ADVERTISEMENT

ಜಿರಲೆ ತರಲೆಗೆ ‘ಟ್ರ್ಯಾಪ್’

ಮಂಜುಳಾ ರಾಜ್
Published 24 ಡಿಸೆಂಬರ್ 2013, 19:30 IST
Last Updated 24 ಡಿಸೆಂಬರ್ 2013, 19:30 IST

ಮನೆ ಎಂದ ಮೇಲೆ ಅತಿಥಿಗಳಂತೂ ಬರುತ್ತಾರೆ. ಅನೇಕ ಬಾರಿ ಬೇಡದ ಅತಿಥಿಗಳೂ ಮನೆಗೆ ನುಗ್ಗಿ ಅಡುಗೆಕೋಣೆಯಿಂದ ಹಿಡಿದು ಸ್ನಾನದ ಮನೆ, ಹಜಾರ, ಮಲಗುವ ಕೋಣೆಗಳನ್ನೆಲ್ಲಾ ಆಕ್ರಮಿಸಿಕೊಂಡು ಬಿಡುತ್ತಾರೆ.
ನಿಮ್ಮ ಊಹೆ ಸರಿ, ಅದುವೇ ಜಿರಳೆ. ಮನೆಯನ್ನು ಎಷ್ಟು ಸ್ವಚ್ಚವಾಗಿಟ್ಟು ಕೊಂಡರೂ ಜಿರಳೆ ದೂರ ಇರಿಸುವುದು ಎಲ್ಲ ಗೃಹಿಣಿಯರಿಗೂ ಸವಾಲೆ ಸರಿ. ಮನೆ ಕಟ್ಟುವ ಹಂತದಲ್ಲೇ ಸ್ವಲ್ಪ ನಿಗಾ ವಹಿಸಿದರೆ ಹೊರಗಿನಿಂದ ಬರುವ ಜಿರಳೆಗಳನ್ನು ಸ್ವಲ್ಪ ಮಟ್ಟಿಗಾದರೂ ತಡೆಯಬಹುದೇನೋ..

ಜಿರಲೆ ಎಲ್ಲಿಂದ ಬರುತ್ತವೆ ಎಂದು ಕಂಡು ಕೊಂಡರೆ ಅವು ಮನೆಯೊಳಕ್ಕೆ ಪ್ರವೇಶಿಸುವುದನ್ನು ತಡೆಯಬಹುದು. ಹುಳು ಹುಪ್ಪಟೆ ಸುಲಭವಾಗಿ ಮನೆಯೊಳಕ್ಕೆ ನುಗ್ಗುವುದು ಡ್ರೈನೇಜ್ ಪೈಪ್‌ ಮೂಲಕ. ತ್ಯಾಜ್ಯದ ನೀರು ಹೊರ ಹೋಗುವ ಕೊಳವೆ ಮೂಲಕವೇ ಇವು ಮನೆ ಪ್ರವೇಶಿಸುತ್ತವೆ. ಹಾಗಾಗಿಯೇ ಇವುಗಳ ವಾಸ ಸ್ನಾನದ ಮನೆ, ಅಡುಗೆ ಕೋಣೆಗಳಲ್ಲೇ ಹೆಚ್ಚು.

ಬೆಂಗಳೂರಿನ ವಿಜ್ಞಾನಿ ಶಿವಕುಮಾರ್ ಅವರು ತಮ್ಮ ಪರಿಸರ ಸ್ನೇಹಿ ಮನೆಯಲ್ಲಿ ಅಳವಡಿಸಿರುವ ರೀತಿಯಲ್ಲಿ ಮನೆಯ ಡ್ರೈನೇಜ್ ಕೊಳವೆ ಹೊರಗಿನಿಂದ ಒಳಭಾಗಕ್ಕೆ ಸಂಪರ್ಕ ಹೊಂದುವ ಸ್ಥಾನದಲ್ಲಿ ಆಂಗ್ಲ ಭಾಷೆಯ U ಆಕಾರ ಮೂಡಿಸಿದರೆ ಅಲ್ಲಿ ನೀರು ನಿಲ್ಲುತ್ತದೆ. ಹೊರಗಿನಿಂದ ಒಳ ಬರುವ ಹುಳುಹುಪ್ಪಟೆಗಳು ಕೊಳವೆಯೊಳಗಿನ ನೀರನ್ನು ಹಾದು ಒಳಬರಲು ಆಗುವುದಿಲ್ಲ ಎನ್ನುತ್ತಾರೆ ಅವರು.

ಮನೆ ಕಟ್ಟುವ ಹಂತದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗದಿದ್ದರೆ, ನಂತರವಾ ದರೂ ಭಿನ್ನ ರೀತಿಯ ಟ್ರ್ಯಾಪ್, ಜಾಲರಿಗಳನ್ನು(ಚಿತ್ರದಲ್ಲಿರುವ) ಅಳವಡಿಸಬಹುದು.

ಜಾಲರಿಗಳ ಕೆಳಗೆ ಒಂದು ಬಟ್ಟಲು(ಕಪ್) ಆಕಾರವನ್ನು ಮೂಡಿಸಿ ಅದರ ಮೇಲೆ ಜಾಲರಿ ಬಂದಾಗ ಅಲ್ಲಿ ನಿಂತ ನೀರನ್ನು ಹಾದು ಹೋಗಲಾರದೆ ಜಿರಳೆಗಳು ಬರುವು ದನ್ನು ತಡೆಯಬಹುದು. ಈಗ ಮಾರುಕಟ್ಟೆಯಲ್ಲಿ ಸಾಕಷ್ಟು ಕಾಕ್ರೋಚ್ ಟ್ರ್ಯಾಪ್ ಜಾಲರಿಗಳು ವಿಭಿನ್ನ ಆಕಾರದಲ್ಲಿ ಲಭ್ಯ, ಗುಂಡನೆಯದು, ಚೌಕಾಕಾರ ಮತ್ತು ತ್ರಿಕೋನಾಕಾರದಲ್ಲೂ ಸಿಗುತ್ತವೆ.

ಅಡುಗೆ ಮನೆಯ ಸಿಂಕ್‌ ಕಟ್ಟಿಕೊಳ್ಳುತ್ತಲೇ ಇರುತ್ತದೆ. ಆಗ ಸಪೂರವಾದ ಕಬ್ಬಿಣದ ತಂತಿ ಅಥವಾ ಕಡ್ಡಿಯನ್ನು ಕೊಳವೆಯೊಳಗೆ ತೂರಿಸಿ ಕಟ್ಟಿಕೊಂಡಿರುವ ವಸ್ತುವನ್ನು ತೆರವುಗೊಳಿಸುವುದು ಒಂದು ವಿಧ. ಕುದಿಯುವ ಬಿಸಿ ನೀರನ್ನು ಕೊಳವೆಗೆ ಹಾಕುವ ಮೂಲಕವೂ ಕಟ್ಟಿಕೊಂಡ ಕಸ ತೆರವುಗೊಂಡು ಸರಾಗವಾಗಿ ನೀರು ಹರಿಯುವಂತೆ ಮಾಡಬಹುದು. ಇಲ್ಲವೇ, ಡ್ರೈನೆಕ್ಸ್ ಅನ್ನೂ ಬಳಸಬಹುದು.

ವಿದೇಶಗಳಲ್ಲಿ ಅಡುಗೆ ಮನೆಯ ಸಿಂಕ್‌ನ ಕೆಳಭಾಗಕ್ಕೆ ಒಂದು ಮೋಟಾರ್ ಅಳವ ಡಿಸಿರುತ್ತಾರೆ. ಕೊಳವೆ ಕಟ್ಟಿಕೊಂಡರೆ ಮೋಟಾರ್‌ ಚಾಲೂ ಮಾಡಿ ಕಟ್ಟಿಕೊಂಡ ದ್ದೆಲ್ಲಾ ಪುಡಿ ಮಾಡಿ ನೀರಿನೊಡನೆ ಹರಿದು ಹೋಗುವಂತೆ ಮಾಡಲಾಗುತ್ತದೆ.
ಇದು ಸ್ವಲ್ಪ ಖರ್ಚಿನ ಬಾಬತ್ತೇ ಆದರೂ ಅಗತ್ಯವಿದ್ದವರು ಅಳವಡಿಸಿಕೊಳ್ಳಬ ಹುದು. ಈಗ ನಮ್ಮ ದೇಶದಲ್ಲೂ ಲಭ್ಯವಿದೆ. ವಿಶೇಷವಾಗಿ ಮಾಂಸಾಹಾರಿಗಳಿಗೆ ಇದು ಹೆಚ್ಚು ಉಪಯೋಗವಾಗುತ್ತದೆ.

ಸಣ್ಣ ಸಣ್ಣ ಮೂಳೆ ತುಂಡುಗಳು ಸಿಕ್ಕಿ ಹಾಕಿ ಕೊಂಡಾಗ ಅವುಗಳನ್ನು ನುಣ್ಣಗೆ ಪುಡಿ ಮಾಡಿ ನೀರಿನ ಜೊತೆ ಹಾಯಿಸಲು ಈ ಮೋಟಾರ್‌ಗಳು ಸಹಾಯಕ. ಜತೆಗೆ ಈಗ ಕಾಕ್ರೋಚ್ ಟ್ರ್ಯಾಪ್ ಗಳು ಸಹಾ ಹೆಚ್ಚಾಗಿ ಚಾಲ್ತಿಯಲ್ಲಿವೆ. ಬೆಲೆಯ ವಿಷಯದಲ್ಲಿ ಸಾಧಾರಣ ಟ್ರ್ಯಾಪ್‌ಗಳಿಗಿಂತ ತುಸು ಹೆಚ್ಚೇ ಇರುತ್ತದೆ ಎನ್ನುತ್ತಾರೆ ಮ್ಯಾಗಾನ್ ಹಳ್ಳಿ ಸೆರಾಮಿಕ್ಸ್‌ನ ಬಾಲಚಂದರ್.

ಕೆಲವು ವಿಷಯ ಕೇಳಲು, ಹೇಳಲು ಕ್ಷುಲ್ಲಕವೆನಿಸಿದರೂ ನಿತ್ಯದ ಜೀವನದಲ್ಲಿ ಅವು ಗಳ ಪ್ರಾಮುಖ್ಯತೆ ಬಹಳ. ಮಧ್ಯ ರಾತ್ರಿ ಎದ್ದು ಅಡುಗೆ ಮನೆಗೆ ಹೋದರೆ ಅಲ್ಲಿ ಓಡಾಡುವ ಜಿರಳೆಗಳನ್ನು ಕಂಡಾಗ ಮುಜುಗರವಾಗುವುದಂತೂ ಖಂಡಿತ. ಆದ್ದರಿಂದ ಮನೆ ಕಟ್ಟುವ ಹಂತದಲ್ಲಿಯೇ ಕೆಲವು ಕ್ರಮಗಳನ್ನು ಅನುಸರಿಸು ವುದು ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.