ಮನೆ ಕಟ್ಟಿ ನೋಡು-ಮದುವೆ ಮಾಡಿನೋಡು~ ಎಂಬ ನಮ್ಮ ಹಿರಿಯರ ಮಾತು ಸಾರ್ವಕಾಲಿಕ ಸತ್ಯ. ಈ ಭೂಮಿಯ ಮೇಲಿನ ಸಕಲ ಜೀವರಾಶಿಗಳೂ ತಮ್ಮ ವಾಸಕ್ಕೆ, ಇರುವಿಕೆಗೆ ನಿರ್ದಿಷ್ಟ ನೆಲೆಯನ್ನು ಬಯಸುತ್ತವೆ. ಪ್ರಾಣಿ-ಪಕ್ಷಿಗಳು ಗುಹೆ-ಗೂಡುಗಳಲ್ಲಿ ಇರುವಂತೆ ಮಾನವನೂ ತನ್ನ ಕುಟುಂಬದ ರಕ್ಷಣೆಗೆ, ನೆಮ್ಮದಿಗೆ ಮನೆಯೊಂದನ್ನು ನಿರ್ಮಾಣ ಮಾಡಿಕೊಳ್ಳಬಯಸುತ್ತಾನೆ.
ವರ್ಷ ವರ್ಷವೂ ಕಟ್ಟಡ ಸಾಮಗ್ರಿಗಳ ಬೆಲೆ ಕೈಗೆ ನಿಲುಕಲಾಗದಷ್ಟು ಎತ್ತರಕ್ಕೆ ಹೋಗುತ್ತಲೇ ಇದ್ದರೂ ಎಲ್ಲರಿಗೂ ತಮ್ಮ ಜೀವಿತದ ಅವಧಿಯಲ್ಲಿ ಒಂದು ಮನೆಯನ್ನು ಕಟ್ಟಿಕೊಳ್ಳುವ ಅಭಿಲಾಷೆ ಇದ್ದೆೀ ಇರುತ್ತದೆ.
ನಿಮ್ಮ ಹಣಕಾಸು ಸಾಮರ್ಥ್ಯಕ್ಕೆ ತಕ್ಕಂತೆ ಆಯ್ಕೆ ಮಾಡಿ ಖರೀದಿಸಿದ ನಿವೇಶನದಲ್ಲಿ ಒಂದಿನಿತೂ ಸ್ಥಳ ವ್ಯರ್ಥಮಾಡದೆ ಹೇಗೆ ಉಪಯುಕ್ತ ಮಾಡಿಕೊಳ್ಳಬಹುದು ಎಂಬ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಮನೆಯ ಒಳ-ಹೊರಗಿನ ವಿನ್ಯಾಸ ಮಾಡಬೇಕಾಗುತ್ತದೆ.
ಮನೆ ಎಂದಮೇಲೆ ಅದರಲ್ಲಿ ವರಾಂಡ, ಟಿ.ವಿ. ಹಾಲ್, ಡೈನಿಂಗ್ ಹಾಲ್, 2-3 ಮಲಗುವ ಕೋಣೆಗಳು, ದೇವರ ಕೋಣೆ, ಅಡುಗೆ ಮನೆ, ಸ್ಟೋರ್ ರೂಮ್, ಪಾತ್ರೆ ಬಟ್ಟೆ ತೊಳೆಯುವ ಜಾಗ, ಸ್ನಾನದ ಮನೆ, ಶೌಚಾಲಯ, ಹಳೆಯ ಅನುಪಯುಕ್ತ ವಸ್ತುಗಳನ್ನು ತುಂಬಿಡಲು ಒಂದು ಶೀಟ್ ಹೌಸ್, ಕೈತೋಟಗಳು ಇರಬೇಕಾಗುತ್ತದೆ.
ಟಿ.ವಿ ಹಾಲ್‌ನಲ್ಲಿ ಕೂರುವ ಆಸನಗಳು ಟೀಪಾಯಿ, ಅಗಲವಾದ ಕಿಟಕಿಗಳು, ಷೋಕೇಸ್, ಫ್ಯಾನ್, ಮನೆ ಸದಸ್ಯರೆಲ್ಲರೂ ಒಟ್ಟಾಗಿ ಕೂತು ಹರಟುತ್ತಾ ಊಟ ಮಾಡಲು ಡೈನಿಂಗ್ ಟೇಬಲ್, ಖುರ್ಚಿಗಳು, ದೇವರ ಕೋಣೆಯಲ್ಲಿ ದೇವರ ಮಂಟಪ ಹಾಗೂ ಪೂಜಾ ಸಾಮಗ್ರಿಗಳನ್ನು ಇಡಲು ಪುಟ್ಟದಾದ ಕಪಾಟು, ಅಡಿಗೆ ಮನೆಯಲ್ಲಿ ಪಾತ್ರೆಗಳನ್ನಿಡಲು ಸುಸಜ್ಜಿತವಾದ, ಸರಿಯಾದ ಅಳತೆಯ ಶೆಲ್ಫ್‌ಗಳು, ಒಲೆಯ ಕಟ್ಟೆ, ಹೀಗೆ ಆಯಾ ಕೋಣೆಗಳಿಗೆ ತಕ್ಕಂತೆ ಸರಿಯಾದ ವ್ಯವಸ್ಥೆ ಇರಬೇಕು.
ಮಲಗುವ ಕೋಣೆಗಳಲ್ಲೂ ಗಾಳಿ-ಬೆಳಕು ಧಾರಾಳವಾಗಿ ಬರುವಂತಿದ್ದರೆ ಮನಸ್ಸಿಗೂ ಅಹ್ಲಾದಕರ. ಮಾಸ್ಟರ್ ಬೆಡ್‌ರೂಂನಲ್ಲಿ ಮಂಚ, ಹಾಸಿಗೆ, ಬಟ್ಟೆಗಳನ್ನು ಇಡಲು ಕಪಾಟುಗಳು, ಕಿಟಕಿಗಳಿಗೆ ತಿಳಿ ವರ್ಣದ ತೆಳ್ಳನೆಯ ಪರದೆ, ಫ್ಯಾನ್, ಸೊಳ್ಳೆ ಪರದೆಗಳಿದ್ದರೆ ನೆಮ್ಮದಿಯಾಗಿ ದಿನದ ಆಯಾಸವನ್ನೆಲ್ಲಾ ಮರೆತು ಹಾಯಾಗಿ ನಿದ್ದೆ ಮಾಡಬಹುದು.
ಮಕ್ಕಳ ಮಲಗುವ ಕೋಣೆಯಲ್ಲಿ ಎರಡು ಪ್ರತ್ಯೇಕ ಮಂಚ, ಅವಕ್ಕೆ ಸರಿಯಾದ ಹಾಸಿಗೆ, ಹೊದಿಕೆ ದಿಂಬು, ರೈಟಿಂಗ್ ಟೇಬಲ್, ಕಂಪ್ಯೂಟರ್, ಲ್ಯಾಪ್‌ಟಾಪ್ ಡೆಸ್ಕ್, ಟೇಬಲ್ ಲ್ಯಾಂಪ್, ಸೊಳ್ಳೆ ಪರದೆ, ಫ್ಯಾನ್, ಕಿಟಕಿಗಳಿಗೆ ಪರದೆಗಳು, ವಾರ್ಡ್ ರೋಬ್ ಎಲ್ಲವನ್ನೂ ಸರಿಯಾದ ರೀತಿಯಲ್ಲಿ ಹೊಂದಿಸಿಟ್ಟರೆ ಮನೆಯ ಅಲಂಕಾರ-ಸೌಂದರ್ಯ ಎದ್ದು ಕಾಣುವುದರಲ್ಲಿ ಸಂಶಯವಿಲ್ಲ.
ಮಾರುಕಟ್ಟೆಯಲ್ಲಿ ಕೈಗೆ ಸಿಕ್ಕ ವಸ್ತುಗಳನ್ನೆಲ್ಲ ತಂದು ಮನೆಯೊಳಗೆ ಗುಡ್ಡೆ ಹಾಕಿದರೆ ಮನೆಯೇ ಸಂತೆಯಾಗುವುದು. ನಿಮ್ಮ ಅವಶ್ಯಕತೆಗೆ ಎಷ್ಟು ಬೇಕೋ ಅಷ್ಟು ಮಾತ್ರ ಖರೀದಿಸಿದರೆ ನಿಮ್ಮ ಜೇಬಿಗೂ ನಷ್ಟವಿಲ.
ಮನೆ ಮುಂದೆ ಕೈತೋಟಕ್ಕೆ ಜಾಗ ಮೀಸಲಿರಿಸಿದರೆ ಗಿಡಮರಗಳಿಂದ ಒದಗುವ ಆಮಜ್ಲನಕ, ತಂಪಾದ ಹವೆ ಲಭ್ಯವಾಗುತ್ತದೆ. ಪರಿಸರ ಪ್ರಜ್ಞೆಯ ಪಾಠ ಹೇಳಿಕೊಡಲು ನಿತ್ಯ ನಿಮ್ಮ ಕೈತೋಟಕ್ಕೆ ಹಾರಿಬಂದು ಗಿಡ ಬಳ್ಳಿ ಮರಗಳ ಮೇಲೆ ಕೂರುವ ಪಕ್ಷಿಗಳ ಇನಿದನಿ-ಕಲರವ-ಗಾಯನ ಯಾರಿಗೆ ತಾನೆ ಇಷ್ಟವಾಗದೆ ಇದ್ದೀತು?
ಮುಂಜಾನೆ ಮತ್ತು ಮುಸ್ಸಂಜೆಯ ವೇಳೆಯಲ್ಲಿ ಕೈತೋಟದಲ್ಲಿ ಮತ್ತು ಮನೆಯ ಒಳ-ಹೊರಗೆ ಅರಾಮವಾಗಿ ಓಡಾಡುವಾಗ ಮನೆಕಟ್ಟುವಾಗಿನ ಕಷ್ಟವೆಲ್ಲ ಮಾಯವಾಗಿ ಹಾಯಾದ ನಿಟ್ಟುಸಿರು ಹೊರಹೊಮ್ಮುತ್ತದೆ ಅಲ್ಲವೇ? ನಿಮ್ಮ ಕನಸಿನ ಮನೆ ಹೀಗಿರಲಿ ಎಂಬ ಹಾರೈಕೆ ನಮ್ಮದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.