ADVERTISEMENT

ಬಿಜೆಡಿ ಮನೋಜಯ

ಲಿಂಗರಾಜು ಡಿ.ಎಸ್
Published 11 ನವೆಂಬರ್ 2019, 19:42 IST
Last Updated 11 ನವೆಂಬರ್ 2019, 19:42 IST
   

‘ಸದ್ಯ ಸುಪ್ರೀಂ ಕೋರ್ಟು ಸತಮಾನದ ಕಿತ್ತಾಟಕ್ಕೆ ಪುಲ್ ಸ್ಟಾಪ್ ಮಡಗದೆ!’ ಅಂದರು ತುರೇಮಣೆ. ‘ಹೌದೇಳಿಸಾ ಅದೀಯೇ ಬುದುವಂತಿಕೆ ಅಂದ್ರೆ’ ಅಂದೆ.

‘ಸುಪ್ರೀಂ ಕೋರ್ಟು ನಮಗೂ ಐತಿಹಾಸಿಕ ತೀರ್ಪು ಕೊಡತದೆ, ನಾವೂ ಅಸೆಂಬ್ಲಿಗೋಗಮು ಅಂತ ಅನರ್ಹರು ಕಾಯ್ಕ ಕುಂತವರಲ್ಲೋ?’ ಅಂದ್ರು ತುರೇಮಣೆ.

‘ಸಾ, ಮಕ್ಕಳ ದಿನಾಚರಣೆಗೆ ಕೋರ್ಟು ಇವರಿಗೆ ಏನು ಕೊಟ್ಟಾದೋ ಗೊತ್ತಿಲ್ಲ. ಯಂಗಾನ ಇರಲಿ ಅಂತ ಯಡುರಪ್ಪಾರು ಜೆಡಿಎಸ್ ಜೊತೆಗೆ ಮನೋಜಯ, ಒಪ್ಪುವೀಳ್ಯ ಮಾಡಿಕ್ಯಂಡವರಂತೆ!’ ಅಂದೆ. ‘ಹ್ಞೂಂ ಕಣೊ, ಅನರ್ಹರು ಬರದಿದ್ರೆ ಜೇಡಿಎಸ್ಸು- ಬಿಜೆಪಿ ಸೇರಿ ಲಿವಿಂಗ್ ಟುಗೆದರ್ ಮಾಡಿಕ್ಯಂಡು ಬಿಜೆಡಿಯಾಯ್ತದೇನೋ? ಕಾಂಗ್ರೇಸಿಗೆ ಕಡಲೆ ಬೀಜವೇ ಗತಿ!’ ಅಂದ್ರು ತುರೇಮಣೆ.

ADVERTISEMENT

‘ನೋಡಿಸಾ ರಾಜಕೀಯವೇ ಹಿಂಗಲ್ಲುವರಾ ಹೇಳದೊಂದು ಮಾಡದೊಂದು’ ಅಂತ ಉಸುರು ಹೂದೆ. ತುರೇಮಣೆ ‘ಹೋಗ್ಲಿ ಬುಡೋ, ಈಗ ನಿನ್ನ ಬೇಜಾರು ಕಳೆಯಲು ನಾಕು ಬೇತಾಳ ಪ್ರಶ್ನೆ ಕೇಳತೀನಿ. ಪಟ್ಟಂತ ಉತ್ತರ ಕೊಡದಿದ್ದರೆ
ಪಡ್ನವೀಸಾಯ್ತಿಯ’ ಅಂದ್ರು. ನಾನೂ ಹ್ಞೂಂ ಅಂದೆ.

‘ಮೊದಲನೇ ಪ್ರಶ್ನೆ. ಬ್ಯೂಟಿಶಿಯನ್ಸು ಮೇಕಪ್ ಮಾಡ್ತರೆ. ಪೊಲಿಟೀಶಿಯನ್ಸು ಏನು ಮಾಡ್ತರೆ?’ ಅಂದ್ರು. ‘ಸಾ ಇವರೂ ಮತದಾರರಿಗೆ ಮಾಡದು ಮೇಕಪ್ಪೇ ಅಲ್ಲುವರಾ?’ ಅಂದೆ.

‘ಮಂಗಗಳಿಂದ ಮಾನವ ಅಂತ ವಿಜ್ಞಾನಿಗಳು ಅಂದರು. ಆದರೂ ಮಂಗಗಳು ಇನ್ನೂ ಯಾಕವೆ?’ ಅಂದ್ರು. ನಾನು ‘ಸಾ ಅವೆಲ್ಲಾ ಈಗ ರಾಜಕೀಯಕ್ಕೆ ಬಂದು ಪಕ್ಷಾಂತರ ಮಾಡಿಕ್ಯಂಡವೆ’ ಅಂದೆ ಖುಷಿಯಲ್ಲಿ.

‘ಮೂರನೇ ಪ್ರಶ್ನೆ. ಬಿಡಿಭಾಗಗಳನ್ನ ಒಟ್ಟಿಗೆ ಜೋಡಿಸೋದನ್ನ ಅಸೆಂಬ್ಲಿ ಅಂತರೆ. ಶಾಸಕರೆಲ್ಲಾ ಕಿತ್ತಾಡೋ ಶಾಸನಸಭೆಯ ಅದ್ಯಾಕೆ ಅಸೆಂಬ್ಲಿ ಅಂತರೆ?’ ಅಂದ್ರು. ‘ಸಾ ಅದನ್ನ ಡಿಸೆಂಬ್ಲಿ ಅನ್ನಬೇಕು’ ಅಂದೆ ನಾನು. ‘ಶಾಭಾಶ್ ಬಡ್ಡಿಹೈದ್ನೆ. ಈಗ ಕೊನೇ ಪ್ರಶ್ನೆ. ಪ್ರೋ-ಕಾನ್ ಅಂತ ಕೇಳಿದ್ದೀಯಲ್ಲ. ಪ್ರೋಗ್ರೆಸ್ ವಿರುದ್ಧ ಪದ ಏನು?’ ಅಂದ್ರು. ನಾನು ಭಾರಿ ಖುಷಿಯಲ್ಲಿ ಕಾಂಗ್ರೆಸ್ ಅಂದುಬಿಟ್ಟೆ ಕಣ್ರಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.