ADVERTISEMENT

ಅಗಲಿದ ಅರ್ಧ ಶತಮಾನ ಬಳಿಕ ಚೆ ನೆನಪು

ಕ್ಯೂಬಾದ ಅಲೆಮಾರಿ ಹೋರಾಟಗಾರನ ಕೊನೆಯ ದಿನಗಳತ್ತ ಇಣುಕುನೋಟ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 19:30 IST
Last Updated 7 ನವೆಂಬರ್ 2017, 19:30 IST
ಅಗಲಿದ ಅರ್ಧ ಶತಮಾನ ಬಳಿಕ ಚೆ ನೆನಪು
ಅಗಲಿದ ಅರ್ಧ ಶತಮಾನ ಬಳಿಕ ಚೆ ನೆನಪು   

*ನಿಕೋಲಸ್ ಕೇಸಿ

ದಶಕಗಳಿಂದ ಅಂಗಡಿ ನೋಡಿಕೊಂಡು ದಣಿದಿರುವ ಇರ್ಮಾ ರೋಸೆಲ್ಸ್ ಒಂದು ಬೆಳಿಗ್ಗೆ ಹಳೆಯ ಫೋಟೊಗಳ ಪೆಟ್ಟಿಗೆ ತೆಗೆದು ಕೂತರು. 50 ವರ್ಷಗಳ ಹಿಂದೆ ಅಲ್ಲಿನ ಶಾಲೆಯಲ್ಲಿ ಗುಂಡೇಟಿನಿಂದ ಸತ್ತ ಆ ಅಪರಿಚಿತನ ಮುಖ ಮನಸ್ಸಿನಲ್ಲಿ ತೇಲಿಬಂತು.

ಉದ್ದ ಅಂಟು ಕೂದಲಿನ ಆ ವ್ಯಕ್ತಿಯ ಬಟ್ಟೆ ಕೊಳಕಾಗಿತ್ತು. ಅದು ಗ್ಯಾರೇಜಿನಲ್ಲಿ ಕೆಲಸ ಮಾಡುವ ಯಾರದ್ದೋ ಆಗಿರಬೇಕು. ಆಗಷ್ಟೇ ಆತನಿಗೆ ಆಕೆ ಒಂದು ಬಟ್ಟಲು ಸೂಪ್ ಕೊಟ್ಟಿದ್ದಳು. ಗುಂಡು ಹಾರಿತು, ಚೆ ಗುವೇರಾ ಸತ್ತು ಬಿದ್ದಿದ್ದ- ಇರ್ಮಾ ಅವರಿಗೆ ಅದು ಈಗಲೂ ನೆನಪಿದೆ.

ADVERTISEMENT

ಹುಟ್ಟಿದಾಗ ಅರ್ನೆಸ್ಟೊ ಎಂದು ನಾಮಕರಣಗೊಂಡಿದ್ದ, ಕ್ಯೂಬಾದಿಂದ ಕಾಂಗೊವರೆಗಿನ ಗೆರಿಲ್ಲಾ ಹೋರಾಟಗಾರರ ನಾಯಕನಾಗಿದ್ದ ಅರ್ಜೆಂಟೀನಾದ ಅಲೆಮಾರಿ ವೈದ್ಯ ಚೆ ಹತ್ಯೆಯಾಗಿ ಅರ್ಧ ಶತಮಾನವಾಯಿತು. ಈತ ಪಿಗ್ಸ್‌ ಕೊಲ್ಲಿಯ ಮೇಲಿನ ಅಮೆರಿಕದ ಆಕ್ರಮಣವನ್ನು ತಡೆದಿದ್ದ, ವಿಶ್ವಸಂಸ್ಥೆಯ ವೇದಿಕೆಯಲ್ಲಿ ನಿಂತು ಭಾಷಣ ಮಾಡಿದ್ದ ಮತ್ತು ಜಗತ್ತಿನ ಬಲಾಢ್ಯರಿಂದ ಶೋಷಣೆಗೆ ಒಳಗಾದವರೇ ಮುನ್ನಡೆಸುವ ಹೊಸ ಜಾಗತಿಕ ವ್ಯವಸ್ಥೆಯನ್ನು ಬೋಧಿಸಿದ್ದ.

ಸಾವಿನ ಬಳಿಕ ಆ ಅತುಲ್ಯ ಬದುಕನ್ನೂ ಮೀರಿ ನಿಂತಿತು ಆತನ ನೆನಪು. ಒರಟು ಗಡ್ಡ, ನಕ್ಷತ್ರಗಳ ಚಿತ್ರವಿದ್ದ ಆತನ ಬಂದೂಕು ಜಗತ್ತಿನೆಲ್ಲೆಡೆಯ, ವಿವಿಧ ತಲೆಮಾರುಗಳ ಭಾವುಕ ಕ್ರಾಂತಿಕಾರಿಗಳಿಗೆ ಸ್ಫೂರ್ತಿಯಾದವು. ಆ ಚಿತ್ರಗಳು ಕ್ರಾಂತಿಕಾರಿಗಳ ಅರಣ್ಯ ಶಿಬಿರಗಳಿಂದ ಹಿಡಿದು ಕಾಲೇಜು ಹಾಸ್ಟೆಲುಗಳ ಗೋಡೆಗಳನ್ನೂ ಅಲಂಕರಿಸಿದವು.

ಆ ದಿನಗಳಿಗೆ ಸಾಕ್ಷಿಯಾದ ಬೊಲಿವಿಯಾದ ಲಾ ಹಿಗುವೆರದ ಗ್ರಾಮಸ್ಥರು ಕಡಿಮೆ ಮಿಥ್ಯೆಯಿಂದ ಕೂಡಿದ ಕತೆ ಹೇಳುತ್ತಾರೆ. ಯಾರಿಗೂ ಬೇಡವಾಗಿದ್ದ ಈ ಬೆಟ್ಟಗಳಿಂದ ಕೂಡಿದ್ದ ಹಳ್ಳಿಗಾಡಿನಲ್ಲಿ ನಡೆದ ರಕ್ತಸಿಕ್ತ ಯುದ್ಧದ ಸಣ್ಣ ಅಧ್ಯಾಯವನ್ನು ಅವರು ನೆನಪಿಸಿಕೊಳ್ಳುತ್ತಾರೆ. ಈ ಪ್ರದೇಶ ಶೀತಲ ಸಮರದ ಯುದ್ಧಭೂಮಿಯಾದ ಬಗೆಯನ್ನು ಹೇಳುತ್ತಾರೆ. ಲ್ಯಾಟಿನ್ ಅಮೆರಿಕವು ಚೆಯ ಸಾವನ್ನು ನೆನಪಿಸಿಕೊಳ್ಳುತ್ತಿದೆ. ಜತೆಗೆ, ಈ ಪ್ರದೇಶದಲ್ಲಿ ಆತನಿಂದ ಸ್ಫೂರ್ತಿ ಪಡೆದ ಎಡಪಂಥೀಯ ಚಳವಳಿ ಅವಸಾನದ ಅಂಚಿನಲ್ಲಿದೆ.

ಕೊಲಂಬಿಯಾದ ರೆವಲ್ಯೂಷನರಿ ಆರ್ಮ್ಡ್‌ ಫೋರ್ಸಸ್ ಎಂಬ, ಈ ಪ್ರದೇಶದ ಅತ್ಯಂತ ದೊಡ್ಡ ಗೆರಿಲ್ಲಾ ಗುಂಪು ಈ ವರ್ಷ ಕಾಡಿನಿಂದ ಹೊರಗೆ ಬಂದು ಯುದ್ಧ ನಡೆಸಿ ಶಸ್ತ್ರಾಸ್ತ್ರ ಕೆಳಗಿಟ್ಟು ಶರಣಾಗಿದೆ. ಯುದ್ಧದಲ್ಲಿ ಯಾರೂ ಗೆಲ್ಲದಿದ್ದರೂ ಕೊಲಂಬಿಯಾ 2.2 ಲಕ್ಷ ಜನರನ್ನು ಕಳೆದುಕೊಂಡಿತು.

ವೆನೆಜುವೆಲಾದ ಅಧ್ಯಕ್ಷ ದಿವಂಗತ ಹ್ಯೂಗೊ ಷಾವೆಜ್ ಅವರು ರೂಪಿಸಿದ ಸಮಾಜವಾದಿ ಸಿದ್ಧಾಂತದಿಂದ ಸ್ಫೂರ್ತಿ ಪಡೆದಿದ್ದ ಚಳವಳಿಯಿಂದಾಗಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ಬಂದಿದೆ. ಆದರೆ ಹಸಿವು, ಅಶಾಂತಿ ಮತ್ತು ನಿರಂಕುಶಾಧಿಕಾರದಿಂದ ದೇಶ ನಲುಗಿದೆ.

ಚೆ ಹಾರಿಸಿದ್ದ ಕ್ರಾಂತಿಯ ಪತಾಕೆಯಡಿ ಇಷ್ಟೆಲ್ಲ ವರ್ಷ ಕ್ಯೂಬಾ ಹೆಮ್ಮೆಯಿಂದ ತಲೆ ಎತ್ತಿ ನಿಂತಿತ್ತು. ಆದರೆ ಈಗ ಅಮೆರಿಕದ ಜತೆ ವೈಷಮ್ಯ ತಗ್ಗಿದ್ದರೂ ಡೊನಾಲ್ಡ್ ಟ್ರಂಪ್ ಆಡಳಿತದಿಂದ ಆಗಬಹುದಾದ ಅನಿಶ್ಚಿತ ಸ್ಥಿತಿಯಿಂದ ಕಂಗೆಟ್ಟಿದೆ.

ಲ್ಯಾಟಿನ್ ಅಮೆರಿಕದಲ್ಲಿ ಎಡಪಂಥೀಯರ ಹಿಡಿತ ಬಿಗಿಯಾಗಿರುವ ಕೊನೆಯ ಪ್ರಜಾತಂತ್ರ ದೇಶ ಬೊಲಿವಿಯ. ಆದರೆ ಈಗಿನ ನಿರ್ವಾತ ಸ್ಥಿತಿಯಲ್ಲಿ ರಾಜಕೀಯ ಚಳವಳಿಗಳು ಬೆಳೆಯುವುದು ಸಾಧ್ಯವಿಲ್ಲ ಎಂದು ಅಲ್ಲಿನ ಮುಖಂಡರೊಬ್ಬರು ಇತ್ತೀಚೆಗೆ ಹೇಳಿದ್ದರು. ‘ಇತರ ಸ್ಥಳಗಳಲ್ಲಿ ಸಂಘರ್ಷಗಳು ಮತ್ತು ಗೆಲುವುಗಳು ಇಲ್ಲದಿದ್ದರೆ ಹೆಚ್ಚುಕಾಲ ನೀವು ಸುಭಿಕ್ಷವಾಗಿರುವುದು ಅಥವಾ ಸುಸ್ಥಿರವಾಗಿರುವುದು ಸಾಧ್ಯವಿಲ್ಲ’ ಎಂದು ಬೊಲಿವಿಯಾದ ಉಪಾಧ್ಯಕ್ಷ ಅಲ್ವಾರೊ ಗ್ರೇಸಿಯಾ ಲಿನೆರ ಹೇಳಿದ್ದಾರೆ.

ಚೆಯ ಜೀವನ ಚರಿತ್ರೆ ಬರೆದ ಮತ್ತು ಆತನ ಅಳಿದುಳಿದ ವಸ್ತುಗಳನ್ನು ಹುಡುಕುವಲ್ಲಿ ಮಹತ್ವದ ಪಾತ್ರ ವಹಿಸಿದ್ದ (1990ರ ದಶಕದವರೆಗೆ ಅವುಗಳನ್ನು ಸೈನಿಕರು ಅಡಗಿಸಿಟ್ಟಿದ್ದರು) ಜಾನ್ ಲೀ ಆಂಡರ್ಸನ್ ಪ್ರಕಾರ, ಚೆ ಚಿಂತನೆಗಳು ಮತ್ತು ಎಡಪಂಥ ಎಂದೂ ಇಷ್ಟು ದುರ್ಬಲವಾಗಿರಲಿಲ್ಲ.

‘ಆದರೆ ಚೆ ಸದಾ ಪರಿಶುದ್ಧವಾಗಿಯೇ ಉಳಿಯುತ್ತಾನೆ. ಸದಾಉರಿಯುವ ದೀಪ ಮತ್ತು ಸಂಕೇತವಾಗಿ ಆತ ಇರುತ್ತಾನೆ. ಭವಿಷ್ಯದಲ್ಲಿ ಇದಕ್ಕೆ ಏನಾಗಬಹುದು? ಚೆ ಬಂದು ಹೋಗುತ್ತಿರುತ್ತಾನೆ ಎಂದು ನನ್ನ ಮನಸ್ಸು ಹೇಳುತ್ತದೆ’ ಎಂದು ಜಾನ್ ಹೇಳುತ್ತಾರೆ. ಚೆ ಸಾಯುವುದಕ್ಕಿಂತ ಮೊದಲಿನ ವರ್ಷಗಳಲ್ಲಿ ಆತ ಎಲ್ಲಿರುತ್ತಿದ್ದ ಎಂಬುದೇ ಜಾಗತಿಕವಾಗಿ ನಿಗೂಢವಾದ ವಿಚಾರವಾಗಿತ್ತು.

ಕ್ಯೂಬಾದಲ್ಲಿ ಕಮ್ಯುನಿಸ್ಟ್ ಪಕ್ಷದ ಗೆಲುವಿನ ಬಳಿಕ ಸ್ವಲ್ಪಕಾಲ ಆತ ಬಂದೂಕು ದಳದ ನೇತೃತ್ವ ವಹಿಸಿದ್ದ. ದೇಶದ ಕೇಂದ್ರೀಯ ಬ್ಯಾಂಕ್‍ನ ಆಡಳಿತ ನೋಡಿಕೊಳ್ಳುತ್ತಿದ್ದ ಆತ 1965ರಲ್ಲಿ ಮಾಯವಾಗುತ್ತಾನೆ. ವಿದೇಶಗಳಲ್ಲಿ ಕ್ರಾಂತಿ ಸಂಘಟಿಸಲು ಆತನನ್ನು ಫಿಡೆಲ್ ಕ್ಯಾಸ್ಟ್ರೊ ಕಳುಹಿಸುತ್ತಾರೆ. ಕಾಂಗೊದ ವಿಫಲ ಕಾರ್ಯಾಚರಣೆಯಲ್ಲಿ ಆತ ಭಾಗಿಯಾಗುತ್ತಾನೆ. ಅಲ್ಲಿಂದ ಆತ ತಾಂಜಾನಿಯಾ ಮತ್ತು ಪ್ರೇಗ್‍ನ ಸುರಕ್ಷಿತ ತಾಣಗಳ ನಡುವೆ ಅಡ್ಡಾಡುತ್ತಿದ್ದ.

‘ಬಳಿಕ, ಆತನನ್ನು ಫಿಡೆಲ್ ಕೊಂದ ಎಂದು ಕೆಲವು ಜನರು ಮಾತನಾಡಿಕೊಳ್ಳುತ್ತಿದ್ದರು, ವಿಯೆಟ್ನಾಂನಲ್ಲಿದ್ದ ಚೆ, ಸ್ಯಾಂಟೊ ಡೊಮಿಂಗೊದಲ್ಲಿ ಮೃತಪಟ್ಟ ಎಂದು ಮತ್ತೆ ಕೆಲವರು ಹೇಳುತ್ತಿದ್ದರು’ ಎಂಬುದನ್ನು ಯುವಾನ್ ಕಾರ್ಲೊಸ್ ಸಾಲಜಾರ್ ನೆನಪಿಸಿಕೊಳ್ಳುತ್ತಾರೆ. ಬೊಲಿವಿಯಾದ ಪತ್ರಕರ್ತ ಯುವಾನ್‍ಗೆ 1967ರಲ್ಲಿ 21 ವರ್ಷ. ಆಗ ಅವರು ತಮ್ಮ ವೃತ್ತಿಜೀವನದ ಮೊದಲ ದೊಡ್ಡ ಸುದ್ದಿಯ ಬೆನ್ನುಬಿದ್ದಿದ್ದರು. ‘ಅವರು ಆತನನ್ನು ಅಲ್ಲಿಗೆ ಕಳುಹಿಸಿದರು, ಮತ್ತೆ ಬೇರೆಲ್ಲೋ ಕಳುಹಿಸಿದರು, ಆದರೆ ಆತ ಎಲ್ಲಿದ್ದ ಎಂಬುದು ಯಾರಿಗೂ ತಿಳಿದಿರಲಿಲ್ಲ’ ಎಂದು ಯುವಾನ್ ಹೇಳುತ್ತಾರೆ.

ಈ ಬಗ್ಗೆ ಮೊತ್ತ ಮೊದಲು ಮಾಹಿತಿ ಪಡೆದವರು ಬೊಲಿವಿಯಾದ ರಾಜಧಾನಿ ಲಾ ಪಾಜ್‍ನಲ್ಲಿ ಕಮ್ಯುನಿಸ್ಟ್ ಪಕ್ಷದ ಯುವ ನಾಯಕಿಯಾಗಿದ್ದ ಲೊಯೊಲಾ ಗಜ್‍ಮಾನ್. ಪೆರುಗ್ವೆಯ ಗಡಿಯಲ್ಲಿರುವ ಕ್ಯಾಮಿರಿಗೆ ಹೋಗುವಂತೆ ಒಂದು ದಿನ ಲೊಯೊಲಾಗೆ ಸಂದೇಶ ಬಂತು. ಅಲ್ಲಿ ಯಾವ ಸಭೆ ಇದೆ ಎಂಬ ಬಗ್ಗೆ ಅಲ್ಪಸ್ವಲ್ಪ ತಿಳಿವಳಿಕೆಯೂ ಇರಲಿಲ್ಲ ಎಂದು ಲೊಯೊಲಾ ಹೇಳುತ್ತಾರೆ.

ಲೊಯೊಲಾಗೆ ಈಗ 75 ವರ್ಷ. 1967ರ ಜನವರಿಯ ಒಂದು ಫೋಟೊದಲ್ಲಿ ಅವರು ಯೌವನ ತುಂಬಿ ತುಳುಕುತ್ತಿದ್ದ ಯುವತಿ. ಅರಣ್ಯದ ಶಿಬಿರವೊಂದರಲ್ಲಿ ಮರದ ಬೊಡ್ಡೆಯ ಮೇಲೆ ತಲೆಗೆ ಹ್ಯಾಟು ತೊಟ್ಟು ಚೆಯ ಪಕ್ಕ ಕುಳಿತಿದ್ದ ಫೋಟೊ ಅದು.

‘ಎರಡು ಅಥವಾ ಮೂರು ವಿಯೆಟ್ನಾಂಗಳನ್ನು ಸೃಷ್ಟಿಸಬೇಕು ಎಂದು ಆಗ ಅವರು ಬಯಸಿದ್ದರು’ ಎಂದು ಲೊಯೊಲಾ ನೆನಪಿಸಿಕೊಳ್ಳುತ್ತಾರೆ. ವಿಯೆಟ್ನಾಂ, ಹತ್ತಿರದ ಅರ್ಜೆಂಟೀನಾ ಮತ್ತು ಪೆರು ದೇಶಗಳಲ್ಲಿನ ಕ್ರಾಂತಿಯ ಹೋರಾಟಕ್ಕೆ ಬೊಲಿವಿಯ ಕೇಂದ್ರಸ್ಥಾನವಾಗಿತ್ತು. ಚೆ ಮಾತಿಗೆ ಲೊಯೊಲಾ ಒಪ್ಪಿದ್ದರು. ಕ್ರಾಂತಿಗೆ ಬೆಂಬಲ ಕ್ರೋಡೀ
ಕರಿಸಲು ಮತ್ತು ಬೇಕಾಗಿದ್ದ ಹಣದ ವ್ಯವಸ್ಥೆ ಮಾಡಲು ಲೊಯೊಲಾರನ್ನು ಮತ್ತೆ ರಾಜಧಾನಿಗೆ ಕಳುಹಿಸಲಾಯಿತು.

1967ರ ಮಾರ್ಚ್‍ನಲ್ಲಿ ಯುದ್ಧ ಆರಂಭವಾಯಿತು. ಚೆ ಬಗ್ಗೆ ಇಡೀ ಜಗತ್ತಿಗೆ ತಿಳಿದಿತ್ತು. ಆದರೆ ಈ ಪ್ರಸಿದ್ಧಿ ಆತನಿಗೆ ಬೊಲಿವಿಯಾದ ರೈತರ ಪ್ರೀತಿ ಗಳಿಸಲು ನೆರವಾಗಲಿಲ್ಲ. ಚೆ ಅಲ್ಲಿಗೆ ಹೋಗುವುದಕ್ಕೆ ಒಂದು ದಶಕದ ಹಿಂದೆ ಅಲ್ಲಿ ಒಂದು ಕ್ರಾಂತಿ ನಡೆದಿತ್ತು. ಅದರ ಪರಿಣಾಮವಾಗಿ ಎಲ್ಲರಿಗೂ ಮತದ ಹಕ್ಕು, ಭೂ ಸುಧಾರಣೆ ಜಾರಿಯಾಗಿತ್ತು. ಶಿಕ್ಷಣದಲ್ಲಿಯೂ ಸುಧಾರಣೆ ಆಗಿತ್ತು. ಬೊಲಿವಿಯಾದಲ್ಲಿ ಚೆ ನಡೆಸಿದ ಹೋರಾಟದಲ್ಲಿ ಒಬ್ಬನೇ ಒಬ್ಬ ರೈತ ಭಾಗಿಯಾದ ಬಗ್ಗೆ ದಾಖಲೆ ಇಲ್ಲ.

‘ಆತ ಸಮಗ್ರವಾಗಿ ಯೋಚನೆ ಮಾಡಿರಲಿಲ್ಲ. ಆತ ಅಲ್ಲಿ ವಿಫಲನಾಗಲೇಬೇಕಿತ್ತು. ಹಾಗಾಗಿ ಆತ ಸೋತ’ ಎಂದು ಕಾರ್ಲೊಸ್ ಮೆಸಾ ಹೇಳುತ್ತಾರೆ. ಚೆ ಅಲ್ಲಿಗೆ ಹೋದ ಸಂದರ್ಭದಲ್ಲಿ ಮೆಸಾ ಅವರಿಗೆ 13 ವರ್ಷ. ಅವರು ಬೊಲಿವಿಯಾದ ಮಾಜಿ ಅಧ್ಯಕ್ಷ ಮತ್ತು ಇತಿಹಾಸಕಾರ.

ಚೆ ಸೆರೆಯಾದ ಬಳಿಕ ಆತನಿಗೆ ಒಂದು ಬಟ್ಟಲು ಸೂಪ್ ಕೊಟ್ಟಿದ್ದ ಅಂಗಡಿಯಾಕೆ ಇರ್ಮಾ ಬೇರೊಂದು ಘಟನೆಯನ್ನೂ ನೆನಪಿಸಿಕೊಳ್ಳುತ್ತಾರೆ. ಚೆ ಹತ್ಯೆಗೆ ಕೆಲವು ದಿನಗಳ ಹಿಂದೆ ಚೆಯ ಸಹವರ್ತಿ ಗೆರಿಲ್ಲಾ ‘ಕೊಕೊ’ ಎಂದು ಕರೆಯಲಾಗುತ್ತಿದ್ದ ರಾಬರ್ಟೊ ಪೆರೆಡೊ, ಇರ್ಮಾ ನಡೆಸುತ್ತಿದ್ದ ಅಂಗಡಿಗೆ ಬಂದಿದ್ದ. ಅಲ್ಲಿದ್ದ ಫೋನ್ ಬಳಸಬಹುದೇ ಎಂದು ಆತ ಕೇಳಿದ್ದ.

ಈ ಭೇಟಿ ಇರ್ಮಾಳನ್ನು ಕಂಗೆಡಿಸಿತ್ತು. ಆ ಗ್ರಾಮದ ಯಾರೂ ಇಂತಹುದೊಂದು ಭೇಟಿಯನ್ನು ಎದುರು ನೋಡುವುದಿಲ್ಲ. ಯಾಕೆಂದರೆ ಗೆರಿಲ್ಲಾಗಳ ಬಗ್ಗೆ ಅಲ್ಲಿ ಒಳ್ಳೆಯ ಅಭಿಪ್ರಾಯ ಇರಲಿಲ್ಲ. ಗೆರಿಲ್ಲಾಗಳು ತಮ್ಮನ್ನೂ ಹೋರಾಟಕ್ಕೆ ಎಳೆದುಕೊಳ್ಳುತ್ತಾರೆ ಎಂಬ ಭಯದಿಂದ ಪಟ್ಟಣಗಳ ಜನರೆಲ್ಲಾ ಆಗಲೇ ಕಾಡು ಸೇರಿದ್ದರು.

‘ಗೆರಿಲ್ಲಾಗಳು ಗಂಡಸರನ್ನು ಥಳಿಸುತ್ತಾರೆ, ಅವರ ಹೆಂಡತಿಯರ ಮೇಲೆ ಅತ್ಯಾಚಾರ ಎಸಗುತ್ತಾರೆ, ಅಲ್ಲಿರುವ ವಸ್ತುಗಳನ್ನೆಲ್ಲ ಎತ್ತಿ ಒಯ್ಯುತ್ತಾರೆ ಎಂದು ನಮಗೆ ಹೇಳಲಾಗಿತ್ತು. ಹಾಗಾಗಿ ಊರಿನ ಯಾರೂ ಅವರ ಬರುವಿಕೆಯನ್ನು ಬಯಸುತ್ತಿರಲಿಲ್ಲ’ ಎಂದು ಇರ್ಮಾ ನೆನಪಿಸಿಕೊಳ್ಳುತ್ತಾರೆ. ಗೆರಿಲ್ಲಾಗಳು ಪಟ್ಟಣಕ್ಕೆ ಬಂದಿದ್ದಾರೆ ಎಂಬ ಮಾಹಿತಿಯನ್ನು ಅಲ್ಲಿನ ಮೇಯರ್ ಸರ್ಕಾರಕ್ಕೆ ತಿಳಿಸಿದ್ದರು ಎಂಬುದೂ ಇರ್ಮಾ ನೆನಪಿಲ್ಲಿ ಇದೆ.

ಮೇಯರ್ ಮತ್ತು ಇತರರು ನೀಡಿದಂತಹ ಮಾಹಿತಿಗಳ ಆಧಾರದಲ್ಲಿ ಸೇನೆಯು ಚೆ ಮತ್ತು ಆತನ ಗೆರಿಲ್ಲಾ ಸಹವರ್ತಿಗಳನ್ನು ಸುತ್ತುವರಿಯಲು ಆರಂಭಿಸಿತ್ತು. ಹೀಗೆ ಚೆಯ ಬೆನ್ನುಬಿದ್ದವರಲ್ಲಿ ಸೇನೆಯ ಯುವ ಅಧಿಕಾರಿ ಗ್ಯಾರಿ ಪ್ರಾಡೊ ಒಬ್ಬರು. ಅವರು ಹಿಂದಿನ ಬೇಸಿಗೆಯಲ್ಲಿ ಗುಡ್ಡಗಾಡುಗಳಲ್ಲಿ ಚೆಯನ್ನು ಹಿಂಬಾಲಿಸಿದ್ದರು.

ನಿವೃತ್ತ ಜನರಲ್ ಗ್ಯಾರಿಗೆ ಈಗ 78 ವರ್ಷ. ಆ ಸಂದರ್ಭದಲ್ಲಿ ಗೆರಿಲ್ಲಾ ಯುದ್ಧ ನಡೆಸುವುದಕ್ಕೆ ಸೇನೆಯು ಸನ್ನದ್ಧವಾಗಿರಲಿಲ್ಲ. ಆದರೆ ಚೆಯನ್ನು ಕೊಲ್ಲಲು ಕಾತರವಾಗಿದ್ದ ಅಮೆರಿಕ, ಬೊಲಿವಿಯ ಸೈನಿಕರಿಗೆ ತರಬೇತಿ ನೀಡಿತು, ಅಷ್ಟೇ ಅಲ್ಲ ಅಮೆರಿಕದ ಗೂಢಚರ ಸಂಸ್ಥೆ ಸಿಐಎ ಏಜೆಂಟರೂ ಅಲ್ಲಿ ಬಂದು ಸೇರಿಕೊಂಡರು ಎಂದು ಗ್ಯಾರಿ ಹೇಳುತ್ತಾರೆ.

ಅಕ್ಟೋಬರ್ 8ರಂದು ಬೊಲಿವಿಯ ಸೈನಿಕರು ಮತ್ತು ಗೆರಿಲ್ಲಾ ಹೋರಾಟಗಾರರ ನಡುವೆ ಗುಂಡಿನ ಹೋರಾಟ ಆರಂಭವಾಯಿತು.

ಈ ಯುದ್ಧ ಬೇರೆ ರೀತಿಯಲ್ಲಿ ಕೊನೆಯಾಗಲಿದೆ ಎಂದು ತಮಗೆ ಅನಿಸಿತ್ತು. ಒಬ್ಬ ಗೆರಿಲ್ಲಾ ಶರಣಾಗುತ್ತಿದ್ದಂತೆಯೇ, ‘ನಾನು ಚೆ ಗುವೇರ, ನಾನು ಸಾಯುವುದಕ್ಕಿಂತ ಬದುಕಿದ್ದರೇ ನಿಮಗೆ ಹೆಚ್ಚು ಪ್ರಯೋಜನ’ ಎಂದು ಕೂಗಿಕೊಂಡ ಎಂದು ಗ್ಯಾರಿ ನೆನಪಿಸಿಕೊಳ್ಳುತ್ತಾರೆ.

ಆಗ ಯುವತಿಯಾಗಿದ್ದ ಜೂಲಿಯಾ ಕೋರ್ಟೆಸ್‌ಗೆ ಈಗ ವಯಸ್ಸು 69. ಲಾ ಹಿಗುವೆರದ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಅವರಿಗೆ ದೂರದಲ್ಲಿ ಗುಂಡಿನ ಚಕಮಕಿ ನಡೆಯುತ್ತಿದ್ದ ಸದ್ದು ಕೇಳಿಸಿದ್ದು ನೆನಪಿದೆ. ಸೆರೆ ಹಿಡಿಯಲಾದ ಚೆಯನ್ನು ಸೇನೆಯು ಆಗ ಈ ಶಾಲೆಯಲ್ಲಿ ತಂದು ಇರಿಸಿತ್ತು. ಮರುದಿನ ಅಕ್ಟೋಬರ್‌ 9ರಂದು ಕೋರ್ಟೆಸ್‌ ಶಾಲೆಗೆ ಬಂದಾಗ ಈ ಗೆರಿಲ್ಲಾ ಹೋರಾಟಗಾರನಲ್ಲಿ ಮಾತನಾಡುವ ಶಕ್ತಿಯೂ ಇರಲಿಲ್ಲ. ‘ಆಗ ಆತ ತನ್ನ ಕೈಯಿಂದ ಜಾರಿ ಹೋಗಿರುವ ಕ್ರಾಂತಿಯ ಬಗ್ಗೆ ಏನೋ ಕೆಲವು ಪದಗಳನ್ನು ಗೊಣಗುಟ್ಟಿದ. ಆಗ ಆತ ಕುರೂಪಿಯಾಗಿ ಕಾಣಿಸುತ್ತಿದ್ದ ಎಂದು ಅವರು ಹೇಳುತ್ತಿದ್ದರು. ಆದರೆ ನನಗೆ ಆತ ನಂಬಲಾಗದಷ್ಟು ಸುಂದರವಾಗಿ ಕಂಡ’ ಎಂದು ಕೋರ್ಟೆಸ್‌ ಹೇಳಿದ್ದಾರೆ.

ಆತನನ್ನು ಕೊಂದ ಗುಂಡಿನ ಸದ್ದು ಕೇಳಿಸಿದಾಗ ಆಗಷ್ಟೇ ತಾನು ಮನೆ ತಲುಪಿದ್ದೆ ಎಂಬುದೂ ಕೋರ್ಟೆಸ್‌ಗೆ ನೆನಪಿದೆ.

‘ಈ ಹತ್ಯೆಯ ಬಳಿಕ, ಶಾಲಾ ಕೊಠಡಿಯಲ್ಲಿ ಚೆಲ್ಲಿದ್ದ ರಕ್ತವನ್ನು ಶುಚಿ ಮಾಡುವುದಕ್ಕಾಗಿ ಕೋರ್ಟೆಸ್‌ ಶಾಲೆಗೆ ಓಡಿದ್ದನ್ನು ನಾನು ಕಂಡಿದ್ದೆ. ನಂತರ ಆ ಶಾಲೆಯಲ್ಲಿ ತರಗತಿಗಳು ನಡೆಯಲೇ ಇಲ್ಲ. ಮಕ್ಕಳು ಅಲ್ಲಿಗೆ ಹೋಗಲು ಬಯಸುತ್ತಿರಲಿಲ್ಲ’ ಎಂದು ಇರ್ಮಾ ನೆನಪು ಮಾಡಿಕೊಂಡಿದ್ದಾರೆ. ಈಗ ಅಲ್ಲಿ ಒಂದು ಸಣ್ಣ ವಸ್ತುಸಂಗ್ರಹಾಲಯ ಇದೆ.

ದಿ ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.