ADVERTISEMENT

‘ನೀವು ಸದಾ ಪತ್ತೆಯಾಗುವ ಖಾಯಂ ವಿಳಾಸವೇನು’

ರೆಕ್ಕೆ ಬೇರು

ನಾಗತಿಹಳ್ಳಿ ಚಂದ್ರಶೇಖರ
Published 14 ಸೆಪ್ಟೆಂಬರ್ 2013, 19:59 IST
Last Updated 14 ಸೆಪ್ಟೆಂಬರ್ 2013, 19:59 IST

ಇತ್ತೀಚೆಗೆ ಒಂದು ದುರ್ದಿನ ಎಸ್ಸೆಲ್ವಿ ಕಾಫಿ ಹೀರುತ್ತಾ ಕಾರಿನಲ್ಲಿ ಕುಳಿತಿರುವಾಗ ಗೆಳೆಯನೊಬ್ಬ ಬಂದ. ಆತ ನನ್ನ ಶಿಷ್ಯ ಎಂದು ಹೇಳಿಕೊಂಡರೂ ಗುರು ಎನ್ನುವುದೇ ಸರಿ. ನಾನೇ ಆತನಿಂದ ಕಲಿಯಬೇಕಾದ ಸಹಸ್ರ ವಿದ್ಯೆಗಳನ್ನಿರಿಸಿಕೊಂಡ ಸಕಲಕಲಾವಲ್ಲಭನಾತ. ಕೆಲವರು ‘ಮೇಷ್ಟ್ರೇ’ ಎಂದು ಕರೆದಾಗ ನಾನು ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಕರೆಯುವವರಲ್ಲೂ ಗೌರವ ಭಾವವೇನೂ ತುಂಬಿ ತುಳುಕುವುದಿಲ್ಲ. ಆರು ಮೈಲು ಉದ್ದವಿರುವ ನನ್ನ ಹೆಸರನ್ನು ಕರೆಯಲಾಗದ ಸೋಮಾರಿತನದ ಫಲವಾಗಿಯೋ, ಅಭ್ಯಾಸ ಬಲವೋ ಅಥವಾ ಸದಾ ಬೆತ್ತ ಹಿಡಿದಂತಿರುವ ನನ್ನ ಕಾಠಿಣ್ಯತೆಯ ಕಾರಣಕ್ಕೋ ಈ ಮೇಷ್ಟ್ರು ಪಟ್ಟ ಲಭಿಸಿರಲಿಕ್ಕೆ ಸಾಕು. ಆವತ್ತು ಕುಂಕುಮ ಧರಿಸಿ ದೈವಿಕ ಕಳೆಯಲ್ಲಿ ಹೇಳಿದ: ‘ಮೇಷ್ಟ್ರೇ ನನಗೆ ಸಮಾಜ ಸೇವೆ ಮಾಡಬೇಕು ಅನ್ಸಿದೆ’ ಆಗಲೇ ನನಗೆ ತಿಳಿದದ್ದು–ಚುನಾವಣೆಗಳು ಸಮೀಪಿಸಿವೆ!

ಈ ನನ್ನ ಗೆಳೆಯ ಎಣಿಸಲಾರದಷ್ಟು ಸಿನಿಮಾ ನಿರ್ಮಿಸಿದ್ದಾನೆ. ಈಗ ಸಿನಿಮಾ ವ್ಯವಹಾರ, ರಿಯಲ್‌ ಎಸ್ಟೇಟ್ ವ್ಯವಹಾರ, ಗಣಿಗಾರಿಕೆ ಎಲ್ಲವೂ ಸಮಾಜ ಸೇವೆಯ ವ್ಯಾಪ್ತಿಗೇ ಬರುತ್ತವೆ. ಕೆಲವರಿಗೆ ಒಂದೇ ಒಂದು ಸತ್ಯನಾರಾಯಣ ಪೂಜೆ, ಒಂದೇ ಒಂದು ತಿರುಪತಿಯ ವಿಸಿಟ್ಟು ಸಾಕು ಎಲ್ಲ ಪಾಪವನ್ನು ತೊಳೆದು ಪುನೀತರನ್ನಾಗಿಸಿ ಸಮಾಜಸೇವೆಗೆ ಅರ್ಹರನ್ನಾಗಿಸುತ್ತವೆ. ಸಿನಿಮಾದವರಿಗೆ ರಾಜಕಾರಣ ಎಂದರೆ ಬಂಡವಾಳದ ಮರುಹೂಡಿಕೆ. ಒಂದು ಉದ್ದಿಮೆಯಲ್ಲಿ ಗಳಿಸಿದ್ದನ್ನು ಬೇರೊಂದು ಉದ್ದಿಮೆಯಲ್ಲಿ ತೊಡಗಿಸಿದ್ದಷ್ಟೇ ಸರಳ. ಮೊದಲ ಉದ್ದಿಮೆಯನ್ನು ಕಲಾಸೇವೆ ಎಂದೂ ಎರಡನೆಯ ಉದ್ದಿಮೆಯನ್ನು ಸಮಾಜಸೇವೆ ಎಂದೂ ಕರೆಯಲಾಗುತ್ತದೆ. ಇದು ವ್ಯವಹಾರದ ವಿಸ್ತರಣೆ ಮಾತ್ರ.

ಯಾವುದೇ ಪಕ್ಷದ ಪ್ರಾಥಮಿಕ ಸದಸ್ಯನೂ ಅಲ್ಲದ ಈ ನನ್ನ ಮಿತ್ರ ಜೆಡಿಎಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವದ ಅರ್ಜಿ ಫಾರಂ ತಂದಿದ್ದ. ಅಮೃತಧಾರೆ ನಿರ್ಮಿಸಿದ ನನ್ನ ಕೈಗಳು ಅಮೃತಹಸ್ತವೆಂದೂ, ನಾನೇ ಅರ್ಜಿ ಫಾರಂ ತುಂಬಿಕೊಡಬೇಕೆಂದೂ ವಿನಂತಿಸಿದ.

ಪರವಿಡಂಬನೆ ಮತ್ತು ಸ್ವವಿಡಂಬನೆಗಳೆರಡರಲ್ಲೂ ಸಮಬಲವಾದ ನಾನು ನನ್ನ ಸೋತ ಚಿತ್ರಗಳ ಪಟ್ಟಿಯನ್ನು ನೆನಪಿಸಿದರೂ ಆತ ಒಪ್ಪಲಿಲ್ಲ. ಅರ್ಜಿ ತುಂಬಲು ಮುಹೂರ್ತ ನೋಡಿ ಬಂದಿರುವುದಾಗಿ ಹೇಳಿದ. ನಾನು ಯಾವುದೇ ಪಕ್ಷದ ಸದಸ್ಯನಲ್ಲವಾದ್ದರಿಂದ ಇಂಥ ಅರ್ಜಿ ತುಂಬುವುದು ನನಗಂತೂ ಹೊಸತು. ತುಂಬಿಕೊಟ್ಟೆ. ಕಾಲಿಗೆ ಬೀಳುವುದು, ಮತ್ತು ಬೀಳಿಸಿಕೊಳ್ಳುವುದು ಈ ಎರಡರಲ್ಲೂ ನನಗೆ ನಂಬಿಕೆ ಇಲ್ಲ. ಆದರೆ ನಾನು ತಡೆದು ನಿಲ್ಲಿಸುವುದರೊಳಗೆ ಕಾಲಿಗೆ ನಮಸ್ಕರಿಸಿ ಹೊರಟುಹೋದ.

ಧಾರಾವಾಹಿಗಳು ನಿಂತ ಜಾಗದಲ್ಲೇ ಶುರು ಆಗುವಂತೆ ಮರುದಿನ ಅದೇ ಜಾಗಕ್ಕೆ ಅದೇ ಸಮಯಕ್ಕೆ ಬಂದ. ಇವತ್ತು ಕೈಲ್ಲಿದ್ದದ್ದು ಕೆಜೆಪಿ ಅರ್ಜಿ. ‘ಕುಮಾರಣ್ಣ ಕಾಸು ಖರ್ಚು ಮಾಡೋಕೆ ರೆಡಿ ಇಲ್ಲ ಗುರ್‌ಗೊಳೆ. ಜೆಡಿಎಸ್‌ ಸಾವಾಸ ಬೇಡ. ಯಡ್ಯೂರಪ್ಪ ಹೆಗ್ಲು ಮೇಲೆ ಕೈ ಇಟ್ಟು ಮಾತಾಡ್ಸಿದ್ರು. ಈಗ ನಾನು ಕೆಜೆಪಿಯ ಸ್ಟೇಟ್‌ ಕಲ್ಚರಲ್‌ ವಿಂಗ್‌ ಸೆಕ್ರೆಟರಿ’ ಅಂದ. ಆತನ ಮಾತನ್ನು ಪುಷ್ಟೀಕರಿಸುವ ವಿಸಿಟಿಂಗ್‌ ಕಾರ್ಡು, ಲೆಟರ್‌ ಹೆಡ್‌ಗಳನ್ನೂ ತೋರಿದ. ಇನ್ನು ಅರ್ಜಿ ತುಂಬುವ ಕಾಟ ತಪ್ಪಿತೆಂದು ನಿರಾಳಗೊಳ್ಳುವ ಹೊತ್ತಿನಲ್ಲಿ ಮತ್ತೆ ಮೂರು ದಿನದ ನಂತರ ಬಂದ. ಕೈನಲ್ಲಿ ಕಾಂಗ್ರೆಸ್‌ ಸದಸ್ಯತ್ವದ ಅರ್ಜಿ! ಕೆಜೆಪಿಗೆ ಏನೇನೂ ಭವಿಷ್ಯ ಇಲ್ಲ. ಇದು ಕೊನೆಯ ಅರ್ಜಿ ಎಂದ.

ಕಾಂಗ್ರೆಸ್‌ನವರ ಅರ್ಜಿ ಫಾರಂನಲ್ಲಿರುವ ವಿವರಗಳು ತಮಾಷೆಯಾಗಿವೆ. ಒಂದು ಕಡೆ ನಿಮ್ಮ ವಿಳಾಸವೇನು ಅಂತಿದೆ. ಮತ್ತೊಂದು ಕಾಲಮ್‌ನಲ್ಲಿ ನೀವು ಸದಾ ಪತ್ತೆಯಾಗುವ ಖಾಯಂ ವಿಳಾಸವೇನು ಅಂತಿದೆ! ಅದನ್ನು ಓದಿ ವಿಪರೀತ ನಗು ಬಂತು. ಏನು ತುಂಬಲಿ ಎಂದೆ. ಆ ವಿಳಾಸವನ್ನು ಹೆಂಗೆ ಕೊಡೋದು ಮೇಸ್ಟ್ರೇ ಎಂದು ಪೇಚಾಡಿಕೊಂಡ. ಅಲ್ಲಪ್ಪಾ, ನೀನು ಗೆದ್ದು ಶಾಸಕನಾದೆ, ಏರುಪೇರಾಗಿ ಕುದುರೆ ವ್ಯಾಪಾರ ಶುರುವಾಯ್ತು ಅಂತಿಟ್ಕೋ. ಆಗ ನೀನು ಯಾವ ಮನೇಲಿರ್‍ತೀಯ ಅಂತ ಹೈಕಮಾಂಡ್‌ಗೆ ಗೊತ್ತಾಗಬೇಡ್ವಾ ಅಂದೆ.

ಓಹೋಹೋ..... ಹಂಗೆ ಎಂದು ನಾಚಿ ನೀರಾದ. ಈ ಕಾಲಮ್ಮು ಜೆಡಿಎಸ್‌ ಅರ್ಜಿ ಫಾರಂನಲ್ಲಿರಬೇಕಾಗಿತ್ತು ಅಲ್ವಾ ಅಂದ. ಅಂತೂ ಅವನ ಚಿನ್ನವೀಡು ವಿಳಾಸ ತುಂಬಿ ಕೊಟ್ಟೆ. ಹೊರಡುವ ಮುನ್ನ ಕೇಳಿದೆ: ‘ನಿನಗೆ ನಂಬಿಕೆ ಇರೋ ಯಾವುದಾದ್ರೂ ಒಂದ್‌ ರಾಜಕೀಯ ಪಕ್ಷದ ಜತೆ ಗುರುತಿಸ್ಕೋ. ಹೀಗೆ ಎಲ್ಲಾ ಪಕ್ಷಕ್ಕೂ ಅರ್ಜಿ ಹಾಕೋದು ಸರಿಯಲ್ಲ’. ಅದಕ್ಕೆ ಅವನು ಕೊಟ್ಟ ಉತ್ತರ: ‘ಮಕ್ಕಳನ್ನು ಸ್ಕೂಲಿಗೆ ಸೇರಿಸುವಾಗ ಏನು ಮಾಡ್ತೀವಿ? ನಾಲ್ಕು ಸ್ಕೂಲಿಗೆ ಅರ್ಜಿ ಹಾಕ್ತೀವಿ. ನಾಲ್ಕು ಕಡೆ ಸೀಟ್ ಸಿಗ್ತದೆ. ಅದರಲ್ಲಿ ಬೇಕಾದ ಒಂದ್‌ ಸ್ಕೂಲ್‌ ಆರಿಸ್ಕೊಳ್ತೀವಿ. ಇದೂ ಹಂಗೆ’. ತರ್ಕ ಎಂದರೆ ಇದು!

ಮತ್ತೊಮ್ಮೆ ಪ್ರತ್ಯಕ್ಷನಾದ ಶಿಷ್ಯೋತ್ತಮ ತನಗೆ ಕಾಂಗ್ರೆಸ್‌ ಟಿಕೆಟ್‌ ಗ್ಯಾರಂಟಿ ಸಿಗಲಿದೆ ಎಂದೂ ಅದಕ್ಕೆ ನಾನು ಅರ್ಜಿ ತುಂಬಿದ ಕೈಗುಣವೇ ಕಾರಣವೆಂದೂ ಉತ್ಸಾಹದಿಂದ ಹೇಳಿದ. ಜನರ ಗಮನ ಸೆಳೆಯಲು ತನ್ನ ಕ್ಷೇತ್ರದ ಬೇಟೆರಾಯ ಸ್ವಾಮಿಗೆ ವಿಶೇಷ ಪೂಜೆ ಇರಿಸುವ ಕರಪತ್ರ ಮುದ್ರಿಸಿ ತಂದಿದ್ದ. ಬರ ನಿವಾರಣೆಗೆ ವರುಣನನ್ನು ಪ್ರಾರ್ಥಿಸಲು ವಿಶೇಷ ಪೂಜಾ ಕಾರ್ಯಕ್ರಮ ನಿಗದಿಪಡಿಸಿರುವುದಾಗಿ ಹೇಳಿದ. ಸಣ್ಣ ಓಣಿಯಲ್ಲಿರುವ ಆ ದೇವರಿಗೆ ರಾಜಬೀದಿಯಲ್ಲಿ ಭವ್ಯ ಮೆರವಣಿಗೆ, ಪೂಜೆ, ಹವನ, ಹೋಮ, ವಿಶೇಷ ಪೂಜೆ ಎಂದು ಅಚ್ಚಿಸಿದ್ದ. ಬ್ಯಾನರು ಬಿದ್ದವು. ಕರಪತ್ರ ಹಂಚಾಯಿತು. ಆದರೆ ಕಾಂಗ್ರೆಸ್‌ನವರು ಟಿಕೆಟ್‌ ಕೊಡಲಿಲ್ಲ!

ಬೇಟೆರಾಯಸ್ವಾಮಿಯ ಮೇಲೆ ಬೇಸರ ಮಾಡಿಕೊಂಡು ಎಲ್ಲವನ್ನೂ ರದ್ದು ಮಾಡಿದ. ಅದು ಸರಿ–ನಿನಗೆ ಕಾಂಗ್ರೆಸ್‌ ಟಿಕೆಟ್‌ ಯಾಕೆ ಸಿಗಲಿಲ್ಲ? ಕಾರಣವನ್ನಾದರೂ ತಿಳಿದುಕೊಂಡೇಯಾ? ಎಂದು ಕೇಳಿದೆ. ‘ಮೋಸ..... ಭಾರೀ ಮೋಸ..... ನಂಗೆ ಟಿಕೆಟ್‌ ರೆಡಿಯಾಗಿತ್ತು ಮೇಸ್ಟ್ರೇ..... ನಮ್ಮ ಕ್ಷೇತ್ರದ ಹೆಂಗಸೊಬ್ಳು ಸೋನಿಯಾ ಗಾಂಧಿಗೆ ನೇರವಾಗಿ ಕಾಗದ ಬರೆದವ್ಳೆ. ನಾನು ಕೆಜೆಪಿಯ ಕಲ್ಚರಲ್‌ ವಿಂಗ್‌ ಸೆಕ್ರೆಟರಿ ಅಂತ. ಯಡ್ಯೂರಪ್ಪ ನನ್ನ ಹೆಗ್ಲು ಮೇಲೆ ಕೈ ಇಟ್ಟ ಫೋಟೋ ಬೇರೆ ಕಳ್ಸಿದಾಳೆ.

ಸೋನಿಯಾ ಮೇಡಂ ಶಾನೆ ಬೇಜಾರ್‌ಮಾಡಿಕೊಂಡು ಈ ಹುಡುಗಂಗೆ ಮುಂದಿನ ಸಲ ನೋಡಣ. ಈಗ ಪೆಂಡಿಂಗಿಡಿ ಅಂದ್ರಂತೆ. ಕಾಂಗ್ರೆಸ್‌ ಒಂದ್ನೇ ಬಿಗ್ಯಾಗಿ ಹಿಡಕಂಡಿದ್ರೆ ಈ ಸಲ ಎಂಎಲ್ಲ್ಯೆ ಆಗಿ ಗೆದ್ದು ವಾರ್ತಾ ಇಲಾಖೆ ಹೊಡಕಂತಿದ್ದೆ‘ ಎಂದು ಲೊಚಗುಟ್ಟುತ್ತಾ ಹೇಳಿದ. ಈಗ ಈ ನನ್ನ ಗೆಳೆಯ ರಾಜಕಾರಣವನ್ನು ಪೂರ್ತಿ ಮರೆತು ಸಿನಿಮಾ, ರಿಯಲ್‌ ಎಸ್ಟೇಟ್‌ಗಳಲ್ಲಿ ಮುಳುಗಿದ್ದಾನೆ. ಮತ್ತೆ ಚುನಾವಣೆ ಬರುವವರೆಗೂ ಅವನಿಗೆ ‘ಸಮಾಜ ಸೇವೆ’, ‘ಬೇಟೆರಾಯಸ್ವಾಮಿ’ ನೆನಪಾಗುವುದಿಲ್ಲ. ಉಪಚುನಾವಣೆಯಲ್ಲಿ ಜೆಡಿಎಸ್–ಬಿಜೆಪಿ ಆಲಿಂಗನ ಮಾಡಿವೆ. ಶಿವಮೊಗ್ಗದಲ್ಲಿ ಯಡಿಯೂರಪ್ಪ–ಈಶ್ವರಪ್ಪ ಅಪ್ಪಿಕೊಂಡಿದ್ದಾರೆ. ನನ್ನ ಗೆಳೆಯ ಮೂರು ಪಕ್ಷಗಳಲ್ಲಿ ಟಿಕೆಟ್‌ಗೆ ಪ್ರಯತ್ನಿಸಿದರೆ ಏನು ತಪ್ಪು?


ಈ ವಾಸ್ತವ ಘಟನೆ ಮೇಲು ನೋಟಕ್ಕೆ ಒಂದು ಲಘು ಪ್ರಹಸನದಂತೆ, ಕ್ಷುಲ್ಲಕ ಘಟನೆಯಂತೆ ತೋರಬಹುದು. ನಿಂತು ಯೋಚಿಸಿದರೆ ನಾನಾ ಕಠೋರ ಸತ್ಯಗಳು ಹೊಳೆಯುತ್ತವೆ. ಆ ಸತ್ಯಗಳು ಪ್ರಜಾಸತ್ತೆಯನ್ನು ಅಣಕಿಸುವಂತಿವೆ. ಚುನಾವಣೆ ಎದುರಾದಾಗ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸುವವರಿದ್ದಾರೆ. ಆ ಅರ್ಜಿಗಳನ್ನು ವಿವರವಾಗಿ ಪರಿಶೀಲಿಸಿ ಸದಸ್ಯತ್ವ ಕೊಡುವ ಪರಿಪಾಠ ಯಾವುದಾದರೂ ಪಕ್ಷದಲ್ಲಿ ಇದೆಯೋ ಇಲ್ಲವೋ ತಿಳಿಯೆ. ಆದರೂ ಸದಸ್ಯರೇ ಅಲ್ಲದ ಕೆಲವರು ಆ ಪಕ್ಷಕ್ಕೆ ರಾಜೀನಾಮೆ ಕೊಡುವುದಾಗಿ ಬೆದರಿಕೆ ಹಾಕುತ್ತಾರೆ.

ಈಗ ಪ್ರಣಾಳಿಕೆಗಳು ತಾತ್ವಿಕ ಭಿನ್ನತೆಯನ್ನು ಕಳೆದುಕೊಂಡು ಏಕರೂಪತೆಯನ್ನು ಪಡೆದಿರುವುದರಿಂದ ಪಕ್ಷದ ಹೆಸರು, ಚಿಹ್ನೆಯನ್ನು ಬದಲಿಸಿ ಒಂದೇ ಭಾಷಣವನ್ನು ಎಲ್ಲ ಪಕ್ಷಕ್ಕೆ ಬಳಸಿದಂತಿರುತ್ತದೆ. ಕಡೆಗಳಿಗೆವರೆಗೆ ಎಲ್ಲ ಪಕ್ಷಗಳಲ್ಲೂ ಸೀಟಿಗೆ ಹೊಂಚು ಹಾಕುತ್ತಾ ಟಿಕೇಟು ನೀಡಿದ ಪಕ್ಷಕ್ಕೆ ಜಯಕಾರ ಹಾಕುವುದು ತೀರಾ ಸಾಮಾನ್ಯವಾಗಿದೆ. ನಿಷ್ಠೆ ಎಂಬುದು ಪಕ್ಷದ ನೆಲೆಯಲ್ಲೂ ಇಲ್ಲ. ವ್ಯಕ್ತಿ ನೆಲೆಯಲ್ಲೂ ಇಲ್ಲ. ಕೋಟಿಗಳ ಮೂಟೆಗಳನ್ನು ರೆಡಿ ಇಟ್ಟುಕೊಂಡು ಗೆಲ್ಲುವ ಪಕ್ಷಕ್ಕಾಗಿ ಕಾಯುತ್ತಾರೆ. ಹಣ–ಜಾತಿ ಎಂಬೆರಡು ಬಂಡವಾಳವಿಲ್ಲದೆ ಚುನಾವಣೆಯಲ್ಲಿ ಗೆಲ್ಲುವುದು ಅಸಾಧ್ಯ.

ಕಲಾವಿದ ಕಲೆಯನ್ನು ಧ್ಯಾನಿಸುವಂತೆ ರಾಜಕಾರಣಿ ಸಮಾಜವನ್ನು ಧ್ಯಾನಿಸ ಬೇಕು. ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಲೇಖಕನು ಅದನ್ನು ತನ್ನದೊಂದು ಕವಿತೆ, ಕತೆ, ಕಾದಂಬರಿ ಬರೆಯುವಾಗಿನ ಸೃಜನಶೀಲ ಪ್ರಯೋಗದಂತೆಯೇ ಪರಿಭಾವಿಸಿ ಕಣಕ್ಕಿಳಿಯಬೇಕೆಂದು ಲಂಕೇಶರು ಹೇಳುತ್ತಿದ್ದರು. ಯಾರು, ಯಾವಾಗ ಏನು ಬೇಕಾದರೂ ಆಗಬಹುದು ಎನ್ನುವುದು ಪ್ರಜಾಪ್ರಭುತ್ವದ ಸಾಧ್ಯತೆಯ ಹಾಗೆಯೇ ದುರಂತವೂ ಹೌದು. ನಿಷೇಧಿತ ಕ್ಷೇತ್ರ ಯಾವುದೂ ಇಲ್ಲ. ಆದರೆ ಒಂದು ಕ್ಷೇತ್ರವು ಅಪೇಕ್ಷಿಸುವ ಅರ್ಹತೆಗಳನ್ನು ಪ್ರಜ್ಞಾಪೂರ್ವಕವಾಗಿ ರೂಢಿಸಿಕೊಳ್ಳದವನು ಆ ಕ್ಷೇತ್ರವನ್ನು ಹಾಳು ಮಾಡುತ್ತಾನೆ.

ಚುನಾವಣೆ ಬಂದಾಗ ಹಣದ ಥೈಲಿ ಉಳ್ಳ ಹೊಸಮುಖಗಳು ಅದೆಲ್ಲಿಂದಲೋ ಧುತ್ತನೆ ಪ್ರತ್ಯಕ್ಷವಾಗುತ್ತವೆ. ಮತ್ತೆ ಮಾಯವಾಗುತ್ತವೆ. ರಾಜಕಾರಣಕ್ಕೆ ಕೂಡಾ ಅನುಭವ, ದೂರದೃಷ್ಟಿಗ ಳಂತೆಯೇ ಕುಶಲ ಕರ್ಮಿಯ ವೃತ್ತಿವಂತಿಕೆ ಬಹಳ ಅಗತ್ಯ. ವೃತ್ತಿಪರತೆಗೆ ಅತೀತರಾದವರು ಅದೆಷ್ಟೇ ದೊಡ್ಡವರಾದರೂ ಉಡಾಫೆಯ ವಾಹನ ಚಾಲಕರಂತೆ ಅಪಘಾತಗಳನ್ನು ಸೃಷ್ಟಿಸಿ ಅಮಾಯಕರನ್ನು ಬಲಿತೆಗೆದು ಕೊಳ್ಳುತ್ತಾರೆ. ಈ ಅರ್ಥದಲ್ಲಿ ಜನಮುಖಿಗಳಾಗಿರಬೇಕಾದ ಭಾರತದ ಚುನಾವಣೆಗಳು ಬಲಿಪೀಠಗಳಂತೆ ಕಾಣುತ್ತಿವೆ. ಉದ್ದಟರೂ, ಹುಂಬರೂ, ಅನನುಭವಿಗಳೂ ಮತ್ತು ನೀತ್ಯಾತೀತರೂ ಆದ ಚಾಲಕರು ನಡೆಸುವ ಬಸ್ಸಿನಲ್ಲಿ ಜನಸಾಮಾನ್ಯ ಜೀವ ಹಿಡಿದು ಕುಳಿತಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.