ಈ ರಿಯಲ್ ಎಸ್ಟೇಟ್ ಲೋಕವೇ ಹೀಗೆ...! ಇಲ್ಲಿ ಯಾವಾಗ ಮಾರುಕಟ್ಟೆ ಬಿದ್ದು ಹೋಗುತ್ತೆ, ಯಾವಾಗ ಬೆಲೆ ಗಗನಮುಖಿಯಾಗುತ್ತದೆ ಎಂಬುದನ್ನು ಹೇಳೋದೆ ಕಷ್ಟ. ದಿನ ಕಳೆದಂತೆ ಬೆಲೆ ಹೆಚ್ಚಾಗುವುದು ಸಾಮಾನ್ಯ. ಆದರೆ ಒಮ್ಮೆಲೇ ಬೆಲೆ ಕುಸಿದರೆ ಅದನ್ನು ಸಹಿಸಿಕೊಳ್ಳುವುದು ಬಲುಕಷ್ಟ.
ಕಳೆದ ಮೂರು-ನಾಲ್ಕು ವರ್ಷಗಳಿಂದ ಜಾಗತಿಕ ಅರ್ಥ ವ್ಯವಸ್ಥೆಯಲ್ಲಿ ಆಗುತ್ತಿರುವ ಏರುಪೇರು ಹಲವು ಬದಲಾವಣೆಗೆ ಕಾರಣವಾಗಿದೆ. ಈ ಬದಲಾವಣೆ ನಕಾರಾತ್ಮಕ ಕಾರಣಗಳಿಂದ ಹೆಚ್ಚಿನ ಸುದ್ದಿಯಲ್ಲಿದೆ. ಹೆಚ್ಚಿನ ದೇಶಗಳ ಅರ್ಥ ವ್ಯವಸ್ಥೆ ಈಗ ತಲೆಕೆಳಗಾಗಿದೆ.
ಆರ್ಥಿಕ ಅಸ್ಥಿರತೆ, ರೂಪಾಯಿ ಮೌಲ್ಯ ಕುಸಿತ ಭಾರತದ ಅರ್ಥಿಕ ವ್ಯವಸ್ಥೆ ಮೇಲೂ ಪರಿಣಾಮ ಬೀರಿದೆ. ಅದರಲ್ಲೂ ರಿಯಲ್ ಎಸ್ಟೇಟ್ ಮಾರುಕಟ್ಟೆಗೆ ದೊಡ್ಡ ಪೆಟ್ಟು ನೀಡಿದೆ. ರಿಯಲ್ ಎಸ್ಟೇಟ್ ಮಾರುಕಟ್ಟೆಯ `ಹಬ್~ ಎನಿಸಿರುವ ಮುಂಬೈ, ಬೆಂಗಳೂರು, ನವದೆಹಲಿ, ಚೆನ್ನೈ, ಹೈದರಾಬಾದ್, ಕೋಲ್ಕತ್ತಗಳಲ್ಲಿ ಆಸ್ತಿಯ ಮೌಲ್ಯ ಕುಸಿದಿದೆ.
ಇದನ್ನೇ ನಂಬಿಕೊಂಡು ವಹಿವಾಟು ನಡೆಸುತ್ತಿದ್ದವರು ಅಪಾರ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಒಂದೊಮ್ಮೆ `ರಿಯಲ್ ಎಸ್ಟೇಟ್ ದೊರೆ~ ಎನಿಸಿಕೊಂಡಿದ್ದವರೀಗ `ಸಾಕಪ್ಪ ಸಾಕು~... ಎನ್ನುತ್ತಿದ್ದಾರೆ.
ಆದರೆ ಈಗ ಬಂದಿರುವ ಹೊಸ ಸುದ್ದಿ ಎಂದರೆ ಭಾರತದ ಪ್ರಮುಖ ನಗರಗಳಲ್ಲಿ `ಕಚೇರಿ ಸ್ಥಳ~ದ(ಆಫೀಸ್ ಸ್ಪೇಸ್) ಬೇಡಿಕೆಯುೂ ಕುಸಿದಿದೆ ಎನ್ನುವುದು. ಹೊಸದಾಗಿ ಕಚೇರಿಯನ್ನು ಬಾಡಿಗೆ ಅಥವಾ ಲೀಸ್‌ಗೆ ಪಡೆಯುತ್ತಿರುವ ಕಂಪೆನಿಗಳ ಸಂಖ್ಯೆ ತೀರಾ ಇಳಿಮುಖವಾಗಿದೆ. ಇದರ ಸ್ಪಷ್ಟ ಅರ್ಥ `ವಹಿವಾಟು ಕುಸಿಯುತ್ತಿದೆ~ ಎಂಬುದೇ ಆಗಿದೆ.
ಜತೆಗೆ ವಿದೇಶಿ ಬಂಡವಾಳ ಹೂಡಿಕೆಯಲ್ಲೂ ಹಿನ್ನಡೆ ಆಗಿದೆ. ಆರ್ಥಿಕ ಅಸ್ಥಿರತೆ ಹಾಗೂ ಜಾಗತಿಕ ಕಂಪೆನಿಗಳು ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಲು ಒಲವು ತೋರದೇ ಇರುವುದೂ ಈ ಋಣಾತ್ಮಕ ಬೆಳವಣಿಗೆಗೆ ಕಾರಣ.
ಉದಾಹರಣೆಗೆ 2011ರ ಅರ್ಧ ವಾರ್ಷಿಕಕ್ಕೆ ಹೋಲಿಸಿದರೆ ಈ ವರ್ಷದ ಮೊದಲ ಅರ್ಧ ವಾರ್ಷಿಕದ ಅವಧಿಯಲ್ಲಿ (ಜನವರಿ-ಜೂನ್) ಕಚೇರಿ ಸ್ಥಳದ ಬೇಡಿಕೆ ಶೇಕಡಾ 32ರಷ್ಟು ಕುಸಿದಿದೆ. ಬಹುರಾಷ್ಟ್ರೀಯ ಕಂಪೆನಿಗಳು ಈಗ ಇರುವ ತಮ್ಮ ಮಾರುಕಟ್ಟೆ ವ್ಯಾಪ್ತಿಯನ್ನು ಗಟ್ಟಿಗೊಳಿಸಲು ಮಾತ್ರ ಗಮನ ಕೊಡುತ್ತಿವೆ.
ಯಾವುದೇ ಹೊಸ ಯೋಜನೆಗಳಿಗೆ ಕೈಹಾಕುತ್ತಿಲ್ಲ. ಬದಲಾಗಿ ಖರ್ಚು ತಡೆಯುವ ತಂತ್ರಗಳಿಗೆ ಒತ್ತು ನೀಡುತ್ತಿವೆ. ಐಟಿ, ಬ್ಯಾಂಕಿಂಗ್, ಹಣಕಾಸು ಸಂಸ್ಥೆಗಳು, ಆಸ್ಪತ್ರೆ, ಕನ್ಸಲ್‌ಟೆಂಟ್, ಲಾಜಿಸ್ಟಿಕ್ಸ್ ಹಾಗೂ ವಿಮೆ ಕಂಪೆನಿಗಳು ಇದರಲ್ಲಿ ಪ್ರಮುಖವಾಗಿವೆ.
ಬೆಂಗಳೂರಿನಂತಹ ನಗರದಲ್ಲಿ ಈ ಹಿಂದೆ `ಐಟಿ-ಬಿಟಿ ಯುಗ~ ಶುರುವಾದಾಗ `ಕಚೇರಿ ಸ್ಥಳ~ಗಳಿಗೆ ಭಾರಿ ಬೇಡಿಕೆ ಇದ್ದಿತು. ಪ್ರಮುಖ ಸ್ಥಳಗಳಲ್ಲಿ ಕಚೇರಿ ಸ್ಥಳಾವಕಾಶದ ಬೆಲೆ ಗಗನವನ್ನೇ ಮುಟ್ಟಿತ್ತು. ಹಾಗಾಗಿಯೇ ಹೆಚ್ಚಿನವರು, ಕಚೇರಿ ಆರಂಭಿಸಲು ಅಗತ್ಯವಾದ ರೀತಿಯಲ್ಲಿಯೇ ಕಟ್ಟಡಗಳನ್ನು ನಿರ್ಮಿಸಿ ಬಾಡಿಗೆ, ಭೋಗ್ಯಕ್ಕೆ ಬಿಟ್ಟುಕೊಟ್ಟಿದ್ದರು(ಏಕೆಂದರೆ ಸಕಲ ಸೌಲಭ್ಯಗಳನ್ನುಳ್ಳ ಮನೆಯೊಂದನ್ನು ನಿರ್ಮಿಸುವುದಕ್ಕಿಂತ ಕಚೇರಿಗೆ ಅಗತ್ಯ ಸ್ಥಳಾವಕಾಶ ಮಾಡಿಕೊಡುವುದು ಕಡಿಮೆ ಖರ್ಚಿನದಾಗಿದ್ದಿತು).
ಕಚೇರಿಗಳಿಗೆ ಅಗತ್ಯ ಸ್ಥಳವನ್ನು ಬಾಡಿಗೆಗೆ ನೀಡುವುದರಿಂದ ಅಥವಾ ಹಲವು ವರ್ಷಗಳ ಲೆಕ್ಕದಲ್ಲಿ ಲೀಸ್‌ಗೆ ನೀಡುವುದರಿಂದ ಸಾಕಷ್ಟು ದೊಡ್ಡ ಮೊತ್ತದ ಸಂಪಾದನೆಯೂ ಇದ್ದಿತು. ಕಚೇರಿ ಸ್ಥಳಕ್ಕೆ ಬೇಡಿಕೆ ಹೆಚ್ಚಿದ್ದನ್ನು ಕಂಡು ರಾಜಧಾನಿಯ ಹಲವು ಬಡಾವಣೆಗಳಲ್ಲಿ ಮನೆಗಳನ್ನೇ ಕಚೇರಿಯಾಗಿ ಪರಿವರ್ತಿಸಿದ ಉದಾಹರಣೆಗಳೂ ಸಾಕಷ್ಟಿವೆ.
ದೊಡ್ಡ ದೊಡ್ಡ ಕಟ್ಟಡಗಳನ್ನು ಆಫೀಸ್‌ಗೆ ಯೋಗ್ಯವಾಗುವಂತೆ ಪರಿವರ್ತಿಸಿ ಕೊಟ್ಟಿದ್ದೂ ಇದೆ. ಅದೆಷ್ಟೊ ವಾಸಯೋಗ್ಯ ಮನೆಗಳಲ್ಲಿಯೇ ಬಿಪಿಒ ಕಂಪೆನಿಗಳು ಕಾರ್ಯಾರಂಭ ಮಾಡಿದ ಉದಾಹರಣೆಗಳೂ ಇವೆ.
ಆದರೆ ಇತ್ತೀಚಿನ ದಿನಗಳಲ್ಲಿ ಕಚೇರಿಗಳ ಸ್ಥಳಾವಕಾಶದ ಬೇಡಿಕೆ ಕುಸಿದಿದೆ. `ಇದಕ್ಕೆ ಮುಖ್ಯ ಕಾರಣ ಜಾಗತಿಕ ಅರ್ಥ ವ್ಯವಸ್ಥೆಯ ಕುಸಿತ. ಇದು ಚೇತರಿಸಿಕೊಳ್ಳುವ ಲಕ್ಷಣವೂ ಕಾಣಿಸುತ್ತಿಲ್ಲ. `ಯೂರೋ~ ವಲಯದ ರಾಷ್ಟ್ರಗಳಲ್ಲಿಯಂತೂ ಈ ಸಮಸ್ಯೆ ತೀವ್ರವಾಗಿದೆ.
ಹಾಗಾಗಿ ಬಹುರಾಷ್ಟ್ರೀಯ ಕಂಪೆನಿಗಳು ಸದ್ಯದ ತಮ್ಮ ಮಾರುಕಟ್ಟೆ ಸ್ಥಾನಮಾನವನ್ನು ಗಟ್ಟಿ ಮಾಡಿಕೊಳ್ಳುವ ಪ್ರಯತ್ನದಲ್ಲಿಯೇ ಮಗ್ನವಾಗಿವೆ. ಈ ಕಾರಣದಿಂದಾಗಿ ಅವುಗಳ ಚಟುವಟಿಕೆಗಳೂ ಕಡಿಮೆ ಆಗಿವೆ. ಪರಿಣಾಮ ತಮ್ಮ ಕಚೇರಿಗಳ ವಿಸ್ತರಣೆ ಯೋಜನೆಗಳಿಗೆ ಸದ್ಯ ಬ್ರೇಕ್ ಹಾಕಿವೆ~ ಎಂದು ವಿಶ್ಲೇಷಿಸಿದ್ದಾರೆ `ಸಿಬಿಆರ್‌ಇ~ ದಕ್ಷಿಣ ಏಷ್ಯಾ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅನ್ಷುಮನ್ ಮ್ಯಾಗ್ಜಿನ್.
ಜಾಗತಿಕ ರಿಯಲ್ ಎಸ್ಟೇಟ್ ಸಲಹೆಗಾರ ಸಂಸ್ಥೆ `ಡಿಟಿಜೆಡ್~ ಪ್ರಕಾರ, ಈ ವರ್ಷದ ಮೊದಲ ಆರು ತಿಂಗಳಲ್ಲಿ ಹೊಸದಾಗಿ 133 ಲಕ್ಷ ಚದರ ಅಡಿ ಕಚೇರಿ ಸ್ಥಳವನ್ನು ಮಾತ್ರವೇ ಬಳಸಿಕೊಳ್ಳಲಾಗಿದೆ. 2011ರ ಮೊದಲ ಅರ್ಧ ವಾರ್ಷಿಕ ಅವಧಿಯಲ್ಲಿ ಇದರ ಪ್ರಮಾಣ 197 ಲಕ್ಷ ಚದರ ಅಡಿ ಇದ್ದಿತು. ದೇಶದ ಉಳಿದ ಮಹಾ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿನ ಪರಿಸ್ಥಿತಿ ಪರವಾಗಿಲ್ಲ ಎನ್ನುವಂತಿದೆ.
ವೈಟ್‌ಫೀಲ್ಡ್ ಹಾಗೂ ಹೊರ ವರ್ತುಲ ರಸ್ತೆ ಪ್ರದೇಶಗಳಲ್ಲಿ ಕಚೇರಿಗಳನ್ನು ಆರಂಭಿಸಲು ಸೂಕ್ತ ಸ್ಥಳಕ್ಕೆ ಬೇಡಿಕೆ ಉತ್ತಮವಾಗಿಯೇ ಇದೆ. ಆದರೂ ಸಿಲಿಕಾನ್ ಸಿಟಿಗೆ, ಅದರಲ್ಲೂ `ಆಫೀಸ್ ಸ್ಪೇಸ್ ರಿಯಲ್ ಎಸ್ಟೇಟ್~ ವಹಿವಾಟಿಗೆ ಆರ್ಥಿಕ ಕುಸಿತದ ಬಿಸಿ ತಕ್ಕಮಟ್ಟಿಗೆ ತಟ್ಟಿರುವುದು ನಿಜ. ಹಾಗಾಗಿಯೇ ಬೆಂದಕಾಳೂರಿನ ಹಲವೆಡೆ ಹೆಚ್ಚಿನ ಕಚೇರಿಗಳು ಗ್ರಾಹಕರಿಲ್ಲದೆ ಈಗಲೂ ಖಾಲಿ ಬಿದ್ದಿವೆ.
`ಆರ್ಥಿಕ ಪರಿಸ್ಥಿತಿ ಹಾಗೂ ವಾಣಿಜ್ಯ ಉದ್ದೇಶಕ್ಕಾಗಿನ ಕಚೇರಿ ಸ್ಥಳದ ಬೇಡಿಕೆ ನಡುವೆ ನೇರವಾದ ಸಂಪರ್ಕವಿದೆ. ಆದರೆ ದೇಶೀಯ ಆರ್ಥಿಕ ವ್ಯವಸ್ಥೆ ಹಲವು ಸಮಸ್ಯೆಗಳಿಗೆ ಸಿಲುಕಿದೆ~ ಎನ್ನುತ್ತಾರೆ `ಡಿಟಿಜೆಡ್~ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನ್ಷು ಜೈನ್.
ಅಷ್ಟೇ ಅಲ್ಲ; ಮುಂದಿನ ಕೆಲ ತಿಂಗಳು ಕಚೇರಿ ಸ್ಥಳಕ್ಕೆ ಬೇಡಿಕೆ ಬರುವ ಸಾಧ್ಯತೆಯೂ ಕಡಿಮೆಯೆ ಎನ್ನಲಾಗುತ್ತಿದೆ.
`ಪ್ರಸಕ್ತ ಸಾಲಿನ ದ್ವಿತೀಯಾರ್ಧದಲ್ಲಿಯೂ ಈ ಪರಿಸ್ಥಿತಿಯಲ್ಲಿ ಯಾವುದೇ ಚೇತರಿಕೆಯಾಗುವ ಲಕ್ಷಣ ಕಾಣುತ್ತಿಲ್ಲ. 2011ರಲ್ಲಿ ತಕ್ಕಮಟ್ಟಿಗೆ ಚೇತರಿಕೆ ಆಗಿತ್ತು. ಆದರೆ ಈ ಬಾರಿ ಆ ಸಾಧ್ಯತೆ ಕಡಿಮೆ. ಅದು ಮತ್ತಷ್ಟು ಕಡಿಮೆಯಾದರೂ ಅಚ್ಚರಿ ಇಲ್ಲ~ ಎಂಬುದು ಜೋನ್ಸ್ ಲ್ಯಾಂಗ್ ಲಾಸೇಲ್ ರಿಸರ್ಚ್ ಮುಖ್ಯಸ್ಥ ಅಸುತೋಶ್ ಲಿಮಾಯೆ ಅವರ ಅಭಿಪ್ರಾಯ.
ಹಾಗಾಗಿ ತಮ್ಮ ವಹಿವಾಟು ವಿಸ್ತರಿಸಲು ಕೆಲ ಕಂಪೆನಿಗಳು ಹಿಂದೆ ಮುಂದೆ ನೋಡುತ್ತಿವೆ. ಹೊಸ ಉದ್ಯೋಗ ನೇಮಕಾತಿಯೂ ಕಡಿಮೆಯಾಗುತ್ತಿದೆ. ಈ ಕಾರಣ ಕಚೇರಿ ಬೇಡಿಕೆಯೂ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇದರಿಂದ ಆಫೀಸ್ ಸ್ಪೇಸ್ ರಿಯಲ್ ಎಸ್ಟೇಟ್ ಮಾರುಕಟ್ಟೆಗೆ ದೊಡ್ಡ ಹೊಡೆತ ಬಿದ್ದಿದೆ. ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಕಟ್ಟಿರುವ ಕಚೇರಿ ಕಟ್ಟಡಗಳು ಪಾಳು ಬೀಳುವಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.