ವಿಶ್ಲೇಷಣೆ: ಅಧಿವೇಶನ– ಏಕೀಕರಣಕ್ಕೆ ಬುನಾದಿ
ಮಹಾತ್ಮ ಗಾಂಧಿಯವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್‌ನ 39ನೇ ಅಖಿಲ ಭಾರತ ಅಧಿವೇಶನವು 1924ರ ಡಿಸೆಂಬರ್ 26 ಮತ್ತು 27ರಂದು ಬೆಳಗಾವಿ ನಗರದ ಹೊರವಲಯದಲ್ಲಿ ಮೂರು ದಿನಗಳ ಕಾಲ ನಡೆಯಿತು. ಈ ಸಮಾವೇಶಕ್ಕೆ ಇದೀಗ ನೂರು ವರ್ಷ ತುಂಬುತ್ತಿದೆ. ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಏಕೈಕ ಸಮಾವೇಶ ಇದಾದ್ದರಿಂದ ಬೆಳಗಾವಿ ಸಮಾವೇಶಕ್ಕೆ ಐತಿಹಾಸಿಕ ಮಹತ್ವವೂ ದೊರೆತಿದೆ. ಜೊತೆಗೆ ಭಾರತಕ್ಕೆ ಪೂರ್ಣ ಪ್ರಮಾಣದ ಸ್ವಾತಂತ್ರ್ಯ ಸಿಗಬೇಕೆಂಬ ನಿರ್ಣಯ ಕೈಗೊಂಡಿದ್ದು ಕೂಡಾ ಇಲ್ಲಿಯೇ.
ಬೆಳಗಾವಿಯು ಗಾಂಧೀಜಿಗೆ ಎಷ್ಟು ಆಪ್ತವಾದ ಪ್ರದೇಶವಾಗಿತ್ತೆಂದರೆ, ಅವರು ಒಟ್ಟು ಆರು ಸಲ ಇಲ್ಲಿಗೆ ಬಂದಿದ್ದರು. 1924ರ ಅಧಿವೇಶನಕ್ಕೆ ಬಂದಿದ್ದ ಗಾಂಧೀಜಿ 15 ದಿನ ಬೆಳಗಾವಿಯಲ್ಲೇ ತಂಗಿದ್ದರು.
ಬೆಳಗಾವಿ ಅಧಿವೇಶನವು ಕರ್ನಾಟಕ ಏಕೀಕರಣ ಚಳವಳಿಯನ್ನೂ ಗಟ್ಟಿಗೊಳಿಸಿತು ಎಂಬುದನ್ನು ನಾವು ಮರೆಯಬಾರದು. ಹುಯಿಲಗೋಳ ನಾರಾಯಣರಾಯರು ಬರೆದ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಹಾಡನ್ನು ಇದೇ ಅಧಿವೇಶನದಲ್ಲಿ ಸ್ವಾಗತಗೀತೆಯಾಗಿ ಹಾಡಲಾಯಿತು. ಅದನ್ನು ಹಾಡಿದವರು ಆಗ 11 ವರ್ಷ ವಯಸ್ಸಿನ ಶಾಲಾ ಬಾಲಕಿಯಾಗಿದ್ದ ಗಂಗೂಬಾಯಿ ಹಾನಗಲ್. 1970ರವರೆಗೆ ಈ ಗೀತೆ ನಾಡಗೀತೆಯಾಗಿ ಜನಪ್ರಿಯವಾಗಿತ್ತು. ಬೆಳಗಾವಿ ಅಧಿವೇಶನದ ಮೂಲಕ ಈ ಹಾಡು ಗಾಂಧೀಜಿಯೊಂದಿಗೆ ಬೆಸೆದುಕೊಂಡಿದೆ.
20ನೇ ಶತಮಾನದ ಮೊದಲೆರಡು ದಶಕಗಳಲ್ಲಿ ಕರ್ನಾಟಕ ಏಕೀಕರಣಕ್ಕಾಗಿ ಹಲವರು ಹೋರಾಡಿದರು. ಇದರಲ್ಲಿ ಸಮಾಜದ ಎಲ್ಲ ವರ್ಗದ ಜನ, ಅದರಲ್ಲಿ ಮುಖ್ಯವಾಗಿ ಸಾಹಿತಿಗಳು, ಶಿಕ್ಷಣ ತಜ್ಞರು, ವಕೀಲರು, ವಿದ್ವಾಂಸರು ಮತ್ತು ರಾಷ್ಟ್ರೀಯ ಹೋರಾಟದಲ್ಲಿ ಭಾಗವಹಿಸಿದ್ದ ಜನರಿದ್ದರು. 1920ರಲ್ಲಿ ಕರ್ನಾಟಕ ಪ್ರಾಂತ ಕಾಂಗ್ರೆಸ್ ಸಂಸ್ಥೆ ರಚನೆಯಾದಾಗ ಅದರಲ್ಲಿದ್ದವರು ಬಹುತೇಕವಾಗಿ ಏಕೀಕರಣಕ್ಕೆ ದುಡಿಯುತ್ತಿದ್ದ ಮಹನೀಯರೇ ಆಗಿದ್ದರು. ಈ ನಾಯಕರು ಭಾರತದ ರಾಷ್ಟ್ರೀಯ ಹೋರಾಟ ಮತ್ತು ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಏಕಕಾಲಕ್ಕೆ ದುಡಿಯುತ್ತಾ, ಆ ಎರಡೂ ಹೋರಾಟಗಳ ನಡುವೆ ಸಂಘರ್ಷ ಏರ್ಪಡದಂತೆ ನೋಡಿಕೊಳ್ಳುತ್ತಿದ್ದರು. ಅದೇ ಕಾಲಕ್ಕೆ ಕುವೆಂಪು ‘ಜೈ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ’ ಕವಿತೆ ಬರೆದು ಆ ಎರಡೂ ಹೋರಾಟಗಳನ್ನು ಸಂಘರ್ಷಾತೀತಗೊಳಿಸಿದರು. ಆ ಕಾಲಕ್ಕೆ ಅದೊಂದು ಮಹತ್ವದ ಘಟನೆಯಾಗಿತ್ತು. 1924ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಂಸ್ಥೆಯ ಮಹಾಧಿವೇಶನ ಬೆಳಗಾವಿಯಲ್ಲಿ ನಡೆದಾಗ ಕರ್ನಾಟಕ ಏಕೀಕರಣಕ್ಕೆ ಹೊಸ ಚೈತನ್ಯ ದೊರೆಯಿತು.
ಬೆಳಗಾವಿ ಅಧಿವೇಶನಕ್ಕೆ ಮಂಗಳೂರು, ಕಾರವಾರ, ಮೈಸೂರು ಸಂಸ್ಥಾನ ಮತ್ತು ಕೊಡಗು ಸೇರಿದಂತೆ ಎಲ್ಲ ಕಡೆಯ ಕನ್ನಡ ಭಾಷಿಕರೂ ಆಗಮಿಸಿದ್ದರು. ಈ ಅರ್ಥದಲ್ಲಿ ಅದು ಏಕೀಕರಣಪೂರ್ವದ ಕರ್ನಾಟಕ ಸಮಾವೇಶವೇ ಆಗಿತ್ತು. ಆ ಹೊತ್ತಿಗೆ ಅಲ್ಲಿದ್ದ ಅನೇಕರ ಮೇಲೆ ಪ್ರಭಾವ ಬೀರಿದ ಪುಸ್ತಕವೆಂದರೆ ಕಡಪ ರಾಘವೇಂದ್ರರಾಯರ ‘ಕನ್ನಡಿಗರ ಕರ್ತವ್ಯ’. ಈ ಪುಟ್ಟ ಪುಸ್ತಕದಲ್ಲಿ ಬಂಗಾಳ, ಆಂಧ್ರ ಮತ್ತು ಮಹಾರಾಷ್ಟ್ರದ ಜನರಿಗೆ ತಮ್ಮ ಭಾಷೆಗಳ ಮೇಲಿರುವ ಅಭಿಮಾನವು ಕನ್ನಡಿಗರಲ್ಲಿ ಯಾಕೆ ಕಾಣುತ್ತಿಲ್ಲ ಎಂಬ ಪ್ರಶ್ನೆಯನ್ನು ಪ್ರಮುಖವಾಗಿ ಎತ್ತಲಾಗಿತ್ತು. 22 ಭಾಗಗಳಲ್ಲಿ ಹಂಚಿಹೋಗಿದ್ದ ಕನ್ನಡಿಗರಿಗೆ ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳುವುದು ಸುಲಭವಾಗಿರಲಿಲ್ಲ. ಜೊತೆಗೆ, ರಾಘವೇಂದ್ರರಾಯರು ಬಳ್ಳಾರಿ, ಅನಂತಪುರ, ಕಡಪ ಮೊದಲಾದ ಜಿಲ್ಲೆಗಳಲ್ಲಿ ವಾಸವಾಗಿರುವ ಕನ್ನಡಿಗರು ತೆಲುಗು ಭಾಷೆಯಲ್ಲಿ ಮಾತನಾಡುವುದನ್ನೂ ಕನ್ನಡಿಗರಿಗೇ ಕನ್ನಡದ ಬಗ್ಗೆ ತಾತ್ಸಾರ ಮನೋಭಾವ ಇರುವುದನ್ನೂ ಮುನ್ನೆಲೆಗೆ ತಂದಿದ್ದರು. ಎಲ್ಲಕ್ಕಿಂತ ಮಿಗಿಲಾಗಿ, ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯಲ್ಲಿ ಕನ್ನಡಿಗರಿಗೆ ಪ್ರಾತಿನಿಧ್ಯವೇ ಇಲ್ಲದಿರುವುದನ್ನು ಗುರುತಿಸಿದ್ದ ಅವರು ಈ ಪರಿಸ್ಥಿತಿಯಿಂದ ಕನ್ನಡ ಮತ್ತು ಕರ್ನಾಟಕವನ್ನು ಪಾರು ಮಾಡಬೇಕೆಂದು ಗಟ್ಟಿಯಾಗಿ ಹೇಳಿದ್ದರು. ಇದು ಬೆಳಗಾವಿ ಅಧಿವೇಶನದ ಮೇಲೆ ಪರೋಕ್ಷವಾಗಿ ಕೆಲವು ಬಗೆಯ ಒತ್ತಡಗಳನ್ನು ಹೇರಿತ್ತು.
ಬೆಳಗಾವಿಯಲ್ಲಿ ಅಧಿವೇಶನದ ಸಂದರ್ಭದಲ್ಲಿ ಪ್ರಕಟವಾದ ಇನ್ನೊಂದು ಮಹತ್ವದ ಕೃತಿಯೆಂದರೆ ಆಲೂರು ವೆಂಕಟರಾಯರ ‘ಕರ್ನಾಟಕ ಗತವೈಭವ’. ವಸಾಹತು ಆಡಳಿತಕ್ಕೆ ತೀವ್ರವಾದ ಪ್ರತಿಕ್ರಿಯೆಯಾಗಿ ಬಂದ ಈ ಕೃತಿಯು ಕನ್ನಡಿಗರನ್ನು ಬಡಿದೆಬ್ಬಿಸುವುದರ ಜೊತೆಗೆ ಭಾವಪರವಶತೆಗೂ ಒಳಗು ಮಾಡಿತ್ತು ಮತ್ತು ‘ನಮ್ಮ ದೇಶದ ನಿಜವಾದ ಇತಿಹಾಸವನ್ನು ನಮ್ಮ ಜನರೇ ಅಭಿಮಾನಪೂರ್ವಕವಾಗಿ ಬರೆಯಬೇಕು’ ಎಂಬ ವಾದವನ್ನು ಮುಂದಿಟ್ಟಿತ್ತು. ಆ ಪುಸ್ತಕದಲ್ಲಿ ಆಲೂರರು ಬರೆದ ‘ಕರ್ನಾಟಕವು ಒಂದು ಮೃತ ರಾಷ್ಟ್ರವೇ?’ ಎಂಬ ಪ್ರಶ್ನೆ ಬಹಳ ಕಾಲದವರೆಗೆ ಕನ್ನಡಿಗರನ್ನು ಕಾಡಿತ್ತು.
ಬೆಳಗಾವಿ ಸಮಾವೇಶದಲ್ಲಿಯೇ ಬಿಡುಗಡೆಯಾದ ಇನ್ನೊಂದು ಪುಸ್ತಕವೆಂದರೆ ದ.ಕೃ.ಭಾರದ್ವಾಜ ಸಂಪಾದಕತ್ವದ ‘ಕರ್ನಾಟಕ ಕೈಪಿಡಿ’. ಈ ಪುಸ್ತಕವನ್ನು ಕಾಂಗ್ರೆಸ್ ಕಮಿಟಿಯ ಪರವಾಗಿ ಸಿದ್ಧಪಡಿಸಲಾಗಿತ್ತು. ಒಂಬತ್ತು ಲೇಖನಗಳಿರುವ ಈ ಪುಸ್ತಕದಲ್ಲಿ ಕರ್ನಾಟಕದ ಭೂವಿವರಣೆ, ಸಂಕ್ಷಿಪ್ತ ಇತಿಹಾಸ, ಕರ್ನಾಟಕದ ಧಾರ್ಮಿಕ ಚಲನೆಗಳು, ಲಲಿತಕಲೆ ಮತ್ತು ಸಾಹಿತ್ಯದ ಕುರಿತು ಉದಾರವಾದಿ ನೆಲೆಯ ಬರಹಗಳಿವೆ. ಅಮೂಲ್ಯವಾದ ಮಾಹಿತಿಗಳು ಮತ್ತು ಅಂಕಿ-ಅಂಶಗಳಿವೆ. ಈ ಕೈಪಿಡಿಯಲ್ಲಿ ನೀಡಿದ ಕರ್ನಾಟದ ಗಡಿ ರೇಖೆಗಳೇ ಮುಂದೆ ಕರ್ನಾಟಕದ ನಿಜವಾದ ಗಡಿರೇಖೆಗಳಾಗಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಅದಾಗಲಿಲ್ಲ.
ಅಧಿವೇಶನದಲ್ಲಿ ಬಿಡುಗಡೆಯಾದ ಇನ್ನೊಂದು ಕೃತಿಯೆಂದರೆ, ಬೆಳಗಾವಿಯ ಆರ್.ಬಿ.ಕುಲಕರ್ಣಿ ಅವರ ‘ಕನ್ನಡಿಗರ ಸರ್ವಸ್ವ ಅಥವಾ ಸಂಯುಕ್ತ- ಕರ್ನಾಟಕ ಪ್ರಾಂತ’. ಈ ಕೃತಿಯನ್ನು ‘ಕರ್ನಾಟಕದ ಏಕೀಕರಣಕ್ಕೆ ಹಗಲಿರುಳು ಹಂಬಲಿಸುತ್ತಿರುವ ಕನ್ನಡ ಬಂಧು ಭಗಿನಿಯರ ಅಡಿದಾವರೆಗಳಿಗೆ ಪ್ರೀತಿಯಿಂದ’ ಅರ್ಪಿಸಲಾಗಿದೆ. ಇದರ ಮುನ್ನುಡಿಯಲ್ಲಿ ‘ಕರ್ನಾಟಕ ಏಕೀಕರಣ ಸಂಘ’ದ ಶಾಖೆಗಳನ್ನು ಜಿಲ್ಲೆ, ತಾಲ್ಲೂಕು ಮತ್ತು ಊರುಗಳಲ್ಲಿ ಸ್ಥಾಪಿಸುವುದು ಅವಶ್ಯವಾಗಿದೆ’ ಎಂದು ಹೇಳಲಾಗಿದೆ.
ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದರೆ, ಕರ್ನಾಟಕ ಏಕೀಕರಣಕ್ಕೆ ಸಂಬಂಧಿಸಿದಂತೆ ಅನೇಕ ವಿಚಾರಗಳು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿಯೇ ಸ್ಪಷ್ಟ ರೂಪ ಪಡೆದವು ಎಂದು ಹೇಳಬಹುದು. ಮಹಾತ್ಮ ಗಾಂಧಿ ಇದರ ಹಿಂದಿನ ಪ್ರೇರಕಶಕ್ತಿ.
ಇಷ್ಟೆಲ್ಲ ಪೂರ್ವಸಿದ್ಧತೆಗಳನ್ನು ಮಾಡಿಕೊಂಡೇ ಕನ್ನಡಿಗರು ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೊಂಡರು. ಅಧಿವೇಶನದ ಜೊತೆಗೇ ಪ್ರಥಮ ಕರ್ನಾಟಕ ಏಕೀಕರಣ ಪರಿಷತ್ತಿನ ಸಭೆಯೂ ಅಲ್ಲಿಯೇ ನಡೆಯಿತು. ಈ ಸಭೆಯ ಅಧ್ಯಕ್ಷತೆ ವಹಿಸಿದ್ದವರು ರಾವ್ ಬಹದ್ದೂರ ಸಿದ್ಧಪ್ಪ ಕಂಬಳಿಯವರು. ಕಂಬಳಿಯವರು ಆಗ ಮುಂಬೈ ವಿಧಾನ ಪರಿಷತ್ತಿನ ಉಪಸಭಾಪತಿಯಾಗಿದ್ದರು. ಅದೇ ವರ್ಷ ‘ಅಖಿಲ ಕರ್ನಾಟಕ ಏಕೀಕರಣ ಸಂಘ’ವನ್ನೂ ಹುಟ್ಟುಹಾಕಲಾಯಿತು. ಸಂಘಕ್ಕೆ ಕಾಂಗ್ರೆಸ್ ಬೆಂಬಲ ಘೋಷಿಸಿದಾಗ ಏಕೀಕರಣ ಚಳವಳಿಗೆ ಮತ್ತಷ್ಟು ಬಲ ಬಂತು. ಗಂಗಾಧರ ರಾವ್ ದೇಶಪಾಂಡೆ ಅವರಂತಹ ಪ್ರಭಾವಿ ರಾಜಕಾರಣಿಗಳ ಜೊತೆಗೆ ಆಲೂರು ವೆಂಕಟರಾವ್, ಕಡಪ ರಾಘವೇಂದ್ರ ರಾವ್, ಶಾಂತಕವಿ ಮೊದಲಾದ ಹಲವು ಮಹನೀಯರು ಏಕೀಕರಣ ಚಳವಳಿಯನ್ನು ಮುನ್ನಡೆಸಿದರು. ಕರ್ನಾಟಕ ವಿದ್ಯಾವರ್ಧಕ ಸಂಘ, ಕರ್ನಾಟಕ ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆಗಳು ಚಳವಳಿಯ ಶಕ್ತಿಯನ್ನು ಹೆಚ್ಚಿಸಿದವು. ಹೀಗೆ, ಕರ್ನಾಟಕ ಏಕೀಕರಣ ಚಳವಳಿಯ ಇತಿಹಾಸದಲ್ಲಿ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಅಧಿವೇಶನಕ್ಕೆ ಮಹತ್ವದ ಸ್ಥಾನವೊಂದಿದೆ.
ಕರ್ನಾಟಕ ಸರ್ಕಾರವು ಬೆಳಗಾವಿ ಅಧಿವೇಶನದ ನೆನಪಿಗೆ ಈಗಾಗಲೇ ಅನೇಕ ಉಪಯುಕ್ತ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಇವುಗಳ ಜೊತೆಗೆ, ಈ ಅಧಿವೇಶನವು ಹೇಗೆ ಕರ್ನಾಟಕ ಏಕೀಕರಣಕ್ಕೆ ಭದ್ರವಾದ ಬುನಾದಿಯನ್ನು ಹಾಕಿಕೊಟ್ಟು, ಗಾಂಧೀಜಿಯನ್ನು ಕರ್ನಾಟಕ ರಾಜ್ಯದೊಂದಿಗೆ ಭಾವನಾತ್ಮವಾಗಿ ಬೆಸೆಯಿತು ಎಂಬುದನ್ನೂ ಹೇಳುವುದು ಅಗತ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.