ADVERTISEMENT

ಸ್ವಂತ ಊರು, ವಿಳಾಸ ಹುಡುಕುತ್ತಾ...

ಬಡವರ ವಲಸೆಯ ದಾರುಣ ಸಂಗತಿ ಬಿಂಬಿಸುವ ‘ಯೋಮದೀನ್’ ಚಿತ್ರ

ಕೃಷ್ಣಮೂರ್ತಿ ಹನೂರು
Published 3 ಮಾರ್ಚ್ 2020, 19:41 IST
Last Updated 3 ಮಾರ್ಚ್ 2020, 19:41 IST
   
"ಕೃಷ್ಣಮೂರ್ತಿ ಹನೂರು"

ದೈವ, ಧರ್ಮ, ರಾಜಕಾರಣ ಮತ್ತು ಸಿನಿಮಾಗಳ ವಿಚಾರದಲ್ಲಿ ನಮ್ಮ ನಿಷ್ಠೆ ಅಷ್ಟು ಸುಲಭಕ್ಕೆ ಬದಲಾಗುವುದಿಲ್ಲ ಎಂಬ ಈ ಮಾತು ಸಹ ಮಾಮೂಲು ಅಂದುಕೊಂಡೇ, ಇದೀಗ ‘ಯೋಮದೀನ್’ ಸಿನಿಮಾ ವಿಚಾರಕ್ಕೆ ಬರಬಹುದು. ಈ ಚಿತ್ರದ ನಾಯಕ ಯಾವುದೇ ವಿಶೇಷ ಸ್ಟೈಲನ್ನು ರೂಢಿಸಿಕೊಂಡ ಷೋಮ್ಯಾನ್ ಅಲ್ಲ. ಅವನು ಕುಷ್ಠರೋಗಿ. ಅವನ ವಾಹನ ಅತ್ಯಾಧುನಿಕ ಕಾರು ಅಲ್ಲ. ಮುರುಕಲು ಗಾಡಿ ಮತ್ತು ಅದನ್ನೆಳೆಯುವ ಮುಗ್ಧ ಪ್ರಾಣಿ ಕತ್ತೆ. ಇನ್ನು ಅವನ ಹೆಂಡತಿ ಪ್ರೇಮದ ಕನಸಿನ ಅಮಲಿನ ಮೇಲೆ ಪಾರ್ಕಿನಲ್ಲಿ ಹಾಡುವ ಸುಂದರಿಯಲ್ಲ. ಅವಳೂ ಕುಷ್ಠರೋಗಿ. ಮುರುಕು ಮನೆಯ ಹಳೆಯ ಮಂಚದಲ್ಲಿ ಸದಾ ಮಲಗಿರುತ್ತಾಳೆ. ಚಿತ್ರದಲ್ಲಿ ಕಾಣಬರುವ ಇನ್ನಿಬ್ಬರು ಹೆಂಗಸರೂ ನೋಡುವಂತಿಲ್ಲ. ಕುಷ್ಠರೋಗಿ ನಾಯಕನ ಹೆಸರು ಬೆಷೆ ಸಲೀಮ್. ನಿಜ ಜೀವನದಲ್ಲಿಯೂ ಆತ ಕುಷ್ಠರೋಗಿಯೇ!

ಚಿತ್ರದಲ್ಲಿ ಇವನ ಒಬ್ಬನೇ ಗೆಳೆಯ ಎಳೆಯ ಹುಡುಗ ಒಬಾಮ. ಇವನು ಕುಷ್ಠರೋಗಿಗಳ ಆಶ್ರಮದ ಪಕ್ಕ ಇರುವ ಅನಾಥಾಲಯದಲ್ಲಿದ್ದು, ಶಾಲೆಗೆ ಹೋಗುತ್ತಾನೆ. ಹೇಳುವವರಿಲ್ಲ, ಕೇಳುವವರಿಲ್ಲ. ಇವರಿಬ್ಬರೂ ತಮ್ಮ ಮೂಲಸ್ಥಳದ ವಿಳಾಸ ಹುಡುಕಿ ಇಲ್ಲದ ಬಂಧುಗಳನ್ನು ಕಾಣುವ ಆಸೆಯಿಂದ ಪ್ರಯಾಣ ಹೊರಡುವುದೇ ಅರೇಬಿಕ್ ಭಾಷೆಯ ಈ ಚಿತ್ರದ ಕಥಾವಸ್ತು. ಇದರ ನಿರ್ದೇಶಕ ಈಜಿಪ್ಟ್‌ನ ಅಬೂಬಕರ್ ಸಾಕಿ, ದಕ್ಷಿಣ ಈಜಿಪ್ಟ್‌ನಲ್ಲಿರುವ ಕುಷ್ಠರೋಗಿಗಳ ಮೇಲೆ ಒಂದು ಸಾಕ್ಷ್ಯಚಿತ್ರ ಮಾಡಲು ಹೋಗಿ ಈ ಯೋಮದೀನ್ ಚಿತ್ರದ ಕಥಾವಸ್ತು ಸಿದ್ಧವಾಯಿತಂತೆ. ಹಾಗಾಗಿ ಈ ಚಿತ್ರ ಆರಂಭವಾಗುವುದು ಈಜಿಪ್ಟ್‌ನ ಉತ್ತರ ಭಾಗದಲ್ಲಿ, ಮುಗಿಯುವುದು ನೈಲ್ ನದಿಯ ಆಚೆ ದಕ್ಷಿಣ ಭಾಗದಲ್ಲಿ.

ಚಿತ್ರದ ಮೊದಲ ದೃಶ್ಯವೇ, ಪಟ್ಟಣದಾಚೆಯ ವಿಸ್ತಾರವಾದ ಕಸದ ತಿಪ್ಪೆಯಲ್ಲಿ ಬೆಷೆ ಸಲೀಮ್ ಅಳಿದುಳಿದ ಸಾಮಾನುಗಳನ್ನು ಹುಡುಕಿ ತನ್ನ ಕತ್ತೆ ಗಾಡಿಯ ಮೇಲೆ ಹಾಕಿತಂದು ಹಳೆಯ ಪಾತ್ರೆ, ಕಬ್ಬಿಣದ ಸಾಮಾನಿನ ಅಂಗಡಿಗೆ ಹಾಕಿ ಕಾಸು ಸಂಪಾದಿಸುವುದು. ಹಾಗೆ ಒಮ್ಮೆ ಕಸದ ಮೈದಾನದಲ್ಲಿ ಹಳೆಯ ಕ್ಯಾಸೆಟ್ ರೆಕಾರ್ಡರ್‌ ಸಿಗುತ್ತದೆ. ಅದರಿಂದ ಒಂದು ಕಿರುಕಲು ಹಾಡೂ ಕೇಳಿಬರುತ್ತದೆ. ಅದೇ ಅವನ ಪರಮ ಸಂತೋಷದ ಸಂಗತಿ. ಇವನ ಸ್ವಂತ ದುಡಿಮೆಗೆ ಅನುಕೂಲವಾದದ್ದೆಂದರೆ ಅವನ ರೋಗ ಅಲ್ಪಸ್ವಲ್ಪ ವಾಸಿಯಾಗಿರುವುದು. ರೋಗ ವಾಸಿಯಾಗಿದ್ದರೂ ಅದು ತಂದೊಡ್ಡಿದ ಕುರೂಪ, ಅವನ ಮುರುಟಿದ ಕೈಕಾಲು ಹಾಗೆಯೇ ಉಳಿದಿರುತ್ತವೆ.

ADVERTISEMENT

ಕುಷ್ಠರೋಗ ಕೇಂದ್ರದಲ್ಲಿ ಹೆಂಡತಿ ತೀರಿಕೊಂಡ ಮೇಲೆ ಬೆಷೆ ಸಲೀಮ್‍ಗೆ ತನ್ನ ತಂದೆ ಇಲ್ಲಿಗೆ ಯಾಕೆ ತಂದುಬಿಟ್ಟರು ಎಂದೆನಿಸಿ, ಒಮ್ಮೆಯಾದರೂ ಅವರಿರುವ ಸ್ವಂತ ಊರಿಗೆ ಹೋಗಬೇಕೆಂದೆನಿಸಿ ಹಳೆಯ ಕೊಳೆಯ ಸಾಮಾನುಗಳನ್ನು ಗಾಡಿಗೆ ಹೇರಿ ಕತ್ತೆ ಕಟ್ಟಿಕೊಂಡು ಹೊರಡುತ್ತಾನೆ. ಅಷ್ಟೇನೂ ಹಿತಕರವಲ್ಲದ ಈ ಪ್ರಯಾಣದ ಹಿಂಸೆಯೇ ಚಿತ್ರದ ವಿಷಾದಭರಿತ ದೃಶ್ಯಗಳಾಗಿ ಪರಿಣಮಿಸುತ್ತದೆ. ಈ ಪ್ರಯಾಣದ ಅನಿರ್ದಿಷ್ಟತೆ, ಬಂದೆರಗುವ ಸಂಕಟ ಇವು ಪ್ರೇಕ್ಷಕರಲ್ಲಿ ನಿಟ್ಟುಸಿರು ಸೂಸುವಂತೆ ಮಾಡುತ್ತವೆ. ಆದರೆ ಪ್ರಯಾಣದಲ್ಲಿರುವ ಬೆಷೆ ಸಲೀಮ್ ಮತ್ತು ಹುಡುಗ ಒಬಾಮನಿಗೆ ಆ ಪ್ರಯಾಣದ ಸಂಕಷ್ಟಗಳು ಏನೂ ಅನಿಸುವುದೇ ಇಲ್ಲ. ಯಾಕೆಂದರೆ ರೋಗ, ಹಸಿವು, ಗತಿಗೆಟ್ಟ ಬದುಕು, ಅದರಿಂದೊದಗುವ ಅಡೆತಡೆಗಳು ಇವೇ ಅವರ ಜೀವನ. ಅದು ಇರುವುದೇ ಹಾಗೆ ಅಂದುಕೊಂಡಿದ್ದಾರೆ. ಯಾವುದಕ್ಕೂ ಅವರಿಗೆ ಚಿಂತೆಯಿಲ್ಲ, ತಳಮಳವಿಲ್ಲ, ದುಃಖವಿಲ್ಲ. ಎಲ್ಲ ಉಂಟಾಗುವುದು ಚಿತ್ರದ ಎದುರಿಗೆ ಕೂತ ಪ್ರೇಕ್ಷಕರಿಗೆ. ಇದು ಯೋಮದೀನ್ ಸಿನಿಮಾದ ವಿಚಿತ್ರ ಕಲಾತ್ಮಕತೆ. ದುಃಖವನ್ನು ಕೃತಕವಾಗಿ ಸೃಷ್ಟಿಸುವುದು, ಅದಕ್ಕೆ ತಕ್ಕಂತೆ ಕಿವಿ ತಮಟೆ ಒಡೆಯುವ ಸಂಗೀತ ಈ ಚಿತ್ರದಲ್ಲಿ ಕಾಣುವುದಿಲ್ಲ, ಕೇಳುವುದಿಲ್ಲ.

ದಾರಿಯಲ್ಲಿ ಗಾಡಿಯ ಚಕ್ರ ಕೊಂಚ ಓರೆಯಾಗಿ ಕಳಚಿಕೊಳ್ಳಬಹುದೆಂಬ ಆತಂಕದಿಂದ ರಿಪೇರಿ ಮಾಡಲು ತೊಡಗುವಲ್ಲಿ ಒಬಾಮನ ತಲೆಗೆ ಏಟು ಬಿದ್ದು ಜ್ಞಾನ ತಪ್ಪುತ್ತಾನೆ. ಬೆಷೆ ಅವನನ್ನು ಹೊತ್ತು ಆಸ್ಪತ್ರೆ ಹುಡುಕುತ್ತಾ ಬರುವಲ್ಲಿ ಡಾಕ್ಟರುಗಳು ಐ.ಡಿ. ಕಾರ್ಡ್ ಮತ್ತು ಹಣ ಕೇಳುತ್ತಾರೆ. ಬೆಷೆ, ಅದು ಗಾಡಿಯಲ್ಲೇ ಇದೆಯೆಂದು ಬಂದು ಹುಡುಕಿದರೆ ಆ ಚೀಲವೇ ಪತ್ತೆಯಿಲ್ಲ. ಇದರೊಂದಿಗೆ ಪೊಲೀಸ್ ವ್ಯಾನಿಗೆ ಡಿಕ್ಕಿ ಹೊಡೆದು ವಿಳಾಸವೇ ಇಲ್ಲವಾಗಿ ಹೋದ ಈತ, ತನಿಖೆಗೆ ಒಳಗಾಗಿ ಲಾಕಪ್ ಸೇರುತ್ತಾನೆ. ಸ್ತ್ರೀ ಸಂಬಂಧದಲ್ಲಿ ಸಿಕ್ಕಿಕೊಂಡು ಅದೇ ಲಾಕಪ್ಪಿನಲ್ಲಿ ಕುರಾನ್ ಓದುತ್ತಿದ್ದ ಧರ್ಮಗುರು, ಈ ಕುಷ್ಠರೋಗದವನೊಂದಿಗೆ ತನ್ನನ್ನು ಸೇರಿಸಿದ್ದಕ್ಕೆ ತಗಾದೆ ತೆಗೆಯುತ್ತಾನೆ.ಬೆಷೆಯ ಮುಂದಿನ ಪ್ರಯಾಣದಲ್ಲಿ ಕತ್ತೆ ಸತ್ತುಹೋಗುತ್ತದೆ.

ಒಬಾಮನಿಗೆ ದುಃಖವಾಗಿ, ಈ ಕತ್ತೆ ಹೋಗುವುದು ಸ್ವರ್ಗಕ್ಕೋ, ನರಕಕ್ಕೋ ಎಂದು ಕೇಳುತ್ತಾನೆ. ಬೆಷೆಗೆ ಅದೇನೂ ಗೊತ್ತಿಲ್ಲ. ಯೋಮದೀನ್ ಅಂದರೆ ಸತ್ತವರಿಗೆ ಸ್ವರ್ಗ, ನರಕ ತೀರ್ಮಾನವಾಗುವ ಸಂಬಂಧದ ಪದ. ಗಮನಿಸಬೇಕಾದದ್ದು ಅಂದರೆ, ಕತ್ತೆಯೂ ಸೇರಿಕೊಂಡಂತೆ ಬೆಷೆ, ಒಬಾಮ ಪ್ರಯಾಣವೇ ಒಂದು ನರಕ. ಕತ್ತೆ, ಗಾಡಿ, ದುಡ್ಡು, ವಿಳಾಸದ ಐ.ಡಿ. ಕಾರ್ಡು ಕಳೆದುಕೊಂಡ ಬೆಷೆ, ಮುಂದಿನ ಪ್ರಯಾಣಕ್ಕಾಗಿ, ಏಟು ಬಿದ್ದ ಹುಡುಗನ ಊಟಕ್ಕಾಗಿ ಭಿಕ್ಷೆ ಬೇಡುತ್ತಾನೆ. ಆದರೆ ಅಲ್ಲೊಬ್ಬ ಕಾಲಿಲ್ಲದ ಕುಂಟ ‘ನನ್ನ ಏರಿಯಾದಲ್ಲಿ ಕಾಸು ಕೇಳಲು ಬಂದ ನೀನು ಯಾರು, ಎಲ್ಲಿಂದ ಬಂದೆ’ ಎಂದು ದಬಾಯಿಸುತ್ತಾನೆ.

ಮುಂದಿನ ಪ್ರಯಾಣದಲ್ಲಿ ಬೆಷೆ, ಒಬಾಮ ರೈಲಿಗೆ ಹತ್ತುತ್ತಾರೆ. ಬೋಗಿಯಲ್ಲಿ ಟಿಕೆಟ್ ಕೇಳಿದರೆ ಇಲ್ಲವಾಗಿ ಟಿ.ಸಿ. ಗದ್ದಲ ಹಚ್ಚಿ ಹೊರಗೆ ದಬ್ಬಲು ಪ್ರಯತ್ನಿಸುತ್ತಾನೆ. ಬೆಷೆ ‘ನಾನೂ ಒಬ್ಬ ಮನುಷ್ಯ’ ಎಂದು ಏರುದನಿಯಲ್ಲಿ ಹೇಳುವ ದೃಶ್ಯ, ರೈಲು ಚಕ್ರದ ಸದ್ದನ್ನೂ ಮೀರಿ ಹೊರ ಜಗತ್ತಿಗೆಲ್ಲ ಕೇಳಿಸುತ್ತದೆ. ಆದರೆ ಬೋಗಿಯೊಳಗೆ ಇರುವವರಿಗೆ ಕೇಳಿಸುವುದಿಲ್ಲ. ಊರು ಸೇರಿದ ಬೆಷೆಗೆ ತನ್ನ ಮುಖ, ದೇಹ ತೋರಿಸಲು ಸಂಕೋಚ. ಋಗ್ಣಶಯ್ಯೆಯಲ್ಲಿದ್ದ ತಂದೆಯನ್ನು ಬೆಷೆ ತನ್ನನ್ನು ಯಾಕೆ ಅಷ್ಟು ದೂರ ಚಿಕ್ಕವಯಸ್ಸಿಗೇ ಕರೆದುಕೊಂಡು ಹೋಗಿ ರೋಗಿಗಳ ಹತ್ತಿರ ಇರಿಸಿದೆ ಎಂಬ ಪ್ರಶ್ನೆ ಕೇಳುತ್ತಾನೆ. ತಂದೆ ಕೊಡುವ ಉತ್ತರ- ‘ನೀನು ಇಲ್ಲಿದ್ದರೆ ಒಬ್ಬನೇ ಆಗುತ್ತಿದ್ದೆ. ನಿನ್ನನ್ನು ಇಷ್ಟಪಡುವವರು ಯಾರೂ ಇಲ್ಲವಾಗುತ್ತಿದ್ದರು. ನಿನ್ನ ರೋಗ ಸಾಂಕ್ರಾಮಿಕ ಅಲ್ಲದಿದ್ದರೂ ನಿನ್ನ ರೂಪವೇ ಜನರನ್ನು ಹತ್ತಿರ ಸೇರದಂತೆ ಮಾಡುತ್ತಿತ್ತು. ಎಲ್ಲರೂ ನಿನ್ನ ರೋಗ ಕಂಡು ಹೆದರುತ್ತಿದ್ದರು. ಹಾಗಾಗಿ ನಿನ್ನನ್ನು ಹೊಂದಿಕೊಳ್ಳಬಹುದಾದ, ನಿನ್ನಂಥವರಿರುವ ಸಹಜ ಸ್ಥಳಕ್ಕೆ ಮತ್ತು ಇಲ್ಲಿ ನಿನ್ನ ನಿತ್ಯ ನಿಂದನೆಗೆ ಅವಕಾಶವಿಲ್ಲದಂತೆ ಅಲ್ಲಿಗೆ ಒಯ್ದು ಇರಿಸಿದೆ’ ಎನ್ನುತ್ತಾನೆ. ಇದೀಗಲೂ ಮುಖ ಮುಚ್ಚಿಕೊಂಡೇ ಊರೊಳಗೆ ಓಡಾಡಬೇಕಾದ, ತಂದೆ ಸತ್ತು ಯಾರೂ ಇಲ್ಲವಾಗುವ ಈ ಸ್ವಂತ ಊರಿಗಿಂತ ತಾನಿರುವ ಸ್ಥಳವೇ ಸೂಕ್ತವೆಂದು ಬೆಷೆ ಅನಾಥ ಹುಡುಗನೊಡನೆ ವಾಪಸ್‌ ರೈಲು ಹತ್ತುತ್ತಾನೆ. ಚಿತ್ರದ ಆರಂಭ ಮತ್ತು ಕೊನೆಯ ದೃಶ್ಯಕ್ಕೆ ಇರಬಹುದಾದ ಮುಖ್ಯ ವ್ಯತ್ಯಾಸವೆಂದರೆ, ಬರುವಾಗ ಹಳೆಯ, ಕೊಳೆಯ ಬಟ್ಟೆಯಲ್ಲಿದ್ದವರಿಬ್ಬರೂ ವಾಪಸಾಗುವಲ್ಲಿ ಹೊಸ ಅಂಗಿಯಲ್ಲಿರುತ್ತಾರೆ. ಕೈಯ್ಯಲ್ಲಿ ಬುತ್ತಿಯ ಗಂಟು ಇರುತ್ತದೆ, ಅಷ್ಟೆ.

ಈ ಯೋಮದೀನ್ ಚಿತ್ರ ಕಾನ್ ಉತ್ಸವದಲ್ಲಿ ಫ್ರ್ಯಾಂಕೋಲಸ್ ಚಲಾಯಿಸ್ ಪ್ರಶಸ್ತಿ ಪಡೆಯಿತು. ಆಸ್ಕರ್ ಬರಲಿಲ್ಲ. ಬಹುಶಃ ವೋಟು ಬಿದ್ದಿರಲಿಕ್ಕಿಲ್ಲ. ಜೋಕರ್ ಚಿತ್ರದ ನಟನಿಗೆ ಯಾಕೆ ಪ್ರಶಸ್ತಿ ಬರುತ್ತದೆ ಎಂದರೆ, ಅಂಥದ್ದೊಂದು ಮನಃಸ್ಥಿತಿಯೇ ಅಮೆರಿಕದ ಸುಪ್ತ ಸ್ಥಿತಿ ಎಂದು ಹೇಳುವವರಿದ್ದಾರೆ. ಅಂದರೆ, ಜೋಕರ್ ಸಿನಿಮಾದ ವಸ್ತುಸಂಗತಿ ಜಾಗತಿಕ ವಿದ್ಯಮಾನವೇ? ಅಲ್ಲ ಅನಿಸುತ್ತದೆ. ಮಹಾರಾಷ್ಟ್ರದ ನಾಗಪುರ ಬಳಿಯ ಬಾಬಾ ಆಮ್ಟೆಯವರ ಆನಂದವನ ಮತ್ತು ಅಲ್ಲಿಂದಾಚೆಯ ಸೋಮನಾಥಪುರದಲ್ಲಿ ಪುನರ್ವಸತಿ ಪಡೆದಿರುವ ಸಾವಿರಾರು ಸಂಖ್ಯೆಯ ಕುಷ್ಠರೋಗಿಗಳ ಜೀವನ ಸಂಗತಿಗೂ ಯೋಮದೀನ್ ಚಿತ್ರ ಕಥನಕ್ಕೂ ಅಂತಹ ವ್ಯತ್ಯಾಸವೇನಿಲ್ಲ ಅನಿಸುತ್ತದೆ. ಅಷ್ಟೇ ಅಲ್ಲ, ಬಡವರ ವಲಸೆಯ ದಾರುಣ ಸಂಗತಿಗಳನ್ನು ಇದು ಹೇಳುತ್ತದೆ.

ಕೃಷ್ಣಮೂರ್ತಿ ಹನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.