ADVERTISEMENT

ಐಎನ್‌ಎ ಮತ್ತು ಅಂಡಮಾನ್ ದ್ವೀಪಗಳು

ಭಾರತೀಯರಲ್ಲಿ ಇರುವ ಕೆಟ್ಟ ಸ್ಮೃತಿಯನ್ನು ಅಳಿಸಲು ಮುಂದಾಗಿದ್ದರು ನೇತಾಜಿ

ಚೂಡಿ ಶಿವರಾಂ
Published 30 ಡಿಸೆಂಬರ್ 2018, 19:59 IST
Last Updated 30 ಡಿಸೆಂಬರ್ 2018, 19:59 IST
ಚೂಡಿ ಶಿವರಾಂ
ಚೂಡಿ ಶಿವರಾಂ   

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಭಾರತದ ಇತಿಹಾಸದ ಜೊತೆ ಸಂಕೀರ್ಣವಾಗಿ ಹೆಣೆದುಕೊಂಡಿವೆ. ಬಲಾಢ್ಯ ಚೋಳ ಸಾಮ್ರಾಜ್ಯದವರು ದೂರದ ಇಂಡೊನೇಷ್ಯಾವರೆಗೂ ಸೈನಿಕ ಕಾರ್ಯಾಚರಣೆ ನಡೆಸಲು ಈ ದ್ವೀಪಗಳನ್ನು ಆಯಕಟ್ಟಿನ ಸ್ಥಳವನ್ನಾಗಿ ಬಳಸಿಕೊಂಡರು. ಇಂತಹ ಹೆಮ್ಮೆಯ ಇತಿಹಾಸ ಇದ್ದರೂ, ಬ್ರಿಟಿಷರ ವಿಕೃತಿಯನ್ನು, ಕಾಲಾಪಾನಿಯಂತಹ ಶಿಕ್ಷೆಯನ್ನು ನೆನಪಿಸುವ ಚುಕ್ಕಿಗಳಾಗಿ ಇಂದು ದೇಶದ ಸಾಮೂಹಿಕ ಪ್ರಜ್ಞೆಯಲ್ಲಿಈ ದ್ವೀಪಗಳು ಜಾಗ ಪಡೆದಿವೆ.

75 ವರ್ಷಗಳ ಹಿಂದೆ ‘ಬಂಧಮುಕ್ತ ಭಾರತ’ದ ನೆಲದ ಮೇಲೆ ತ್ರಿವರ್ಣ ಧ್ವಜ ಮೊದಲು ಹಾರಿದ್ದು ಕೂಡ ಇಲ್ಲೇ. ಧ್ವಜಾರೋಹಣ ಮಾಡಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಈ ದ್ವೀಪಗಳಿಗೆ ಶಹೀದ್ ಮತ್ತು ಸ್ವರಾಜ್ ಎಂದು ಮರುನಾಮಕರಣ ಮಾಡಿದ್ದರು.

ಬ್ರಿಟಿಷರ ಅವಧಿಯಲ್ಲಿ: ಅಂಡಮಾನ್ ದ್ವೀಪಗಳು ಆಯಕಟ್ಟಿನ ದೃಷ್ಟಿಯಿಂದ ಹೊಂದಿರುವ ಮಹತ್ವ ಅರಿತ ಕಾರ್ನವಾಲೀಸ್, 200 ಭಾರತೀಯರನ್ನು ಬಲವಂತವಾಗಿ ಇಲ್ಲಿಗೆ ಕರೆದೊಯ್ದ. ಇದಾದ ಕೆಲವೇ ವರ್ಷಗಳ ನಂತರ, ರೋಗರುಜಿನಗಳ ಪರಿಣಾಮವಾಗಿ ಅಲ್ಲಿಂದ ಜನ ವಾಪಸ್ ಬರಬೇಕಾಯಿತು.

ADVERTISEMENT

1857ರ ನಂತರ ಬ್ರಿಟಿಷರು ದ್ವೀಪವನ್ನು ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಅತ್ಯಂತ ಕೆಟ್ಟ ರೀತಿಯ ಶಿಕ್ಷೆಗಳನ್ನು ನೀಡಲು ಆಯ್ಕೆ ಮಾಡಿಕೊಂಡರು. ಸ್ವಾತಂತ್ರ್ಯ ಹೋರಾಟಗಾರರನ್ನು ಏಕಾಂತದ ಸೆರೆವಾಸದಲ್ಲಿ, ಅತ್ಯಂತ ಕ್ರೂರ ಸ್ಥಿತಿಯಲ್ಲಿ ಇರಿಸಿದರು. ಶಿಕ್ಷೆಗೆ ಗುರಿಯಾದ ಹಲವರು ತಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಳೆದುಕೊಂಡರು.

ಸಿಂಗಪುರದಲ್ಲಿ ಜಪಾನಿಯರ ಕೈಯಲ್ಲಿ ಅವಮಾನಕಾರಿ ಸೋಲು ಅನುಭವಿಸಿದ ನಂತರ ಬ್ರಿಟಿಷರು 1942ರ ಫೆಬ್ರುವರಿ ವೇಳೆಗೆ ಇಲ್ಲಿಂದ ಹೊರಹೋಗಿದ್ದರು. 1942ರ ಮಾರ್ಚ್‌ 23ರಂದು ಜಪಾನ್‌, ಪೋರ್ಟ್‌ ಬ್ಲೇರ್‌ ವಶಪಡಿಸಿಕೊಂಡಿತು. ಜಪಾನ್ ದಾಳಿಯನ್ನು ಎದುರಿಸಲಾಗದೆ ಬ್ರಿಟಿಷರು ಹಿಂದಕ್ಕೆ ಓಡಿದರು.

1943ರ ಅಕ್ಟೋಬರ್‌ 21ರಂದು ಆಜಾದ್‌ ಹಿಂದ್‌ನತಾತ್ಕಾಲಿಕ ಸರ್ಕಾರವನ್ನು ಉದ್ಘಾಟಿಸಿದ ನೇತಾಜಿ ಸುಭಾಷ್ ಚಂದ್ರ ಬೋಸ್, ಮಂತ್ರಿ ಪರಿಷತ್ತಿಗೆ ಸದಸ್ಯರನ್ನು ನೇಮಿಸಿದರು. ತಾತ್ಕಾಲಿಕ ಸರ್ಕಾರವು ಮಾರನೆಯ ದಿನವೇ ಅಮೆರಿಕ ಮತ್ತು ಬ್ರಿಟನ್‌ ಮೇಲೆ ಯುದ್ಧ ಘೋಷಿಸಿತು. ಹನ್ನೊಂದು ರಾಷ್ಟ್ರಗಳು ಈ ‘ತಾತ್ಕಾಲಿಕ ಸರ್ಕಾರ’ಕ್ಕೆ ತಕ್ಷಣ ಮಾನ್ಯತೆ ನೀಡಿದವು. 1943ರ ನವೆಂಬರ್ 5ರಂದು
ಬೋಸ್ ಅವರು ಜಪಾನಿನ ರಾಷ್ಟ್ರೀಯ ಸಂಸತ್ತಿನಲ್ಲಿ ಸಮಾವೇಶವೊಂದನ್ನು ಉದ್ದೇಶಿಸಿ ಮಾತನಾಡಿದರು.

ಅವರ ಭಾಷಣ ತಕ್ಷಣ ಯಶಸ್ಸು ಸಾಧಿಸಿತು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ತಾತ್ಕಾಲಿಕ ಸರ್ಕಾರಕ್ಕೆ ಹಸ್ತಾಂತರ ಮಾಡಲಿದೆ ಎಂದು ಜಪಾನಿನ ‍ಪ್ರಧಾನಿ ಹಿದೆಕಿ ತೋಜೊ ಪ್ರಕಟಿಸಿದರು. 1943ರ ನವೆಂಬರ್ 26ರಂದು ಸಿಂಗಪುರದಲ್ಲಿ ಬೋಸ್ ಅವರು, ಅಂಡಮಾನ್ ದ್ವೀಪಕ್ಕೆ ಶಹೀದ್ ಎಂದು, ನಿಕೋಬಾರ್ ದ್ವೀಪಕ್ಕೆ ಸ್ವರಾಜ್ ಎಂದು ಮರುನಾಮಕರಣ ಮಾಡಲಾ
ಗಿದೆ ಎಂದು ಪತ್ರಕರ್ತರ ಎದುರು ಘೋಷಿಸಿದರು.

ಈ ದ್ವೀಪಗಳಿಗೆ ಹೊಸ ಹೆಸರು ಇರಿಸಿದ ಬೋಸ್ ಅವರ ಕ್ರಮ ಸ್ವಾತಂತ್ರ್ಯಕ್ಕಾಗಿನ ಸಿಂಹ ಗರ್ಜನೆಯಾಗಿತ್ತು. ಬ್ರಿಟಿಷರ ಕ್ರೌರ್ಯಕ್ಕೆ ಬಲಿಯಾದ ಕ್ರಾಂತಿಕಾರಿಗಳ ತ್ಯಾಗಕ್ಕೆ ಸೂಕ್ತವಾದ ಗೌರವ ಅದಾಗಿತ್ತು. ಆ ಕ್ರೌರ್ಯವನ್ನು ಬೋಸ್ ಅವರೂ ಕಂಡಿದ್ದರು. ದ್ವೀಪಗಳಿಗೆ ಹೊಸ ಹೆಸರು ನೀಡುವ ಮೂಲಕ ಬೋಸ್ ಅವರು ಈ ದ್ವೀಪಗಳ ಬಗ್ಗೆ ಭಾರತೀಯರ ಸಾಮೂಹಿಕ ಪ್ರಜ್ಞೆಯಲ್ಲಿ ಇರುವ ಕೆಟ್ಟ ಸ್ಮೃತಿಯನ್ನು ಅಳಿಸಲು ಮುಂದಾದರು.

ಈ ದ್ವೀಪಗಳು ಕೈಗೆ ಸಿಕ್ಕ ನಂತರ ತಾತ್ಕಾಲಿಕ ಸರ್ಕಾರವನ್ನು ‘ದೇಶಭ್ರಷ್ಟ ಸರ್ಕಾರ’ ಎನ್ನುವಂತಿರಲಿಲ್ಲ. ಆಡಳಿತನಡೆಸಲು ನೆಲವೇ ಇಲ್ಲದ ಸರ್ಕಾರ ಎಂದು ಹೇಳುವಂತೆಯೂ ಇರಲಿಲ್ಲ. ಸಾರ್ವಭೌಮ ಮತ್ತು ಸ್ವತಂತ್ರ ದೇಶದ ಸರ್ಕಾರ ಎಂದು ಪರಿಗಣಿಸಲು ಅದು ಅರ್ಹವಾಗಿತ್ತು.

1943ರ ಡಿಸೆಂಬರ್ 30ರಂದು ಅಂಡಮಾನ್ ದ್ವೀಪಕ್ಕೆ ಭೇಟಿ ನೀಡಿದ ಬೋಸ್ ಅಲ್ಲಿ ತ್ರಿವರ್ಣ ಧ್ವಜ ಆರೋಹಣ ಮಾಡಿದರು. ಆ ಸಂದರ್ಭದಲ್ಲಿ ಅವರು ಮರಣಕೂಪದಂತೆ ಇದ್ದ ಸೆಲ್ಯುಲಾರ್ ಜೈಲಿಗೂ ಭೇಟಿ ನೀಡಿದರು. ಅಲ್ಲಿ ಶಿಕ್ಷೆಗೆ ಗುರಿಯಾಗಿದ್ದ ತಮ್ಮ ಸ್ನೇಹಿತರು ಹಾಗೂ ಕ್ರಾಂತಿಕಾರಿ ಸಂಗಾತಿಗಳ ಬಗ್ಗೆ ವಿಚಾರಿಸಿದರು. ಅವರನ್ನೆಲ್ಲ ಕಲ್ಕತ್ತಾಕ್ಕೆ ಕರೆದೊಯ್ಯಲಾಗಿದೆ ಎಂದು ಬೋಸ್ ಅವರಿಗೆ ತಿಳಿಸಲಾಯಿತು.

ತಾತ್ಕಾಲಿಕ ಸರ್ಕಾರದ ಆಡಳಿತ: ಆಜಾದ್ ಹಿಂದ್ ತಾತ್ಕಾಲಿಕ ಸರ್ಕಾರದ ಪ್ರಧಾನಿಯಾಗಿ ಬೋಸ್ ಅವರು, ಭಾರತೀಯ ರಾಷ್ಟ್ರೀಯ ಸೇನೆಯ (ಐಎನ್‌ಎ) ಮೇಜರ್‌ ಜನರಲ್‌ ಎ.ಡಿ. ಲೋಗನಾದನ್ ಅವರನ್ನು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಚೀಫ್ ಕಮಿಷನರ್‌ ಆಗಿ 1944ರ ಜನವರಿ 6ರಂದು ನೇಮಕ ಮಾಡಿದರು.

1944ರ ಫೆಬ್ರುವರಿ 21ರಂದು ಆಜಾದ್‌ ಹಿಂದ್‌ನ ತಾತ್ಕಾಲಿಕ ಸರ್ಕಾರದ ಪ್ರಥಮ ದಿನಾಚರಣೆ ನಡೆಯಿತು. ಇದಾದ ವಾರದ ನಂತರ, ಬರ್ಮಾದ ಆರಾಕಾನ್ ವಲಯದಲ್ಲಿ ಸಿಕ್ಕ ಜಯದ ಸಂಭ್ರಮಾಚರಣೆ ನಡೆಯಿತು.

ಜನರಲ್ ಲೋಗನಾದನ್ ಅವರು ನಿಷ್ಠಾವಂತ ಸೈನಿಕ. ‘ಅವರ ಕರ್ತವ್ಯಪ್ರಜ್ಞೆ, ಧೈರ್ಯ, ತ್ಯಾಗ ಮನೋಭಾವ, ಹಾಸ್ಯಪ್ರಜ್ಞೆಯನ್ನು ನಾನು ನೆನಪಿಸಿಕೊಳ್ಳುತ್ತೇನೆ’ ಎಂದು ಐಎನ್‌ಎಯಲ್ಲಿ ಅವರ ಜೊತೆ ಕೆಲಸ ಮಾಡಿದ್ದ ಲೆಫ್ಟಿನೆಂಟ್ ಕರ್ನಲ್‌ ಗುರುಬಕ್ಷ್‌ ಸಿಂಗ್ ಧಿಲ್ಲಾನ್ ಹೇಳಿದ್ದರು. ಈ ದ್ವೀಪಗಳ ಆಡಳಿತವು ಒಂದು ಸವಾಲಿನ ಕೆಲಸವೇ ಆಗಿತ್ತು. ಅಮೆರಿಕ ಮತ್ತು ಬ್ರಿಟಿಷ್ ನೌಕಾಪಡೆಗಳು ಒಟ್ಟಾಗಿ ದಾಳಿ ನಡೆಸಿದರೆ ಅಪಾಯ ಎಂಬ ಕಾರಣ ನೀಡಿ ಜಪಾನಿನ ನೌಕಾಪಡೆಯು ದ್ವೀಪದ ಆಡಳಿತದ ಮೇಲೆ ನಿಯಂತ್ರಣ ಹೊಂದಿತ್ತು.

1944ರ ಮಾರ್ಚ್‌ 15ರಂದು ಬೋಸ್ ಅವರಿಗೆ ಸಲ್ಲಿಸಿದ್ದ ವರದಿಯಲ್ಲಿ ಲೋಗನಾದನ್ ಅವರು ಔಷಧ ಮತ್ತು ಇತರ ವಸ್ತುಗಳ ತೀವ್ರ ಕೊರತೆಯ ಬಗ್ಗೆ ಉಲ್ಲೇಖಿಸಿದ್ದರು. ಭೇದಿಗೆ ಚಿಕಿತ್ಸೆ ನೀಡಲು ಔಷಧಗಳ ತುರ್ತು ಅಗತ್ಯ ಇದೆ ಎಂದು ಹೇಳಿದ್ದರು. ದ್ವೀಪಗಳ ಆಡಳಿತದ ವಿಚಾರದಲ್ಲಿ ಪೂರ್ಣ ಸ್ವಾತಂತ್ರ್ಯ ಇಲ್ಲದ್ದರ ಬಗ್ಗೆ ಬೋಸ್ ಮತ್ತು ಲೋಗನಾದನ್ ಅವರು ತೀವ್ರ ಪ್ರತಿಭಟನೆ ದಾಖಲಿ
ಸಿದ್ದರು. ‘ಪೊಲೀಸ್ ಅಧಿಕಾರ ಇಲ್ಲದಿದ್ದರೆ ನೀವು ಜನರ ಕಣ್ಣಲ್ಲಿ ಬಲಿಷ್ಠರಾಗಿ ಕಾಣಿಸಲು ಸಾಧ್ಯವಿಲ್ಲ. ಆಡಳಿತದ ಹಸ್ತಾಂತರದ ವಿಚಾರದಲ್ಲಿನ ಪ್ರಗತಿಯು ತೃಪ್ತಿ ತಂದಿಲ್ಲ ಎಂದು ನೀವು ಅಧಿಕಾರಸ್ಥರ ಬಳಿ ಹೇಳಬಹುದು’ ಎಂದು ಬೋಸ್ ಅವರು ಲೋಗನಾದನ್ ಅವರಲ್ಲಿ ಹೇಳಿದ್ದರು.

ಯುದ್ಧ ಪೂರ್ಣಗೊಂಡ ನಂತರ ದ್ವೀಪಗಳ ಮೇಲಿನ ಹಾಗೂ ಭಾರತ ದೇಶದ ಮೇಲಿನ ಪೂರ್ಣ ಅಧಿಕಾರವನ್ನು ಹಸ್ತಾಂತರ ಮಾಡುವುದಾಗಿ ಜಪಾನ್ ಸರ್ಕಾರ ಭರವಸೆ ನೀಡಿತ್ತು.

ಸೋಲಿನ ನಂತರ: ಬ್ರಿಟಿಷರ ಕೈಯಲ್ಲಿ ಭಾರತ ಹಾಗೂ ಜಪಾನಿನ ಸೇನೆ ಸೋತ ನಂತರ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ತಾತ್ಕಾಲಿಕ ಸರ್ಕಾರವು ಪತನಗೊಂಡಿತು. 1945ರಲ್ಲಿ ಬೋಸ್ ಅವರು ಕಣ್ಮರೆಯಾದ ನಂತರ, ಐಎನ್ಎಗೆ ಸೋಲಾದ ನಂತರ ತಾತ್ಕಾಲಿಕ ಸರ್ಕಾರದ ಅಸ್ತಿತ್ವವೇ ಇಲ್ಲದಂತೆ ಆಯಿತು. ಎರಡನೆಯ ವಿಶ್ವಯುದ್ಧದಲ್ಲಿ ಜಪಾನ್ ಸೋತ ನಂತರ, ದ್ವೀಪಗಳ ಮೇಲೆ ಬ್ರಿಟನ್ ‍ಪುನಃ ಹಿಡಿತ ಸಾಧಿಸಿತು. ನಾವು ಇಂದು ಅನುಭವಿಸುತ್ತಿರುವ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಐಎನ್‌ಎ ಸೈನಿಕರ ಹೆಸರುಗಳು ಅಳಿಸಿಹೋದ ರೀತಿಯಲ್ಲೇ ಶಹೀದ್ ಮತ್ತು ಸ್ವರಾಜ್ ಎಂಬ ಹೆಸರುಗಳೂ ಅಳಿಸಿಹೋದವು.

ಈಗ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಪ್ರಧಾನಿ ಮೋದಿ ಭಾನುವಾರ ಭೇಟಿ ನೀಡಿದ ಸಂದರ್ಭ
ದಲ್ಲಿ ಅಲ್ಲಿನ ಮೂರು ದ್ವೀಪಗಳಿಗೆ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ದ್ವೀಪ, ಶಹೀದ್ ಮತ್ತು ಸ್ವರಾಜ್ ದ್ವೀಪ ಎಂದು ಮರು ನಾಮಕರಣ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.