ಎಸ್.ಎಂ.ಕೃಷ್ಣ ಅವರನ್ನು ನಾನು ಮೊದಲು ಭೇಟಿ ಮಾಡಿದ್ದು ಬೆಂಗಳೂರಿನ ಜಕ್ಕೂರು ವಾಯುನೆಲೆಯಲ್ಲಿ; ಡೆಕ್ಕನ್ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಲು ಬಂದಿದ್ದ ಅವರನ್ನು ನಾನು ಸ್ವಾಗತಿಸಿದ್ದೆ. ಅವರು ಬಲಿಷ್ಠ ಕೃಷಿ ಸಮುದಾಯವಾದ ಗೌಡರು ಅಥವಾ ಒಕ್ಕಲಿಗರ ಅತ್ಯಂತ ಗೌರವಾನ್ವಿತ ಧಾರ್ಮಿಕ ಮುಖಂಡರಾಗಿದ್ದ ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ, ಅವರ ಆಶೀರ್ವಾದ ಪಡೆಯಲು ತೆರಳುತ್ತಿದ್ದರು.
‘ಕ್ಯಾಪ್ಟನ್, ಈ ಪ್ರಯಾಣದಲ್ಲಿ ನೀವು ಏಕೆ ನನ್ನ ಜೊತೆಯಾಗಬಾರದು’ ಎಂದು ಅವರು ನನ್ನನ್ನು ಪ್ರಶ್ನಿಸಿದರು. ನಾನು ಸಂತೋಷದಿಂದ ಆ 30 ನಿಮಿಷದ ಪ್ರಯಾಣದಲ್ಲಿ ಅವರ ಜೊತೆಯಾದೆ. ನಮ್ಮ ದೀರ್ಘ ಹಾಗೂ ಸ್ಮರಣೀಯವಾದ ಒಡನಾಟ ಹಾಗೆ ಆರಂಭವಾಗಿತ್ತು.
ಎಸ್.ಎಂ.ಕೃಷ್ಣ ಅವರ ಸುಸಂಸ್ಕೃತ ನಡವಳಿಕೆಯ ಅಡಿಯಲ್ಲಿ ರಾಜಕೀಯ ಜಾಣ್ಮೆ ಮತ್ತು ಚತುರತೆಗಳಿದ್ದವು. ಅವರ ರಾಜಕೀಯ ವೈರಿ ಆಗಿದ್ದ ದೇವೇಗೌಡ ಅವರು ನಿಜವಾದ ಮಣ್ಣಿನ ಮಗ ಮತ್ತು ರಾಜಕೀಯವಾಗಿ ಪ್ರಬಲವಾಗಿದ್ದ ಒಕ್ಕಲಿಗ ಸಮುದಾಯದ ಅಧಿಕೃತ ನಾಯಕರು ಎಂದು ನಂಬಲಾಗಿತ್ತು. ಅದೇ ಸಮುದಾಯದಿಂದ ಬಂದಿದ್ದ ಕೃಷ್ಣ ಅವರಂಥ ಇತರ ನಾಯಕರ ಬಗ್ಗೆ ಸಮುದಾಯದಲ್ಲಿ ಅಂಥ ಭಾವನೆಗಳು ಇರಲಿಲ್ಲ.
ಹಾಸನದಿಂದ ಬಂದಿದ್ದ ದೇವೇಗೌಡರಂತೆಯೇ ಒಕ್ಕಲಿಗರ ಪ್ರಾಬಲ್ಯದ ಮಂಡ್ಯ ಜಿಲ್ಲೆಯ ಸಣ್ಣ ಹಳ್ಳಿಯಿಂದ ಬಂದಿದ್ದ ಕೃಷ್ಣ ಅವರು ಕೂಡ ಒಕ್ಕಲಿಗ ಸಮುದಾಯದ ನಾಯಕರಾಗಿದ್ದರು. ಸಮುದಾಯದ ಹೆಮ್ಮೆ ಎನ್ನಿಸಿಕೊಳ್ಳುವ ತಮ್ಮ ಪ್ರಯತ್ನದಲ್ಲಿ ಅವರು ಬಹಳ ಮಟ್ಟಿಗೆ ಯಶಸ್ವಿಯೂ ಆದರು. ಆದರೆ, ತಮ್ಮ ಅಮೆರಿಕ ಶಿಕ್ಷಣ ಮತ್ತು ಬೆಂಗಳೂರನ್ನು ಜಾಗತಿಕ ಮಟ್ಟದ ಕಾಸ್ಮೊಪಾಲಿಟನ್ ನಗರವನ್ನಾಗಿ ಮತ್ತು ಮಾಹಿತಿ ತಂತ್ರಜ್ಞಾನದ ಕೇಂದ್ರವನ್ನಾಗಿ ರೂಪಿಸುವ ಅಸಾಧಾರಣ ದೂರದೃಷ್ಟಿಯಿಂದಾಗಿ ಅವರು ಜಾತಿಯ ಎಲ್ಲ ಸಂಕುಚಿತ ಗಡಿಗಳನ್ನು ಮೀರಿ ಸಮಾಜದ ಎಲ್ಲ ವರ್ಗಗಳಿಗೆ ಪ್ರೀತಿಪಾತ್ರರಾದರು.
ಅದೃಷ್ಟವಶಾತ್, ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆಯ ನನ್ನ ಕನಸಿನ ಬೀಜಾಂಕುರವಾಗಿದ್ದು ಎಸ್.ಎಂ.ಕೃಷ್ಣ ಅವರೊಂದಿಗಿನ ನೇರ ಒಡನಾಟದಲ್ಲಿಯೇ. ಅವರು ಡೆಕ್ಕನ್ ಹೆಲಿಕಾಪ್ಟರ್‌ಗಳನ್ನು ಪದೇ ಪದೇ ಬಳಸುತ್ತಿದ್ದರು. ಒಂದು ದಿನ ಅವರು ನನಗೆ ಕರೆ ಮಾಡಿ, ‘ನಾನು ಪಳನಿಗೆ ಹೋಗಬೇಕಿದೆ, ಚಾಪರ್‌ಗಳು ಹೆಚ್ಚು ಕಂಪಿಸುತ್ತವೆ ಮತ್ತು ವಿಪರೀತ ಶಬ್ದ ಮಾಡುತ್ತವೆ. ಹೆಚ್ಚು ಸಮಯವನ್ನೂ ತೆಗೆದುಕೊಳ್ಳುತ್ತವೆ. ನೀವು ವಿಮಾನದಲ್ಲಿ ನನ್ನನ್ನು ಅಲ್ಲಿಗೆ ಕರೆದೊಯ್ಯಲು ಸಾಧ್ಯವೇ’ ಎಂದು ಕೇಳಿದರು. ಈ ಬಗ್ಗೆ ಹಲವು ಸಾಧ್ಯತೆಗಳನ್ನು ಪರಿಶೀಲಿಸಿದ ಬಳಿಕ ನಮ್ಮ ಬಳಿ ಬಂದ ವಿಮಾನ ಚಾಲಕ, ಪಳನಿಗೆ ಹತ್ತಿರದಲ್ಲಿರುವ ದಿಂಡಿಗಲ್‌ನಲ್ಲಿ, ಉಡುಪು ತಯಾರಿಕಾ ಕಾರ್ಖಾನೆಗೆ ಹೊಂದಿಕೊಂಡಂತೆ, ಒಂದು ವಿಮಾನ ನಿಲ್ದಾಣ ಇರುವುದನ್ನು ಪತ್ತೆ ಹಚ್ಚಿ ನನಗೆ ತಿಳಿಸಿದರು. ನಾನು ಕಾರ್ಖಾನೆಯ ಮಾಲೀಕರೊಂದಿಗೆ ಮಾತನಾಡಿದೆ.
ಕೃಷ್ಣ ಅವರು ದಿಂಡಿಗಲ್‌ವರೆಗೆ ವಿಮಾನದಲ್ಲಿ ಪ್ರಯಾಣಿಸಿ, ಅಲ್ಲಿಂದ ಪಳನಿ ದೇವಾಲಯಕ್ಕೆ ಭೇಟಿ ನೀಡಿದರು. ವಾಪಸ್ ಬಂದ ಬಳಿಕ ನನ್ನನ್ನು ಭೇಟಿ ಮಾಡಿದ ಅವರು, ‘ಕ್ಯಾಪ್ಟನ್, ಕರ್ನಾಟಕದಲ್ಲಿರುವ ಸಣ್ಣ ಸಣ್ಣ ವಿಮಾನ ನಿಲ್ದಾಣಗಳ ನಡುವೆ ವಿಮಾನಯಾನ ಸಂಪರ್ಕ ಕಲ್ಪಿಸುವ ಬಗ್ಗೆ ನೀವು ಯಾಕೆ ಯೋಚಿಸಬಾರದು’ ಎಂದು ಹೇಳಿದರು. ಇದು ನನ್ನನ್ನು ಹೊಸ ಆಲೋಚನೆಗೆ ಪ್ರೇರೇಪಿಸಿತು.
ಸಣ್ಣ ವಿಮಾನಗಳ ಕಾರ್ಯಾಚರಣೆ ಕಾರ್ಯಸಾಧ್ಯ ವಲ್ಲದಿರುವುದರಿಂದ ಏರ್ ಡೆಕ್ಕನ್ 48 ಆಸನಗಳ ವಿಮಾನಗಳ ಸೇವೆಯನ್ನು ಬೆಂಗಳೂರು–ಹುಬ್ಬಳ್ಳಿ, ಬೆಳಗಾವಿ ಮತ್ತು ಬಳ್ಳಾರಿಗೆ ಆರಂಭಿಸಿತ್ತು. ಇದನ್ನು ಎಸ್.ಎಂ.ಕೃಷ್ಣ ಅವರೇ ಉದ್ಘಾಟಿಸಿದರು. ಬಳಿಕ ಏರ್ ಡೆಕ್ಕನ್ ದೇಶದ ಇತರ ಸಣ್ಣ ನಗರಗಳಿಗೆ ವಿಮಾನಯಾನ ಸೇವೆ ವಿಸ್ತರಿಸಿತು.
ಏರ್ ಡೆಕ್ಕನ್ ವಿಮಾನ ಸೇವೆ ಆರಂಭವಾದ ಬಳಿಕ ನಾವು ದೊಡ್ಡ ದೊಡ್ಡ ವಿಮಾನಯಾನ ಕಂಪನಿಗಳ ವಿರುದ್ಧ ಹೋರಾಡಬೇಕಾಯಿತು. ಕಡಿಮೆ ವೆಚ್ಚದ ನಮ್ಮ ವಿಮಾನಯಾನ ಮಾದರಿಯು ತ್ವರಿತವಾಗಿ ಬೆಳವಣಿಗೆ ಕಂಡಿದ್ದರಿಂದ ದೊಡ್ಡ ಸಂಸ್ಥೆಗಳು ಬೆದರಿದವು. ಕಡಿಮೆ ವೆಚ್ಚದ ವಿಮಾನಯಾನ ಸುರಕ್ಷಿತವಲ್ಲ ಎಂಬ ನೆಪವನ್ನು ಒಡ್ಡಿ ಏರ್ ಡೆಕ್ಕನ್ ಸಂಸ್ಥೆಯನ್ನು ಮುಚ್ಚಲು ಅವುಗಳು ತಮ್ಮ ರಾಜಕೀಯ ಪ್ರಭಾವವನ್ನು ಬಳಸಿದವು. ಈ ವಿಚಾರವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದ ಸಂಸದರು, ಸುರಕ್ಷತೆಯ ಪರಿಶೀಲನೆ ನಡೆಸಬೇಕು ಮತ್ತು ನಮ್ಮ ಕಾರ್ಯಾಚರಣೆಗಳನ್ನು ಅಮಾನತಿನಲ್ಲಿಡಬೇಕು ಎಂದು ಆಗ್ರಹಿಸಿದರು. ಏರ್ ಡೆಕ್ಕನ್‌ಗಿದ್ದ ಹಲವು ಪರವಾನಗಿಗಳು ಸ್ಥಗಿತಗೊಂಡವು.
ಎಸ್.ಎಂ.ಕೃಷ್ಣ ಅವರನ್ನು ನಾನು ಕೂಡಲೇ ಭೇಟಿಯಾಗಲು ಧಾವಿಸಿದೆ. ‘ಕ್ಯಾಪ್ಟನ್, ನನಗೆ ಒಂದು ದಿನ ಕಾಲಾವಕಾಶ ಕೊಡಿ. ನಾನು ಯೋಚಿಸುವೆ’ ಎಂದರು. ಮರುದಿನ, ‘ನೀವು ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರನ್ನು ಭೇಟಿ ಮಾಡಿ. ಸೇನೆಯ ನಿವೃತ್ತ ಅಧಿಕಾರಿಯಾಗಿರುವ ಮತ್ತು ಉದ್ಯಮಿಯಾಗಿರುವ ನಿಮ್ಮ ಬಗ್ಗೆ ಅವರಿಗೆ ಮೆಚ್ಚುಗೆ ಇದೆ. ಈ ಸಚಿವರು ಅವರಿಗೆ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ನನ್ನ ಬದಲು ಜಾರ್ಜ್ ಅವರೇ ಅವರೊಂದಿಗೆ ಮಾತನಾಡುವುದು ಒಳ್ಳೆಯದು’ ಎಂದು ನನಗೆ ಸಲಹೆ ನೀಡಿದರು.
‘ಜಾರ್ಜ್ ಸಾಬ್’ ಎಂದೇ ಎಲ್ಲರಿಂದಲೂ ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಫರ್ನಾಂಡಿಸ್ ಏರ್ ಡೆಕ್ಕನ್ ಪಾಲಿಗೆ ದೇವರೇ ಕಳುಹಿಸಿದ ವ್ಯಕ್ತಿಯಾದರು. ವಿಮಾನಯಾನ ಕ್ಷೇತ್ರದಲ್ಲಿ ಏರ್ ಡೆಕ್ಕನ್ ಮುಗಿಲೆತ್ತರಕ್ಕೆ ಹಾರಾಡಿತು. ಮಹಾಭಾರತ ಪುರಾಣದಲ್ಲಿ ದ್ರೌಪದಿಯ ರಕ್ಷಣೆಗೆ ಶ್ರೀಕೃಷ್ಣ ಬಂದಂತೆ, ನಮ್ಮಿಂದ ಯಾವ ಪ್ರತಿಫಲಾಪೇಕ್ಷೆಯನ್ನು ಇಟ್ಟುಕೊಳ್ಳದೇ ಈ ಕೃಷ್ಣ, ನನ್ನನ್ನು ಮತ್ತು ಏರ್ ಡೆಕ್ಕನ್ ಸಂಸ್ಥೆಯನ್ನು ರಕ್ಷಿಸಿದರು. ಅದಕ್ಕೂ ಮಿಗಿಲಾಗಿ, ಕೆಟ್ಟ ಮತ್ತು ಅತ್ಯಂತ ಭ್ರಷ್ಟವಾದ ರಾಜಕಾರಣದಲ್ಲಿ ಕೃಷ್ಣ ಅವರು ತಮ್ಮ ಸಭ್ಯ ನಡವಳಿಕೆಯಿಂದ ಅಸಾಧಾರಣ ವ್ಯಕ್ತಿಯಾಗಿ ಬೆಳೆದರು. ಬೆಂಗಳೂರನ್ನು ಮಾಹಿತಿ ತಂತ್ರಜ್ಞಾನ ಮಾತ್ರವಲ್ಲದೇ ಜೈವಿಕ ತಂತ್ರಜ್ಞಾನ ನಗರಿಯನ್ನಾಗಿ ಅಭಿವೃದ್ಧಿಪಡಿಸಿ, ನಯನಮನೋಹರ ಮತ್ತು ವೈಭವೋಪೇತವಾದ ಅಂತರರಾಷ್ಟ್ರೀಯ ನಿಲ್ದಾಣವನ್ನೂ ನೀಡಿ ರಾಜ್ಯ ರಾಜಧಾನಿಯ ಚಹರೆಯನ್ನೇ ಬದಲಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.