ADVERTISEMENT

ಸಾಹಿತಿಗಳಿಗೆ ಸಂಕಟವೇಕೆ?

ಸುಮಂಗಲಾ
Published 27 ಜನವರಿ 2019, 19:56 IST
Last Updated 27 ಜನವರಿ 2019, 19:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವರ್ಷದ ನಂತರ ಸಿಕ್ಕಿದ ಗೆಳತಿಯ ಮಗಳನ್ನು ‘ಎಂಎ ಮುಗಿಸಿ ಈಗೇನ್ ಮಾಡಾಕಹತ್ತೀಯವ್ವಾ’ ಅಂತ ಕೇಳಿದೆ. ‘ಆರು ತಿಂಗಳದು ಒಂದ್ ಕ್ರಾಶ್ ಕೋರ್ಸ್ ಮಾಡಾಕಹತ್ತೀನ್ರಿ’ ಎನ್ನುತ್ತ ಕಾಡಿಗೆಕಣ್ಣು ಮಿನುಗಿಸಿದಳು. ‘ಯಾವ ವಿಷಯದಾಗ’ ನನಗೆ ಭಯಂಕರ ಕುತೂಹಲ. ‘ಶುದ್ಧ ಸಾಹಿತ್ಯದಾಗ್ರಿ ಆಂಟಿ...’ ಇನ್ನಷ್ಟು ಹುರುಪಿನಿಂದ ಹೇಳಿದಳು.

ನವ್ಯ, ಪ್ರಗತಿಪರ, ನವ್ಯೋತ್ತರ, ದಲಿತ, ಬಂಡಾಯ ಇತ್ಯಾದಿ ನೆಲಕ್ಕಂಟಿದ ಸಾಹಿತ್ಯದ ಹೆಸರು ಕೇಳಿದ್ದ ನನಗೆ ಇದ್ಯಾವುದೋ ಅನ್ಯ ಗೆಲಾಕ್ಸಿಯಿಂದ ಉದುರಿದ ಪದವೆನ್ನಿಸಿತು. ಥಟ್ಟನೆ ನನ್ನ ಮುಖವೇ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿ ಬದಲಾಗಿದ್ದನ್ನು ಗಮನಿಸಿದ ಅವಳು ‘ಏನ್ರೀ ಆಂಟಿ, ನೀವ್ ಪೇಪರ್ ಓದಂಗಿಲ್ಲೇನ್ರೀ...’ ಎಂದು ಕನಿಕರಿಸಿದಳು.

ಈ ಚೋಟು ಮೆಣಸಿನಕಾಯಿಯ ಮುಂದೆ ಸೋಲೊಪ್ಪುವಂತಾಯಿತಲ್ಲ ಎಂದುಕೊಳ್ಳುತ್ತ, ‘ಮತ್ ನಿಮ್ಮ ಕ್ರಾಶ್ ಕೋರ್ಸಿನಾಗ ಏನು ಕಲಿಸ್ತಾರ’ ಕೇಳಿದೆ.

ADVERTISEMENT

‘ನಿಮ್ಮ ನವ್ಯ, ದಲಿತ, ಬಂಡಾಯ, ಸ್ತ್ರೀವಾದಿ, ಹಿಂಗ ಯಾವ ಚಳವಳಿದೂ ನೆರಳೂ ಸೋಕದಿದ್ದಾಂಗ ಬರೀ ಶುದ್ಧ ರಸ ಮಾತ್ರ ಇಟಗಂಡು ಬರಿಯಾಕ ಕಲಿಸ್ತಾರ್‍ರಿ… ಇಡೀ ಬರವಣಿಗೆದಾಗ ಒಂದೇ ಒಂದು ಸ್ಲೋಗನ್ ಇರೂ ಹಾಂಗಿಲ್ಲರಿ...’ ವಿವರಿಸಿದಳು. ‘ಅಂದ್ರ ಈ ಭೂಮಿ, ಸಮಾಜ, ಹತ್ತಾರು ಸಂಕಟ ಏನೂ ತಟ್ಟಲಾರದ್ಹಂಗ ಬರಿಯೂದನು… ಹಂಗಾರ ನೀವು ಬ್ಯಾರೆ ಗೆಲಾಕ್ಸಿಗೆ ಹೋಗಿ ಶುದ್ಧ ಜೀವನಾ ಮಾಡ್ತಾ, ಮಡಿ ಉಟ್ಕಂಡು ಕುತ್ತು ಬರಿತೀರೇನವಾ?’

‘ಬ್ಯಾರೆಯವ್ರ ಸಂಕಟ ಸಾಹಿತಿಗ್ಯಾಕ್ರಿ... ಬರಿಯೂದಷ್ಟ ಮಾಡಬೇಕ್ರಿ. ಕೋರ್ಸ್ ಮುಗಿಸಿ, ಇಲ್ಲೇ ಕುತ್ತು ನಾ ಹೆಂಗ ಶುದ್ಧ ಸಾಹಿತ್ಯ ಬರಿತೀನಂತ ನೀವಾ ನೋಡಾಕಂತ್ರಿ’ ಆತ್ಮವಿಶ್ವಾಸದಿಂದ ಬೀಗಿದಳು.

‘ಅಲ್ಲವಾ… ನಾ ನಿನ್ನ ಎಡಕ್ಕ ನಿಂತೀನಿ, ನೀ ಅದ್ಯಾಕ ಬಲಕ್ಕ ನೋಡ್ಕೋತ ಮಾತಾಡಾಕಹತ್ತೀ’ ಕಡೆಯದಾಗಿ ಕೇಳಿದೆ. ‘ಎಡಕ್ಕ, ನಡಬರಕ ನೋಡಿದ್ರೆ ಬರೀ ಚಳವಳಿಗಳೇ ಕಾಣ್ತಾವ್ರೀ… ಮತ್ ಆ ಕಡಿ ನೋಡ್ತಿದ್ರ ಶುದ್ಧ ಸಾಹಿತ್ಯ ಹೆಂಗ ಬರಿಯೂದ್ರೀ’ ಎನ್ನುತ್ತ ಮುಖ ಕಿವುಚಿದಳು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.