ADVERTISEMENT

ಆಕರ್ಷಕ ಕುಷನ್ ಕವರ್‌ಗಳು...

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2012, 19:30 IST
Last Updated 20 ಮಾರ್ಚ್ 2012, 19:30 IST

ನಿಮ್ಮ ಮನೆಯ ಒಳಾಂಗಣ ವಿನ್ಯಾಸಕ್ಕೆ ಹೊಸ ರೂಪ ಕೊಡಲು ಅದೆಷ್ಟು ಸಮಯ ಮತ್ತು ಹಣ ಬೇಕು? ನಿಮ್ಮ ಕುಶನ್ ಕವರ್‌ಗಳನ್ನು ಬದಲಾಯಿಸಲು ಬಳಸುವ ಸಮಯಕ್ಕಿಂತ ಹೆಚ್ಚೇನೂ ಬೇಡ.

ಮನೆಯ ಒಳಾಂಗಣ ವಿನ್ಯಾಸ ಬದಲಾಯಿಸಲು ನೀವೇನು ಮಾಡಬೇಕೆಂದರೆ ಹೊಸ ಕುಶನ್ ಕವರ್‌ಗಳನ್ನು ಖರೀದಿಸಿ ಅವುಗಳನ್ನು ಅವುಗಳಿಗೆಂದೇ ಮೀಸಲಾದ ಜಾಗದಲ್ಲಿಡಿ. ಇದೋ ಹಬ್ಬಗಳ ಸಾಲೇ ಬರಲಿದೆ. ಕುಶನ್ ಕವರ್‌ಗಳ ಬದಲಾವಣೆಯು ಹಬ್ಬಗಳ ಸಂದರ್ಭದಲ್ಲಿ ಮನೆಗೆ ಹೊಸ ಅಂದ  ನೀಡುತ್ತದೆ.

ಮೊತ್ತಮೊದಲನೆಯದಾಗಿ ನೀವು ಕಣ್ಣು ಮುಚ್ಚಿಕೊಂಡು ಮನೆಗೆ ಎಂಥ ವಿನ್ಯಾಸ ಬೇಕು ಎಂದು ಯೋಚಿಸಿ. ಸಾಂಪ್ರದಾಯಿಕ ವಿನ್ಯಾಸ, ಸಮಕಾಲೀನ ಸ್ಟೈಲ್ ಅಥವಾ ಅತ್ಯಾಧುನಿಕ ಸ್ಟೈಲ್ ಇವುಗಳಲ್ಲಿ ಯಾವುದು ಬೇಕು ಎಂದು ಯೋಚಿಸಿ. ಕುಶನ್ ಕವರ್‌ಗಳಲ್ಲಂತೂ ಏಷ್ಯಾ, ಭಾರತ ಮತ್ತು ಮಧ್ಯಪೂರ್ವ ಸ್ಟೈಲ್‌ಗಳ ಕವರ್‌ಗಳು ಪ್ರಸಿದ್ಧವಾಗಿದ್ದು ವಿವಿಧ ಫ್ಯಾಷನ್‌ಗಳಲ್ಲಿ ಇವು ಮಾರುಕಟ್ಟೆಯಲ್ಲಿ ಲಭ್ಯ.

ಒಮ್ಮೆ ಸ್ಟೈಲ್ ನಿರ್ಧಾರಗೊಂಡ ಮೇಲೆ ಅದನ್ನು ಅಲಂಕರಿಸುವುದು ಬಹಳ ಸುಲಭವಾಗುತ್ತದೆ. ನಿಮಗಿಷ್ಟದ ಬಣ್ಣದ ಕವರ್‌ಗಳು ಬೇಕಿದ್ದಲ್ಲಿ ಅದು ಎಲ್ಲಿ ದೊರೆಯುತ್ತದೆ ಎಂದು ಹುಡುಕಾಟ ನಡೆಸಿ. ವಿವಿಧ ಅಂಗಡಿಗಳಿಗೆ ಭೇಟಿ ನೀಡಿ. ಬೇಕಿದ್ದಲ್ಲಿ ಮಿಕ್ಸ್ ಆ್ಯಂಡ್ ಮ್ಯಾಚ್ ಕಾಂಬಿನೇಶನ್ ನೋಡಿ.

ಕಡು ನೀಲಿ ಬಣ್ಣ ಮತ್ತು ತಿಳಿ ಗುಲಾಬಿ ಬಣ್ಣದ ಕುಶನ್ ಕವರ್‌ಗಳು ಮನೆಯ ಅಂದಕ್ಕೆ ಇನ್ನಷ್ಟು ಮೆರುಗು ನೀಡಿದವು ಎಂದು ಗೃಹಿಣಿಯೊಬ್ಬರು ಅಭಿಪ್ರಾಯಪಡುತ್ತಾರೆ. ಕುಶನ್ ಕವರ್‌ಗಳು ವಿವಿಧ ಬಣ್ಣಗಳಲ್ಲಿ ಲಭ್ಯವಿದ್ದು ವಿವಿಧ ಬೆಲೆಗಳನ್ನೂ ಹೊಂದಿವೆ.

ಮಲಗುವ ಕೊಠಡಿ, ಲಿವಿಂಗ್ ರೂಂ ಅಥವಾ ಕಚೇರಿಯೇ ಆಗಿರಲಿ ಸೂಕ್ತ ಕುಶನ್ ಕವರ್‌ಗಳ ಆಯ್ಕೆ ಚಾಣಾಕ್ಷದ ವಿಷಯ. ಮಾತ್ರವಲ್ಲ, ಕುಶನ್‌ಗಳ ಪ್ರಯೋಜನ ಏನು ಎನ್ನುವುದನ್ನೂ ಇದೇ ವೇಳೆ ಗಮನದಲ್ಲಿಡಬೇಕಾದ್ದು ಅತ್ಯಗತ್ಯ. ಎಲ್ಲಕ್ಕಿಂತ ಮುಖ್ಯವಾಗಿ ಕುಶನ್ ಕವರ್‌ಗಳು ಕೋಣೆಯ ವಿನ್ಯಾಸಕ್ಕೆ ಪೂರಕವಾಗಿರಬೇಕು.

ಟ್ಯಾಸಲ್‌ಗಳನ್ನು ಹೊಂದಿರುವ ಸಿಲ್ಕ್ ಕವರ್‌ಗಳು ಕಚೇರಿ ವಾತಾವರಣಕ್ಕೆ ಹೊಂದಿಕೆಯಾಗದು. ಬದಲಾಗಿ ಮಲಗುವ ಕೋಣೆಗೆ ಇವು ಹೆಚ್ಚು ಸೂಕ್ತ. ಸಾಧಾರಣವಾಗಿ ಕುಶನ್ ಕವರ್‌ಗಳು ಕಾಟನ್ ಮತ್ತು ಪಾಲಿಯೆಸ್ಟರ್ ಮೆಟೀರಿಯಲ್‌ಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಕೈಗೆಟಕುವ ದರದಲ್ಲಿ ದೊರೆಯುತ್ತದೆ.

ಇದೇ ವೇಳೆ ಸಿಲ್ಕ್ ಮತ್ತು ಚರ್ಮದ ಕವರ್‌ಗಳು ಹೆಚ್ಚು ಬೆಲೆ ಹೊಂದಿರುತ್ತವೆ. ಕುಶನ್ ಕವರ್ ಖರೀದಿಗೆ ಮುನ್ನ ಅವುಗಳನ್ನು ಯಾವ ಕೋಣೆಯಲ್ಲಿ ಇಡುವುದು ಎನ್ನುವುದನ್ನು ತಿಳಿದುಕೊಳ್ಳಿ. ಒಂದು ವೇಳೆ ಮಕ್ಕಳ ಆಟದ ಕೊಠಡಿಗೆ ಕುಶನ್ ಕವರ್‌ಗಳನ್ನು ಬಳಸುವುದಾದಲ್ಲಿ ಅತ್ಯಂತ ಕಡಿಮೆ ಬೆಲೆಯದ್ದನ್ನು ಬಳಸಿ.

ಓದುವ ಕೋಣೆ ಅಥವಾ ಸಿಟ್ಟಿಂಗ್ ರೂಂಗೆ ಬೆಲೆಬಾಳುವ ಕವರ್‌ಗಳನ್ನು ಬಳಸಿ. ಮಕ್ಕಳ ಕೋಣೆಗಳು ಗಾಢ ಬಣ್ಣದ ಕುಶನ್‌ಗಳಿಂದ ತುಂಬಿದ್ದರೆ ಅದರ ಅಂದ ಇನ್ನೂ ಹೆಚ್ಚಾಗುತ್ತದೆ. `ಇಂಥ ಗಾಢ ಬಣ್ಣಗಳ ಕುಶನ್‌ಗಳಿಂದ ಕೋಣೆ ಕೂಡ ಪ್ರಕಾಶಮಾನವಾಗಿ ಕಾಣುತ್ತದೆಯಲ್ಲದೆ ನಮ್ಮ ಮಕ್ಕಳು ಕುಶನ್‌ಗಳನ್ನು ಹಿಡಿದೇ ಈಗ ಜಗಳವಾಡುತ್ತಾರೆ~ ಎನ್ನುತ್ತಾರೆ ದೆಹಲಿಯ ಆಶಾ ಕುಮಾರ್.

ಕವರ್‌ಗಳ ಮೇಲಿನ ಕಲೆಗಳು
ಇನ್ನು ಕುಶನ್ ಕವರ್‌ಗಳ ಮೇಲೆ ಕಲೆಗಳಾದಲ್ಲಿ  ಚಿಂತಿಸುವ ಅಗತ್ಯ ಬೇಡ. ಕವರ್‌ಗಳನ್ನು ಸುಲಭದಲ್ಲಿ ಒಗೆಯಬಹುದಾದ್ದರಿಂದ ಇಂಥ ವಿಷಯಗಳ ಕುರಿತು ಚಿಂತೆ ಬೇಡ. ಆದರೆ, ಕವರ್‌ಗಳಿಂದ ಬಣ್ಣ ಇಳಿಯುವ ಸಾಧ್ಯತೆ ಇರುವುದರಿಂದ ಅವುಗಳನ್ನು ಪ್ರತ್ಯೇಕವಾಗಿಯೇ ಒಗೆಯಿರಿ. ಲಿಕ್ವಿಡ್ ಕ್ಲೆನ್ಸರ್ ಬಳಸಿ ಅವುಗಳನ್ನು ಒಗೆಯುವುದು ಉತ್ತಮ.  

ಅತ್ಯಂತ ಸೂಕ್ಷ್ಮ ದಾರಗಳನ್ನು ಬಳಸಿ ತಯಾರಿಸಲಾದ ಕವರ್‌ಗಳು ಹಾಗೂ ಎಂಬ್ರಾಯಿಡರಿ ಹಾಗೂ ಫ್ರಿಲ್‌ಗಳಿರುವ ಕವರ್‌ಗಳನ್ನು ಡ್ರೈಕ್ಲೀನ್‌ಗೆ ಕೊಡಿ. ಕವರ್‌ಗಳನ್ನು ಒಗೆದ ಬಳಿಕ ಬಿಸಿಲಿನಲ್ಲಿ ಒಣಗಿಸುವುದು ಒಳ್ಳೆಯದು. ಇದರಿಂದ ಅದರಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಜೊತೆಗೆ ಕುಶನ್‌ಗಳ ಬಾಳಿಕೆಯೂ ಹೆಚ್ಚು ಬರುತ್ತದೆ.

ನೀವೇ ಮಾಡಿ
ನಿಮ್ಮ ಮನೆಯಲ್ಲಿ ಬಳಸದೇ ಮೂಲೆಗೆ ಸೇರಿಸಿರುವ ಸೀರೆ ಮತ್ತು ಸ್ಕರ್ಟ್‌ಗಳಿದ್ದರೆ ಅವುಗಳಿಂದ ಮಿಕ್ಸ್ ಆ್ಯಂಡ್ ಮ್ಯಾಚ್ ಮಾಡಿ ಕುಶನ್ ಕವರ್‌ಗಳನ್ನು ಹೊಲಿದುಕೊಳ್ಳಿ. ಮಲಗುವ ಕೊಠಡಿ ಮತ್ತು ಲಿವಿಂಗ್ ರೂಂಗಳಿಗೆ ಸಿಲ್ಕ್ ಕವರ್‌ಗಳು ಚೆನ್ನಾಗಿ ಹೊಂದಿಕೊಳ್ಳುತ್ತವೆ. ಇವಕ್ಕೆ ಸ್ವಲ್ಪ ಹೊಸ ಆಲೋಚನೆಗಳು ಇರಬೇಕಷ್ಟೆ.  ಅಂಗಡಿಗೆ ಹೋಗಿ ನಿಮಗಿಷ್ಟದ ಬಟ್ಟೆಗಳನ್ನು ಖರೀದಿಸಿ ಅವುಗಳಿಂದ ಕವರ್‌ಗಳನ್ನು ಹೊಲಿಸಿಕೊಳ್ಳಿ.

ಕವರ್‌ಗಳ ನಿರ್ವಹಣೆ
ಮಲಗುವ ಕೋಣೆ, ಓದುವ ಕೊಠಡಿ, ಆಟದ ಕೊಠಡಿ ಮತ್ತು  ಡೈನಿಂಗ್ ಕೋಣೆಗಳಲ್ಲಿ ಕುಶನ್‌ಗಳನ್ನು ಇರಿಸಬಹುದು. ಲಿಕ್ವಿಡ್ ಕ್ಲೆನ್ಸರ್‌ನಲ್ಲಿ ಅವುಗಳನ್ನು ಒಗೆಯುವುದರಿಂದ ಬಾಳಿಕೆ ಹೆಚ್ಚು.ವಿವಿಧ ಸಮಾರಂಭಗಳಿಗೆ ವಿವಿಧ ಬಣ್ಣದ ಕವರ್‌ಗಳನ್ನು ಬಳಸಿ. ವಿಶೇಷ ಸಮಾರಂಭಕ್ಕೆ ಬೆಲೆಬಾಳುವ ಕವರ್‌ಗಳನ್ನು ಬಳಸಿ. ಕಾಲಕ್ಕೆ ತಕ್ಕಂತೆ.

ಋತುವಿಗೆ ತಕ್ಕಂತೆ ಕುಶನ್ ಕವರ್‌ಗಳನ್ನು ಬದಲಾಯಿಸಿ. ಉತ್ತಮ ಕಾಟನ್ ಕವರ್‌ಗಳಿಗಾಗಿ ಫ್ಯಾಬ್ ಇಂಡಿಯಾಕ್ಕೆ ಭೇಟಿ ನೀಡಿ. ಅಥವಾ ಸಮಕಾಲೀನ ವಿನ್ಯಾಸ ಕವರ್‌ಗಳಿಗಾಗಿ ಲೈಫ್‌ಸ್ಟೈಲ್‌ಗೂ ಭೇಟಿ ನೀಡಬಹುದಾಗಿದೆ. ಲಿಟಲ್ ಇಂಡಿಯಾದಲ್ಲಿ ಭಾರತೀಯ ವಿನ್ಯಾಸದ ಕವರ್‌ಗಳು ದೊರಕುತ್ತವೆ. ಜೊತೆಗೆ ನೀವು ಪ್ರವಾಸಕ್ಕೆ ಹೋದಾಗಲೆಲ್ಲಾ ಅಲ್ಲಿನ ಸ್ಥಳಗಳಲ್ಲಿ ವಿವಿಧ ವಿನ್ಯಾಸದ ಕುಶನ್ ಕವರ್‌ಗಳಿಗಾಗಿ ಹುಡುಕಾಟ ನಡೆಸಿ.        

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.