
ಸಂವಿಧಾನದ ಪ್ರಸ್ತಾವನೆಯೇ ಸಂವಿಧಾನದ ಸಾರಸತ್ವ, ಆಶಯ. ಪ್ರಸ್ತಾವನೆಯು ಇಡೀ ಸಂವಿಧಾನದ ಸಂಕ್ಷಿಪ್ತ ರೂಪದಂತಿದೆ. ನಮ್ಮ ದೇಶ, ಅಂದರೆ ನಾವು– ಜನರು ಹೇಗಿರಬೇಕು? ಯಾವ ರೀತಿಯಲ್ಲಿ ಬದುಕಬೇಕು? ದೇಶ ಕಟ್ಟುವ ಬಗೆ ಹೇಗೆ? ನಮ್ಮೆಲ್ಲರ ಕರ್ತವ್ಯದ ಜೊತೆ ಜೊತೆಗೆ ನಮ್ಮ ಹಕ್ಕುಗಳು ಯಾವುವು ಎಂಬುದನ್ನು ವಿವರಿಸುತ್ತಾ, ಸದಾ ಎಚ್ಚರದಲ್ಲಿ ಇರುವಂತೆ ಪ್ರಸ್ತಾವನೆಯು ನಮ್ಮನ್ನು ಪ್ರೇರೇಪಿಸುತ್ತಲೇ ಇರುವ ಶಕ್ತಿಧಾತುವಾಗಿದೆ.
ಸಂವಿಧಾನ ರಚನೆಗೆ ಮುಂದಡಿ ಇಡುವುದಕ್ಕೂ ಮೊದಲು ನಮಗೆ ಕೆಲವು ಸ್ಪಷ್ಟತೆಗಳಿರಬೇಕು. ಇಲ್ಲಿಯವರೆಗೆ ನಮಗೆ ನಮ್ಮದೇ ಆದ ಭಾರತದ ಕಲ್ಪನೆಗಳಿದ್ದವು. ಈಗ ಈ ಕಲ್ಪನೆಗಳನ್ನು ಕಾರ್ಯರೂಪಕ್ಕೆ ತರುವ ಹೊಸ್ತಿಲಲ್ಲಿದ್ದೇವೆ. ಮೊದಲು ನಮಗೆ ಈ ಕಲ್ಪನೆಗಳ ಬಗ್ಗೆ ಸ್ಪಷ್ಟತೆ ಇರಬೇಕು, ಇದನ್ನೇ ನಾವು ದೇಶದ ಜನರಿಗೆ ನೀಡಬೇಕು; ಮತ್ತು ಜಗತ್ತಿಗೆ ಕೂಡ. ನಮ್ಮ ಗುರಿ, ನಮ್ಮ ಆಶೋತ್ತರಗಳ ಈ ಸಂಕಲ್ಪವನ್ನು (ರೆಸಲ್ಯೂಷನ್) ನಾನು ನಿಮ್ಮ ಮುಂದಿಡುತ್ತಿದ್ದೇನೆ.ಜವಾಹರಲಾಲ್ ನೆಹರೂ
(ಸಂವಿಧಾನವು ಹೇಗಿರಬೇಕು ಎನ್ನುವ ಬಗ್ಗೆ ನೆಹರೂ ಅವರು 1946ರ ಡಿಸೆಂಬರ್ 13ರಂದು ಸಂವಿಧಾನ ಕರಡು ರಚನಾ ಸಮಿತಿ ಸಭೆಯಲ್ಲಿ ನಿರ್ಣಯ ಮಂಡಿಸಿ ಆಡಿದ ಮಾತು)
ಅಂದು, ಅಮೆರಿಕ ಮತ್ತು ಐರೋಪ್ಯ ದೇಶಗಳ ಸಂವಿಧಾನಗಳು ನಮ್ಮ ಮುಂದಿದ್ದವು. ಇವುಗಳಿಂದ ನಾವು ಹಲವು ಅಂಶಗಳನ್ನು ಪಡೆದುಕೊಂಡಿದ್ದೇವೆ. ಆದರೆ, ಭಾರತವು ಆ ಎಲ್ಲ ದೇಶಗಳಿಗಿಂತ ಭಿನ್ನವಾಗಿರುವ ದೇಶ. ನಮ್ಮ ಇತಿಹಾಸ, ಸಂಸ್ಕೃತಿ, ಭಾಷೆ, ವಿವಿಧ ತತ್ವ ಸಿದ್ಧಾಂತಗಳು, ಪರಂಪರೆಗಳು– ಹೀಗೆ ನಮ್ಮದು ವೈವಿಧ್ಯದಲ್ಲಿ ಏಕತೆಯನ್ನು ಪ್ರತಿಪಾದಿಸುವ, ಪ್ರತಿಬಿಂಬಿಸುವ ವೈಶಿಷ್ಟ್ಯಪೂರ್ಣ ದೇಶ. ನಮ್ಮಲ್ಲಿ ಬೇರೂರಿರುವ ಜಾತಿ ವ್ಯವಸ್ಥೆ, ಅದರಿಂದ ಉಂಟಾಗಿರುವ ಅಸಮಾನತೆಯೂ ಇದೆ. ಕೋಮುದ್ವೇಷ, ಲಿಂಗ ತಾರತಮ್ಯ, ಮೌಢ್ಯ, ತೀವ್ರ ಬಡತನ ಮತ್ತು ಆರ್ಥಿಕ ಅಸಮಾನತೆ– ಇಂಥ ಸಮಸ್ಯೆಗಳೂ ಇಂದಿನಂತೆಯೇ ಅಂದೂ ನಮ್ಮ ಮುಂದಿದ್ದವು.
ಬ್ರಿಟಿಷರು ನಮಗೆ ಸ್ವಾತಂತ್ರ್ಯ ನೀಡಿದಾಗ, ಭವಿಷ್ಯವೇ ಇಲ್ಲ, ಭವಿಷ್ಯವನ್ನು ರೂಪಿಸಿಕೊಳ್ಳುವುದು ಸಾಧ್ಯವೇ ಇಲ್ಲವೇನೋ ಅನ್ನುವಂಥ ಸ್ಥಿತಿಯಲ್ಲಿ ಈ ದೇಶವಿತ್ತು. ಹೊಸ ಕನಸುಗಳು, ಭರವಸೆಗಳನ್ನು ದೇಶದ ಜನರಿಗೆ ನೀಡಬೇಕಿತ್ತು. ಜಗತ್ತಿನೆದುರು ಈ ದೇಶವನ್ನು ಹಿಡಿದು ನಿಲ್ಲಿಸಬೇಕಿತ್ತು. ಸಂವಿಧಾನವು ಆ ಮಹೋನ್ನತ ಕಾಯಕಕ್ಕೆ ಬೇಕಾದ ದಾರಿಯೊಂದನ್ನು ತನ್ನ ಪ್ರಸ್ತಾವನೆಯ ಮುಖೇನ ಧಾರೆ ಎರೆದು, ಭಾರತವು ನವನವೋನ್ಮೇಷಶಾಲಿಯಾಗಿ ಬೆಳೆಯುವಂತೆ ಮಾಡಿತು. ಅದಕ್ಕೆ ಸಂವಿಧಾನದ ಪ್ರಸ್ತಾವನೆಯೇ ಬುನಾದಿ ಹಾಕಿಕೊಟ್ಟಿತು.
ನಮ್ಮ ಸಂವಿಧಾನ ಹೇಗಿರಬೇಕು ಎಂಬುದನ್ನು ನಿರ್ಧರಿಸಲು ಜವಾಹರಲಾಲ್ ನೆಹರೂ ಅವರು ಮೊದಲಿಗೆ 8 ಅಂಶಗಳಿರುವ ನಿರ್ಣಯವೊಂದನ್ನು ಸಭೆಯಲ್ಲಿ ಮುಂಡಿಸಿದ್ದರು. ಈ ಅಂಶಗಳನ್ನು ಇಟ್ಟುಕೊಂಡೇ ಪ್ರಸ್ತಾವನೆಯನ್ನೂ ರಚಿಸಲಾಗಿದೆ. ಅವುಗಳಲ್ಲಿ ಕೆಲವು ಇಂತಿವೆ:
ಭಾರತದ ಜನರಾದ ನಾವು: ದೇಶದಲ್ಲಿ ಜನರೇ ಸಾರ್ವಭೌಮರು. ಇದು ಜನರಿಂದಲೇ ನಡೆಯುವ ದೇಶ
ಸಾರ್ವಭೌಮತ್ವ: ಇತರೆ ಯಾವ ದೇಶದ ನಿಯಂತ್ರಣವೂ ಇಲ್ಲದೆ, ಸ್ವತಂತ್ರ ಆಡಳಿತದ ದೇಶ
ಸಮಾಜವಾದಿ: ಖಾಸಗಿ ಕ್ಷೇತ್ರವೇ ಪ್ರಧಾನವಾಗದಂತೆ ಆರ್ಥಿಕ ಚುವಟಿಕೆಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರಗಳು ಸಮನಾಗಿ ಒಟ್ಟುಗೂಡಿ ದೇಶದ ಆರ್ಥಿಕ ಪ್ರಗತಿಗಾಗಿ ದುಡಿಯುವುದು
ಜಾತ್ಯತೀತ: ಎಲ್ಲ ಜಾತಿ, ಧರ್ಮ, ನಂಬಿಕೆಗಳಿಗೂ ಸಮಾನ ಗೌರವ, ಆದರ ನೀಡುವ ದೇಶ
ಪ್ರಜಾಪ್ರಭುತ್ವವಾದಿ: ಜನರ ಆಶೋತ್ತರಗಳಿಗೆ ಅನುಗುಣವಾಗಿ ಚುನಾವಣೆ ಮೂಲಕ ಜನರೇ ಆರಿಸಿದ ಸರ್ಕಾರದ ಆಡಳಿತ ಇರುವ ದೇಶ
ಗಣರಾಜ್ಯ: ದೇಶದ ಎಲ್ಲ ಸರ್ಕಾರದ ಪ್ರಮುಖರೂ ಜನರಿಂದಲೇ ಆಯ್ಕೆಗೊಂಡು ಆಡಳಿತ ನಡೆಸುವ ದೇಶ
ನ್ಯಾಯ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ: ಜಾತಿ, ಧರ್ಮ, ಲಿಂಗ – ಹೀಗೆ ಯಾವ ಆಧಾರದಲ್ಲಿಯೂ ಯಾರನ್ನೂ ತಾರತಮ್ಯದಿಂದ ನೋಡದೆ, ಎಲ್ಲರೂ ಒಂದೇ ಎಂದು ಕಾಣುವ ದೇಶ
ನಾಗರಿಕ ಸ್ವಾತಂತ್ರ್ಯ: ಜನರು ಬೇಕಾದ ಜೀವನ ವಿಧಾನವನ್ನು, ತಮ್ಮಿಷ್ಟದ ರಾಜಕೀಯ ಸಿದ್ಧಾಂತ ಅಥವಾ ಅಭಿಪ್ರಾಯವನ್ನು ಇಟ್ಟುಕೊಳ್ಳುವ ಸ್ವಾತಂತ್ರ್ಯ ಇರುವ ದೇಶ
ಸಮಾನತೆ: ಜಾತಿ, ಧರ್ಮ, ಲಿಂಗ, ಶ್ರೀಮಂತ, ಬಡವ, ಚರ್ಮದ ಬಣ್ಣ– ಹೀಗೆ ಯಾವ ಆಧಾರದ ಮೇಲೆಯೂ ತಾರತಮ್ಯ ಮಾಡದೆ, ಸಮಾನ ಅವಕಾಶಗಳನ್ನೂ ಸ್ಥಾನಮಾನವನ್ನೂ ನೀಡುವ ದೇಶ
ಭ್ರಾತೃತ್ವ: ದೇಶದ ಜನರೊಟ್ಟಿಗೆ ಸಹೋದರತ್ವದಿಂದ ಇರುವ, ವ್ಯಕ್ತಿ ಗೌರವವನ್ನು ಎತ್ತಿ ಹಿಡಿಯುವ ದೇಶ
ಸುದೀರ್ಘ ಚರ್ಚೆಯ ಬಳಿಕ 1949ರ ನವೆಂಬರ್‌ನಲ್ಲಿ ಒಪ್ಪಿಕೊಂಡ ಈ ಪ್ರಸ್ತಾವನೆಯನ್ನು ನಾವು ನಮಗೇ ಸಮರ್ಪಿಸಿಕೊಂಡಿದ್ದೇವೆ.
ತಮ್ಮ ನಿರ್ಣಯಕ್ಕೆ ಸಂಬಂಧಿಸಿದಂತೆ ಕೆಲವು ಸದಸ್ಯರ ಆಕ್ಷೇಪಗಳ ಬಗ್ಗೆ ನೆಹರೂ ಅವರು ಸಭೆಯಲ್ಲಿ ಪ್ರಸ್ತಾಪಿಸಿದ್ದರು. ‘ಪ್ರಜಾಪ್ರಭುತ್ವ’ ಮತ್ತು ‘ಸಮಾಜವಾದ’ ಎನ್ನುವ ಎರಡು ಪದಗಳನ್ನು ನೀವು ನಿಮ್ಮ ನಿರ್ಣಯಗಳಲ್ಲಿ ಬಳಸಿಲ್ಲ ಎಂಬುದೇ ಆ ಆಕ್ಷೇಪವಾಗಿತ್ತು. ಇದಕ್ಕೆ ಪ್ರತಿಕ್ರಿಯಿಸುತ್ತಾ ಮಾತನಾಡಿದ್ದ ನೆಹರೂ, ಈ ಪ್ರಸ್ತಾವನೆಯಲ್ಲಿ ಕೆಲವು ಪಾರಿಭಾಷಿಕ ಪದಗಳನ್ನು ಉದ್ದೇಶಪೂರ್ವಕವಾಗಿಯೇ ಬಳಸಿಲ್ಲ. ಆದರೆ, ನಮ್ಮ ಇಡೀ ನಿರ್ಣಯವು ಈ ಎರಡು ಪರಿಕಲ್ಪನೆಗಳ ಆಧಾರದಲ್ಲಿಯೇ ರೂಪುಗೊಂಡಿದೆ ಎಂದಿದ್ದರು. ಇದಾದ ಸುಮಾರು 26 ವರ್ಷಗಳ ಬಳಿಕ ಇಂದಿರಾ ಗಾಂಧಿ ಅವರು ಪ್ರಧಾನಿ ಆಗಿದ್ದ ಸಂದರ್ಭದಲ್ಲಿ ಸಂವಿಧಾನಕ್ಕೆ 42ನೇ ತಿದ್ದುಪಡಿ ತಂದು, ಪ್ರಸ್ತಾವನೆಯಲ್ಲಿ ‘ಸಮಾಜವಾದ’ ಮತ್ತು ‘ಜಾತ್ಯತೀತ’ ಪದಗಳನ್ನು ಸೇರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.