ADVERTISEMENT

ಆರ್ಥಿಕ ಸ್ವಾವಲಂಬನೆಯತ್ತ ಸಾಗದ ಬಜೆಟ್

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 20:10 IST
Last Updated 5 ಜುಲೈ 2018, 20:10 IST
ಎಚ್.ಆರ್.ಪ್ರಭಾಕರ್, ಲೇಖಕ ತೆರಿಗೆ ಸಲಹೆಗಾರ
ಎಚ್.ಆರ್.ಪ್ರಭಾಕರ್, ಲೇಖಕ ತೆರಿಗೆ ಸಲಹೆಗಾರ   

ರಾಜ್ಯದ ಬೊಕ್ಕಸದ ಹಣ ಜನರ ಬೆವರಿನ ಫಲ, ನಾನು ಅವುಗಳನ್ನು ನೋಡಿಕೊಳ್ಳುವ ಟ್ರಸ್ಟಿ ಮಾತ್ರ ಎಂದು ಭಾಷಣ ಆರಂಭಿಸಿ ಸಿದ್ದರಾಮಯ್ಯ ಬಜೆಟ್ ಮಂಡಿಸಿದ್ದು ಕಳೆದ ಫೆಬ್ರುವರಿ 16ರಂದು. ಇದಾದ ಕೇವಲ 138 ದಿನಗಳ ನಂತರ ಎಚ್.ಡಿ.ಕುಮಾರಸ್ವಾಮಿ ಮತ್ತೊಂದು ಬಜೆಟ್ ಮಂಡಿಸಿದ್ದಾರೆ. ಹೊಸ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅವರು ಅಧಿಕಾರ ಸ್ವೀಕರಿಸಿ 42 ದಿನಗಳ ನಂತರ ತಮ್ಮ ಚೊಚ್ಚಲ ಬಜೆಟ್ ನ್ನು ಜನರ ಮುಂದಿಟ್ಟಿದ್ದಾರೆ.

ಹಿಂದಿನ ಸರ್ಕಾರದ ಅನ್ನಭಾಗ್ಯಕ್ಕೆ ಸ್ವಲ್ಪ ಕತ್ತರಿ, ಇಂದಿರಾ ಕ್ಯಾಂಟೀನ್ ವಿಸ್ತರಣೆ, ಚಿಕ್ಕಬಳ್ಳಾಪುರದಲ್ಲಿ ಮೊಬೈಲ್ ಬಿಡಿಭಾಗಗಳ ಉದ್ದಿಮೆ, ಪ್ರತಿ ನಗರದಲ್ಲಿ ಒಂದು ಲಕ್ಷ ಮನೆಗಳು, ಬ್ರಾಹ್ಮಣ ಅಭಿವೃದ್ಧಿ ಮಂಡಳಿ, ಕುಂಬಾರ ಮಹಾ ಪೀಠ, ದೇವಾಂಗ ಮಹಾಪೀಠ, ಹಾಸನ, ರಾಮನಗರ, ಮಂಡ್ಯ ಜಿಲ್ಲೆಗಳಿಗೆ ಬಂಪರ್ ಕೊಡುಗೆಗಳು, ಬೀದರ್ ನಲ್ಲಿ ಕೃಷಿ ಸಂರಕ್ಷಣಾ ಘಟಕ, ಪ್ರತಿ ವಿಭಾಗಗಳಲ್ಲಿ ಜಿ.ಎಸ್.ಟಿ ಹೆಲ್ಪ್ ಡೆಸ್ಕ್, ಇಸ್ರೇಲ್ ಮಾದರಿ ನೀರಾವರಿಗೆ ₹ 150 ಕೋಟಿ, ಹೊಸೂರಿನಲ್ಲಿ ಡಾ. ಎಚ್, ನರಸಿಂಹನಯ್ಯನವರ ಸ್ಮರಣಾರ್ಥ ವಿಜ್ಞಾನ ಕೇಂದ್ರ, ಚಲನ ಚಿತ್ರ ವಿಶ್ವ ವಿದ್ಯಾಲಯ, ಶಂಕರಾಚಾರ್ಯರ ಜಯಂತಿ, ಸಂಧ್ಯಾ ಸುರಕ್ಷಾ ಯೋಜನೆ ಸಹಾಯಧನ ಹೆಚ್ಚಳ, ಯುವಕರಿಗೆ ಉದ್ಯೋಗಾಧಾರಿತ ತರಬೇತಿ, ಮದ್ಯ, ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ ಇವೆಲ್ಲ ಬಜೆಟ್ ಹೈಲೈಟ್ಸ್.

₹2.18 ಲಕ್ಷ ಕೋಟಿ ಮೊತ್ತದ ಬಜೆಟ್ ಮಂಡಿಸಿರುವ ಕುಮಾರಸ್ವಾಮಿಯವರು ಪ್ರಮುಖವಾಗಿ ಚರ್ಚಿಸಿರುವುದು ರೈತರ ₹ 2 ಲಕ್ಷದ ವರೆಗಿನ ಸುಸ್ತಿ ಸಾಲ ಮನ್ನಾ. ಇದರ ಜೊತೆಗೆ ಶೇಕಡಾವಾರು ಅನುಪಾತದಲ್ಲಿ ವಿನಿಯೋಗಿಸಲು ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಸಾರಿಗೆ, ಕೃಷಿ, ತೋಟಗಾರಿಕೆ, ಲೋಕೋಪಯೋಗಿ, ಸಮಾಜ ಕಲ್ಯಾಣ, ಇಂಧನ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗು ಇತರೆ ಇಲಾಖೆಗಳಿಗೆ ಹಂಚಿದ್ದಾರೆ.

ADVERTISEMENT

ತಮ್ಮ ಬಜೆಟ್ ಭಾಷಣದಲ್ಲಿ ರೈತರ ಸಾಲ ಮನ್ನಾ ಕುರಿತ ಪ್ರಸ್ತಾಪ ಮಾಡುವಾಗ ಇದರ ಸಾಧಕ ಬಾದಕಗಳನ್ನು ಚರ್ಚಿಸಿದ್ದರ ಕುರಿತು ಉಲ್ಲೇಖಿಸಿರುವ ಮುಖ್ಯಮಂತ್ರಿಗಳು ಡಿಸೆಂಬರ್ 31, 2017 ರ ವರೆಗಿನ ಕೃಷಿ ಸಾಲದ ₹2 ಲಕ್ಷದ ವರೆಗಿನ ಮೊತ್ತವನ್ನು ಮನ್ನಾ ಮಾಡಿದ್ದು ಕೃಷಿ ವಲಯದಲ್ಲಿ ಹರುಷ ಮೂಡಿಸಿದ್ದರೂ ಸಹ ಇದರ ಹಿಂದಿನ ಲೆಕ್ಕಾಚಾರದ ಬಗ್ಗೆ ಸ್ವಲ್ಪ ಯೋಚಿಸಬೇಕಿದೆ.

ಕಳೆದ ಮೂರು ವರ್ಷಗಳಿಂದ ಆದಾಯ ತೆರಿಗೆ ಪಾವತಿಸುತ್ತಿರುವವರನ್ನು ಹೊರಗಿಟ್ಟಿದ್ದು ನಿಜವಾದ ಫಲಾನಭವಿಗಳನ್ನು ಶೋಧಿಸುವ ಲೆಕ್ಕಾಚಾರವನ್ನೂ ಅವರು ಮಾಡಿದ್ದಾರೆ. ಈಗಾಗಲೇ ಕೃಷಿ ಸಾಲ ತೀರಿಸಿರುವ ರೈತರನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರಿಗೆ ₹25ಸಾವಿರ ದವರೆಗಿನ ಪ್ರೋತ್ಸಾಹಧನ ಕೊಟ್ಟಿರುವುದು ಒಂದು ರೀತಿ ಮೂಗಿಗೆ ತುಪ್ಪ ಸವರಿದಂತಿದೆ.

ಸಾಲ ಮನ್ನಾದ ₹ 32 ಸಾವಿರ ಕೋಟಿ ಹಣದ ಕ್ರೋಡೀಕರಣಕ್ಕೆ ಯಾವ ಹೊಸ ಮಾರ್ಗಗಳಿವೆ ಎನ್ನುವುದನ್ನು ಗಮನಿಸಿದರೆ ₹4,000 ಕೋಟಿಯವರೆಗಿನ ತೆರಿಗೆ ನಿರೀಕ್ಷೆ ಇದೆ. ಮದ್ಯದ ಮೇಲಿನ ತೆರಿಗೆ ಹೆಚ್ಚಳ, ರೋಡ್ ಟ್ಯಾಕ್ಸ್, ಪೆಟ್ರೋಲ್, ಡೀಸಲ್ ಮೇಲಿನ ತೆರಿಗೆ ಇವುಗಳಿಂದ ಒಂದಿಷ್ಟು ಹಣ ಬರಬಹುದಾದರೂ ಇನ್ನುಳಿದ ಖೋತಾವನ್ನು ತುಂಬಲು ಮಾರ್ಗಗಳೇನು ಎಂದು ಚರ್ಚಿಸಿಲ್ಲ. ಆದರೆ ₹34,000 ಕೋಟಿ ಹೆಚ್ಚಿನ ಹೊರೆಯನ್ನು ನಾಲ್ಕು ವರ್ಷಗಳಿಗೆ ವಿಸ್ತರಿಸಿರುವುದು ಬೊಕ್ಕಸಕ್ಕೆ ಸ್ವಲ್ಪ ನಿರಾಳವೆನಿಸಬಹುದು.

ಇದಕ್ಕೆ ಇಂಬು ಕೊಟ್ಟಂತೆ ಹಿಂದಿನ ಸಿದ್ದರಾಮಯ್ಯ ಸರ್ಕಾರದ ₹50 ಸಾವಿರದವರೆಗಿನ ಸಾಲ ಮನ್ನಾದಲ್ಲಿನ ₹ 4,000 ಕೋಟಿ ಖೋತಾವನ್ನೂ ಇಲ್ಲಿ ಗಮನಿಸಬೇಕಿದೆ.

ವಿತ್ತೀಯ ಕೊರತೆ ಎದುರಾಗದಂತೆ ಒಟ್ಟಾರೆ ಸಂಪನ್ಮೂಲ ಕ್ರೋಡೀಕರಣದ ಬಗ್ಗೆ ಚರ್ಚಿಸುವುದಾದರೆ ಜಿ.ಎಸ್.ಟಿ ತೆರಿಗೆ ಸಂಗ್ರಹ, ಅಬಕಾರಿ, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಹಾಗೂ ಇತರೆ ಇಲಾಖೆಗಳಿಂದ ಬರಬಹುದಾದ ತೆರಿಗೆ ಸಂಗ್ರಹ, ಕೇಂದ್ರ ಸರ್ಕಾರದ ತೆರಿಗೆ ಪರಿಹಾರ ನಮಗೆ ತಕ್ಷಣಕ್ಕೆ ಹೊಳೆಯಬಹುದಾದದ್ದು ಅನ್ನಿಸಿದರೂ ಇದರ ಜೊತೆಗೆ ಸಹಜವಾಗಿ ಜನಪ್ರತಿನಿಧಿಗಳು ಮನಸ್ಸು ಮಾಡಿದರೆ ಅವರ ಸಂಬಳದ ಕೆಲವು ಭಾಗ ದೇಣಿಗೆ ನೀಡಿದರೆ ಸಹಕಾರಿಯಾಗಬಹುದು.‌

ಜೊತೆಗೆ ಸರ್ಕಾರಿ ನೌಕರರು ಅಲ್ಪ ಭಾಗವನ್ನು ಭರಿಸಿದರೆ, ಬೇರೆ ಬೇರೆ ಇಲಾಖೆಗಳಲ್ಲಿ ಉಳಿದ ಅನುದಾನದ ಹಣ ಸಮರ್ಪಕವಾಗಿ ಬಳಸಿಕೊಂಡರೆ, ಅನಗತ್ಯ ಎನ್ನಿಸಬಹುದಾದ ಅನುದಾನದಲ್ಲಿ, ಖರ್ಚು ವೆಚ್ಚಗಳಲ್ಲಿ ಸ್ವಲ್ಪ ಭಾಗವಾದರೂ ಇತ್ತ ವರ್ಗಾಯಿಸಿಕೊಂಡರೆ ಕನಿಷ್ಠ ಸ್ವಲ್ಪ ಭಾಗವನ್ನಾದರೂ ಬ್ಯಾಲೆನ್ಸ್ ಮಾಡಬಹುದು. ಉಳಿದಂತೆ ಇರುವ ಕಟ್ಟ ಕಡೆಯ ಮಾರ್ಗವೇ ಮತ್ತೊಮ್ಮೆ ಸಾಲದತ್ತ ಮುಖ ಮಾಡುವುದು. ಆದರೂ ಕುಮಾರಸ್ವಾಮಿ ಅವರ ಬಜೆಟ್ ಆರ್ಥಿಕ ಸ್ವಾವಲಂಬನೆಯತ್ತ ಮುಖ ಮಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.