ಈಗ ರಾಜ್ಯದ ಸಾಂಸ್ಕೃತಿಕ ನೀತಿಯ ಬಗೆಗೆ ಮಾತುಕತೆ ಆರಂಭವಾಗಿದೆ. ಸರ್ಕಾರ, ನೀತಿಯ ನಿರೂಪಣೆಗೆಂದು ತಜ್ಞರ ಸಮಿತಿಯನ್ನು ರಚಿಸಿದೆ. ರಾಜ್ಯಕ್ಕೆ ಸಾಂಸ್ಕೃತಿಕ ನೀತಿ ಬೇಕೆಂಬ ಮಾತು ಇಂದಿನದೇನಲ್ಲ. ೧೫ ವರ್ಷಗಳ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಈ ಕಾರ್ಯ ಕೈಗೊಂಡಿತ್ತು.
ಆಗಿನ ಅಕಾಡೆಮಿಗಳ ಅಧ್ಯಕ್ಷರು, ಹಲವು ಇಲಾಖೆಗಳ ಮುಖ್ಯಸ್ಥರು ಹಾಗೂ ಸಾಹಿತಿ-ಕಲಾವಿದರ ಸಭೆ ಕರೆದು ಸಮಾಲೋಚಿಸಿತ್ತು. ನಂತರ ಕರಡು ನೀತಿಯನ್ನು ರಚಿಸಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಈ ಕರಡು ನೀತಿಯನ್ನು ರಚಿಸಿದವರಲ್ಲಿ ಬರಗೂರು ರಾಮಚಂದ್ರಪ್ಪ, ಈ ಬರಹದ ಲೇಖಕ ಮತ್ತು ಜೆ.ಎನ್.ಶಾಮರಾವ್ ಇದ್ದರು. ಆಗ ಈ ಕಾರ್ಯಕ್ಕೆ ಬಹು ಉತ್ಸಾಹದಿಂದ ನೆರವಾದವರು ಇಲಾಖೆಯ ನಿರ್ದೇಶಕರಾಗಿದ್ದ ವೈ.ಕೆ. ಮುದ್ದುಕೃಷ್ಣ. ಆಗ ಇಲಾಖೆ ಕಾರ್ಯದರ್ಶಿಯಾಗಿದ್ದವರು ಚಂದ್ರಹಾಸ ಗುಪ್ತ.
ಅವರಿಗೆ ಯಾಕೋ ನೀತಿಯ ಬಗ್ಗೆ ಆಸಕ್ತಿ ಇರಲಿಲ್ಲ. ಆದರೆ ಸಚಿವರಾಗಿದ್ದ ರಾಣಿ ಸತೀಶ್ ಅವರಿಗೆ ನೀತಿಯನ್ನು ಜಾರಿಗೆ ತರಬೇಕೆಂಬ ಉದ್ದೇಶವಿತ್ತು. ಆದರೆ ಅದು ಅನುಷ್ಠಾನಕ್ಕೆ ಬರಲಿಲ್ಲ; ಬದಲಾಗಿ ಸಾಂಸ್ಕೃತಿಕ ನೀತಿಯಡಿ ಕೆಲವು ಮಾರ್ಗಸೂಚಿಗಳನ್ನು ಸರ್ಕಾರ ಹೊರಡಿಸಿತು. ಇದಕ್ಕೂ ಮೊದಲು ಕೇಂದ್ರ ಸರ್ಕಾರ, ಕೇರಳ, ಮಹಾರಾಷ್ಟ್ರಗಳಂಥ ಕೆಲವು ರಾಜ್ಯಗಳು ಸಾಂಸ್ಕೃತಿಕ ನೀತಿ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸಿದ್ದವು. ಆದರೆ ಆ ರಾಜ್ಯಗಳಾಗಲೀ, ಕರ್ನಾಟಕ ರಾಜ್ಯವಾಗಲೀ ಸಂಸ್ಕೃತಿಗೆ ಒಂದು ನೀತಿಯನ್ನು; ಅದರ ಅಂತರಾತ್ಮದ ಬಗ್ಗೆ ಸ್ಪಷ್ಟ ಸ್ವರೂಪವನ್ನು ನೀಡಲಾಗಲಿಲ್ಲ ಎಂಬುದು ಗಮನಾರ್ಹ.
ಈ ನಡುವೆ ಮತ್ತೆ ಸರ್ಕಾರವು ಹಿಂದೆ ಸಿದ್ಧಪಡಿಸಲಾಗಿದ್ದ ಕರಡು ನೀತಿಯ ಪರಿಶೀಲನೆಗಾಗಿ ಒಂದು ಸಮಿತಿಯನ್ನು ಒಂದು ವರ್ಷದ ಹಿಂದೆಯಷ್ಟೇ ರಚಿಸಿತ್ತು. ಆ ಸಮಿತಿಯಲ್ಲಿ ಬರಗೂರು, ಚಿಕ್ಕಣ್ಣ, ಶಶಿಧರ ಬಾರಿಘಾಟ್, ವೈ.ಕೆ.ಮುದ್ದುಕೃಷ್ಣ ಮುಂತಾದವರಿದ್ದರು. ಆ ಸಮಿತಿಯನ್ನು ಇದ್ದಕ್ಕಿದ್ದಂತೆ ರದ್ದುಪಡಿಸಿ ಬರಗೂರು ಅಧ್ಯಕ್ಷತೆಯಲ್ಲಿ ಬೇರೆಯದೇ ಸಮಿತಿ ರಚನೆಯಾಯಿತು. ಸರ್ಕಾರದ ಈ ಬಗೆಯ ಮರಳಿಯತ್ನಗಳನ್ನು ಗಮನಿಸಿದರೆ ಬಹುಶಃ ಸಂಸ್ಕೃತಿಯ ನೀತಿ ರಚನೆ ಬಗ್ಗೆ ಸರ್ಕಾರಕ್ಕೂ ಹೊಯ್ದಾಟವಿರಬಹುದೇ? ಗೊತ್ತಿಲ್ಲ. ಆದರೆ ಸಾರ್ವಜನಿಕರಲ್ಲಿ ಅನುಮಾನಗಳಿವೆ.
ಅದೆಂದರೆ ಬಹುಶಃ ಸಂಸ್ಕೃತಿಗೆ ಒಂದು ಚೌಕಟ್ಟು ತೊಡಿಸುವ ಬಗೆಗಿನ ಅಸ್ಪಷ್ಟತೆ ಮತ್ತು ನೀತಿ ರಚನೆಯ ಅವಧಿಯಲ್ಲಿ ಆಡಳಿತ ನಡೆಸುವ ಆಳುವ ಪಕ್ಷವೊಂದರ ಪ್ರಭುತ್ವದಡಿ ರೂಪು ತಾಳುವ ನೀತಿಯ ಬಗೆಗಿನ ಆತಂಕ ಅನುಮಾನಗಳು ಅವು. ಪ್ರಜಾಸತ್ತಾತ್ಮಕ ಚಿಂತನ ಕ್ರಮದಲ್ಲಿ ಇದು ಅಪ್ರಕೃತವೇನಲ್ಲ. ವಿಷಯಾಂತರವೇನೂ ಆಗದಿದ್ದರೆ, ಹಿಂದೆ ಆಗಿರುವ ಪ್ರಸಂಗಗಳನ್ನು ನೆನಪಿಸಿಕೊಂಡರೆ, ಸರ್ಕಾರ ಬಯಸುವ ಈ ಬಗೆಯ ವರದಿಗಳು ಅಥವಾ ನಿರೂಪಣೆಗಳು ಸಾಮಾನ್ಯವಾಗಿ ವಿಶ್ವಾಸಾರ್ಹತೆಯನ್ನು ಗಳಿಸಿಕೊಂಡಿದ್ದು ಕಡಿಮೆ. ಇದಕ್ಕೆ ಕಾರಣಗಳು ಇಲ್ಲದಿಲ್ಲ ಅಂತಲ್ಲ.
ಮೊದಲನೆಯದಾಗಿ ಸರ್ಕಾರ ತೋರುವ ಸ್ವ-ಹಿತಾಸಕ್ತಿ. ಎರಡನೆಯದು ನೀತಿ ನಿರೂಪಣೆಗಾಗಿ ನಾಮನಿರ್ದೇಶನವಾಗುವವರು ವಸ್ತು ವಿಷಯದಲ್ಲಿ ನಿರ್ವ್ಯಾಮೋಹಿಗಳಾಗಿ, ನಿರೂಪಣೆಯಲ್ಲಿ ತಮ್ಮ ಗ್ರಹಿಕೆ, ಸಿದ್ಧಾಂತ, ಅನುಭಗಳ ಎಲ್ಲೆಯನ್ನು ದಾಟಿದ ಲೋಕದೃಷ್ಟಿಯುಳ್ಳವರಾಗಿ, ಅವಕಾಶಕೊಟ್ಟವರಿಗೊಂದು ಅಂತರಂಗದ ಮನ್ನಣೆ ನೀಡದ ದಾಕ್ಷಿಣ್ಯರಹಿತರಾಗಿ ಇದ್ದೆವೆಂದು ತಮ್ಮ ಕೃತಿಯಲ್ಲಿ ತೋರ್ಪಡಿಸಿಕೊಂಡಿರುವುದು ಬಹು ವಿರಳ.
ಇಷ್ಟಾಗಿಯೂ, ಯಾವುದೇ ವರದಿ ಸರ್ವಮಾನ್ಯವಾಗುವುದು ಕಷ್ಟ ಎಂಬುದು ವಿದಿತ. ಆದರೆ ಬಹುಮಾನ್ಯತೆಯನ್ನು ಪಡೆಯಬೇಕಾದರೆ ಮೇಲೆ ಹೇಳಿದಂತೆ ಸರ್ಕಾರ ಮತ್ತು ವರದಿ ರೂವಾರಿಗಳ ಗ್ರಹಿಕೆಯಲ್ಲಿ ಲೋಕದೃಷ್ಟಿ; ಸ್ಪಂದನೆಯಲ್ಲಿ ಜೀವದೃಷ್ಟಿ; ಮರೆವಿನಲ್ಲಿ ತನ್ನದೃಷ್ಟಿ; ನಿರೂಪಣೆಯಲ್ಲಿ ವಸ್ತುಸ್ಥಿತಿ ಹಾಗೂ ಸಮಾಜದೃಷ್ಟಿ ಇರುವುದು ಮುಖ್ಯ. ಈ ಮಾತುಗಳನ್ನು ಮುನ್ನೆಲೆಗೆ ಇರಿಸಿಕೊಂಡೇ ವಿಚಾರ ಮಾಡೋಣ.
ಪ್ರಸ್ತುತ, ನಾವು ಸಂಸ್ಕೃತಿಗೆ ನೀತಿ ನಿರೂಪಿಸುತ್ತಿದ್ದೇವೆಯೋ ಅಥವಾ ಸಾಂಸ್ಕೃತಿಕ ಚಟುವಟಿಕೆಗಳ ಪುರೋಭಿವೃದ್ಧಿಗಾಗಿ ನೀತಿ ನಿರೂಪಿಸುತ್ತಿದ್ದೇವೆಯೋ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಬೇಕಾಗಿದೆ. ಸಂಸ್ಕೃತಿಗೆ ಒಂದು ಚೌಕಟ್ಟು ತೊಡಿಸುತ್ತಿದ್ದೇವೆಂಬ ಗ್ರಹಿಕೆಯಲ್ಲಿ ಕಾಣಬರುತ್ತಿರುವ ಅಭಿಪ್ರಾಯ ಭೇದಗಳಿಗೆ ಹಲವು ಆಯಾಮಗಳಿವೆ. ಯಾಕೆಂದರೆ ಸಂಸ್ಕೃತಿ ಮತ್ತು ಸಾಂಸ್ಕೃತಿಕ ನೀತಿನಿರೂಪಣೆ ಕುರಿತಂತೆ ಇರುವ ಸೂಕ್ಷ್ಮತೆ ಮತ್ತು ಇವೆರಡರ ಅಂತರ್ ಸಂಬಂಧಗಳ ಬಗೆಗಿನ ನಂಬುಗೆಯನ್ನು ಮತ್ತು ನಡೆಯನ್ನು ಇನ್ನಷ್ಟು ಖಚಿತಪಡಿಸಿಕೊಳ್ಳಬೇಕಾದ ಸಂದರ್ಭ ಮತ್ತು ಸಮುದಾಯದಲ್ಲಿ -ನಾವಿದ್ದೇವೆ.
ಕಾರಣ ಸಂಸ್ಕೃತಿಗೆ ನೀತಿಯನ್ನು ರೂಪಿಸುತ್ತೇವೆ ಎಂಬ ಹಂತದಿಂದಲೇ ಈ ಗೊಂದಲ ಪ್ರಾರಂಭವಾಗುತ್ತದೆ. ಸಂಸ್ಕೃತಿಯ ಚಲನಶೀಲತೆಗೆ ಮತ್ತು ಸೃಜನಕ್ರಿಯೆಗೆ ಮಾನದಂಡ ಎಂಬುದು ಅವಾಸ್ತವ ಮತ್ತು ಅಸಾಧುವಾದುದು. ಜೊತೆಗೆ, ಮುಖ್ಯವಾಗಿ ಪ್ರಜಾಪ್ರಭುತ್ವದ ವ್ಯವಸ್ಥೆಯ ಬಹು ಸಂಸ್ಕೃತಿಗಳ ನಾಡಿನಲ್ಲಿ ಸಂಸ್ಕೃತಿಗೆ ಸಾರ್ವತ್ರಿಕ ಬಣ್ಣ ಹಚ್ಚಿ ನೋಡುವುದು ಅಪಾಯಕಾರಿಯೂ ಹೌದು. ಇವತ್ತಿನ ಕಾರ್ಪೊರೇಟ್ ವಲಯದ ವ್ಯಾಪಾರಿತನವಂತೂ ಇನ್ನಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.
ಬಹುತ್ವದ ದೇಸಿಜ್ಞಾನವನ್ನೇ ಏಕತ್ರಗೊಳಿಸುತ್ತಾ ಸಾಗುವ ಈ ಕೊಳ್ಳುಬಾಕ ಹಾವಳಿಯ ನಡುವೆ ಸಂಸ್ಕೃತಿ ಇರಲಿ, ಸಾಂಸ್ಕೃತಿಕ ನೀತಿಯ ಬಗೆಗೂ ಕಡು ಎಚ್ಚರ ಇರಲೇಬೇಕಾಗುತ್ತದೆ. ಆದ್ದರಿಂದ ಸಂಸ್ಕೃತಿ ಬಗೆಗಿನ ಎಚ್ಚರ ಮತ್ತು ಸಾಂಸ್ಕೃತಿಕ ನೀತಿ ನಿರೂಪಣೆಯ ಆಶಯದ ಬಗೆಗೆ ಇನ್ನಷ್ಟು ಖಚಿತತೆ ಬೇಕೆಂಬುದು ಸರಿಯಾದುದು. ಇದನ್ನು ಅಲಗಂಚಿನ ನಡೆ ಎಂದರೂ ಆದೀತು. ಇದಕ್ಕೆ ಪೂರಕವಾಗಿ ಎರಡು ಘಟನೆಗಳನ್ನು ನೀಡುವುದರ ಮೂಲಕ ಇನ್ನಷ್ಟು ವಿವರಿಸಿಕೊಳ್ಳಬಹುದು.
ಒಂದು: ನನ್ನ ಅಧ್ಯಾಪಕ ಮಿತ್ರ ಹೇಳಿದ ಘಟನೆ. ತಾನು ಮದುವೆಯಾಗಿದ್ದ ಹೊಸತಿನಲ್ಲಿ ಗಂಡ ಹೆಂಡತಿ ಇಬ್ಬರೂ ಜೋಗ್‌ಫಾಲ್ಸ್ ನೋಡಲು ಬರಲೊಲ್ಲದ ತನ್ನ ಅವ್ವನನ್ನು ಬಲವಂತದಿಂದ ಹೊರಡಿಸಿಕೊಂಡು ಹೋಗಿದ್ದರಂತೆ. ತಾವಿಬ್ಬರೂ ಫಾಲ್ಸ್ ನೋಡಿಯಾದ ಮೇಲೆ ದೂರದಲ್ಲಿ ಒಬ್ಬಳೇ ನಿಂತಿದ್ದ ಅವ್ವನ ಹತ್ತಿರ ಬಂದು ‘ಯಾಕವ್ವ? ಸುಮ್ನೆ ನಿಂತುಬಿಟ್ಟೆ? ಹೆಂಗಿದೆ?’ ಅಂದನಂತೆ. ಅವ್ವ ‘ಅಯ್ಯೋಪಾಪ ಕನಪ್ಪ’ ಅಂದ-ಳಂತೆ. ಅದು ಈ ಮೇಸ್ಟರಿಗೆ ಅರ್ಥವಾಗಲಿಲ್ಲ. ಮತ್ತೆ ಕೇಳಿದನಂತೆ. ಅದಕ್ಕೆ ಆ ಅವ್ವ ಹೇಳಿದಳಂತೆ ‘ಆಟು ಎತ್ತರದಿಂದ ಈ ತಾಯಿಗಂಗವ್ವ ಬೀಳ್ತಾ ಅವಳಲ್ಲ -ಅವಳಿಗೆ ಏಟು ನೋವ್ವಾಗಬ್ಯಾಡ!’ (ಸ್ನೇಹಿತ ಒಂದು ಕ್ಷಣ ಅವಾಕ್ಕಾಗಿ ನಿಂತನಂತೆ, ಇರಲಿ).
ಇನ್ನೊಂದು: ಇದೇ ಜೋಗ್ ಫಾಲ್ಸ್‌ನ್ನು ಸರ್ ಎಂ.ವಿಶ್ವೇಶ್ವರಯ್ಯ ಮೊದಲ ಸಲ ನೋಡಿದಾಗ ಅವರು ಎಂಥ ವೇಸ್ಟ್ ಎಂಬ ಅರ್ಥದಲ್ಲಿ ಉದ್ಗರಿಸಿದರಂತೆ! ಸಂಸ್ಕೃತಿ ಮತ್ತು ಸಾಂಸ್ಕೃತಿಕ ನೀತಿನಿರೂಪಣೆ ಕುರಿತಂತೆ ಈ ಎರಡು ಘಟನೆಗಳಿಗೂ ಒಂದು ಬಗೆಯ ಹೊಕ್ಕಳುಬಳ್ಳಿ ನಂಟಿದೆ. ಈ ನೆಲದ ಜೀವವಾದ ಅಜ್ಜಿಗೆ ಧುಮುಕುವ ನೀರು ಬರೀ ನೀರಲ್ಲ-. ಅದೊಂದು ಜೀವಜಲ. ಈ ಜೀವಕ್ಕೆ ಎಷ್ಟು ನೋವಾಗುತ್ತಿರಬಹುದೆಂಬುದು ತನ್ನ ಪರಿಸರದಿಂದ ಸಂಸ್ಕಾರಗೊಂಡ ಮನೋಧರ್ಮ. ಇದು ಲೋಕದೃಷ್ಟಿ. ನನ್ನ ಪ್ರಕಾರ ಇದುವೇ ಸಂಸ್ಕೃತಿ! ಇದು ಅಮೂರ್ತ ಸ್ವರೂಪದ್ದು.
ಹೀಗೆ ಧುಮ್ಮಿಕ್ಕಿ ಬೀಳುವ ನೀರು ಕೇವಲ ನೀರಲ್ಲ. ಅದರೊಳಗೆ ಕ್ರಿಯಾಶಕ್ತಿ ಇದೆ. ಅದು ಉತ್ಪಾದಕ ಶಕ್ತಿ, ಆ ಶಕ್ತಿಯನ್ನು ಬಳಸಿಕೊಂಡು ಬೆಳಕು ದೊರಕಿಸಿಕೊಳ್ಳಬೇಕೆಂಬುದು ವಿವೇಕ. ಇದು ಸಂಸ್ಕೃತಿಯ ಕುಶಲಗಾರಿಕೆಯಿಂದ ಜನ್ಯವಾಗುವ ಜ್ಞಾನ. ಇಂಥ ಉತ್ಪನ್ನಗಳೆಲ್ಲ ಸಂಸ್ಕೃತಿಯ ಮೂರ್ತಸ್ವರೂಪಗಳು. ಆದ್ದರಿಂದಲೇ ನಾವು ಸಂಸ್ಕೃತಿಯ ಅಮೂರ್ತ ಸ್ವರೂಪದ ಕ್ರಿಯೆ ಮತ್ತು ಮೂರ್ತ ಸ್ವರೂಪದ ಪ್ರತಿಕ್ರಿಯೆಗಳನ್ನು ಮೊದಲು ಗುರುತಿಸಿಕೊಳ್ಳುವುದು ಅಗತ್ಯ. ಇಲ್ಲಿ ಅಜ್ಜಿಯ ಮನೋಧರ್ಮ ಮತ್ತು ಆಕೆ ಪರಿಸರದಿಂದ ಆರ್ಜಿಸಿಕೊಂಡ ಸಂಸ್ಕಾರ ಅಮೂರ್ತ ಕ್ರಿಯೆಯಾದರೆ; ವಿಶ್ವೇಶ್ವರಯ್ಯನವರ ಕುಶಲಗಾರಿಕೆಯು ಪರಿಸರಸಂಸ್ಕೃತಿಯ ವ್ಯಕ್ತರೂಪದಲ್ಲಿ ದೊರಕಿದ ಜೀವನ ಬೆಳಕು ಮತ್ತು ಬಳಕೆಯ ಮೂರ್ತಸ್ವರೂಪದ ಪ್ರತಿಕ್ರಿಯೆ.
ಈ ಬಗೆಯ ಮೂಲಮಾನದಲ್ಲಿ ಸಂಸ್ಕೃತಿಯ ಅಮೂರ್ತ ಕ್ರಿಯೆಯ ನೀತಿಯೇ ಬಯಲು. ಬಯಲಿಗೆ ಬಟ್ಟೆ ತೊಡಿಸಲಾಗುವುದಿಲ್ಲ. ಇದೊಂದು ಭ್ರಮೆಯಾಗಿ ಬಿಡುತ್ತದೆ ಎಂಬುದನ್ನು ಗಮನಿಸಬೇಕು. ಇನ್ನು ಸಂಸ್ಕೃತಿಯ ಮೂರ್ತ ಸ್ವರೂಪಗಳ ಬಗ್ಗೆ ನಿರೂಪಿಸಬಹುದಾದ ನೀತಿಯ ವಿಚಾರ. ಸಂಸ್ಕೃತಿಯ ವ್ಯಕ್ತರೂಪಗಳಾದ ಕಲೆಗಳನ್ನು; ಕಲಾಬದುಕನ್ನು; ಕಲಾ ಬದುಕಿನೊಂದಿಗೆ ಬೆಸೆದುಕೊಂಡಿರುವ ನೈಸರ್ಗಿಕ ಪರಿಸರ ಮತ್ತು ಮಾನವನಿರ್ಮಿತ ಪರಿಸರವನ್ನು ನೀತಿನಿರೂಪಣೆ ಚೌಕಟ್ಟಿಗೆ ತರಬಹುದು. ಈ ವಲಯವನ್ನು ಪೊರೆಯುವ, ಪೋಷಿಸುವ, ಪುನರುತ್ಥಾನಕ್ಕೆ ಎಡೆಮಾಡಿಕೊಡುವ ಹಾಗೂ ನಾಳೆಗಳಿಗೆ ಸಂವಹನಿಸುವ ಕ್ರಿಯೆಗಳಿಗೆ ಒಂದು ಸ್ಥೂಲವಾದ ಆದರೆ ಬಹುಮಾನ್ಯಗೊಳ್ಳುವ ಮಾನದಂಡವನ್ನು ನಿರೂಪಿಸುವ ಅಗತ್ಯ ಕಾಣುತ್ತಿದೆ.
ಈ ಕಲೆಗಳ, ಕಲಾವಿದರ, ಕಲಾಪರಿಸರದ ಮೇಲಾಗುತ್ತಿರುವ ದಾಳಿಯನ್ನು; ಕಲಾಲೋಕದೊಳಗೇ ಸಂಭವಿಸಿಕೊಳ್ಳುತ್ತಿರುವ ಆತ್ಮಘಾತುಕತನವನ್ನು, ಕಲಾ ಮೌಲ್ಯದ ಅಪವ್ಯಯವನ್ನು ಗಮನಿಸಿದರೆ ಇದು ಅನಿವಾರ್ಯ. ಸಾಂಸ್ಕೃತಿಕ ಲೋಕದ ಶೇಕಡ ೭೦ರಷ್ಟು ಜನವರ್ಗ ಕೀರ್ತಿ (ಪ್ರಚಾರ), ಕಾಸು ಮತ್ತು ಪದವಿಗಳ ವ್ಯಾಮೋಹಕ್ಕೆ ಒಳಗಾಗಿದ್ದರೆ; ಜಾಗತೀಕರಣದ ವೇಗೋತ್ಕರ್ಷಕ್ಕೊಳಗಾದ ಶೇಕಡ ೨೦ರಷ್ಟು ಜನವರ್ಗ ಕಲೆಗಳನ್ನು ತೀವ್ರಗತಿಯಲ್ಲಿ ವ್ಯಾಪಾರೀಕರಣಗೊಳಿಸುತ್ತಾ ತಮ್ಮ ಆದ್ಯತೆಯಲ್ಲಿ ಕೊನೆಯ ಅಂಚಿಗೆ ಸರಿಸಿಬಿಟ್ಟಿದೆ.
ಉಳಿದ ೧೦ರಷ್ಟು ಮಾತ್ರ ಚಿಂತನಾ ಪರವಾಗಿರುವ ಸಹೃದಯ ವರ್ಗ. ಹೀಗಾಗಿ ಮೊದಲ ಎರಡು ಪ್ರಧಾನ ವರ್ಗಗಳಿಂದ ಎದುರಾಗುವ ಅಪಾಯಗಳಿಗೆ ನಿವಾರಣೋಪಾಯಗಳನ್ನು ಗುರುತಿಸಿ ಕೊಂಡು ನೀತಿನಿರೂಪಣೆ ಸಾಧ್ಯವಾಗಬೇಕು. ಸರ್ಕಾರ ಮತ್ತು ಸಮುದಾಯ (ಸಮಾಜ) ಕೊಡಮಾಡುವ ಕಾರ್ಯಕ್ರಮಗಳು; ಅವುಗಳ ಉದ್ದೇಶ ಮತ್ತು ಅನುಷ್ಠಾನ ವಿಧಾನಗಳು ಸಾಂಸ್ಕೃತಿಕ ಅಂತಃಸ್ಸತ್ವವನ್ನು ಉಳಿಸಿಕೊಂಡೇ ಸಮಾಜಮುಖಿಯಾಗಿಯೂ ಪಾರದರ್ಶಕವಾಗಿಯೂ ಇರುವಂತೆ ನೋಡಿಕೊಳ್ಳುವುದರ ಮುಖಾಂತರ ರಚನಾತ್ಮಕ ಗತಿಯಲ್ಲಿ ಚಾಲನೆ ಒದಗಿಸಿಕೊಡುವಂತೆ ಈ ಸಾಂಸ್ಕೃತಿಕ ನೀತಿನಿರೂಪಣೆ ನಿಚ್ಚಳವಾಗಬೇಕು.
ಇದು ನೂರಕ್ಕೆ ನೂರರಷ್ಟಲ್ಲದಿದ್ದರೂ ಬಹುಮಾನ್ಯವಾದೀತೆಂಬ ನಂಬುಗೆ ನನ್ನದು. ಈ ದಿಸೆಯಲ್ಲಿ ಕೆಲವು ಅಂಶಗಳನ್ನು ಸೂಚಿಸಬಯಸುತ್ತೇನೆ. ಇವು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸ್ವರೂಪವನ್ನು ದೃಷ್ಟಿಯಲ್ಲಿರಿಸಿಕೊಂಡು ಪ್ರಸ್ತಾಪಿಸಿರುವ ಕೆಲವು ಸಂಗತಿಗಳು ಮಾತ್ರ.
* ಕನ್ನಡ ಸಂಸ್ಕೃತಿ ಇಲಾಖೆಯನ್ನು ಕ್ರಿಯಾಶೀಲಗೊಳಿಸುವ ಕ್ರಮ. ಅಂದರೆ ಸಾಂಸ್ಥಿಕ ಸಜ್ಜೀಕರಣ ಹಾಗೂ ಮಾನಸಿಕವಾದ ಸಾಂಸ್ಕೃತಿಕ ಸಂಸ್ಕಾರ.
* ಸಾಂಸ್ಕೃತಿಕ ನೀತಿಯೊಳಗೆ ಅನ್ಯಜ್ಞಾನ ಶಾಖೆಗಳ ಪಾರಸ್ಪರಿಕ ಅಂತರ್ ಸಂಬಂಧದ ಸೇರ್ಪಡೆ.
* ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಡಳಿತ ವ್ಯಾಪ್ತಿಗೆ ಬರುವ ಎಲ್ಲಾ ಅಕಾಡೆಮಿಗಳು, ಪ್ರಾಧಿಕಾರಗಳು, ಪ್ರತಿಷ್ಠಾನಗಳು, ರಂಗಾಯಣಗಳ ಸಮನ್ವಯತೆ. ಈ ಸಂಸ್ಥೆಗಳಿಗೆ ನಾಮ ನಿರ್ದೇಶಿಸುವ ವಿದ್ವಾಂಸರ ನಾಮ ನಿರ್ದೇಶನದಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದ್ಧತೆಯನ್ನು ಕಾಪಾಡುವುದು.
* ಪುಸ್ತಕೋದ್ಯಮದ ಖರೀದಿ ಮತ್ತು ವಿತರಣೆಯನ್ನು ಏಕ ಗವಾಕ್ಷಿಯಲ್ಲಿ ತರುವುದು.
* ಉತ್ಸವಗಳಿಗೆ ನಿರ್ದಿಷ್ಟ ಕಾಲಾವಧಿ; ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಮತ್ತು ಹಿರಿಯ, ಕಿರಿಯ ಕಲಾವಿದರಿಗೆ ವೇದಿಕೆ ಕಲ್ಪಿಸುವುದು.
* ಕನ್ನಡ -ಸಂಸ್ಕೃತಿ ಇಲಾಖೆ ಮತ್ತು ಅದರ ವ್ಯಾಪ್ತಿಯ ಸಂಸ್ಥೆಗಳ ಕಾರ್ಯಶೈಲಿ; ಕಾರ್ಯ ಕ್ರಮಗಳಲ್ಲಿ ಪ್ರಸ್ತುತತೆ ಹಾಗೂ ಸ್ಪಂದನಾ ಶೀಲತೆಗಳು ದೊರಕಿಸಿಕೊಡುವ ಹಿನ್ನೆಲೆ-ಯಲ್ಲಿ ಅವಲೋಕನ ಮಂಡಳಿಯ ರಚನೆ.
ಒಟ್ಟಿನಲ್ಲಿ, ಸಂಸ್ಕೃತಿಯ ಮೂರ್ತ ಸ್ವರೂಪದ ಕಲಾ ಚಟುವಟಿಕೆಗಳಲ್ಲಿ ಸಾಂಸ್ಕೃತಿಕ ಅಂತಃಸ್ಸತ್ವ ವನ್ನು ಉಳಿಸಿಕೊಳ್ಳುವ; ಕಲಾವಿದರಲ್ಲಿ ಆತ್ಮವಿಶ್ವಾಸವನ್ನು ಅರಳಿಸುವ; ಸಾರ್ವಜನಿಕರ ಕಲಾಭಿಮಾನಕ್ಕೆ ನಂಬುಗೆಯನ್ನು ದೊರಕಿಸಿ ಕೊಡುವ ದೃಷ್ಟಿಯಿಂದ ಸಾಂಸ್ಕೃತಿಕ ನೀತಿ ನಿರೂ ಪಣೆ ಆಗಬೇಕಾಗಿದೆ.
ಇದು ಬೇಡವೆಂಬುದಕ್ಕೆ ಈ ಸಂದರ್ಭದ ನಮ್ಮ ಕಲಾಲೋಕದ ತಾರೆಗಳ ಲ್ಲಾಗಲೀ, ಅವುಗಳನ್ನು ಪ್ರೋತ್ಸಾಹಿಸುತ್ತೇವೆನ್ನುವ ಆಡಳಿತಗಾರರಲ್ಲಾಗಲೀ; ಈ ಎರಡೂ ಜೋಡೆತ್ತುಗಳನ್ನು ನಡೆಸುವ ಹಾದಿಯ ಪರಿಸರದಲ್ಲಾಗಲೀ ಶುದ್ಧ ಹವಾಮಾನದ ಸುಳಿವು ಕಾಣುತ್ತಿಲ್ಲ. ವಕ್ರಗೊಂಡ ಬಳ್ಳಿಯ ಹರಿವನ್ನು ನೇರಗೊಳಿಸುವುದಕ್ಕೆ ಉದ್ದಕಡ್ಡಿಯ ಆಧಾರವನ್ನಾದರೂ ಒದಗಿಸಬೇಕಲ್ಲ!!
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.