ADVERTISEMENT

ಜಾತಿ ಜನಗಣತಿ: ಸಾಮಾಜಿಕ ನ್ಯಾಯಕ್ಕೆ ಹೊಸ ಭಾಷ್ಯ

ಸಮಗ್ರ ಚಿತ್ರಣ ಒದಗಿಸುವ ಬಗೆಯಲ್ಲಿ ನಡೆಸಬೇಕು

ಯೋಗೇಂದ್ರ ಯಾದವ್
Published 18 ಮೇ 2025, 18:29 IST
Last Updated 18 ಮೇ 2025, 18:29 IST
   

ಸಾಮಾಜಿಕ ನ್ಯಾಯ ಕುರಿತ ನೀತಿಗಳು ಹಾಗೂ ಅದರ ಸುತ್ತಲಿನ ರಾಜಕಾರಣದಲ್ಲಿ ಹೊಸದೊಂದು ಮಜಲು ಸೃಷ್ಟಿಯಾಗುವ ಸೂಚನೆಯನ್ನು ಜಾತಿ ಜನಗಣತಿಯ ಘೋಷಣೆಯು ನೀಡಿದೆ. ಸರ್ಕಾರದ ನಾಟಕೀಯ ಘೋಷಣೆಯು ಸೃಷ್ಟಿಸಿದ ಬಿರುಗಾಳಿಯು ತಗ್ಗಿದ ಬಳಿಕ ‘ಜಾತಿ ಚರ್ಚೆ’ಯು ಹೊಸ ಆಯಾಮಗಳತ್ತ ತೆರೆದುಕೊಳ್ಳಲಿದೆ. ಈಗ ಸರ್ವೋಚ್ಚ ನಾಯಕನ ತಾಳ ಬದಲಾಗಿದೆ; ಜಾತಿ ಜನಗಣತಿಯಂತಹ ನೇರಾನೇರ ಚಿಂತನೆಯೊಂದನ್ನು ವಿರೂಪಗೊಳಿಸಿದ ಸುಳ್ಳುಗಳ ಸರಮಾಲೆ, ಅರ್ಧಸತ್ಯಗಳು ಮತ್ತು ನೆಪಗಳೆಲ್ಲವೂ ಮರೆಯಾಗಬೇಕು. ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಅವರ ಗಣತಿ ಮಾಡದೆಯೇ ಕಾನೂನುಬದ್ಧ ರಕ್ಷಣೆ ಕೊಡುವುದಕ್ಕೆ ಸಂಬಂಧಿಸಿ ಮೂರು ದಶಕಗಳಿಂದ ಇರುವ ಅಸಂಗತ ಸ್ಥಿತಿ ಕೊನೆಯಾಗಬೇಕು.

ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನಿರ್ಧಾರಕ್ಕೆ ಕಾರಣಗಳೇನು ಎಂಬ ಚರ್ಚೆ ಬಹುಕಾಲ ಇರುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳು ಕೈಗೊಳ್ಳುವ ಎಲ್ಲ ಮಹತ್ವದ ನಿರ್ಧಾರಗಳೂ ರಾಜಕೀಯ ನಿರ್ಧಾರಗಳೇ ಆಗಿರುತ್ತವೆ. ಜಾತಿ ಜನಗಣತಿ ನಡೆಸಲೇಬೇಕು ಎಂಬ ರಾಹುಲ್‌ ಗಾಂಧಿ ಅವರ ಪ್ರತಿಪಾದನೆಯು ಸವರ್ಣೀಯರಲ್ಲದ ತನ್ನ ದೊಡ್ಡ ಮತಬ್ಯಾಂಕ್‌ಗೆ ಬೆದರಿಕೆಯಾಗಿ ಪರಿಣಮಿಸಬಹುದು ಎಂಬುದು ಬಿಜೆಪಿಗೆ ಅರ್ಥವಾಗಿದೆ. ಜಾತಿ ಜನಗಣತಿ ನಡೆಯದಿರಲು ಕಾಂಗ್ರೆಸ್‌ ಪಕ್ಷವೇ ಕಾರಣ ಎಂದು ಅಶ್ವಿನಿ ವೈಷ್ಣವ್‌ ಮಾಡಿರುವ ಆರೋಪಕ್ಕೆ ಹೆಚ್ಚಿನ ಗಮನ ನೀಡುವ ಅಗತ್ಯವಿಲ್ಲ. ಈ ಆರೋಪವು ಈಗಾಗಲೇ ತಿರುಗುಬಾಣವಾಗಿದೆ. ಜಾತಿ ಜನಗಣತಿಯ ಪ್ರಸ್ತಾವವನ್ನು ಹೂತು ಹಾಕಿದ ‘ಮೂಲ ಪಾಪ’ ಮಾಡಿದ್ದು 2000ದಲ್ಲಿ ಇದ್ದ ವಾಜಪೇಯಿ ನೇತೃತ್ವದ ಸರ್ಕಾರ. 2011ರ ಜನಗಣತಿಯಿಂದ ಜಾತಿ ಜನಗಣತಿಯನ್ನು ಬೇರ್ಪಡಿಸಿದ್ದರ ಹೊಣೆಯು ಆಗಿನ ಕಾಂಗ್ರೆಸ್‌ ನೇತೃತ್ವದ ಸರ್ಕಾರದ್ದು. ಸಾಮಾಜಿಕ–ಆರ್ಥಿಕ ಜಾತಿ ಜನಗಣತಿಯ ದತ್ತಾಂಶವನ್ನು ಮುಚ್ಚಿಟ್ಟದ್ದರ ಹೊಣೆಯು ಬಿಜೆಪಿ ಸರ್ಕಾರದ್ದಾಗಿದೆ.

ಚಾರಿತ್ರಿಕವಾಗಿ ಯೋಚನೆ ಮಾಡುವುದಾದರೆ, ಇದರ ಶ್ರೇಯವು ಸಾಮಾಜಿಕ ನ್ಯಾಯ ಚಳವಳಿಗೆ ಸಲ್ಲಬೇಕು. ವಿಶೇಷವಾಗಿ, ರಾಮಮನೋಹರ ಲೋಹಿಯಾ ಅಥವಾ ಜಾತಿ ಜನಗಣತಿಯ ಪ್ರತಿ‍ಪಾದಕರಾದ ಕರ್ಪೂರಿ ಠಾಕೂರ್‌ ಅಥವಾ ಮಧು ಲಿಮಯೆ ಅಥವಾ ಜಾತಿ ಜನಗಣತಿಯನ್ನು ತಮ್ಮ ಜೀವನದ ಧ್ಯೇಯವಾಗಿಸಿದ ಶರದ್‌ ಪವಾರ್‌ ಅವರಿಗೆ ಶ್ರೇಯ ಸಲ್ಲಬೇಕು. ನೀತಿಗೆ ಸಂಬಂಧಿಸಿ ಈ ಚಿಂತನೆಯು ಎದ್ದು ಕಾಣುವಂತೆ ಮಾಡಿದ್ದರ ಶ್ರೇಯವು ಆರ್‌ಜೆಡಿ–ಜೆಡಿಯು ನೇತೃತ್ವದ ಬಿಹಾರದ ಈ ಹಿಂದಿನ ಸರ್ಕಾರಕ್ಕೆ ಮತ್ತು ತೆಲಂಗಾಣದ ಈಗಿನ ಸರ್ಕಾರಕ್ಕೆ ಸಲ್ಲಬೇಕು. ಅದೇ ರೀತಿಯಲ್ಲಿ ರಾಜಕೀಯವಾಗಿ ನೋಡುವುದಾದರೆ ಇದರ ಶ್ರೇಯವು ರಾಹುಲ್‌ ಗಾಂಧಿ ಅವರಿಗೆ ಸಲ್ಲಬೇಕು. ರಾಹುಲ್‌ ಗಾಂಧಿ ಅವರು ಜಾತಿ ಜನಗಣತಿಯನ್ನು ತಮ್ಮ ವೈಯಕ್ತಿಕ ಕಾರ್ಯಸೂಚಿಯಾಗಿ ಮಾಡಿಕೊಂಡಿದ್ದಲ್ಲದೆ, ಕಾಂಗ್ರೆಸ್‌ ಪಕ್ಷದ ಪ್ರಧಾನ ಬೇಡಿಕೆಯನ್ನಾಗಿಯೂ ಪರಿವರ್ತಿಸದೇ ಇದ್ದಿದ್ದರೆ ಸಾಮಾಜಿಕ ನ್ಯಾಯ ಚಳವಳಿಯ ಇತಿಹಾಸ ಮತ್ತು ರಾಜ್ಯ ಮಟ್ಟದ ಪೂರ್ವನಿದರ್ಶನಗಳಿಂದ ಹೆಚ್ಚಿನ ಫಲ ದೊರೆಯುತ್ತಿರಲಿಲ್ಲ. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿ ಇದು ಅವರಿಗೆ ಸಿಕ್ಕ ಮಹತ್ವದ ಮೊದಲ ಜಯ.

ADVERTISEMENT

ಜಾತಿ ಜನಗಣತಿ ನಡೆಸುವಾಗ ಮೂರು ವಿಚಾರಗಳ ಕುರಿತು ಎಚ್ಚರ ವಹಿಸಬೇಕು. ಮೊದಲನೆಯದಾಗಿ, ಅಧಿಕಾರಿಶಾಹಿಯ ಪಿತೂರಿಯಿಂದ ಎಚ್ಚರವಾಗಿರಬೇಕು ಎಂದು 2011ರ ಎಡವಟ್ಟು ನಮಗೆ ಪಾಠ ಕಲಿಸಿದೆ: ಜಾತಿ ಜನಗಣತಿಯು ಮುಂದಿನ ಜನಗಣತಿಯ ಅವಿಭಾಜ್ಯ ಅಂಗವಾಗಿರಬೇಕೇ ವಿನಾ ಪರ್ಯಾಯ ಚಟುವಟಿಕೆ ಅಲ್ಲ. ಎರಡನೆಯದಾಗಿ, ಜಾತಿ ಜನಗಣತಿಯು ಸಮಗ್ರವಾಗಿ ಎಲ್ಲವನ್ನೂ ಒಳಗೊಂಡಿರಬೇಕೇ ವಿನಾ ಭಾಗಶಃ ಅಲ್ಲ. ‘ಮೀಸಲು ವರ್ಗಗಳು– ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗೆ ಸೀಮಿತವಾಗಿರಬಾರದು. ‘ಸಾಮಾನ್ಯ ವರ್ಗ’ದಲ್ಲಿ ಬರುವ ಎಲ್ಲ ಜಾತಿಗಳ ವಿವರಗಳನ್ನೂ ದಾಖಲಿಸಬೇಕು. ಈ ಮೂಲಕ ಯಾವ ಜಾತಿಯವರು ಎಷ್ಟು ಸೌಲಭ್ಯ ಪಡೆದುಕೊಂಡಿದ್ದಾರೆ ಎಂಬ ಸಂಪೂರ್ಣ ವಿವರ ಲಭ್ಯವಾಗುತ್ತದೆ. ಮೂರನೆಯದಾಗಿ, ರಾಷ್ಟ್ರೀಯ ಜನಸಂಖ್ಯೆ ನೋಂದಣಿಗೆ ಜನಗಣತಿಯನ್ನು ಜೋಡಿಸುವ ಯಾವುದೇ ಪ್ರಯತ್ನ ನಡೆಸಬಾರದು. ಅಂತಹ ಯಾವುದೇ ತಂತ್ರ ಇಡೀ ಪ್ರಕ್ರಿಯೆಯನ್ನು ಹಾದಿ ತಪ್ಪಿಸಬಹುದು.

ಸಂಪನ್ಮೂಲಗಳು ಮತ್ತು ಅವಕಾಶಗಳ ಜಾತಿವಾರು ಸಮಗ್ರ ಚಿತ್ರಣ ಒದಗಿಸುವಂತೆ ಜನಗಣತಿಯನ್ನು ವಿಸ್ತರಿಸಬೇಕು ಎಂಬುದು ಇನ್ನೊಂದು ಗಂಭೀರವಾದ ಬೇಡಿಕೆ. ಈವರೆಗೆ, ಪ್ರತಿ ವ್ಯಕ್ತಿಯ ಕೆಲವು ಮೂಲಭೂತ ಮಾಹಿತಿ, ಕುಟುಂಬದ ಕೆಲವು ಮಾಹಿತಿಯ (ಮನೆಯ ಮಾದರಿ, ಮೂಲಸೌಕರ್ಯಗಳು ಮತ್ತು ಆಸ್ತಿ) ಜೊತೆಗೆ ಭಾಷೆ, ಧರ್ಮ ಮತ್ತು ಜಾತಿ ವರ್ಗದ ದತ್ತಾಂಶವನ್ನು ಸಂಗ್ರಹಿಸಲಾಗುತ್ತಿತ್ತು. ಜಾತಿ ಜನಗಣತಿ ಎಂದರೆ, ಪ್ರತಿ ವ್ಯಕ್ತಿಯ ಜಾತಿಯನ್ನು ನಿಖರವಾಗಿ ದಾಖಲಿಸಬೇಕು (ಎಸ್‌ಸಿ, ಎಸ್‌ಟಿ ಎಂದಷ್ಟೇ ಅಲ್ಲ). ಜನಗಣತಿಯಲ್ಲಿ ಪ್ರತಿ ಜಾತಿಯ ಸಮಾಜೋ–ಆರ್ಥಿಕ ಮತ್ತು ಶೈಕ್ಷಣಿಕ ಚಿತ್ರಣವನ್ನು ಪಡೆಯುವುದಕ್ಕಾಗಿ– ಜಮೀನು ಮಾಲೀಕತ್ವ, ವಾಣಿಜ್ಯ ಸಂಸ್ಥೆಯ ಮಾಲೀಕತ್ವ, ಸರ್ಕಾರಿ ನೌಕರಿ, ವೃತ್ತಿ ಇತ್ಯಾದಿ– ಬೇಕಾದ ದತ್ತಾಂಶಗಳನ್ನು ಸಂಗ್ರಹಿಸಲಾಗುತ್ತಿರಲಿಲ್ಲ. ಅದೃಷ್ಟವಶಾತ್‌, 2011ರಲ್ಲಿ ನಡೆಸಲಾದ ಸಮಾಜೋ–ಆರ್ಥಿಕ ಮತ್ತು ಜಾತಿ ಜನಗಣತಿಯಲ್ಲಿ (ಎಸ್‌ಇಸಿಸಿ) ಈ ಎಲ್ಲ ಮಾಹಿತಿಯನ್ನು ಸಂಗ್ರಹಿಸಲಾಗಿತ್ತು. ಜನಗಣತಿ ಮಾದರಿಯನ್ನು ಈಗ ಪರಿಷ್ಕರಿಸಬೇಕಿದ್ದು, ಎಸ್‌ಇಸಿಸಿಯಲ್ಲಿ ಇರುವ ಈ ಎಲ್ಲ ಪ್ರಶ್ನೆಗಳನ್ನು ಸೇರಿಸಿಕೊಳ್ಳಬೇಕಿದೆ.

ಭಾರಿ ಮೌಲ್ಯದ ಕಂಪನಿಗಳು ಅಥವಾ ಉದ್ಯಮಗಳ ಮಾಲೀಕತ್ವ ಅಥವಾ ನಿರ್ದೇಶಕ ಸ್ಥಾನ, ಉನ್ನತ ಮಟ್ಟದ ಸರ್ಕಾರಿ ಹುದ್ದೆಗಳು, ಖಾಸಗಿ ವಲಯದಲ್ಲಿ ಉನ್ನತ ಹುದ್ದೆಗಳು, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ, ರಾಜಕೀಯ ನಾಯಕತ್ವದ ಸ್ಥಾನಗಳು ಮುಂತಾದ ಮಾಹಿತಿಯನ್ನು ಯಾವ ಸಮೀಕ್ಷೆಯೂ ಒಳಗೊಳ್ಳುವುದಿಲ್ಲ. ಆಸ್ತಿಗಳು, ಸೌಲಭ್ಯಗಳು, ಸಂಪನ್ಮೂಲಗಳು, ಅವಕಾಶಗಳು ಮತ್ತು ಹುದ್ದೆಗಳ ಜಾತಿವಾರು ಪಟ್ಟಿ ತಯಾರಿಸಲು ‍ಪೂರಕ ದತ್ತಾಂಶ ಸಂಗ್ರಹ ಅಗತ್ಯವಿದೆ. ಭಾರತೀಯ ಆರ್ಥಿಕ ಸಮೀಕ್ಷೆ, ಕೃಷಿ ಸಮೀಕ್ಷೆ, ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ, ಕುಟುಂಬದ ಗ್ರಾಹಕ ವೆಚ್ಚ ಸಮೀಕ್ಷೆ, ಎನ್‌ಎಸ್‌ಎಸ್‌ಒ ನಡೆಸುವ ಕಾರ್ಮಿಕ ಬಲ ಸಮೀಕ್ಷೆಯು ಜಾತಿಯನ್ನೂ ಒಳಗೊಳ್ಳಬೇಕು.

ಸಾಮಾಜಿಕ ನ್ಯಾಯಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಒಟ್ಟು ಹಂದರವನ್ನು ಸುಧಾರಿಸುವುದು ಅಂತಿಮ ಹಂತವಾಗಿದೆ. ಜಾತಿ ಜನಗಣತಿ ಎಂಬುದು ರೋಗ ಪತ್ತೆ ಪ್ರಕ್ರಿಯೆ ಮಾತ್ರ. ಜಾತಿ ಜನಗಣತಿ ದತ್ತಾಂಶದ ಆಧಾರದಲ್ಲಿ ರೋಗಕ್ಕೆ ಚಿಕಿತ್ಸೆ ನೀಡದೇ ಇದ್ದರೆ ಅದರಿಂದ ಯಾವ ಉಪಯೋಗವೂ ಇಲ್ಲ.

ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಯೊಳಗೆ ಕೆಲವು ಜಾತಿಗಳಿಗೆ ಒಳಮೀಸಲು ನೀಡಬೇಕೇ ಎಂಬುದಕ್ಕೆ ದತ್ತಾಂಶ ಆಧಾರಿತವಾಗಿ ನಿರ್ಧಾರ ಕೈಗೊಳ್ಳಲು ಜಾತಿ ಜನಗಣತಿಯು ನೆರವಾಗಬೇಕು. ಜಾತಿ ಗುಂಪುಗಳ ಒಳಗೆ ಮತ್ತು ಜಾತಿಗಳ ನಡುವೆ ಸಂಪನ್ಮೂಲ ಮತ್ತು ಅವಕಾಶಗಳ ಹಂಚಿಕೆಯಲ್ಲಿ ಭಾರಿ ವ್ಯತ್ಯಾಸವಿದ್ದರೆ ಅದನ್ನು ಸರಿಪಡಿಸುವ ರೀತಿಯಲ್ಲಿ ಮೀಸಲಾತಿಯನ್ನು ಪರಿಷ್ಕರಿಸಬೇಕು. ಹಾಗಾದರೆ, ಒಬಿಸಿಗೆ ಇರುವ ಶೇ 27ರ ಮೀಸಲಾತಿ ಹೆಚ್ಚಳವಾಗಬೇಕಾಗುತ್ತದೆ. ಏಕೆಂದರೆ, ಈ ಸಮುದಾಯಗಳ ಜನಸಂಖ್ಯೆಯು ಶೇ 45ಕ್ಕಿಂತಲೂ ಹೆಚ್ಚು ಇದೆ. ಅದಕ್ಕಾಗಿ ನ್ಯಾಯಾಂಗವು ಹಾಕಿರುವ ಮೀಸಲಾತಿಯು ಶೇ 50ರಷ್ಟನ್ನು ಮೀರುವಂತಿಲ್ಲ ಎಂಬ ನಿಯಮವನ್ನು ಉಲ್ಲಂಘಿಸಬೇಕಾಗುತ್ತದೆ.

ಖಾಸಗಿ ವಲಯದಲ್ಲಿ ಗಣನೀಯವಾದ ವ್ಯತ್ಯಾಸ ಇದ್ದರೆ ಅಲ್ಲಿನ ಹುದ್ದೆಗಳು, ವಿಶ್ವವಿದ್ಯಾಲಯಗಳು, ಕಾಲೇಜುಗಳಲ್ಲಿ ಮೀಸಲಾತಿ ಬೇಕು ಎಂಬ ಬೇಡಿಕೆ ಬರಬಹುದು. ಈಗ, ಸಾಮಾಜಿಕ ನ್ಯಾಯದ ಪರವಾಗಿ ಇತರ ಎಲ್ಲರಿಗಿಂತ ಹೆಚ್ಚು ಇರುವುದಾಗಿ ಬಿಜೆಪಿ ಹೇಳಿಕೊಳ್ಳುತ್ತಿದೆ. ಅದು ಹೌದಾದರೆ, ಕಾಂಗ್ರೆಸ್‌ ಎತ್ತಿರುವ ಪ್ರಶ್ನೆಗಳಿಗೆ ಬಿಜೆಪಿ ಉತ್ತರಿಸಬೇಕಿದೆ: ಮೀಸಲಾತಿಯ ಶೇ 50ರ ಮಿತಿಯನ್ನು ಮೀರಲು ಸರ್ಕಾರ ಸಿದ್ಧವಿದೆಯೇ? ಖಾಸಗಿ ವಲಯದಲ್ಲಿ ಮೀಸಲಾತಿ ಕಲ್ಪಿಸಲಾಗುವುದೇ?

ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ರಾಜಕಾರಣವು ಎರಡು ದಶಕಗಳಿಂದ ಸ್ಥಗಿತಗೊಂಡಿದೆ. ಸಾಮಾಜಿಕ ನ್ಯಾಯ ಚಳವಳಿಯು ಸ್ಥಗಿತವಾಗಿದೆ, ವಿಭಜನೆಗೊಂಡಿದೆ, ದುರ್ಬಲವಾಗಿದೆ, ರಕ್ಷಣಾತ್ಮಕವಾಗಿದೆ ಮತ್ತು ಆಂತರಿಕ ಸವಾಲುಗಳ ನಿರಾಕರಣೆಯಲ್ಲಿ ತೊಡಗಿದೆ. ಜಾತಿ ಜನಗಣತಿ ನಡೆಸಲಾಗುವುದು ಎಂಬ ಘೋಷಣೆಯು ಸಾಮಾಜಿಕ ನ್ಯಾಯಕ್ಕಾಗಿ ಕೈಗೊಳ್ಳುವ ಕ್ರಮಗಳನ್ನು ಸರ್ಕಾರಿ ವಲಯದ ಆಚೆಗೂ ವಿಸ್ತರಿಸಲು, ಈ ಕ್ರಮಗಳನ್ನು ಮೀಸಲಾತಿಯ ಆಚೆಗೂ ವಿಸ್ತರಿಸಲು ಇರುವ ಅವಕಾಶ. ಜಾತಿಯ ಏಕ ಆಯಾಮವನ್ನು ಮೀರಿ ಮಾನದಂಡವನ್ನು ಪರಿಷ್ಕರಿಸಲು ಇರುವ ಅವಕಾಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.