ನಾನು ಪಣಿಯಮ್ಮ. ನಿಮ್ಮಲ್ಲಿ ಅನೇಕರು ನನ್ನನ್ನ ಕಾದಂಬರಿಯಲ್ಲಿ ಓದಿದ್ದೀರಿ, ಸಿನಿಮಾದಲ್ಲಿ ನೋಡಿದೀರಿ. ನನ್ನ ಬಗ್ಗೆ ಎಲ್ಲರೂ ಬಹಳ ಮಾತನಾಡುವುದನ್ನ ಕೇಳಿಸಿಕೊಂಡಿದೀನಿ ನಾನು. ಏನೇನೋ ಕಾರಣಕ್ಕೆ ನನ್ನನ್ನ ಚರ್ಚೆಗೆ ತರುವುದುಂಟು. ಸ್ವಾತಂತ್ರ್ಯಪೂರ್ವ ಭಾರತೀಯ ಬ್ರಾಹ್ಮಣ ಸಮಾಜದ ಹೆಣ್ಣಿನ ಸ್ಥಿತಿಗತಿಗಳನ್ನ ಪ್ರಾತಿನಿಧಿಕವಾಗಿ, ವಸ್ತುನಿಷ್ಠವಾಗಿ ನನ್ನಲ್ಲಿ ನೋಡಬಹುದು ಅಂತ ಕೆಲವರು, ಬದುಕಿನ ಎಂಥ ಸಂಕಷ್ಟಗಳನ್ನೂ ಗೋಳಾಡದೇ, ಅದಕ್ಕೆ ಕಾರಣರಾದವರನ್ನ ಶಪಿಸದೇ ಹೆಣ್ಣಿಗೆ ಸಾಧ್ಯವಿರುವ– ಅಷ್ಟ್ಯಾಕೆ ಹೆಣ್ಣಿಗೆ ಮಾತ್ರ ಸಾಧ್ಯವಿರುವ ಅನಂತ ತಾಳ್ಮೆಯಲ್ಲಿ ನಾನು ಎದುರಿಸಿದ್ದನ್ನ ಕೆಲವರು ಮುಖ್ಯ ಅಂತ ಗುರುತಿಸಿದ್ದಾರೆ. ಶಾಪಗ್ರಸ್ತ ಬದುಕನ್ನೇ ನಾನು ಸಾರ್ಥಕಗೊಳಿಸಿಕೊಂಡೆ ಅಂತಾನೂ ಕೆಲವರು ಹೇಳಿದ್ದನ್ನ ಕೇಳಿದ್ದೇನೆ ನಾನು.
ಆದರೆ ಮತ್ತೆ ಕೆಲವರ ಪ್ರಕಾರ ಮೂಲತಃ ನಾನು ಪಿತೃಸಂಸ್ಕೄತಿಯ ಬಲಿಪಶು. ಒಟ್ಟಿನ ಮೇಲೆ ನಾನು ವಿರುದ್ಧವೆನಿಸುವ ಎರಡು ಕಾರಣಗಳಿಗಾಗಿ ಪ್ರತೀಕವಾಗಿಬಿಟ್ಟಿರುವುದು ನನಗೆ ಆಶ್ಚರ್ಯವೆನಿಸುತ್ತದೆ. ಒಂದು, ನಾನು ಸಂದುಹೋದ ಕಾಲವೊಂದರ ರೂಪಕ. ವಿಧವೆಯರ ಹಾಡು–ಪಾಡುಗಳ, ನೋವು–ನಲಿವುಗಳ, ಮಾತ್ರವಲ್ಲ ಆ ಕಾಲದ ಸಾಮಾಜಿಕ, ಕೌಟುಂಬಿಕ ವಿನ್ಯಾಸಗಳು, ಹೆಣ್ಣನ್ನು ಕುರಿತ ಅಸೀಮ ಕ್ರೌರ್ಯ ಇವುಗಳನ್ನೆಲ್ಲ ನನ್ನಲ್ಲಿ ನೋಡಬಹುದು ಅನ್ನುವುದು. ಇನ್ನೊಂದು, ಹೆಣ್ಣಿನ ಧಾರಣ ಶಕ್ತಿಯ ಮತ್ತು ಜೀವಪರ ಶಕ್ತಿಯ ಸಂಕೇತ ನಾನು ಅನ್ನುವುದು. ಪ್ರೀತಿ, ಕರುಣೆ, ವಾತ್ಸಲ್ಯದ ಪ್ರತಿರೂಪವೇ ನಾನು ಅನ್ನುವ ಮಟ್ಟಿಗೆ ನನ್ನನ್ನು ನೋಡುವ ದೃಷ್ಟಿಕೋನ ಇದು. ನಮ್ಮ ನರಸಿಂಹಸ್ವಾಮಿಗಳು ‘ನೊಂದು ಮಾಗಲಿ ಜೀವ ಎಂದು ಹರಸು’ ಎಂದು ಬರೆದದ್ದು ನನಗಾಗಿಯೇ ಇರಬೇಕು !
ನಿಜ ಅಂದರೆ ಇಲ್ಲೊಂದು ಥರಾ ವಿರೋಧಾಭಾಸ ಇದೆ ಅಲ್ವ? ನಾನು ಗಟ್ಟಿಹೆಣ್ಣೂ ಹೌದು, ವ್ಯವಸ್ಥೆಯ ಹಿಡಿತಕ್ಕೆ ಬಲಿಯಾದವಳೂ ಹೌದು ಅಂತ ಹೇಳ್ತಾ ಹೇಳ್ತಾನೇ ನನ್ನನ್ನ ‘ಸ್ಮಾರಕ’ ಮಾಡ್ತಾ ಇದಾರೇನೋ ಅನಿಸುತ್ತಪ್ಪ ನನಗೆ. ಹಾಗೆ ನೋಡಿದರೆ ಈ ಎರಡರ ನಡುವಿನ ಹೆಣ್ಣಿನ ತೊಯ್ದಾಟ, ಹಿಮ್ಮುಖ ಮುಮ್ಮುಖ ಚಲನೆಗಳೇ ಹೆಣ್ಣಿನ ನಿರಂತರ ಅವಸ್ಥೆ, ನಾನು ಅದರ ಶಕ್ತ ಪ್ರತಿನಿಧಿ ಅಂತಲೂ ಕೆಲವೊಮ್ಮೆ ನನಗೆ ಅನಿಸೋದಿದೆ.
ಈ ಎಲ್ಲಾ ಅಂಶಗಳ ಜೊತೆಗೆ ನನ್ನ ಕೆಲವು ವಿಚಾರಗಳನ್ನ ನಿಮ್ಮ ಜೊತೆ ಮಾತಾಡಬೇಕು ನಾನು. ಯಾಕೆ ಅಂದರೆ, ಹೆಣ್ಣಿನ ಮಟ್ಟಿಗೆ, ಮಾತಾಡಿದ್ದೆಷ್ಟೋ ಮಾತಾಡದೇ ಇರೋದೂ ಅಷ್ಟೇ ಇರುತ್ತೆ. ಮೌನವೂ ಹೆಣ್ಣಿನ ತುಂಬಾ ಮುಖ್ಯವಾದ ಭಾಷೆ. ಈ ಭಾಷೆಯನ್ನ ನಮ್ಮ ಗಂಡಸರು ಅರ್ಥವಾದರೂ ಅರ್ಥವಾಗದವರ ಹಾಗೆ, ಕೆಲವೊಮ್ಮೆ ಅರ್ಥವಾದದ್ದನ್ನ ಬೇರೇನೋ ಅನ್ನುವ ಹಾಗೆ ವ್ಯಾಖ್ಯಾನಿಸಿದ್ದೇ ಹೆಚ್ಚು. ಅಥವಾ ಅವರಿಗೆ ಬೇಕಾದ ಹಾಗೆ ನಮ್ಮ ಭಾಷೆಯನ್ನ ಅರ್ಥ ಮಾಡಿಕೊಳ್ಳೋದು ಅವರ ಆಜನ್ಮಸಿದ್ಧಹಕ್ಕು ಅಂತಾನು ತಿಳಿದಿದ್ದಾರೆ ಅವರು. ನಮಗೊಂದು ಭಾಷೆ ಯಾಕೆ ಅನ್ನೋದೇ ಅವರ ಪ್ರಶ್ನೆಯೋ ಏನೋ. ನನ್ನ ಬದುಕಿನುದ್ದಕ್ಕೂ ಕಾಣಿಸುವ, ಇರುವ, ನಾನು ಕಾಪಾಡಿಕೊಂಡು ಬಂದಿರುವ ಅಥವಾ ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಕಷ್ಟಪಟ್ಟು ನಾನು ಕಲಿತ ಮತ್ತು ಉಳಿಸಿಕೊಂಡ ಮೌನದ ಭಾಷೆಯನ್ನು ಇವತ್ತು ಮಾತಿನ ಭಾಷೆಯಲ್ಲಿ ಹೇಳಿಕೊಳ್ಳೋಣ ಅಂತ ಶುರುವಿನಿಂದಲೂ ನನಗೆ ಇದ್ಯಾಕೆ ಹೀಗೆ ಅನ್ನೋದೇ ಅರ್ಥವಾಗ್ತಿರಲಿಲ್ಲ.
ಮದುವೆ ಅನ್ನೋದಂತೂ ಒಂದು ಆಟಾನೇ. ಆ ಹೋಮ, ಆ ಹೊಗೆ ಇವೆಲ್ಲಾ ಕಷ್ಟ ಕೊಟ್ಟರೂ ‘ಮದುವಣ್ಗಿತ್ತಿ’ ಅಂತ ಎಲ್ಲರೂ ಬೆಲೆ ಕೊಡ್ತಿದ್ದಾಗ ಒಳಗಿಂದ ಏನೋ ಖುಷಿಯಾಗಿದ್ದೂ ನಿಜ. ಜೀವನದಲ್ಲಿ ಭಯ ಅನ್ನೋದು ನನ್ನ ಅನುಭವಕ್ಕೆ ಬಂದಿದ್ದು ತೀರ್ಥಹಳ್ಳಿ ಎಳ್ಳಮವಾಸ್ಯೆ ದಿನ ಕಳ್ಳ ನನ್ನ ಜಡೆ ಸಮೇತ ಜಡೆಬಿಲ್ಲೆ ಕದ್ದಾಗ. ಆಮೆಲೆ ಇದ್ದಕ್ಕಿದ್ದ ಹಾಗೆ ಒಂದಿನ, ‘ಅಯ್ಯೋ ಪಣಿ, ನಿನ್ನ ಜೀವನ ಮುಗಿದು ಹೋತಲ್ಲೇ’ ಅಂತ ನಮ್ಮಮ್ಮನಾದಿಯಾಗಿ ಎಲ್ಲರೂ ಗೋಳಾಡಿದಾಗ ಏನು ಅಂತಾನೇ ನನಗೆ ಗೊತ್ತಾಗಲಿಲ್ಲ. ಏನೋ ಭಯಂಕರವಾದದ್ದು ನನಗೆ ಆಗಿದೆ ಅನ್ನೋದು ನನಗೆ ಗೊತ್ತಾಗಿದ್ದು ನನ್ನ ತಲೆ ಬೋಳಿಸಿದಾಗಲೇ. ನನ್ನ ಜಾತಕ, ಹುಡುಗನ ಜಾತಕ ನೋಡಿದ್ದ ನಮ್ಮಜ್ಜ, ‘ನಾನು ಸಮನಾಗಿ ಜಾತಕ ನೋಡಿದ್ದೆ. ಹುಡುಗನ ಜಾತಕವನ್ನೇ ಬದಲಾಯಿಸಿದ್ದರೋ ಏನೋ ಯಾರಿಗೆ ಗೊತ್ತು?’ ಅಂತ ಕೊರಗಿದ್ದೇ ಬಂತು.
ಇಲ್ಲಿಂದ ಶುರುವಾಯ್ತು ನೋಡಿ, ನನ್ನ ಅರಿವಿನ, ದ್ವಂದ್ವದ, ಉತ್ತರವಿಲ್ಲದ ಪ್ರಶ್ನೆಗಳ, ಕಾಣುವ, ಕಾಣದಿರುವ ಬದುಕಿನ ಪರ್ವ. ಒಂದು ಘಟ್ಟದ ತನಕ ನನ್ನ ಅಜ್ಞಾನವೇ ನನ್ನನ್ನ ಕಾಪಾಡಿತೋ ಏನೋ. ಆದರೆ ದೇಹ ಪ್ರಕೃತಿಯನ್ನ ಯಾರು ಯಾರಿಗೆ ಕಲಿಸಬೇಕು? ಹೂವಿನ ಹಾಗೆ ಅರಳಿದ ದೇಹ ಅನಾಘೃತ ಕುಸುಮವಾಗಿ ಉಳಿಯಬೇಕು ಅಂತ ಯಾಕೆ ಈ ಗಂಡಸರು ಯೋಚಿಸ್ತಾರೆ? ಅವಳನ್ನ ಹಾಗೆ ಉಳಿಸೋದು ಅವರಿಗೇ ಕಷ್ಟ ಅಂತ ಗೊತ್ತಿದ್ದೂ? ನಮ್ಮ ತಲೆ ಬೋಳಿಸಿ, ಕೆಂಪು ಸೀರೆ ಉಡಿಸಿದರೂ ‘ಜಾರ ಕೃಷ್ಣನ ಕಥೆಗೆ ಕೋಡು ಮೂಡುವುದು’ ಯಾಕೆ ಹೇಳಿ ಮತ್ತೆ? ‘ಮೈ–ಗೋರಿಯಲಿ ಮಡಗಿ ಜೀವ’ವನ್ನ ಸವೆಸುವುದು ತಪಸ್ಸೇ? ಘೋರಶಿಕ್ಷೆಯೆ? ‘ಆಹಾ! ಶಯನಕ್ಕೆ ದಾರಿ ನೂರೆಂಟು’ ಅಂತ ನಾನು ಹೇಳುವುದು ಸಾಧ್ಯವಿತ್ತೆ? ನಾನು ತುಂಬಾ ಇಷ್ಟ ಪಡುವ ಅಕ್ಕ ‘ಶಯನಕ್ಕೆ ಹಾಳು ದೇಗುಲಗಳುಂಟು’ ಅನ್ನುವುದಕ್ಕೆ ಸಾಧ್ಯವಿತ್ತು. ಯಾಕೆಂದರೆ ‘ಆತ್ಮ ಸಂಗಾತಕ್ಕೆ ನೀನೆನಗುಂಟು’ ಎನ್ನುವ ಸಖ್ಯದ ಆಸರೆಯಿತ್ತು.
ಅಷ್ಟರಮಟ್ಟಿಗೆ ಅವಳು ಅದೃಷ್ಟವಂತೆ. ನನಗೇನಿತ್ತು ಹೇಳಿ? ಈ ಕತ್ತಿಯಂಚಿನ ದಾರಿಯನ್ನ ನಾನು ಹೇಗೆ ನಡೆದು ಪೂರೈಸಿದೆನೋ... ಅಂತೂ ಈ ನಮ್ಮ ಸಮಾಜ, ಪರಿಸರ ವಿಧವೆಯಾದ ನಾನು ಹೇಗಿರಬೇಕು ಅಂತ ಕರಾರು ಹಾಕಿತೋ ಹಾಗಿರುವುದಕ್ಕೆ ನಾನು ಪಟ್ಟ ಕಷ್ಟ ಹೇಳುವುದು ಇಂದಿರಾ ಅವರಿಗೂ ಕಷ್ಟವಾಯಿತೋ ಏನೋ– ಅದಕ್ಕೇ ಅವರು ಈ ಅಗ್ನಿದಿವ್ಯದ ವಿವರಗಳಿಗೆ ಹೋಗದೇ ನನ್ನನ್ನ ಬಲುಬೇಗ ನಲವತ್ತನೆಯ ವಯಸ್ಸಿಗೆ ತಂದುಬಿಟ್ಟರೋ ಏನೋ! ಅಥವಾ ನನ್ನನ್ನ ಸ್ಮಾರಕ, ಸಾಧಕಿ ಅಂತೆಲ್ಲ ಮಾಡೋಕೆ ಹೊರಟವರಿಗೆ ಇದನ್ನೆಲ್ಲ ಹೇಳೋದು ಬೇಡ ಅನಿಸಿತೋ? ನನ್ನ ಮೇಲಿನ ಅಪಾರ ಗೌರವವೂ ಅದನ್ನ ನಿರ್ಧರಿಸಿರಬಹುದು.
ಒಂದೊಂದು ಸಲ ನನಗೆ ಸುಬ್ಬಿಯ ಮೂಲಕ ನನ್ನ ತಲ್ಲಣಗಳನ್ನ ಹೇಳೋದಕ್ಕೆ ಪ್ರಯತ್ನ ಪಟ್ಟಿರಬಹುದು ಅನ್ನುವ ಭಾವನೆ ಬರುತ್ತೆ. ಈಗ ಹಿಂದೆ ಹೊರಳಿ ನೋಡಿದರೆ, ನನ್ನ ಮನಸ್ಸು, ದೇಹ ಹೊಯ್ದಾಡಿದ ಘಳಿಗೆಗಳಿರಲಿಲ್ಲವೇ ಅಂತ ಕೇಳಿದರೆ ಏನು ಹೇಳಲಿ? ನನ್ನನ್ನು ತಡೆದದ್ದು ಯಾವುದು? ಭಯವೆ? ಹೆಣ್ಣಿಗೆ ಭಯಗಳಿಗೇನು ಬರ? ಕಂಡ, ಕಾಣದ, ಇರುವ, ಇರದಿರುವ ನೂರೆಂಟಕ್ಕೆ ಭಯ ಪಟ್ಟೇ ಅನೇಕ ಬಾರಿ ಭಯದಲ್ಲೇ ಸತ್ತು ಬದುಕುತ್ತಿರುತ್ತೇವೆ. ಈಗಿನ ಕಾಲದ ನನ್ನ ಎಳೆಯರನ್ನ ನೋಡ್ತಿರುವಾಗಲೂ ನನಗೆ ಅನೇಕ ಬಾರಿ ಭಯ ಅನ್ನುವುದನ್ನ ನಮ್ಮ ಜೀನ್ಸ್ ಗಳಲ್ಲೇ ಹುದುಗಿಸಿಬಿಟ್ಟಿದ್ದಾರೇನೋ ಅನ್ನುವ ಭಾವ ಹೊಳೆದು ಮಾಯವಾಗುವುದುಂಟು. ಆದರೆ ಅದನ್ನ ಮೀರುವುದಕ್ಕೆ ಅವರು ನಡೆಸ್ತಾ ಇರುವ ಪ್ರಯತ್ನಗಳ ಬಗ್ಗೆಯಂತೂ ನನಗೆ ಮೆಚ್ಚುಗೆ ಇದೆ.
ನಾನು ಹೀಗೆ ದೇಹ ಮನಸ್ಸುಗಳನ್ನ ಕಟ್ಟಿಕೊಂಡ ಬಗ್ಗೆ ನನಗೆ ಏನನ್ನಿಸುತ್ತೆ ಅಂತ ಕೇಳಿದರೆ ಉತ್ತರಿಸುವುದು ಕಷ್ಟ ನನಗೆ. ಅದನ್ನ ಸಾಧನೆ ಅಂತ ಸುತಾರಾಂ ಕರೆಯಲಾರೆ. ಅಂಥ ಸಂಯಮ ಸಾಧ್ಯವಾಗಿದ್ದರ ಬಗ್ಗೆ ಮೆಚ್ಚುಗೆ ಇರಬಹುದೇನೋ. ಆದರೆ ಬದುಕಿನ ತೀರ ಮೂಲಭೂತವಾದ, ಸಕಲಜೀವಜಾತರಿಗೂ ಅನಿವಾರ್ಯವೂ ಅಗತ್ಯವೂ ಆದ ಜೀವಧಾತುವೊಂದನ್ನು ನನಗೆ ವಂಚಿಸಿದ್ದನ್ನು ಹೇಗೆ ಅರ್ಥ ಮಾಡಿಕೊಳ್ಳುವುದು? ಅದಕ್ಕೆ ಅವರು ಕೊಡುವ ಸಮರ್ಥನೆಗಳನ್ನು ಮನುಷ್ಯಮಾತ್ರರು ಒಪ್ಪಿಕೊಳ್ಳುವುದು ಸಾಧ್ಯವಿದೆಯೆ? ಇದನ್ನು ಪ್ರತಿಭಟಿಸುವುದು ನನಗೆ ಸಾಧ್ಯವಿತ್ತೆ? ಕಷ್ಟವಾದರೂ ಅಸಾಧ್ಯ ಅಂತ ನನಗೆ ಅನಿಸುವುದಿಲ್ಲ. ಆದರೆ ನೈತಿಕತೆ ಅಂತ ಅವರು ಹೇಳಿದ್ದನ್ನ ಮೀರುವುದು ನನಗೆ ಕಷ್ಟವಾಯಿತು. ಮನೆ ಮನೆತನದ ಮರ್ಯಾದೆ, ಘನತೆ ಇವುಗಳನ್ನೆಲ್ಲ ಬಿಡಿಸಬರದ ಹಾಗೆ ಹೆಣೆದು ಬಿಟ್ಟಿರುತ್ತಾರಲ್ಲ. ಅದರಿಂದ ನನ್ನನ್ನ ಬಿಡಿಸಿಕೊಳ್ಳುವುದು ಸುಲಭವಾಗಲಿಲ್ಲ ನನಗೆ. ಅಥವಾ ಅಂಥ ಸನ್ನಿವೇಶವನ್ನು ನಾನೇ ಗುರುತಿಸಿಕೊಳ್ಳಲಿಲ್ಲವೋ? ನಿರ್ಮಿಸಿಕೊಳ್ಳಲಿಲ್ಲವೋ?
ನನಗೆ ಸಾಧ್ಯವಾದ ಪ್ರತಿರೋಧವೆಂದರೆ ‘ಹಿಟ್ಟು ಅವಲಕ್ಕಿಗಳ ಮೂಲಕ್ಕೆ ಹುಟ್ಟಿದವಳು’ ಎನ್ನುವ ಹಂಗಿನ ಒಪ್ಪೊತ್ತಿನ ಊಟವನ್ನ ನಿರಾಕರಿಸಿದ್ದೇನೋ ಅಂತ ಕೆಲವು ಬಾರಿ ನನಗೆ ಅನಿಸುವುದಿದೆ. ನಾನು ಮಾಡುತ್ತಿದ್ದ ಒಂದು ಹೊತ್ತಿನ ಊಟವನ್ನೂ ಬಿಟ್ಟು ಹಣ್ಣು ಮಜ್ಜಿಗೆಗೆ ನನ್ನನ್ನು ಒಪ್ಪಿಸಿಕೊಂಡದ್ದನ್ನು ತ್ಯಾಗ, ತಪಸ್ಸು ಅಂತೆಲ್ಲ ಕರೆಯುವುದನ್ನು ನೋಡಿ ನಗು ಬರುತ್ತೆ ನನಗೆ. ತೀರಾ ಅಗತ್ಯವಾಗಿ ಬೇಕಾದದ್ದನ್ನೇ ನಿರಾಕರಿಸಿ, ಉಪಕಾರ ಮಾಡುವವರ ಹಾಗೆ ಒಂದುಹೊತ್ತಿನ ಊಟವನ್ನು ದಯಪಾಲಿಸುವ ಕರುಣೆ ಬೇಡ ಅನಿಸಿತು ನನಗೆ. ಹೀಗಂತ ಮನೇಲಿ ನನ್ನನ್ನ ಅವಮರ್ಯಾದೆಯಿಂದ ನಡೆಸಿಕೊಂಡರು ಅಂತಲ್ಲ. ಅಪ್ಪ, ಅಮ್ಮ, ಚಿಕ್ಕಪ್ಪ, ಮಿಕ್ಕವರು ನಿಜವಾದ ಪ್ರೀತಿಯಿಂದಲೇ ನನ್ನನ್ನು ಕಂಡರು ನಿಜ. ಹೀಗಿದ್ದೂ ‘ನಿಮ್ಮೊಳಗಿದ್ದೂ ನಿಮ್ಮಂತಾಗದ’ ವಾಸ್ತವವನ್ನ ಬದುಕಿನ ಪ್ರತಿ ಘಳಿಗೆಯೂ ನಾನು ಅನುಭವಿಸಿದ್ದೂ ಅಷ್ಟೇ ನಿಜ.
ಬದುಕು ಎಷ್ಟು ವಿಲಕ್ಷಣ ನೋಡಿ. ಸ್ವತಃ ತಾಯಿಯಾಗುವುದರಿಂದ ನನ್ನದಲ್ಲದ ಕಾರಣಕ್ಕೆ ನಿರ್ಬಂಧಿಸಲ್ಪಟ್ಟ ನಾನು ಅನೇಕ ತಾಯಿಯರನ್ನ ಹೆರಿಗೆಯ ಮೂಲಕ ಸೃಷ್ಟಿಸಿದೆ. ಅಂಥ ಘಳಿಗೆಗಳಲ್ಲಿನ ನನ್ನ ಮನಸ್ಥಿತಿಯನ್ನ ಬಿಚ್ಚಿಡುವುದು ಕಷ್ಟ. ಜೀವಸೃಷ್ಟಿಯ ಇಂಥ ಕಷ್ಟವೋ ವಿಕಾರವೋ ನನಗೆ ಒದಗಲಿಲ್ಲವಲ್ಲ ಎನ್ನುವ ಸಮಾಧಾನದ ಜೊತೆಜೊತೆಗೆ ಸೃಷ್ಟಿಯ ಅಖಂಡ ಭಾಗವೇ ಆಗಿರುವ ಈ ಹೆರಿಗೆಯ ನೋವು ಬದುಕನ್ನು, ಮನುಷ್ಯರನ್ನು ಅರ್ಥ ಮಾಡಿಕೊಳ್ಳಲು ನೆರವಾಯಿತು ನನಗೆ. ಹೆಣ್ಣಿನ ಜನ್ಮವನ್ನ ಕುರಿತ ನನ್ನ ಹೆಮ್ಮೆ ಗೌರವವೂ ಹೆಚ್ಚಾಗಿದ್ದು ಈ ಕಾರಣಕ್ಕಾಗಿಯೇ.
ಆದ್ದರಿಂದಲೇ ಜಾತಿ, ಧರ್ಮವನ್ನ ಮೀರಿ ನಾನು ಹೆರಿಗೆಯನ್ನ ಮಾಡಿಸಿದ್ದು. ಜಗತ್ತಿನ ಎಲ್ಲ ಹೆಣ್ಣುಮಕ್ಕಳೂ ಜಾತಿ ಧರ್ಮಗಳ ಚೌಕಟ್ಟನ್ನ ಮೀರಿ ಸಮಾನ ನೆಲೆಯಲ್ಲಿ ಸೇರುವುದು ಒಂದು ಕಷ್ಟವೇ ಅಲ್ಲ ಹಾಗೆ ನೋಡಿದರೆ. ಆದರೆ ಅದನ್ನೂ ಈ ಗಂಡಸರು ಹೇಗೆ ನಿಭಾಯಿಸುತ್ತಾರೆ ನೋಡಿ– ಜಡೆಗೆ ಜಡೆ ಸೇರುವುದಿಲ್ಲ ಎಂದು ನಮ್ಮಲ್ಲೇ ಒಡಕು ತಂದು. ನಾವೂ ಇಂಥದ್ದನ್ನೆಲ್ಲ ಎದುರಿಸಿ ಒಂದಾಗಿ ನಮ್ಮನ್ನ ಬಲಪಡಿಸಿಕೊಳ್ಳಬೇಕು. ಇರಲಿ, ಆ ಮುಸ್ಲಿಮ್ ಹುಡುಗಿಗೆ ಸಹಾಯ ಮಾಡಿದ್ದನ್ನೂ ನಾನು ಮನೆಯಲ್ಲಿ ಹೇಳದೇ ಇದ್ದದ್ದರ ಬಗ್ಗೆ ನನಗೆ ನಿಜಕ್ಕೂ ಬೇಸರವಿದೆ. ಒಂದು ಜೀವ ಉಳಿಸಿ ಇನ್ನೊಂದರ ಜನ್ಮಕ್ಕೆ ಅವಕಾಶ ಮಾಡಿಕೊಡುವುದನ್ನು ನಮ್ಮ ಧರ್ಮಗಳು, ವ್ಯವಸ್ಥೆಗಳು ಒಪ್ಪುವುದಿಲ್ಲ ಎನ್ನುವುದಾದರೆ ಧಿಕ್ಕಾರವಿರಲಿ ಅವುಗಳಿಗೆ.
ನಾನು ಇವತ್ತು ಹೇಳುವುದಕ್ಕೆ ಹೊರಟ ಇನ್ನೊಂದು ಸಂಗತಿಯಿದೆ. ಅದನ್ನು ಹೇಳುವುದಕ್ಕೇ ಇಷ್ಟೆಲ್ಲ ಪೀಠಿಕೆ ಹಾಕಿದ್ದು ಅಂದರೂ ನಡೆಯುತ್ತದೆ. ಅದು ನಮ್ಮ ದಾಕ್ಷಾಯಣಿಯ ಬಗ್ಗೆ. ಅದೆಷ್ಟು ಧೈರ್ಯವಾಗಿ ಆ ಹುಡುಗಿ ತನ್ನ ಜೀವನ ಕಟ್ಟಿಕೊಂಡಳು ನೋಡಿ. ನನಗಂತೂ ಬಲು ಮೆಚ್ಚುಗೆಯವಳು ಇವಳು. ನನ್ನ ಕಣ್ಣ ಮುಂದೆಯೇ ಇದು ಘಟಿಸಿತಲ್ಲ ಅನ್ನುವ ಸಂತೋಷ, ಸಮಾಧಾನದ ಜೊತೆಗೇ ವಿಷಾದವೂ ಇದೆ ಅನ್ನಿ. ಸಮಾಧಾನ ಯಾಕೆಂದರೆ, ಜೈವಿಕವಾಗಿ, ಸಾಮಾಜಿಕವಾಗಿ ಮಾತ್ರವಲ್ಲ ಅದಕ್ಕೆ ಅಧಿಕೃತತೆ ಬೇಕು ಅನ್ನುವ ದೃಷ್ಟಿಯಿಂದ ತನ್ನ ಎಲ್ಲ ಬಗೆಯ ಹಕ್ಕುಗಳಿಗೂ ಈ ಹುಡುಗಿ ಹೋರಾಡಿದ್ದು ನೋಡಿದರೆ, ಇಂಥ ಹೋರಾಟದ ಮೂಲಕವೇ ನಮ್ಮ ಹಕ್ಕಿನದ್ದನ್ನು ನಾವು ಪಡೆದುಕೊಳ್ಳಬಹುದು ಅಂತ ಅನ್ನಿಸುತ್ತಿರುವಾಗಲೇ ಯಾವ ಕಾಲಕ್ಕೂ ಎಲ್ಲದಕ್ಕೂ ಹೋರಾಡುವುದೇ ನಮ್ಮ ಸ್ಥಾಯಿ ಸ್ಥಿತಿಯೇ ಎನ್ನುವ ವಿಷಾದವೂ ಹುಟ್ಟುತ್ತದೆ.
ತಲೆಬೋಳಿಸುವುದನ್ನು ವಿರೋಧಿಸುವುದರಿಂದ ಇವಳ ಪ್ರತಿರೋಧ ಆರಂಭವಾಯ್ತು. ಕೊನೆಗೆ ಆ ಹುಡುಗಿ ನನಗೆ ರಾತ್ರಿ ಊಟ ಬಿಡೋಕಾಗೋಲ್ಲ ನನಗೆ ಹಸಿವೆಯಾಗುತ್ತೆ ಅಂದಾಗಲೂ ಆ ದುಷ್ಟರಿಗೆ ಪಾಪಪ್ರಜ್ಞೆ ಹುಟ್ಟಲಿಲ್ಲವಲ್ಲ. ಹೇಗೆ ಬದುಕೋದು ಇಂಥ ನರರಾಕ್ಷಸರ ಮಧ್ಯೆ? ಕೊನೆಗೆ ತನ್ನ ಮೈದುನನಿಗೇ ಗರ್ಭಿಣಿಯಾದಾಗ ಮನೆ ಬಿಟ್ಟು ಓಡಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದ ತನ್ನ ಅತ್ತೆ ಮನೆಯವರಿಗೆ ದಾಕ್ಷಾಯಿಣಿ ಕೊಟ್ಟ ಉತ್ತರ ನನಗೆ ಇವತ್ತಿಗೂ ನೆನಪಿದೆ, ‘ನಿಮ್ಮ ಮಗನೇ ಬಸಿರು ತುಂಬಿದವರು. ನಾ ಯಾಕೆ ತವರು ಮನೆಗೆ ಹೋಗ್ಲಿ? ನೀವೇ ಬಾಣಂತನ ಮಾಡಿ. ಆ ಮಗನ ಬದ್ಲಿಗೆ ಈ ಮಗ ಅಷ್ಟೇ ಸೈಯಲ್ಲ?’. ನನಗಂತೂ ನನ್ನಂಥ ಎಷ್ಟೋ ತಲೆಮಾರುಗಳ ವಕೀಲಳಾಗಿ ಈ ಹುಡುಗಿ ಕಂಡಳು. ನಮ್ಮನ್ನ ಕೊನೆಯಿರದ ದೌರ್ಜನ್ಯಕ್ಕೆ, ಅನ್ಯಾಯಕ್ಕೆ ನೂಕಿದವರಿಗೆ ಹೀಗೇ ಅಲ್ಲವೇ ಉತ್ತರ ಕೊಡಬೇಕಾದ್ದು?
ನಾನು ಬೇರೆ ನಿಲುವಿನವಳು, ಈ ದಾಕ್ಷಾಯಿಣಿ ಬದಲಾದ ಕಾಲಘಟ್ಟದವಳು ಅಂತ ನೋಡೋದಕ್ಕಿಂತ ನಾವಿಬ್ಬರೂ ಒಂದು ಪ್ರಕ್ರಿಯೆಯ ಭಾಗಗಳು ಅಂತ ನೋಡೋದೇ ಸರಿ. ನನ್ನಲ್ಲಿ ಹುಟ್ಟಿದ ಅವ್ಯಕ್ತ ಪ್ರಶ್ನೆಗಳಿಗೆ ಇವಳಲ್ಲಿ ಉತ್ತರ ಸಿಕ್ಕಿತು ಅಂದರೂ ಸರಿ. ಕಾಲ ಬದಲಾಗುತ್ತೆ ಅನ್ನುವುದು ನಿಜ, ನಮ್ಮ ಹೋರಾಟದ ದಾರಿ, ಸ್ವರೂಪ, ಪರಿಣಾಮ ಎಲ್ಲದರಲ್ಲೂ ಬದಲಾವಣೆಗಳಾಗುತ್ತೆ ಅನ್ನುವುದೂ ನಿಜ. ಆದರೆ ಅವೆಲ್ಲವನ್ನೂ ಹೆಣೆಯುವ ಮೂಲಸಂಗತಿಯೇ ನಮ್ಮನ್ನೆಲ್ಲ ಒಂದೇ ಹೋರಾಟದ ಸಂಗಾತಿಗಳಾಗಿಸುತ್ತೆ. ದಾಕ್ಷಾಯಿಣಿ ಲೋಕ ವಿರೋಧಿಸುವ ಭಂಡತನದಲ್ಲೇ ಆಗಲಿ, ಅದನ್ನು ವ್ಯವಸ್ಥೆ ಅದೆಷ್ಟೇ ಅನಧಿಕೃತ ಅಂತ ಬೊಂಬಡ ಹೊಡೆದರೂ ದಾಕ್ಷಾಯಣಿ ಮಾಡಿದ್ದನ್ನು ನಾನು ಒಪ್ಪುತ್ತೇನೆ. ಚೌಕಟ್ಟನ್ನು ಮೀರುವುದು ಇನ್ನೊಂದು ಚೌಕಟ್ಟನ್ನು ಕಟ್ಟಿಕೊಳ್ಳುವ ಹೊತ್ತಿನಲ್ಲಿ ಅನಿವಾರ್ಯ.
ಈ ಹೋರಾಟ ಎಂದಾದರೂ ಮುಗಿದೀತೆ? ಗೊತ್ತಿಲ್ಲ ನನಗೆ. ಹೋರಾಟ ನಿಲ್ಲದಿರುವುದೇ ಅದು ಎಂದಾದರೂ ಮುಗಿಯಬಹುದಾದ್ದರ ಸಂಕೇತ. ಇಷ್ಟನ್ನೆಲ್ಲ ನಿಮ್ಮ ಬಳಿ ಹೇಳಿಕೊಂಡು ಮನಸ್ಸು ಸ್ವಲ್ಪ ಹಗುರವಾಯಿತು ಈಗ. ಇನ್ನೂ ಎಷ್ಟೋಂದಿದೆ ಮಾತಾಡೋಕೆ... ಮತ್ತೆ ಸಿಕ್ಕೋಣ.
saptahika@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.