ADVERTISEMENT

ಆರರಿಂದ ಒಂದಕ್ಕೇರಿದ ಬಳ್ಳಾರಿ

ಬ್ರಿಗೇಡಿಯರ್ ಐ.ಎನ್.ರೈ
Published 27 ಫೆಬ್ರುವರಿ 2019, 9:35 IST
Last Updated 27 ಫೆಬ್ರುವರಿ 2019, 9:35 IST
   

ಭಾರವಾದ ಹೃದಯದಿಂದ ಈ ಅಧ್ಯಾಯವನ್ನು ಬರೆಯಲು ಕುಳಿತಿದ್ದೇನೆ. ಈ ಹಿಂದೆಯೇ ಅನೇಕ ಬಾರಿ ಹೇಳಿದ್ದೇನೆ. ಯುದ್ಧಕಾಲದಲ್ಲಿ ನಮಗೆ ಒದಗುವ ವಿಜಯ ಅದೆಷ್ಟೇ ದೊಡ್ಡದಾಗಿದ್ದರೂ, ನಮ್ಮ ಓರ್ವ ಸೈನಿಕನ ಬಲಿದಾನವೂ ನಮಗೆ ತಾಳಲಾರದ ವೇದನೆಗೆ ಕಾರಣವಾಗುತ್ತದೆ. ಅದು ಸೈನಿಕನ ಬದುಕಿನ ಕಟ್ಟಕಡೆಯ ಸಾರ್ಥಕ್ಯದ ಗಳಿಗೆಯೇ ಆದರೂ, ನಮ್ಮ ಬಲಿದಾನ ದೇಶಕ್ಕಾಗಿ ನೀಡಿದ ಅತ್ಯುನ್ನತ ಗೌರವ ಎಂದುಕೊಳ್ಳುತ್ತೇವಾದರೂ, ಆ ನೋವು ವರ್ಣಿಸಲಸಾಧ್ಯ. ಇಂತಹ ಅಪಾರ ನೋವುಗಳಿಗೆ ನಾವಿಂದು ಮೂಕರಾಗಿದ್ದೇವೆ. ಓರ್ವ ಸೈನಿಕನಾಗಿ ನನಗೆ ಪುಲ್ಮಾವಾದ ಘಟನೆ ಅತೀವ ದು:ಖಕ್ಕೆ ಕಾರಣವಾಗಿದೆ. ಅಗಲಿದ ವೀರ ಯೋಧರಿಗೆ ಸೆಲ್ಯೂಟ್ !
*

ಕರ್ನಾಟಕದಲ್ಲಿದ್ದ ಆರು ಎನ್‍ಸಿಸಿ ಘಟಕಗಳಲ್ಲಿ ಆರೆನಯೆ ಸ್ಥಾನದಲ್ಲಿದ್ದ ಬಳ್ಳಾರಿಯನ್ನು ಉನ್ನತ ದರ್ಜೆಗೇರಿಸುವ ಸವಾಲು ನನ್ನೆದುರಿತ್ತು. ಹಾಗೆ ನೋಡಿದರೆ ಸೈನಿಕ ಜೀವನದಲ್ಲಿ ಸವಾಲುಗಳೊಂದಿಗೇ ಬೆಳೆದವ ನಾನು. ಬೆಂಗಳೂರಿಗೆ ಸಿಕ್ಕಿದ ವರ್ಗಾವಣೆಯನ್ನು ಸೈನಿಕ ಜೀವನದ ನಿವೃತ್ತಿಯ ಅಂಚಿನಲ್ಲಿರುವ ನಾನು ಆರಾಮದಾಯಕವಾಗಿ ಸ್ವೀಕರಿಸಿ ಕಳೆಯ ಬಹುದಿತ್ತು. ಮತ್ತೆ ಅದನ್ನು ಬದಲಾಯಿಸಿಕೊಂಡು ಬಳ್ಳಾರಿಗೆ ಬಂದುದು ಒಳ್ಳೆಯ ತೀರ್ಮಾನವೇ ಆಯ್ತು. ನನಗೆ ಹೊಸ ಸವಾಲುಗಳನ್ನು ಮೈಮೇಲೆಳೆದುಕೊಳ್ಳುವುದೂ ಒಂದು ಅಭ್ಯಾಸ.

ನನ್ನ ಮುಂದೆ ಕೇವಲ ಹದಿನಾಲ್ಕು ತಿಂಗಳುಗಳಿದ್ದುವು. ಫಲಿತಾಂಶವನ್ನು ತೋರಿಸಲೇ ಬೇಕಾಗಿತ್ತು. ಆರರಲ್ಲಿರುವುದು ಕನಿಷ್ಠ ಮೂರಕ್ಕೇರಿದರೂ ನಾನು ಗೆದ್ದಂತೆಯೇ. ಆದರೆ ನನ್ನ ಲಕ್ಷ್ಯ ಮೂರಲ್ಲ, ಮೊದಲಿನ ಸ್ಥಾನವಾಗಿತ್ತು. ಎಲ್ಲಾ ಕಾಲೇಜುಗಳ ಮುಖ್ಯಸ್ಥರ ಜೊತೆಗೆ, ಕೆಡೆಟ್‍ಗಳ ಜೊತೆಗೆ, ಜಿಲ್ಲಾಡಳಿತ, ಆಯ್ಕೆಯಾದ ಜನ ನಾಯಕರು...ಹೀಗೆ ಎಲ್ಲ ಸಾಧ್ಯವಿರುವ ಸ್ತರಗಳಲ್ಲಿ ನಾನು ಮಾತುಕತೆ ಮಾಡಿದೆ. ಎನ್‍ಸಿಸಿ ಘಟಕದ ಪ್ರಾಮುಖ್ಯತೆಯನ್ನು ಸಾಧ್ಯವಿರುವ ಎಲ್ಲೆಡೆಯಲ್ಲೂ ವಿವರಿಸಿದೆ. ಅಲ್ಲಿನ ಎಲ್ಲಾ ವಿಭಾಗಗಳಲ್ಲೂ ಬೇರೆ ಬೇರೆ ಘಟಕಗಳ ಮುಂದೆ ತಾವು ಸ್ಪರ್ಧಿಸಿ ಗೆಲ್ಲಲಾರೆವು ಎಂಬ ಭಾವನೆಯೇ ಮನೆ ಮಾಡಿತ್ತು. ಹೇಗಿದ್ದರೂ ನಾವು ಮುಂದೆ ಬರಲಾರೆವು, ಇರುವ ಸ್ಥಾನವೇ ನಮಗೆ ಖಾಯಂ ಎಂಬ ಧೋರಣೆಯಿಂದ ಯಾವ ಉನ್ನತ ಮಟ್ಟದ ಪ್ರಯತ್ನವೂ ಅಲ್ಲಿಲ್ಲದೇ ಇದ್ದುದನ್ನು ಗಮನಿಸಿದೆ.

ADVERTISEMENT

ಅಂತೂ ನನಗಂತೂ ಇದೊಂದು ಸವಾಲೇ. ನನ್ನ ಪತ್ನಿಯ ನೇತೃತ್ವದಲ್ಲಿ ಉಳಿದ ಅನೇಕ ಆಫಿಸರ್‍ಗಳ ಹೆಂಡತಿಯರು ಸೇರಿ, ಘಟಕದಲ್ಲಿನ ಎಲ್ಲಾ ಹುಡುಗಿಯರಿಗೂ ವಿಶೇಷ ತರಬೇತಿ ನೀಡಿದರು. ಬೆಂಗಳೂರು, ಮಂಗಳೂರು, ಮೈಸೂರು, ಬೆಳಗಾವಿಗಳ ಘ ಟಕದೊಂದಿಗೆ ತಮಗೆ ಸ್ಪರ್ಧಿಸಲು ಸಾಧ್ಯವೇ ಇಲ್ಲ ಎಂಬಂತಿದ್ದ ಆ ಹುಡುಗಿಯರ ಮನಸ್ಸಿನಲ್ಲಿ ಗೆಲ್ಲುವ ಛಲವನ್ನು ತುಂಬಿದರು. ಗ್ರಾಮೀಣ ಪ್ರದೇಶದ ಈ ಹುಡುಗಿಯರ ಮನ:ಪರಿವರ್ತನೆಗೆ ಶ್ರಮಿಸಿದರು. ಆ ಹೆಣ್ಮಕ್ಕಳೊಂದಿಗೆ ಬೆರೆತರು. ಅಲ್ಲಿ ಅದುವರೆಗೂ ವಿದ್ಯಾರ್ಥಿಗಳು ಮತ್ತು ಆಫೀಸರ್‍ಗಳ ನಡುವಿನ ಅಂತರ ಕಡಿಮೆಯಾಗಿ, ಎಲ್ಲಾ ಎನ್‍ಸಿಸಿ ಹುಡುಗಿಯರಿಗೂ ಆತ್ಮಸ್ಥೈರ್ಯ ಹೆಚ್ಚಿತು. ನಮ್ಮ ತರಬೇತಿ ಮುಂದುವರಿಯಿತು.

ಅಂತೂ 13ತಿಂಗಳು ಮುಗಿಯಿತು. ಎಂದಿಗಿಂತ ಅಧಿಕ ಉತ್ಸಾಹದಲ್ಲಿ ನಮ್ಮ ಬಳ್ಳಾರಿ ಘಟಕದ ಎನ್‍ಸಿಸಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದರು. ಆರನೆಯ ಸ್ಥಾನದಲ್ಲಿಯೇ ವರ್ಷಗಳಿಂದ ಸಮಾಧಾನ ಪಟ್ಟುಕೊಳ್ಳುತ್ತಿದ್ದ ನಮ್ಮ ಘಟಕದ ಪರವಾಗಿ, ಕೊನೆಗೂ ನಾನು ಅಂದಿನ ನಮ್ಮ ರಾಜ್ಯಪಾಲರಾಗಿದ್ದ ಖುರ್ಷಿದ್ ಅಲಂಖಾನ ಅವರಿಂದ ನಂಬರ್ 1 ಸ್ಥಾನದ ಪಾರಿತೋಷಕಕ್ಕೆ ಮುತ್ತಿಕ್ಕಿದೆ!!!. ಅದು 1998ನೆಯ ಇಸವಿ. ಇದನ್ನೂ ನಾನು ನನ್ನ ಜೀವನದ ಅತ್ಯಂತ ಅವಿಸ್ಮರಣೀಯ ಸಾಧನೆಗಳ ಪಟ್ಟಿಯಲ್ಲಿ ದಾಖಲಿಸಿ ಹೆಮ್ಮೆ ಪಟ್ಟಿದ್ದೇನೆ.

ಕೇವಲ 14ತಿಂಗಳ ಬಳ್ಳಾರಿಯ ನನ್ನ ಈ ಜೀವನ ಅತ್ಯಂತ ಉಲ್ಲಾಸದಾಯಕವೂ ಆಗಿತ್ತು. ಹಾಗೆ ನೋಡಿದರೆ ಸೈನಿಕ ಯಾವುದೇ ಸ್ಥಳದಲ್ಲಿರಲಿ ಅತ್ಯಂತ ಉಲ್ಲಾಸದಿಂದಿರುತ್ತಾನೆ. ಒಂದೇ ತಟ್ಟೆಯಲ್ಲಿ ಊಟ ಮಾಡಿ, ಮತ್ತೆಂದೂ ಸಿಗದ ಸೈನಿಕ ಸ್ನೇಹಿತರ ವಿದಾಯದ ವೇಳೆಯಲ್ಲೂ ನಮ್ಮಲ್ಲೆಂದೂ ಉಲ್ಲಾಸಕ್ಕೆ ಕೊರತೆ ಇರಲಿಲ್ಲ. ನೋವಿನಲ್ಲೂ, ತನ್ನ ಬಳಗದ ಅನುಪಸ್ಥಿತಿಯಲ್ಲೂ ಸೈನಿಕ ಸದಾ ಜಾಗೃತನಾಗಿದ್ದಷ್ಟೇ ಸಹಜವಾಗಿ ಉಲ್ಲಸಿತನಾಯೂ ಇರುತ್ತಾನೆ.

ಹೀಗೆ ಕಳೆದ 45ವರ್ಷಗಳ ಇತಿಹಾಸದಲ್ಲಿ ಬಳ್ಳಾರಿ ಎನ್‍ಸಿಸಿ ಘಟಕ ಎಂದೂ ಟ್ರೋಫಿಯನ್ನು ಗೆದ್ದಿರಲಿಲ್ಲ. ಇದೊಂದು ಐತಿಹಾಸಿ ಗಳಿಗೆ ಎಂದು ‘ದಿ ಹಿಂದೂ’ ಪತ್ರಿಕೆ ವರದಿ ಮಾಡಿತ್ತು!.

ಈ ಎಲ್ಲಾ ಸಂತಸದ ಸಂದರ್ಭಗಳಲ್ಲಿ ಸೈನಿಕ ಜೀವನದ ಆನಂದದ ಕ್ಷಣಗಳನ್ನು ಅನುಭವಿಸುತ್ತಿದ್ದಾಗಲೇ, ನನ್ನ ಬಹು ನಿರೀಕ್ಷಿ ಪದೋನ್ನತಿಯ ಆಜ್ಞೆ ನನ್ನ ಕೈ ಸೇರಿತು. ನಾನು 1998ರಲ್ಲಿ ಬ್ರಿಗೇಡಿಯರ್ ಆಗಿ ಪ್ರಮೋಶನ್ ಹೊಂದಿದ್ದೆ!

1998ರಿಂದ 2000ದ ತನಕದ ನನ್ನ ಬ್ರಿಗೇಡಿಯರ್ ಜೀವನವೂ ಆಸಕ್ತಿಕರವಾಗಿದ್ದೇ. 98ರಲ್ಲಿ ನಾನು 63 ಮೌಂಟೇನ್ ಬ್ರಿಗೇಡ್‍ನ ಕಮಾಂಡರ್ ಆಗಿ ಅಧಿಕಾರ ಸ್ವೀಕರಿಸಿದೆ. ಮತ್ತೊಮ್ಮೆ ನನ್ನ ಸೈನ್ಯ ಜೀವನದ ಹಳೆಯದನ್ನು ನೆನಪಿಸುವ ಕಾಲ ಘಟ್ಟ ಇದು!. ಏಕೆಂದರೆ ನಾನು ಮತ್ತೊಮ್ಮೆ ಅತ್ಯಂತ ಸೂಕ್ಷ್ಮ ಪ್ರದೇಶದಲ್ಲಿ ಸೇನಾನಿಯಾಗಿ ಕಾರ್ಯಾರಂಭಿಸಿದೆ. ಈ ಮೊದಲು ಲಡಾಖ್ ನಲ್ಲಿ ಮೇಜರ್ ಆಗಿ 15500ಅಡಿಗಳೆತ್ತರದಲ್ಲಿ ಕರ್ತವ್ಯ ನಿರ್ವಹಿಸಿದ್ದೆ. ಅದಾದ ನಂತರ ಕರ್ನಲ್ ಆಗಿ 15000ಅಡಿ ಎತ್ತರದಲ್ಲಿ ಕರ್ತವ್ಯ ನಿರತನಾಗಿದ್ದವ ಇದೀಗ ಪೂರ್ವ ಸಿಕ್ಕಿಂನಲ್ಲಿ 14500 ಅಡಿ ಎತ್ತರದಲ್ಲಿ ಮತ್ತೆ ಬ್ರಿಗೇಡಿಯರ್ ಆಗಿ ನಾನು ವರ್ಗಾವಣೆ ಹೊಂದಿದ್ದೆ!

1998ರ ಜೂನ್ ನಲ್ಲಿ ನಾನು ಮತ್ತೆ ಸಿಕ್ಕಿಂಗೆ ಹೊರಟೆ. ಸಿಕ್ಕಿಂ ಬಗ್ಗೆ ಹೇಳಲೇ ಬೇಕಾದ ಒಂದು ವಿಶೇಷಣ ಎಂದರೆ ಅಲ್ಲಿನ ಜನರು ಅತ್ಯಂತ ಹೆಚ್ಚು ಕಾನೂನನ್ನು ಗೌರವಿಸುವವರು. ಬಹುಶ ನಮ್ಮ ದೇಶದಲ್ಲಿಯೇ ಈ ಪರಿ ಕಾನೂನನ್ನು ಗೌರವಿಸುವ ರಾಜ್ಯ ಬೇರೊಂದಿಲ್ಲವೇನೋ ಎಂಬುದೂ ನನ್ನ ಅಭಿಪ್ರಾಯ. ಅಷ್ಟೇ ಹಸಿರಿನಿಂದ ಕೂಡಿದ, ಅತ್ಯಂತ ಸ್ವಚ್ಛತೆಗೆ ಪ್ರಾಧಾನ್ಯತೆ ನೀಡುವ ರಾಜ್ಯ ಇದಾಗಿತ್ತು. ನಂಬಿದರೆ ನಂಬಿ ಬಿಟ್ಟರೆ ಬಿಡಿ. ಅಲ್ಲಿನ ಕೇಂದ್ರ ಕಾರಾಗ್ರಹದಲ್ಲಿ ಆ ಸಂದರ್ಭದಲ್ಲಿ ಒಬ್ಬನೇ ಒಬ್ಬ ಕೈದಿ ಇದ್ದ!. ಇದು ಕತೆಯಂತೆ ಅನಿಸಿದರೂ ವಾಸ್ತವ. ಅಷ್ಟರ ಮಟ್ಟಿಗೆ ಅಲ್ಲಿನ ಜನ ಕಾನೂನು ಪಾಲಕರಾಗಿದ್ದರು. ಪೋಲೀಸ್ ಇಲಾಖೆಗೆ ಅಲ್ಲಿ ಕೆಲಸವೇ ಇರುತ್ತಿರಲಿಲ್ಲ. ಅಲ್ಲಿನ ಡಿಜಿಪಿ ತಮಗೆ ಕೆಲಸವೇ ಇಲ್ಲದಷ್ಟೂ ಇಲ್ಲಿನ ಜನರು ಪ್ರಾಮಾಣಿಕರು ಎಂದು ತಮಾಷೆ ಮಾಡುತ್ತಿದ್ದರು. ಅಂತಹ ವಿಶಿಷ್ಠ ನಾಡು ಸಿಕ್ಕಿಂ. 1998ರಷ್ಟು ಹಿಂದೆಯೇ ಆ ರಾಜ್ಯ ಪ್ಲಾಸ್ಟಿಕ್ ಮುಕ್ತ ರಾಜ್ಯವಾಗಿತ್ತು ಎಂದರೆ ಅಲ್ಲಿನ ಜನರ, ನಾಯಕತ್ವದ ದೂರದೃಷ್ಟಿಯನ್ನು ಅಥೈಸಿಕೊಳ್ಳಬಹುದು. ರಾಜ್ಯದ ರಾಜಧಾನಿ ಗ್ಯಾಂಗ್ಟಾಕ್ ಅತ್ಯಂತ ಸ್ವಚ್ಛ, ಸುಂದರ ಪರಿಸರದಿಂದ ಕಂಗೊಳಿಸುತ್ತಿತ್ತು.

ಅಂತೂ ಸಿಕ್ಕಿಂನಲ್ಲಿ ನಾನು ರಿಪೋರ್ಟ್ ಮಾಡಿಕೊಂಡೆ. ಅಲ್ಲಿಂದ 9000ಅಡಿ ಎತ್ತರದ ಪ್ರದೇಶದಲ್ಲಿ ಏಳು ದಿನಗಳ ತನಕ ಒಗ್ಗಿಕೊಳ್ಳುವಿಕೆಯ ತರಬೇತಿಯಲ್ಲಿ ಪಾಲ್ಗೊಂಡೆ. (ಇದು ಅತ್ಯಂತ ಎತ್ತರದ ಪ್ರದೇಶದ ವಾತಾವರಣಕ್ಕೆ ಹೊಂದಿಕೊಳ್ಳಲು ಸೈನಿಕ ಅನುಸರಿಸಲೇ ಬೇಕಾಗುವ ತರಬೇತಿ). ನಂತರ ಬ್ರಿಗೇಡ್ ಕೇಂದ್ರ ಕಛೇರಿಗೆ ತೆರಳಿ ಕಮಾಂಡ್ ಆಗಿ ನನ್ನ ಅಧಿಕಾರ ವಹಿಸಿಕೊಂಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.