ADVERTISEMENT

ಕಸ ಗುಡಿಸಿ, ನೆಲ ಒರೆಸುವ ರೋಬೊ

ಸುಬ್ರಹ್ಮಣ್ಯ ಎಚ್.ಎಂ
Published 14 ಡಿಸೆಂಬರ್ 2017, 19:30 IST
Last Updated 14 ಡಿಸೆಂಬರ್ 2017, 19:30 IST
ಕಸ ಗುಡಿಸಿ, ನೆಲ ಒರೆಸುವ ರೋಬೊ
ಕಸ ಗುಡಿಸಿ, ನೆಲ ಒರೆಸುವ ರೋಬೊ   

ಆಧುನಿಕ ಜಗತ್ತಿನಲ್ಲಿ ಯಂತ್ರಗಳ ಬಳಕೆ ಸಾಮಾನ್ಯ‌. ಅದರಲ್ಲೂ ನಾವು ಹೇಳಿದ್ದನ್ನು ಕೇಳುವ ಜಾಣಯಂತ್ರ ರೋಬೊಟ್‌ನ ಉಪಯೋಗ ಕಲ್ಪನೆಗೂ ಮೀರಿದ್ದು. ಈಗಾಗಲೇ ಕೈಗಾರಿಕೆ, ಆಟೊಮೊಬೈಲ್, ಲಾಜಿಸ್ಟಿಕ್, ಮಾಲ್, ಮಿಲಿಟರಿ, ವೈದ್ಯಕೀಯ ಮತ್ತಿತರರ ಕ್ಷೇತ್ರಗಳಲ್ಲಿ ರೋಬೊಗಳ ಬಳಕೆ ವ್ಯಾಪಕವಾಗಿದೆ.

ಮನೆಗೆ ನೆಂಟರು ಬಂದರೆ ಚಹಾ, ಕಾಫಿ ತಂದು ಅತಿಥಿ ಸತ್ಕಾರ ಮಾಡುವ, ಪಾತ್ರೆ ತೊಳೆಯುವ, ವೃದ್ಧರ ಆರೈಕೆ ಮಾಡುವ ರೋಬೊಗಳು ಈಗಾಗಲೇ ಮನೆಗಳಿಗೆ ದಾಂಗುಡಿ ಇಟ್ಟಿವೆ.

ಬೆಂಗಳೂರಿನ ನಗರ ಜೀವನದ ಒತ್ತಡದಲ್ಲಿ ಮನೆಗೆಲಸ ಮಾಡಲು ಪುರುಸೊತ್ತು ಸಿಗುವುದಿಲ್ಲ. ಮನೆಗೆಲಸದವರು ಯಾವಾಗ ಬೇಕಾದರೂ ಕೈಕೊಡಬಹುದು. ಕಂಪೆನಿಗಳು, ಕೈಗಾರಿಕೆಗಳು, ಆಸ್ಪತ್ರೆಗಳಲ್ಲಿ ವಿಪರೀತ ಎನಿಸುವಷ್ಟು ಸ್ವಚ್ಛಗೊಳಿಸುವ ಕೆಲಸ ಸಿಗುತ್ತದೆ. ಹಾಗಾಗಿ, ಮನೆಗಳಲ್ಲಿ ಕಸ ಗುಡಿಸಲು, ಒರೆಸಲು ಕೆಲಸದವರ ಕೊರತೆ ಇದ್ದು, ವಿಪರೀತ ಬೇಡಿಕೆ ಇದೆ.

ADVERTISEMENT

ಈಗ ಮಾರುಕಟ್ಟೆಗೆ ಬಂದಿರುವ ‘ಐ ರೊಬೋಟ್‌’ ಎನ್ನುವ ಕಸ ಗುಡಿಸುವ ಪುಟ್ಟ ಯಂತ್ರ ಸ್ವಯಂಚಾಲಿತವಾಗಿ ಮನೆ ಹಜಾರ, ನಡು‌ಮನೆ, ಅಡುಗೆಕೋಣೆ, ಮಲಗುವಕೋಣೆ, ವಿಶ್ರಾಂತಿಕೊಠಡಿ ಹೀಗೆ ಸಂಪೂರ್ಣವಾಗಿ ಮನೆಯ ಇಂಚೂಂಚು ಬಿಡದೆ ಸ್ವಚ್ಛಗೊಳಿಸುತ್ತದೆ.

ತನ್ನ ಕೆಲಸ ಮುಗಿದ ಬಳಿಕ, ತಾನಾಗಿಯೇ ಪವರ್ ಪಾಯಿಂಟ್‌ಗೆ ಹೋಗಿ ಜಾರ್ಚ್ ಆಗುತ್ತದೆ. ಮನೆ ಒರೆಸುವ ಯಂತ್ರ ಇದಕ್ಕಿಂತ ಕೊಂಚ ಭಿನ್ನ. ಮನೆ ಒರೆಸಲು ಅರ್ಥ ಬಕೆಟ್‌ ನೀರು ಬಳಸಿ ಸಂಪನ್ಮೂಲ ಹಾಳು ಮಾಡುತ್ತೇವೆ. ಆದರೆ, ಒಂದು ಲೋಟ ನೀರು ಬಳಸುವ ಈ ಯಂತ್ರ ಬಕೆಟ್ ನೀರು ಉಳಿಸುತ್ತದೆ ಎನ್ನುತ್ತಾರೆ ‘ಐ ರೊಬೋಟ್‌’ ಮಳಿಗೆ ಸಿಬ್ಬಂದಿ ಪ್ರಿಯಾ.

ಮನೆ ಒರೆಸುವ ರೋಬೊ ಸ್ವಯಂಚಾಲಿತವಾಗಿ ಏನನ್ನೂ ಮಾಡುವುದಿಲ್ಲ. ಇದಕ್ಕೆ ಮನುಷ್ಯನ ಸಹಾಯ ಬೇಕೇಬೇಕು. ಎಲ್ಲಿ ಅಗತ್ಯವಿರುತ್ತದೆಯೋ ಅಲ್ಲಿಗೆ ಒಯ್ದು ಚಾಲನೆ ನೀಡಿದರೆ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತದೆ. ಮಂಚ, ಸೋಫಾದ ಕೆಳಭಾಗಕ್ಕೂ ಚಲಿಸಿ ಒರೆಸಿ ಸ್ವಚ್ಛಗೊಳಿಸುವ ಸೆನ್ಸಾರ್‌ಗಳನ್ನು ಇದಕ್ಕೆ ಅಳವಡಿಸಲಾಗಿದೆ. ಇದು ಕಸಗುಡಿಸುವ ರೊಬೋಗಿಂತ ಗಾತ್ರದಲ್ಲಿ ಪುಟ್ಟದು.

ನಗರದ ಕ್ವೀನ್ಸ್‌ ರಸ್ತೆಯಲ್ಲಿರುವ ‘ಐ ರೊಬೋಟ್‌’ ಮಳಿಗೆಯಲ್ಲಿ ಮನೆಕೆಲಸ ಮಾಡಿಕೊಡುವ ಬಗೆಬಗೆ ರೋಬೊಗಳು ಲಭ್ಯ. ಮಾಹಿತಿಗೆ www.ibrobot.in ವೆಬ್‌ಸೈಟ್ ನೋಡಿ. ಬೆಲೆ ₹30 ಸಾವಿರದಿಂದ ಆರಂಭ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.