ಈ ದಶಕದ ಕೊನೆಗೆ ಐದು ಲಕ್ಷ ಮೆಗಾವಾಟ್ ಇಂಗಾಲಮುಕ್ತ ವಿದ್ಯುತ್ ಉತ್ಪಾದಿಸುತ್ತೇವೆ ಎಂದು ಗ್ಲಾಸ್ಗೊ ಶೃಂಗಸಭೆಯಲ್ಲಿ ಭಾರತ ಪ್ರತಿಜ್ಞೆ ಮಾಡಿದ್ದು ನಿಮಗೆ ನೆನಪಿದೆಯೇ? ಅದನ್ನು ಸಾಧಿಸಲು ಕೇಂದ್ರ ಸರ್ಕಾರವು ಪರಮಾಣು ವಿದ್ಯುತ್ ಉತ್ಪಾದನೆಯ ಅವಕಾಶವನ್ನು ಖಾಸಗಿ ಕ್ಷೇತ್ರಕ್ಕೂ ವಿಸ್ತರಿಸಲು ಮುಂದಾಗಿದೆ. ಅದಕ್ಕಾಗಿ, ಅಣುಶಕ್ತಿ ಕಾಯ್ದೆಗಳಿಗೆ ತಿದ್ದುಪಡಿ ಮಾಡಲು ಹೊರಟಿದೆ. ಸರ್ಕಾರದ ಈ ಉದ್ದೇಶ ಕೈಗೂಡಿದರೆ, ಇದುವರೆಗೂ ಸರ್ಕಾರಿ ಸ್ವಾಮ್ಯದ ಉದ್ಯಮಗಳಿಗೆ ಸೀಮಿತವಾಗಿದ್ದ ಅಣು ವಿದ್ಯುತ್ ಉತ್ಪಾದನೆಯ ಅವಕಾಶ ಇನ್ನು ಮುಂದೆ ಖಾಸಗಿಯವರಿಗೂ ಸಿಗಲಿದೆ.
ಈ ಸುದ್ದಿಯ ಬೆನ್ನಲ್ಲೇ, ಪರಮಾಣು ವಿದ್ಯುತ್ ಉತ್ಪಾದನೆಯಂತಹ ಅತಿ ಸೂಕ್ಷ್ಮ ಮತ್ತು ಅಪಾಯಕಾರಿ ಎಂದೇ ಭಾವಿಸಲಾಗಿರುವ ಉದ್ಯಮದಲ್ಲಿ ಖಾಸಗಿಯವರ ಪ್ರವೇಶವಾದರೆ ದೇಶದ ಭದ್ರತೆಗೆ ಧಕ್ಕೆಯಾಗುವುದಿಲ್ಲವೇ, ಈಗಾಗಲೇ ಬಿಸಿಲು, ಗಾಳಿ ಮತ್ತು ಬಯೊಮಾಸ್‌ನಿಂದ 1.75 ಲಕ್ಷ ಮೆ.ವಾ. ಇಂಗಾಲಮುಕ್ತ ವಿದ್ಯುತ್ ಉತ್ಪಾದಿಸುವ ಕೆಲಸ ಚೆನ್ನಾಗಿ ನಡೆದಿರುವಾಗ, ಪರಮಾಣು ವಿದ್ಯುತ್ತಿನ ಗೊಡವೆ ಏಕೆ ಎಂಬ ಪ್ರಶ್ನೆಗಳು ಎದ್ದಿವೆ.
ಖಾಸಗಿಯವರನ್ನು ಈ ಕ್ಷೇತ್ರಕ್ಕೆ ಬರಮಾಡಿಕೊಳ್ಳುವ ವಿಚಾರ ಹೊಸದೇನಲ್ಲ. ನೀತಿ ಆಯೋಗ ಮತ್ತು ಅಣುಶಕ್ತಿ ಇಲಾಖೆಯ ಹಿಂದಿನ ವರ್ಷದ ವರದಿಯಲ್ಲಿ ಈ ವಿಚಾರ ಪ್ರಸ್ತಾಪವಾಗಿತ್ತು. ಅದಕ್ಕಾಗಿ ಪರಮಾಣು ಶಕ್ತಿ ಕಾಯ್ದೆ (ಅಟಾಮಿಕ್ ಎನರ್ಜಿ ಆ್ಯಕ್ಟ್) ಮತ್ತು ಪರಮಾಣು ಹಾನಿಗೆ ನಾಗರಿಕ ಹೊಣೆಗಾರಿಕೆ (ಸಿವಿಲ್ ಲಯಬಿಲಿಟಿ ಫಾರ್ ನ್ಯೂಕ್ಲಿಯರ್ ಡ್ಯಾಮೇಜ್- ಸಿಎಲ್‌ಎನ್‌ಡಿ) ಕಾಯ್ದೆಗೆ ಸೂಕ್ತ ತಿದ್ದುಪಡಿ ಮಾಡಿ ಖಾಸಗಿ ಉದ್ದಿಮೆದಾರರಿಗೆ ಪ್ರವೇಶ ಕಲ್ಪಿಸಲಾಗುವುದು ಎಂದಿರುವ ಕೇಂದ್ರ ಸರ್ಕಾರ, ಇನ್ನು ಎಂಟು ವರ್ಷಗಳಲ್ಲಿ ದೇಶೀಯವಾಗಿ ನಿರ್ಮಿಸಲಾದ ಐದು ಸಣ್ಣ ಮತ್ತು ಮಧ್ಯಮ ರಿಯಾಕ್ಟರ್‌ಗಳು ಕಾರ್ಯಾರಂಭ ಮಾಡಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ.
ಇದಕ್ಕೆ ಪೂರಕವೆಂಬಂತೆ, ಈ ವರ್ಷದ ಆಯವ್ಯಯದಲ್ಲಿ ಈ ಉದ್ದೇಶಕ್ಕೆ ₹ 20,000 ಕೋಟಿ ತೆಗೆದಿರಿಸಿರುವ ಸರ್ಕಾರ, 2047ರ ವೇಳೆಗೆ ಕನಿಷ್ಠ 1 ಲಕ್ಷ ಮೆ.ವಾ. ಪರಮಾಣು ವಿದ್ಯುತ್ ಉತ್ಪಾದನೆಯ ಗುರಿ ಇಟ್ಟುಕೊಂಡಿದೆ. ಈ ಕೆಲಸ ಬರೀ ಸರ್ಕಾರಿ ಉದ್ಯಮಗಳಿಂದ ಸಾಧ್ಯವಿಲ್ಲ. ಖಾಸಗಿ ಸಹಭಾಗಿತ್ವ ಮತ್ತು 2,600 ಕೋಟಿ ಡಾಲರ್ ಬಂಡವಾಳ ಬೇಕು.
ಅಣುಶಕ್ತಿ ಉತ್ಪಾದನೆಗೆ ಖಾಸಗಿ ಭಾಗೀದಾರಿಕೆಯನ್ನು ಪ್ರೋತ್ಸಾಹಿಸಲು ಅಮೆರಿಕದ ವೆಸ್ಟಿಂಗ್ ಹೌಸ್ ಎಲೆಕ್ಟ್ರಿಕ್ ಕಂಪನಿಯೊಂದಿಗೆ 2008ರಲ್ಲಿ ಒಪ್ಪಂದವಾಗಿತ್ತು. ಯೋಜನೆಗೆ ಅಂತಿಮ ರೂಪ ನೀಡಲು ಎರಡು ವರ್ಷ ಬೇಕಾಯಿತು. 2010ರ ಸಿಎಲ್‌ಎನ್‌ಡಿ ಕಾಯ್ದೆ ಪ್ರಕಾರ, ಅಣು ವಿದ್ಯುತ್ ಉತ್ಪಾದನೆಯನ್ನು ವಾಣಿಜ್ಯೀಕರಣಗೊಳಿಸಲು ಅವಕಾಶ ಇಲ್ಲ. ಯೋಜನೆಯ ಪ್ರಕಾರ, ಆಂಧ್ರಪ್ರದೇಶದ ಕೊವ್ವಾಡದಲ್ಲಿ 6,000 ಮೆಗಾವಾಟ್ ಸಾಮರ್ಥ್ಯದ ಅಣು ವಿದ್ಯುತ್ ಸ್ಥಾವರ ನಿರ್ಮಾಣ ಆರಂಭವಾಗಬೇಕಿತ್ತು. ಉತ್ಪಾದನೆಯಲ್ಲಿ ಅಪಘಾತಗಳೇನಾದರೂ ಸಂಭವಿಸಿದರೆ ನಷ್ಟ ಕಟ್ಟಿಕೊಡುವ ಜವಾಬ್ದಾರಿಯು ಕಾನೂನಿನ ಅನ್ವಯ ಸ್ಥಾವರ ನಿರ್ವಾಹಕರದೇ ಆಗಿರುತ್ತದೆ. ಕಾನೂನಿನ ತೊಡಕು ಮತ್ತು 2017ರಲ್ಲಿ ಕಂಪನಿ ಎದುರಿಸಿದ ಆರ್ಥಿಕ ಮುಗ್ಗಟ್ಟಿನಿಂದಾಗಿ ಯೋಜನೆ ಇನ್ನೂ ತೆವಳುತ್ತಲೇ ಇದೆ. 2015ರಲ್ಲಿ ಎನ್‌ಡಿಎ ಸರ್ಕಾರವು ಯಾವ ಕಾರಣಕ್ಕೂ ಕಾಯ್ದೆ ಬದಲಾಗದು ಎಂದಿತ್ತು. ಈಗ ಮಾತಿನ ವರಸೆ ಬದಲಾಗಿದೆ.
ಸಿಎಲ್‌ಎನ್‌ಡಿಯು ಪರಮಾಣು ವಿಪತ್ತಿನ ಸಂದರ್ಭಗಳಲ್ಲಿ ಹಾನಿಗೆ ಒಳಗಾಗುವವರನ್ನು ರಕ್ಷಿಸಲು ಮುತುವರ್ಜಿ ವಹಿಸುತ್ತದೆ. ಆಸ್ತಿಪಾಸ್ತಿ, ಪ್ರಾಣ ನಷ್ಟವಾದಾಗ ಪರಿಹಾರವನ್ನು ನಿರ್ವಾಹಕರೇ ನೀಡಬೇಕಾಗುತ್ತದೆ. ಪರಿಹಾರದ ಗರಿಷ್ಠ ಮಿತಿಯು ₹ 1,500 ಕೋಟಿಯಷ್ಟು ಆಗಿರುತ್ತದೆ. ನಷ್ಟದ ಪ್ರಮಾಣ ಇದಕ್ಕೂ ದೊಡ್ಡದಿದ್ದರೆ ಕೇಂದ್ರ ಸರ್ಕಾರ ಜವಾಬ್ದಾರಿ ತೆಗೆದುಕೊಳ್ಳುತ್ತದೆ. ಆದರೆ ಈಗ ಮಾಡಲು ಹೊರಟಿರುವ ತಿದ್ದುಪಡಿಯ ಪ್ರಕಾರ, ಪರಮಾಣು ವಿಪತ್ತು ಸಂಭವಿಸಿದರೆ ನಷ್ಟ ಕಟ್ಟಿಕೊಡುವ ಜವಾಬ್ದಾರಿಯು ಸಾಮಗ್ರಿ, ಉಪಕರಣ ಸರಬರಾಜು ಮಾಡುವವರದೇ ಆಗಿರುತ್ತದೆ. ನಿರ್ವಾಹಕರಿಗೆ ಯಾವುದೇ ಹೊಣೆಗಾರಿಕೆ ಇರುವುದಿಲ್ಲ. ಆದರೆ ಅಂತರರಾಷ್ಟ್ರೀಯ ಕಾನೂನು ಚೌಕಟ್ಟು, ನಿರ್ವಾಹಕರೇ ಹೊಣೆಗಾರರಾಗುತ್ತಾರೆ ಎನ್ನುತ್ತದೆ.
ಈಗ ನಾವು ಮಾಡುತ್ತಿರುವ ತಿದ್ದುಪಡಿಯು ಜಗತ್ತಿನಾದ್ಯಂತ ಅಣು ವಿದ್ಯುತ್ ಉತ್ಪಾದನೆಗೆ ಸಂಬಂಧಿಸಿದಂತೆ ಚಾಲ್ತಿಯಲ್ಲಿರುವ ನಿಯಮಗಳಿಗೆ ಸಂಪೂರ್ಣ ತದ್ವಿರುದ್ಧವಾಗಿದೆ. ‘ಈ ಮಸೂದೆಯು ತಂತ್ರಜ್ಞಾನ, ಉಪಕರಣ ಮತ್ತು ಸಾಮಗ್ರಿ ಸರಬರಾಜು ಮಾಡುವ ನಮ್ಮಂತಹ ಕಂಪನಿಗಳಿಗೆ ಭಾರಿ ನಷ್ಟ ಉಂಟು ಮಾಡುತ್ತದೆ’ ಎಂದಿರುವ ಅಮೆರಿಕದ ಜಿ.ಈ. ಹಿಟಾಚಿ ನ್ಯೂಕ್ಲಿಯರ್ ಎನರ್ಜಿ, ವೆಸ್ಟಿಂಗ್ ಹೌಸ್ ಎಲೆಕ್ಟ್ರಿಕ್ ಕಂಪನಿ ಮತ್ತು ರೋಸಾಟಂ ಸ್ಟೇಟ್ ಕಾರ್ಪೊರೇಷನ್, ಸಲಕರಣೆ ಸರಬರಾಜು ಮಾಡಲು ಹಿಂದೇಟು ಹಾಕುತ್ತಿವೆ.
ರಾಜಸ್ಥಾನ, ಉತ್ತರಪ್ರದೇಶ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡು ಈ ರಾಜ್ಯಗಳಲ್ಲಿ ಈಗಾಗಲೇ ಅಣು ವಿದ್ಯುತ್ ಘಟಕಗಳು ಕೆಲಸ ನಿರ್ವಹಿಸುತ್ತಿವೆ. ವಾರ್ಷಿಕ 6,733 ಮೆಗಾವಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಎಲ್ಲ ಘಟಕಗಳು ಸರ್ಕಾರಕ್ಕೆ ಸೇರಿವೆ. ಸರ್ಕಾರದ ಒಡೆತನದ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಭವಿನಿಯು ವಿದ್ಯುತ್ ಉತ್ಪಾದನೆಗೆ ಬೇಕಾದ ಪರಿಕರಗಳನ್ನು ಒದಗಿಸುತ್ತಿವೆ.
ಅಣು ವಿದ್ಯುತ್ ಉತ್ಪಾದನೆ ಕ್ಷೇತ್ರದಲ್ಲಿ ಖಾಸಗಿಯವರು ಏಕೆ ಇರುವಂತಿಲ್ಲ ಎಂದು ಸಂದೀಪ್ ಎನ್ನುವವರು ಹಿಂದಿನ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ‘ಸಂಸತ್ತು ಬಹಳ ಎಚ್ಚರಿಕೆಯ ಲೆಕ್ಕಾಚಾರ ಹಾಕಿ, ದೇಶದ ಭದ್ರತೆಯನ್ನು ಆದ್ಯತೆಯನ್ನಾಗಿಸಿಕೊಂಡು, ಉತ್ಪಾದನೆಯ ಜೊತೆಗೆ ಅಪಘಾತಗಳನ್ನು ತಪ್ಪಿಸಲು ಸರ್ವ ಮುನ್ನೆಚ್ಚರಿಕೆಗಳನ್ನೂ ತೆಗೆದುಕೊಳ್ಳುತ್ತದೆ. ಖಾಸಗಿಯವರಿಂದ ಇದನ್ನು ನಿರೀಕ್ಷಿಸಲಾಗುವುದಿಲ್ಲ’ ಎಂಬ ವಿವರಣೆ ನೀಡಿ ಅರ್ಜಿಯನ್ನು ವಜಾ ಮಾಡಲಾಗಿತ್ತು.
ಪರಮಾಣು ವಿದ್ಯುತ್ ಉತ್ಪಾದನೆಯಲ್ಲಿ ಸೋರಿಕೆ ಮತ್ತು ತ್ಯಾಜ್ಯ ನಿರ್ವಹಣೆಯ ಸವಾಲುಗಳು ತುಂಬಾ ದೊಡ್ಡವು. ಇವುಗಳನ್ನು ಸರಿಯಾಗಿ ನಿರ್ವಹಿಸುವ ಬಗ್ಗೆ ಇನ್ನೂ ಅನುಮಾನಗಳಿವೆ. ರಷ್ಯಾದ ಚರ್ನೋಬಿಲ್, ಜಪಾನಿನ ಫುಕುಶಿಮಾ ಅಣುಸ್ಥಾವರಗಳ ಅವಘಡಗಳನ್ನು ದೃಷ್ಟಿಯಲ್ಲಿ ಇರಿಸಿಕೊಂಡ ಸುಪ್ರೀಂ ಕೋರ್ಟ್, ತಮಿಳುನಾಡಿನ ಕೂಡಂಕುಲಂ ಅಣುಸ್ಥಾವರ ಸ್ಥಾಪನೆಯ ವಿಷಯದಲ್ಲಿ ಕೇಂದ್ರ ಸರ್ಕಾರಕ್ಕೆ ಕಟ್ಟಲೆಗಳನ್ನು ಹಾಕಿ, ಸ್ಥಾವರವನ್ನು ಸತತವಾಗಿ ತಪಾಸಿಸಿ ವರದಿ ನೀಡುವಂತೆ ಆದೇಶಿಸಿತ್ತು. ಅಣುಶಕ್ತಿ ಇಲಾಖೆ, ನ್ಯಾಷನಲ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಆ ಕೆಲಸವನ್ನು ತಪ್ಪದೇ ಮಾಡುತ್ತಿವೆ.
ಗುರಿ ಸಾಧನೆಗೆ ಹಲವು ಅಡ್ಡಿಗಳಿವೆ. ಅಣು ವಿದ್ಯುತ್ ಘಟಕ ಸ್ಥಾಪನೆಗೆ ಬೇಕಾದ ಜಾಗವನ್ನು ಪಡೆದುಕೊಳ್ಳುವುದು ಅಷ್ಟು ಸುಲಭವಲ್ಲ. ಪ್ರತಿ ಅಣು ಸ್ಥಾವರದ ಸ್ಥಾಪನೆಯ ಸಮಯದಲ್ಲಿ ಸ್ಥಳೀಯರ ಪ್ರತಿಭಟನೆಗಳು ಸರ್ವೇಸಾಮಾನ್ಯ. ಪರಿಸರ ಇಲಾಖೆಯು ಹಸಿರು ನಿಶಾನೆ ತೋರುವವರೆಗೂ ಭೂಸ್ವಾಧೀನ ಪ್ರಕ್ರಿಯೆ ನಡೆಯಕೂಡದು ಎಂದು ಕೊವ್ವಾಡ ಸ್ಥಾವರದ ವಿಷಯದಲ್ಲಿ ಆಂಧ್ರಪ್ರದೇಶ ಹೈಕೋರ್ಟ್ ಹೇಳಿತ್ತು. ಅಣು ವಿದ್ಯುತ್ ಕ್ಷೇಮಕರವಲ್ಲ ಎಂಬ ಅಂಶವನ್ನು ಅಸ್ತ್ರವನ್ನಾಗಿಸಿಕೊಂಡು ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಮುಗಿಬೀಳುತ್ತವೆ.
ಖಾಸಗಿ ಉದ್ಯಮಗಳು ರೂಪಿಸಿಕೊಳ್ಳುವ ತಂತ್ರಜ್ಞಾನ ಬಳಕೆಗೆ ಅವಕಾಶವಿಲ್ಲ. ಬಳಸುವ ತಂತ್ರಜ್ಞಾನ ದೇಶೀಯವಾಗಿರಬೇಕು ಮತ್ತು ಅದು ವಾಣಿಜ್ಯ ಕ್ಷೇತ್ರದ ಬಳಕೆಗೆ ಯೋಗ್ಯವಾಗಿರಬೇಕು ಎನ್ನುವ ಮಾರುಕಟ್ಟೆ ತಜ್ಞರು, ‘ಇನ್ನೂ ಐದು ವರ್ಷ ನಮ್ಮ ಕೆಲಸವೇನಿದ್ದರೂ ತಂತ್ರಜ್ಞಾನ ರೂಪಿಸುವುದಾಗಿರುತ್ತದೆ. ಉತ್ಪಾದನೆ ಏನಿದ್ದರೂ 2030ರ ನಂತರ’ ಎಂದಿದ್ದಾರೆ. ಸರ್ಕಾರ ಹೇಳುವ ತಂತ್ರಜ್ಞಾನವನ್ನೇ ಬಳಸಬೇಕೆನ್ನುವ ನಿರ್ಬಂಧ ಅಣು ವಿದ್ಯುತ್ ಉತ್ಪಾದನೆಯ ಕೆಲಸಗಳಿಗೆ ಹಿನ್ನಡೆ ಉಂಟುಮಾಡುತ್ತದೆ. ಸಣ್ಣ ಮತ್ತು ಮಧ್ಯಮ ಗಾತ್ರದ ರಿಯಾಕ್ಟರ್‌ಗಳನ್ನು ಉತ್ಪಾದಿಸುವ ತಂತ್ರಜ್ಞಾನ ನಮಗಿನ್ನೂ ಪೂರ್ಣವಾಗಿ ಸಿದ್ಧಿಸಿಲ್ಲ. ಮಾಡಿದ ಉತ್ಪಾದನೆಗೆ ದರ ನಿಗದಿ ಆಗಬೇಕು. ಸರಿಯಾದ ಬೆಲೆ ಸಿಗಬೇಕು. ಆಗ ಖಾಸಗಿಯವರು ಈ ಕ್ಷೇತ್ರಕ್ಕೆ ಕೈ ಹಾಕುತ್ತಾರೆ. ಅಲ್ಲದೆ ಹೊಸ ತಂತ್ರಜ್ಞಾನ ಯಶಸ್ವಿಯಾಗದಿದ್ದಲ್ಲಿ ಉದ್ಯಮಕ್ಕೆ ಬೆಂಬಲವಾಗಿ ನಿಲ್ಲಲು ಸರ್ಕಾರ ತಯಾರಿರಬೇಕು.
ನಿಯಂತ್ರಣ ಕ್ರಮಗಳಲ್ಲಿ ಪಾರದರ್ಶಕತೆ ಮತ್ತು ಸ್ಪಷ್ಟತೆ ಇದ್ದರೆ ಮಾತ್ರ ಖಾಸಗಿಯವರು ಮುಂದೆ ಬರುತ್ತಾರೆ. ಪ್ರಕ್ರಿಯೆಗಳು ನೇರ ಹಾಗೂ ಮುಕ್ತವಾಗಿದ್ದರೆ ವಿದೇಶಿ ಕಂಪನಿಗಳು ಬಂಡವಾಳ ಹೂಡುತ್ತವೆ. ಅಪಘಾತಗಳು ಸಂಭವಿಸಿದಾಗ ಅಂತರರಾಷ್ಟ್ರೀಯ ಒಪ್ಪಂದಗಳಿಗೆ ಅನುಗುಣವಾಗಿ ಪೂರಕ ಪರಿಹಾರ ವ್ಯವಸ್ಥೆ ಇದ್ದರೆ ವಿದೇಶಿ ಬಂಡವಾಳ ಸುಲಭವಾಗಿ ಹರಿದುಬರುತ್ತದೆ. ವಿಪತ್ತಿಗೆ ಒಳಗಾದವರಿಗೆ ಶೀಘ್ರ ಪರಿಹಾರ ದೊರಕಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ಪರಮಾಣು ವಿದ್ಯುತ್ ಉತ್ಪಾದನೆಯ ಬಗೆಗೆ ಜನರಲ್ಲಿ ಇರುವ ಭಯ, ಅನುಮಾನವನ್ನು ವಿಜ್ಞಾನಿಗಳು ನಿವಾರಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.