ADVERTISEMENT

ತ್ರಿವಳಿ ತಲಾಖ್‌ ನಿಷೇಧಕ್ಕೆ ಕಾನೂನಿನ ಬಲ...

ವಿಜಯ ಜೋಷಿ
Published 29 ಡಿಸೆಂಬರ್ 2017, 19:30 IST
Last Updated 29 ಡಿಸೆಂಬರ್ 2017, 19:30 IST
ತ್ರಿವಳಿ ತಲಾಖ್‌ ನಿಷೇಧಕ್ಕೆ ಕಾನೂನಿನ ಬಲ...
ತ್ರಿವಳಿ ತಲಾಖ್‌ ನಿಷೇಧಕ್ಕೆ ಕಾನೂನಿನ ಬಲ...   

ಶಾಯರಾ ಬಾನೊ ಮತ್ತು ಇತರ ಕೆಲವು ಮುಸ್ಲಿಂ ಮಹಿಳೆಯರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ ‘ಒಂದೇ ಬಾರಿಗೆ ಮೂರು ಸಲ ತಲಾಖ್‌ ಎಂದು ಹೇಳಿ, ಮುಸ್ಲಿಂ ಪತಿಯು ಪತ್ನಿಗೆ ನೀಡುವ ವಿಚ್ಛೇದನಕ್ಕೆ ಸಾಂವಿಧಾನಿಕ ಮಾನ್ಯತೆ ಇಲ್ಲ’ ಎಂದು ಆಗಸ್ಟ್‌ 22ರಂದು ನೀಡಿದ ತೀರ್ಪಿನಲ್ಲಿ ಸಾರಿತು. ಇದೊಂದು ಐತಿಹಾಸಿಕ ತೀರ್ಪು ಎಂದು ಸಂವಿಧಾನ ತಜ್ಞರು, ಸಾಮಾಜಿಕ ಕಾರ್ಯಕರ್ತರು ಬಣ್ಣಿಸಿದ್ದಾರೆ. ಆ ತೀರ್ಪಿನ ಮುಂದುವರಿದ ಭಾಗವಾಗಿ ಕೇಂದ್ರ ಸರ್ಕಾರವು ‘ಮುಸ್ಲಿಂ ಮಹಿಳೆಯರ (ವೈವಾಹಿಕ ಹಕ್ಕುಗಳ ಸಂರಕ್ಷಣೆ) ಮಸೂದೆ – 2017’ ಅನ್ನು ಲೋಕಸಭೆಯಲ್ಲಿ ಮಂಡಿಸಿ, ಅನುಮೋದನೆ ಪಡೆದುಕೊಂಡಿರುವುದು ಈಗ ದೊಡ್ಡ ಸುದ್ದಿ. ಈ ಸುದ್ದಿಯ ವಿವಿಧ ಆಯಾಮಗಳ ವಿವರಣೆ ಇಲ್ಲಿದೆ.

‘ತ್ರಿವಳಿ ತಲಾಖ್‌ ತಪ್ಪು’ ಎಂದು ಕೋರ್ಟ್‌ ಹೇಳಿರುವಾಗ ಈ ಮಸೂದೆ ಏಕೆ?

ಮಸೂದೆ ರೂಪಿಸಿದ್ದಕ್ಕೆ ಕಾರಣಗಳೇನು ಎಂಬುದನ್ನು ಸರ್ಕಾರ ಮಸೂದೆಯಲ್ಲೇ ವಿವರಿಸಿದೆ: ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು (ಎಐಎಂಪಿಎಲ್‌ಬಿ) ಶಾಯರಾ ಬಾನೊ ಪ್ರಕರಣದ ಪ್ರತಿವಾದಿಗಳಲ್ಲಿ ಒಂದು. ಸಂವಿಧಾನ ಪೀಠದ ಎದುರು ಪ್ರಕರಣದ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಮಂಡಳಿಯು ‘ತಲಾಖ್‌-ಎ-ಬಿದ್ದತ್‌ನಂತಹ (ತ್ರಿವಳಿ ತಲಾಖ್‌) ಧಾರ್ಮಿಕ ವಿಚಾರಗಳ ಬಗ್ಗೆ ನ್ಯಾಯಾಂಗ ತೀರ್ಮಾನ ಕೈಗೊಳ್ಳಬಾರದು. ಇಂತಹ ವಿಷಯಗಳ ಬಗ್ಗೆ ಕಾನೂನು ರೂಪಿಸುವುದು ಶಾಸಕಾಂಗದ ಕೆಲಸ’ ಎಂದು ವಾದಿಸಿತ್ತು. ತ್ರಿವಳಿ ತಲಾಖ್‌ ಆಚರಣೆ ಬೇಡವೆಂದು ಸಮುದಾಯದವರಿಗೆ ಸೂಚನೆ ನೀಡುವುದಾಗಿಯೂ ಮಂಡಳಿ ಹೇಳಿತ್ತು. ಆದರೆ ತ್ರಿವಳಿ ತಲಾಖ್  ರದ್ದುಪಡಿಸಿದ ಸುಪ್ರೀಂ ಕೋರ್ಟ್ ಆರು ತಿಂಗಳೊಳಗೆ ಸೂಕ್ತ ಶಾಸನ ರೂಪಿಸಲು ಸೂಚಿಸಿತ್ತು.

ADVERTISEMENT

‘ಕೋರ್ಟ್ ತೀರ್ಪಿನ ನಂತರವೂ ತ್ರಿವಳಿ ತಲಾಖ್‌ ಮೂಲಕವೇ ಪತಿಯು ಪತ್ನಿಗೆ ವಿಚ್ಛೇದನ ನೀಡುತ್ತಿರುವ ಪ್ರಕರಣಗಳು ದೇಶದ ವಿವಿಧ ಭಾಗಗಳಿಂದ ವರದಿಯಾಗಿವೆ. ಸುಪ್ರೀಂ ಕೋರ್ಟ್‌ ಆದೇಶವು ಮುಸ್ಲಿಂ ಸಮುದಾಯದಲ್ಲಿನ ಕೆಲವರಲ್ಲಿ ಈ ಆಚರಣೆಯ ಪ್ರಮಾಣವನ್ನು ಕಡಿಮೆ ಮಾಡಿಲ್ಲ ಎಂಬುದು ಕಂಡುಬಂದಿದೆ. ಹಾಗಾಗಿ, ಸುಪ್ರೀಂ ಕೋರ್ಟ್‌ ತೀರ್ಪನ್ನು ಜಾರಿಗೆ ತರಲು ಮತ್ತು ಕಾನೂನಿನ ಮಾನ್ಯತೆ ಇಲ್ಲದ ವಿಚ್ಛೇದನದಿಂದ ತೊಂದರೆಗೆ ಒಳಗಾಗುವವರಿಗೆ ನೆರವಾಗಲು ಸರ್ಕಾರದ ಕಡೆಯಿಂದ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ’ ಎಂದು ಸರ್ಕಾರ ಹೇಳಿದೆ.

ಈ ಮಸೂದೆಯ ಮುಖ್ಯ ಅಂಶ ಏನು?

ತ್ರಿವಳಿ ತಲಾಖ್‌ ಮೂಲಕ ವಿಚ್ಛೇದನ ನೀಡುವ ಕ್ರಮವು ಶಿಕ್ಷಾರ್ಹ ಅಪರಾಧ ಎಂದು ಈ ಮಸೂದೆ ಹೇಳುತ್ತದೆ. ‘ಮಾತಿನ ಮೂಲಕ, ಬರಹದ ಮೂಲಕ, ಯಾವುದೇ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಅಥವಾ ಇನ್ಯಾವುದೇ ರೀತಿಯಲ್ಲಿ ತ್ರಿವಳಿ ತಲಾಖ್ ನೀಡುವುದು ಕಾನೂನುಬಾಹಿರ’ ಎಂದು ಮಸೂದೆಯಲ್ಲಿ ಹೇಳಲಾಗಿದೆ. ಈ ರೀತಿ ತಲಾಖ್ ಹೇಳುವ ಪುರುಷನಿಗೆ ಗರಿಷ್ಠ ಮೂರು ವರ್ಷಗಳ ಅವಧಿಗೆ ಜೈಲುಶಿಕ್ಷೆ ವಿಧಿಸುವ, ಆತನಿಗೆ ದಂಡ ವಿಧಿಸುವ ಅವಕಾಶವನ್ನೂ ಮಸೂದೆ ಕಲ್ಪಿಸಿದೆ. ತ್ರಿವಳಿ ತಲಾಖ್‌, ವಿಚಾರಣೆಗೆ ಅರ್ಹವಾದ ಹಾಗೂ ಜಾಮೀನುರಹಿತ ಅಪರಾಧ ಎಂದು ಇದು ಹೇಳುತ್ತದೆ.

ಮೂರು ಬಾರಿ ತಲಾಖ್‌ ಹೇಳಿದ ನಂತರ ಪತಿಯು ಪತ್ನಿಗೆ ಜೀವನಾಂಶವನ್ನು ಕೊಡಬೇಕು. ಇದರ ಮೊತ್ತ ಎಷ್ಟು ಎಂಬುದನ್ನು ಮ್ಯಾಜಿಸ್ಟ್ರೇಟರು ತೀರ್ಮಾನಿಸುತ್ತಾರೆ. ಅಲ್ಲದೆ, ಆ ದಂಪತಿಗೆ ಜನಿಸಿದ ಮಕ್ಕಳು, ತ್ರಿವಳಿ ತಲಾಖ್‌ ಹೇಳಿದ ನಂತರವೂ ತಾಯಿಯ ಬಳಿಯೇ ಇರಬೇಕು ಎಂದು ಮಸೂದೆ ಹೇಳುತ್ತದೆ.

ಮಸೂದೆ ಕುರಿತ ಆಕ್ಷೇಪಗಳು ಏನು?

ಮುಸ್ಲಿಂ ಪತಿಯೊಬ್ಬ ತನ್ನ ಪತ್ನಿಗೆ ತ್ರಿವಳಿ ತಲಾಖ್‌ ಮೂಲಕ ವಿಚ್ಛೇದನ ನೀಡಿದ್ದಾನೆ ಎಂಬ ದೂರನ್ನು ಪೊಲೀಸರಿಗೆ ಯಾರು ನೀಡಬಹುದು, ಅಂತಹ ದೂರನ್ನು ಪತ್ನಿ ಮಾತ್ರವೇ ನೀಡಬಹುದೇ, ಪತ್ನಿಯ ತವರಿನ ಕಡೆಯವರು ಮಾತ್ರ ನೀಡಬಹುದೇ ಎಂಬ ಬಗ್ಗೆ ಮಸೂದೆಯಲ್ಲಿ ವಿವರಣೆ ಇಲ್ಲ. ಆದರೆ ಹೀಗೆ ವಿಚ್ಛೇದನ ನೀಡುವುದು ಕಾಗ್ನಿಸೆಬಲ್ ಅಪರಾಧ ಎಂದು ಮಸೂದೆ ಹೇಳುತ್ತದೆ. ಅಂದರೆ, ಸಾಮಾನ್ಯ ಸಂದರ್ಭಗಳಲ್ಲಿ ಪೊಲೀಸರು ಕೋರ್ಟ್‌ ಅನುಮತಿ ಇಲ್ಲದೆಯೇ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಬಹುದು. ತ್ರಿವಳಿ ತಲಾಖ್‌ಅನ್ನು ಕಾಗ್ನಿಸೆಬಲ್ ಅಪರಾಧ ಎಂದು ಹೇಳಿರುವುದು ಕಾನೂನಿನ ದುರ್ಬಳಕೆಗೆ ವ್ಯಾಪಕ ಅವಕಾಶ ಕಲ್ಪಿಸಿದಂತೆ ಆಗುತ್ತದೆ ಎಂಬ ಆತಂಕ ಕೂಡ ವ್ಯಕ್ತವಾಗಿದೆ.

ತ್ರಿವಳಿ ತಲಾಖ್‌ ಮೂಲಕ ವಿಚ್ಛೇದನ ನೀಡಿದ ಆರೋಪ ಎದುರಿಸುತ್ತಿರುವ ಪತಿ ಜೈಲಿನಲ್ಲಿರುತ್ತಾನೆ. ಹೀಗಿದ್ದರೂ ಮಸೂದೆಯ ಸೆಕ್ಷನ್ 5, ಆ ಪತಿಯು ಪತ್ನಿಗೆ ಪರಿಹಾರ ಮೊತ್ತ ಕೊಡಬೇಕು ಎಂದು ಹೇಳುತ್ತದೆ. ಜೈಲಿನಲ್ಲಿ ಇರುವ ವ್ಯಕ್ತಿ ಪರಿಹಾರ ಕೊಡುವುದು ಹೇಗೆ ಎಂಬ ಪ್ರಶ್ನೆಗಳನ್ನು ಕೆಲವು ಸಂಸದರು ಎತ್ತಿದ್ದಾರೆ. ‘ವಿವಾಹ ವಿಚ್ಛೇದನವು ಸಿವಿಲ್ ವ್ಯಾಪ್ತಿಯಲ್ಲಿ ಬರುವ ಪ್ರಕರಣ. ಆದರೆ ಇದನ್ನು ಕ್ರಿಮಿನಲ್ ಅಪರಾಧದ ರೀತಿಯಲ್ಲಿ ಪರಿಗಣಿಸುವುದು ಸರಿಯಲ್ಲ’ ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗಿದೆ.

ಎಐಎಂಪಿಎಲ್‌ಬಿ ಏನು ಹೇಳುತ್ತಿದೆ?

ಈ ಮಸೂದೆಯು ಷರಿಯಾದ ಆಶಯಗಳಿಗೆ ವಿರುದ್ಧವಾಗಿದೆ, ಮುಸ್ಲಿಮರ ವೈಯಕ್ತಿಕ ಕಾನೂನುಗಳಲ್ಲಿ ಮೂಗು ತೂರಿಸುವಂತೆ ಇದೆ ಎಂದು ಎಐಎಂಪಿಎಲ್‌ಬಿ ಆಕ್ಷೇಪ ವ್ಯಕ್ತಪಡಿಸಿದೆ. ಮುಸ್ಲಿಂ ಸಮುದಾಯದ ನೈಜ ಪ್ರತಿನಿಧಿಗಳನ್ನು ಸಂಪರ್ಕಿಸಿ ಈ ಮಸೂದೆ ಸಿದ್ಧಪಡಿಸಲಾಗಿಲ್ಲ, ಇದು ಮುಸ್ಲಿಂ ಮಹಿಳೆಯರ ಹಾಗೂ ಮುಸ್ಲಿಂ ಕುಟುಂಬಗಳ ಒಳಿತಿಗೆ ಪೂರಕವಾಗಿಲ್ಲ ಎಂದೂ ಮಂಡಳಿ ಪ್ರತಿಕ್ರಿಯೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.