ADVERTISEMENT

ಪುಟ್ಟ ನಿವೇಶನದಲ್ಲಿ ದೊಡ್ಡ ಮನೆ!

​ಪ್ರಜಾವಾಣಿ ವಾರ್ತೆ
Published 12 ಜೂನ್ 2012, 19:30 IST
Last Updated 12 ಜೂನ್ 2012, 19:30 IST
ಪುಟ್ಟ ನಿವೇಶನದಲ್ಲಿ ದೊಡ್ಡ ಮನೆ!
ಪುಟ್ಟ ನಿವೇಶನದಲ್ಲಿ ದೊಡ್ಡ ಮನೆ!   

ಬೆಂಗಳೂರಿನ ಮತ್ತಿಕೆರೆಯಲ್ಲಿರುವ ಪುಷ್ಪಾ ಅವರದ್ದು ಪತಿ-ಪತ್ನಿ, ಇಬ್ಬರು ಮಕ್ಕಳ ಚಿಕ್ಕ-ಚೊಕ್ಕ ಸಂಸಾರ. ಸ್ವಂತ ಮನೆ ಹೊಂದಬೇಕು. ಅದೂ ಆ ಕನಸಿನ ಮನೆಯನ್ನು ನತಾವೇ ಮುಂದೆ ನಿಂತು ಕಟ್ಟಿಸಬೇಕು ಎಂಬ ಆಸೆ.

ಪುತ್ರಿಯರಿಬ್ಬರೂ ಉನ್ನತ ವ್ಯಾಸಂಗ ಮಾಡುತ್ತಿರುವುದರಿಂದ ಓದಿಕೊಳ್ಳಲು ಅನುಕೂಲವಾಗುವಂತೆ ಇಬ್ಬರಿಗೂ ಪ್ರತ್ಯೇಕ ಕೊಠಡಿಗಳ ಅಗತ್ಯವಿದೆ. ಅವುಗಳಿಗೆ ಅಟ್ಯಾಚ್ಡ್ ಬಾತ್ ರೂಂ ಸಹ ಇರಬೇಕು.

ಈ ಪುಟ್ಟ ಸಂಸಾರಕ್ಕೆ ಪುಟ್ಟದೇ ಆದ ಒಂದು ಕಾರೂ ಇದೆ. ಬಹಳ ಆಸೆಯಿಂದ ಖರೀದಿಸಿದ ಕಾರನ್ನು ರಸ್ತೆ ಬದಿ ಅನಾಥವಾಗಿ ನಿಲ್ಲಿಸಲಾದೀತೆ? ಹಾಗಾಗಿ ಅದಕ್ಕೂ ನಿಲುಗಡೆಗೆ ಸೂಕ್ತವಾದ ಜಾಗ ಬೇಕು. ಆ ಕಾರ್ ಪಾರ್ಕಿಂಗ್ ಸ್ವಲ್ಪ ವಿಶಾಲವಾಗಿಯೇ ಇರಬೇಕು. ಏಕೆಂದರೆ ಮುಂದೆ ಇನ್ನೊಂದು ದೊಡ್ಡ ಕಾರು ಖರೀದಿಸಿದರೆ ಅದನ್ನೂ ನಿಲ್ಲಿಸಲು ಜಾಗ ಬೇಡವೇ?

ವಾಸ್ತು ಪ್ರಕಾರ ಮನೆಯ ಮುಂಭಾಗದ ಬಾಗಿಲು ಪೂರ್ವಕ್ಕೆ ಇಲ್ಲವೇ ಉತ್ತರಕ್ಕೆ ಬರಬೇಕು.
ಪುಷ್ಪಾ ದಂಪತಿ ಮತ್ತು ಪುತ್ರಿಯರು ಇಷ್ಟೆಲ್ಲ ಬೇಡಿಕೆ, ಆಸೆ, ಕನಸುಗಳನ್ನೂ ಮುಂದಿಟ್ಟು ಬಹಳ ಒಳ್ಳೆಯ ಪ್ಲಾನ್ ಹಾಕಿಕೊಡಿ ಎಂಬ ಬೇಡಿಕೆ ಇಟ್ಟರು. ಆದರೆ, ಒಂದಿಂಚು ಜಾಗವೂ ವ್ಯರ್ಥವಾಗಬಾರದು ಎಂಬ ಷರತ್ತನ್ನೂ ವಿಧಿಸಿದರು.

ಅವರ ಎಲ್ಲ ಬೇಡಿಕೆ, ಆಸೆ, ಕನಸುಗಳೂ ಈಡೇರುವಂತಹ ಪ್ಲಾನನ್ನೇ ಹಾಕಿಕೊಡುವ ಭರವಸೆ ನೀಡಿದೆ. ಅವರ ಷರತ್ತಿಗೂ ಒಪ್ಪಿದೆ. ಪ್ರತಿ ಇಂಚು ಜಾಗವೂ ಸದುಪಯೋಗವಾಗುವಂತಹ ನಕ್ಷೆಯನ್ನೇ ಸಿದ್ಧಪಡಿಸಿಕೊಡುವುದಾಗಿಯೂ ಹೇಳಿದೆ.
ಎಲ್ಲ ನಾನು ಯೋಚಿಸಿದಂತೆಯೇ ಆಗಿದ್ದರೆ ಅದರಲ್ಲೇನೂ ಸಮಸ್ಯೆ, ಸವಾಲು ಎದುರಾಗುತ್ತಿರಲಿಲ್ಲ. ಆದರೆ ಆಗಿದ್ದೇ ಬೇರೆ.

ಅವರೆದುರೇ ಮಾದರಿ ನಕ್ಷೆ ಸಿದ್ಧಪಡಿಸಿ ತೋರಿಸೋಣ ಎಂದುಕೊಂಡು ಟೇಬಲ್ ಮೇಲೆ ಬಿಳಿಯ ಡ್ರಾಯಿಂಗ್ ಷೀಟ್ ಹರಡಿದೆ. ನಿವೇಶನ ಎಲ್ಲಿದೆ, ಎಷ್ಟು ಅಳತೆಯದು? ಎಂಬ ಪ್ರಶ್ನೆ ಮುಂದಿಟ್ಟಾಗ ಅವರು ನೀಡಿದ ಉತ್ತರ ಕೇಳಿದಾಗಲೇ ಎದುರಿಗಿರುವ ಸವಾಲು ಎಷ್ಟು ದೊಡ್ಡದ ಎಂಬುದು ಅರ್ಥವಾಗಿದ್ದು!

ಅದು  20-30 ಅಡಿ ಉದ್ದಗಲದ ನಿವೇಶನ! ಅಲ್ಲದೆ ಆ ನಿವೇಶನ ದಕ್ಷಿಣಾಭಿಮುಖವಾಗಿದೆ...
ಕಡೆಗೂ ಹಲವು ದಿನ ತಲೆಕೆಡಿಸಿಕೊಂಡು ಈ ನಾಲ್ಕೂ ಜನರ ಮನಸ್ಸಿಗೆ ನೋವಾಗದಂತೆ, ಅವರ ಬೇಡಿಕೆಗಳೆಲ್ಲ ಈಡೇರುವಂತೆಯೇ ನಕ್ಷೆ ತಯಾರಿಸಿಕೊಟ್ಟೆ. ಜತೆಗೆ ಹೆಚ್ಚುವರಿಯಾಗಿ ಯೋಗ ಚಟುವಟಿಕೆಗಾಗಿ ವಿಶಾಲವಾದ ಪ್ರತ್ಯೇಕ ಕೊಠಡಿ, ಪ್ರತ್ಯೇಕ ಡೈನಿಂಗ್ ಹಾಲ್, ಪೂಜಾ ಕೊಠಡಿ, ಪುಟ್ಟದೇ ಆದ ಸ್ಟೋರ್ ರೂಂ ಸಹ ನಕ್ಷೆಯಲ್ಲಿ ಸೇರಿಸಿದ್ದೆ.

ಆ ನಕ್ಷೆ ಅವರೆಲ್ಲರಿಗೂ ಇಷ್ಟವಾಯಿತು. ಮನೆ ಪೂರ್ಣಗೊಂಡ ನಂತರ ಅವರ ಕನಸುಗಳೂ ನನಸಾಗಿದ್ದವು.20-30 ಅಡಿ ವಿಸ್ತೀರ್ಣದ ನಿವೇಶನದಲ್ಲಿ ಈ ಎಲ್ಲ ಸೌಕರ್ಯಗಳನ್ನೂ ಅಳವಡಿಸಲು ಆಗ ಕಂಡು ಬಂದ ದಾರಿ ಸ್ಪ್ಲಿಟ್ ಲೆವೆಲ್ ಪ್ಲಾನಿಂಗ್ ಕಾಂನ್ಸೆಪ್ಟ್. ಅಂದರೆ ವಿವಿಧ ಹಂತಗಳಲ್ಲಿ ಮನೆಯ  ನಿರ್ಮಾಣ.

ಸ್ಪ್ಲಿಟ್ ಲೆವೆಲ್ ಪ್ಲಾನಿಂಗ್‌ನಿಂದಾದ ಇನ್ನೊಂದು ಅನುಕೂಲವೆಂದರೆ ಮನೆಯ ಎಲ್ಲ ಮೂಲೆಗಳಿಗೂ ಒಂದೆಡೆಯಿಂದ ಇನ್ನೊಂದೆಡೆಗೆ ಸಂಪರ್ಕ ಸುಲಭ ಸಾಧ್ಯವಾಗಿದ್ದು.
ಹೀಗೆ ಮಾಡಲು ಕಂಡುಬಂದ ಬಹಳ ಅತ್ಯುತ್ತಮ ಮಾರ್ಗ ಹಾಗೂ ಸಾಧನವೆಂದರೆ ಅದು `ಎಲಿಮೆಂಟ್ ಸ್ಟೇರ್‌ಕೇಸ್~.

ಈ ಮನೆಯ ಬಹಳ ಅಂಶವೇ ಆಗಿದ್ದ ಈ ಮೆಟ್ಟಿಲುಗಳನ್ನು  ನಿವೇಶನದ ಮಧ್ಯೆ ಭಾಗದಲ್ಲಿ ಬರುವಂತೆಯೇ  ವಿನ್ಯಾಸಗೊಳಿಸಲಾಗಿದೆ.  ಹೀಗೆ ಮಾಡಿರುವುದರಿಂದಲೇ ಮನೆಯ ಸದಸ್ಯರ ಕೋರಿಕೆಯಂತೆ ಈ ಎಲ್ಲ ಸೌಕರ್ಯಗಳನ್ನೂ ಒದಗಿಸಲು ಸಾಧ್ಯವಾಗಿದೆ.

ಪುಷ್ಪಾ ದಂಪತಿ ಮೊದಲ ಬೇಡಿಕೆ ಅವರ ಪ್ರೀತಿಯ ಕಾರ್‌ಗೆ ಪಾಕಿಂಗ್. ರಸ್ತೆಗಿಂತ ಒಂದಡಿಯಷ್ಟು ತಗ್ಗಿನಲ್ಲಿ ಸೆಲ್ಲಾರ್ ನಿರ್ಮಿಸಲಾಗಿದೆ. ಇಲ್ಲಿ ಎರಡು ಚಿಕ್ಕ ಕಾರುಗಳು (ಮಾರುತಿ) ನಿಲುಗಡೆಗೆ ಸ್ಥಳಾವಕಾಶವಿದೆ.

ಈ ಪಾರ್ಕಿಂಗ್ ಸ್ಥಳವನ್ನೂ ಹೇಗೆ ವಿನ್ಯಾಸ ಮಾಡಲಾಗಿದೆ ಎಂದರೆ ಸಮಯ ಬಂದರೆ ಕಾರುಗಳನ್ನು ಹೊರಗೆ ನಿಲ್ಲಿಸಿ ಪುಟ್ಟ ಸಮಾರಂಭ ಮಾಡಲೂ ಅವಕಾಶವಾಗುವಂತೆ ಮಾಡಲಾಗಿದೆ. ಎರಡು ಕಾರುಗಳು ಒಟ್ಟಿಗೇ ಪ್ರವೇಶಿಸಲೂ ಅವಕಾಶವಾಗುವಂತೆ   ಈ ಸೆಲ್ಲಾರ್‌ಗೆ 15 ಅಡಿ ಅಗಲದ ಬಾಗಿಲು ಇಡಲಾಗಿದೆ.

ಪಾದಚಾರಿ ಮಾರ್ಗಕ್ಕೆ ತಾಗಿಕೊಂಡಂತೆಯೇ ಈ ದೊಡ್ಡ  ಗೇಟ್ ಇಟ್ಟ ನಂತರ 20 ಅಡಿಯಲ್ಲಿ ಉಳಿದಿದ್ದು 5 ಅಡಿ. ದೊಡ್ಡ ಗೇಟ್ ಪಕ್ಕದಲ್ಲಿ ಮೂರು ಅಡಿ ಅಗಲದ ಇನ್ನೊಂದು ಪುಟ್ಟ ಗೇಟ್. ಅದು ಮನೆಯ ಪ್ರವೇಶಕ್ಕೆ. ಇದರಿಂದಾದ ಇನ್ನೊಂದು ಅನುಕೂಲವೆಂದರೆ ಮುಂಭಾಗದಲ್ಲಿ ಕಾಂಪೌಂಡ್ ನಿರ್ಮಿಸುವ ಖರ್ಚು ಉಳಿತಾಯವಾಗಿದೆ.

ಪುಟ್ಟ ಗೇಟ್ ದಾಟಿ ಒಳಹೊಕ್ಕರೆ ಪೂರ್ವಾಭಿಮುಖವಾದ ಮುಖ್ಯ ಬಾಗಿಲು ಮುಟ್ಟಲು 4-5 ಮೆಟ್ಟಲು ಏರಬೇಕು. ಒಳ ಪ್ರವೇಶಿಸಿದರೆ ಪುಟ್ಟ ಸಿಟೌಟ್. ಅದರ ಎದುರಿಗೇ ಮತ್ತೆ 5 ಮೆಟ್ಟಿಲುಗಳು. ಇವನ್ನು ಏರಿದರೆ ಬಲಬದಿಗೆ ಲಿವಿಂಗ್ ರೂಂ (ಮೆಟ್ಟಿಲುಗಳ ಅಗಲ 2.9 ಅಡಿ ಅಡಿ ಇದ್ದರೆ, ಮೆಟ್ಟಲುಗಳ ಎತ್ತರ 7 ಇಂಚು ಇದೆ).

ಈ ಮೆಟ್ಟಿಲುಗಳನ್ನು ಏರುವಾಗಲೇ ಪೂಜಾ ಕೋಣೆ, ಊಟದ ಹಾಲ್ ಕಾಣಸಿಗುತ್ತದೆ. ಲಿವಿಂಗ್ ರೂಂ ಮಧ್ಯೆ ತಾರಸಿಗೆ ಆಧಾರ ಕೊಡಲು ಒಂದು ಪಿಲ್ಲರ್ ನಿರ್ಮಿಸಬೇಕಿದ್ದಿತು. ಕಬ್ಬಿಣ-ಕಾಂಕ್ರೀಟ್ ಬಳಸಿ ಪಿಲ್ಲರ್ ಬರುವಂತೆ ಮಾಡಿದ್ದರೆ ತಾರಸಿಗೇನೋ ಗಟ್ಟಿಯಾದ ಆಧಾರ ಸಿಗುತ್ತಿತ್ತು. ಆದರೆ, ಮನೆಯ ಒಳಾಂಗಣದ ಅಂದ ಕೆಡುತ್ತಿತ್ತು.

ಆಗ ಹೊಳೆದ ಆಲೋಚನೆಯಂತೆ ಆ ಪಿಲ್ಲರ್ ಬರಬೇಕಾದ ಜಾಗದಲ್ಲಿ ಕಲ್ಲಿನ ಕಂಬ ನಿರ್ಮಿಸಲಾಯಿತು. ಮಾಮೂಲಿಯದೇ ಆದ ಸೈಜುಗಲ್ಲುಗಳನ್ನು ನೀಟಾಗಿ ಡ್ರೆಸ್ಸಿಂಗ್ ಮಾಡಿಸಿ ಗಾರೆ ಬಳಸಿ ಕಂಬ ನಿರ್ಮಿಸಲಾಯಿತು. ಅದರಲ್ಲಿಯೂ ಒಂದು ಅಂದ ತರಲು ಕಂಬ 3 ಅಡಿ ಎತ್ತರ ಬರುತ್ತಿದ್ದಂತೆಯೇ ಮಧ್ಯೆ ಟೊಳ್ಳು ಬಿಡಲಾಯಿತು.

ಈ ಟೊಳ್ಳು ಜಾಗದಲ್ಲಿ ಪುಟ್ಟ ದೇವರ ಮೂರ್ತಿಯನ್ನೋ, ಪುರಾತನ ಕಾಲದ ಹಿತ್ತಾಳೆ, ತಾಮ್ರದ ಅಲಂಕಾರಿಕ ಸಾಮಗ್ರಿಯನ್ನೋ ಇಡಲು ಅವಕಾಶವಾಯಿತು(ಚಿತ್ರ ನೋಡಿ).
ಮೊದಲೇ ಹೇಳಿದಂತೆ ಮನೆಯ ವಿವಿಧ ಹಂತಗಳಿಗೆ ತಲುಪಲು ಮನೆ ಮಧ್ಯಭಾಗದಲ್ಲಿಯೇ ಮೆಟ್ಟಿಲುಗಳನ್ನು ನಿರ್ಮಿಸಲಾಗಿತ್ತು. ಈ ಮೆಟ್ಟಿಲುಗಳ ಕೆಳ ಭಾಗ ವ್ಯರ್ಥವಾಗದಂತೆ ಅದನ್ನೂ ಸೇರಿಸಿಕೊಂಡು ಅಡುಗೆ ಕೋಣೆ ಮತ್ತು ಸ್ಟೋರ್ ರೂಂಗೆ ಜಾಗ ಒದಗಿಸಲಾಯಿತು.

ಇಲ್ಲಿ ಅಡುಗೆ ಕೋಣೆ ಮತ್ತು ಊಟದ ಹಾಲ್‌ಗೆ ಮತ್ತು ಅಲ್ಲಿಂದ ಲಿವಿಂಗ್ ರೂಂ ಕಡೆಗೆ ನಡೆಎದು ಹೋಗಲೂ ದಾರಿಯಿಟ್ಟು ಸಂಪರ್ಕವಿರುವಂತೆ ಮಾಡಲಾಗಿದೆ.
ಊಟದ ಹಾಲ್‌ನಿಂದ 8 ಮೆಟ್ಟಿಲು ಏರಿದರೆ ಮೊದಲ ಹಂತದಲ್ಲಿ ಒಂದು ಬೆಡ್‌ರೂಂ ಎದುರಾಗುತ್ತದೆ. ಇದಕ್ಕೂ ಅಟ್ಯಾಚ್ಡ್ ಟಾಯ್ಲೆಟ್ ಇದೆ. ಇದು ಒಬ್ಬ ಮಗಳಿಗೆ ಮೀಸಲಾದ ಕೊಠಡಿ.

ಇಲ್ಲಿಂದ ಮತ್ತೆ 5 ಮೆಟ್ಟಿಲು ಏರಿದರೆ ಮಾಸ್ಟರ್ ಬೆಡ್‌ರೂಂ ಇದೆ. ಅದಕ್ಕೂ ಪ್ರತ್ಯೇಕ ಶೌಚಗೃಹ ವ್ಯವಸ್ಥೆ ಮಾಡಲಾಗಿದೆ.ಇದರಿಂದ ಮತ್ತೆ 5-6 ಮೆಟ್ಟಿಲೇರಿದರೆ ಇನ್ನೊಂದು ಹಂತದಲ್ಲಿ ಮತ್ತೊಂದು ಕೊಠಡಿ. ಅದು ಇನ್ನೊಬ್ಬ ಪುತ್ರಿಗೆ ಮೀಸಲು. ಈ ಕೊಠಡಿಯೂ ಬಾತ್‌ರೂಂ ಅಟ್ಯಾಚ್ಡ್.

ಇದರ ಪಕ್ಕವೇ ಯೋಗ ರೂಂ ಬಂದಿದೆ. ಅದೂ ತಕ್ಕಮಟ್ಟಿಗೆ ವಿಶಾಲವಾಗಿದೆ. ಇಲ್ಲಿಂದ ಮೆಲೇರಿದರೆ ಟೆರೇಸ್. ಅಲ್ಲಿ, ಬಟ್ಟೆ ಒಗೆದು ಒಣಹಾಕಲು ಸೌಲಭ್ಯವಿದೆ. ಕುಂಡಗಳಲ್ಲಿ ಪುಟ್ಟ ಕೈತೋಟವನ್ನೂ ಮಾಡಿಕೊಳ್ಳಲು ಅವಕಾಶವಾಗಿದೆ.

ಮಕ್ಕಳ ಎರಡು ಕೊಠಡಿಗಳು 10.5 ಅಡಿ ಅಗಲ, 14 ಅಡಿ ಉದ್ದ ಇದ್ದರೆ, ಮಾಸ್ಟರ್ ಬೆಡ್ ರೂಂ 11.5 ಅಡಿ ಅಗಲ-14 ಅಡಿ ಉದ್ದ ಇದೆ.11.5-16 ಅಡಿ ಅಗಲದ ಸ್ಥಳದಲ್ಲಿ ಅಡುಗೆ ಕೋಣೆ, ಊಟದ ಹಾಲ್ ಮತ್ತು ಪೂಜಾ ಗೃಹಕ್ಕೆ ಸ್ಥಳಾವಕಾಶ ಮಾಡಿಕೊಡಲಾಗಿದೆ. ಹಾಗಿದ್ದೂ ಯಾವುದೂ ಕಿಷ್ಕಿಂದೆ ಎನಿಸುವುದಿಲ್ಲ. ಎಲ್ಲದಕ್ಕೂ ಎಷ್ಟು ಜಾಗ ಬೇಕೋ ಅಷ್ಟನ್ನು ನೀಡಲಾಗಿದೆ.

ಇದ್ದುದರಲ್ಲಿಯೇ ಕಾರ್ ಪಾಕಿಂಗ್ 16 ಅಡಿ ಉದ್ದ-13 ಅಡಿ ಅಗಲದಷ್ಟು ವಿಸ್ತಾರವಾಗಿದೆ. 
20-30 ಅಡಿ ಉದ್ದಗಲದ ನಿವೇಶನವಾಗಿರುವುದರಿಂದ ಅಕ್ಕಪಕ್ಕದ ನಿವೇಶನಗಳವರೂ ಗಾಳಿ-ಬೆಳಕಿಗೆ ಹೆಚ್ಚು ಮೀಸಲು ಜಾಗವನ್ನೂ ಬಿಡುವುದಿಲ್ಲ. ಗೋಡೆಗೆ ತಾಗಿಕೊಂಡಂತೆಯೇ ಮನೆ ಕಟ್ಟುವುದು ಸಾಮಾನ್ಯ.

ಹಾಗಾಗಿ ಮನೆಯ ಒಳಗೆ ತಾಪಮಾನ ನಿಯಂತ್ರಣಕ್ಕೆ ನೆರವಾಗಲಿ ಎಂದು ಕ್ಲೇ ಬ್ರಿಕ್ಸ್(ಮಧ್ಯೆ ಟೊಳ್ಳಾಗಿರುವ ಕೆಂಪು ಇಟ್ಟಿಗೆ)ಗಳಿಂದಲೇ ಗೋಡೆ, ತಾರಸಿ ನಿರ್ಮಿಸಲಾಗಿದೆ. ಸಾಂಪ್ರದಾಯಿಕ ಶೈಲಿಯ ಸುಟ್ಟ ಇಟ್ಟಿಗೆಯನ್ನು ನಲ್ಲಿ ಕೊಳವೆಗಳು ಮತ್ತು ವಿದ್ಯುತ್ ವೈರಿಂಗ್ ಹಾದುಹೋಗಿರುವಲ್ಲಿ ಮಾತ್ರ ಬಳಸಲಾಗಿದೆ. ಕ್ಲೇಬ್ರಿಕ್ಸ್‌ನಲ್ಲಿ ಗೋಡೆ ಕೊರೆದು ಪೈಪ್ ಹಾಕಲಾಗುವುದಿಲ್ಲ. ಅಂಥ ಕಡೆ ಸಾಂಪ್ರದಾಯಿಕ ಇಟ್ಟಿಗೆ ಬಳಕೆ ಅನಿವಾರ್ಯ.
ಮನೆಯೊಳಕ್ಕೆ ಬೆಳಕು ಸರಾಗವಾಗಿ ಹರಿದು ಬರುವಂತೆ ಮಾಡಲು ಕೆಲವೆಡೆ ಗಾಜಿನ ಇಟ್ಟಿಗೆ ಬಳಸಲಾಗಿದೆ.

ಮನೆಯ ಬಾಗಿಲು, ಕಿಟಕಿ ಚೌಕಟ್ಟಿಗೆ ಹೊನ್ನೆ ಮತ್ತು ಮತ್ತಿ ಮರ, ನೆಲಕ್ಕೆ ಗ್ರಾನೈಟ್ ನೆಲಹಾಸು ಬಳಸಲಾಗಿದೆ.ನಿವೇಶನ ಚಿಕ್ಕದೇ ಆದರೂ 3 ಪ್ರತ್ಯೇಕ ಕೊಠಡಿ(ಅಟ್ಯಾಚ್ಡ್ ಬಾತ್), ಎರಡು ಕಾರುಗಳಿಗೆ ಪಾರ್ಕಿಂಗ್, ಮಕ್ಕಳ ಬೇಡಿಕೆಯಂತೆ ಯೋಗ ರೂಂ. ಗೃಹಿಣಿ ಪುಷ್ಪಾ ಅವರ ಕೋರಿಕೆಯಂತೆ ಅಡುಗೆ ಮನೆ ಮಗ್ಗಲಲ್ಲಿಯೇ ಡೈನಿಂಗ್ ಮತ್ತು ಸ್ಟೋರೂಂ...

ಒಟ್ಟಾರೆ ಮನೆ ಮಂದಿಯ ಎಲ್ಲ ಬೇಡಿಕೆಗಳೂ ಈಡೇರಿವೆ.
(ರಾಧಾ ರವಣಂ ಅವರಮೊ: 98453 93580)
                 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.