ADVERTISEMENT

ಟೂ ಇನ್ ಒನ್ ಕೊಡುಗೆ...

ಕೆ.ವಿ.ರಾಜಲಕ್ಷ್ಮಿ
Published 17 ಏಪ್ರಿಲ್ 2019, 20:00 IST
Last Updated 17 ಏಪ್ರಿಲ್ 2019, 20:00 IST
.
.   

ಬೆಳಗಿನ ಬಿಸಿ ಕಾಫಿ ನಾಲಿಗೆಗೆ ಬೊಬ್ಬೆ ಬಾರಿಸುವಷ್ಟು ಚುರುಕು ಮುಟ್ಟಿಸಿದಾಗ, ಎಲ್ಲೋ ಎಡವಟ್ಟಾಗಿದೆ ಅನ್ನಿಸಿತು. ಪುಟ್ಟಿಯ ಹತ್ತಿರ ಉತ್ತರ ಸಿಗುತ್ತದೆ ಅನ್ನಿಸಿ ಕೇಳಿದೆ ‘ಏನಾಯ್ತು ನಿಮ್ಮಮ್ಮನಿಗೆ? ಕೆಂಡದಂತೆ ಸುಡ್ತಿದೆ ಕಾಫಿ, ಕಲಬುರ್ಗಿಯ ತಾಪಮಾನಕ್ಕಿಂತ ಜಾಸ್ತಿ’.

‘ಎಲ್ಲ ನಿಂಗಿಯ ಕಾರಣ’.

‘ಯಾಕೆ ಮತ್ತೆ ಕೆಲಸಕ್ಕೆ ಗೈರಾ? ನಿನ್ನೆ ಪಾತ್ರೆ ನಾನು ತೊಳೆದ ನೆನಪಿಲ್ಲ’.

ADVERTISEMENT

‘ಅವಳು ಕೆಲಸಕ್ಕೆ ಬಂದಿದ್ದಳು,ಲಕಲಕ ಅಂತ ಮಿನುಗುತ್ತ!’

‘ಪಾತ್ರೆಗಳಲ್ಲಿ ಲಕಲಕ ಬರೀ ಜಾಹಿರಾತಿನಲ್ಲಿ ನೋಡೋದು, ಇವಳ ಕೆಲಸದಲ್ಲಿ ಅಂತಾದ್ದೇನಿಲ್ಲ ಬಿಡು. ಮತ್ತೆ ಈ ಮಿನುಗಿನ ಗುಟ್ಟು?’

‘ಅವರ ಮನೆ ಹತ್ತಿರ ಗೋಲ್ಡ್ ಗಿಫ್ಟ್ ಅಂತೆ, ಮೂಗಿಗೆ ನತ್ತು, ಕಿವಿಗೆ ಓಲೆ. ಅದೂ ಅಲ್ದೆ ನಿಂಗಿ ಮೂಗಿನ ಎರಡೂ ಬದಿಗೆ ಗಿಫ್ಟ್ ಏರಿಸಿದ್ದಳು! ಇಷ್ಟು ಸಾಲದೇ ಅಮ್ಮನಿಗೆ ನೋವಾಗೋಕ್ಕೆ?’
ಓಹ್, ಇದು ನನ್ನವಳ ಮಟ್ಟಿಗೆ ಕುತ್ತು.

‘ಅಷ್ಟೇ ಅಲ್ಲ,ಹಿಂದಿನ ಬಡಾವಣೆಯಲ್ಲಿ ಬೆಳ್ಳಿ ಭರಣಿ ಕೊಡ್ತಿದ್ದಾರೆ ಅಂತ ಬ್ರೇಕಿಂಗ್ ನ್ಯೂಸ್ ಸಿಕ್ತು. ನಮ್ಮನೇಲಿ ತೊಳೀತಿದ್ದ ಪಾತ್ರೆ ಹಾಗೇ ಬಿಟ್ಟು ಅಲ್ಲಿಗೆ ದೌಡು. ಅಲ್ಲೂಕಲೆಕ್ಟ್ ಮಾಡ್ತಿದ್ದಾಳೆ’.

‘ಅಂದರೆ ನನಗೆ ಇವತ್ತು ಪಾತ್ರೆ ಬೆಳಗೋ ಹೆಚ್ಚುವರಿ ಕೆಲಸ ಗ್ಯಾರಂಟಿ’.
ಅಷ್ಟರಲ್ಲೇ ಕಂಠಿಬಂದ.

‘ನಿಮ್ಮ ಏರಿಯಾಲೂ ಗೋಲ್ಡ್ ಗಿಫ್ಟಾ?’
‘ಇಲ್ಲ, ಕುಕ್ಕರ್ ಅಂತೆ’.

‘ಹೌ ನೈಸ್? ಅಲಂಕಾರಕ್ಕೆ ಆಭರಣ, ಬೇಯಿಸೋಕ್ಕೆ ಕುಕ್ಕರ್! ಚುನಾವಣೆಗಳು ಆಗಾಗ್ಗೆ ಇದ್ರೆ ಎಷ್ಟು ಚಂದ ಅಲ್ವೇನಮ್ಮ?’ ಎಂದು ಅಮ್ಮನ ಸುಡುಗೋಪಕ್ಕೆ ತುಪ್ಪ ಸುರಿದು ಕಣ್ಣುಮಿಟುಕಿಸಿದಳು ಪುಟ್ಟಿ.

‘ಹ್ಞೂಂ, ಮತ್ತೆ ಯುಗಾದಿ ಹೆಸರಲ್ಲಿ ಚುನಾವಣೆಕೊಡುಗೆ, ಟೂ ಇನ್ ಒನ್’ ಕಂಠಿಯ ಕಾಂಟ್ರಿಬ್ಯೂಷನ್.

‘ತಿಂಗಳ ಸಂಬಳದಲ್ಲಿ ಎರಡು ದಿನ ನಿಂಗಿಗೆ ನೋ ಪೇ’.

ಅಡುಗೆ ಮನೆಯಿಂದ ಪಾತ್ರೆ ಕುಕ್ಕಿದ ಸದ್ದು. ಕೈಯಲ್ಲಿದ್ದ ಕಾಫಿ ತಣ್ಣಗಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.