
ನಾಲ್ಕು ತಿಂಗಳ ಹಿಂದೆ ಉನ್ನತ ಶಿಕ್ಷಣ ಪರಿಷತ್ ವಿವಿಧ ಅಧ್ಯಯನ ಮಂಡಳಿಗಳ ಸದಸ್ಯರು ಮತ್ತು ಕಾಲೇಜುಗಳ ಪ್ರಾಂಶುಪಾಲರನ್ನು ಸಭೆಯೊಂದಕ್ಕೆ ಆಹ್ವಾನಿಸಿತ್ತು. ಇದರಲ್ಲಿ ಭಾಗವಹಿಸಿದವರಲ್ಲಿ ನಾನೂ ಒಬ್ಬ. ಸಭೆಯ ಕಲಾಪಗಳು ಆರಂಭಗೊಂಡ ಕೆಲವೇ ಹೊತ್ತಿನಲ್ಲಿ ಕರ್ನಾಟಕದ ವಿಶ್ವವಿದ್ಯಾಲಯಗಳು ಮತ್ತು ಪದವಿ ಕಾಲೇಜುಗಳಲ್ಲಿ ಕಾಣಿಸಿಕೊಳ್ಳಲಿರುವ ದೊಡ್ಡದೊಂದು ಬದಲಾವಣೆಯ ಚಿತ್ರಣ ಕಣ್ಣೆದುರು ಬಂತು. ಜ್ಞಾನಜ್ಯೋತಿ ಸಂಕೀರ್ಣದ ಸಭಾ ಕೊಠಡಿಯೊಂದರಲ್ಲಿ ಸೇರಿದ್ದ ನಮ್ಮೆದುರು, ಉನ್ನತ ಶಿಕ್ಷಣ ಇಲಾಖೆಯ ಆಯುಕ್ತರು ತಮ್ಮ ಘನೋದ್ದೇಶದ ಭವ್ಯ ಯೋಜನೆಯನ್ನು ವಿವರಿಸುತ್ತಿದ್ದರು.
ಅವರ ಮಾತುಗಳನ್ನು ಕೇಳುತ್ತಾ ಹೋದಂತೆ ಉನ್ನತ ಶಿಕ್ಷಣ ಕ್ಷೇತ್ರದ ಚಟುವಟಿಕೆಗಳೆಲ್ಲವೂ ಯಾಂತ್ರಿಕ ಕ್ರಿಯೆಯಾಗಿಬಿಡುತ್ತವೆ ಎಂಬುದು ಖಚಿತವಾಗುತ್ತಾ ಹೋಯಿತು. ಈ ‘ಯಾಂತ್ರೀಕರಣ’ ಪ್ರಕ್ರಿಯೆಗೆ ತಂತ್ರಜ್ಞಾನ, ತಂತ್ರಾಂಶ ಮತ್ತು ಅವುಗಳನ್ನು ಮಾರಾಟ ಮಾಡಲು ಟೊಂಕ ಕಟ್ಟಿರುವವರ ನೆರವು ಮತ್ತು ಬೆಂಬಲಗಳಿರುವುದೂ ಸ್ಪಷ್ಟವಾಯಿತು. ಆಯುಕ್ತರ ಮಾತುಗಳಲ್ಲಿ ಉನ್ನತ ಶಿಕ್ಷಣ ಕ್ಷೇತ್ರಕ್ಕಾಗಿ ಸರ್ಕಾರ ಯೋಜಿಸಿರುವ ‘ಇ–ಕ್ರಮ’ಗಳ ದೊಡ್ಡದೊಂದು ಪಟ್ಟಿಯೇ ಇತ್ತು.
ವಿವಿಧ ವಿಷಯಗಳಿಗೆ ಸಂಬಂಧಿಸಿದ ‘ಇ–ಮಾಹಿತಿ’ಯನ್ನು (e–content) ಸಿದ್ಧಪಡಿಸಿ ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತಿನ ಜಾಲತಾಣಕ್ಕೆ ಸೇರಿಸಿ, ಅಲ್ಲಿಂದ ವಿದ್ಯಾರ್ಥಿಗಳು ಅದನ್ನು ಸುಲಭದಲ್ಲಿ ಪಡೆದುಕೊಳ್ಳಲು ಅನುವು ಮಾಡಿಕೊಡುವುದು, ವಿದ್ಯಾರ್ಥಿಗಳ ಹಾಜರಾತಿ ಪಟ್ಟಿಯನ್ನು ತಕ್ಷಣವೇ ಆನ್‌ಲೈನಿಗೇರಿಸಿ, ಗೈರು ಹಾಜರಾಗುವ ವಿದ್ಯಾರ್ಥಿಗಳ ಪಾಲಕರಿಗೆ ಎಸ್‌ಎಂಎಸ್ ಸಂದೇಶ ಕಳುಹಿಸುವುದರ ತನಕದ ಅನೇಕ ವಿಚಾರಗಳು ‘ಇ–ಉಪಕ್ರಮ’ಗಳ ಭಾಗ.ಸಭೆಯಲ್ಲಿರುವ ಯಾರಾದರೂ ಈ ಹೈಟೆಕ್ ಕ್ರಮಗಳು ನಮ್ಮ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ವಾತಾವರಣಕ್ಕೆ ಸರಿಹೊಂದುವುದಿಲ್ಲ ಎಂದು ಹೇಳಲು ಅವಕಾಶವನ್ನೇ ಕೊಡದಂತೆ ಆಯುಕ್ತರು ತಮ್ಮ ಮಾತುಗಳಿಗೆ ಸಾಮಾಜಿಕ ನ್ಯಾಯದ ಲೇಪನ ನೀಡಿದರು.
ಕರ್ನಾಟಕದ ಮೂಲೆ ಮೂಲೆಯಲ್ಲಿರುವ ವಿದ್ಯಾರ್ಥಿಗಳಿಗೆ ಒಳ್ಳೆಯ ಪಾಠಗಳನ್ನು ತಲುಪಿಸುವುದು, ಒಳ್ಳೆಯ ಉಪನ್ಯಾಸಗಳಿಗಾಗಿ ಹಸಿದಿರುವ ಗ್ರಾಮೀಣ ವಿದ್ಯಾರ್ಥಿಗಳನ್ನು ತಲುಪುವುದು ಮುಂತಾದ ಮಾತುಗಳನ್ನು ತಮ್ಮ ಭಾಷಣಕ್ಕೆ ಸೇರಿಸಿಕೊಂಡ ಅವರು ‘ನಿಮ್ಮ ತಜ್ಞತೆಯ ಅನುಕೂಲ ಅವರಿಗೂ ದೊರೆಯಬೇಡವೇ’ ಎಂಬ ವಾಗಾಡಂಬರದ ಪ್ರಶ್ನೆಯೊಂದನ್ನೂ ನಮ್ಮ ಮುಂದಿಟ್ಟರು. ಒಂದು ವಿಚಾರವನ್ನು ಸ್ಪಷ್ಟಪಡಿಸುತ್ತೇನೆ. ನಾನು ತಂತ್ರಜ್ಞಾನದ ವಿರೋಧಿಯಲ್ಲ. ತರಗತಿ ಕೋಣೆಯಿಂದ ಆಡಳಿತದ ಉನ್ನತ ಹಂತದವರೆಗೂ ತಂತ್ರಾಂಶಗಳನ್ನು ಬಳಸಿಕೊಂಡು ಉತ್ತರದಾಯಿತ್ವವನ್ನು ಖಾತರಿ ಪಡಿಸಿಕೊಳ್ಳುವುದನ್ನು ಸ್ವಾಗತಿಸುತ್ತೇನೆ.
ತಂತ್ರಜ್ಞಾನವನ್ನು ಬಳಸಿಕೊಂಡು ವಿದ್ಯಾರ್ಥಿಗಳನ್ನು ತಲುಪುವ ಕ್ರಮವೂ ಒಳ್ಳೆಯದೆ. ಆದರೆ ಇದನ್ನು ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಹೇಳುತ್ತಿರುವ ವಿಧಾನದಲ್ಲಿ ಮಾಡುವುದು ಅಪ್ರಾಯೋಗಿಕ ಮತ್ತು ಅದಕ್ಕಿಂತ ಹೆಚ್ಚಾಗಿ ಅವೈಜ್ಞಾನಿಕ. ಈಗಾಗಲೇ ಕಡ್ಡಾಯಗೊಳಿಸಲಾಗಿರುವ ‘ಇ–ಹಾಜರಿ ಪುಸ್ತಕ’ವನ್ನೇ ಒಂದು ಉದಾಹರಣೆಯಾಗಿ ಪರಿಶೀಲಿಸೋಣ. ನಾನು ಎಂಎಸ್‌ಸಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತೇನೆ. ತರಗತಿಯ ಅವಧಿಯೇ 50 ನಿಮಿಷ. ಈ ತರಗತಿಗಳಲ್ಲಿ ಸರಾಸರಿ 80 ವಿದ್ಯಾರ್ಥಿಗಳಿರುತ್ತಾರೆ. ಒಬ್ಬೊಬ್ಬರ ಹೆಸರು ಕರೆದು ಅವರು ಹಾಜರಾಗಿದ್ದಾರೋ ಇಲ್ಲವೋ ಎಂಬುದನ್ನು ಕಂಪ್ಯೂಟರಿನಲ್ಲಿ ದಾಖಲಿಸುವುದಕ್ಕೆ ಕನಿಷ್ಠ 20 ನಿಮಿಷ ಬೇಕು. ತರಗತಿಯ ಮೂರನೇ ಒಂದರಷ್ಟು ಸಮಯ ವ್ಯರ್ಥವಾಯಿತು.
ಇನ್ನು ಇದನ್ನು ತಕ್ಷಣವೇ ಪರಿಷತ್ತಿನ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿ ತರಗತಿಗೆ ಬಾರದ ವಿದ್ಯಾರ್ಥಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು! ನಮ್ಮ ಇಂಟರ್‌ನೆಟ್ ಸಂಪರ್ಕದ ಅನಿಶ್ಚಿತತೆಯನ್ನು ಪರಿಗಣಿಸಿದರೆ, ಹೆಚ್ಚಿನ ದಿನಗಳ ಕಾಲ ಪಾಠ ಮಾಡುವುದರ ಬದಲಿಗೆ ಇಂಥ ಕೆಲಸದಲ್ಲೇ ಶಿಕ್ಷಕರು ಸಮಯ ಕಳೆಯಬೇಕಾಗುತ್ತದೆ ಅನ್ನಿಸುತ್ತದೆ. ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿರುವ ವಿದ್ಯಾರ್ಥಿಗಳೇನೂ ಪುಟ್ಟ ಮಕ್ಕಳಲ್ಲ. ಅವರ ತರಗತಿಗಳಲ್ಲಿ ಹಾಜರಿ ಕರೆಯುವುದಕ್ಕೆ 10–20 ನಿಮಿಷಗಳನ್ನು ವ್ಯಯಿಸುವುದಕ್ಕೆ ಅರ್ಥವಿದೆಯೇ? ಈ ಹಂತದಲ್ಲಿ ವಿದ್ಯಾರ್ಥಿಗಳು ತರಗತಿಗೆ ಬರಲೇಬೇಕಾದ ಅನಿವಾರ್ಯತೆಯನ್ನು ಶೈಕ್ಷಣಿಕ ಮಾರ್ಗದಲ್ಲಿ ಸೃಷ್ಟಿಸಬೇಕು.
ತರಗತಿಯಲ್ಲೊಂದು ಅನಿರೀಕ್ಷಿತ ಟೆಸ್ಟ್ ನೀಡುವುದು, ವಿಷಯಕ್ಕೆ ಸಂಬಂಧಿಸಿದ ಕ್ವಿಜ್ ಇತ್ಯಾದಿಗಳನ್ನು ಏರ್ಪಡಿಸುವುದು ಮುಂತಾದ ತಂತ್ರಗಳನ್ನು ಬಳಸುವುದು ಒಂದು ವಿಧಾನ. ಇದಕ್ಕಿಂತ ಹೆಚ್ಚಾಗಿ, ತರಗತಿಗೆ ಹೋಗದೇ ಇದ್ದರೆ ತನಗೆ ನಷ್ಟ ಎಂಬುದು ವಿದ್ಯಾರ್ಥಿಗಳಿಗೆ ಅರಿವಾಗುವಷ್ಟು ಉತ್ತಮ ಮಟ್ಟದ ಬೋಧನೆ ತರಗತಿಗಳಲ್ಲಿ ನಡೆಯಬೇಕು. ಇನ್ನು ಒಬ್ಬ ವಿದ್ಯಾರ್ಥಿ ತರಗತಿಗೆ ಬಾರದೆಯೇ ಉತ್ತಮ ಅಂಕಗಳೊಂದಿಗೆ ಉತ್ತೀರ್ಣನಾಗುವ ಪರಿಸ್ಥಿತಿ ಇದ್ದರೆ ಅದಕ್ಕೆ ಬೇಕಿರುವುದು ‘ಇ–ಹಾಜರಿ’ ಪುಸ್ತಕವಲ್ಲ. ಅದಕ್ಕೆ ಬೇಕಿರುವುದು ಪಾಠದ ಗುಣಮಟ್ಟದ ಸುಧಾರಣೆ.
ಅದನ್ನು ಬಿಟ್ಟು ಪದವಿಪೂರ್ವ ಹಂತದ ಶೈಕ್ಷಣಿಕ ಮಾದರಿಗಳನ್ನು ಇಲ್ಲಿ ಅನುಸರಿಸುತ್ತಿರುವುದೇಕೆ? ಒಂದು ವೇಳೆ ಅದು ಹಾಗಲ್ಲ ಎಂದಾದರೆ ಇಡೀ ಉನ್ನತ ಶಿಕ್ಷಣ ಕ್ಷೇತ್ರವನ್ನೇ ಕೇವಲ ನಿರ್ವಹಣೆಗೆ ಸುಲಭವಾಗುವ ಬಾಲಿಶ ಕ್ರಮಗಳ ವ್ಯಾಪ್ತಿಯೊಳಕ್ಕೆ ತರುತ್ತಿದ್ದೇವೆಯೇ? ಉಪನ್ಯಾಸಗಳನ್ನು ಇಂಟರ್ನೆಟ್‌ನಲ್ಲಿ ಪ್ರಸಾರ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ತಲುಪುವುದು ಅಥವಾ ‘ಇ–ಪಠ್ಯ’ಗಳನ್ನು ಸಿದ್ಧಪಡಿಸಿ ಅವುಗಳು ವಿದ್ಯಾರ್ಥಿಗಳಿಗೆ ಸುಲಭವಾಗಿ ದೊರೆಯುವಂತೆ ಮಾಡುವ ಪರಿಕಲ್ಪನೆಗೆ ಒಂದು ದೊಡ್ಡ ಮಿತಿ ಇದೆ. ಇವುಗಳೆಲ್ಲವೂ ಶಿಕ್ಷಕ, ಬೋಧನೆ ಮತ್ತು ಕಲಿಕೆಯ ಪ್ರಕ್ರಿಯೆಯನ್ನು ಕೇವಲ ಮಾಹಿತಿಯನ್ನು ವರ್ಗಾಯಿಸುವ ತಂತ್ರದಂತೆ ಪರಿಭಾವಿಸುತ್ತವೆ.
ತರಗತಿಯ ಸ್ವರೂಪವೇ ಸಂಕೀರ್ಣವಾದುದು. ಚರ್ಚೆಗಳು ಎಲ್ಲೆಂದರಲ್ಲಿ ಹರಿದಾಡಬಹುದಾದ ಸಾಧ್ಯತೆಯೊಂದು ಸದಾ ಇರುತ್ತದೆ. ಆದರೆ ಹೀಗೆ ಒಂದು ಪೂರ್ವ ನಿರ್ಧಾರಿತ ವಿಧಾನದಲ್ಲಿ ಸಾಗದ ಚರ್ಚೆಗಳು ವಿಚಾರದ ಹೊಸ ಬಾಗಿಲುಗಳನ್ನೂ ತೆರೆಯುತ್ತಿರುತ್ತವೆ. ಇಲ್ಲಿ ನಡೆಯುವುದು ಕೇವಲ ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಣ ಸಂವಾದವಷ್ಟೇ ಅಲ್ಲ, ಅಲ್ಲಿರುವ ವಿದ್ಯಾರ್ಥಿ ಸಮುದಾಯವೂ ಪರಸ್ಪರ ಸಂವಾದದಲ್ಲಿ ತೊಡಗಿರುತ್ತದೆ. ಈಗ ಉನ್ನತ ಶಿಕ್ಷಣ ಇಲಾಖೆ ಮುಂದಿಡುತ್ತಿರುವ ಪರಿಕಲ್ಪನೆ ಈ ಬಗೆಯ ತರಗತಿಯನ್ನು ಸಂಪೂರ್ಣ ಏಕಮುಖ ವಿದ್ಯುನ್ಮಾನ ಸಂವಹನವಾಗಿ ಬದಲಾಯಿಸುತ್ತದೆ. ಮೂಲಭೂತ ಮಟ್ಟದ ಕೆಲವು ಕೋರ್ಸ್‌ಗಳಲ್ಲಿ ಈ ವಿದ್ಯುನ್ಮಾನ ವಿಧಾನವನ್ನು ಸ್ವಲ್ಪ ಮಟ್ಟಿಗೆ ಬಳಸಲು ಸಾಧ್ಯವಿದೆಯೇನೋ.
ಭೌತಶಾಸ್ತ್ರದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಆರಂಭಿಕ ಹಂತದಲ್ಲಿ ಕಲಿಸುವ ವಿಷಯಗಳು ಎಲ್ಲೆಡೆಯೂ ಒಂದೇ ಬಗೆಯಲ್ಲಿರುತ್ತವೆ. ಆದರೆ ಮುಂದಿನ ಹಂತಕ್ಕೆ ಹೋದಂತೆ, ವಿಷಯ ಸಂಕೀರ್ಣವಾಗುತ್ತಾ ಹೋದಂತೆ ಇದು ಅಸಾಧ್ಯವಾಗುತ್ತದೆ. ಮಾನವಿಕಗಳು ಮತ್ತು ಸಮಾಜ ವಿಜ್ಞಾನಗಳಿಗೆ ಇದನ್ನು ಅನ್ವಯಿಸಲು ಸಾಧ್ಯವೇ ಇಲ್ಲ. ಈ ಕೋರ್ಸ್‌ಗಳನ್ನು ವಿವಿಧ ವಿಶ್ವವಿದ್ಯಾಲಯಗಳು ತಮ್ಮ ಸ್ಥಳೀಯ ಅಗತ್ಯಗಳು ಮತ್ತು ವಾತಾವರಣವನ್ನು ಗಮನದಲ್ಲಿಟ್ಟುಕೊಂಡು ರೂಪಿಸಿರುತ್ತವೆ. ಇಲ್ಲಿಯೂ ಅದನ್ನು ಸಾಧ್ಯ ಮಾಡಬೇಕೆಂದರೆ ಕರ್ನಾಟಕದ ವಿಶ್ವವಿದ್ಯಾಲಯಗಳೆಲ್ಲವೂ ಇ–ಪಾಠಗಳಿಗೆ ಅವಕಾಶ ಕಲ್ಪಿಸುವಂಥ ಒಂದೇ ಬಗೆಯ ಕೋರ್ಸ್‌ಗಳನ್ನು ನಡೆಸಬೇಕಾಗುತ್ತದೆ.
ವಿಶ್ವವಿದ್ಯಾಲಯಗಳಲ್ಲಿರುವ ಬೋಧಕರು ವಿದ್ಯಾರ್ಥಿಗಳ ಹಿನ್ನೆಲೆ, ವಿಶ್ವವಿದ್ಯಾಲಯವಿರುವ ಪ್ರದೇಶ ಮತ್ತು ಕಾಲದ ಅಗತ್ಯಗಳಿಗೆ ತಕ್ಕಂತೆ ಹೊಸ ಕೋರ್ಸ್‌ಗಳನ್ನು ಆರಂಭಿಸುವ ಸ್ವಾತಂತ್ರ್ಯ ಕಳೆದುಕೊಳ್ಳುತ್ತಾರೆ. ಹಾಗಾದಾಗ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಸ್ವಾಯತ್ತತೆಗೇನು ಅರ್ಥ ಉಳಿಯುತ್ತದೆ...? ಈ ಪ್ರಶ್ನೆಗಳನ್ನು ಎತ್ತಿದರೆ ‘ಇ–ಉಪಕ್ರಮ’ಗಳ ಉತ್ಸಾಹಿ ಬೆಂಬಲಿಗರು ಬೇರೆಯೇ ಮಾತುಗಳನ್ನು ಆಡುತ್ತಾರೆ. ತರಗತಿಗಳು ಮತ್ತು ಬೋಧಕರೇ ಇಲ್ಲದಿರುವ ದೊಡ್ಡದೊಂದು ವರ್ಗಕ್ಕೆ ಈ ಮೂಲಕ ತರಗತಿಗಳನ್ನೂ ಬೋಧಕರನ್ನೂ ಒದಗಿಸಬಹುದು ಎಂಬುದು ಅವರ ವಾದ.
ಇ–ಪಠ್ಯ ಮತ್ತು ಉಪನ್ಯಾಸಗಳನ್ನು ಬಳಸಿಕೊಳ್ಳುವುದಕ್ಕೆ ವಿದ್ಯಾರ್ಥಿಗಳಿಗೆ ಒಂದು ಕಂಪ್ಯೂಟರ್, ಅದಕ್ಕೊಂದು ಒಳ್ಳೆಯ ಇಂಟರ್ನೆಟ್ ಸಂಪರ್ಕ, ಎಲ್ಲದಕ್ಕಿಂತ ಹೆಚ್ಚಾಗಿ ಇವೆಲ್ಲವೂ ಕಾರ್ಯ ನಿರ್ವಹಿಸಲು ಅಗತ್ಯವಿರುವ ವಿದ್ಯುತ್ ಸಂಪರ್ಕ ಬೇಕಾಗುತ್ತದೆ. ಇವೆಲ್ಲ ಇದ್ದರೂ ನಾವು ತರಗತಿಗಳಲ್ಲಿ ಮಾಡುವ ಪಾಠದ ನೇರ ಪ್ರಸಾರ ಅಥವಾ ಅವುಗಳ ವಿಡಿಯೊಗಳನ್ನು ಒದಗಿಸುವುದರಿಂದ ವಿದ್ಯಾರ್ಥಿಗಳಿಗೆ ಯಾವ ಪ್ರಯೋಜನವೂ ಆಗುವುದಿಲ್ಲ. ಈ ಬಗೆಯ ವಿಡಿಯೊ ಉಪನ್ಯಾಸಗಳನ್ನು ಮಾಡಬೇಕಾದ ಕ್ರಮವೇ ಬೇರೆ. ರಾಜ್ಯ ಸರ್ಕಾರದ ನೇತೃತ್ವದಲ್ಲೇ ಹಿಂದೆ ನಡೆಸಲಾದ ಇಂಥ ಕ್ರಮಗಳ ಮೇಲೊಮ್ಮೆ ಕಣ್ಣಾಡಿಸಿದರೆ ಸಾಕು.
ಎಜುಕೇಶನ್ ಡೆವಲಪ್‌ಮೆಂಟ್ ಸೆಂಟರ್ ಜೊತೆ ಸೇರಿಕೊಂಡು ಕರ್ನಾಟಕದ ಪ್ರಾಥಮಿಕ ಶಿಕ್ಷಣ ಇಲಾಖೆ ಪ್ರಸಾರ ಮಾಡಿದ ರೇಡಿಯೊ ಪಾಠಗಳಲ್ಲಿ ಕೂಡಾ ಶಿಕ್ಷಕರನ್ನೇ ಮಾಧ್ಯಮವಾಗಿ ಬಳಸಲಾಗಿತ್ತು. ರೇಡಿಯೊದಲ್ಲಿ ಪ್ರಸಾರವಾಗುತ್ತಿದ್ದ ಪಾಠಕ್ಕೆ ತರಗತಿಯಲ್ಲಿರುವ ಶಿಕ್ಷಕರು ಪೂರಕವಾದ ಚಟುವಟಿಕೆಗಳನ್ನೂ ನಡೆಸುವಂತೆ ಇದನ್ನು ವಿನ್ಯಾಸಗೊಳಿಸಲಾಗಿತ್ತು. ಬೃಹತ್ ಸಂಖ್ಯೆಯಲ್ಲಿರುವ ಮುಕ್ತ ಆನ್‌ಲೈನ್ ಕೋರ್ಸ್‌ಗಳ ಮೇಲೊಮ್ಮೆ ಕಣ್ಣು ಹಾಯಿಸಿದರೆ ಕಂಪ್ಯೂಟರ್ ಬಳಸಿ ಪಾಠ ಮಾಡುವ ಕ್ರಿಯೆ ಹೇಗಿರುತ್ತದೆ ಎಂಬುದು ಅರ್ಥವಾಗುತ್ತದೆ.
ಬೋಧನೆಯ ಪರಿಣಾಮವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಚಾಟಿಂಗ್‌ನಂಥ ವ್ಯವಸ್ಥೆಯಿಂದ ಆರಂಭಿಸಿ ವಿದ್ಯಾರ್ಥಿಗಳು ಪೂರ್ಣಗೊಳಿಸಬೇಕಾದ ಯೋಜನೆಗಳೂ ಒಳಗೊಂಡಿರುತ್ತವೆ. ಅಂದರೆ ಇಲ್ಲಿಯೂ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಬಹುತೇಕ ನೇರ ಸಂಪರ್ಕವನ್ನೇ ಹೊಂದಿರುತ್ತಾರೆ. ಈ ವ್ಯವಸ್ಥೆಗೆ ಭಾರೀ ಮೂಲ ಸೌಕರ್ಯವೇ ಬೇಕಾಗುತ್ತದೆ. ಉನ್ನತ ಶಿಕ್ಷಣದ ಸುಧಾರಣೆಗೆ ಈಗ ಅಗತ್ಯವಿರುವುದು ಒಳ್ಳೆಯ ಶಿಕ್ಷಕರು ಮತ್ತು ಅವರಿಗೆ ಪಾಠ ಮಾಡುವುದಕ್ಕೆ ಅಗತ್ಯವಿರುವ ಕನಿಷ್ಠ ಮೂಲ ಸೌಕರ್ಯ. ಈ ಎರಡನ್ನು ಹೊರತುಪಡಿಸಿದ ಬೇರೇನನ್ನು ಸರ್ಕಾರ ಮಾಡಿದರೂ ಅದರಿಂದ ಯಾವುದೇ ಪ್ರಯೋಜನವಿಲ್ಲ.
ಈಗ ಸರ್ಕಾರ ಮುಂದಿಡುತ್ತಿರುವ ‘ಇ–ಕ್ರಮ’ಗಳಿಂದ ನೇರವಾಗಿ ಲಾಭ ಪಡೆಯುವವರಲ್ಲಿ ತಂತ್ರಾಂಶ ತಯಾರಕರು ಮತ್ತು ಅದನ್ನು ಬಳಸುವುದಕ್ಕೆ ಅಗತ್ಯವಿರುವ ಯಂತ್ರಾಂಶಗಳನ್ನು ಮಾರುವವರರಾಗಿರಬಹುದು. ಆದರೆ ಪರೋಕ್ಷ ಲಾಭ ಪಡೆಯುವವರಲ್ಲಿ ನಾಯಿ ಕೊಡೆಗಳಂತೆ ಹುಟ್ಟಿಕೊಳ್ಳುತ್ತಿರುವ ಖಾಸಗಿ ವಿಶ್ವವಿದ್ಯಾಲಯಗಳಿವೆ. ಬೋಧಕರ ಅರ್ಹತೆ ಮತ್ತು ಸಂಖ್ಯೆಗೆ ಸಂಬಂಧಿಸಿದಂತೆ ಅನೇಕ ಕಾನೂನುಗಳಿದ್ದರೂ ಅವುಗಳೆಲ್ಲವನ್ನೂ ಗಾಳಿಗೆ ತೂರಿ ಭಾರೀ ಶುಲ್ಕ ಪಡೆದು ವಿಶ್ವವಿದ್ಯಾಲಯಗಳನ್ನು ನಡೆಸುತ್ತಿರುವ ಶಕ್ತಿಗಳಿಗೆ ವಿಡಿಯೊ ಪಾಠಗಳು ಒಂದು ವರವಾಗಿ ಪರಿಣಮಿಸಬಹುದು. ಸಹಜವಾಗಿಯೇ ಇದು ವಿದ್ಯಾರ್ಥಿ ಸಮುದಾಯಕ್ಕೆ ಶಾಪವಾಗುತ್ತದೆ.
ಸರ್ಕಾರ ತನ್ನ ಕಾಲೇಜುಗಳಲ್ಲಿ ಮೂಲ ಸೌಕರ್ಯವೂ ಇಲ್ಲದೆ ವಿಡಿಯೊ ಪಾಠಗಳನ್ನೂ ಒದಗಿಸಲಾಗದ ಸ್ಥಿತಿಯಲ್ಲಿ ಇರುವಾಗ ಈ ಖಾಸಗಿ ವಿಶ್ವವಿದ್ಯಾಲಯಗಳು ಹವಾನಿಯಂತ್ರಿತ ಕೊಠಡಿಯಲ್ಲಿ ವಿಡಿಯೊ ತೋರಿಸಿ ತಮ್ಮ ಥೈಲಿ ತುಂಬಿಸಿಕೊಳ್ಳುತ್ತವೆ. ಶೈಕ್ಷಣಿಕ ದೂರದೃಷ್ಟಿ ಇಲ್ಲದ ಯಾರದೋ ಉತ್ಪನ್ನಗಳನ್ನು ಖರೀದಿಸುವ ಉತ್ಸಾಹದಿಂದ, ಯಾರದೋ ಅಧಿಕಾರವನ್ನು ಹೆಚ್ಚಿಸುವ ಉದ್ದೇಶದಿಂದ ಹುಟ್ಟಿಕೊಳ್ಳುವ ಯೋಜನೆಗಳೆಲ್ಲವೂ ಶೈಕ್ಷಣಿಕ ಸಂಸ್ಥೆಗಳ ಸ್ವಾಯತ್ತತೆಯನ್ನು ಕಿತ್ತುಕೊಳ್ಳುವಲ್ಲಿ ಕೊನೆಗೊಳ್ಳುತ್ತವೆ. ವಿಶ್ವವಿದ್ಯಾಲಯಗಳ ಮುಖ್ಯಸ್ಥರು ಯಾರಾಗಿರಬೇಕು ಎಂಬ ವಿಚಾರದಲ್ಲಿ ಶೈಕ್ಷಣಿಕತೆಗೆ ಹೊರತಾದ ಅಂಶಗಳು ಪರಿಣಾಮ ಬೀರುತ್ತಿವೆ.
ಇದಕ್ಕೆ ಪುಟವಿಡುವಂತೆ ಈ ನಿರ್ಧಾರದಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಶಾಹಿಯ ಪಾತ್ರ ಮುಖ್ಯವಾಗುತ್ತಿದೆ. ಈ ಎಲ್ಲವುಗಳ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ‘ಇ–ಉಪಕ್ರಮ’ಗಳನ್ನು ನೋಡಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಏನು ಬೇಕು ಎಂಬುದನ್ನು, ಬೋಧನೆಗೆ ಯಾವ ವಿಧಾನ ಸೂಕ್ತ ಎಂಬುದನ್ನು ಬೋಧಕ ವರ್ಗ ನಿರ್ಧರಿಸಬೇಕೇ ಹೊರತು ಯಾರದೋ ಉತ್ಪನ್ನಗಳನ್ನು ಖರೀದಿಸುವುದಕ್ಕೆ ಉತ್ಸಾಹವಿರುವ ಉನ್ನತ ಶಿಕ್ಷಣ ಪರಿಷತ್ತುಗಳಂಥ ಸಂಸ್ಥೆಗಳಲ್ಲ ಎಂಬುದನ್ನು ನಾವು ಅರಿಯಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.