ADVERTISEMENT

ಉದ್ಯೋಗ ಖಾತರಿ: ಜಟಿಲವೇಕೆ?

ಯಾರ ಹಿಡಿತಕ್ಕೂ ಸಿಗುತ್ತಿಲ್ಲ ‘ನರೇಗಾ’ ಕೂಲಿ ಹಣ ನೇರ ಪಾವತಿ ವ್ಯವಸ್ಥೆ

ಶಾರದಾ ಗೋಪಾಲ, ಧಾರವಾಡ
Published 26 ಜುಲೈ 2019, 19:45 IST
Last Updated 26 ಜುಲೈ 2019, 19:45 IST
   

ರಾಷ್ಟ್ರದಾದ್ಯಂತ ಇಂದು 13 ಕೋಟಿ ಜನರಿಗೆ ಉದ್ಯೋಗ ಕೊಟ್ಟಿರುವ ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಕೇಂದ್ರ ಹಣಕಾಸು ಸಚಿವರು ಈ ಬಾರಿಯ ಬಜೆಟ್‌ನಲ್ಲಿ ಪ್ರಸ್ತಾಪವನ್ನೇ ಮಾಡಲಿಲ್ಲ. ಅದಕ್ಕೆ ಕಾರಣ, ಬಜೆಟ್‌ಗೆ ಪೂರ್ವದಲ್ಲಿ ಬಿಡುಗಡೆಯಾದ ಕೇಂದ್ರ ಸರ್ಕಾರದ ಆರ್ಥಿಕ ಸಮೀಕ್ಷಾ ವರದಿ. ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಸಿಗುವುದು ಮತ್ತು ಕೂಲಿ ಹಣ ಪಾವತಿಯಾಗುವುದರಲ್ಲಿ ಇದ್ದ ಶೇ 90ರಷ್ಟು ಸಮಸ್ಯೆಗಳು ‘ಆಧಾರ್’ ಬಂದಾಗಿನಿಂದ ಬಗೆಹರಿದಿವೆ ಎಂದು ಈ ವರದಿ ಹೇಳಿದೆ.

ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳು ಜನರಿಗೆ ಸರಿಯಾಗಿ ತಲುಪುವಂತೆ ಮಾಡಲು ಆಧಾರ್ ಅದೆಷ್ಟು ನೆರವಾಗಿದೆ ಎನ್ನುವುದರ ಬಗ್ಗೆ ಹೈದರಾಬಾದಿನ ‘ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್’ 2018ರಲ್ಲಿ ಒಂದು ವರದಿಯನ್ನು ಪ್ರಕಟಿಸಿತ್ತು. ಹೇಳಿ ಕೇಳಿ ಬಿಸಿನೆಸ್ ಸ್ಕೂಲಿನವರು ತಯಾರಿಸಿದ ವರದಿ. ಸಮಾಜದಲ್ಲಿ ಹಿಂದುಳಿದವರಿಗಾಗಿ ಇರುವ ಸರ್ಕಾರಿ ಯೋಜನೆಗಳ ಬಗ್ಗೆ ಅವರ ದೃಷ್ಟಿಕೋನವು ಎಲ್ಲರಿಗೂ ತಿಳಿದಿರುವಂಥದ್ದೇ. ಆ ವರದಿಯನ್ನು ಆಧರಿಸಿ ಆರ್ಥಿಕ ಸಮೀಕ್ಷೆಯು ಉದ್ಯೋಗ ಖಾತರಿಯ ಬಗ್ಗೆ ಬರೆದಿದೆ. ಅದರಲ್ಲಿನ ಅಂಕಿ ಅಂಶಗಳ ಬಗ್ಗೆ ಬಹಳಷ್ಟು ಪ್ರಶ್ನೆಗಳಿದ್ದಾಗ್ಯೂ ಸರ್ಕಾರವು ವರದಿಯನ್ನು ಒಪ್ಪಿಕೊಂಡುಬಿಟ್ಟಿದೆ.

ಆಧಾರ್ ಕಾರಣದಿಂದ ಉದ್ಯೋಗ ಖಾತರಿಯಲ್ಲಿ ಕೆಲಸದ ಬೇಡಿಕೆ ಹೆಚ್ಚಿದೆ, ಜನರಿಗೆ ಸಮಯಕ್ಕೆ ಸರಿಯಾಗಿ ಕೆಲಸ ಸಿಗುತ್ತಿದೆ, ದಲಿತ, ಆದಿವಾಸಿ ಮಹಿಳೆಯರಿಗೆ ಕೆಲಸ ಮತ್ತು ಕೂಲಿಯ ಪ್ರಮಾಣವೂ ಹೆಚ್ಚಿದೆ ಎಂದೆಲ್ಲ ವರದಿ ಹೇಳಿದೆ. ಆದರೆ ಉದ್ಯೋಗ ಖಾತರಿಯಲ್ಲಿ ಕೆಲಸ ಮಾಡುತ್ತಿರುವವರೆಲ್ಲರಿಗೂ ಗೊತ್ತು, ವರದಿಯಲ್ಲಿನ ಇಂತಹ ಅಂಶಗಳಲ್ಲಿ ಅದೆಷ್ಟು ಸುಳ್ಳುಗಳು ಅಡಗಿವೆ ಎಂಬುದು. ಜನರು ಉದ್ಯೋಗಕ್ಕೆ ಬೇಡಿಕೆ ಸಲ್ಲಿಸಿ ಗ್ರಾಮ ಪಂಚಾಯಿತಿಗೆ ಅರ್ಜಿ ಕೊಡಬೇಕು. ಗ್ರಾಮ ಪಂಚಾಯಿತಿಯು ತಾಲ್ಲೂಕು ಪಂಚಾಯಿತಿಯಿಂದ ಒಪ್ಪಿಗೆ ಪಡೆದು, ಕೇಳಿದವರಿಗೆ ಕೆಲಸ ಕೊಡಬೇಕು. ಹೀಗೆ, ಮಾಡಿದ ಕೆಲಸಕ್ಕೆ ಅನುಗುಣವಾಗಿ ಕೂಲಿ ಪಾವತಿಯಾಗಬೇಕು ಎಂಬ ವ್ಯವಸ್ಥೆ ಇತ್ತು. ಇಷ್ಟೊಂದು ಸರಳವಾಗಿದ್ದ ಈ ಪ್ರಕ್ರಿಯೆಯು ವರ್ಷದಿಂದ ವರ್ಷಕ್ಕೆ ಸಂಕೀರ್ಣವಾಗುತ್ತಾ ಹೋಗಿದೆ. ಕೈಗೆ ಕೂಲಿ ಪಾವತಿಯಾಗುತ್ತಿದ್ದುದು ಚೆಕ್ ಮೂಲಕ. ಈಗ ಅವರವರ ಖಾತೆಗಳಿಗೆ ನೇರವಾಗಿ ಹಣ ಎಂದಿದ್ದರೂ ಕಷ್ಟ ತಪ್ಪಿಲ್ಲ.

ADVERTISEMENT

ಡಿಜಿಟಲೀಕರಣದ ಈ ದಿನಗಳಲ್ಲಿ, ಕೈಯಲ್ಲಿ ಬರೆದು ಕೊಟ್ಟ ಬೇಡಿಕೆಯನ್ನು ಕಂಪ್ಯೂಟರಿನಲ್ಲಿ ಹಾಕಿದರೆ, ಕೆಲಸದ ಬೇಡಿಕೆ ಎಷ್ಟಿದೆ ಎನ್ನುವುದು ರಾಷ್ಟ್ರಮಟ್ಟದಲ್ಲೂ ಗೊತ್ತಾಗುತ್ತದೆ ಮತ್ತು 15 ದಿನದೊಳಗೆ ಕೂಲಿ ಕೊಡದಿದ್ದರೆ ಕಾನೂನಿನಂತೆ ಪಿಡಿಒ ಜವಾಬ್ದಾರ
ರಾಗುತ್ತಾರೆ. ಆದರೆ, ಕೆಲಸದ ಬೇಡಿಕೆ ಎಷ್ಟಿದೆ ಮತ್ತು ಅದಕ್ಕೆ ತಕ್ಕಂತೆ ಕೆಲಸ ಸಿಗುತ್ತಿದೆಯೇ ಎಂಬ ಬಗ್ಗೆ ಇಂದು ರಾಷ್ಟ್ರಮಟ್ಟದಲ್ಲಿ ನಿಖರ ಮಾಹಿತಿಯೇ ಇಲ್ಲ. ಬರಪೀಡಿತ ಪ್ರದೇಶಗಳಲ್ಲಿ ಹೆಚ್ಚೆಚ್ಚು ಕೆಲಸ ಕೊಡಬೇಕು ಎಂದು ಸ್ವರಾಜ್ ಅಭಿಯಾನದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಆದೇಶ ಮಾಡಿದ್ದರ ಪರಿಣಾಮವಾಗಿ ಮತ್ತು ಸಂಘಟನೆಗಳ ಸತತ ಪರಿಶ್ರಮವಿರುವೆಡೆ ಮಾತ್ರ ಜನರಿಗೆ ನ್ಯಾಯವಾಗಿ ಕೆಲಸ ಸಿಗುತ್ತಿದೆ. ಉಳಿದೆಡೆ ಜೆಸಿಬಿ ಯಂತ್ರದ ಮೂಲಕವೇ ಹೆಚ್ಚು ಕೆಲಸ ನಡೆಯುತ್ತದೆ.

ಉದ್ಯೋಗ ಖಾತರಿಯ ಕೂಲಿಯು ಸಂದಾಯ ವಾಗುವುದು ಎರಡು ಹಂತಗಳಲ್ಲಿ. ಕೂಲಿಕಾರರಿಗೆ ಎಷ್ಟು ಹಣ ಹೋಗಬೇಕೆಂಬ ‘ಹಣ ವರ್ಗಾವಣೆ ಆದೇಶ’ವನ್ನು (ಎಫ್.ಟಿ.ಒ) ಪಂಚಾಯಿತಿಯು ಸಿದ್ಧಪಡಿಸಿ ಅಧಿಕಾರಿ ಮತ್ತು ಅಧ್ಯಕ್ಷರ ಬೆರಳಚ್ಚು ಪಡೆದು ಮೇಲಿನ ಹಂತಕ್ಕೆ ಕಳಿಸುತ್ತದೆ. ಹಿಂದೆ ಇಷ್ಟಾದ ನಂತರ ಪಂಚಾಯಿತಿಯ ಖಾತೆಯಿಂದ ಕೂಲಿಕಾರರ ಖಾತೆಗೆ ಹಣ ಹೋಗುತ್ತಿತ್ತು. ಆದರೀಗ ಹಣ ಪಾವತಿಯಾಗುವುದು ಎನ್.ಇ.ಎಫ್.ಎಂ.ಎಸ್. (ನ್ಯಾಷನಲ್‌ ಎಲೆಕ್ಟ್ರಾನಿಕ್‌ ಫಂಡ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ) ಮೂಲಕ ರಾಷ್ಟ್ರೀಯ ಖಾತೆಯಿಂದ. ಸಮಸ್ಯೆ ಇರುವುದೇ ಇಲ್ಲಿ. ಕೂಲಿಕಾರನ ಎಫ್.ಟಿ.ಒ, ಪಂಚಾಯಿತಿಯ ಮೂಲಕ ದಿಲ್ಲಿಯನ್ನು ಆ ಕ್ಷಣವೇ ಮುಟ್ಟಿರುತ್ತದಾದರೂ, ಯಾವ ಕಾರಣಕ್ಕೋ ಕೂಲಿಕಾರರ ಖಾತೆಗೆ ಚಕ್ಕೆಂದು ಹಣ ಸಂದಾಯ ಆಗುವುದಿಲ್ಲ. ಈ ಬಗ್ಗೆ ಜನರು ಕೇಳಹೋದಾಗ ಪಂಚಾಯಿತಿಯವರು ಎಫ್.ಟಿ.ಒ ತೋರಿಸಿ ‘ನೋಡಿ ಹಣ ಹಾಕಿದ್ದೀವಿ’ ಎಂದುಬಿಡುತ್ತಾರೆ. ಆರ್ಥಿಕ ಸಮೀಕ್ಷೆ ಕೂಡ ಎಫ್.ಟಿ.ಒ.ವನ್ನೇ ಆಧಾರವಾಗಿ ಇಟ್ಟುಕೊಂಡು, ಹಣ ಸಂದಾಯ ಬಲು ಬೇಗನೇ ಆಗಿಬಿಡುತ್ತಿದೆ ಎಂದು ವರದಿ ಮಾಡಿದೆ. ವಾಸ್ತವದಲ್ಲಿ ತಿಂಗಳು, ಎರಡು ತಿಂಗಳಾದರೂ ಬಹುತೇಕರಿಗೆ ಹಣ ಪಾವತಿ ಆಗುತ್ತಿಲ್ಲ. ಹಿಂದೆ ಕೂಲಿ ಪಾವತಿ ಆಗದಿದ್ದರೆ ಅಧಿಕಾರಿಯು ದಂಡ ಸಮೇತ ಪಾವತಿಸಬೇಕಾಗುತ್ತಿತ್ತು. ಈಗ ಕೇಂದ್ರ ಸರ್ಕಾರವೇ ತಡ ಮಾಡುತ್ತಿರುವುದರಿಂದ ದಂಡದ ಹೆಸರೇ ಇಲ್ಲ.

ಹಣ ಯಾಕೆ ಬಂದಿಲ್ಲ ಎಂದು ಶೋಧಿಸುತ್ತಾ ಹೊರಟರೆ, ಎಲ್ಲಾ ಕಡೆ ಆಧಾರ್‌ದೇ ಕಥೆ! ಇತ್ತೀಚೆಗೆ ಎಲ್ಲಿ ಆಧಾರ್‌ ಜೋಡಣೆ ಆಗಿರುತ್ತದೋ ಅಲ್ಲಿಗದು ಜಾರಿಬಿಡುತ್ತದೆ. ಏರ್‌ಟೆಲ್‌ ಖಾತೆಗೂ ಹೋಗಬಹುದು, ಖಾಸಗಿ ಬ್ಯಾಂಕ್‍ಗೂ ಹೋಗಬಹುದು, ಇನ್ನಾರದೋ ಖಾತೆಗೂ ಹೋಗಬಹುದು, ಎಲ್ಲಿಯೂ ಹೋಗದೆಯೂ ಇರಬಹುದು!

ರಾಯಚೂರಿನಲ್ಲಿ ಕಳೆದ ವರ್ಷ ‘ಆಧಾರ್ ನಿಷ್ಕ್ರಿಯ’ ಎಂಬ ಕಾರಣಕ್ಕೆ 1,500 ಜನರ ಕೂಲಿ ಹಣ ಪಾವತಿ ನಿಂತು ಹೋಗಿ ಜಾಬ್‍ ಕಾರ್ಡುಗಳೇ ಡಿಲೀಟ್ ಆಗಿಹೋದವು. ಈ ರೀತಿ ಪ್ರತಿ ಪಂಚಾಯಿತಿಯಲ್ಲಿ ಪ್ರತಿ ತಿಂಗಳೂ ಕನಿಷ್ಠ 10 ಕಾರ್ಡುಗಳಾದರೂ ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಸಂಬಂಧಿಸಿದ ದಾಖಲೆಗಳೊಂದಿಗೆ ಮತ್ತೊಮ್ಮೆ ಅರ್ಜಿ ಕೊಟ್ಟಾಗಲೇ ಅವು ಮೇಲೆಲ್ಲೋ ಹೋಗಿ ಮರುಜೀವ ಪಡೆಯಬೇಕು. ಆನ್‍ಲೈನ್, ಎಲೆಕ್ಟ್ರಾನಿಕ್ ವರ್ಗಾವಣೆ ಎಂಬುದು ಉದ್ಯೋಗ ಖಾತರಿಯನ್ನು ಸಂಪೂರ್ಣವಾಗಿ ಗ್ರಾಮೀಣದಿಂದ ತೆಗೆದು ರಾಷ್ಟ್ರೀಯ ಮಾಡಿಟ್ಟಿದೆ. ನೇರ, ಸರಳ, ಪಾರದರ್ಶಕ ಇದ್ದುದನ್ನು ತಂತ್ರಜ್ಞಾನವು ಜಟಿಲ, ಅರ್ಥವಾಗದ, ಅಪಾರದರ್ಶಕ ಮಾಡಿಟ್ಟಿದೆ.

ಪಂಚಾಯತ್‍ ರಾಜ್ ಕಾನೂನಿನ ಪ್ರಕಾರ, ಗ್ರಾಮಸಭೆಗೆ ಪರಮಾಧಿಕಾರ. ಯಾವ ಕಾಮಗಾರಿ ತೆಗೆದುಕೊಳ್ಳಬೇಕು ಎನ್ನುವುದನ್ನೂ ಗ್ರಾಮಸಭೆ ನಿರ್ಧರಿಸಬೇಕು. ಉದ್ಯೋಗ ಖಾತರಿಯಲ್ಲಿ ಇಂದು ಅದೂ ಉಳಿದಿಲ್ಲ. ಪಂಚಾಯಿತಿ ಕೆಲಸ ಕೊಡುತ್ತದೆ, ಜನ ಕೆಲಸ ಮಾಡುತ್ತಾರೆ. ಆದರೆ ಹಾಜರಾತಿ, ಕೆಲಸದ ಪ್ರಮಾಣವನ್ನು ಗುರುತು ಹಾಕಿಕೊಟ್ಟ ನಂತರ ಕಂಪ್ಯೂಟರಿನಲ್ಲಿ ಏನಾಗುತ್ತದೆ ಎಂಬುದರ ಮೇಲೆ ಜನರಿಗೆ ಯಾವ ಹಿಡಿತವೂ ಇಲ್ಲ, ಅರಿವೂ ಇಲ್ಲ. ಸ್ವತಃ ಪಂಚಾಯಿತಿಯ ಅಧ್ಯಕ್ಷರು, ಪಿಡಿಒ ಇರಲಿ, ರಾಜ್ಯಕ್ಕೂ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಅವಕಾಶ ಉಳಿದಿಲ್ಲ. ಕಳೆದೆರಡು ವರ್ಷಗಳಲ್ಲಿ ಕೂಲಿ ಪಾವತಿಗೆ ಕೇಂದ್ರದಿಂದ ಹಣವೇ ಬಾರದಾದಾಗ ರಾಜ್ಯ ಸರ್ಕಾರ ಹಣ ಹಾಕಿತ್ತು. ಈಗ ಅದು ಕೂಡ ಸಾಧ್ಯವಾಗದಾಗಿದೆ.

ಬಜೆಟ್‌ನಲ್ಲಿ ಹಣ ತೆಗೆದಿರಿಸುವ ಮೂಲಕ ಉದ್ಯೋಗ ಖಾತರಿಗೆ ತನ್ನ ಬೆಂಬಲವನ್ನು ಸರ್ಕಾರ ತೋರಿಸಬೇಕು. ಆದರೆ ವರ್ಷದಿಂದ ವರ್ಷಕ್ಕೆ ಹೆಚ್ಚೆಚ್ಚು ಹಣ ತೆಗೆದಿಟ್ಟರೂ, ಹಿಂದಿನ ವರ್ಷದ ಬಾಕಿಯೇ ಹೆಚ್ಚುವರಿ ಹಣಕ್ಕಿಂತ ಹೆಚ್ಚಿರುತ್ತದೆ. ಹೊಸ ಬಜೆಟ್ಟಿನ
ಶೇ 20ರಷ್ಟು ಭಾಗ ಹಿಂದಿನ ವರ್ಷದ ಬಾಕಿಗೇ ಹೋಗುತ್ತಿದೆ. ಈ ವರ್ಷವಂತೂ ಬಜೆಟ್ ಕಡಿಮೆ ಇಡುವುದರ ಮೂಲಕ ಕೇಂದ್ರ ಸರ್ಕಾರವು ಬಡಜನರು, ಮಹಿಳೆಯರು, ಆದಿವಾಸಿಗಳಿಗೆ ಸ್ಥಳೀಯವಾಗಿ ಉದ್ಯೋಗ ಸಿಗುವ ಅವಕಾಶವನ್ನು ಕಡಿತಗೊಳಿಸಿದೆ. ‘ಬಡವರಿಗಾಗಿ ಇರುವ ಈ ಯೋಜನೆಯಲ್ಲಿ ನಮಗೆ ಆಸಕ್ತಿ ಇಲ್ಲ, ಬಡತನ ನಿವಾರಣೆ ಮಾಡುವವರು ನಾವು’ ಎನ್ನುವ ಗ್ರಾಮೀಣಾಭಿವೃದ್ಧಿ ಸಚಿವರ ಮಾತಿನಲ್ಲಿ, ಬಡವರನ್ನೇ ನಿವಾರಣೆ ಮಾಡುವ ಯೋಜನೆ ಇರಬಹುದೇನೋ ಎಂಬಂತೆ ಕಾಣುತ್ತಿದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.