ADVERTISEMENT

ತುಟ್ಟಿಯಾಗುವುದೇ ಬಾಡಿಗೆ ದರ...

ಸುಶೀಲಾ ಡೋಣೂರ
Published 8 ಜೂನ್ 2017, 19:30 IST
Last Updated 8 ಜೂನ್ 2017, 19:30 IST
ತುಟ್ಟಿಯಾಗುವುದೇ ಬಾಡಿಗೆ ದರ...
ತುಟ್ಟಿಯಾಗುವುದೇ ಬಾಡಿಗೆ ದರ...   

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಹಾಗೂ ರಿಯಲ್‌ ಎಸ್ಟೇಟ್‌ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ (ರೇರಾ) ಜಾರಿಯಾದ ಬಳಿಕ ಮನೆ–ಫ್ಲ್ಯಾಟ್‌ಗಳ ದರದಲ್ಲಿ ವ್ಯತ್ಯಾಸವಾಗುವ ಬಗ್ಗೆ ಪ್ರಸ್ತುತ ಸಾಕಷ್ಟು ಚರ್ಚೆಯಾಗುತ್ತಿದೆ.

ಇದೇ ವೇಳೆ ಮನೆಗಳ ಬಾಡಿಗೆ ಹಾಗೂ ಭೋಗ್ಯದ ದರದ ಮೇಲೆ ಈ ಎರಡೂ ಬೆಳವಣಿಗೆಗಳು ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತವೆ ಎನ್ನುವುದನ್ನೂ ಗಮನಿಸಬೇಕಾಗಿದೆ.

ಜಿಎಸ್‌ಟಿ ಬಂತು, ಏನೆಲ್ಲಾ ತುಟ್ಟಿಯಾಯಿತು ಎನ್ನುವುದರ ಬಹುತೇಕ ಲೆಕ್ಕ ಸಿಕ್ಕಿದೆ. ಆದರೆ ಈ ಬದಲಾವಣೆ ಬಾಡಿಗೆ ಮನೆ ಹಾಗೂ ಭೋಗ್ಯದ ಮನೆಯ ಮೇಲೂ ತನ್ನ ಪ್ರಭಾವ ಬೀರಲಿದೆಯೇ ಎನ್ನುವುದು ಈಗ ಬಹು ಚರ್ಚಿತ ವಿಷಯ.

ADVERTISEMENT

ರೇರಾ ಹಾಗೂ ಜಿಎಸ್‌ಟಿ ಪ್ರಭಾವದಿಂದ ಮನೆಗಳ ಖರೀದಿ ದುಬಾರಿಯಾಗಲಿದೆ. ಗೃಹ ನಿರ್ಮಾಣ ಕ್ಷೇತ್ರದ ಉದ್ಯಮ ಸಂಸ್ಥೆಗಳು ಗ್ರಾಹಕರ ಮೇಲಿನ ಹೆಚ್ಚುವರಿ ಹೊರೆಯನ್ನು ಕಡಿಮೆಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬ ಕೂಗು ಹಾಕಿವೆ.

ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ರದ್ದುಪಡಿಸುವ ಮೂಲಕ ಸರ್ಕಾರ ಗ್ರಾಹಕಸ್ನೇಹಿ ವಾತಾವರಣವನ್ನು ನಿರ್ಮಾಣ ಮಾಡಬೇಕು ಎನ್ನುವ ಬೇಡಿಕೆ ಈ ಸಂಸ್ಥೆಗಳದ್ದು.

ಈ ನಡುವೆ ಮನೆಗಳನ್ನು ಬಾಡಿಗೆ ನೀಡುವ ಸೇವೆಯನ್ನೂ ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಹೇಗೆ ಎಂಬ ಆತಂಕ ಮನೆ ಮಾಲೀಕರು ಹಾಗೂ ಬಾಡಿಗೆದಾರರು ಇಬ್ಬರಲ್ಲಿಯೂ ಉಂಟಾಗಿದೆ.

ಹೌದು, ಮನೆ ಬಾಡಿಗೆಗಳು ಜುಲೈ ಒಂದರ ನಂತರದಿಂದ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತದೆ ಬೆಂಗಳೂರಿನ ರಿಯಲ್‌ ಎಸ್ಟೇಟ್‌ ವಲಯ. ‘ಸ್ಥಿರಾಸ್ತಿಯನ್ನು ಬಾಡಿಗೆಗೆ ನೀಡುವುದನ್ನು ಸರ್ಕಾರ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಗೆ ಒಳಪಡುವ ಸೇವೆಯಾಗಿ ಪರಿಗಣಿಸುತ್ತದೆ’ ಎನ್ನುವುದು ತಜ್ಞರ ವಿಶ್ಲೇಷಣೆ.

ಒಂದು ಆಸ್ತಿ ಅಥವಾ ಕಟ್ಟಡವನ್ನು ಭೋಗ್ಯಕ್ಕೆ ನೀಡುವುದು ಅಥವಾ ಉಪ-ಬಳಕೆಗೆ ಅನುಮತಿಸುವುದು ಅಥವಾ ಬಾಡಿಗೆಗೆ ನೀಡುವುದು ಸಹ ಜಿಎಸ್‌ಟಿ ವ್ಯಾಪ್ತಿಗೆ ಬರುತ್ತದೆ.

ಬಿಲ್ಡರ್‌ಗಳಿಗೂ ಹೊರೆ
ಬೆಂಗಳೂರಿನಲ್ಲಿ ಪ್ರಸ್ತುತ ಸುಮಾರು 30,000 ಅಪಾರ್ಟ್‌ಮೆಂಟ್‌ಗಳು ಖಾಲಿ ಬಿದ್ದಿವೆ. ಇತ್ತೀಚಿಗಿನ ಕೆಲವು ಬದಲಾವಣೆಗಳಿಂದಾಗಿ ಈಗಾಗಲೇ ಬುಕಿಂಗ್‌ ಪೂರ್ಣಗೊಳಿಸಿದ ಗ್ರಾಹಕರೂ ಸಹ ತಮ್ಮ ಬುಕಿಂಗ್‌ ಹಣವನ್ನು ವಾಪಸ್ ಕೇಳುತ್ತಿದ್ದಾರೆ. ಮಾರುಕಟ್ಟೆ ಯಾವಾಗ ಚೇತರಿಸಿಕೊಳ್ಳುತ್ತದೆ ಎನ್ನುವುದನ್ನು ನಿರ್ದಿಷ್ಟವಾಗಿ ಹೇಳಲಾಗದು. ಇದರಿಂದಾಗಿ ಬಿಲ್ಡರ್‌ಗಳೂ ಸಹ ಖಾಲಿ ಬಿದ್ದ ಫ್ಲ್ಯಾಟ್‌ಗಳನ್ನು ಬಾಡಿಗೆ ಹಾಗೂ ಭೋಗ್ಯಕ್ಕೆ ನೀಡುತ್ತಿದ್ದಾರೆ.

ರಿಯಲ್ ಎಸ್ಟೇಟ್ ಡೆವಲಪರ್ಸ್ ಸಂಘಟನೆಗಳ ಭಾರತೀಯ ಒಕ್ಕೂಟದ ಪ್ರಕಾರ ಬೆಂಗಳೂರಿನಲ್ಲಿ ಮಾರಾಟವಾಗದೇ ಉಳಿದಿರುವ ಫ್ಲ್ಯಾಟ್‌ಗಳ ಸಂಖ್ಯೆ ಶೇ 2.2 ರಷ್ಟಿದೆ. ಪ್ರತಿ ಹತ್ತರಲ್ಲಿ ಒಂದು ಮನೆ ಖಾಲಿ ಇದೆ. ಇಂತಹ ಮನೆಗಳನ್ನು ಖಾಲಿ ಬಿಡುವ ಬದಲು ಬಾಡಿಗೆ ಅಥವಾ ಭೋಗ್ಯಕ್ಕೆ ನೀಡುವ ದಾರಿಯನ್ನು ಬಿಲ್ಡರ್‌ಗಳು ಹಾಗೂ ಡೆವಲಪರ್‌ಗಳು ಆಯ್ಕೆ ಮಾಡಿಕೊಂಡಿದ್ದಾರೆ.

ಹೀಗಿರುವಾಗ ಬಾಡಿಗೆ ಹಾಗೂ ಭೋಗ್ಯಕ್ಕೆ ನೀಡುವುದನ್ನೂ ಜಿಎಸ್‌ಟಿ ಅಡಿ ತಂದರೆ, ಆ ಹೊರೆಯನ್ನೂ ಅವರು ಗ್ರಾಹಕರ ಮೇಲೆಯೇ ಹಾಕುತ್ತಾರೆ ಎನ್ನುವುದು ಬಾಡಿಗೆದಾರರ ಆತಂಕ.
****
ಬಾಡಿಗೆ ಹೆಚ್ಚಿಸುವ ಸಾಧ್ಯತೆ ಇದೆ

ಸಂಕೀರ್ಣ ಅಥವಾ ಕಟ್ಟಡವನ್ನು ಪೂರ್ಣಗೊಳಿಸಿದ ನಂತರ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ಭರಿಸಲೇಬೇಕಾಗುತ್ತದೆ. ಅದನ್ನು ನಾವು ಮಾರಾಟ ಮಾಡುತ್ತೇವೊ, ಬಾಡಿಗೆಗೆ ಕೊಡುತ್ತೇವೊ ಅಥವಾ ಭೋಗ್ಯಕ್ಕೆ ಕೊಡುತ್ತೇವೊ ಎನ್ನುವುದು ಇಲ್ಲಿ ಮುಖ್ಯವಾಗುವುದಿಲ್ಲ.

ಹಲವಾರು ರೂಪಗಳಲ್ಲಿ ತುಂಬಬೇಕಾದ ತೆರಿಗೆಯನ್ನು ಇನ್ನು ಮುಂದೆ ಒಂದೇ ರೂಪದಲ್ಲಿ, ಒಂದೇ ಮೂಲದಿಂದ ತುಂಬುತ್ತೇವೆ ಅಷ್ಟೆ. ಇದನ್ನೇ ನೆಪವಾಗಿಟ್ಟುಕೊಂಡು ಕೆಲ ಮಾಲೀಕರು ಹಾಗೂ ಬಿಲ್ಡರ್‌ಗಳು ಬಾಡಿಗೆಯನ್ನೂ ಹೆಚ್ಚಿಸುವ ಸಾಧ್ಯತೆಯೂ ಇದೆ.

ಆದಾಗ್ಯೂ ಇದು ಒಟ್ಟಾರೆ ಬಾಡಿಗೆ ಹಾಗೂ ಭೋಗ್ಯದ ದರದಲ್ಲಿ ಹೆಚ್ಚಳ ಉಂಟಾಗುತ್ತದೆ ಎಂದು ಹೇಳಲಾಗದು. ಆದರೆ ಬಾಡಿಗೆ ಹಾಗೂ ಭೋಗ್ಯಕ್ಕೆ ನೀಡಲಾಗುವ ಮನೆಗಳಿಗೆಂದೇ ವಿಶೇಷ ತೆರಿಗೆ ವ್ಯವಸ್ಥೆ ಇಲ್ಲ.
ಪಿ.ಎಲ್‌. ವೆಂಕಟರಾಮರೆಡ್ಡಿ,  ವಿ2 ಹೋಲ್ಡಿಂಗ್ಸ್, ಹೌಸಿಂಗ್ ಡೆವಲಪ್‌ಮೆಂಟ್‌ ಪ್ರೈವೇಟ್ ಲಿ. ವ್ಯವಸ್ಥಾಪಕ ನಿರ್ದೇಶಕ

****
ಬಾಡಿಗೆ ಆದಾಯದ ಮೇಲೆ ಅವಲಂಬಿತರಾಗಿರುವ ಮಾಲೀಕರು ಹಾಗೂ ಹೂಡಿಕೆದಾರರನ್ನು ಈ ಕ್ರಮ ನಿರುತ್ಸಾಹಗೊಳಿಸುತ್ತದೆ
–ಆಶಿಷ್‌ ಆರ್‌, ವ್ಯವಸ್ಥಾಪಕ ನಿರ್ದೇಶಕ, ಪೂರ್ವಂಕರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.