ADVERTISEMENT

ಷೇರುಪೇಟೆ: ಹಲವು ವಿದ್ಯಮಾನ ಪ್ರಭಾವ

​ಪ್ರಜಾವಾಣಿ ವಾರ್ತೆ
Published 31 ಜುಲೈ 2016, 19:30 IST
Last Updated 31 ಜುಲೈ 2016, 19:30 IST
ಷೇರುಪೇಟೆ: ಹಲವು ವಿದ್ಯಮಾನ ಪ್ರಭಾವ
ಷೇರುಪೇಟೆ: ಹಲವು ವಿದ್ಯಮಾನ ಪ್ರಭಾವ   

ನವದೆಹಲಿ (ಪಿಟಿಐ): ತ್ರೈಮಾಸಿಕ ಫಲಿತಾಂಶ, ತಯಾರಿಕೆ ಮತ್ತು ಸೇವಾ ವಲಯದ ಪ್ರಗತಿ ಮತ್ತು ಜೂನ್‌ ತಿಂಗಳ ವಾಹನ ಮಾರಾಟದ ಅಂಕಿ–ಅಂಶ ಈ ವಾರದ ಷೇರುಪೇಟೆ ಮೇಲೆ ಪ್ರಭಾವ ಬೀರುವ ಪ್ರಮುಖ ಅಂಶಗಳಾಗಿವೆ.

ಎಚ್‌ಸಿಎಲ್‌ ಟೆಕ್ನಾಲಜೀಸ್‌, ಟೆಕ್‌ ಮಹೀಂದ್ರಾ, ಇಂಡಿಯನ್‌ ಬ್ಯಾಂಕ್‌, ಟಾಟಾ ಪವರ್‌ ಕಂಪೆನಿಗಳ ಮೊದಲ ತ್ರೈಮಾಸಿಕ ಫಲಿತಾಂಶ ಈ ವಾರ ಹೊರಬೀಳಲಿದೆ.ಬಹುನಿರೀಕ್ಷಿತ ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ ಮಸೂದೆ (ಜಿಎಸ್‌ಟಿ) ಜಾರಿಗೆ ಸಂಬಂಧಿಸಿದಂತೆ ಸಂಸತ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳೂ ಸಹ ಷೇರುಪೇಟೆಯ ಮೇಲೆ ಪ್ರಭಾವ ಬೀರಲಿವೆ.

ಮುಂಗಾರು ಮಳೆಯ ಪ್ರಭಾವ ಮತ್ತು ಜಾಗತಿಕ ಷೇರುಪೇಟೆಗಳಲ್ಲಿನ ಏರಿಳಿತವು ವಹಿವಾಟಿನ ಮೇಲೆ ಪ್ರಭಾವ ಬೀರಲಿವೆ ಎಂದು ಟ್ರೇಡ್‌ ಸ್ಮಾರ್ಟ್‌ ಆನ್‌ಲೈನ್‌ನ ಸ್ಥಾಪಕ ವಿಜಯ್‌ ಸಿಂಘಾನಿಯಾ ಹೇಳಿದ್ದಾರೆ.

ಕಂಪೆನಿಗಳ ತ್ರೈಮಾಸಿಕ ಸಾಧನೆ ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆ ಆಧಾರದ ಮೇಲೆ ಸೂಚ್ಯಂಕದ ಚಲನೆ ನಿರ್ಧಾರವಾಗಲಿದೆ ಎಂದು ಕ್ಯಾಪಿಟಲ್‌ ವಯಾ ಗ್ಲೋಬಲ್‌ ರಿಸರ್ಚ್‌ ಸಂಸ್ಥೆಯ ಸ್ಥಾಪಕ ರೋಹಿತ್‌ ಗಾಧಿಯಾ ಅಭಿಪ್ರಾಯಪಟ್ಟಿದ್ದಾರೆ.

ಇನ್ನು, ಸಹಜವಾಗಿಯೇ ಡಾಲರ್‌ ಎದುರು ರೂಪಾಯಿ ಮೌಲ್ಯ ವ್ಯತ್ಯಯ, ಕಚ್ಚಾ ತೈಲ ಬೆಲೆ ಏರಿಕೆಯೂ ಸೂಚ್ಯಂಕದ ಏರಿಳಿತದಲ್ಲಿ  ಪ್ರಮುಖ ಪಾತ್ರ ವಹಿಸಲಿವೆ.ಕಳೆದವಾರ ಬಿಎಸ್‌ಇ ಸೂಚ್ಯಂಕ 249 ಅಂಶ ಮತ್ತು ಎನ್‌ಎಸ್‌ಇ ನಿಫ್ಟಿ 97 ಅಂಶ ಏರಿಕೆ ಕಂಡಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.