ADVERTISEMENT

ವಾಸ್ತುಶಿಲ್ಪ: ನಿಸರ್ಗ ಪ್ರಿಯರ ಕೆಂಪು ಇಟ್ಟಿಗೆ ಗೃಹ

​ಪ್ರಜಾವಾಣಿ ವಾರ್ತೆ
Published 10 ಜುಲೈ 2012, 19:30 IST
Last Updated 10 ಜುಲೈ 2012, 19:30 IST

ಗಣೇಶ್ ಪ್ರಸಾದ್ ಅವರ ನಿವೇಶನದ ಸುತ್ತ ಸಾಕಷ್ಟು ಮರ-ಗಿಡಗಳಿದ್ದವು. ಅದೊಂದು ಬಗೆಯಲ್ಲಿ ಪುಟ್ಟ ಉದ್ಯಾನದ ನಡುವೆ ಇದ್ದ ಭಾವವನ್ನೇ ಉಂಟು ಮಾಡುತ್ತಿತ್ತು.

ಮನೆ ಕಟ್ಟಲು ಶುರು ಮಾಡುವ ಮೊದಲು ಗೆಳೆಯರೊಟ್ಟಿಗೆ ನಿವೇಶನದ ಬಳಿ ಹೋದಾಗ ಜತೆಗಿದ್ದವರಲ್ಲಿ ಹಲವರು ಅಲ್ಲಿ ಸುತ್ತ ಇದ್ದ ನೈಸರ್ಗಿಕ ಸೌಂದರ್ಯವನ್ನು ಗುರುತಿಸಿ ಮೆಚ್ಚಿಕೊಂಡರು. ಜತೆಗೇ ಮಿತ್ರನ ಬಳಿ ಸಣ್ಣ ತಕರಾರು ತೆಗೆದರು!

`ಗಣೇಶ್... ನಿನ್ನ ಸೈಟ್ ಇರುವ ಜಾಗ ಬಹಳ ಚೆನ್ನಾಗಿದೆ. ಸುತ್ತ ಮರ-ಗಿಡಗಳ ಹಸಿರು... ಮನಸ್ಸಿಗೆ ಮುದ ನೀಡುವಂತಿದೆ. ಇಂಥ ಕಡೆ ನೀನು ಪೂರಾ ಕಾಂಕ್ರೀಟ್ ಬಳಸಿ ಮನೆ ಕಟ್ಟಿದರೆ, ಅದರ ಗೋಡೆಗಳಿಗೆ ವಿವಿಧ ಬಣ್ಣಗಳನ್ನು ಮೆತ್ತಿದರೆ ನಿನ್ನ ಮನೆಯೋನೋ ಚೆಂದವಾಗಿ ಕಾಣಬಹುದು. ಆದರೆ, ಈ ಸುತ್ತಲ ಪರಿಸರದ ಸೌಂದರ್ಯ ಅದರಿಂದ ಮುಕ್ಕಾಗುತ್ತದೆ~ ಎಂದರು.

`ಸರಿ, ನೀವೇ ಹೇಳಿ, ಏನ್ ಮಾಡೋದು?~.
ಸಮಸ್ಯೆ ಹುಟ್ಟುಹಾಕಿದವರಿಗೇ ಸಲಹೆ ನೀಡುವ ಹೊಣೆಯನ್ನೂ ಗಣೇಶ್ ವರ್ಗಾಯಿಸಿದರು.

ಕಾಂಕ್ರೀಟು, ಮರಗಿಡ, ಸೌಂದರ್ಯ ಎಂದು ಕಾವ್ಯಮಯವಾಗಿ, ಪ್ರಕೃತಿ ಪ್ರಿಯರಂತೆ ಮಾತನಾಡಿದ್ದವರಿಗೆ ಈಗ ಗಣೇಶ್ ಮನಸ್ಸಿಗೆ ಹಿಡಿಸುವಂತಹ, ಸರಿಯಾಗಿ ಜಾರಿಗೆ ಬರುವಂತಹ ಸಲಹೆಯನ್ನೇ ಕೊಡಬೇಕಾಗಿ ಬಂದಿತು.

ಬುದ್ಧಿಮಾತು ಹೇಳಲು ಮುಂದಾಗಿದ್ದವರಲ್ಲಿ ಒಂದಿಬ್ಬರು ತಲೆಕೆರೆಯುತ್ತಾ ನಿಂತರು. ಪರಿಣಾಮ ಬುರುಡೆಗೆ ಅಂಟಿಟ್ಟ ಹೊಟ್ಟು ಭುಜದ ಮೇಲೆ ಉದುರಿತು ಅಷ್ಟೆ.

ಇದಾವುದರ ಗೊಡವೆಯೂ ಬೇಡ ಎಂದು ಮೌನವಾಗಿದ್ದವರಲ್ಲೊಬ್ಬರು, `ಸುಮ್ಮನೆ ಏಕೆ ತಲೆ ಕೆಡಿಸಿಕೊಳ್ಳುತ್ತೀರಿ. ಅದಕ್ಕೆಂದೇ ಅರ್ಕಿಟೆಕ್ಟ್ಸ್ ಇರುತ್ತಾರಲ್ಲ ಅವರಿಗೆ ವಹಿಸಿಬಿಡಿ~ ಪುಕ್ಕಟೆ ಸಲಹೆ ನೀಡಿದರು.

ಅಲ್ಲಿಗೆ ತಲೆ ಕೆರೆಯುವುದು ನಿಲ್ಲಿಸಿದ ತಂಡ ನಮ್ಮ ಕಚೇರಿಯತ್ತ ಧಾವಿಸಿತು. ಮಾಮೂಲಿ ಕಾಂಕ್ರೀಟ್ ಗೋಡೆ, ಪಿಲ್ಲರ್, ಬೀಮ್, ಆರ್‌ಸಿಸಿ ರೂಫಿಂಗ್ ಎಂದು ಒಂದೇ ಮಾದರಿ ಮನೆಗಳನ್ನು ನಿರ್ಮಿಸಿ ಏಕತಾನತೆ ಎನಿಸಿತ್ತು. ಹೊಸ ಬಗೆಯಲ್ಲಿ ಮನೆ ವಿನ್ಯಾಸ ಮಾಡಬೇಕು ಎಂಬ ಹಪಾಹಪಿಯೂ ಇದ್ದಿತು. ಜತೆಗೆ ಕಂಟ್ರಾಕ್ಟರ್ ರಘು ಸಹ ಕ್ಲೇ ಬ್ಲಾಕ್ಸ್ ಬಗ್ಗೆ ಆಗ್ಗಾಗ್ಗೆ ಹೇಳುತ್ತಲೇ ಇದ್ದರು.

ಸರಿ, ಗಣೇಶ್ `ಪರಿವಾರ~ದ ಸಮಸ್ಯೆಗೆ ಇದೇ ತಕ್ಕ `ಪರಿಹಾರ~ ಎಂದುಕೊಂಡೆ.
ಒಳಗೆಲ್ಲ ಟೊಳ್ಳಾಗಿರುವ ಕೆಂಪು ಬಣ್ಣದ, ಗಟ್ಟಿಯಾದ ಇಟ್ಟಿಗೆಗಳಿಂದ ಇಡೀ ಮನೆ ನಿರ್ಮಿಸಬಹುದಾದ ಯೋಜನೆಯ ಕನಸು ಹಂಚಿಕೊಂಡೆ.

ಮೊದಲಿಗೆ ಅವರೆಲ್ಲರೂ ಅಷ್ಟಾಗಿ ಸಹಮತ ತೋರಲಿಲ್ಲ. ನಂತರ `ಕ್ಲೇ ಬ್ಲಾಕ್ಸ್~ ನಿಂದ ಮನೆ ನಿರ್ಮಿಸಿದಲ್ಲಿ ಆಗುವ ಅನುಕೂಲಗಳನ್ನು ನಿಧಾನವಾಗಿ ಮನದಟ್ಟು ಮಾಡಿಕೊಟ್ಟ ಮೇಲೆ ಒಬ್ಬೊಬ್ಬರಾಗಿ `ಹೌದಲ್ಲ~... ಎಂದು ಒಪ್ಪಿಕೊಂಡರು.

ಮಣ್ಣಿನಿಂದಲೇ ಮಾಡಿದ ಈ ವಿಶೇಷ ಇಟ್ಟಿಗೆಗಳಿಂದ ಮನೆ ನಿರ್ಮಿಸಿದಲ್ಲಿ ಗೋಡೆಗಳಿಗೆ ಪ್ಲಾಸ್ಟರಿಂಗ್ ಅಗತ್ಯವಿಲ್ಲ. ಕೆಂಪು ಮಣ್ಣಿನದೇ ಬಣ್ಣವಾದ್ದರಿಂದ ವಾಲ್‌ಪಟ್ಟಿ, ಪೇಟಿಂಗ್ ಖರ್ಚೂ ಉಳಿಯುತ್ತದೆ. ಮುಖ್ಯವಾಗಿ ಮನೆಯ ಸುತ್ತಲಿನ ನೈಸರ್ಗಿಕ ಸೌಂದರ್ಯದ ಜತೆಗೇ ಮನೆಯ ಅಂದವೂ ಮಿಳಿತವಾಗಿ ಇಡೀ ಪರಿಸರವೂ ಚೆಂದವಾಗಿ ಕಾಣುತ್ತದೆ.... ಎಂದು ಅವರವರೇ ಮಾತನಾಡಿಕೊಂಡರು. ನಂತರ ಒಂದೇ ದನಿಯಲ್ಲಿ, `ಇದೇ ಸರಿ, ಗಣೇಶ್ ಮನೆಯನ್ನು ಪೂರ್ಣ ಕ್ಲೇಬ್ಲಾಕ್‌ನಿಂದಲೇ ನಿರ್ಮಿಸೋದೆ ಸರಿ~ ಎಂದು ತೀರ್ಪು ನೀಡಿದರು.

ಪೂರ್ಣ ಕ್ಲೇಬ್ಲಾಕ್ಸ್ ಮನೆ ಹೇಗಿರಬಹುದು ಎಂಬುದನ್ನು ಕಣ್ಣಾರೆ ಕಾಣುವ ಕುತೂಹಲಕ್ಕೆ ಮಿತ್ರನ ನಿವೇಶನವನ್ನೇ `ಪ್ರಯೋಗ~ ಶಾಲೆಯಾಗಿಸಲು ಮುಂದಾದರು!

ಆದರೆ, ಗಣೇಶ್ ಮಾತ್ರ ಮನೆಯಲ್ಲಿ ಹೆಂಡತಿ ಏನೆನ್ನುವಳೋ ಎಂಬ ಸಣ್ಣ ಅಳುಕಿನೊಂದಿಗೇ ಕತ್ತು ಮೇಲೆ-ಕೆಳಗೆ ಹಾಕಿ ಅರೆಮನಸ್ಸಿನಿಂದಲೇ ಒಪ್ಪಿಗೆ ಸೂಚಿಸಿದರು.

ಈಗ ಬಿಟ್ಟರೆ ಎಲ್ಲರೂ ಮನಸ್ಸು ಬದಲಿಸಿಯಾರು ಎಂದು ತಕ್ಷಣವೇ ಮೌಸ್‌ಮತ್ತು ಕೀ ಬೋರ್ಡ್ ಮೇಲೆ ವೇಗವಾಗಿ ಬೆರಳುಗಳನ್ನಾಡಿಸಿ ಕಂಪ್ಯೂಟರ್ ಮಾನಿಟರ್ ಮೇಲೆ ಕ್ಲೇಬ್ಲಾಕ್ಸ್‌ನಿಂದ ಮಾಡಿದ ಒಂದು ಕಟ್ಟಡದ ರಫ್ ಚಿತ್ರವನ್ನು ರಚಿಸಿ ತೋರಿಸಿದೆ.

ಗಣೇಶ್ ಮಿತ್ರರು ತಮಗೆ ತೋಚಿದ ಕೆಲವು ಬದಲಾವಣೆಗಳನ್ನೂ ಸೂಚಿಸಿದರು. ಅಲ್ಲಿಗೆ `ಸಂಪೂರ್ಣ ಕ್ಲೇ ಬ್ಲಾಕ್ಸ್‌ನಿಂದಲೇ ನಿರ್ಮಾಣಗೊಳ್ಳುವ ಮನೆ~ಯ ಚಿತ್ರಕ್ಕೆ ಒಂದು ರೂಪ ಬಂದಿತು.

ಪೂರ್ಣ ಕ್ಲೇಬ್ಲಾಕ್ಸ್ ಮನೆ ಹೇಗಿರುತ್ತದೋ? ಎಂಬ ಅವರ ಕುತೂಹಲ 8-10 ತಿಂಗಳಲ್ಲಿಯೇ ತಣಿಯಿತು. ನಿರ್ಮಾಣಗೊಂಡ ಕಟ್ಟಡದ ಸೌಂದರ್ಯ ಕಂಡು ಎಲ್ಲರೂ ಬೆರಗಾದರು. ಮನಸಾರೆ ಮೆಚ್ಚಿಕೊಂಡರು. ಮನೆ ನಿರ್ಮಾಣದ ಬಜೆಟ್‌ನಲ್ಲಿ ಶೇ 25-30ರಷ್ಟು ಉಳಿತಾಯವಾಗಿದ್ದನ್ನೂ ಕೇಳಿ ಮೆಚ್ಚಿಕೊಂಡರು.

ಮನೆಯ ಒಳಾಂಗಣ ನೈಸರ್ಗಿಕವಾಗಿಯೇ ತಂಪಾಗಿರುತ್ತದೆ ಎಂಬುದನ್ನು ಕೇಳಿತಿಳಿದು, ಕ್ಷಣಕಾಲ ಅನುಭವಿಸಿದ ಕೆಲವರು ತಮ್ಮ ಮನೆಯ `ಎಸಿ~ಗೂ, ಅದು ತರುವ ಕರೆಂಟ್ ಬಿಲ್‌ಗೂ ಮನದೊಳಗೇ ಶಾಪ ಹಾಕಿದರು.

ಪುರಾತನ ಕಾಲದಿಂದಲೂ ಮಣ್ಣಿನಲ್ಲಿ ತಯಾರಿಸಿರುವ ಸಾಮಗ್ರಿಗಳನ್ನೇ ಬಳಸಿ ಮನೆ ಕಟ್ಟುವುದು ಸಾಮಾನ್ಯ ರೂಢಿ. ಇತ್ತೀಚಿನ ದಿನಗಳಲ್ಲಿ ಮಣ್ಣನ್ನು ಉಪಯೋಗಿಸಿಯೇ ವಿಧವಿಧವಾದ ಇಟ್ಟಿಗೆ ಸಿದ್ಧಪಡಿಸಿ ಬಳಸುವುದು, ಅವುಗಳಿಂದ ಸುಂದರವಾದ ಮನೆಗಳನ್ನು ನಿರ್ಮಿಸುವುದೂ ಫ್ಯಾಷನ್ ಎನಿಸಿಕೊಳ್ಳುತ್ತಿದೆ.

 ಕ್ಲೇ ಬ್ಲಾಕ್ ಬಳಸಿ ಗೋಡೆ, ಪಿಲ್ಲರ್, ಛಾವಣಿ, ಆರ್ಚ್(ಕಮಾನು) ಮತ್ತು ಫ್ಲೋರಿಂಗ್ ಮಾಡಿಕೊಳ್ಳಬಹುದು.

ಈ ಕ್ಲೇ ಬ್ಲಾಕ್‌ಗಳು ಕರ್ನಾಟಕದ ಹುಳಿಯಾರ್(ತುಮಕೂರು ಸಮೀಪ),  ಕುಣಿಗಲ್ ಮತ್ತು ಬೆಂಗಳೂರು, ಕೇರಳದ ಬಲಿಯಪಟ್ಣಂ, ತಮಿಳುನಾಡಿನ ಕೊಯಮತ್ತೂರು ಮತ್ತಿತರೆಡೆ ಲೌಭ್ಯವಿದೆ. (ಅಂತರ್ಜಾಲದಲ್ಲಿ ಶೋಧಿಸಿದರೆ ಕ್ಲೇಬ್ಲಾಕ್ ಸಿಗುವ ತಾಣಗಳ ಸ್ಪಷ್ಟ ವಿಳಾಸ-ಬೆಲೆ ಪಟ್ಟಿಯೂ ಸಿಗುತ್ತದೆ)

ಗೋಡೆಯನ್ನು ಕಟ್ಟಲು ಮೂರು, ನಾಲ್ಕು, ಐದು, ಆರು ಮತ್ತು ಎಂಟು  ಇಂಚು ದಪ್ಪದ ಇಟ್ಟಿಗಳು ಇವೆ.

ಪಿಲ್ಲರ್ ನಿರ್ಮಿಸಲು ಆರು ಮತ್ತು ಎಂಟು ಇಂಚು ಗಾತ್ರದ ಬ್ಲಾಕ್ಸ್ ಇವೆ. ಇದರಲ್ಲಿ ಚಚ್ಚೌಕ,  ಹಾಗೂ ವೃತ್ತ ಆಕಾರದ ಬ್ಲಾಕ್‌ಗಳು ಲಭ್ಯವಿವೆ. ಈ ಬಗೆಯ ವಿನ್ಯಾಸ-ಅಳತೆಯವು ಪಿಲ್ಲರ್‌ಗೆ ಮಾತ್ರ ಬಳಸುವಂತಹವು. ಈ ಕ್ಲೇ ಬ್ಲಾಕ್ ಪಿಲ್ಲರ್ ಕಾಂಕ್ರಿಟ್ ಪಿಲ್ಲರ್‌ನಷ್ಟೇ ಸದೃಢ.

ಛಾವಣಿಗೆ ಫಿಲ್ಲರ್ಸ್‌ ಸ್ಲಾಬ್ ಬಳಸಲಾಗುತ್ತದೆ. ಇದಕ್ಕೆ ನಾಲ್ಕು ಇಂಚು  ಗಾತ್ರದ ಬ್ಲಾಕ್ಸ್ ಬಳಸಬಹುದು. ತಾರಸಿ ಸ್ವಲ್ಪ ತೆಳುವಾಗಿದ್ದರೂ ಸಮಸ್ಯೆಯಯೆನೂ ಇಲ್ಲ ಎನ್ನುವಂತಹ ಕಡೆಗಳಲ್ಲಿ ಮೂರು ಇಂಚಿನ ಬ್ಲಾಕ್ ಸಹ ಬಳಸಿ ತಾರಸಿ ನಿರ್ಮಿಸಬಹುದು. ಇದು ಒಟ್ಟಾರೆ ಕಡಿಮೆ ವೆಚ್ಚದ್ದಾಗಿದೆ.

ಛಾವಣಿಯೇನಾದರೂ ತುಂಬಾ ವಿಸ್ತಾರವಾಗಿರುವಂತಹುದಾದರೆ ಆರು ಇಂಚು ದಪ್ಪದ ಬ್ಲಾಕ್ ಬಳಸಬೇಕು. ಏಕೆಂದರೆ ವಿಸ್ತಾರ ಹೆಚ್ಚಿದಷ್ಟೂ ತಾರಸಿಯ ಭಾರವೂ ಹೆಚ್ಚುತ್ತದೆ. ಆಗ ತಾರಸಿ ತೆಳುವಾದುದಾಗಿದ್ದರೆ ಮಧ್ಯದಲ್ಲಿ ಬಾಗಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ವಿಸ್ತಾರವಾದ ತಾರಸಿಗೆ ಆರು ಇಂಚಿನ ಬ್ಲಾಕ್ಸ್ ಅಗತ್ಯ.

ಸೆಟ್ರಿಂಗ್ ಇಲ್ಲದೆ ತಾರಸಿ ಹಾಕುವ ವಿಧಾನದಲ್ಲಿ `ಛಾನಲ್ ರೂಫ್ ವಿಥೌಟ್ ಷಟರಿಂಗ್~ ತಾಂತ್ರಿಕತೆ ಬಳಕೆಯಾಗುತ್ತದೆ.

ಕಲ್ಲಿನ ತಳಪಾಯ
ಕ್ಲೇಬ್ಲಾಕ್‌ನಿಂದ ಕಟ್ಟುವ ಮನೆಗೆ ಸಾಂಪ್ರದಾಯಿಕ ಶೈಲಿಯ ತಳಪಾಯವೇ ಸಾಕು. ಇಲ್ಲಿ ಕಾಂಕ್ರೀಟ್ ಚೌಕಟ್ಟಿನ ದುಬಾರಿ ಅಡಿಪಾಯದ ಅಗತ್ಯ ಇರುವುದಿಲ್ಲ.  ಹಾಗಾಗಿ ಕ್ಲೇಬ್ಲಾಕ್ಸ್ ಗೋಡೆಗಳಿಗೆ ಆಧಾರವಾಗಿ ಮಾಮೂಲಿಯದೇ ಆದ ಸೈಜುಗಲ್ಲಿನ ಬುನಾದಿಯನ್ನೇ ನಿರ್ಮಿಸಬೇಕು.

ಆದರೆ, ಈ ಕ್ಲೇಬ್ಲಾಕ್ಸ್ ಕಟ್ಟಡದಲ್ಲಿಯೂ ಕೆಲವೆಡೆ ಸಣ್ಣ ಮಟ್ಟಿಗಾದರೂ ಕಾಂಕ್ರಿಟ್, ಮಾಮೂಲಿ ಇಟ್ಟಿಗೆ ಬಳಕೆ ಅನಿವಾರ್ಯ.

ಕ್ಲೇಬ್ಲಾಕ್‌ನಿಂದ ಮನೆಯ ತಾರಸಿಗೆ ಆಧಾರ ಕಲ್ಪಿಸಲು ಪಿಲ್ಲರ್ (ಕಂಬ) ನಿರ್ಮಿಸಿಕೊಳ್ಳಬಹುದಾದರೂ ತಾರಸಿಗೆ ಬೀಮ್ ಅಗತ್ಯವಿರುವೆಡೆ ಕಾಂಕ್ರೀಟ್ ತೊಲೆಗಳನ್ನು ನಿರ್ಮಿಸಿಕೊಳ್ಳಲೇಬೇಕು.

ಛಾವಣಿಯನ್ನು ಸಂಪೂರ್ಣವಾಗಿ ಕ್ಲೇ ಬ್ಲಾಕ್ಸ್‌ನಿಂದಲೇ ನಿರ್ಮಿಸಬಹುದು. ಆದರೆ ಛಾವಣಿಗೆ ಈ ಕ್ಲೇಬ್ಲಾಕ್ಸ್  ಜೋಡಿಸುವಾಗ ಮಾತ್ರ ಅಲ್ಪ ಪ್ರಮಾಣದಲ್ಲಿ ಕಾಂಕ್ರೀಟ್ ಬಳಸಬೇಕಾಗುತ್ತದೆ. (ಆದರೆ, ಒಟ್ಟು ತಾರಸಿಗೆ ಶೇ 10ರಷ್ಟು ಕಾಂಕ್ರೀಟ್ ಬಳಕೆ).

ಈ ಕ್ಲೇಬ್ಲಾಕ್‌ಗಳ ಪಾರ್ಶ್ವವನ್ನು ತಿರುಗಿಸಿ ಕಿಂಡಿಯಿರುವ ಭಾಗವನ್ನು ತಾರಸಿಗಾದಲ್ಲಿ ಮೇಲೆ ಮುಖ ಮಾಡುವಂತೆ, ಗೋಡೆಗಾದರೆ ಪಕ್ಕಕ್ಕೆ ತಿರುಗಿಸಿ ಜೋಡಿಸಿದರೆ ಸೂರ್ಯನ ಬೆಳಕು ಮನೆಯೊಳಕ್ಕೆ ಸರಾಗವಾಗಿ ಬರುವಂತೆ ಮಾಡಿಕೊಳ್ಳಬಹುದು.

ಹೀಗೆ ಮಾಡಿದಾಗ ಮಳೆಗಾಲದಲ್ಲಿ ನೀರು ಬರುವುದನ್ನು ತಡೆಯಲು ಈ ಮೇಲ್ಮುಖವಾಗಿ ಜೋಡಿಸಿದ ಕ್ಲೇಬ್ಲಾಕ್ಸ್ ಮೇಲೆ ಮುಚ್ಚುವಂತೆ ಗಾಜು ಹೊದೆಸುವುದು ಅಗತ್ಯ. ಇದು ಗಾಳಿಗೆ ತಡೆಯಾದರೂ ಬೆಳಕು ಒಳಕ್ಕೆ ಬರಲು ಅನುಕೂಲಕಾರಿ.

ಎಲ್ಲಿ ಮರದ ಕಿಟಕಿ ವೆಚ್ಚ ತಗ್ಗಿಸಬೇಕು. ಆದರೆ ಸಣ್ಣಗೆ ಗಾಳಿ ಮನೆಯೊಳಕ್ಕೆ ಬರುವಂತಿರಬೇಕು ಎನಿಸುತ್ತದೆಯೋ ಅಲ್ಲಿ (ಜಾಲಿ ವರ್ಕ್) ಕ್ಲೇ ಜಾಲಿ ಬಾಕ್ಸ್‌ಗಳನ್ನು ಬಳಸಿ ಬೆಳಕಿಂಡಿಗಳನ್ನು ಮಾಡಿಕೊಳ್ಳಬಹುದು.

ಇದರಿಂದ ಅನಗತ್ಯವಾದ ಕಿಟಕಿಗಳ ಸಂಖ್ಯೆ ಕಡಿಮೆಯಾಗುತ್ತದೆ. ವೆಚ್ಚವೂ ತಗ್ಗುತ್ತದೆ.
ಪ್ರತ್ಯೇಕಿಸುವ ಗೋಡೆಗಳಿಗೂ ಈ ಕ್ಲೇಬ್ಲಾಕ್ ಬಳಸುವುದು ಬಹಳ ಉತ್ತಮ. ಇಲ್ಲಿ ಒಳಾಂಗಣದಲ್ಲಿ ಜಾಗವೂ ಉಳಿಯುತ್ತದೆ, ಪ್ಲಾಸ್ಟರಿಂಗ್, ಪೇಂಟಿಂಗ್ ವೆಚ್ಚವೂ ತಗ್ಗುತ್ತದೆ.

ನೆಲ ಅಂತಸ್ತಿನ ತಾರಸಿಗೆ ಕ್ಲೇ ಬ್ಲಾಕ್ಸ್ ಬಳಸಿದಲ್ಲಿ ಮೊದಲ ಮಹಡಿಯ ಫ್ಲೋರಿಂಗ್ ದುಡ್ಡು ಉಳಿದಂತೆಯೇ ಸರಿ. ಏಕೆಂದರೆ ಎರಡೂ ಬದಿ ವಿಶೇಷ ವಿನ್ಯಾಸದ ಅಚ್ಚಿನಲ್ಲಿ ತಯಾರಾಗಿ ಬರುವ ಕ್ಲೇಬ್ಲಾಕ್ಸ್ ಮೊದಲ ಮಹಡಿಯಲ್ಲಿ ಉತ್ತಮ ಫ್ಲೋರಿಂಗ್ ಆಗಿರುತ್ತದೆ.

ಕ್ಲೇಬ್ಲಾಕ್ಸ್ ಗೋಡೆ ಮತ್ತು ನೆಲ ಇಡೀ ಮನೆಗೆ ವಿಶೇಷ ಮೆರಗು ನೀಡುತ್ತದೆ. ಹಿಂದೆ ರೆಡ್ ಆಕ್ಸೈಡ್‌ನಿಂದ ಸಾರಿಸಿ ಮಾಡಿದ ಮನೆಯ ನೆಲದಂತೆಯೇ ಸಾಂಪ್ರದಾಯಿಕ ನೋಟ ತರುತ್ತದೆ. ಈ ಕಡುಗೆಂಪು ನೆಲದ ಮೇಲೆ ಜಾನಪದ ಶೈಲಿಯ `ಹಸೆಚಿತ್ರ~ವನ್ನೋ, `ವರ್ಲಿ ಕಲೆ~ಯ ಚಿತ್ರಗಳನ್ನೋ ಬರೆಸಿದರೆ ಅದರ ಸೊಬಗೇ ಬೇರೆ ಬಗೆಯದು. ಅದರ ಅಂದ-ಚೆಂದವನ್ನು ನಿಮ್ಮ ಮನೆಗೆ ಬಂದ ಅತಿಥಿಗಳು ನೀಡುವ ಪ್ರಶಂಸೆಯಿಂದಲೇ ಅರ್ಥ ಮಾಡಿಕೊಳ್ಳಬಹುದು.

ಒಟ್ಟಾರೆಯಾಗಿ ಹೇಳುವುದಾದರೆ ಕ್ಲೇಬ್ಲಾಕ್ಸ್‌ನಿಂದ ಇಡೀ ಮನೆ ನಿರ್ಮಿಸಿದರೆ ಹಲವು ಅನುಕೂಲಗಳಿವೆ. ಅಕ್ಕಪಕ್ಕದ ಕಾಂಕ್ರೀಟ್ ಮನೆಗಳಿಂದ ನಿಮ್ಮ ಮನೆ ಬಹಳ ಭಿನ್ನವಾಗಿ, ಸುಂದರವಾಗಿ ಕಾಣುತ್ತದೆ.

ಯಾವುದೇ ಏರ್‌ಕಂಡೀಷನರ್ ಯಂತ್ರಗಳ ಅಗತ್ಯವೂ ಇಲ್ಲದೆ ನಿಮ್ಮ ಮನೆಯ ಒಳಾಂಗಣವನ್ನು ಸರ್ವಋತುವಿನಲ್ಲೂ ತಂಪಾಗಿ ಇಡುತ್ತದೆ. ಸಿಮೆಂಟ್, ಕಬ್ಬಿಣ, ಬಣ್ಣದ ಬಳಕೆಯನ್ನು ಕಡಿಮೆ ಮಾಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಮನೆ ನಿರ್ಮಾಣದ ವೆಚ್ಚದಲ್ಲಿ ಶೇ 25-30ರಷ್ಟು `ಉಳಿತಾಯ~ವೂ ಆಗುತ್ತದೆ.

ಈ ಎಲ್ಲ ಅಂಶಗಳಿಗೂ ಉದಾಹರಣೆಯಾಗಿ ಇಲ್ಲಿ ಕೆಂಪು ಮಣ್ಣಿನ ಇಟ್ಟಿಗೆಗಳ (ಕ್ಲೇಬ್ಲಾಕ್ಸ್) ಕೆಲವು ಮನೆಗಳ ಚಿತ್ರಗಳನ್ನು ನೀಡಲಾಗಿದೆ. ಇವುಗಳಲ್ಲಿ ಕೆಲವು ಮನೆಗಳನ್ನು ಬೆಂಗಳೂರು ಸಂಜಯನಗರದ ಕಟ್ಟಡ ನಿರ್ಮಾಣಕಾರ ರಘು ಅವರು ವಿಶೇಷ ಮುತುವರ್ಜಿ ವಹಿಸಿ ನಿರ್ಮಿಸಿದ್ದಾರೆ.

ನೀವು  ್ಙ 10-20 ಲಕ್ಷದಲ್ಲಿ ಮನೆ ನಿರ್ಮಿಸಲು ಹೊರಟಿದ್ದರೆ, ಕನಿಷ್ಠ ್ಙ 3ರಿಂದ ್ಙ6 ಲಕ್ಷ ಉಳಿತಾಯವಾಗುತ್ತದೆ ಎನ್ನುವುದಾದರೆ ನೀವೂ ಏಕೆ `ಕ್ಲೇ ಬ್ಲಾಕ್ಸ್ ಮನೆ~ ಬಗ್ಗೆ ಆಲೋಚಿಸಬಾರದು.

ನಿಲ್ಲಿ...ಆಲೋಚಿಸಿ... ಮುಂದಡಿ ಇಡಿ!
(ರಾಧಾ ರವಣಂ ಮೊ; 9845393580)

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.