ADVERTISEMENT

ಕಠೋರ ಶಾಪ

​ಕೇಶವ ಜಿ.ಝಿಂಗಾಡೆ
Published 8 ಮೇ 2019, 20:15 IST
Last Updated 8 ಮೇ 2019, 20:15 IST
.
.   

‘ಮರ್ಯಾದಾ ಪುರುಷೋತ್ತಮನೆ, ಫೋನಿ ಚಂಡಮಾರುತದಂತೆ ಏನಿದು ನಿನ್ನ ಮುಖದಲ್ಲಿಯೂ ಚಿಂತೆಯ ಕಾರ್ಮೋಡಗಳು ಕವಿದಿವೆಯಲ್ಲ?’ ‘ಪ್ರಾಣಕಾಂತೆ ನೋಡಲ್ಲಿ, ಚೌಕೀದಾರನು ಗಂಗೆಗೆ ಮಹಾ ಆರತಿ ಬೆಳಗುತ್ತಿದ್ದಾನೆ. ನನ್ನ ಮಂಗಳಾರತಿ ಮರೆತೇ ಬಿಟ್ಟಿದ್ದಾರೆ. ಮಹಾ(ನ್‌) ಭಾರತದಲ್ಲಿ ನಡೆಯುತ್ತಿರುವ ಚುನಾವಣಾ ರಾಮಾಯಣದಲ್ಲಿ ನನ್ನನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ನೋಡಿ ಚಿಂತಾಕ್ರಾಂತನಾಗಿರುವೆ’.

‘ಗಾಯದ ಮೇಲೆ ಉಪ್ಪು ಸವರಿದಂತೆ, ನನ್ನ ಮಂದಿರ ನಿರ್ಮಾಣಕ್ಕೆ ಹಣಕಾಸು ಮುಗ್ಗಟ್ಟು ಕಾಡುತ್ತಿದೆಯಂತೆ. ನನ್ನ ಜಪ ಕೈಬಿಟ್ಟಿರುವ ‘ಭಾ–ಜಪ’, ಈಗ ಗಂಗೆಯ ಗುಣಗಾನ ಮಾಡುತ್ತಿದೆ. ನನಗೆ ಇಂತಹ ದುರ್ಗತಿ ಬರುತ್ತದೆಯೆಂದು ನಾನು ಕನಸಲ್ಲೂ ಎಣಿಸಿರಲಿಲ್ಲ. ಹೇ ರಾಮ್‌!’ ಎಂದು ಉದ್ಗರಿಸಿದ.

‘ರಥಯಾತ್ರೆ ನಡೆಸಿದ್ದ ಲೋಹಪುರುಷ ಲಾಲಕೃಷ್ಣನ ಮೂಲೆಗುಂಪಾಗಿಸಿ ತುಕ್ಕು ಹಿಡಿಯುವಂತೆ ಮಾಡಿರುವ ಗತಿಯೇ ನನಗೂ ಬಂದಿದೆಯಲ್ಲ. ನಾನು ಮಾಡಿದ ಪಾಪವಾದರೂ ಏನು?’ ಎಂದು ಕನಲುತ್ತಾ ಕೇಳಿದ. ‘ನಿನ್ನಿಂದ ಏನಾದರೂ ಪ್ರಮಾದ ಆಗಿತ್ತೇ ಸ್ವಾಮಿ’ ಜಾನಕಿಯ ಪ್ರಶ್ನೆ.

ADVERTISEMENT

‘ಶೂರ್ಪನಖಿಯ ಮೂಗು ಕತ್ತರಿಸಿದ್ದು, ಅಲ್ಪನೊಬ್ಬನ ಮಾತು ಕೇಳಿ ನಿನ್ನ ಕಾಡಿಗೆ ಅಟ್ಟಿದ್ದು ಬಿಟ್ಟರೆ ಮತ್ಯಾವ ಘೋರ ಪ್ರಮಾದ ಮಾಡಿಲ್ಲ ಪ್ರಿಯೆ’. ‘ಬಹುಶಃ ಶೂರ್ಪನಖಿ ಮತ್ತು ಮಂಡೋದರಿ ಶಾಪದ ಫಲವೇ ಇರಬೇಕು. ಕಲಿಗಾಲದ ಶಾಪಪ್ರವೀಣೆ ಸಾಧ್ವಿ ಪ್ರಜ್ಞಾ ಸಿಂಗ್‌ ಬಳಿ ಶಾಪ ವಿಮೋಚನೆ ಮಾಡಿಕೊಳ್ಳುವುದೊಂದೇ ಉಳಿದ ದಾರಿ ದೊರೆ’ ಎಂದು ಸಂತೈಸಿದಳು.

‘ನಾನೂ ಪ್ರಜ್ಞಾಳ ಹಾದಿಯಲ್ಲಿ ಸಾಗುವೆ ಪ್ರಿಯೆ. ನನಗೆ ಅನ್ಯಾಯ ಬಗೆದವರಿಗೆ ಈ ಬಾರಿಯ ಚುನಾವಣೆಯಲ್ಲಿ ಪೂರ್ಣ ಬಹುಮತ ಬರದೇ ಇರಲಿ. ಇದು ನನ್ನ ಕಠೋರ ಶಾಪ’.

ಮರೆಯಲ್ಲಿ ನಿಂತು ಅಣ್ಣ– ಅತ್ತಿಗೆಯ ಮಾತನ್ನು ಕೇಳಿಸಿಕೊಳ್ಳುತ್ತಿದ್ದ ಭರತ,‘ಅಯ್ಯೋ, ರಾಮನೂ ಶಾಪ ಕೊಡುವಂತಾಯಿತೆ. ಅಕಟಕಟಾ, ಏನಿದು ವಿಧಿವಿಲಾಸ’ ಎಂದು ಗೊಣಗುತ್ತಲೇ ಮೂರ್ಛೆ ಹೋದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.