ADVERTISEMENT

ಅಸೆಂಬ್ಲಿ ಸೀಟ್ ಬ್ಲಾಕಿಂಗ್

ಲಿಂಗರಾಜು ಡಿ.ಎಸ್
Published 30 ಅಕ್ಟೋಬರ್ 2019, 19:47 IST
Last Updated 30 ಅಕ್ಟೋಬರ್ 2019, 19:47 IST
.
.   

‘ಸೀಟ್ ಬ್ಲಾಕಿಂಗು ಗಲಾಟೇಲಿ ಈ ನಡುವೆ ಆಸ್ಪತ್ರೆಗೆ ಹೋಗಕೆ ಭಯ ಕನಾ ಮಗಾ, ಯಾವ ಡಾಗುಟ್ರು ಹ್ಯಂಗೋ ಕಾಣೆ’ ಅಂದ್ರು ತುರೇಮಣೆ. ‘ಹ್ಞೂಂ ಕನೇಳಿ ಸಾ. ಡಾಕ್ಟ್ರ ಶಾಪಿಗೋಗಿ ಮೊದಲು ಅವರು ಎಷ್ಟು ಪರ್ಸೆಂಟು ತಗಂದವ್ರೆ ತಿಳಕಂಡು ಟ್ರೀಟ್‍ಮೆಂಟು ತಗಬೇಕಾಗದೆ’ ಅಂದೆ.

‘ಮಂಡೇದಿಂದ ನಾಗಮಂಗಲಕ್ಕೆ ಹೋಗುಮಾ ಅಂದ್ರೆ ಬಸ್ಸಲ್ಲಿ ಸೀಟು ಬ್ಲಾಕಿಂಗು, ಮೈಸೂರಿಗೋಗಮು ಅಂದ್ರೆ ರೈಲಲ್ಲಿ ಸೀಟು ಬ್ಲಾಕಿಂಗು, ಆಸ್ಪತ್ರಿಗೋದ್ರೆ ಇಂಪ್ಲೂಯನ್ಸಿನೋರದು ಬೆಡ್ಡು ಬ್ಲಾಕಿಂಗು! ಶಿವನೇ ಸಿದ್ಧಬಸಪ್ಪ ಗುರುವೇ ಗುಬ್ಬಿಯಪ್ಪಾ!’ ಅಂದ್ರು.

‘ಹೌದೇಳಿ ಸಾರ್, ಸೀಟ್ ಬ್ಲಾಕಿಂಗ್ ಈಗ ದೊಡ್ಡ ಮಾಫಿಯಾ ಆಗದೆ. ಅದುಕ್ಕೆ ಅಲ್ಲುವ್ರಾ ಮೆಡಿಕಲ್ ಕಾಲೇಜು ಮಾಡಕೆ ರಾಜಕಾರಣಿಗಳು ತಾರಾತಿಕಡಿ ಬಾರಾಬಂಕಿ ಮಾಡದು’ ಅಂದೆ.

ADVERTISEMENT

‘ಇನ್ನೊಂದು ಗೊತ್ಲಾ ನಿನಗೆ, ಸೀಟು ಬ್ಲಾಕಿಂಗು ರಾಜಕೀಯಕ್ಕೂ ಬಂದುಬುಟ್ಟದೆ!’ ಅಂತ ಪಟಾಕಿಯೊಂದನ್ನ ಸಿಡಿಸಿದರು. ನನಗೆ ಸಿಟ್ಟು ಬಂದೋಯ್ತು ‘ಥೂ ನಿಮ್ಮ ಬಾಯಿಗೆ ಮಣ್ಣಾಕ! ರಾಜಕೀಯದಲ್ಲೇನು ಸಾರ್ ಸೀಟು ಬ್ಲಾಕಿಂಗು?’ ಅಂದೆ.

‘ಅಲ್ಲೋ ಬಡ್ಡೆತ್ತುದೇ ಜನರಲ್ ಎಲೆಕ್ಷನ್ನಲ್ಲಿ ಗೆದ್ದೋನು ಸಿಇಟಿ, ನೀಟಲ್ಲಿ ಸೀಟು ತಗಂಡ ಮೆರಿಟ್ ಕ್ಯಾಂಡಿಡೇಟು ಇದ್ದಂಗೆ. ಪಾರ್ಟಿ ಏಜೆಂಟುಗಳು ಅವನ ಸೀಟು ಸರಂಡರ್ ಮಾಡಿಸಿ ಸರ್ಕಾರ ಕೆಡವತರೆ. ಎಲೆಕ್ಷನ್ ಕಮೀಷನ್ನು ರಟ್ಟೇಲಿ ಬಲ ಇಲ್ಲದೆ ಮೆಡಿಕಲ್ ಕೌನ್ಸಿಲ್ ಥರಾ ಸುಮ್ಮಗಿರತದೆ. ಆಮೇಲೆ ಸೀಟು ಸರಂಡರ್ ಮಾಡಿಸಿದ ಪಕ್ಷಗಳು ಅವನಿಗೆ ಬೈ-ಎಲೆಕ್ಷನ್ ಸೀಟು ಕೊಡತವೆ. ಹಿಂಗಾಗಿ ನೋಡಪ್ಪಾ ಪ್ರೀ ಮತ್ತು ಪೋಸ್ಟ್ ಸೀಟ್ ಬ್ಲಾಕಿಂಗಲ್ಲಿ ಪ್ರಯೋಜನ ತಗಳದು ಪಕ್ಷಗಳು ಮತ್ತೆ ಸೀಟು ಸರಂಡರ್ ಮಾಡಿದ ಎಂಎಲ್‍ಎಗಳು ಮಾತ್ರ!’ ಅಂದ್ರು.

ಎಲಎಲಾ ಇದೂ ಕರೆಕ್ಟಾಗೇ ಅದಲ್ಲ ಅನಿಸಿತು ನನಗೆ. ‘ಹಂಗಾದ್ರೆ ಇಲ್ಲಿ ಬಕರ ಯಾರು ಸಾರ್?’ ಅಂದೆ. ‘ನೋಡ್ಲಾ ಅಸೆಂಬ್ಲಿ ಸೀಟ್ ಬ್ಲಾಕಿಂಗ್ ಜಾತ್ರೇಲಿ ಹಿಂದ್ಲ ಬಾಗಿಲಿಂದ ಬಂದೋನೇ ಜಾಣ. ಇನ್ನು ಬಕರನ ಪೋಸ್ಟಿಗೆ ನಿನ್ನಂತೋನ್ನ ಬಿಟ್ಟರೆ ಬ್ಯಾರೆ ಯಾರವುರೆ?’ ಅಂದ್ರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.