ಇರಾನ್ ಮೇಲೆ ಅಮೆರಿಕ ದಾಳಿ
ಇರಾನ್‌ನ ಮೇಲೆ ಅಮೆರಿಕ ನಡೆಸಿದ ದಾಳಿಗೆ ಜಗತ್ತಿನಾದ್ಯಂತ ವ್ಯಕ್ತವಾದ ಪ್ರತಿಕ್ರಿಯೆ ಗಮನಿಸಿದರೆ ನೈತಿಕತೆಗೆ ಲಕ್ವ ಹೊಡೆದ ಯುಗದಲ್ಲಿ ನಾವು ಬದುಕುತ್ತಿದ್ದೇವೆ ಎಂಬುದು ತಿಳಿಯುತ್ತದೆ. ಮಾತನಾಡದೇ ಇರಲು ನಿಜವಾದ ದ್ವಂದ್ವ, ಸಂಕೀರ್ಣತೆ ಅಥವಾ ಗೊಂದಲ ಕಾರಣವಲ್ಲ. ಶಕ್ತಿಯ ಅನಿಶ್ಚಿತ ನಡವಳಿಕೆಯೇ ಈ ಭೀತಿಗೆ ಕಾರಣ. ನೈತಿಕತೆಯು ತಲೆಕೆಳಗಾದ ಈ ಸ್ಥಿತಿಯು ಎಲ್ಲರನ್ನೂ ಸಮಾನವಾಗಿ ಬಾಧಿಸುವುದಿಲ್ಲ. ನೈತಿಕ ದ್ವಂದ್ವದ ಪ್ರತಿ ಪ್ರಕರಣದಲ್ಲಿಯೂ ಕೆಡುಕನ್ನು ಎಸಗುವವರು ಮತ್ತು ಅವರ ಜೊತೆಗಾರರಿಗೆ ಲಾಭವೇ ಆಗುತ್ತದೆ. ಪ್ರತಿ ಪ್ರಕರಣದಲ್ಲಿಯೂ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನಷ್ಟ ಮಾಡಿಕೊಳ್ಳುವವರು ಮತ್ತು ಬದಿಗೆ ನಿಂತು ನೋಡುವವರು ಇರುತ್ತಾರೆ. ಜಾಗತಿಕವಾಗಿ ‘ನೈತಿಕ ಲಕ್ವ’ ಈ ಹಿಂದೆ ಕಾಣಿಸಿಕೊಂಡದ್ದು 1930ರ ದಶಕದಲ್ಲಿ. ಅಡಾಲ್ಫ್ ಹಿಟ್ಲರ್ ವಿರುದ್ಧ ಸಕಾಲದಲ್ಲಿ ಕ್ರಮ ಕೈಗೊಳ್ಳಲು ಯುರೋಪ್‌ನ ದೇಶಗಳು ವಿಫಲವಾದವು. ಇಂತಹ ನಿರಾಸಕ್ತಿಯು ಎಲ್ಲರನ್ನೂ ಕಾಡುತ್ತದೆ.
ಹತ್ತು ವರ್ಷದ ಮಗುವಿಗೆ ಈ ಪರಿಸ್ಥಿತಿಯನ್ನು ವಿವರಿಸಲು ಪ್ರಯತ್ನಿಸೋಣ. ಇಲ್ಲಿ ಒಂದು ದೇಶವು ದೂರದ ಇನ್ನೊಂದು ದೇಶದ ಮೇಲೆ ದಾಳಿ ನಡೆಸುತ್ತದೆ. ಆ ದೇಶವು ಆಯುಧಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಅದು ನೆರೆಯ ದೇಶಗಳಿಗೆ ಮತ್ತು ಇಡೀ ಜಗತ್ತಿಗೆ ಅಪಾಯಕಾರಿಯಾಗಿದೆ ಎಂಬುದು ದಾಳಿಗೆ ಕಾರಣ. ಇದು ಬಹಳ ಸರಳ. ಮಗುವಿಗೆ ವಿಷಯ ಅರ್ಥವಾಗುತ್ತದೆ. ಆದರೆ, ಮಗು ಕೆಲವು ಪ್ರಶ್ನೆಗಳನ್ನು ಕೇಳಬಹುದು: ಆ ದೇಶವು ಆಯುಧಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂಬುದು ಖಚಿತವೇ? ಇಂತಹ ಆಯುಧಗಳನ್ನು ಹೊಂದಿರುವ ಬೇರೆ ದೇಶಗಳು ಇಲ್ಲವೇ? ಇದೆ ಎಂದಾದರೆ, ಇನ್ನೊಂದು ದೇಶವು ಜಗತ್ತಿಗೆ ಅಪಾಯಕಾರಿಯಾಗಿ ಪರಿಣಮಿಸುವುದು ಹೇಗೆ? ಮತ್ತು ಈ ದೇಶವು ಇತರ ದೇಶಗಳ ಪರವಾಗಿ ದಾಳಿ ನಡೆಸುವುದು ಏಕೆ? ಈಗ, ಆ ಮಗುವಿನ ಪ್ರಶ್ನೆಗಳಿಗೆ ಉತ್ತರಿಸಲು ಯತ್ನಿಸಿ. ಆಡಂಬರದ ಪದಗಳು ಇಲ್ಲದೆ ಆ ಸರಳ ಉತ್ತರ ಹೀಗಿರಬಹುದು: ಇರಾನ್ ಅಣುಬಾಂಬ್‌ಗಳನ್ನು ತಯಾರಿಸುತ್ತಿದೆ ಎಂಬುದಕ್ಕೆ ಸ್ಪಷ್ಟವಾದ ಪುರಾವೆಗಳೇನೂ ಇಲ್ಲ. ಅಣ್ವಸ್ತ್ರದ ಮೇಲೆ ನಿಗಾ ಇರಿಸುವ ಜಾಗತಿಕ ಸಂಸ್ಥೆ ‘ಐಎಇಎ’ ಪ್ರಕಾರ, ಅಣುಬಾಂಬ್ ತಯಾರಿಸುವುದರ ಹತ್ತಿರದಲ್ಲಿಯೂ ಇರಾನ್ ಇಲ್ಲ. ಅಮೆರಿಕದ ರಾಷ್ಟ್ರೀಯ ಗುಪ್ತಚರ ಸಂಸ್ಥೆಯ ನಿರ್ದೇಶಕರೂ ಈ ಉತ್ತರವನ್ನು ಮಾರ್ಚ್‌ನಲ್ಲಿ ಅನುಮೋದಿಸಿದ್ದರು. ಹೌದು, ಜಗತ್ತಿನ ಹಲವು ದೇಶಗಳು ನೂರಾರು ಅಣುಬಾಂಬ್‌ಗಳನ್ನು ಹೊಂದಿವೆ. ವಾಸ್ತವದಲ್ಲಿ, ಈ ಪ್ರದೇಶದಲ್ಲಿಯೇ ಇರುವ ಇಸ್ರೇಲ್ ಅಣ್ವಸ್ತ್ರಗಳನ್ನು ಹೊಂದಿದೆ ಎಂದು ನಂಬಲಾಗಿದೆ. ಅಣುಬಾಂಬ್ ಹೊಂದಿರುವ ಇತರ ದೇಶಗಳ ಜನ ಮತ್ತು ನಾಯಕರಿಗಿಂತ ಇರಾನ್ ಹೆಚ್ಚು ಅಪಾಯಕಾರಿ ಎಂದು ಭಾವಿಸುವುದಕ್ಕೆ ಯಾವುದೇ ಕಾರಣ ಇಲ್ಲ.
ಹಾಗೆಯೇ, ಇತರರ ಪರವಾಗಿ ಕ್ರಮ ಕೈಗೊಳ್ಳಲು ಯಾವ ದೇಶವೂ ಅಮೆರಿಕಕ್ಕೆ ಅಧಿಕಾರ ಕೊಟ್ಟಿಲ್ಲ (ಬಹುಶಃ, ಇಸ್ರೇಲ್ ಅನ್ನು ಹೊರತುಪಡಿಸಿ). ಅಮೆರಿಕ ಮಾಡಿದ್ದನ್ನು ಬೇರೆ ಯಾವ ದೇಶವೂ ಮಾಡದಂತೆ ನೋಡಿಕೊಳ್ಳಲು ಒಡಂಬಡಿಕೆಗಳು, ನಿಯಮಗಳು ಮತ್ತು ಕಾನೂನುಗಳು ಇವೆ.
ಮಗುವಿನ ಜೊತೆಗೆ ಮಾತನಾಡುವ ಚಿಂತನಾ ಪ್ರಯೋಗವು ಪರಿಣತರ ಮಾತಿನಲ್ಲಿ ಅಡಗಿರುವ ಸರಳ ಸತ್ಯವನ್ನು ಮುನ್ನೆಲೆಗೆ ತರಲು ನೆರವಾಗುತ್ತದೆ. ಯುದ್ಧದ ಉದ್ರೇಕ ಅಥವಾ ತೈಲ ಬೆಲೆ ಮತ್ತು ವಿಕಿರಣ ಮಟ್ಟದಂತಹ ಇತರ ಅಡ್ಡಕತೆಗಳಿಂದ ವಿಚಲಿತರಾಗದೆ ನಿಜವಾದ ವಿಚಾರ ಏನು ಎಂಬುದರತ್ತ ಗಮನ ಕೇಂದ್ರೀಕರಿಸುವುದಕ್ಕೂ ಇದು ನೆರವಾಗುತ್ತದೆ. ಚಿಂತಿಸಲು, ಪ್ರಶ್ನಿಸಲು ಮತ್ತು ತೀರ್ಮಾನಕ್ಕೆ ಬರಲು ಇದು ಉತ್ತೇಜನ ಕೊಡುತ್ತದೆ.
ಇರಾನ್‌ನ ಪರಮಾಣು ಘಟಕಗಳ ಮೇಲೆ ಅಮೆರಿಕ ದಾಳಿ ನಡೆಸಿದ ಬಳಿಕ, ‘ಐಎಇಎ’ಯ ನಿಯಮಗಳಿಂದ ಸ್ವಲ್ಪವೇ ಸ್ವಲ್ಪ ಅತ್ತಿತ್ತ ಸರಿದ ಇರಾನ್‌ನ ನಡೆಯನ್ನು ವಿಶ್ಲೇಷಣೆಗೆ ಒಳಪಡಿಸುವ ವರ ದ್ವಂದ್ವವನ್ನು ಗಮನಿಸಿ; ಆದರೆ, ವಿಶ್ವಸಂಸ್ಥೆಯ ನಿರ್ಣಯಗಳು ಮತ್ತು ಅಣು ನಿಶ್ಶಸ್ತ್ರೀಕರಣ ಒಪ್ಪಂದವನ್ನು ಕೂಡ ಅಮೆರಿಕದ ದಾಳಿಯು ಉಲ್ಲಂಘಿಸುತ್ತದೆ ಎಂಬುದನ್ನು ಅವರು ಗಮನಿಸುವುದಿಲ್ಲ. ಅಮೆರಿಕದ ಅಧ್ಯಕ್ಷರು ಅಮೆರಿಕದ ಕಾನೂನುಗಳನ್ನು ಉಲ್ಲಂಘಿಸಿದ್ದಾರೆಯೇ ಎಂಬುದರ ಕುರಿತು ಸಣ್ಣ ಪ್ರಮಾಣದ ಚರ್ಚೆ ನಡೆಯುತ್ತಿದೆ. ಆದರೆ, ಅಮೆರಿಕದ ಕ್ರಮವು ಎಲ್ಲ ಅಂತರ ರಾಷ್ಟ್ರೀಯ ಕಾನೂನುಗಳು ಮತ್ತು ಒಡಂಬಡಿಕೆ
ಗಳನ್ನು ಉಲ್ಲಂಘಿಸಿದೆ ಎಂಬುದರ ಕುರಿತು ಚರ್ಚೆಯೇ ನಡೆಯುತ್ತಿಲ್ಲ. ಒಂದು ಸಂಗತಿಯನ್ನು ನೆನಪಿಡಿ, ಯುದ್ಧದ ಸನ್ನಿವೇಶ ಇಲ್ಲದಿದ್ದಾಗಲೂ ಇರಾನ್‌ನ ಸರ್ವೋಚ್ಚ ನಾಯಕನನ್ನು ಹತ್ಯೆ ಮಾಡುವ ಕುರಿತು ಅಮೆರಿಕದ ಅಧ್ಯಕ್ಷ ಮಾತನಾಡಿದ್ದಾರೆ. ಇನ್ನೊಂದು ವಿಚಾರವನ್ನು ನೆನಪಿಡಿ, ಎರಡು ವಾರಗಳ ಗಡುವಿನ ಬಳಿಕ ಏನಾದರೂ ನಿರ್ಧಾರ ಕೈಗೊಳ್ಳಲಾಗುವುದು ಎಂದು ಘೋಷಿಸಿ ಎರಡೇ ದಿನಗಳಲ್ಲಿ ಅವರು ದಾಳಿ ನಡೆಸಿದರು. ಧೂರ್ತ ದೇಶ ಅನ್ನಬಹುದೇ? ಇಲ್ಲ, ಏಕೆಂದರೆ ಇರಾನ್ ಧೂರ್ತ ದೇಶ ಎಂದು ಅಮೆರಿಕದ ಅಧ್ಯಕ್ಷ ಹೇಳುತ್ತಾರೆ. ಇರಾನ್ ಅನ್ನು ಸಂಧಾನಕ್ಕೆ ಆಹ್ವಾನಿಸುವ ಮೂಲಕ ಅಮೆರಿಕದ ಅಧ್ಯಕ್ಷ ಮೋಸದ ಆಟ ಆಡಿಲ್ಲವೇ? ಇಲ್ಲ. ಇರಾನ್ ‘ನಕಲಿ ಸಂಧಾನ’ ನಡೆಸುತ್ತಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆರೋಪಿಸಿದ್ದರು.‘ನ್ಯಾಯಯುತವಾದುದು ಅಕ್ರಮ ಮತ್ತು ಅಕ್ರಮವೇ ನ್ಯಾಯಯುತ’ ಎಂದು ನಂಬಿಸಲಾದ ಜಗತ್ತಿನಲ್ಲಿ ನಾವು ಇದ್ದೇವೆ.
ಅಮೆರಿಕ ಎಂಬ ಪೀಡಕ ದೇಶವು ತನ್ನ ಆಕ್ರಮಣಶೀಲತೆಯನ್ನು ಅಡಗಿಸಲು ಯತ್ನಿಸುತ್ತಿದ್ದರೆ, ಇಡೀ ಜಗತ್ತು ನೈತಿಕವಾಗಿ ಲಕ್ವ ಹೊಡೆಸಿಕೊಂಡಿದೆ ಎಂಬುದು ಅಧ್ಯಯನ ಯೋಗ್ಯ ವಿಚಾರ. ಆಗಷ್ಟೇ ದಾಳಿಗೆ ಒಳಗಾದ ಇರಾನ್ ಜೊತೆಗೆ ಮಾತನಾಡಿದ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್, ‘ಈಗಿನ ಅಪಾಯಕಾರಿ ಸನ್ನಿವೇಶದಲ್ಲಿ ರಾಜತಾಂತ್ರಿಕ ಹಾದಿಗೆ ಮರಳುವುದಕ್ಕಾಗಿ ಗರಿಷ್ಠ ಸಂಯಮ ಪಾಲಿಸಿ’ ಎಂದು ಹೇಳುತ್ತಾರೆ. ಅವರು ಕನ್ಸರ್‌ವೇಟಿವ್ ಎಂದು ನೀವು ಭಾವಿಸಿದ್ದರೆ, ಬ್ರಿಟನ್ ಪ್ರಧಾನಿ ಮತ್ತು ಪ್ರಗತಿಪರವಾದ ಲೇಬರ್ ಪಕ್ಷದ ನಾಯಕ ಕಿಯರ್ ಸ್ಟಾರ್ಮರ್ ವಿಶಿಷ್ಟವಾದ ಸಾಮ್ರಾಜ್ಯಶಾಹಿ ಧ್ವನಿಯಲ್ಲಿ ಹೀಗೆನ್ನುತ್ತಾರೆ: ‘ಅಣ್ವಸ್ತ್ರ ಅಭಿವೃದ್ಧಿ ಪಡಿಸಲು ಇರಾನ್‌ಗೆ ಎಂದೂ ಅವಕಾಶವನ್ನೇ ಕೊಡಬಾರದು. ಅಮೆರಿಕದ ನಡೆಯು ಈ ಭೀತಿಯನ್ನು ಇಲ್ಲವಾಗಿಸಿದೆ... ಇರಾನ್ ಸಂಧಾನಕ್ಕೆ ಬರಬೇಕು ಮತ್ತು ಈಗಿನ ಬಿಕ್ಕಟ್ಟಿಗೆ ರಾಜತಾಂತ್ರಿಕ ಪರಿಹಾರ ಕಂಡುಕೊಳ್ಳಬೇಕು’. ‘ನಿಶ್ಶಸ್ತ್ರೀಕರಣ’ ಎಂಬ ಚಿಂತನೆಯ ಹಿಂದಿರುವ ಬೂಟಾಟಿಕೆಯ ಜೊತೆಗೆ, ಸಂಧಾನದ ಹೊಣೆಯನ್ನು ಸಂತ್ರಸ್ತರ ಮೇಲೆಯೇ ಹೊರಿಸುವ ಎನ್‌ಪಿಟಿಯ ದ್ವಂದ್ವ ನಿಲುವು ಕೂಡ ಎನ್‌ಪಿಟಿಯಲ್ಲಿ (ಅಣು ನಿಶ್ಶಸ್ತ್ರೀಕರಣ ಒಪ್ಪಂದ) ಅಡಗಿದೆ. ಒಂದು ದಿನ ಮುಂಚಿನವರೆಗೆ ಐರೋಪ್ಯ ಒಕ್ಕೂಟದ ಜೊತೆಗೆ ಮಾತುಕತೆ ನಡೆಸುತ್ತಿದ್ದ ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್
ಅರ್ಗಾಚಿ ಅವರು ಹೀಗೆ ಕೇಳುತ್ತಾರೆ: ‘ಬಿಟ್ಟೇ ಹೋಗದಲ್ಲಿಗೆ ಇರಾನ್ ಹಿಂದಿರುಗುವುದು ಹೇಗೆ?’ ಗಾಜಾ ಮತ್ತು ಇರಾನ್‌ನ ಬಳಿಕ, ಯುರೋಪ್‌ನಿಂದ ಬರುತ್ತಿರುವ ಉದಾರವಾದದ ಮತ್ತು ಬಹುತ್ವವಾದದ ಎಲ್ಲ ಸವಿಮಾತುಗಳು ಬಿಳಿಯರ ಶ್ರೇಷ್ಠತೆಯ ವ್ಯಸನವನ್ನು ಮುಚ್ಚಿಡುವ ಯತ್ನವಲ್ಲವೇ ಎಂದು ಪ್ರಶ್ನಿಸಿಕೊಳ್ಳಲೇಬೇಕಿದೆ.
ಇರಾನ್‌ನ ನೆರೆಯ ಹಲವು ದೇಶಗಳ ಹೇಳಿಕೆಗಳಲ್ಲಿ ಬಹಳವಾಗಿ ಬೇಕಿದ್ದ ಎಚ್ಚರಿಕೆಯ ಧಾಟಿ ಇದ್ದರೆ, ಅದಕ್ಕೆ ಕಾರಣ ಯಾವುದೇ ನೈಜ ಕಳಕಳಿಯಾಗಲೀ ಅಥವಾ ನಿಲುವು ತೆಗೆದುಕೊಳ್ಳುವ ಸಾಮರ್ಥ್ಯವಾಗಲೀ ಅಲ್ಲ. ಹಿತಾಸಕ್ತಿ ಸಂಘರ್ಷವನ್ನು ಸಮತೋಲನಗೊಳಿಸುವ ಹತಾಶ ಪ್ರಯತ್ನ ಅದರಲ್ಲಿ ಕಾಣಿಸುತ್ತದೆ. ಅಮೆರಿಕವನ್ನು ಮೆಚ್ಚಿಸುವ ಮತ್ತು ಅದರ ಸೇನಾನೆಲೆಗಳನ್ನು ಮುಂದುವರಿಸಿಕೊಂಡು ಹೋಗುವ ಅಗತ್ಯ ಒಂದೆಡೆಯಾದರೆ, ಮುಸ್ಲಿಂ ದೇಶವೊಂದನ್ನು ಕೈಬಿಟ್ಟರು ಎಂಬ ಕಾರಣಕ್ಕೆ ಇರಾನ್‌ನ ಪ್ರತೀಕಾರ ಮತ್ತು ಅಲ್ಲಿನ ಜನರ ಆಕ್ರೋಶದಿಂದ ತಪ್ಪಿಸಿಕೊಳ್ಳುವ ಇಚ್ಛೆಯೂ ಇದೆ ಎಂಬುದು ಕಾಣಿಸುತ್ತದೆ. ರಷ್ಯಾ ಮತ್ತು ಚೀನಾ ತಾವೇ ಸ್ವತಃ ಆಕ್ರಮಣಕಾರಿ ಯಾಗಿ ವಿಸ್ತರಣೆಯಲ್ಲಿ ತೊಡಗಿದ್ದರೂ ಅಮೆರಿಕದ ನಡೆಯನ್ನು ಬಹಳ ಸ್ಪಷ್ಟವಾಗಿ ಖಂಡಿಸಿರುವುದೇ ನಮ್ಮ ಕಾಲದ ಸ್ವರೂಪ ಏನು ಎಂಬುದನ್ನು ವಿವರಿಸುತ್ತದೆ.
ಇಡೀ ಜಗತ್ತಿನ ನೈತಿಕತೆಗೆ ಲಕ್ವ ಹೊಡೆದಿರುವಾಗ ಭಾರತವು ತನ್ನನ್ನು ತಾನು ಕುಬ್ಜಗೊಳಿಸಿಕೊಂಡಿತು ಎಂಬುದರಲ್ಲಿ ಆಶ್ಚರ್ಯಪಡುವುದಕ್ಕೆ ಏನಿದೆ? ಭಾರತವು ಈಗ ಜಾಗತಿಕ ಶಕ್ತಿಯಾಗಿ ಬೆಳೆದಿದೆ ಮತ್ತು ಯಾವುದೇ ಗುಂಪು ಅಥವಾ ಸಿದ್ಧಾಂತಕ್ಕೆ ಬದ್ಧವಾಗದೆ ಸ್ವತಂತ್ರ ಧ್ವನಿಯನ್ನು ಹೊಂದಿದೆ ಎಂದು ಕಳೆದ ಒಂದು ದಶಕದಲ್ಲಿ ನಮಗೆ ಹೇಳುತ್ತಾ ಬರಲಾಗಿದೆ. ಜಾಗತಿಕ ಮಟ್ಟದಲ್ಲಿ ಮರುವ್ಯಾಖ್ಯಾನ ನಡೆಯುತ್ತಿರುವ ಈ ಹೊತ್ತಲ್ಲಿ, ಈವರೆಗೆ ಭಾರತವು ಪ್ರೇಕ್ಷಕನಾಗಿ ಮಾತ್ರ ಇದೆ. ಜಗತ್ತಿನ ದಕ್ಷಿಣ ಭಾಗದ ಧ್ವನಿಯಾಗಬಹುದು ಎಂದು ಒಂದು ಕಾಲದಲ್ಲಿ ಭಾವಿಸಲಾಗಿದ್ದ ದೇಶವು ಈ ಸಂದರ್ಭದಲ್ಲಿ ಮಹತ್ವದ ಪಾತ್ರ ವಹಿಸಬೇಕು ಎಂದು ಯಾರಿಗೂ ಅನಿಸುತ್ತಿಲ್ಲ. ಅದೂ ಅಲ್ಲದೆ, ನಾವು ನಮ್ಮ ಹಳೆಯ ಮಿತ್ರ ಮತ್ತು ಕಷ್ಟಕಾಲದಲ್ಲಿ ನಮ್ಮ ಜೊತೆಗಿದ್ದ ಇರಾನ್ ಅನ್ನು ಕೈಬಿಟ್ಟೆವು. ಅಲ್ಲಿ ಸಿಲುಕಿದ್ದ ನಮ್ಮ ಪ್ರಜೆಗಳನ್ನು ಕರೆಸಿಕೊಂಡೆವು. ಇರಾನ್ ಅಧ್ಯಕ್ಷ ಭಾರತದ ಪ್ರಧಾನಿಗೆ ಕರೆ ಮಾಡಿದ್ದರು; ಪ್ರಧಾನಿಯವರು ‘ಇತ್ತೀಚಿನ ಸಂಘರ್ಷಗಳ ಕುರಿತು ಗಾಢ ಕಳವಳ’ ವ್ಯಕ್ತಪಡಿಸಿದರು ಹಾಗೂ ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗದ ಮೂಲಕ ಸಂಘರ್ಷ ತಗ್ಗಿಸಿ ಎಂದು ಕರೆಕೊಟ್ಟರು ಎಂಬುದಷ್ಟೇ ನಮಗೆ ಗೊತ್ತಿದೆ. ಗಾಜಾದಲ್ಲಿ ಕದನವಿರಾಮ ಸ್ಥಾಪನೆಯಾಗಬೇಕು ಎಂಬ ವಿಶ್ವಸಂಸ್ಥೆಯ ನಿರ್ಣಯದ ಭಾಗವಾಗಲು ಕೂಡ ಸಿದ್ಧವಿಲ್ಲದ ಸರ್ಕಾರದಿಂದ ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿಲ್ಲವೇನೋ
ನಮ್ಮ ರಾಷ್ಟ್ರೀಯ ಹಿತಾಸಕ್ತಿಯನ್ನು ಸಂರಕ್ಷಿಸುವ, ನೈತಿಕತೆಯ ಲೇಪವೂ ಇಲ್ಲದ ಹೊಸ ‘ವಾಸ್ತವವಾದ’ ಇದು ಎಂದು ನಮಗೆ ಹೇಳಲಾಗಿದೆ. ಇತಿಹಾಸವು ನಮಗೆ ಬೇರೆ ಏನನ್ನೋ ಹೇಳುತ್ತಿದೆ. ಅತಿಜಾಣ್ಮೆ ಪ್ರದರ್ಶನ ಮತ್ತು ಸಂದರ್ಭಕ್ಕೆ ತಕ್ಕಂತೆ ಸ್ವಂತ ಹಿತಾಸಕ್ತಿಯನ್ನು ಮಾತ್ರ ನೋಡುವುದು ಎರಡೂ ಕಡೆಗಳಿಂದಲೂ ಕೆಟ್ಟದ್ದನ್ನೇ ಉಂಟು ಮಾಡುತ್ತದೆ: ನಿಮಗೆ ಗೌರವವೂ ಸಿಗುವುದಿಲ್ಲ, ನಿಮ್ಮ ಹಿತಾಸಕ್ತಿಯ ರಕ್ಷಣೆಯೂ ಆಗುವುದಿಲ್ಲ. ಕಾಲ್ಪನಿಕ ಭವಿಷ್ಯದಲ್ಲಿ, ಅಮೆರಿಕ ಮತ್ತು ಇರಾನ್ ಜಾಗದಲ್ಲಿ ಚೀನಾ ಮತ್ತು ಭಾರತವನ್ನು ಇರಿಸಿ. ಇತಿಹಾಸದ ಪಾಠವೊಂದು ನಿಮಗೆ ಅರ್ಥವಾಗುತ್ತದೆ. ನಿಜವಾದ ಜಗತ್ತಿನಲ್ಲಿ, ಉಳಿವಿಗೆ ಗೆಳೆಯರು ಮತ್ತು ಕೆಲವು ತತ್ವಗಳು ಬೇಕು. ಶ್ರೀಮಂತರು ಮತ್ತು ಶಕ್ತಿಶಾಲಿಗಳು ಒಂದಷ್ಟು ಸಮಯಕ್ಕಾದರೂ ನೈತಿಕ ಲಕ್ವವನ್ನು ತಡೆದು ಕೊಳ್ಳಬಹುದು. ನಮಗೆ ಅದು ಸಾಧ್ಯವಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.