ADVERTISEMENT

ಫ್ಲಾಟ್ ಕೊಳ್ಳಲು ಇದು ಒಳ್ಳೆಯ ಸಮಯವೇ?

ಎಸ್.ಆರ್.ರಾಮಕೃಷ್ಣ
Published 17 ಮಾರ್ಚ್ 2013, 19:59 IST
Last Updated 17 ಮಾರ್ಚ್ 2013, 19:59 IST
ಫ್ಲಾಟ್ ಕೊಳ್ಳಲು ಇದು ಒಳ್ಳೆಯ ಸಮಯವೇ?
ಫ್ಲಾಟ್ ಕೊಳ್ಳಲು ಇದು ಒಳ್ಳೆಯ ಸಮಯವೇ?   

ರಿಯಲ್ ಎಸ್ಟೇಟ್ ಬಗ್ಗೆ ಅಷ್ಟು ಗೊತ್ತಿಲ್ಲದವರಿಗೆ ಇದು ಆಶ್ಚರ್ಯವಾಗಬಹುದು: ಬೆಂಗಳೂರಿನಲ್ಲಿ ಮೂರು ವರ್ಷದಿಂದ ಫ್ಲಾಟ್ ಮಾರಾಟ ಕುಂಟುತ್ತಿದೆ. ಒಟ್ಟು 81,900 ಫ್ಲಾಟ್ ನಿರ್ಮಾಣವಾಗಿದ್ದು, ಅದರಲ್ಲಿ 43,000 ಮಾರಾಟವಾಗದೇ ಉಳಿದಿದೆ.   

ಜೋನ್ಸ್ ಲಾಂಗ್ ಲಸಲ್ ಎಂಬ ದೊಡ್ಡ ಕನ್ಸಲ್ಟೆನ್ಸಿ ಸಂಸ್ಥೆ ಮಾಡಿರುವ ಅಂದಾಜು ಇದು. ಹಾಗಾದರೆ ಫ್ಲಾಟ್‌ಗಳ ಬೆಲೆ ಕಡಿಮೆಯಾಗಬೇಕಲ್ಲವೇ? ಮೊದಲಿನಷ್ಟೇ ದುಬಾರಿಯಾಗಿ ಏಕೆ ಉಳಿದಿವೆ? ಸಪ್ಲೈ ಹೆಚ್ಚಾಗಿ ಡಿಮ್ಯೋಂಡ್ ಕಡಿಮೆಯಾದಾಗ ಬೆಲೆ ಇಳಿಮುಖವಾಗುವುದು ಸಾಮಾನ್ಯ ಎಂದು ಹೇಳುತ್ತಾರಲ್ಲ. ಹಾಗೇಕೆ ಆಗುತ್ತಿಲ್ಲ?

ಅದೇ ಸಂಸ್ಥೆಯ ಪ್ರಕಾರ 2010ರಲ್ಲಿ ಕಟ್ಟಿದ ಮನೆಗಳಲ್ಲಿ ಶೇಕಡ 38ರಷ್ಟು ಖಾಲಿ ಉಳಿದಿದ್ದವು. ಈಗ ಆ ಸಂಖ್ಯೆ 52ಕ್ಕೆ ಏರಿದೆ. ಆದರೆ ಇದು ಯಾರನ್ನೂ ಹೆಜ್ಜೆ ಹಿಂದಿಡುವಂತೆ ಮಾಡಿಲ್ಲ. ಎಲ್ಲೆಲ್ಲೂ ಹೊಸ ಪ್ರಾಜೆಕ್ಟ್‌ಗಳು ಏಳುತ್ತಿವೆ. ವ್ಯಾಪಾರ ಕಡಿಮೆಯಾದ ಕೂಡಲೇ ಬೆಲೆ ಕಡಿಮೆ ಮಾಡಬೇಕು ಎಂಬುದನ್ನು ಬಿಲ್ಡರ್‌ಗಳು ಒಪ್ಪುವುದಿಲ್ಲ. ಅವರು ಹೇಳುವಂತೆ 2010ರಿಂದ ಈಚೆಗೆ ಮನೆ, ನಿವೇಶನದ ಬೆಲೆ ವರ್ಷದಿಂದ ವರ್ಷಕ್ಕೆ 15ರಿಂದ 35ರಷ್ಟು ಏರುತ್ತಲೇ ಇದೆ. 

ಬೆಂಗಳೂರಿನಲ್ಲಿ ಮನೆ ಕೊಳ್ಳುವುದು ಎಷ್ಟು ಕಷ್ಟ ಎಂದು ಮಧ್ಯಮ ವರ್ಗದವರಿಗೆ ಗೊತ್ತು. ಬಡವರಿಗೆ ಈ ಸಮಸ್ಯೆ ಇನ್ನೂ ದೊಡ್ಡದು. ನಿವೇಶನ, ಮನೆ ಹಂಚುವ ಕೆಲಸವನ್ನು ಸರ್ಕಾರ ಮಾಡುವುದನ್ನು ನಿಲ್ಲಿಸಿ, ಎಲ್ಲವನ್ನೂ ಖಾಸಗಿಯವರ ಕೈಗೆ ಕೊಟ್ಟುಬಿಟ್ಟಿದೆ. ಐದು ವರ್ಷ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಒಂದೂ ಸೈಟ್ ಹಂಚಿಲ್ಲ. ರಾಜಕಾರಣಿಗಳಿಗೆ ಸೂರಿನ ವ್ಯಾಪಾರದ ಖಾಸಗೀಕರಣದಲ್ಲಿ ಆಸಕ್ತಿ, ಲಾಭವಿದೆ ಎಂದು ಬೇರೆ ಹೇಳಬೇಕಾಗಿಲ್ಲ.

ಬೆಂಗಳೂರಿನ ಜನಸಂಖ್ಯೆ ಒಂದು ಕೋಟಿ ದಾಟಿದೆ. ಸಂಬಳಕ್ಕೆ ಕೆಲಸ ಮಾಡುವವರು ದಶಕಗಳಿಂದ ಮನೆ, ಸೈಟ್ ಕೊಳ್ಳಲು ಹೆಣಗಾಡುತ್ತಿರುತ್ತಾರೆ. (ಲಂಚ ತಿನ್ನುವವರ ಕಷ್ಟವೇ ಬೇರೆ: ಸೈಟು, ಮನೆ ಮಾಡಿದಷ್ಟೂ ಕಡಿಮೆಯಾಯಿತು ಎಂದು ಪಾಪ ಕೊರಗುತ್ತಲೇ ಇರುತ್ತಾರೆ!). ಸೂರಿನ ಅಗತ್ಯ ಮೊದಲಿಗಿಂತಲೂ ಹೆಚ್ಚಾಗಿಯೇ ಇದೆ. ಬೆಂಗಳೂರಿನ ಶೇ 60ರಷ್ಟು ಜನ ಒಂದು ರೂಮಿನ ಮನೆಗಳಲ್ಲಿ ವಾಸ ಮಾಡುತ್ತಾರೆ ಎಂದು ಎಲ್ಲೋ ಓದಿದ ನೆನಪು. ಆದರೂ ಮನೆಗಳು ಖಾಲಿಯಾಗಿ ಉಳಿದಿವೆ.

ಬೆಂಗಳೂರಿನಲ್ಲಿ ಹೆಚ್ಚು ನಿರ್ಮಾಣವಾಗುತ್ತಿರುವುದು ರೂ40 ಲಕ್ಷದಿಂದರೂ 80 ಲಕ್ಷದ ಶ್ರೇಣಿಯಲ್ಲಿರುವ ಫ್ಲಾಟ್‌ಗಳು. ಇದಕ್ಕೆ ಕಾರಣ ಕೊಳ್ಳುವವರ ವರಮಾನದ ಅಂದಾಜು. ಸಾಫ್ಟ್‌ವೇರ್ ವಲಯ ಹೇಗೆ ನಡೆಯುತ್ತಿದೆ, ಅಲ್ಲಿ ಕೆಲಸ ಮಾಡುವವರಿಗೆ ಎಷ್ಟು ಸಂಬಳ, ಭತ್ಯೆ ಏರಬಹುದು, ಜಾಗತಿಕವಾಗಿ ಏನಾಗುತ್ತಿದೆ ಎಂದು ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿಗಳು ನೋಡುತ್ತಿರುತ್ತಾರೆ. ಆ ವಲಯ ಚೆನ್ನಾಗಿದ್ದರೆ ಇವರ ವ್ಯಾಪಾರವೂ ಚೆನ್ನಾಗಿಯೇ ಇರುತ್ತದೆ ಎಂದು ಧೈರ್ಯ.

`ಅಫೋರ್ಡಬಲ್ ಹೌಸಿಂಗ್' ಎಂದು ಕರೆಸಿಕೊಳ್ಳುವ `ಕೈಗೆಟುಕುವ ಮನೆಗಳು'ರೂ5 ಲಕ್ಷದಿಂದ ಮೇಲ್ಪಟ್ಟುರೂ20 ಲಕ್ಷದವರೆಗೂ ಇರುತ್ತವೆ. ಇವು ಬೇಗ ಮಾರಾಟವಾಗುತ್ತಿರುವಂತೆ ಕಾಣುತ್ತದೆ. ಇಂಥ ಯೋಜನೆಗಳಲ್ಲಿನ ಲಾಭಾಂಶ ಕಡಿಮೆ ಎಂದು ನಿರ್ಮಾಣ ಸಂಸ್ಥೆಗಳು ಗೊಣಗಿದರೂ, ಬಂಡವಾಳವನ್ನು ಬೇಗ ಹಿಂತಿರುಗಿಸಿ, ಒಂದಷ್ಟು ಲಾಭವನ್ನೂ ತರುತ್ತವೆ ಎಂಬುದನ್ನು ಕೆಲವರು ಕಂಡುಕೊಂಡಿದ್ದಾರೆ.   

ಹಾಗಾದರೆ ಕೊಳ್ಳುವವರಿಗೆ ಇದು ಒಳ್ಳೆಯ ಕಾಲವೇ? ಇನ್‌ವೆಸ್ಟ್‌ಮೆಂಟ್ ಕನ್ಸಲ್ಟೆಂಟ್ ಶ್ರೀಕಲ ಭಾಷ್ಯಂ ಹೇಳುವಂತೆ ಇಂದು ಸೈಟ್ ಕೊಳ್ಳುವುದಕ್ಕಿಂತ ಫ್ಲಾಟ್ ಕೊಳ್ಳುವುದು ಕ್ಷೇಮ ಎಂದು ಜನ ತೀರ್ಮಾನಿಸಿದ್ದಾರೆ. ಈಚಿನ ವರ್ಷಗಳಲ್ಲಿ ಸೈಟ್ ದಾಖಲಾತಿ ವಿಷಯದಲ್ಲಿ ಮೋಸಗಳು ವಿಪರೀತ ನಡೆದು, ಆ ದಿಕ್ಕಿನಲ್ಲಿ ತಲೆ ಹಾಕಿ ಮಲಗುವುದೂ ಬೇಡ ಎಂದು ಮಧ್ಯಮವರ್ಗದ ಹಲವರು ನಿರ್ಧರಿಸಿಬಿಟ್ಟಿದ್ದಾರೆ. ರಿಯಲ್ ಎಸ್ಟೇಟ್ ಬೆಲೆಗಳು ದಿಢೀರ್ ಬೀಳಬಹುದು ಎಂದು ಮ್ಯೋಕ್ರೋ ಎಕನಾಮಿಕ್ಸ್ ತಜ್ಞರು ಆಗಾಗ ಹೇಳುತ್ತಿರುತ್ತಾರೆ.

ಶ್ರೀಕಲ ಅವರ ಗ್ರಹಿಕೆ: ಬೆಂಗಳೂರು ಉದ್ಯೋಗ ಉತ್ಪತ್ತಿಯಾಗುವ ಕೇಂದ್ರವಾಗಿರುವವರೆಗೂ ಮನೆ ಖರೀದಿಗೆ ದುಡ್ಡು ಹಾಕಿದವರಿಗೆ ಎಲ್ಲ ಕೊಚ್ಚಿಕೊಂಡು ಹೋಗುತ್ತದೆ ಎಂಬ ಭಯವಿರಬೇಕಾಗಿಲ್ಲ. ಅಮೆರಿಕಾದ ಅರ್ಥಿಕ ಹಿಂತೆಗೆತದ ಸಮಯ ಆದ ರಿಯಲ್ ಎಸ್ಟೇಟ್ ಕ್ರಾಶ್ ರೀತಿಯ ಬೆಳವಣಿಗೆ ಇಲ್ಲಿ ಈವರೆಗೂ ಆಗಿಲ್ಲ. ರಿಯಲ್ ಎಸ್ಟೇಟ್ ತಜ್ಞರೊಬ್ಬರು ಹೇಳುವಂತೆ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಬಿಲ್ಡರ್‌ಗಳು ಬೆಲೆ ಹೆಚ್ಚು ಹೇಳಿದರೂ, ಕೇಳಿದರೆ ರಿಯಾಯಿತಿ ಕೊಡುವ ಸಾಧ್ಯತೆ ಇದೆ. ಅವರು ಬ್ಯಾಂಕ್ ಸಾಲ ಪಡೆದಿರುತ್ತಾರೆ.

ವಿಳಂಬವಾದರೆ ಅವರಿಗೆ ಕಷ್ಟವಾಗುತ್ತದೆ. ದೊಡ್ಡ ಪ್ರಮಾಣದ, ಬ್ರಾಂಡ್ ಆಗಿ ಹೆಸರುಮಾಡಿರುವ ಬಿಲ್ಡರ್‌ಗಳು ಮಾರಾಟ ತಡವಾದರೂ ಪರವಾಗಿಲ್ಲ ಎಂಬ ಧೋರಣೆಯಲ್ಲಿರುತ್ತಾರೆ. ಖಾಸಗಿ ವ್ಯಕ್ತಿ, ಹೂಡಿಕೆದಾರ ಸಂಸ್ಥೆಗಳಿಂದ ಬಂಡವಾಳ ಪಡೆಯುವುದರಿಂದ ಬಡ್ಡಿ ಏರಿಕೆಯ ಚಿಂತೆ ಅಷ್ಟಾಗಿ ಅವರನ್ನು ಕಾಡುವುದಿಲ್ಲ.

ADVERTISEMENT

ಮತ್ತೊಂದು ಸತ್ಯ ಅಂದರೆ ರಿಯಲ್ ಎಸ್ಟೇಟ್ ವ್ಯಾಪಾರದಲ್ಲಿ ಕಪ್ಪು ಹಣ, ಲಾಭಾಂಶ ಎಷ್ಟಿರುತ್ತದೆ ಅಂದರೆ ಒಂದೆರಡು ವರ್ಷ ದುಡ್ಡು ಬರದಿದ್ದರೂ ಎಷ್ಟೋ ಬಿಲ್ಡರ್‌ಗಳು ಆತಂಕ ಪಡುವುದಿಲ್ಲ. 

ತಜ್ಞರು ಹೇಳುತ್ತಿರುವುದೇನು?
ಕಟ್ಟಿರುವ ಮನೆಗಳು ಹೆಚ್ಚಾಗಿರುವುದರಿಂದ ಸಣ್ಣ ಹಾಗೂ ಮಧ್ಯಮ ಮಾರಾಟಗಾರರಲ್ಲಿ ಚೌಕಾಸಿ ಮಾಡಿ ಒಳ್ಳೆಯ ಬೆಲೆ ಪಡೆಯುವ ಅವಕಾಶ ಇಂದು ಕೊಳ್ಳುವವರಿಗೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.