ADVERTISEMENT

ಬೆಂಗಳೂರಿನ ಕ್ಯಾಲೆಂಡರ್ ಕಥೆ

ಎಸ್.ಆರ್.ರಾಮಕೃಷ್ಣ
Published 30 ಡಿಸೆಂಬರ್ 2012, 19:59 IST
Last Updated 30 ಡಿಸೆಂಬರ್ 2012, 19:59 IST

ಹಲವರಿಗೆ ಇದು ಕ್ಯಾಲೆಂಡರ್ ಕೊಳ್ಳುವ ಸಮಯ. ಕ್ಯಾಲೆಂಡರ್ ಕೊಳ್ಳುವುದರಲ್ಲೂ ಒಂದೊಂದು ಸಮುದಾಯ ಒಂದೊಂದು ರೀತಿಯ ಅಭಿರುಚಿ ಬೆಳೆಸಿಕೊಂಡಿರುತ್ತದೆ. ತಮಿಳರಿಗೆ ಮುರಗನ್ ಚಿತ್ರ ಇರುವ, ದಿನಕ್ಕೊಂದು ಹಾಳೆ ಹರಿಯುವ ಕ್ಯಾಲೆಂಡರ್ ಇಷ್ಟ. ಕನ್ನಡಿಗರು ತಿಂಗಳಿಗೊಂದು ಬಾರಿ ಪುಟ ತಿರುವುವ ವಿನ್ಯಾಸದ ಕ್ಯಾಲೆಂಡರ್ ಇಷ್ಟ ಪಡುತ್ತಾರೆ. ಮರಾಠಿಗರು ಬಣ್ಣ ಬಣ್ಣದ, ಲೇಖನಗಳು ತುಂಬಿರುವ, 'ಕಾಲನಿರ್ಣಯ'ದಂಥ ಸಂಸ್ಥೆಗಳ ಕ್ಯಾಲೆಂಡರ್ ಹೆಚ್ಚಾಗಿ ಖರೀದಿಸುತ್ತಾರೆ.

 
ಬೆಂಗಳೂರು ಪ್ರೆಸ್ ಹೊರತರುವ ಕ್ಯಾಲೆಂಡರ್ ತುಂಬ ಜನಪ್ರಿಯವಾಗಿದೆ. `ಕಾಂಗ್ರೆಸ್ ಕಡ್ಲೆಕಾಯಿ' ಥರ ಈ ಬೆಂಗಳೂರು ಪ್ರೆಸ್ ಕ್ಯಾಲೆಂಡರ್ ಕೂಡ ಒಂದು ಹಳೆಯ ಬೆಂಗಳೂರು ಸಂಪ್ರದಾಯವಾಗಿ ಬಿಟ್ಟಿದೆ. ತಲೆತಲೆಮಾರಿನಿಂದ ಎಷ್ಟೋ ಮನೆಗಳಲ್ಲಿ ಇದೇ ಕ್ಯಾಲೆಂಡರ್ ಕೊಳ್ಳುವ ರೂಢಿ. ಸುಮಾರು 12 ಲಕ್ಷ ಪ್ರತಿ ಮಾರಾಟವಾಗುವ ಈ ಕ್ಯಾಲೆಂಡರ್ ಡಿಸೈನ್‌ಗೆ ಕಾಪಿರೈಟ್ ದೊರಕಿದೆ.
 
ಎಷ್ಟೋ ಸಂಸ್ಥೆಗಳು ಕ್ಯಾಲೆಂಡರ್ ಮುದ್ರಿಸಿ ಬಿಟ್ಟಿಯಾಗಿ ಹಂಚುತ್ತವೆ. ಹಾಗಿದ್ದಾಗ ಜನ ಕ್ಯಾಲೆಂಡರ್ ಕೊಳ್ಳುವುದು ಯಾಕೆ? `ಬೆಂಗಳೂರು ಪ್ರೆಸ್', `ಪ್ರಜಾವಾಣಿ' ಹಾಗೂ ಕಾಲನಿರ್ಣಯದಂಥ ಕ್ಯಾಲೆಂಡರ್‌ಗಳು ಕ್ರಿಶ್ಚಿಯನ್ ಕ್ಯಾಲೆಂಡರ್ ಅಂಶಗಳೊಂದಿಗೆ ಹಿಂದೂ ಪಂಚಾಗದ ಅಂಶಗಳನ್ನು ಹೊಂದಿರುತ್ತವೆ. ಹಬ್ಬ ಹರಿದಿನ ಜಾತ್ರೆ ತೇರು ಎಲ್ಲವನ್ನೂ ಕನ್ನಡದ ಸಂದರ್ಭದಲ್ಲಿ ಕಂಡು ಪಟ್ಟಿ ಮಾಡುತ್ತವೆ. ಮನೆಯಲ್ಲಿ ಬೇರೆ ಕ್ಯಾಲೆಂಡರ್ ಇದ್ದರೂ ಇಂಥ ಕ್ಯಾಲೆಂಡರ್ ದುಡ್ಡು ಕೊಟ್ಟು ಖರೀದಿಸುವುದು ಈ ಕಾರಣಕ್ಕೆ.
 
ಆದರೆ ಈಚಿನ ವರ್ಷಗಳಲ್ಲಿ ಕಂಪ್ಯೂಟರ್, ಮೊಬೈಲ್ ಬಂದು ಹಲವರು ಮುದ್ರಿತ ಕ್ಯಾಲೆಂಡರ್ ನೋಡುವುದನ್ನೇ ಬಿಟ್ಟಿದ್ದಾರೆ. ಫೋನ್ ಮತ್ತು ಕಂಪ್ಯೂಟರ್‌ನಲ್ಲಿರುವ ಕ್ಯಾಲೆಂಡರ್ ನೋಡುವ ಇಂಥವರು ಹಬ್ಬ ಹರಿದಿನ ತಿಳಿಯಲು ಹಿರಿಯರನ್ನು ಕೇಳುತ್ತಾರೆ. ಇಂಥ ಸಮಯದಲ್ಲಿ ಬೆಂಗಳೂರು ಪ್ರೆಸ್ ಒಂದು ಕಂಪ್ಯೂಟರ್ ಮತ್ತು ಫೋನ್ ತಂತ್ರಾಂಶ ಬಿಡುಗಡೆ ಮಾಡುತ್ತಿದೆ. ಉಚಿತವಾದ ಈ ಅಪ್ಲಿಕೇಷನ್ ಬೆಂಗಳೂರು ಪ್ರೆಸ್‌ನ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಬಹುದು. 
 
ಎಷ್ಟೋ ಮನೆಗಳಲ್ಲಿ, ಅದರಲ್ಲೂ ಅಪಾರ್ಟ್‌ಮೆಂಟ್‌ಗಳಲ್ಲಿ, ಇಂದು ಮೊಳೆ ಹೊಡೆಯಲು ಬಿಡುವುದಿಲ್ಲ. ಡ್ರಾಯಿಂಗ್ ರೂಂಗಳಲ್ಲಿ ಕ್ಯಾಲೆಂಡರ್ ತೂಗಿ ಹಾಕುವ ರೂಢಿ ಕಡಿಮೆಯಾಗುತ್ತಾ ಬಂದಿದೆ. ಆದರೆ ದೇವರ ಮನೆಯಲ್ಲೋ, ಅಜ್ಜಿಯ ಕೋಣೆಯಲ್ಲೋ ಇನ್ನೂ ಮುದ್ರಿತ ಕ್ಯಾಲೆಂಡರ್‌ಗಳು ಉಳಿದುಕೊಂಡಿವೆ. 
 
ದಶಕಗಳಿಂದ ಕಣ್ಣಿಗೆ ಬೀಳುತ್ತಿದ್ದ ಕ್ಯಾಲೆಂಡರ್ ಅದಾದರೂ, ಅದಕ್ಕೆ 92 ವರ್ಷದ ಇತಿಹಾಸವಿದೆ ಎಂದು ನನಗೆ ಗೊತ್ತಿರಲಿಲ್ಲ. ಮೊನ್ನೆ ಬೆಂಗಳೂರು ಪ್ರೆಸ್‌ನ ಮ್ಯೋನೇಜಿಂಗ್ ಡೈರೆಕ್ಟರ್ ಅನಂತ ಅವರನ್ನು ಭೇಟಿ ಮಾಡುವ ಸಂದರ್ಭ ಒದಗಿ ಬಂತು. ಅವರ ಸಂಸ್ಥೆಯ ಕಥೆ ಸ್ವಾರಸ್ಯವಾಗಿದೆ.

ಬೆಂಗಳೂರು ಪ್ರೆಸ್ ಹುಟ್ಟಲು ಮುಖ್ಯ ಕಾರಣ ಹಳೆಯ ಮೈಸೂರಿನ ಮೂರು ಗಣ್ಯರು: ನಾಲ್ವಡಿ ಕೃಷ್ಣರಾಜ ಒಡೆಯರು, ಎಂ. ವಿಶ್ವೇಶ್ವರಯ್ಯ ಮತ್ತು
ದಿವಾನ್ ಹಯವದನ ರಾವ್. ಕೃಷ್ಣರಾಜ ಒಡೆಯರ ಲಗ್ನ ಪತ್ರಿಕೆ ಮಾಡಿಸಲು ಲಂಡನ್‌ಗೆ ಹೋಗಬೇಕಾಗಿ ಬಂದಾಗ ವಿಶ್ವೇಶ್ವರಯ್ಯ ಅವರು ಆಸ್ಥೆ ವಹಿಸಿ ಇಲ್ಲೇ ಯಾಕೆ ಒಂದು ಮುದ್ರಣಾಲಯ ಮಾಡಬಾರದು ಎಂದರಂತೆ. ಬೆಂಗಳೂರು ಪ್ರೆಸ್ ಸ್ಥಾಪನೆಯಾದಾಗ ಕಾವೇರಿ ಭವನದ ಎದುರಿಗಿರುವ ಮೈಸೂರ್ ಬ್ಯಾಂಕ್ ಕಟ್ಟಡದಲ್ಲಿ ಇತ್ತಂತೆ. ಈಗ ಮುದ್ರಣಾಲಯ ಚಾಮರಾಜಪೇಟೆಯ ಈದ್ಗಾ ಮೈದಾನದ ಹತ್ತಿರ ಇದೆ. 
 
ಅನಂತ ಅವರ ಸಂಸ್ಥೆ ಬಳಿಯಿದ್ದ ಸ್ಥಳದಲ್ಲಿ ಒಂದಷ್ಟು ಭಾಗವನ್ನು ಭಾರತೀಯ ವಿದ್ಯಾ ಭವನಕ್ಕೆ ಕೊಟ್ಟಿದೆ. ಅಲ್ಲಿ ಒಂದು ಶಾಲೆ ಪ್ರಾರಂಭವಾಗಿದೆ. ಕಟ್ಟಡದ ಕೆಲಸ ಇನ್ನೂ ನಡೆಯುತ್ತಿದೆ. ವಿಶಾಲ, ಆಧುನಿಕವಾಗಿ ಮೂಡಿ ಬರುತ್ತಿರುವ ಈ ಶಾಲೆ ಬೆಂಬಲಿಸುವುದರಿಂದ ಮುದ್ರಣಾಲಯ ಸಾಮಾಜಿಕ ಜವಾಬ್ದಾರಿಯನ್ನು ಪೂರೈಸುತ್ತಿದೆ ಎಂದು ಅನಂತ ಹೆಮ್ಮೆ ಪಡುತ್ತಾರೆ. ರಿಯಲ್ ಎಸ್ಟೇಟ್ ವಿಪರೀತ ತುಟ್ಟಿಯಾದ ಇಂಥ ಜಾಗದಲ್ಲಿ ಅನಂತ ಅವರ ಸಂಸ್ಥೆ ಹೀಗೆ ಮಾಡಿರುವುದು ಹೊಸ ಬೆಂಗಳೂರಿಗರನ್ನು ಚಕಿತಗೊಳಿಸಬಹುದು. 
 
ಬೆಂಗಳೂರು ಪ್ರೆಸ್‌ನ ಕೆಂಪು ವಿನ್ಯಾಸದ ಜನಪ್ರಿಯ ಕ್ಯಾಲೆಂಡರ್ ಕನ್ನಡದಲ್ಲಿ ಸುಮಾರು ಹತ್ತು ಲಕ್ಷ ಖರ್ಚಾಗುತ್ತದೆ. ಇಂಗ್ಲಿಷ್ ಆವೃತ್ತಿ ಎರಡು ಲಕ್ಷ ಹೋಗುತ್ತದೆ. ದಿನಕ್ಕೊಂದು ಹಾಳೆ ಹರಿಯುವ ಕ್ಯಾಲೆಂಡರ್ ಕೂಡ ಅವರು ತಯಾರಿಸುತ್ತಾರೆ. ಆದರೆ ಅದು ಸುಮಾರು 20,000 ಖರ್ಚಾಗುತ್ತದೆ. ಸಂಸ್ಥೆಯ ವರಮಾನದ ಕಾಲು ಭಾಗ ಕ್ಯಾಲೆಂಡರ್ ಮತ್ತು ಡೈರಿ ವ್ಯಾಪಾರದಿಂದಲೇ ಬರುತ್ತದಂತೆ. ಆಗಸ್ಟ್ ತಿಂಗಳಲ್ಲಿ ಕ್ಯಾಲೆಂಡರ್‌ಗಳ ಮುದ್ರಣಾಲಯ ಪ್ರಾರಂಭವಾಗುತ್ತದೆ. ನವೆಂಬರ್ ಹೊತ್ತಿಗೆ ಬಜಾರಿಗೆ ಬರುತ್ತವೆ.
 
ಅಲಸೂರಿನ ಒಂದು ಚಿಕ್ಕ ಅಂಗಡಿಯಲ್ಲಿ ರಾಣಿ ಮುತ್ತು (ತಮಿಳು) 500 ಪ್ರತಿ ಮಾರಾಟವಾಗುತ್ತದಂತೆ. ಆದರೆ ಎಷ್ಟೋ ತಮಿಳರು ಕನ್ನಡ ಸಂಪ್ರದಾಯಗಳನ್ನೂ ಅನುಸರಿಸುವುದರಿಂದ ಕರ್ನಾಟಕದ ಕ್ಯಾಲೆಂಡರ್‌ಗಳನ್ನೂ ಕೊಳ್ಳುತ್ತಾರೆ. ಅದಲ್ಲದೆ ಕನ್ನಡ ಓದಲು ಬಾರದ ಕನ್ನಡಿಗರೂ ಇರುವುದರಿಂದ ಎಷ್ಟೋ ಬೆಂಗಳೂರು ಮೂಲದ ಕ್ಯಾಲೆಂಡರ್‌ಗಳು ಇಂಗ್ಲಿಷಿನಲ್ಲೂ ಪ್ರಕಟವಾಗುತ್ತವೆ. ಆದರೆ ಇಂದಿಗೂ ಹೆಚ್ಚು ಮಾರಾಟವಾಗುವುದು ಕನ್ನಡ ಕ್ಯಾಲೆಂಡರ್‌ಗಳೇ. 
 
ಅನಂತ ಅವರ ಕಚೇರಿಯಲ್ಲಿ ಹಳೆಯ ಕ್ಯಾಲೆಂಡರ್‌ಗಳು ನೋಡಲು ಸಿಕ್ಕವು. ಇವು ಹಳೆ ಮೈಸೂರಿನ ಒಂದು ಯುಗವನ್ನೇ ನೆನಪಿಗೆ ತರುತ್ತವೆ. ಹಳೆಯ ಡೈರಿಗಳು ಟೆಲಿಗ್ರಾಂ ಆಫೀಸಿನ ಕೆಲಸದ ವೇಳೆಯನ್ನೂ ಸೇರಿ ಹಲವು ಉಪಯುಕ್ತ ವಿವರಗಳನ್ನು ಒದಗಿಸುತ್ತವೆ. ಸುಮಾರು 120 ಮಂದಿ ಕೆಲಸ ಮಾಡುವ ಅವರ ಸಂಸ್ಥೆ ಏಳು ಬೀಳುಗಳನ್ನು ಕಂಡಿದೆ. ಕ್ಯಾಲೆಂಡರ್ ಮತ್ತು ಡೈರಿಯಲ್ಲಿ ಕಾಣುವ ಟೆಕ್ಸ್ಟ್ ಒಟ್ಟುಗೂಡಿಸಲು ಇಬ್ಬರು ಸಂಪಾದಕರಿದ್ದಾರೆ. ಏಳೆಂಟು ಕಾಲಮಾನ ತಜ್ಞರಿಂದ ವಿವರಗಳನ್ನು ತರಿಸಿಕೊಳ್ಳುತ್ತಾರೆ. ಅವರು ಕೊಡುವ ವಿವರಗಳಲ್ಲಿ ವ್ಯತ್ಯಾಸ ಕಂಡು ಬಂದಾಗ ಯಾವುದು ಸರಿ ಎಂದು ತೀರ್ಮಾನಿಸಲು ಶ್ರಮಿಸುತ್ತಾರೆ. 
 
ಬೆಂಗಳೂರು ಮತ್ತು ಕರ್ನಾಟಕದಲ್ಲಿ ಮಾರಾಟವಾಗುವ ಶೇಕಡ 60ರಷ್ಟು ಕ್ಯಾಲೆಂಡರ್‌ಗಳು ಬೆಂಗಳೂರು ಪ್ರೆಸ್ ತಯಾರಿಸಿರುತ್ತದೆ ಎಂದು ಅನಂತ ಅಂದಾಜು ಮಾಡುತ್ತಾರೆ. 1950ರ ದಶಕದಲ್ಲಿ ಅನಂತ ಅವರ ತಂದೆ ರಾಮಣ್ಣನವರು ಈ ಮುದ್ರಣಾಲಯದಲ್ಲಿ ಹಣ ಹೂಡಿದಾಗ ಅವರ ಕುಟುಂಬದ ಕೈಗೆ ಸಂಸ್ಥೆ ಬಂತು. ಎಂಜಿನಿಯರ್ ಆದ ಅನಂತ ಅವರು ಇಲ್ಲಿಗೆ ಸುಮಾರು 20 ವರ್ಷಗಳ ಹಿಂದೆ ಬಂದು ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.
 
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.