ಹಣೆಯ ಮೇಲಿನ ಕುಂಕುಮ ಹೇಗೆ ಹೆಣ್ಣಿನ ಸಹಜ ಸೌಂದರ್ಯವನ್ನು ಇಮ್ಮುಡಿಗೊಳಿಸುತ್ತದೆಯೋ ಹಾಗೆಯೇ ಕೈತೋಟ ಮನೆಯ ಹೊರಾಂಗಣಕ್ಕೆ ವಿಶೇಷ ಶೋಭೆ ತರುತ್ತದೆ.
ಹೀಗಾಗಿ ಮನೆಯ ಒಳಾಂಗಣಕ್ಕೆ ನೀಡುವಷ್ಟೇ ಕಾಳಜಿ, ಉತ್ಸಾಹ ಹೊರಾಂಗಣಕ್ಕೂ ನೀಡಿದರೆ ಮನೆಯ ಅಂದ ಹೆಚ್ಚುವುದಲ್ಲದೆ ಮನಸ್ಸಿಗೂ ಮುದ ನೀಡುತ್ತದೆ.
ಇತ್ತೀಚಿನ ದಿನಗಳಲ್ಲಿ ನಗರ ವಾಸಿಗಳು ಕೃತೋಟ ಅಥವಾ ಉದ್ಯಾನ ಬೆಳೆಸುವತ್ತ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಹೆಚ್ಚಿನವರು ಹವ್ಯಾಸಕ್ಕಾಗಿ ಕಣ್ಣಿಗೆ ಮುದ ನೀಡುವ ವಿವಿಧ ರೀತಿಯ ಹೂವಿನ ಗಿಡಗಳನ್ನು ಬೆಳೆಸಿದರೆ, ಮತ್ತೆ ಕೆಲವರು ರಾಸಾಯನಿಕ ಮುಕ್ತ ತರಕಾರಿ, ಹಣ್ಣುಗಳ ಬಳಕೆಯ ಉದ್ದೇಶದಿಂದ ಮನೆಯ ಸುತ್ತ ಕೈತೋಟ ಬೆಳೆಸುತ್ತಾರೆ.
ಈ ರೀತಿ ಕೈತೋಟ ಬೆಳೆಸುವವರಿಗೆ ಅದರ ಬೆಳವಣಿಗೆ ಪ್ರಕ್ರಿಯೆ, ನೀರುಣಿಸುವುದು, ರಕ್ಷಣೆ ಹೀಗೆ ಹತ್ತು ಹಲವು ವಿಷಯಗಳ ಮಾಹಿತಿ ಕೊರತೆ ಕಾಡುತ್ತದೆ. ಸಾಂಪ್ರದಾಯಿಕ ಪದ್ಧತಿ ಅನುಸರಿಸೋಣ ಎಂದರೆ ದಿನನಿತ್ಯದ ಕೆಲಸದ ಒತ್ತಡದ ಮಧ್ಯೆ ಸಮಯದ ಅಭಾವ.!
ಇಂತಹ ಸಮಸ್ಯೆಗಳನ್ನು ನಿವಾರಿಸಿ, ಉತ್ತಮ ಕೈತೋಟ ಬೆಳೆಸುವ ಬಗ್ಗೆ ಮಾಹಿತಿ, ಮಾರ್ಗದರ್ಶನ ನೀಡಲು ಹಲವು ಅಪ್ಲಿಕೇಷನ್ಸ್‌ಗಳಿವೆ.
ಈಗಂತೂ ಎಲ್ಲರ ಕೈಯಲ್ಲೂ ಸ್ಮಾರ್ಟ್‌ಫೋನ್ ಇದ್ದೇ ಇದೆ. ‘ಗೂಗಲ್ ಪ್ಲೇ’ ಪ್ರವೇಶಿಸಿದರೆ ಕೈತೋಟ ನಿರ್ಮಾಣಕ್ಕೆ ಸಂಬಂಧಿಸಿದ ಲೆಕ್ಕವಿಲ್ಲದಷ್ಟು ಉಚಿತ ಆಂಡ್ರಾಯ್ಡ್ ಆ್ಯಪ್‌ಗಳು ಕಾಣಿಸುತ್ತವೆ. ಅವುಗಳಲ್ಲಿ ನಾಲ್ಕು ಉಚಿತ ಆ್ಯಪ್‌ಗಳ ವಿವರ ಇಲ್ಲಿದೆ.
ಬಿಗಿನರ್ಸ್ ಗಾರ್ಡನಿಂಗ್ ಗೈಡ್
ಕೈತೋಟ ನಿರ್ಮಾಣದ ಬಗೆಗೆ ಕಿಂಚಿತ್ ಮಾಹಿತಿಯೂ ಇಲ್ಲದ, ಇದೇ ಮೊದಲ ಬಾರಿಗೆ ಕೈತೋಟ ನಿರ್ಮಾಣಕ್ಕೆ ಮುಂದಾದವರಿಗೆ ಈ ಆ್ಯಪ್ ಕೆಲವು ಉಪಯುಕ್ತ ಮಾಹಿತಿ, ಮಾರ್ಗದರ್ಶನ ನೀಡುತ್ತದೆ.
ಸಸ್ಯಗಳ ಗುರುತಿಸುವಿಕೆ, ಅದರ ಗುಣ ವಿಶೇಷ, ಪ್ರಾಯೋಗಿಕ ಹಂತಗಳ ಸಂಪೂರ್ಣ ಮಾಹಿತಿ ನೀಡುವ ಮೂಲಕ ಉತ್ತಮ ಕೈತೋಟ ನಿರ್ಮಾಣಕ್ಕೆ ಬೇಕಾದ ಎಲ್ಲಾ ತರಹದ ಮಾಹಿತಿ ಒದಗಿಸುತ್ತದೆ.
ವೆಬ್‌ಲಿಂಕ್ :https://play.google.com/store/apps/details?id=com.a615657083502b0a842fbaa9a.a45833205a
ವೆಜಿಟೇಬಲ್ ಗಾರ್ಡನ್
ತರಕಾರಿಗಳನ್ನು ಬೆಳೆಯಲು ಬೇಕಾದ ಮಾಹಿತಿಗಳನ್ನು ಈ ಆ್ಯಪ್ ನೀಡುತ್ತದೆ. 50ಕ್ಕೂ ಹೆಚ್ಚಿನ ವಿವಿಧ ತರಕಾರಿಗಳ ಬಗ್ಗೆ ಚಿತ್ರ ಸಹಿತ ಮಾಹಿತಿ, ಎಲ್ಲಾ ವಿಧದ ತರಕಾರಿಗಳ ವಿವರ, ನಮ್ಮ ನೆಚ್ಚಿನ ತರಕಾರಿಯನ್ನು ಸಂಗ್ರಹಿಸಿಡಲು ಪ್ರತ್ಯೇಕ ಫೇವರೇಟ್ ಸ್ಕ್ರೀನ್, ತರಕಾರಿಗಳ ಹುಡುಕಾಟದ ಆಯ್ಕೆಯೂ ಲಭ್ಯವಿದೆ.ಮಾಹಿತಿಗಳನ್ನು ಫೇಸ್‌ಬುಕ್, ಟ್ವಿಟರ್, ಇ–ಮೇಲ್‌ನಲ್ಲಿ ಹಂಚಿಕೊಳ್ಳಬಹುದು. ವೆಬ್ ಲಿಂಕ್ : https://play.google.com/store/apps/details?id=com.kineticlight.veggarden&hl=en
ಗಾರ್ಡನ್ ಮ್ಯಾನೇಜರ್
ಕೈತೋಟದ ನಿರ್ವಹಣೆಗೆ ಇದು ಹೆಚ್ಚು ಸೂಕ್ತವಾಗಿದೆ. ಕೈತೋಟದ ಬೆಳವಣಿಗೆಯನ್ನು ಪಡೆಯುವರ ಜತೆಗೆ ನೀರುಣಿಸುವುದು, ಔಷಧಿ ಸಿಂಪಡಿಸಿವ ಸಮಯದ ಬಗ್ಗೆ ಎಚ್ಚರಿಕೆ ಗಂಟೆ (alarm) ನೀಡುತ್ತದೆ. ಅಲ್ಲದೆ ನಮ್ಮ ಕೈತೋಟದ ಸಂಪೂರ್ಣ ಮಾಹಿತಿಯನ್ನು ಡೈರಿ ರೂಪದಲ್ಲಿ ಚಿತ್ರ ಸಹಿತವಾಗಿ ಸಿದ್ಧಪಡಿಸಿ ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು. ವೆಬ್ ಲಿಂಕ್ : https://play.google.com/store/apps/details?id=com.jee.green&hl=en
ಸಾವಯವ ಕೈತೋಟ
ವಿಷಕಾರಿ ಕೀಟನಾಶಕಗಳನ್ನು ಬಳಸದೇ ಹೇಗೆ ಸಾವಯವ ಕೈತೋಟ ನಿರ್ಮಾಣ ಮಾಡಬಹುದು ಎಂಬ ಬಗ್ಗೆ ಮಾಹಿತಿ ನೀಡುತ್ತದೆ. ಅಲ್ಲದೆ ಪ್ರತಿಕೂಲ ಹವಾಮಾನದಲ್ಲಿ ಕೈತೋಟದ ಬೆಳವಣಿಗೆಗೆ ಬೇಕಾದ ಕೆಲವು ಸಲಹೆಗಳೂ ಇಲ್ಲಿ ಲಭ್ಯವಿದೆ. ವೆಬ್ ಲಿಂಕ್ : https://play.google.com/store/search?q=Organic%20Gardening&c=apps
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.