶಾಮೀಲಾದವರ ಕಾರನ್ನು ಬಿಟ್ಟುಬಿಡಿ ಎನ್ನುವುದು ತಮ್ಮ ಘನತೆಗೆ ತಕ್ಕುದಲ್ಲ ಎಂದು ಆ ಮಂತ್ರಿಗೆ ಮನವರಿಕೆ ಮಾಡಿಸಲು ಯತ್ನಿಸಿದೆ. `ಅವೆಲ್ಲಾ ಕಥೆ ಬೇಡ. ಆ ಕಾರನ್ನು ಸುಮ್ಮನೆ ಬಿಟ್ಟು ಕಳಿಸಿ~ ಎಂದು ತಾಕೀತು ಮಾಡಿದರು.

ಅವರ ಮಾತಿನ ಧಾಟಿ ನನಗೆ ಇಷ್ಟವಾಗಲಿಲ್ಲ. `ಅದು ಸಾಧ್ಯವಿಲ್ಲ~ ಎಂದು ನಾನು ಉತ್ತರ ಕೊಟ್ಟೆ. `ನಿಮ್ಮನ್ನ ನೋಡ್ಕೋತೀನಿ~ ಎಂದು ಆವತ್ತು ಫೋನ್ ಇಟ್ಟರು. ಇದುವರೆಗೆ ನೋಡಿಕೊಳ್ಳಲು ಆಗಲಿಲ್ಲ. ಅವರಿಂದು ಪ್ರತಿಷ್ಠಿತ ರಾಜಕಾರಣಿ.

ಅಲ್ಲಿಂದ ನನಗೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ವರ್ಗಾವಣೆಯಾಯಿತು. ನಕಲಿ ಮದ್ಯದ ಹಾವಳಿ ಆಗ ಹೆಚ್ಚಾಗಿತ್ತು. ಈ ದಂಧೆಯಲ್ಲಿ ಕೇಳಿಬರುತ್ತಿದ್ದ ಮುಖ್ಯವಾದ ಹೆಸರು ಕಾರ್ಗೋ ಮೂರ್ತಿ. ಮುಂದೆ ಈ ದಂಧೆಯಲ್ಲಿನ ವೈಮನಸ್ಯದ ಕಾರಣಕ್ಕೇ ಅವನು ಕೊಲೆಯಾಗಿ ಹೋದ.

ಒಮ್ಮೆ ನನಗೆ ನಕಲಿ ವಿಸ್ಕಿ ಸಾಗಿಸುತ್ತಿದ್ದಾರೆಂಬ ಮಾಹಿತಿ ಬಂತು. ನಮ್ಮ ತಂಡ ತಕ್ಷಣ ಕಾರ್ಯಪ್ರವೃತ್ತವಾಯಿತು. ಹೊಸೂರು ರಸ್ತೆಯಲ್ಲಿ ಆ ಲಾರಿಯನ್ನು ವಶಪಡಿಸಿಕೊಂಡೆವು. ಸುಮಾರು 500 ಕ್ರೇಟ್‌ಗಳಷ್ಟು ನಕಲಿ ವಿಸ್ಕಿ ಸಿಕ್ಕಿತು. ಕೇಸನ್ನು ದಾಖಲಿಸಿದ್ದಾಯಿತು.
 
ಮಹಜರು ಮಾಡಿ ವಿವರಗಳನ್ನು ಬರೆಯುತ್ತಿದ್ದಾಗ ಫೋನ್ ಬಂತು. `ಯಾರದು ಗಾಡಿ ಹಿಡಿದಿರೋದು~ ಎಂದಿತು ಧ್ವನಿ. `ನೀನು ಯಾರು~ ಎಂದು ನಾನೂ ಕೇಳಿದೆ. `ನಾನು ಕಾರ್ಗೋ ಮೂರ್ತಿ ಅಂತ. ನಿಮ್ಮದೇನಿದೆಯೋ ಆಮೇಲೆ ಕಳಿಸಿಕೊಡ್ತೀನಿ. ಸುಮ್ಮನೆ ಗಾಡಿ ಬಿಟ್ಟು ಕಳಿಸಿ~ ಎಂದು ಮುಜುಗರವಿಲ್ಲದೆ ಮಾತನಾಡಿದ.

ಅವನ ಹೆಸರು ಕೇಳಿದ್ದೇ ತಡ, ನನ್ನ ರಕ್ತ ಕುದ್ದುಹೋಯಿತು. ನನಗೆ ಮಾತನಾಡಲೂ ಬಿಡದೆ `ಇನ್ನು ಅರ್ಧ ಗಂಟೇಲಿ ನೀವೇ ನನ್ನ ಗಾಡಿ ತಂದು ಬಿಡುವ ಹಾಗೆ ಮಾಡ್ತೀನಿ... ನೋಡ್ತಿರಿ~ ಎಂದು ಬಡಾಯಿ ಹೊಡೆದು ಫೋನಿಟ್ಟ.

ಮರುದಿನ ಬೆಳಿಗ್ಗೆ 6 ಗಂಟೆಗೇ ಠಾಣೆಗೆ ಹೋದೆ. ಅಂದು ಮುಸ್ಲಿಂ ಹಬ್ಬ ಇತ್ತಾದ್ದರಿಂದ ಪ್ರಾರ್ಥನೆ ನಡೆಯುವ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಮಾಡಬೇಕಿತ್ತು. ನನ್ನ ತಲೆಯ ತುಂಬಾ ಅದೇ ಯೋಚನೆ. ಠಾಣೆಗೆ ಹೋದ ತಕ್ಷಣ ನಮ್ಮ ಸಿಬ್ಬಂದಿ ಒಂದು ಫೋನ್ ನಂಬರ್ ಕೊಟ್ಟು, `ಇದಕ್ಕೆ ಫೋನ್ ಮಾಡಬೇಕಂತೆ, ಸರ್~ ಎಂದರು. ನಮ್ಮ ಪೊಲೀಸ್ ಇಲಾಖೆಯದ್ದೇ ಎಕ್ಸ್‌ಚೇಂಜ್‌ನ ವ್ಯಾಪ್ತಿಗೆ ಬರುವ ಸಂಖ್ಯೆಗಳಿದ್ದ ಫೋನ್ ನಂಬರ್ ಅದು.

ಯಾರೋ ಹಿರಿಯ ಅಧಿಕಾರಿಗಳು ಮಾತನಾಡಿರಬೇಕು ಎಂದುಕೊಂಡು ಆ ನಂಬರ್‌ಗೆ ಸಂಪರ್ಕಿಸುವಂತೆ ಎಕ್ಸ್‌ಚೇಂಜ್‌ಗೆ ಫೋನ್ ಮಾಡಿ ಕೇಳಿದೆ. ನಮ್ಮ ಇಲಾಖೆಯ ಯಾರೇ ಆದರೂ ಫೋನ್ ಎತ್ತಿಕೊಂಡಾಗ ಸೌಜನ್ಯದಿಂದಲೇ ಮಾತನಾಡುತ್ತಾರೆ. ಆದರೆ, ಈ ಸಲ ಹಾಗಾಗಲಿಲ್ಲ. ಫೋನೆತ್ತಿಕೊಂಡವರು `ಯಾರು~ ಎಂದು ಗಡುಸು ದನಿಯಲ್ಲಿ ಕೇಳಿದಾಗ, ಯಾರಿರಬಹುದೆಂದು ಯೋಚಿಸತೊಡಗಿದೆ.
 
ನಾನು ಮರುಮಾತನಾಡುವ ಮೊದಲೇ, `ಯಾರು ಅಂತ ಗೊತ್ತಿಲ್ಲದೇನೇ ನೀನು ಫೋನ್ ಮಾಡಿಬಿಟ್ಟೆಯಾ?~ ಎಂದದ್ದನ್ನು ಕೇಳಿ ನನಗೆ ಸಿಟ್ಟು ಬಂತು. ಅಹಂಕಾರದ ಧಾಟಿಯ ಆ ಮಾತನ್ನು ಸಹಿಸಿಕೊಳ್ಳುವುದು ನನ್ನಿಂದ ಸಾಧ್ಯವಿರಲಿಲ್ಲ. ಆದರೂ ತಡೆದುಕೊಂಡು; ನನ್ನ ಟೇಬಲ್ ಮೇಲೆ ಈ ನಂಬರ್ ಬರೆದಿಟ್ಟಿದ್ದರು. ನನ್ನ ಸಹೋದ್ಯೋಗಿ ಫೋನ್ ಮಾಡಬೇಕು ಎಂದು ತಿಳಿಸಿದರು. ಅದಕ್ಕೇ ಮಾಡಿದ್ದೇನೆ.

ಮಾತಾಡಲು ಇಷ್ಟವಿಲ್ಲದೆ ಇದ್ದರೆ ಇಡುತ್ತೇನೆ ಎಂದೆ. `ನಾನು ಹೋಮ್ ಮಿನಿಸ್ಟರ್ ಅವರ ಖಾಸಗಿ ಸೆಕ್ರೆಟರಿ~ ಎಂದರು. ನಮ್ಮ ಅಧಿಕಾರಿಯೂ ಅಲ್ಲ, ಐಎಎಸ್ ಅಧಿಕಾರಿಯೂ ಅಲ್ಲ ಎಂಬುದು ಗೊತ್ತಾಯಿತು. `ನನ್ನ ಲೆವೆಲ್ಲು ಸಬ್ ಇನ್ಸ್‌ಪೆಕ್ಟರ್‌ಗಳ ಹತ್ತಿರ ಮಾತಾಡೋದಲ್ಲ. ಏನಿದ್ದರೂ ಡಿಜಿ, ಎಡಿಜಿ, ಐಜಿಗಳ ಲೆವೆಲ್ಲು~ ಎಂದು ಹಮ್ಮಿನ ಮಾತುಗಳನ್ನಾಡಿದರು. ನನಗೆ ಇನ್ನು ಸುಮ್ಮನಿರಲು ಆಗಲಿಲ್ಲ.

`ನನ್ನದೂ ಆಫೀಸರ್ಸ್‌ ಹತ್ತಿರ, ಹೋಮ್ ಮಿನಿಸ್ಟರ್ ಹತ್ತಿರ ಮಾತಾಡೋ ಲೆವೆಲ್ಲು; ನಿನ್ನಂಥ ಪ್ರೈವೇಟ್ ಪಿ.ಎ ಜೊತೆಗಲ್ಲ~ ಎಂದು ಉತ್ತರ ಕೊಟ್ಟೆ. `ಐದೇ ನಿಮಿಷದಲ್ಲಿ ನಿನಗೆ ನಾನು ಏನು ಅಂತ ತೋರಿಸ್ತೀನಿ. ನಿಮಗೂ ಅಬಕಾರಿ ಸರಕಿಗೂ ಏನು ಸಂಬಂಧ? ಆ ಲಾರಿಯನ್ನು ಯಾಕೆ ಹಿಡಿದುಕೊಂಡಿದೀರಿ?~ ಎಂದು ದಬಾಯಿಸಿದರು.
 
`ರೀ ಸ್ವಾಮಿ, ಅಬಕಾರಿ ಕಾಯ್ದೆಯಲ್ಲಿ ಕೇಸು ದಾಖಲಿಸುವ ಅವಕಾಶ ಇರುವುದೇ ಪೊಲೀಸರಿಗೆ. ಹೋಮ್ ಮಿನಿಸ್ಟರ್ ಆಫೀಸಿನವರಿಗಲ್ಲ. ಕೇಸು ರಿಜಿಸ್ಟರ್ ಮಾಡಿದ್ದಾಗಿದೆ. ಫೋನ್ ಇಡ್ರಿ. ನೀವು ಹೇಳಿದರೆ ಬಿಡಬೇಕು ಅಂತ ಸಿ.ಆರ್.ಪಿ.ಸಿ.ನ್ಲ್ಲಲಿ ಎಲ್ಲೂ ಇಲ್ಲ. ಅಬಕಾರಿ ಕಾಯ್ದೆಯಲ್ಲೂ ಇಲ್ಲ~ ಎಂದು ಖಾರವಾಗಿ ಪ್ರತಿಕ್ರಿಯಿಸಿದೆ. ಅವರು ಫೋನ್ ಇಟ್ಟರು.

ಐದು ನಿಮಿಷ ಕೂಡ ಆಗಿರಲಿಲ್ಲ. ವೃತ್ತಿಯ ಬಗ್ಗೆ ಗೌರವವೇ ಇಲ್ಲದವರಂತೆ ಮಾತನಾಡುವ ಇಂಥವರೆಲ್ಲಾ ಇದ್ದಾರಲ್ಲ ಎಂದು ಬೇಸರಪಟ್ಟುಕೊಳ್ಳುತ್ತಿದ್ದೆ. ಅಷ್ಟರಲ್ಲೇ ಡಿಸಿಪಿ ಫೋನ್ ಮಾಡಿದರು. `ಏನ್ರೀ ಹೋಮ್ ಮಿನಿಸ್ಟರ್ ಪರ್ಸನಲ್ ಸೆಕ್ರೆಟರಿಗೆ ಬಾಯಿಗೆ ಬಂದಂತೆ ಬೈಯ್ದರಂತೆ~ ಎಂದು ಕೇಳಿದರು.
 
ನಾನು ಅವರು ಮಾತನಾಡಿದ ಧಾಟಿಯ ಬಗ್ಗೆ ತಿಳಿಸಿದೆ. `ಏನು ಕೇಸು~ ಅಂತ ವಿಚಾರಿಸಿದರು. ನ್ಯಾಯಾಲಯದ ವಶಕ್ಕೆ ಒಪ್ಪಿಸಲೇಬೇಕಾದ ಪ್ರಕರಣ ಇದೆಂಬುದನ್ನು ಅವರಿಗೆ ಮನವರಿಕೆ ಮಾಡಿಸಿದೆ. ಹೊರ ರಾಜ್ಯದವರು ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರಿಂದ ಅವರಿಗೆ ಜಾಮೀನು ದೊರಕುವುದೂ ಕಷ್ಟವೆಂಬುದು ನನಗೆ ಗೊತ್ತಿತ್ತು.

`ನಿಮಗೆ ಬಿಡಲು ಸಾಧ್ಯವಿಲ್ಲದಿದ್ದರೆ ನ್ಯಾಯಾಲಯದ ವಶಕ್ಕೆ ನೀಡಿ. ಅವರು ಏನಾದರೂ ಮಾಡಿಕೊಳ್ಳಲಿ~ ಎಂದು ಡಿಸಿಪಿ ಹೇಳಿದ ಮೇಲೆ ನನಗೆ ತುಸು ಸಮಾಧಾನವಾಯಿತು.

ನಾಯಕ್ ಹಾಗೂ ಸಣ್ಣಬತ್ತಪ್ಪ (ಅವರು ನನ್ನ ಜೊತೆ ಸಬ್ ಇನ್ಸ್‌ಪೆಕ್ಟರ್ ಆಗಿಯೂ ಕೆಲಸ ಮಾಡಿದ್ದರು. ನಂತರ ಅಬಕಾರಿ ಇಲಾಖೆಗೆ ಸೇರಿದ್ದು) ಎಂಬ ಅಬಕಾರಿ ಸೂಪರಿಂಟೆಂಡೆಂಟ್‌ಗಳಿದ್ದರು. ಅವರಿಗೆ ನಡೆದ ಘಟನೆಯನ್ನು ವಿವರಿಸಿದೆ. ಅವರೂ `ಒಳ್ಳೆಯ ಕೆಲಸ ಮಾಡಿದ್ದೀರಿ~ ಎಂದೇ ಹೇಳಿದರು.
 

`ರೋಹಿದಾಸ್ ನಾಯಕ್ ಎಂಬ ನಮ್ಮ ಸ್ನೇಹಿತರಿದ್ದಾರೆ. ಅವರಿಗೆ ರಿಪೋರ್ಟ್ ಕಳಿಸಿಕೊಡಿ. ಈ ಪ್ರಕರಣದಲ್ಲಿ ಸಿಗುವ ಮಾಲು, ವಾಹನ ಎಲ್ಲವನ್ನೂ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಕಾಯ್ದೆಯೇ ಸ್ಪಷ್ಟಪಡಿಸಿರುವುದರಿಂದ ಆತಂಕ ಬೇಡ~ ಎಂದಾಗ ನನ್ನಿಂದ ಯಾವ ತಪ್ಪೂ ಆಗಿಲ್ಲವೆಂಬುದು ಖಾತರಿಯಾಯಿತು.

ನ್ಯಾಯಾಲಯದ ವಶಕ್ಕೆ ಆರೋಪಿಗಳನ್ನು ಒಪ್ಪಿಸಿದ್ದಾಯಿತು. ಮ್ಯಾಜಿಸ್ಟ್ರೇಟರು ರಜೆ ಇದ್ದ ಕಾರಣ ಆರೋಪಿಗಳು ಹತ್ತು ದಿನ ಜೈಲಿನಲ್ಲೇ ಕೊಳೆಯುವಂತಾಯಿತು.

ಆನಂತರವಷ್ಟೇ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು. ಅವರೆಲ್ಲಾ ಜೈಲಿನಲ್ಲಿ ಇದ್ದ ಸಂದರ್ಭದಲ್ಲಿ ಮತ್ತೊಮ್ಮೆ ಗೃಹಮಂತ್ರಿಗಳ ಆಪ್ತ ಕಾರ್ಯದರ್ಶಿ ಫೋನ್ ಮಾಡಿ ದಬಾಯಿಸಲು ಬಂದರು. `ತಾಕತ್ತಿದ್ದರೆ ಈಗ ಬಿಡಿಸಿಕೊಳ್ಳಿ~ ಎಂದೇ ನಾನು ಹೇಳಿದ್ದು. ಆ ರೀತಿ ಮಾತನಾಡುವ ಮಟ್ಟಕ್ಕೆ ಅವರು ನನ್ನ ಜೊತೆಯಲ್ಲಿ ವರ್ತಿಸಿದ್ದರು. ಅವರ ಎಗರಾಟದಿಂದ ಏನೂ ಪ್ರಯೋಜನವಾಗಲಿಲ್ಲ.
 
ಪ್ರಕರಣದ ವಿಚಾರಣೆ ಮುಗಿದ ನಂತರ ನಾವು ವಶಪಡಿಸಿಕೊಂಡಿದ್ದ ವಾಹನ ಸಂಪೂರ್ಣವಾಗಿ ಸರ್ಕಾರದಿಂದಲೇ ಮುಟ್ಟುಗೋಲಾಯಿತು. ಯಾವ ವಾಹನವನ್ನು ಬಿಡಿಸಿಕೊಳ್ಳಲು ಆ ಪಿ.ಎ ಬಾಯಿಗೆಬಂದಂತೆ ಮಾತಾಡಿದ್ದರೋ ಅದಕ್ಕೆ ಒದಗಿದ ಗತಿ ಅದು. ರಾಜಕಾರಣಿಗಳ ಆಪ್ತ ವಲಯದಲ್ಲಿ ಇರುವ ಇಂಥವರ ಒತ್ತಡಕ್ಕೆ ಮಣಿದರೆ ಪೊಲೀಸರು ಭ್ರಷ್ಟರಾದಂತೆಯೇ ಸರಿ. ಮುಂದೆ ಅವರ ಕಾಸಿಗೆ ಕೈಚಾಚುವ ಪರಿಸ್ಥಿತಿಯನ್ನು ಸ್ವತಃ ಅಂಥವರೇ ಸೃಷ್ಟಿಸುತ್ತಾರೆ.

ಅದೇ ಕಾಲದಲ್ಲಿ ಕಸ್ತೂರಿರಂಗನ್ ಅವರು ಉಸ್ತುವಾರಿ ಡಿಸಿಪಿ ಆಗಿದ್ದರು. ಆಗ ಎರಡು ಕೋಮಿನ ನಡುವೆ ಗಲಭೆ ಶುರುವಾಗಿ ಆಡುಗೋಡಿ ಪ್ರದೇಶದಲ್ಲಿ ಒಬ್ಬ ಮೃತಪಟ್ಟ. ಅವನ ಕೋಮಿನವರು ಇನ್ನೊಂದು ಕೋಮಿನ ಅನೇಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರು. ಕೇಸು, ಪ್ರತಿಕೇಸು ದಾಖಲಾಯಿತು. ಇಡೀ ನಗರದಲ್ಲಿ ಬಂದೋಬಸ್ತ್ ಬಿಗಿಮಾಡಲಾಯಿತು. ಎರಡೂ ಕೋಮಿನ ಗಲಭೆಕೋರರನ್ನು ಆಡುಗೋಡಿ ಪೊಲೀಸರು ದಸ್ತಗಿರಿ ಮಾಡಿದರು.

ಕೆಲವು ಕಿಡಿಗೇಡಿಗಳು ಸುಮ್ಮನಾಗಲಿಲ್ಲ. ಶವವನ್ನು ಅಲ್ಲಿದ್ದ ಪ್ರಾರ್ಥನಾ ಮಂದಿರಕ್ಕೆ ತಂದರು. ಮೃತನ ಕಡೆಯವರು ಅವನನ್ನು ಕೊಂದವರನ್ನು ತಮ್ಮ ವಶಕ್ಕೆ ಒಪ್ಪಿಸಬೇಕು; ಅವರಿಗೆ ತಾವೇ ಶಾಸ್ತಿ ಮಾಡುತ್ತೇವೆ ಎಂದು ಪಟ್ಟುಹಿಡಿದರು.

ಇನ್ನೊಂದು ಕೋಮಿನವರು ದಸ್ತಗಿರಿಯಾದ ತಮ್ಮವರ ಬಿಡುಗಡೆಗೆ ಒತ್ತಾಯಿಸಿದರು. ಕಾನೂನಿನಲ್ಲಿ ಎರಡಕ್ಕೂ ಅವಕಾಶವಿಲ್ಲ. ಸಂಜೆಯಾಗುತ್ತಾ ಬಂದರೂ ಶವವನ್ನು ಪ್ರಾರ್ಥನಾ ಮಂದಿರದಿಂದ ಎತ್ತಲೇ ಇಲ್ಲ. ಕೊಂದವರನ್ನು ಒಪ್ಪಿಸುವವರೆಗೆ ಶವ ಅಲ್ಲಿಂದ ಕದಲುವುದಿಲ್ಲ ಎಂದು ಹೆದರಿಸತೊಡಗಿದರು. ಗೃಹಮಂತ್ರಿಗಳೇ ಬರಲಿದ್ದಾರೆ ಎಂದೂ ನುಡಿದರು. ಕಸ್ತೂರಿ ರಂಗನ್ ಮಾತ್ರ ಜಗ್ಗಲಿಲ್ಲ.

ಮುಂಚೂಣಿಯಲ್ಲಿ ನಿಂತು ಕೋಮಗಲಭೆ ಹತ್ತಿಕ್ಕುತ್ತಿದ್ದ ಕಸ್ತೂರಿ ರಂಗನ್ ಅವರ ಕಾರ್ಯವೈಖರಿಯೇ ಅದ್ಭುತ. ಬಂದ್‌ಗೆ ಅವಕಾಶ ಕೊಡಕೂಡದೆಂದು ನಾವು ಎಲ್ಲಾ ಅಂಗಡಿಗಳೂ ತೆರೆದೇ ಇರುವಂತೆ ನಿಗಾ ವಹಿಸಿದ್ದೆವು. ಗೃಹ ಸಚಿವರು ತಮ್ಮ ಜೊತೆ ಮಾತಾಡಬೇಕಂತೆ ಎಂದು ಕಂಟ್ರೋಲ್ ರೂಮ್‌ನಿಂದ ಕಸ್ತೂರಿ ರಂಗನ್ ಅವರಿಗೆ ಒಂದು ಮೆಸೇಜ್ ಬಂತು. ಪ್ರಕ್ಷುಬ್ಧ ವಾತಾವರಣ ಇರುವುದರಿಂದ ರಸ್ತೆಯಲ್ಲಿ ನಿಂತು ಮಾತನಾಡಲು ಸಾಧ್ಯವಿಲ್ಲ; ಆಮೇಲೆ ಠಾಣೆಯಿಂದ ಮಾತನಾಡುತ್ತೇನೆ ಎಂದು ಕಸ್ತೂರಿ ರಂಗನ್ ಹೇಳಿದರು.

ಹತ್ತಿರದಲ್ಲೇ ಕಿರಾಣಿ ಅಂಗಡಿ ಇತ್ತು. ಅಲ್ಲಿಂದ ಆ ಪ್ರಾರ್ಥನಾ ಮಂದಿರದ ಮುಖಂಡನೇ ಓಡೋಡಿ ಬಂದು, `ಗೃಹಮಂತ್ರಿಗಳ ಫೋನ್... ಮಾತಾಡಬೇಕಂತೆ~ ಎಂದು ಕಸ್ತೂರಿ ರಂಗನ್ ಬಳಿ ಹೇಳಿದ. ಇನ್ನು ಅವರು ಮಾತನಾಡದೆ ವಿಧಿಯಿಲ್ಲ ಎಂದೇ ನಾವೆಲ್ಲಾ ಭಾವಿಸಿದ್ದೆವು. ಆದರೆ,  ನಮ್ಮ ಊಹೆ ಸುಳ್ಳಾಯಿತು.

`ಹಾದಿಬೀದಿಯ ಯಾರದ್ದೋ ಫೋನಿನಲ್ಲಿ ನಾನು ಮಾತನಾಡಲು ಸಾಧ್ಯವಿಲ್ಲ. ಆಮೇಲೆ ಮಾತಾಡುತ್ತೇನೆ~ ಎಂದು ಕೈಯಾಡಿಸಿಬಿಟ್ಟರು. `ತಕ್ಷಣ ಶವಸಂಸ್ಕಾರ ಮಾಡದೇ ಇದ್ದರೆ ಪೊಲೀಸರೇ ಆ ಕೆಲಸ ಮಾಡಬೇಕಾಗುತ್ತದೆ~ ಎಂದು ಎಚ್ಚರಿಸಿದರು.
ಅಲ್ಲಿಂದ ಮೈಸೂರು ರಸ್ತೆಯ ಸ್ಮಶಾನಕ್ಕೆ ಶವದ ಮೆರವಣಿಗೆ ಮಾಡುವುದಾಗಿ ಬೆದರಿಸುತ್ತಿದ್ದವರು ವಾಹನ ತಂದು, ಶವವನ್ನು ಕೊಂಡೊಯ್ದರು. ಬಲುಬೇಗ ಅಂತ್ಯಸಂಸ್ಕಾರ ಮುಗಿಯಿತು. ಕಸ್ತೂರಿ ರಂಗನ್ ಅಷ್ಟು ಗಟ್ಟಿಯಾಗಿ ವರ್ತಿಸದೇ ಇದ್ದರೆ ಅಂದು ಗಲಭೆ ವ್ಯಾಪಿಸುವ ಸಾಧ್ಯತೆ ಇತ್ತು. ಅವರ ಈ ಕೆಲಸ ಕಂಡು ನಾವೆಲ್ಲಾ ತುಂಬಾ ಹೆಮ್ಮೆಪಟ್ಟಿದ್ದೆವು.

ಮುಂದಿನ ವಾರ: ಪೊಲೀಸರು ಕಾಸಿಗೆ ಕೈಚಾಚುವ ಪರಿಸ್ಥಿತಿಗಳು...
ಶಿವರಾಂ ಅವರ ಮೊಬೈಲ್ ನಂಬರ್: 94483 13066

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT