ADVERTISEMENT

ಬಾನು ಮುಷ್ತಾಕ್ ಬರಹ: ಹಿಂದೆ ಸರಿದ ಮುಸ್ಲಿಂ ಹುಡುಗಿಯರ ಶಿಕ್ಷಣ

ಬಾನು ಮುಷ್ತಾಕ್
Published 26 ಫೆಬ್ರುವರಿ 2022, 19:30 IST
Last Updated 26 ಫೆಬ್ರುವರಿ 2022, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಇಡೀ ನಾಡು ತ್ರಸ್ತಗೊಂಡಿದೆ; ಅಸ್ತವ್ಯಸ್ತಗೊಂಡಿದೆ. ಒಂದೆಡೆ ಕ್ರೌರ್ಯದ ಹೇಷಾರವ ಹೆಚ್ಚಾಗಿದ್ದರೆ, ಮತ್ತೊಂದೆಡೆ ಸಂವೇದನಾಶೀಲ ಮನಸುಗಳು ದಿಗ್ಮೂಢವಾಗಿ ಕುಳಿತಿವೆ. ಕೋಮುದ್ವೇಷದ ವಿಷ ದಿನದಿಂದ ದಿನಕ್ಕೆ ‘ವಿಷಮ’ಶೀತ ಜ್ವರದ ಹಾಗೆ ಏರುತ್ತಲೇ ಇದೆ. ವಿಪರ್ಯಾಸವೆಂದರೆ ಕಣ್ಣು–ಹೃದಯಗಳಿಲ್ಲದ ಈ ಹರಿತ ಕತ್ತಿಯ ಬೀಸಿನ ಅಳವಿನಲ್ಲಿರುವವರೆಲ್ಲ ಎಳೆಯ ಕುಡಿಗಳು, ಮುಗ್ಧ ಮನಸ್ಸುಗಳು. ‌ಕಾಲೇಜಿನ ಅಂಗಳದಲ್ಲಿ ಸೃಷ್ಟಿಯಾದ ‘ಹಿಜಾಬ್‌ ವಿವಾದ’ ಈಗ ಕೋರ್ಟಿನ ಅಂಗಳದಲ್ಲಿದೆ. ಶಿವಮೊಗ್ಗದ ಬಜರಂಗದಳದ ಕಾರ್ಯಕರ್ತನ ಕೊಲೆ, ಅದರ ನಂತರ ನಡೆದ ದೊಂಬಿಗಳು ಕೋಮುದ್ವೇಷದ ಅಟ್ಟಹಾಸದ ಕ್ರೂರ ಕೋರೆ–ದಾಡೆಗಳನ್ನು ಕಾಣಿಸಿವೆ. ದೇಶಭಕ್ತಿ, ಧರ್ಮ, ಜಾತಿ ಎಲ್ಲವೂ ಪುರಾವೆಗಳನ್ನು ಬೇಡುತ್ತಿರುವ ಈ ಕಾಲದಲ್ಲಿ, ಮನುಷ್ಯನೆನಿಸಿಕೊಳ್ಳಲು ಅತ್ಯಗತ್ಯವಾದ ಆತ್ಮಸಾಕ್ಷಿಯೇ ಕಾಣೆಯಾಗುತ್ತಿದೆಯೇ? ಮುಗ್ಧ ಯುವಜನರದ ಬಿಸಿರಕ್ತದ ಕಾವಿನಲ್ಲಿ ಚಳಿ ಕಾಯಿಸಿಕೊಳ್ಳುತ್ತಿರುವರಿಗೆ ಈ ನೆಲದ, ಸಾಕ್ಷಿಪ್ರಜ್ಞೆಯ ಅಂತಃಕರಣದ ಧ್ವನಿ ಕೇಳಿಸುವ ಪ್ರಯತ್ನವೊಂದು ಇಲ್ಲಿದೆ...

***

ವರ್ತಮಾನದ ತಲ್ಲಣಗಳಿಗೆ ಮುಖಾಮುಖಿ ಆಗಬೇಕಾದ ಈ ಸಂದರ್ಭ ಎಲ್ಲಾ ಸೂಕ್ಷ್ಮತೆ ಮತ್ತು ಸಂವೇದನೆಗಳನ್ನೂ ಕಳೆದುಕೊಂಡಿದೆ. ಮಾತು ಮತ್ತು ವಿವಾದಗಳು, ಸಂಚು ಮತ್ತು ಒಳಸಂಚುಗಳು ಜನರ ನೆಮ್ಮದಿಯನ್ನು ಅತ್ಯಂತ ವ್ಯವಸ್ಥಿತವಾಗಿ ಕಸಿದುಕೊಳ್ಳುತ್ತಿವೆ. ಶಾಂತಿ ಮತ್ತು ಪ್ರೀತಿ-ವಿಶ್ವಾಸದ ಸಂದೇಶವನ್ನು ನೀಡುತ್ತಿರುವವರು ಇಂದು ಗೋಡೆಗೆ ಒತ್ತಲ್ಪಡುತ್ತಿದ್ದಾರೆ. ಆದರೂ ಇಂದಿನ ಪರಿಸ್ಥಿತಿಯಲ್ಲಿ ಮಾತನಾಡಲೇಬೇಕಿದೆ; ಅದೂ ಸಂಯಮದ, ಮನುಷ್ಯ ಪ್ರೀತಿಯ ಹಾಗೂ ಜೀವಪರವಾದ ಮನಸುಗಳು ಗಟ್ಟಿಧ್ವನಿಯಲ್ಲಿ ಮಾತನಾಡಲೇಬೇಕಾದ ತುರ್ತು ಸಂದರ್ಭ ಇದಾಗಿದೆ.

ADVERTISEMENT

ಹಿಜಾಬ್ ಮತ್ತು ಕೇಸರಿ ಶಾಲುಗಳ ಕ್ರಿಯೆ ಮತ್ತು ಪ್ರತಿಕ್ರಿಯೆಯ ಒಳಸುಳಿಗಳು ಮತ ಬೇಟೆಯ ರಾಜಕೀಯ ಒಳಸುಳಿಗಳು ಎಂಬುದು ಎಲ್ಲರಿಗೂ ಗೊತ್ತಿರುವ ನಿತ್ಯ ಸತ್ಯವೇ ಆಗಿದೆ. ಜೇನುಗೂಡಿಗೆ ಕಲ್ಲೆಸೆದು, ಜನತೆಯ ಜೀವವನ್ನು ಪಣಕ್ಕಿಟ್ಟು, ದುರ್ಲಾಭ ಪಡೆದುಕೊಂಡು ಅಧಿಕಾರದ ಗದ್ದುಗೆಯನ್ನು ಗಟ್ಟಿಮಾಡಿಕೊಳ್ಳುವ ಹುನ್ನಾರಗಳ ಬಗ್ಗೆ ಕೂಡ ಜನರಿಗೆ ತಿಳಿದಿದೆ. ಹೀಗಿದ್ದೂ ತಮ್ಮ ತಮ್ಮ ಆಂತರ್ಯಕ್ಕೆ ಅನುಗುಣವಾಗಿ ಜನರು ತಮಗೆ ಬೇಕಾದ ಸತ್ಯವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ; ಕಣ್ಣಿದ್ದರೂ ಕುರುಡರಂತೆ ವ್ಯವಹರಿಸುತ್ತಿದ್ದಾರೆ.

ಯುವಚೇತನಗಳು, ದ್ವೇಷ, ಅಸೂಯೆಯನ್ನು ಬಿತ್ತುತ್ತ ಮನುಷ್ಯ ಹಾಗೂ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಕೆಲವೇ ಮಂದಿ ಖಳನಾಯಕರ ಆಟಿಕೆಗಳಾಗುತ್ತಿರುವುದು ದುರಂತ. ಸಂಘರ್ಷದ ಪ್ರಕ್ರಿಯೆ ಚಾಲನೆಯಲ್ಲಿ ಇದ್ದಾಗ ಮಾತ್ರ ಬೆಂದ ಮನೆಯಲ್ಲಿ ಗಳ ಸೆಳೆಯುವಂತಹ ಜನರಿಗೆ ಅಸ್ತಿತ್ವ ದೊರಕುವುದು. ಹಿಜಾಬ್, ಬುರ್ಖಾ, ನಿಖಾಬ್ ಹಾಗೂ ಅಬಾಯ ಎಂಬ ವಸ್ತ್ರ ಸಂಹಿತೆ ಮುಸ್ಲಿಂ ಹೆಣ್ಣುಮಕ್ಕಳ ಅಸ್ಮಿತೆಯ ಕುರುಹು ಎಂದು ಹೇಳಲಾಗುತ್ತಿದೆ. ತಲೆಯ ಮೇಲೆ ಸೆರಗು ಅಥವಾ ಚಾದರ್ ಅಥವಾ ಶಾಲನ್ನು ಹಲವು ದಶಕಗಳ ಹಿಂದೆ ಧರಿಸುತ್ತಿದ್ದ ಮಹಿಳೆಯರು ತರಹೇವಾರಿ ಡಿಸೈನರ್ ಬುರ್ಖಾ ಮತ್ತು ನಿಖಾಬ್ ಹಾಗೂ ಹಿಜಾಬ್‌ಗಳನ್ನು ಧರಿಸಲು ಆರಂಭಿಸಿದ್ದು ಭಾರತದ ಮುಸ್ಲಿಂ ಪುರುಷರು ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಉದ್ಯೋಗವನ್ನು ಅರಸಿಹೋದಾಗ. ಅಲ್ಲಿಂದ ಮರಳಿ ಬರುವಾಗ ಅವರುಗಳು ತಪ್ಪದೇ ಒಂದಿಷ್ಟು ಚಿನ್ನ ಮತ್ತು ಡಿಸೈನರ್ ಬುರ್ಖಾಗಳೊಂದಿಗೆ ತಮ್ಮ ಮನೆ ಸೇರಿದರು.

ಧರ್ಮದ ಆದೇಶ ಏನಿತ್ತು, ಈಗ ಏನಾಗಿದೆ ಎಂಬುದರ ಚರ್ಚೆ ವಿಸ್ತೃತವಾಗಿದೆ. ಆದರೆ ಈ ರೀತಿಯ ಅರಬ್ ಸಂಸ್ಕೃತಿಯಿಂದ ನೇರಾನೇರ ಪ್ರಭಾವಿತವಾದ ಮತ್ತು ವ್ಯಾಪಾರೀಕರಣಕ್ಕೆ ಒಳಗಾದ ಈ ವಸ್ತ್ರ ಸಂಹಿತೆಯು ವಿಭಿನ್ನ ಕಾರಣಗಳಿಗಾಗಿ ಚರ್ಚೆಯನ್ನು ಹುಟ್ಟುಹಾಕಿದೆ. ಅರಬನೈಜೇಷನ್ ಮತ್ತು ಕಮರ್ಶಿಯಲೈಸೇಷನ್‍ಗೆ ಒಳಪಟ್ಟ ಈ ವಸ್ತ್ರಸಂಹಿತೆಯ ಹಲವು ಲಕ್ಷ ಕೋಟಿ ರೂಪಾಯಿಯ ವಾರ್ಷಿಕ ವಹಿವಾಟು ಆಶ್ಚರ್ಯಜನಕ ಅಂಕಿ-ಅಂಶಗಳನ್ನು ನಮ್ಮೆದುರಿಗೆ ತೆರೆದಿಡುತ್ತದೆ.

ಬಹು ಸಂಸ್ಕೃತಿಯ ಸಮಾಜದಲ್ಲಿ ಹಿಜಾಬ್ ಎಂಬುದು ತಲೆಯ ಸುತ್ತಲಿನ ವಸ್ತ್ರ ಮಾತ್ರ ಆಗಿಲ್ಲ; ಬದಲಿಗೆ ಇಡೀ ದೇಹವನ್ನು ಮುಚ್ಚುವಂತಹ ವಸ್ತ್ರವಾಗಿದೆ. ಅದರ ಮೇಲೆ ಇನ್ನೂ ಹೆಚ್ಚಿನ ಪಾವಿತ್ರ್ಯವನ್ನು ಕಾಪಾಡಿಕೊಳ್ಳಲು ಬಯಸುವ ಹೆಣ್ಣುಮಕ್ಕಳು ಕೈಗಳಿಗೆ ಗ್ಲೌಸ್ ಮತ್ತು ಕಾಲಿಗೆ ಸಾಕ್ಸ್ ಅನ್ನೂ ಧರಿಸುವ ಪರಿಪಾಟವನ್ನು ಇಟ್ಟುಕೊಂಡಿದ್ದಾರೆ. ಆದರೆ, ಮಾಧ್ಯಮಗಳಿಗೆ ಹೆಚ್ಚು ಪ್ರತಿಕ್ರಿಯೆಗಳನ್ನು ನೀಡುತ್ತಿರುವ ದುಬೈನ ರಾಜಕುಮಾರಿಯಾದ ಹೆಂದ್ ಅಲ್ ಖಾಸಿಮಿ ತನ್ನ ತಲೆಯ ಅರ್ಧ ಕೂದಲನ್ನು ಒಪ್ಪವಾಗಿ ತೋರುತ್ತಿದ್ದು ಇನ್ನರ್ಧ ತಲೆಗೆ ತೆಳುವಾದ ದುಪಟ್ಟವನ್ನು ಧರಿಸಿರುತ್ತಾಳೆ. ಆಕೆಯ ಇದೇ ದಿರಿಸಿನ ಫೋಟೊಗಳು ಎಲ್ಲೆಡೆ ಲಭ್ಯ.

ಪ್ರಚಲಿತ ಹಿಜಾಬ್ ವಿವಾದವು ಅಧಿಕಾರ ರಾಜಕಾರಣದ ಪ್ರಹಸನದ ಪ್ರತಿಫಲವಾಗಿದೆ. ಮುಂದಿನ ಚುನಾವಣೆಯಲ್ಲಿ ಜಾತಿವಾರು ಮತಗಳನ್ನು ವಿಭಜಿಸಿ ತಮ್ಮ ಅನುಕೂಲಕ್ಕೆ ತಕ್ಕಂತೆ ವೋಟು ಪಡೆಯುವ ತಂತ್ರಗಾರಿಕೆ ಕೂಡ ಇದರ ಹಿಂದಿದೆ.

ಹಿಜಾಬ್, ಮುಸ್ಲಿಂ ಮಹಿಳೆಯ ಅಸ್ಮಿತೆ ಎಂದಾಗ ಅದನ್ನು ಗೌರವಿಸುವುದು, ಸಹಿಷ್ಣುತೆಯ ಭಾವದಿಂದ ಕಾಣುವುದು ಇದುವರೆಗೆ ನಡೆದು ಬಂದಿದ್ದ ಪದ್ಧತಿಯಾಗಿತ್ತು. ಆದರೆ, ಉಡುಪಿಯ ಮಹಿಳಾ ಕಾಲೇಜಿನಲ್ಲಿ ಅಧ್ಯಾಪಕಿಯರೇ ಪಾಠಪ್ರವಚನ ನಡೆಸುತ್ತಿದ್ದು, ಕೇವಲ ಮೂವರು ಅಧ್ಯಾಪಕರು ಇರುವಂತಹ ಪರಿಸ್ಥಿತಿಯಲ್ಲಿ ತಾವು ತರಗತಿಯಲ್ಲೂ ಹಿಜಾಬ್ ಧರಿಸುವುದಾಗಿ ಕೆಲವು ಮಂದಿ ವಿದ್ಯಾರ್ಥಿನಿಯರು ತಮ್ಮ ಬೇಡಿಕೆಯನ್ನು ಮುಂದಿಟ್ಟಿರುವುದು ತಮ್ಮ ಧಾರ್ಮಿಕ ಒಲವಿನಿಂದ ಮಾತ್ರವಲ್ಲ, ಬದಲಿಗೆ ರಾಜಕೀಯ ಪಕ್ಷವೊಂದರ ದಾಳವಾಗಿ ಎಂಬುದು ಚರ್ಚೆಯಾಗುತ್ತಿದೆ. ಈ ಸಂದರ್ಭದಲ್ಲಿ ಕಾಲೇಜಿನ ಕ್ಯಾಂಪಸ್‍ ಒಳಗಡೆ ತೀರ್ಮಾನ ಆಗಬಹುದಾಗಿದ್ದ ವಿಷಯವು ವಿಶ್ವವ್ಯಾಪಿ ಪ್ರಚಾರವನ್ನು ಪಡೆದಿರುವುದು ದುರಂತದ ವಿಷಯವಾಗಿದೆ.

ಸದರಿ ಅವಕಾಶವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ಜಾತಿವಾರು ಮತ ವಿಭಜನೆಯ ಮುಂದಿನ ಭಾಗವಾಗಿ ಕೇಸರಿ ಶಾಲುಗಳು ವಿಜೃಂಭಿಸಿದ್ದನ್ನು ಇಡೀ ಸಮಾಜವೇ ಗಮನಿಸಿದೆ. ಕ್ರಿಯೆ-ಪ್ರತಿಕ್ರಿಯೆ ಎಂಬ ಸಿದ್ಧಾಂತದ ಅಡಿಯಲ್ಲಿ ಮೂಡಿಬಂದ ಸಕ್ರಿಯ ರಾಜಕಾರಣದಲ್ಲಿ ಪಾಲುಗೊಳ್ಳದೆ ಇದ್ದ ಕರ್ನಾಟಕದ ಅನೇಕ ಜನಸಾಮಾನ್ಯರು ಕೂಡ ಭಾವುಕವಾಗಿ ಮೇಲ್ಕಂಡ ವಿವಾದದಲ್ಲಿ ಪಾಲುಗೊಂಡರು ಮತ್ತು ಸರಿ-ತಪ್ಪುಗಳ ತೀರ್ಮಾನಗಳನ್ನು ನೀಡತೊಡಗಿದರು. ಇಂತಹ ಸಾಮಾಜಿಕ ಗೋಜಲಿನಿಂದ ಪರಿಸ್ಥಿತಿ ತೀರಾ ಹದಗೆಡುವುದಕ್ಕೆ ಮುನ್ನ ಸಂಬಂಧಪಟ್ಟವರು ಕೋರ್ಟ್‌ ಸಮ್ಮುಖದಲ್ಲಿ ತಮ್ಮ ಅಳಲನ್ನು ತೋಡಿಕೊಂಡರು. ಹೀಗಾಗಿ ಮುಂದಿನ ಎಲ್ಲಾ ನಿರೀಕ್ಷೆಗಳು ಕೋರ್ಟ್‌ ಅಂಗಳದಲ್ಲಿವೆ.

ಈ ಎಲ್ಲಾ ಬೆಳವಣಿಗೆಗಳಿಂದ ತೀವ್ರವಾಗಿ ಹಿನ್ನಡೆಯನ್ನು ಅನುಭವಿಸಿದ್ದು ಮುಸ್ಲಿಂ ವಿದ್ಯಾರ್ಥಿನಿಯರು. ಮಾಧ್ಯಮದೆದುರು ಪ್ರಬುದ್ಧವಾಗಿ ಹೇಳಿಕೆಗಳನ್ನು ನೀಡುತ್ತಿರುವ ವಿದ್ಯಾರ್ಥಿನಿಯರ ಭವಿಷ್ಯ ಮಾತ್ರ ಅನಿಶ್ಚಿತತೆಯಿಂದ ಕೂಡಿದೆ. ಹಿಜಾಬ್ ಪರ ತೀರ್ಪು ಬಂದರೆ ಮುಂದಿನ ನಡೆಯೇನು ಮತ್ತು ಹಿಜಾಬ್‍ಗೆ ಪ್ರತಿಕೂಲವಾಗುವ ತೀರ್ಪು ಬಂದಲ್ಲಿ ಮುಂದಿನ ನಡವಳಿಕೆ ಏನು ಎಂದು ಯಾವ ಮುತ್ಸದ್ಧಿಗಳು ಕೂಡ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿಲ್ಲ. ಅನೇಕ ವಿದ್ಯಾರ್ಥಿನಿಯರು ತರಗತಿಗಳಿಂದ ಹೊರ ನಡೆಯುತ್ತಿದ್ದಾರೆ. ಶಾಂತಿ ಮತ್ತು ನೆಮ್ಮದಿಯ ಸಹಬಾಳ್ವೆಯ ಬಗ್ಗೆ ಪ್ರತಿಪಾದಿಸುತ್ತಿರುವವರು ಹಾಗೂ ಮುಸ್ಲಿಂ ಹೆಣ್ಣುಮಕ್ಕಳು ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಬೇಕೆಂಬ ಸಲಹೆಯನ್ನು ನೀಡುತ್ತಿರುವವರು ಒಂದು ವರ್ಗದ ಕೆಲವು ಜನರಿಂದ ನಿಂದನೆಗಳನ್ನು ಅನುಭವಿಸುತ್ತಿದ್ದಾರೆ.

ಭಾರತದಲ್ಲಿ ಇಸ್ಲಾಂ ಧಾರ್ಮಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಕಾಲಾನುಕ್ರಮವಾಗಿ ಬದಲಾವಣೆಯನ್ನು ಹೊಂದುತ್ತಾ ಬಂದಿದೆ. ಈಗ ಇರುವಂತಹ ಹಿಜಾಬ್, ಬುರ್ಖಾ, ನಿಖಾಬ್ ಮತ್ತು ಅಬಾಯ ಹಿಂದೆ ಇರಲಿಲ್ಲ ಎಂಬುದು ನಿರ್ವಿವಾದದ ವಿಷಯ. ಆದರೆ ಹಿಂದೆ ಕೂಡ ಬಹುತೇಕ ಭಾರತೀಯ ಮಹಿಳೆಯರು ತಲೆಯ ಮೇಲೆ ಸೆರಗು ಹೊದೆಯುವ ಪದ್ಧತಿಯನ್ನು ಅನುಸರಿಸುತ್ತಿದ್ದರು ಎಂಬುದು ಕೂಡ ಅಷ್ಟೇ ಸ್ಪಷ್ಟವಾದ ಸಂಗತಿ. ಇದನ್ನು ವಿವಾದವನ್ನಾಗಿಸಿದ ಕಾಣದ ಕೈಗಳ ಕೈವಾಡವು ಇಲ್ಲಿಗೇ ನಿಲ್ಲುವುದಿಲ್ಲ. ಬದಲಿಗೆ ಮುಸ್ಲಿಂ ವಿದ್ಯಾರ್ಥಿನಿಯರ ವಿದ್ಯಾಭ್ಯಾಸದ ಹಕ್ಕುಹಿನ್ನೆಲೆಗೆ ಸರಿಯುತ್ತಿದೆ.

ಹೆಣ್ಣುಮಕ್ಕಳು ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುವರೋ ಅಥವಾ ಇಲ್ಲವೋ ಎಂಬುದು ನಮ್ಮ ಸಮಾಜದ ಮುಂದೆ ಇರುವ ಬಹುದೊಡ್ಡ ಪ್ರಶ್ನೆಯಾಗಿದೆ. ಇಂದಿಗೂ ಜಾತಿ-ಧರ್ಮಗಳ ಕೃತಕ ತಡೆಗೋಡೆಗಳನ್ನು ಮೀರಿ ನಮ್ಮ ಸಮಾಜವು ಶಾಂತಿ, ಪ್ರೀತಿ ಮತ್ತು ನೆಮ್ಮದಿಯಿಂದ ಜೊತೆ ಜೊತೆಯಲಿ ನಡೆಯುತ್ತಾ ಅಭಿವೃದ್ಧಿ ರಾಜಕಾರಣದತ್ತ ಗಮನ ಕೊಡಬೇಕಾಗಿದೆ. ಮತ್ತು ಆ ಮೂಲಕ ಆರೋಗ್ಯಪೂರ್ಣ ನಾಗರಿಕ ಸಮಾಜದ ಪರಿಕಲ್ಪನೆಯನ್ನು ಸಾಕಾರಗೊಳಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.