ADVERTISEMENT

ನೀರಿನ ಸ್ಮಾರ್ಟ್ ಮೀಟರ್ ಇಂದಿನ ಅಗತ್ಯ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 19:30 IST
Last Updated 8 ಮಾರ್ಚ್ 2018, 19:30 IST
ನೀರಿನ ಸ್ಮಾರ್ಟ್ ಮೀಟರ್ ಇಂದಿನ ಅಗತ್ಯ
ನೀರಿನ ಸ್ಮಾರ್ಟ್ ಮೀಟರ್ ಇಂದಿನ ಅಗತ್ಯ   

* ವಿವೇಕ್‌ ಶುಕ್ಲಾ

ಜಗತ್ತಿನಾದ್ಯಂತ ನೀರಿನ ಹಾಹಾಕಾರ ಹೆಚ್ಚಾಗುತ್ತಿದ್ದು, ಬೇಸಿಗೆ ಕಾಲದಲ್ಲಿ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತದೆ. ನದಿಗಳು ಬತ್ತುತ್ತಿರುವುದರಿಂದ ನಮ್ಮ ದೇಶದಲ್ಲಿ ಲಕ್ಷಾಂತರ ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ನೀರಿನ ಕೊರತೆ ಬೆಂಗಳೂರಿನ ದೊಡ್ಡ ಸಮಸ್ಯೆ ಎನಿಸಿದೆ.

ನಮ್ಮ ದೇಶದ ನಗರ ಪ್ರದೇಶಗಳಲ್ಲಿ ವಾಸಿಸುವ ಕುಟುಂಬಗಳಲ್ಲಿ ಸಾಮಾನ್ಯವಾಗಿ ನಾಲ್ಕು ಮಂದಿ ಇರುತ್ತಾರೆ. ಪ್ರತಿ ಕುಟುಂಬಗಳು ಪ್ರತಿದಿನ ಸುಮಾರು 1,000 ಲೀಟರ್ ನೀರನ್ನು ಬಳಕೆ ಮಾಡುತ್ತವೆ. ‘ದಿನವೊಂದಕ್ಕೆ ಒಬ್ಬ ವ್ಯಕ್ತಿಯು 150 ಲೀಟರ್ ನೀರು ಬಳಸುತ್ತಾನೆ’ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ (ಡಬ್ಯುಎಚ್ಒ). ಅದರಂತೆ ಕುಟುಂಬವೊಂದು ದಿನಕ್ಕೆ 600 ಲೀಟರ್ ನೀರನ್ನು ಬಳಸುತ್ತದೆ. ಸೋರಿಕೆಯಿಂದ ಮತ್ತು ನಿರ್ಲಕ್ಷ್ಯದಿಂದ ಶೇ 30 ರಿಂದ 40 ರಷ್ಟು ಪ್ರಮಾಣದ ನೀರು ವ್ಯರ್ಥವಾಗುತ್ತದೆ. ಜನರಿಗೆ ತಾವು ಬಳಸುವ ನೀರು ಹಾಗೂ ಅದಕ್ಕೆ ಪಾವತಿಸುವ ಹಣದ ಬಗ್ಗೆ ಅರಿವು ಮೂಡಿದರೆ, ವ್ಯರ್ಥವಾಗುವ ನೀರನ್ನು ಉಳಿಸಬಹುದು.

ADVERTISEMENT

ಆದರೆ ಇದು ಪ್ರಾಯೋಗಿಕವಲ್ಲ. ಯಾಕೆಂದರೆ ಹೆಚ್ಚಿನ ಅಪಾರ್ಟ್‌ಮೆಂಟ್ ಮತ್ತು ಫ್ಲಾಟ್‌ಗಳಲ್ಲಿ ನೀರಿನ ಬಿಲ್‌ ಇಂತಿಷ್ಟು ಮೊತ್ತ ಎಂದು ನಿಗದಿ ಮಾಡಿರುತ್ತಾರೆ. ಇಂತಹ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವ ಕುಟುಂಬಗಳು ಯಥೇಚ್ಛವಾಗಿ ನೀರನ್ನು ಬಳಕೆ ಮಾಡುತ್ತವೆ. ಆದರೆ ಪ್ರತಿ ತಿಂಗಳು ನೀರಿನ ಬಿಲ್ಲಿನ ಒಟ್ಟು ಮೊತ್ತವನ್ನು ಭಾಗಿಸಿ ಎಲ್ಲ ಕುಟುಂಬಗಳಿಂದಲೂ ಸಮಪ್ರಮಾಣದಲ್ಲಿ ಪಡೆಯಲಾಗುತ್ತದೆ. ನೀರಿನ ವೈಯಕ್ತಿಕ ಬಳಕೆ ಎಂದಿಗೂ ಸಮವಾಗಿರುವುದಿಲ್ಲ. ಇದರಿಂದ ಹೆಚ್ಚಿನ ಕುಟುಂಬಗಳು ಇನ್ನೊಬ್ಬರು ಬಳಸಿದ ನೀರಿಗೂ ಹಣ ಪಾವತಿಸಬೇಕಾದ ಸ್ಥಿತಿ ಇದೆ.

ನೀರಿನ ಬಳಕೆಯಲ್ಲಿ ಮತ್ತು ಬಿಲ್ ಪಾವತಿಯಲ್ಲಿರುವ ಅಸಮಾನತೆಗೆ ಪರಿಹಾರ ಕಂಡುಕೊಳ್ಳಲು ನೀರಿನ ಸ್ಮಾರ್ಟ್ ಮೀಟರ್‌ನಿಂದ ಸಾಧ್ಯವಿದೆ. ಸ್ಮಾರ್ಟ್ ಮೀಟರ್ ವೈಯಕ್ತಿಕವಾಗಿ ಬಳಸುವ ನೀರಿನ ಪ್ರಮಾಣವನ್ನು ಗುರುತಿಸುತ್ತದೆ. ಗ್ರಾಹಕನು ನಿಜವಾಗಿ ಬಳಸಿದ ನೀರಿನ ಪ್ರಮಾಣವನ್ನು ದಾಖಲಿಸುತ್ತದೆ. ಅಲ್ಲದೆ ನೀರಿನ ಸೋರಿಕೆಯ ಬಗ್ಗೆ ಎಚ್ಚರಿಕೆ ನೀಡುತ್ತದೆ. ಅದನ್ನು ಗುರುತಿಸಿ ಸರಬರಾಜನ್ನು ನಿಲ್ಲಿಸುತ್ತದೆ. ನೀರಿನ ಬಳಕೆಯ ವಿವರವಾದ ಮಾಹಿತಿ ನೀಡುವ ಮೂಲಕ ಗ್ರಾಹಕನಲ್ಲಿ ಜಾಗೃತಿ ಮೂಡಿಸಿ ನೀರು ಉಳಿತಾಯ ಮಾಡುವ ಪ್ರವೃತ್ತಿ ಬೆಳೆಸಲು ಸಹಾಯಕವಾಗುತ್ತದೆ.

ಅಪಾರ್ಟ್‌ಮೆಂಟ್‌ಗಳಲ್ಲಿ ಪ್ರತ್ಯೇಕವಾಗಿ ನೀರಿನ ಮೀಟರ್ ಅಳವಡಿಸಿದಾಗ ನೀರಿನ ಬಳಕೆ ಶೇ 35 ರಷ್ಟು ಕಡಿಮೆಯಾಗಿದೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ. ಜೊತೆಗೆ ವಿದ್ಯುತ್ ಉಳಿತಾಯವೂ ಆಗಿದೆ. ಈ ಮೊದಲು ಟ್ಯಾಂಕ್‌ಗಳಿಗೆ ಮೋಟಾರ್ ಮೂಲಕ ನೀರು ತುಂಬಿಸುವಾಗ ಅಧಿಕ ವಿದ್ಯುತ್ ಖರ್ಚಾಗುತ್ತಿತ್ತು. ನೀರಿನ ಬಳಕೆ ಕಡಿಮೆಯಾದಾಗ ವಿದ್ಯುತ್ ಕೂಡ ಉಳಿತಾಯವಾಗಿದೆ ಎಂಬುದು ಸಂಶೋಧನೆಯಲ್ಲಿ ಕಂಡು ಬಂದಿದೆ.

ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ಸ್ಮಾರ್ಟ್ ಮೀಟರ್ ವ್ಯವಸ್ಥೆಯನ್ನು ಅಳವಡಿಸಿದರೆ ಅದರಿಂದ ಉಳಿತಾಯ ಮತ್ತು ವಿವಿಧ ಪ್ರಯೋಜನಗಳಿವೆ.

ನ್ಯಾಯೋಚಿತ ಬಿಲ್ಲಿಂಗ್: ನಗರಗಳಲ್ಲಿ ಬಹುಸಂಖ್ಯೆಯ ಜನರು ದೊಡ್ಡ ದೊಡ್ಡ ಕಟ್ಟಡಗಳಲ್ಲಿ ವಾಸಿಸುತ್ತಾರೆ. ಇಂತಹ ಕಟ್ಟಡಗಳಲ್ಲಿ ಫ್ಲ್ಯಾಟ್ ಪಡೆದು ವಾಸಿಸುವವರು ಪ್ರತಿ ತಿಂಗಳು ನೀರಿನ ಬಿಲ್ ಪಾವತಿಸಬೇಕಾಗುತ್ತದೆ. ಇದು ನ್ಯಾಯೋಚಿತವಾದರೂ, ನೀರನ್ನು ಮಿತವಾಗಿ ಬಳಕೆ ಮಾಡಿದರೂ ಯಾವುದೇ ಉಪಯೋಗವಾಗದು. ಇದರಿಂದ ಅಸಹನೆ ಬೆಳೆಯಬಹುದು. ಇಂತಹ ಸಂದರ್ಭದಲ್ಲಿ ನೀರಿನ ಸ್ಮಾರ್ಟ್ ಮೀಟರ್ ಬಳಸಿದರೆ ಪ್ರತಿಯೊಬ್ಬರಿಗೂ ಪ್ರತ್ಯೇಕ ಬಿಲ್ ವಿಧಿಸುವುದರಿಂದ. ತಾವು ಬಳಸಿದ ನೀರಿಗಷ್ಟೆ ಬಿಲ್ ಪಾವತಿಸುವಂತಾಗುತ್ತದೆ.

ಸ್ವಯಂಚಾಲಿತ ಸೋರಿಕೆ ಪತ್ತೆ: ಶೌಚಾಲಯಗಳಲ್ಲಿ ನೀರಿನ ಸೋರಿಕೆ ಇದ್ದರೆ ಪ್ರತಿದಿನ ಹೆಚ್ಚಿನ ಪ್ರಮಾಣದಲ್ಲಿ ನೀರು ವ್ಯರ್ಥವಾಗಹುದು. ತೊಟ್ಟಿಕ್ಕುವ ನಲ್ಲಿಗಳಿಂದಲೂ ನೀರು ಪೋಲಾಗಬಹುದು. ಸ್ಮಾರ್ಟ್ ಮೀಟರ್‌ಗಳು ನೀರಿನ ಸೋರಿಕೆಯನ್ನು ಪತ್ತೆಹಚ್ಚಿ ಎಚ್ಚರಿಕೆ ನೀಡುತ್ತವೆ. ಇದರಿಂದ ನಲ್ಲಿಗಳನ್ನು ಶೀಘ್ರ ದುರಸ್ತಿ ಮಾಡಿ ನೀರು ವ್ಯರ್ಥವಾಗದಂತೆ ತಡೆಯಬಹುದು.

ವೆಚ್ಚ ಕಡಿತ: ಸ್ಮಾರ್ಟ್ ಮೀಟರ್ ಅಳವಡಿಕೆಯಿಂದ ಶೇ 35ರಷ್ಟು ನೀರು ಉಳಿತಾಯವಾಗುವುದರ ಜೊತೆಗೆ ವಿದ್ಯುತ್ ಕೂಡ ಉಳಿತಾಯವಾಗುತ್ತದೆ. ಹೌಸಿಂಗ್ ಸೊಸೈಟಿಗಳಲ್ಲಿ ಇಂತಹ ಮೀಟರ್‌ಗಳ ಅಳವಡಿಕೆಯಿಂದ ಹೆಚ್ಚಿನ ಪ್ರಯೋಜನವಾಗುತ್ತದೆ.

ನಗರ ಪ್ರದೇಶಗಳಲ್ಲಿ ಬೆಳೆಯುತ್ತಿರುವ ಜನಸಂಖ್ಯೆಯಿಂದ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣವಾಗುತ್ತಿದೆ. ನೀರಿನ ಉಳಿತಾಯಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳದಿದ್ದರೆ ಮುಂದೆ ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಬಹುದು. ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸುವ ಮೂಲಕ ನೀರಿನ ಉಳಿತಾಯದತ್ತ ಹೆಜ್ಜೆ ಹಾಕಬಹುದು.

(ಲೇಖಕರು: ಸ್ಮಾರ್ಟ್‌ ಹೋಮ್ಸ್‌ ಟೆಕ್ನಾಲಜೀಸ್‌ ಸಂಸ್ಥೆಯ ಸಿಇಒ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.