ADVERTISEMENT

ನಿವೃತ್ತಿ ಸಮೀಪದ ಆ ಹದಿನೇಳು ತಿಂಗಳು

ಬ್ರಿಗೇಡಿಯರ್ ಐ.ಎನ್.ರೈ
Published 9 ಏಪ್ರಿಲ್ 2019, 10:25 IST
Last Updated 9 ಏಪ್ರಿಲ್ 2019, 10:25 IST

ಸೇನಾ ನಿವೃತ್ತಿಯ ದಿನಗಳಿಗೆ ಸಮೀಪಿಸುತ್ತಿರುವ ನನಗೆ ಡೆಹ್ರಾಡೂನ್‍ನ ಸೈನಿಕ ಶಾಲೆ ಅನೇಕ ಸ್ಮರಣೀಯ ನೆನಪುಗಳ ದಾಖಲೆಗೆ ಕಾರಣವಾಗಿತ್ತು. ಸೈನ್ಯದ ಮುಂದಿನ ನಾಯಕರನ್ನು ಅಣಿಗೊಳಿಸುವ ಮಹತ್ತರ ಜವಾಬ್ದಾರಿಯನ್ನು ನಿಭಾಯಿಸುವುದೇ ಒಂದು ಕೌಶಲ. ನಾನಿಲ್ಲಿ ಕಳೆದ ಹದಿನೇಳು ತಿಂಗಳೂ ಅತ್ಯಂತ ಸಂತಸ ನೀಡಿತ್ತು. ಅದಕ್ಕೂ ಮಿಗಿಲಾಗಿ ತೃಪ್ತಿಯನ್ನೂ. ಐಎಂಎ (ಇಂಡಿಯನ್ ಮಿಲಿಟರಿ ಅಕಾಡೆಮಿ) ವಿಶ್ವದಲ್ಲಿಯೇ ಅತ್ಯಂತ ವಿಶೇಷ ಸೇನಾ ತರಬೇತಿ ಕೇಂದ್ರ. ಇಲ್ಲಿಗೆ ಅನೇಕ ಗಣ್ಯರು, ಅತೀ ಗಣ್ಯರೂ, ಎಲ್ಲಾ ಕ್ಷೇತ್ರಗಳಿಂದಲೂ ಭೇಟಿ ನೀಡುತ್ತಿದ್ದರು.

ಹಾಗಾಗಿ ಇದೊಂದು ರೀತಿಯಲ್ಲಿ ಸದಾ ಅತಿಥಿಗಳಿಂದ ತುಂಬಿ ಹೋಗಿರುತ್ತಿತ್ತು. ಇಲ್ಲಿನ ತರಬೇತಿಯ ಅವಧಿ ಆರು ತಿಂಗಳುಗಳು. ಪ್ರತೀ ಆರು ತಿಂಗಳೂಗಳಿಗೊಮ್ಮೆ ಒಂದೊಂದೇ ಬ್ಯಾಚ್ ಇಲ್ಲಿಂದ ತೇರ್ಗಡೆಯಾಗಿ ಹೊರ ಹೋಗುತ್ತಿದ್ದರೆ ಮತ್ತೆ ಹೊಸ ಬ್ಯಾಚ್ ಬಂದು ಸೇರುತ್ತಿತ್ತು. ತಮ್ಮ ಮಕ್ಕಳು, ಬಂಧುಗಳು ಇಲ್ಲಿ ಭಾರತೀಯ ಸೇನೆಯ ಭಾಗವಾಗಿ ಹೊರ ಹೋಗುವುದನ್ನು ನೋಡಲು ಅನೇಕ ಪೋಷಕರೂ, ಸ್ನೇಹಿತರೂ, ಬಂಧುಗಳೂ ಇಲ್ಲಿಗೆ ಆಗಾಗ ಬರುತ್ತಿದ್ದರು.

ಡೆಹ್ರಾಡೂನ್ ಸುತ್ತ ಮುತ್ತಲೂ ಅನೇಕ ಪ್ರೇಕ್ಷಣೀಯ ಸ್ಥಳಗಳಿದ್ದುವು. ನಾನೂ ನನ್ನ ಪತ್ನಿಯೊಂದಿಗೆ ಇಂತಹ ಅನೇಕ ಸ್ಥಳಗಳಿಗೆ ಭೇಟಿ ಕೊಟ್ಟಿದ್ದೆ. ಹರಿದ್ವಾರ, ಹೃಷಿಕೇಶ, ಗಂಗೋತ್ರಿ, ಕೇದಾರ, ಬದ್ರೀನಾಥ್, ಮಸ್ಸೂರಿ ಮುಂತಾದ ಪುಣ್ಯಕ್ಷೇತ್ರಗಳು ಹಾಗೂ ಪ್ರವಾಸೀ ತಾಣಗಳನ್ನೂ ಸಂದರ್ಶಿಸಿದೆವು. ರುದ್ರಪ್ರಯಾಗ್, ಕರ್ಮಪ್ರಯಾಗ್, ಮಂದಾಕಿನಿ ಹಾಗೂ ಭಾಗೀರಥಿ ನದಿಗಳನ್ನೂ ನೋಡಿದೆವು. ಒಟ್ಟಾರೆಯಾಗಿ ಇಲ್ಲಿನ ಅವಧಿ ನನಗೂ, ನನ್ನೊಂದಿಗೆ ಇಂತಹ ಸ್ಥಳ ನೋಡಲು ಬರುವ ಬಂಧುಗಳು, ಸ್ನೇಹಿತರಿಗೂ ಒಂದು ರೀತಿಯಲ್ಲಿ ಪ್ರವಾಸದ ಅವಧಿಯಾಗಿ ಪರಿಣಮಿಸಿತ್ತು. ಸೈನ್ಯದ ಜೊತೆಗೆ ಬೇರೆ ಬೇರೆ ಸ್ಥಳಗಳಲ್ಲಿ ಅತ್ಯಂತ ಬಿಡುವಿರದ ಚಟುವಟಿಕೆಗಳಿಂದ ನಮಗೊಂದು ರೀತಿಯ ಬಿಡುವೂ ದೊರೆತ ಅನುಭವ.

ADVERTISEMENT

ಆದರೆ ಅಲ್ಲಿನ ಐಶಾರಾಮಿ ಜೀವನ ನನಗೆ ಅಷ್ಟು ಖುಷಿ ಕೊಡುತ್ತಿರಲಿಲ್ಲ. ನಿಜವಾದ ಸೈನಿಕ ಎಂದೂ ಐಷಾರಾಮಿ ಜೀವನ ಬಯಸುವುದೇ ಇಲ್ಲ!.ನನ್ನ ಪ್ರೀತಿಯ ಸೈನಿಕರ ಸ್ನೇಹ, ಸರದಾರರುಗಳ ನಿಷ್ಕಲ್ಮಶ ಪ್ರೀತಿಯ ನಗು, ಅತ್ಯಂತ ದುರ್ಗಮ ಸನ್ನಿವೇಶಗಳಲ್ಲೂ ಸಂತೋಷದಿಂದ ಇರುತ್ತಿದ್ದ ದಿನಗಳು, ದಿನ ನಿತ್ಯವೂ ಸಾವು, ಬದುಕಿನೊಂದಿಗೆ ಹೋರಾಡುವ ನಿಜಾರ್ಥದ ಸಾಹಸ...ಎಲ್ಲವನ್ನೂ ನಾನು ಮಿಸ್ ಮಾಡಿಕೊಳ್ಳುತ್ತಿದ್ದೆ.

ಬಹುಶ ಸೈನ್ಯವೂ ನನ್ನನ್ನೂ ಹೀಗೇ ಮಿಸ್ ಮಾಡಿಕೊಳ್ಳುತ್ತಿತ್ತೇನೋ!. ಏಕೆಂದರೆ ನನ್ನ ರೆಜಿಮೆಂಟ್ ಮತ್ತೊಮ್ಮೆ ನನ್ನ ಸೇವೆಯನ್ನು ಬಯಸಿ, ನನ್ನಲ್ಲಿಗೆ ವಿಶೇಷ ವಿನಂತಿಯ ಮೇರೆಗೆ ಕರೆಸಿಕೊಂಡಾಗಲೇ ನನಗೆ ಹೀಗನ್ನಿಸಿದ್ದು!. ಸಿಖ್ ಇನ್ಫಂಟರಿ ರೆಜಿಮೆಂಟಲ್ ಸೆಂಟರ್ ನನ್ನನ್ನು ತಮ್ಮ ಕೇಂದ್ರದ ಕಮಾಂಡೆಂಟ್ ಆಗಿ ಕಳಿಸುವಂತೆ ನನ್ನ ಮೇಲಧಿಕಾರಿಗಳಿಗೆ ವಿನಂತಿಸಿತು. ಅಂತೆಯೇ ನಾನು ಮತ್ತೆ ನನ್ನ ಇಷ್ಟದ ಕೇತ್ರಕ್ಕೆ ವರ್ಗಾವಣೆಗೊಂಡೆ. ಈ ಕೇಂದ್ರ ಉತ್ತರ ಪ್ರದೇಶದ ಖಾನ್ ಪುರದಿಂದ ನೂರು ಕಿಲೋಮೀಟರ್ ಅಷ್ಟು ದೂರದ ಗಂಗಾ ತಟದ ಫತೇಗರ್‍ನಲ್ಲಿತ್ತು. ಅಂತೂ ನನ್ನ ಡೆಹ್ರಾಡೂನ್‍ನ ನನಗಿಷ್ಟಿಲ್ಲದ ಐಷಾರಾಮಿ ವ್ಯವಸ್ಥೆಗಳಿಂದ ದೂರಾಗಿ ಫತೇಗರ್ ಸೇರಿದೆ.

ಬ್ರಿಟಿಷ್‍ರ ಆಳ್ವಿಕೆಯ ಕಾಲದಲ್ಲಿ ಇದೇ ಫತೇಗರ್ ಕರ್ನಲ್ ಆಡಳಿತದ ಅನೇಕ ನೆನಪುಗಳನ್ನು ಹೊಂದಿದೆ. ದೇಶದ ಪ್ರಪ್ರಥಮ ಸ್ವಾತಂತ್ರ್ಯ ಸಂಗ್ರಾಮ, ಸಿಪಾಯಿ ದಂಗೆಯ ವೇಳೆ, ಬ್ರಿಟಿಷ್ ಸೈನ್ಯ ಇದೇ ಸ್ಥಳದಲ್ಲಿ ನಮ್ಮ ಅನೇಕ ಸೈನಿಕರು ಮತ್ತು ಕುಟುಂಬಗಳನ್ನು ಹತ್ಯೆ ಮಾಡಿತ್ತು. ಇಡೀ ರಕ್ಷಣಾ ವ್ಯವಸ್ಥೆಯನ್ನು ಇಲ್ಲಿಂದಲೇ ನಿಯಂತ್ರಿಸಲಾಗುತ್ತಿತ್ತು. ಪಂಜಾಬ್‍ನ ದೊರೆಯಾಗಿದ್ದ ಮಹಾರಾಜಾ ದಿಲೀಪ್ ಸಿಂಗ್ ಮತ್ತು ಆತನ ಕುಟುಂಬವನ್ನು ಈಗ ಮೆಸ್‌ ಆಗಿ ಬಳಸುತ್ತಿದ್ದ ಇದೇ ಕಟ್ಟಡದಲ್ಲಿ ಅಂದು ಸೆರೆಯಾಳಾಗಿ ಇಡಲಾಗಿತ್ತು.

ಈ ಸಂದರ್ಭದಲ್ಲಿ ಅವನಿಂದ ಅತ್ಯಂತ ಪ್ರಸಿದ್ಧವಾಗಿದ್ದ ಕೊಹಿನೂರ್ ವಜ್ರವನ್ನೂ ತೆಗೆದುಕೊಂಡು ಬ್ರಿಟನ್‍ಗೆ ಕಳಿಸಲಾಯ್ತು ಎಂದೂ ಇತಿಹಾಸ ಹೇಳುತ್ತದೆ. ದಿಲೀಪ್ ಸಿಂಗ್‍ನ ಇಬ್ಬರು ಮಕ್ಕಳನ್ನು ಬ್ರಿಟನ್‍ಗೆ ಕೊಂಡೊಯ್ದು, ಅಲ್ಲಿ ಅವರನ್ನು ಬಾಪ್ಟಿಸಂಗೆ ಪರಿವರ್ತಿಸಲಾಯ್ತು!. ಗಂಗಾ ನದಿಯ ಮೂಲಕ ಇಲ್ಲಿಗೆ ಬರುವ ಹಡಗುಗಳ ಮೂಲಕ, ಕೋಲ್ಕತಾಗೆ ಸಾಮಾನು ಸರಂಜಾಮುಗಳನ್ನು ಸಾಗಿಸಲಾಗುತ್ತಿತ್ತು. ಅಂತಹ ಅನೇಕ ಕಾರಣಗಳಿಂದ ಇತಿಹಾಸದಲ್ಲಿ ವಿಶೇಷವಾಗಿ ದಾಖಲಾಗಿರುವ ಫತೇಗರ್ ಈಗ ದೇಶದಲ್ಲಿ ಅತೀ ಹೆಚ್ಚು ಬಟಾಟೆಗಳನ್ನು ಬೆಳೆಯುವ ಪ್ರದೇಶವಾಗಿದೆ. ಇದರೊಂದಿಗೆ ಫತೇಗರ್ ‘ಝರ್ದೋಗಿ’ (ಅಂದರೆ ಕೈಯಿಂದ ಎಂಬ್ರಾಯ್ಡರಿ ಮೂಲಕ ತಯಾರಿಸುವ ಝರಿ ಕೆಲಸ) ಗೂ ಪ್ರಸಿದ್ಧವಾಗಿದೆ.

ನೂರಾರು ಎಕರೆ ಪ್ರದೇಶದಲ್ಲಿದ್ದ ಬ್ರಿಟಿಷ್ ಕಾಲದ ಬ್ಯಾರಕ್‍ಗಳನ್ನು ನಮ್ಮ ಸೇನೆ 1970ರಲ್ಲಿ ಸುಪರ್ದಿಗೆ ತೆಗೆದುಕೊಂಡು ಅಲ್ಲಿ ಸೇನಾ ನೆಲೆಯನ್ನು ಆರಂಭಿಸಿತು. ನಾನು ಇಲ್ಲಿ ಕಮಾಂಡೆಂಟ್ ಆಗಿ ಅಧಿಕಾರ ವಹಿಸಿಕೊಂಡಾಗ, ಒಟ್ಟೂ ರಾಷ್ಟ್ರೀಯ ರೈಫಲ್‍ಗಳೂ ಸೇರಿ 23ಬೆಟಾಲಿಯನ್ ಗಳಿದ್ದುವು. ನನಗಿದ್ದ ಮುಖ್ಯವಾದ ಜವಾಬ್ದಾರಿಗಳೆಂದರೆ ಸೈನಿಕರ ವಿವಿಧ ಹಂತದ ಜವಾಬ್ದಾರಿಗಳ ನಿರ್ವಹಣೆ, ನೇಮಕಾತಿ, ಹೊಸ ನೇಮಕವಾದವರನ್ನು ತರಬೇತಿಗೊಳಿಸಿ ಅವರನ್ನು ಅಗತ್ಯವಿರುವ ಬೆಟಾಲಿಯನ್‍ಗಳಿಗೆ ಕಳಿಸುವುದು ಹೀಗೆ.

ನಾನು ನಿಜಕ್ಕೂ ಈ ಎಲ್ಲಾ ಜವಾಬ್ದಾರಿಯನ್ನು ಅತ್ಯಂತ ಸಂತಸ, ಸಮಾಧಾನದಿಂದ ನಿರ್ವಹಿಸುತ್ತಿದ್ದೆ. ಓರ್ವ ಕಮಾಂಡೆಂಟ್ ಅಂದರೆ ಕುಟುಂಬವೊಂದರ ಯಜಮಾನನಂತೇ. ಆತ ಸದಾ ಕಾಲ ಅತ್ಯಂತ ಮೃಧು- ಮಾನವೀಯ ಸ್ವಭಾವದೊಂದಿಗೆ ಅತೀ ಕಷ್ಟದ ಟಾಸ್ಕ್ ಒದಗಿಸುತ್ತಿರಬೇಕು. ಸ್ವತಃ ಎಲ್ಲಾ ಸೇನಾ ನಿಯಮಗಳನ್ನು ಅನುಸರಿಸಿ ಮಾದರಿಯಾಗಿರುತ್ತಾ, ವಿಶಾಲ ಹೃದಯಿಯಾಗಿದ್ದುಕೊಂಡು, ದಕ್ಷ, ಸಮರ್ಥ ಯೋಜನೆಯನ್ನು ರೂಪಿಸುವ ನಾಯಕತ್ವ ಹೊಂದಿರಬೇಕು. ಹೊಸ ಸೈನಿಕರಲ್ಲಿ ಅತ್ಯುತ್ಕೃಷ್ಟ ಸೇನಾನಿಯನ್ನು ಬೆಳೆಸಬೇಕಿತ್ತು ಮತ್ತು ಇಡೀ ರೆಜಿಮೆಂಟ್‍ನ ಆರ್ಥಿಕ ವ್ಯವಸ್ಥೆಯನ್ನೂ ಅತ್ಯಂತ ಸಮರ್ಥವಾಗಿ ನಿಭಾಯಿಸಬೇಕಿತ್ತು. ಇದೆಲ್ಲವನ್ನೂ ನಾನು ಸಮರ್ಥವಾಗಿ ನಿಭಾಯಿಸಿದೆ ಹೆಮ್ಮೆ ಇಂದಿಗೂ ನನ್ನದು. ಅಂತೂ ದೇವರು ನಾನು ಸೈನಿಕರ ಜೊತೆಗೇ ಇರುವಾಗಲೇ ನನ್ನ ನಿವೃತ್ತಿಯಾಗಬೇಕೆಂಬ ಬಯಕೆಯನ್ನು ಕೇಳಿ, ನನಗೆ ಆ ಅವಕಾಶ ಒದಗಿಸಿದ ಎಂದೇ ಅಂದುಕೊಂಡೆ.

ಇಲ್ಲಿಯೂ ನನ್ನ ವಾಸಸ್ಥಾನ ನವಾಬರು ಉಪಯೋಗಿಸುತ್ತಿದ್ದ ಅತ್ಯಂತ ಹಳೆಯದಾದ ದೊಡ್ಡ ಬಂಗಲೆ. ಸುಮಾರು 8 ಎಕರೆಗಳಷ್ಟು ಜಾಗದಲ್ಲಿ ಹರಡಿಕೊಂಡಿದ್ದ ಅತ್ಯಂತ ಹಚ್ಚ ಹಸಿರಿನ ಪ್ರದೇಶ ಅದು. ರೆಜಿಮೆಂಟಲ್ ಧ್ವಜದೊಂದಿಗೆ ಸೆರೆಮೋನಿಯಲ್ ಗಾರ್ಡ್!. ಇದು ನನ್ನ 33ನೇ ವರ್ಷದ ಸೇನಾ ಜೀವನ. ಒಂದು ರೀತಿಯಲ್ಲಿ ನನ್ನ ಇಷ್ಟದ ಸೈನಿಕರೊಂದಿಗೆ ನಾನಿಲ್ಲಿ 7 ಸ್ಟಾರ್ ಜೀವನ ನಡೆಸುತ್ತಿದ್ದೆ. ನನ್ನ ಪತ್ನಿಯೂ ಅಲ್ಲಿ ಹೂದೋಟದಲ್ಲಿ ತನ್ನ ಸಮಯ ಕಳೆಯುತ್ತಾ ಸುಮಾರು 82ರೀತಿಯ ವಿವಿಧ ಹೂಗಿಡಗಳನ್ನು ಬೆಳೆಸುತ್ತಾ, ನೋಡಿಕೊಳ್ಳುತ್ತಿದ್ದರೆ, ನಮ್ಮ ಬಂಗಲೆಯ ವರಾಂಡಾದಲ್ಲಿ ನವಿಲುಗಳೂ ಬರುತ್ತಿದ್ದುವು. ಅತ್ಯಂತ ಸುಂದರ ಪ್ರದೇಶವಾಗಿತ್ತದು.

ಆಗಲೇ ನಾನು ನನ್ನ 56ನೆಯ ವಯಸ್ಸನ್ನು ಸಮೀಪಿಸುತ್ತಿದ್ದೆ. ಸಾಮಾನ್ಯವಾಗಿ ಕರ್ನಲ್‍ಗಳಿಗೆ 54, ಬ್ರಿಗೇಡಿಯರ್‍ಗಳಿಗೆ 56 ಮತ್ತು ಜನರಲ್ ಮೇಜರ್‍ಗಳಿಗೆ 58, ನಿವೃತ್ತಿಯ ವಯಸ್ಸು. ನನಗೀಗಲೇ 56ರ ಸಮೀಪ. ಹಾಗಾಗಿ ಮುಂದಿನ ಯಾವುದೇ ಪದೋನ್ನತಿಗೆ ಸೇನಾ ನಿಯಮದ ಪ್ರಕಾರ ನನಗೆ ಅವಕಾಶವಿರಲಿಲ್ಲ. ನನಗೆ ನನ್ನೊಳಗೇ ಒಂದು ರೀತಿಯು ತಳಮಳ, ಮನೋ ವೇದನೆ. ಇಷ್ಟೂ ವರ್ಷಗಳ ಈ ಸುಂದರ ಜೀವನಕ್ಕೆ ವಿದಾಯ ಹೇಳಲೇ ಬೇಕಾದ ಅನಿವಾರ್ಯತೆ. ಈ ನೋವು ನಾವು ನಮ್ಮ ಅತ್ಯಂತ ಇಷ್ಟದ ಕುಟುಂಬವನ್ನೂ ಬಿಟ್ಟು ಹೋಗಬೇಕಾಗಿ ಬಂದರೆ ಆಗುವ ನೋವಿಗಿಂತಲೂ ಒಂದು ಪಟ್ಟು ಹೆಚ್ಚು. ಅಂತಹ ಮಾನಸಿಕ ವೇದನೆ ನನ್ನೊಳಗೆ ಮಡುಗಟ್ಟುತ್ತಿತ್ತು. ಇದೊಂದು ಅತೀ ನೋವಿನ ವಿದಾಯ ಸಂದರ್ಭ. ಇನ್ನೆಂದೂ ನಾನೀ ವಾತಾವರಣದಲ್ಲಿ ನನ್ನ ನೋವು, ನಲಿವುಗಳನ್ನು ಹಂಚಿಕೊಳ್ಳಲಾರೆ!. ಇನ್ನೆಂದೂ ಒಂದೇ ಕುಟುಂಬದಂತೆ ಇಷ್ಟು ದೊಡ್ಡ ಸದಸ್ಯರನ್ನು ಹೊಂದಲಾರೆ. ಇನ್ನೆಂದೂ ನಾವೆಲ್ಲರೂ ಒಟ್ಟಾಗಿ ನಗಲಾರೆವು, ಅಳಲಾರೆವು. ಹೌದು, ಇನ್ನೆಂದೂ ಈ ರೀತಿಯ ರಕ್ಷಣಾತ್ಮಕ ಭಾವದ ಬದುಕು ಸಿಗದು-ನಾನೂ ನಿವೃತ್ತನಾಗಲೇ ಬೇಕು.

ನಾನೀಗ ಆ ಅನಿವಾರ್ಯ ಸಂದರ್ಭಕ್ಕೆ ಒಗ್ಗಿಕೊಳ್ಳೇ ಬೇಕಿತ್ತು-ನನ್ನನ್ನು ನಾನು ಅಣಿಗೊಳಿಸಿಕೊಂಡೆ.

ನಿರೂಪಣೆ: ಅರೆಹೊಳೆ ಸದಾಶಿವ ರಾವ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.